Site icon Vistara News

ಭಾವಲೋಕದೊಳ್‌ : ಯಾವ ತಿರುವಿನಲ್ಲಿ ಯಾರ ಪ್ರೀತಿ ಕಾದಿದೆಯೋ, ಯಾರಿಗೆ ಗೊತ್ತು!

Bhava lokadol : who knows in which turning love is waiting for us..

Bhava lokadol : who knows in which turning love is waiting for us..

ಪ್ರೀತಿ ವಿಷಯದಲ್ಲಿ ಎಲ್ಲವೂ ಅನಿರೀಕ್ಷಿತವೇ. ಪ್ರೀತಿ ಎಂಬ ಭಾವವೊಂದನ್ನು ಕೇವಲ ಸಂಬಂಧಗಳ ಬಂಧದಲ್ಲಿರುವವರು ಮಾತ್ರ ಕೊಡಲಾರರು. ಅದು ಬಂಧ, ಸಂಬಂಧಗಳನ್ನು ಮೀರಿದ ಭಾವಸೇತುವೆ. ಗೊತ್ತು ಗುರಿಯಿಲ್ಲದ ಅನಾಮಧೇಯ ಕೂಡ ಪ್ರೀತಿ ಎಂಬ ಒಂದು ಭಾವ ಮೂಡಿದರೆ ತನ್ನೆದುರಿಗಿನ ವ್ಯಕ್ತಿಗೆ ಮೊಗೆಮೊಗೆದು ಪ್ರೀತಿ ತುಂಬಿಕೊಡುತ್ತಾನೆ. ಪ್ರೀತಿಗೆ ಗಡಿ, ಬಣ್ಣ, ಜಾತಿ, ಧರ್ಮದ ಹಂಗಿಲ್ಲ. ಮೇಲು ಕೀಳೆಂಬ ಭಾವವಿಲ್ಲ. ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲ. ಇರುವುದೊಂದೇ ಭಾವ ಪ್ರೀತಿ! ಕೇವಲ ಪ್ರೀತಿ….

ರಸ್ತೆಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಾಗ ಪಕ್ಕದ ಕಾರಿನಲ್ಲಿ ಕೂತು ಕಿಟಿಕಿಯಿಂದ ತಲೆಹೊರಗೆ ಹಾಕಿ ಪಿಳಿಪಿಳಿ ಎಂದು ಕಣ್ಣರಳಿಸಿ ನೋಡುತ್ತಿದ್ದ ಪುಟ್ಟ ಕಂದಮ್ಮನ ಮುದ್ದು ಮೊಗದ ನೋಟದಲ್ಲೂ ಪ್ರೀತಿ ಇದ್ಯಲ್ಲ!

ನಮ್ಮತ್ತ ನೋಡಿ ಒಂದು ಮುಗುಳ್ನಕ್ಕ ತುಟಿಯಂಚಲ್ಲೆ ಪ್ರೀತಿಯ ಅಮೃತದ ಹನಿಯಿದೆ. ರಸ್ತೆ ದಾಟಿಸಿದಾಗ ಹಿರಿಯ ಜೀವವೊಂದು ‘ಸಂದಾಗಿರು ಮಗ’ ಎಂಬ ಆಶೀರ್ವಾದದಲ್ಲೂ ಇರುವುದು ಅದೇ ಪ್ರೀತಿ.

ಬೆಳಗಿನ ವಾಕಿಂಗ್‌ನಲ್ಲಿ ಸಿಗುವ ಸ್ನೇಹಿತರು, ದೇವಸ್ಥಾನದ ಹೊರಗಿನ ಹೂವಿನ ಅಂಗಡಿಯವರು, ಆಫೀಸ್‌ನ ಹೊರ‌ನಿಂತು ಎದುರಾದೊಡನೆ ಗುಡ್ ಮಾರ್ನಿಂಗ್ ಎಂದು ಹಿಗ್ಗಿ ಹೇಳುವ ಸೆಕ್ಯುರಿಟಿ ಗಾರ್ಡ್, ರಸ್ತೆಯ ತುದಿಯ ತರಕಾರಿ ಅಂಗಡಿಯವರು ಹೀಗೆ ಹೇಳ್ತಾ ಹೋದರೆ ಪ್ರತಿ ತಿರುವಿನಲ್ಲೂ ಅದೆಷ್ಟೋ ಅನಾಮಧೇಯರು ನಮ್ಮ ಆಗಮನವನ್ನು ಸಂಭ್ರಮಿಸಿಬಿಡುತ್ತಾರಲ್ಲ… ಒಂದು ಸಣ್ಣ ನಗು, ಪುಟ್ಟದೊಂದು ಮಾತು, ಕೆಲವೊಮ್ಮೆ ಹರಟೆ, ಇನ್ನೂ ಕೆಲವೊಮ್ಮೆ ಕೇವಲ ಬಾಯ್ ಎಂದು ಹೇಳುವ ಸನ್ನೆಯೂ ಎಷ್ಟೊಂದು ಭಾವ ಮೂಡಿಸಿಬಿಡುತ್ತದೆ. ಅದೆಷ್ಟೇ ಟೆನ್ಶನ್‌ನಲ್ಲಿರುವ ಮೆದುಳು ಇವರ ದರ್ಶನದಲ್ಲೇ ಮರೆಯಾಗಿಬಿಡುತ್ತಲ್ಲ. ಇದನ್ನೆ ಅಲ್ಲವೇ ಮಾನವ ಸಂಬಂಧಗಳ ಸಣ್ಣ ಎಳೆಯ ಪ್ರೀತಿ ಅನ್ನೋದು….

ಯಾರೋ ನಮ್ಮನ್ನು ಪ್ರೀತಿಸುವುದಕ್ಕೆ ಅವರು ನಮ್ಮ ಸಂಬಂಧಿಕರೇ ಆಗಿರಬೇಕಿಲ್ಲ ಅಥವಾ ನಮ್ಮ ಹತ್ತಿರದ ಒಡನಾಡಿಗಳಾಗಬೇಕಿಲ್ಲ. ಅದೆಷ್ಟೋ ವ್ಯಕ್ತಿಗಳು, ವ್ಯಕ್ತಿತ್ವಗಳು ಬದುಕಿನ ಪುಟದಲ್ಲಿ ಅಕ್ಷರಗಳ ನೆನಪಾಗಿರುತ್ತವೆ. ಆ ಅಕ್ಷರಗಳನ್ನು ಜೋಪಾನವಾಗಿಟ್ಟುಕೊಂಡು ಪುಸ್ತಕ ಮಾಡಿಕೊಳ್ಳುವುದು ನಮ್ಮಯ ಬದುಕಿನ ಮೌಲ್ಯ. ಕೇವಲ ಸುತ್ತಲಿರುವವರಿಂದ, ನಾವು ಪ್ರೀತಿದಸಿದರಿಂದ ಪ್ರೀತಿ ಸಿಕ್ಕಿಲ್ಲ, ಸಿಗುತ್ತಿಲ್ಲ ಎಂದು ಕೊರಗುವ ನಾವು ಕಾರಣವೇ ಇಲ್ಲದೆ, ಸಂಬಂಧವೇ ಇಲ್ಲದೆ ತೋರುವ ಅನಾಮಧೇಯರ ಕಾಳಜಿ, ಅಕ್ಕರೆ, ಪ್ರೀತಿಯನ್ನು ಗುರುತಿಸುವುದೇ ಇಲ್ಲ. ಇನ್ನು ಕೆಲವೊಮ್ಮೆ ಪ್ರತಿಕ್ರಿಯಿಸುವುದೂ ಇಲ್ಲ.

ನಮಗೆ ಅದೇನು ದೊಡ್ಡ ವಿಷಯವೋ ಅಥವಾ ಅದನ್ನು ಕಳೆದುಕೊಂಡಿದಕ್ಕೆ ಪಶ್ಚಾತ್ತಾಪವೂ ಆಗುವುದಿಲ್ಲ. ಯಾಕೆಂದರೆ ಅದು ನಮ್ಮ ಚಿತ್ತ ಚಿಂತನೆಯಲ್ಲಿ ರಿಜಿಸ್ಟರ್ ಕೂಡ ಆಗಿರುವುದಿಲ್ಲ. ಅದು ಕೇವಲ ದಿನನಿತ್ಯದ ಒಂದು ರೊಟೀನ್ ಅನಿಸಿಬಿಟ್ಟಿರುತ್ತದೆ. ಇದೆಲ್ಲವೂ ಕಾಮನ್ ಅನಿಸಿಬಿಟ್ಟಿರುತ್ತದೆ.

ಬೆಳಗ್ಗೆದ್ದು ಸಂಪಾದನೆಗೋ, ಓದಿಗೋ, ಅಸ್ತಿತ್ವಕ್ಕೊ ಹೊರಪ್ರಪಂಚಕ್ಕೆ ಬೀಳುವ ನಾವುಗಳು ಒಂದು ಬಾರಿ ಸಂಕಲ್ಪ ಮಾಡಿ ಈ ದಿನ ನನ್ನದು, ಎಲ್ಲರನ್ನೂ ಪ್ರೀತಿಸುತ್ತೇನೆ, ಈ ಪ್ರಪಂಚದ ಎಲ್ಲ ಪ್ರೀತಿಯನ್ನು ಅನುಭವಿಸುತ್ತೇನೆ ಎಂದು ಹೊರಟುಬಿಟ್ಟರೆ, ನಮ್ಮ ಅರಿವಿಗೆ ಬಾರದೆ ಪ್ರೀತಿಯ ದೊಡ್ಡ ಮೂಟೆಯೊಂದು ಹೆಗಲಿಗೇರಿರುತ್ತದೆ. ಸುತ್ತಲಿನ ಪ್ರಪಂಚದ ಕೇಂದ್ರಬಿಂದುವೇ ನಾವಾಗಿಬಿಟ್ಟಿರುತ್ತೇವೆ. yes! We have an issues and problems ಆದ್ರೆ ಅದೆಲ್ಲವನ್ನೂ ಮೀರಿ ಇನ್ನೊಂದು ತುದಿಯಿಂದ ಬದುಕನ್ನು ನೋಡುವ ಅವಶ್ಯಕತೆ ಇದೆ.

ನಮಗೆ ಸುತ್ತಲಿನ ಪ್ರೀತಿಯ ಅವಶ್ಯಕತೆ ಇರದಿರಬಹುದು. ಆದ್ರೆ ನಮ್ಮ ಪ್ರೀತಿಯ ಸಣ್ಣ ಸಾನಿಧ್ಯಕ್ಕೆ ಅದೆಷ್ಟೋ ಪುಟ್ಟ ಜೀವಗಳು ಕಾದಿರುತ್ತವೆ. ಅದೆಷ್ಟೋ ಬಾರಿ ಸಂಭ್ರಮಿಸುತ್ತವೆ. ಈ ಕ್ಷಣದಿಂದಲೇ ಸಿಗದ ಪ್ರೀತಿಯ ಮರೆತು ಎದುರಿಗಿನ ಎಲ್ಲ ಪ್ರೀತಿಯ ಪಡೆದುಕೊಳ್ಳುವ ಹೆಜ್ಜೆ ಶುರುಮಾಡಿ. ಒಂಟಿಯಾಗಿ ನಡೆಯುತ್ತಾ ಹೋಗಿ, ಒಮ್ಮೆ ಹಿಂದಿರುಗಿ ನೋಡಿದಾಗ ಬಿಟ್ಟು ಬಂದ ಪ್ರತಿ ಹೆಜ್ಜೆಯಲ್ಲೂ ಯಾವುದಾದರೂ ಅನಾಮಧೇಯ ಸಂಬಂಧಗಳು ಜೊತೆಯಾಗಿರುತ್ತವೆ. ಜೀವನದ ಪ್ರತಿ ಕ್ಷಣದ ಬದುಕನ್ನೂ ಪ್ರೀತಿಸಿ, ಬದುಕಿನಲ್ಲಿರುವವರನ್ನೂ ಪ್ರೀತಿಸಿ…
ಪ್ರೀತಿಗೆ ಪ್ರೀತಿ ಮಾತ್ರವೇ ಪ್ರೀತಿ.‌‌

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ಮೊದಲ ಬಾರಿ ಅವಳು ಬಂದು ಕೈ ಹಿಡಿದಾಗ ನಾನು ಏನೂ ಆಗಿರಲಿಲ್ಲ, ಮುಂದೆ ಅವಳೇ ಎಲ್ಲವೂ ಆದಳು!

Bhava lokadol : who knows in which turning love is waiting for us..

Exit mobile version