Site icon Vistara News

ಇಂದು ಗೀತಾ ಜಯಂತಿ | ಬದುಕಿನ ಸಂಘರ್ಷಗಳಿಗೆ ಭಗವದ್ಗೀತೆ ಪರಿಹಾರ

gita jayanthi

| ಮಯೂರಲಕ್ಷ್ಮಿ

ದಿನನಿತ್ಯದ ಬದುಕಲ್ಲಿ ಸಂಘರ್ಷಗಳು ಎದುರಾದಾಗ ಹಿಂಜರಿಯದೆ ಎದುರಿಸಲು ಅತ್ಯಗತ್ಯವಾದದ್ದು ಸ್ಥೈರ್ಯ. ನಮ್ಮ ಆತ್ಮಶಕ್ತಿಯಲ್ಲಿ ನಮ್ಮ ಬಲವಾದ ನಂಬಿಕೆ. ಈ ಆತ್ಮಶಕ್ತಿ ನಮ್ಮಲ್ಲಿ ಅಂತರ್ಗತವಾಗಿರುವ ಇಚ್ಛಾಶಕ್ತಿಯನ್ನೇ ಅವಲಂಬಿಸಿದೆ.

ಭಗವದ್ಗೀತೆಯ ಆರಂಭದ ಸನ್ನಿವೇಶ: ಪಾಂಡವರು ಮತ್ತು ಕೌರವರ ನಡುವೆ ಎದುರಾದ ಯುದ್ಧದ ಸನ್ನಿವೇಶದಲ್ಲಿ ಅರ್ಜುನನ ಸಾರಥಿಯಾಗಿ ಕೃಷ್ಣ ರಥವನ್ನು ಉಭಯ ಸೇನೆಯ ನಡುವೆ ನಿಲ್ಲಿಸಿದ ಕ್ಷಣದಲ್ಲೇ ಅರ್ಜುನನಿಗೆ ಆವರಿಸಿದ ವಿಷಾದ ಕೊನೆಗೆ ಶ್ರೀಕೃಷ್ಣನಿಂದ ಭಗವದ್ಗೀತೆಯ ಉಗಮವಾಯಿತು. ಮನುಷ್ಯರು ಈ ಕರ್ಮಭೂಮಿಯ ಮೇಲೆ ಬದುಕಿ ತಮ್ಮ ಜೀವಿದತಲ್ಲೆದುರಿಸಬೇಕಾದ ಸಂಘರ್ಷಗಳ ಪರಿಹಾರ ರೂಪವಾಗಿ ಹೊಮ್ಮಿತು ಭಗವದ್ಗೀತೆ. ಜಗತ್ತಿನೆಲ್ಲೆಡೆ ಇಂದಿಗೂ ಮನೆಮಾತಾಗಿರುವ ಈ ಗೀತೆಯ ಉಗಮವೇನೋ ವಿಷಾದದಿಂದಲೇ ಆಯಿತು. ಆದರೆ ಇದೇ ವಿಷಾದವು ಅರ್ಜುನನಿಗೆ ಪರಿಪೂರ್ಣತೆಯನ್ನು ಪಡೆಯುವ ಸಾಧನವೂ ಅಗಿ ಕೊನೆಗೆ ಮೋಕ್ಷಕ್ಕೆ ಮೆಟ್ಟಿಲಾಗಿ ಯೋಗವಾಯಿತು.

ಎದುರಾಗುವ ಸೋಲುಗಳಿಂದಾಗಲೀ ನಿಂದೆ ಅಪಮಾನಗಳಿಂದಾಗಲೀ ವಿಚಲಿತರಾಗದೆ ತಮ್ಮ ನಿರ್ದಿಷ್ಟ ಗುರಿಯನ್ನು ತಲುಪುವುದೇ ನಿಜವಾದ ಸಾಧನೆ. ಪರಾಕ್ರಮಿ ಅರ್ಜುನ ತನ್ನವರಿಗಾದ ಅಪಮಾನವನ್ನೂ ಮರೆತು ರಣಹೇಡಿಯಂತೆ ವರ್ತಿಸಿದ. ಇಷ್ಟಕ್ಕೂ ಅರ್ಜುನನಿಗೆ ಆದದ್ದಾದರೂ ಏನು? ಅವನಿಗುಂಟಾದ ಮಾನಸಿಕ ಗೊಂದಲ ಮತ್ತು ತುಮುಲ ಇದ್ದಕ್ಕಿದ್ದಂತೆಯೇ ಮೂಡಿದ್ದಲ್ಲ. ತನ್ನೆದುರಿರುವ ಶತ್ರುಗಳೆಲ್ಲಾ ತನ್ನ ಬಾಂಧವರು, ತನ್ನ ಸ್ವಜನರನ್ನು ಕೊಂದು ತಾನಾವ ನರಕಕ್ಕೆ ಹೋಗಬೇಕು? ಎನ್ನುವ ಈ ನಿರ್ಲಿಪ್ತ ಅಕಾಲಿಕ ವೈರಾಗ್ಯದ ಸ್ಥಿತಿಯನ್ನು ಅವನು ತಲುಪಲು ಕಾರಣಕರ್ತ ಅವನ ಸಾರಥಿಯಾಗಿದ್ದ ಶ್ರೀಕೃಷ್ಣನೇ!

ಮನುಷ್ಯನ ಸಹಜ ಸ್ವಭಾವವೆಂದರೆ ಗೆಲುವು ತನಗೆದುರಾದಾಗ ಮನಸ್ಸಲ್ಲಿ ತಲೆದೋರುವ “ತನ್ನಿಂದಲೇ ಎಲ್ಲಾ..” ಎನ್ನುವ ಅಹಂಭಾವ! ನಿದ್ದೆಯನ್ನು ಗೆದ್ದು ಪರಾಕ್ರಮದಿಂದ ಸವ್ಯಸಾಚಿಯೆನಿಸಿದ್ದ ಅವನ ಈ ಅಹಂಭಾವದ ಪ್ರತೀಕ ಯುದ್ಧಭೂಮಿಯಲ್ಲಿ, “ನನ್ನ ರಥವನ್ನು ಉಭಯ ಸೇನೆಗಳ ನಡುವೆ ನಿಲ್ಲಿಸು, ನನ್ನೊಂದಿಗೆ ಯುದ್ಧದಲ್ಲಿ ತೊಡಗುವ ಪರಾಕ್ರಮಿಗಳನ್ನು ನಾನು ನೋಡಬೇಕು” ಎನ್ನುವ ಆಜ್ಞೆಯನ್ನು ಕೃಷ್ಣನಿಗಿತ್ತ. ತಾನು ಯುದ್ಧದಲ್ಲಿ ಗೆಲ್ಲಬೇಕಾಗಿರುವ ಯೋಧ ಎನ್ನುವ ಅವನ ಮನದ ಅಹಂಕಾರವನ್ನು ಮುರಿಯಲೆಂದೇ ಎರಡೂ ಬದಿಯ ಸೇನೆಗಳ ನಡುವೆ ಶ್ರೀಕೃಷ್ಣನು ರಥವನ್ನು ನಿಲ್ಲಿಸಿದನು.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಇಂದು ಗೀತಾಜಯಂತಿ | ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ

“ಎದುರಲ್ಲಿರುವ ಕೌರವ ಸೇನೆಯನ್ನು ನೋಡು, ನಿನ್ನ ಪಿತಾಮಹರೂ, ದಾಯಾದಿಗಳೂ, ಸೋದರ ಮಾವಂದಿರೂ ಮತ್ತು ಬಂಧುಗಳೆಲ್ಲರೂ ನಿನ್ನೆದುರಿದ್ದಾರೆ” ಎಂದು ಹೇಳುವ ಮೂಲಕ ಅವನೆದುರಿದ್ದ ಅವನ ಬಂಧು ಬಾಂಧವರನ್ನು ವರ್ಣಿಸಲು ಅವನು ವಿಚಲಿತನಾದ. ಯುಧಿಷ್ಠಿರನಾದಿಯಾಗಿ ಎಲ್ಲಾ ಪಾಂಡವರಲ್ಲೂ ಇದ್ದ ಸಹಜವಾದ ತಮ್ಮ ಬಾಂಧವರನ್ನು ಕುರಿತ ಪ್ರೀತಿ ಮತ್ತು ಸಹಾನುಭೂತಿ. ಇಂತಹವರೊಂದಿಗೆ ಯುದ್ಧ ಮಾಡಿ ತಾನಾವ ನರಕಕ್ಕೆ ಹೋಗಬೇಕು? ಎನ್ನುವ ವಿಚಾರ. ಇದು ಅವನ ಮನಸ್ಸಲ್ಲೇ ಅದೆಷ್ಟೋ ಕಾಲದಿಂದ ಅಡಗಿದ್ದ ಗೊಂದಲಗಳ ಪ್ರತೀಕ.

ಹೀಗೆ ಆರಂಭವಾದ ಅರ್ಜುನನ ವಿಷಾದವು ಭಗವಂತನ ಮುಖವಾಣಿಯ ಮೂಲಕ ಈ ಭೂಮಿಯಲ್ಲಿ ಮನುಷ್ಯರು ಬದುಕಲು ಅನುಸರಿಸಬೇಕಾದ ಧರ್ಮವನ್ನೂ ನಂತರದ ಮೋಕ್ಷವನ್ನೂ ಕುರಿತ ಗೀತೆಯಾಗಿ ಲೋಕಕ್ಕೆ ಬೆಳಕ ನೀಡಿತು. ಇಂದಿನ ಮತ್ತು ಇನ್ನು ಮುಂದೆಯೂ ನಮ್ಮ ದೇಶದಲ್ಲಿ ಉಂಟಾಗುವ ಎಲ್ಲಾ ಗೊಂದಲಗಳಿಗೂ ಪರಿಹಾರವಿರುವುದು ಗೀತೆಯಲ್ಲೇ!

ಇದೇ ಕಾರಣಕ್ಕಾಗಿ ಇದು ನಮ್ಮ ದೇಶದಲ್ಲಿ ಗಾಂಧೀಜಿ, ಅರವಿಂದರು ಮತ್ತು ವಿವೇಕಾನಂದರಂತಹ ಮಹನೀಯರೆಲ್ಲರ ಅಧ್ಯಯನಕ್ಕೂ ಪೂರಕವಾದದ್ದು. ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳುವ ಸಮಯದಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ. ನಮ್ಮಲ್ಲನೇಕ ಬಾರಿ ಪೂರ್ವಾಗ್ರಹಪೀಡಿತರಾಗಿ ನಿರ್ಧರಿಸಿ ನಿರ್ವಹಿಸುವ ಕೆಲಸಗಳೂ ಮತ್ತು ನಮ್ಮ ಶತ್ರುಗಳನ್ನೆದುರಿಸುವಾಗಲೂ ನಮಗಾಗುವ ಗೊಂದಲ ಅರ್ಜುನನಿಗಾದ ಗೊಂದಲದಿಂದೇನೂ ಹೊರತಲ್ಲ. ಇಂತಹ ಸಮಯದಲ್ಲಿ ತರ್ಕವೂ ಕೆಲಸ ಮಾಡುವುದಿಲ್ಲಾ…”ಕಾಸ್ ಆಂಡ್ ಎಫೆಕ್ಟ್” ಕುರಿತು ಯೋಚನೆಗಳಿರುವುದಿಲ್ಲ. ಕ್ಲಿಷ್ಟ ಸನ್ನಿವೇಶಗಳನ್ನೆದುರಿಸುವ ಮನೋಭಾವವೇ ಇರುವುದಿಲ್ಲ.

ಇದನ್ನೂ ಓದಿ | Gita Jayanti 2022 | ಸಾರ್ವಕಾಲಿಕ ಸಾರ್ವಭೌಮ ಗ್ರಂಥ ಭಗವದ್ಗೀತೆ

ಇದ್ದಕ್ಕಿದ್ದಂತೆ ತಲೆದೋರುವ ‘ಅಭಾವ ವೈರಾಗ್ಯ’ಗಳೂ ಹೀಗೆಯೇ! ಯಾಮುನಾಚಾರ್ಯರು ತಮ್ಮ ಗೀತಾರ್ಥಸಂಗ್ರಹದಲ್ಲಿ ಅರ್ಜುನನ ಸ್ಥಿತಿಯನ್ನು “ಅಸ್ಥಾನಕಾರುಣ್ಯ” ಎಂದಿದ್ದಾರೆ. ಎಲ್ಲರೂ ಒಂದುಗೂಡಿ ದೇಶದ ಅಭ್ಯುದಯಕ್ಕೆ ಶ್ರಮಿಸಿದಲ್ಲಿ ಮಹತ್ತರ ಬದಲಾವಣೆಗಳು ಆಗಿ ದೇಶ ಅಭಿವೃದ್ಧಿ ಹೊಂದಬಹುದೆಂಬ ಆಶಾಭಾವನೆ ಒಂದೆಡೆಯಾದರೆ, “ಏನು ಮಾಡಿದರೂ ದೇಶದ ಪ್ರಗತಿಯಾಗುವುದಿಲ್ಲ…ಎಲ್ಲಾ ತಪ್ಪುಗಳನ್ನು ಸರಿಪಡಿಸಲಾಗುವುದಿಲ್ಲ.. ಆದ್ದರಿಂದ ನಮಗೇಕೆ?” ಎನ್ನುವ ನಿರ್ವಿಕಾರ ಇನ್ನೊಂದೆಡೆ.

ಬುದ್ಧಿಪ್ರಧಾನ ಯುಗವೆನ್ನುವ ಈ ವಿಜ್ಞಾನ ಯುಗದಲ್ಲಿ ಪ್ರಬಲವಾಗಿರುವ ಬುದ್ಧಿಯ ಪಕ್ಕದಲ್ಲೇ ದುರ್ಬಲ ಮನಸ್ಸೂ ಇದೆ. ಕಠಿಣ ಶ್ರಮದಿಂದ ಸಾಧಿಸಬೇಕಾದ ಮನೋಭಾವವು ಸೌಕರ್ಯಗಳಿಂದಾಗಿ ಇಚ್ಛಾಶಕ್ತಿಯ ಕೊರತೆಯೊಂದಿಗೆ ಸಂಘರ್ಷಗಳನ್ನೆದುರಿಸುವ ಶಕ್ತಿಯ ಕೊರತೆಯಾಗಬಾರದು. ಡಿವಿಜಿಯವರು ತಮ್ಮ “ಭಗವದ್ಗೀತಾತಾತ್ಪರ್ಯ’ ಎನ್ನುವ ಗ್ರಂಥದಲ್ಲಿ ಕೆಲವು ಉದಾಹರಣೆಗಳ ಸಹಿತ ತಿಳಿಸಿದ್ದಾರೆ. ಅರ್ಜುನನಿಗೆ ಅಂದು ಉಂಟಾದ ಗೊಂದಲ ಮತ್ತು ಸಂದಿಗ್ಧವು ಎಲ್ಲಾ ಕಾಲದಲ್ಲೂ ಪ್ರಸ್ತುತವೆನ್ನುತ್ತಾರೆ. ಅನಗತ್ಯ ಕರುಣೆ ಮತ್ತು ಹತಾಶ ಭಾವನೆ ಅರ್ಜುನನಿಗೇನೋ ತನ್ನ ಕ್ಷಾತ್ರ ಧರ್ಮವನ್ನೇ ಮರೆಯಿಸಿ ಯುದ್ಧದಿಂದ ಪಲಾಯನಗೈಯುವ ಹೇಡಿಯ ಸ್ಥಿತಿ ತಲುಪಿದ. ಆದರೆ ನಮ್ಮ ಬದುಕಲ್ಲಿ ದಿನನಿತ್ಯ ಎದುರಾಗುವ ಸಂಘರ್ಷ ಮತ್ತು ಗೊಂದಲಗಳಿಗೆ ಪರಿಹಾರ ನಾವೇ ಕಂಡುಕೊಳ್ಳಬೇಕು.

ಭಗವದ್ಗೀತೆ ಸರ್ವಕಾಲಿಕ ಮತ್ತು ಸರ್ವವ್ಯಾಪಕ. ವಿದೇಶಗಳಲ್ಲೂ ಇಂದು ಗೀತೆಯು ಅಧ್ಯಯನದ ವಿಷಯ. ಮ್ಯಾನೇಜ್‍ಮೆಂಟ್ ತರಗತಿಗಳಲ್ಲಿ ಗೀತೆಯ ಅದ್ಯಾಯಗಳನ್ನು ಮತ್ತು ತಾತ್ಪರ್ಯಗಳನ್ನು ತರಗತಿಗಳಲ್ಲಿ ಬೋಧಿಸಲಾಗುತ್ತಿದೆ. ಅನೇಕ ವಿದ್ಯಾಲಯಗಳಲ್ಲಿ ಗೀತೆಯು ಅಧ್ಯಯನದ ವಸ್ತುವಾಗಿದೆ. “ಕ್ರೈಸಿಸ್ ಮ್ಯಾನೇಜ್‍ಮೆಂಟ್” ಮತ್ತು ಮನಃಶಾಸ್ತ್ರದಲ್ಲಿ ನೆರವಾಗಿದೆ. ಪರಿಸ್ಥಿತಿಯನ್ನೆದುರಿಸಿ ಮನಸ್ಸನ್ನು ಸಮತೋಲನವಾಗಿಟ್ಟುಕೊಳ್ಳಲು ಭಗವದ್ಗೀತೆಯ ಅಧ್ಯಯನ ಮತ್ತು ಮನನದ ಅವಶ್ಯಕತೆ ಎಲ್ಲರಿಗೂ ಇದೆ.

Exit mobile version