Site icon Vistara News

ಭಾವಲೋಕದೊಳ್‌ ಅಂಕಣ : ಬ್ಯಾಚುಲರ್‌ ಲೈಫ್‌ ಎಂಬ ಶುದ್ಧ ಪರದೇಸೀ ಬದುಕು! ಕಭೀ ಖುಷಿ ಕಭೀ ಗಮ್!

Bhavalokadol column : story of Bachelor life

Bhavalokadol column : story of Bachelor life

#image_title

ಬೆಳಗ್ಗೆ ಎದ್ದು ‘ಮಗ ಒಂದು ದಮ್ ಇದ್ಯಾ ಅಂತ’ ಶುರುವಾಗೋ ಜೀವನ ರಾತ್ರಿ ಅಷ್ಟರಲ್ಲಿ ‘ಬರ್ತಾ ಹಂಗೆ ಹಾಫ್ ಎಗ್ ರೈಸ್ ತಂದುಬಿಡೋ’ ಅಂತ ಹೇಳೋ ಡೈಲಾಗ್‌ಗೆ ಬ್ಯಾಚುಲರ್ ಡೇ ಮುಗಿದೇ ಹೋಗುತ್ತೆ!

ಓದಿಗಾಗಿಯೋ, ಕೆಲಸಕ್ಕಾಗಿಯೋ, ಹೊಟ್ಟೆಪಾಡಿನ ಜೀವನಕ್ಕಾಗಿಯೋ ಹುಟ್ಟೂರು ಬಿಟ್ಟು ಕಾಣದ ದೊಡ್ಡೂರಿಗೆ ಬಂದು ಹೊರಗಿನಿಂದ ಬಿಂದಾಸ್ ಆಗಿದ್ದರೂ ಒಳಗಿನಿಂದ ಪರದೇಸಿಯಾಗಿ ಬದುಕುವುದೇ ಬ್ಯಾಚುಲರ್ ಬದುಕಿನ ಒನ್ ಲೈನ್ ಢೆಪಿನೇಷನ್.

ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ.. ಯಾವ ಊರಾದರೂ ಸರಿ, ಬ್ಯಾಚುಲರ್‌ ಲೈಫಿನಲ್ಲಿ ವ್ಯತ್ಯಾಸವೇ ಇಲ್ಲ! ಯಾವುದೋ ಸಣ್ಣ ಹಳ್ಳಿಯಿಂದ ಸಾವಿರಾರು ಕನಸುಗಳನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ವಯಸ್ಸಾದ ತಂದೆ ತಾಯಿಯನ್ನು ಊರಲ್ಲಿ ಬಿಟ್ಟು ಷೇರಿಂಗ್ ಅಲ್ಲಿ ಸಣ್ಣ ರೂಮ್ ಬಾಡಿಗೆ ಕಟ್ಕೊಂಡು ಜೀವನ ಮಾಡೋ ಬ್ಯಾಚುಲರ್ ಜೀವನ ಒಂದ್ ತರಹ ಹಾವು ಏಣಿ ಆಟ ಇದ್ದಹಾಗೆ.

ಬೆಂಗಳೂರಿಗರಿಗೆ ಬ್ಯಾಚುಲರ್ ಬದುಕಿನ ಅರಿವು ಚೆನ್ನಾಗಿಯೇ ಇರುತ್ತದೆ. 24 ಗಂಟೆ ಓಡ್ತಾನೆ ಇರೋ ಸಿಟಿಯಲ್ಲಿ ಎಲ್ಲರಿಗೂ ಅವರದೇ ಆದ ಟೆನ್ಶನ್. ಗಿಜಿ ಗಿಜಿ ಅನ್ನುವ ರಸ್ತೆಗಳು, ನೂರೆಂಟು ಭಾಷೆಗಳು, ಕಲರ್ ಫುಲ್ ದುನಿಯಾ, ಖಾಲಿ ಪಲಾವ್ ಜೀವನ, ಹೈಫೈ ಮಾಲ್ಸ್, ಮುಟ್ಟುದ್ರೆ ಸಾವಿರ ರೂಪಾಯಿ ಐಟಮ್ಸ್, ಹೋಟೆಲ್‌ಗೋದ್ರೆ ಟೇಸ್ಟಿಂಗ್‌ ಪೌಡರ್ ಫುಡ್‌ಗಳು, ಕಾಫಿಗೋದ್ರೆ ನೊರೆ ಹಾಲು ಇಷ್ಟರ ಮಧ್ಯೆ ಇರೋದು ಸಿಗೋದು ಅಂದ್ರೆ ಕಿಂಗ್ ಫಿಶರ್ ಬಿಯರ್ ಹಾಫ್ ರೈಸ್ ಖುಷ್ಕಾ! ಇಷ್ಟೆ ಗುರು ಮಿಡಲ್ ಕ್ಲಾಸ್ ಬ್ಯಾಚುಲರ್ ಲೈಫ್! ಆದ್ರೂ ಇದರ ಮಜಾನೆ ಬೇರೆ ಗುರು! ಅಂತಾರೆ ಹುಡುಗರು!

ಒಂದೇ ರೂಂ‌ನಲ್ಲಿ ಐದು ಜನ ಇದ್ರೂ ಇನ್ನೂ ಊರೋರೆಲ್ಲ ಮಲಗಬಹುದು ಅನ್ನೋ ಫೀಲ್ ಹುಡುಗರಿಗೆ‌. ರೂಮಲ್ಲಿ ಯಾರದಾದ್ರೂ ಬರ್ತ್‌ಡೇ ಬಂದ್ರೆ ಸಾಕು 500 ರೂ. ಕೇಕ್ ಕಟ್ ಮಾಡ್ಸಿ 5 ಸಾವಿರ ರೂಪಾಯಿ ಪಾರ್ಟಿ ತಗೋತಾರೆ. ‘ಮಗ ನಿಂದು ಹೊಸ ಜರ್ಕಿನ್ ಕೊಡು’ ಅಂತ ಹಾಕಿಕೊಂಡು ಹೋಗ್ತಾರೆ. ʻಇವತ್ತು ಒಂದಿನ ಬೈಕ್ ಕೊಡೋ ನಮ್ಮ ಹುಡ್ಗಿ ಬರ್ತ್‌ ಡೇ. ಪಕ್ಕಾ ನಾನೇ ಪೆಟ್ರೋಲ್ ಹಾಕುಸ್ತೀ‌ನಿ ಅಂತ ಡೈಲಾಗ್ ಹೊಡೆದು ಬೈಕ್ ತಗೊಂಡು ಹೋಗ್ತಾರೆ. ಹೀಗೆ ಹೋದೋರು ಪೆಟ್ರೋಲ್ ಹಾಕಿಸಿದ ಉದಾಹರಣೆ ಇತಿಹಾಸದಲ್ಲೇ ಇಲ್ಲ!

10 ಗಂಟೆಗೆ ಹೋಗಬೇಕಿರುವ ಕೆಲಸಕ್ಕೆ 9 ಗಂಟೆಗೆದ್ದು ಸ್ನಾನನೂ ಮಾಡ್ದೆ ಅದೇ ಷರ್ಟ್‌ಗೆ ಸ್ಟೈಲಾಗಿ ಸೆಂಟ್ ಹಾಕಿಕೊಂಡು ಬೈಕ್ ಹತ್ತಿ ಹೋಗ್ತಾ ಹಾಗೆ ಒಂದು ಇಡ್ಲಿ, ಹಾಫ್ ರೈಸ್ ತಿನ್ಕೊಂಡು ಕೆಲಸಕ್ಕೆ ಲಾಗಿನ್ ಆದ್ರೆ ಅವತ್ತಿನ ದಿನ ಶುರು. ಮಧ್ಯಾಹ್ನ ಯಾರಾದ್ರೂ ಕರೆದ್ರೆ ಊಟ, ಇಲ್ಲವಾದ್ರೆ ಅದೇ ಟೀ, ಸಿಗರೇಟ್ ಜೊತೆ ಸಮಯಾನೇ ಕಳೆದುಹೋಗುತ್ತೆ. ಐಟಿಬಿಟಿನೋ, ಮಾರ್ಕೆಟಿಂಗ್, ಸೇಲ್ಸ್, ಟೀಚಿಂಗ್, ಬಿಜಿನೆಸ್, ಅಡ್ವೈಸರ್, ಅಡ್ವೋಕೆಟ್ ಏನೇ ಆಗಿದ್ರೂ ಸಂಜೆ ಅಷ್ಟರಲ್ಲಿ ಒತ್ತಡದ ಬದುಕು ಹೈರಾಣಾಗಿರುತ್ತೆ.

ಅಂಬೋ! ಅಂತ ಮನೆಗೆ ಬಂದು ಬಾಗಿಲು ತೆರೆದ್ರೆ ಎಲ್ಲಾ ಚೆಲ್ಲಾಪಿಲ್ಲಿ ಚೆಲ್ಲಾಟಗಳು, ತೊಳೆಯದೆ ಬಿದ್ದಿರುವ ಪಾತ್ರೆಗಳು, ಒಗೆಯದೆ ಇಟ್ಟಿರುವ ಬಟ್ಟೆಗಳು, ನೆನ್ನೆ ರಾತ್ರಿ ಕುಡಿದು ಬಿಟ್ಟಿರುವ ಬಾಟ್ಲಿಗಳು, ಬಾಗಿಲಲ್ಲಿ ಅಡ್ಡಾದಿಡ್ಡಿ ಬಿದ್ದಿರುವ ಚಪ್ಪಲಿಗಳು… ಉಫ್! ಕಷ್ಟ ಗುರು ಲೈಫ್ ಅನ್ಸುತ್ತೆ.
ಮನೆಯನ್ನು ದೇವಸ್ಥಾನ ತರಹ ಇಟ್ಕೊಂಡಿದ್ರೂ ಊಟದಲ್ಲಿ ಒಂದು ಸಣ್ಣ ಕೂದಲು ಸಿಕ್ಕಾಗ ಅಮ್ಮನ ಮೇಲೆ ಕೂಗಿದ ಚೀರಾಟಗಳು ನೆನಪಿಗೆ ಬರ್ತಾವೆ!

ಬ್ಯಾಚುಲರ್‌ ಲೈಫಲ್ಲಿ ಸಖತ್ ಫ್ರೀಡಂ ಇದೆ ಅಂತ ಅನಿಸಿದ್ರೂ ಕಾಣದೆ ಇರೋ ಯಾವುದೋ ಜವಾಬ್ದಾರಿ ಬೆನ್ನು ಬಿದ್ದಿದೆ ಅನ್ನಿಸ್ತಿರುತ್ತೆ. ಅಮ್ಮನ ಚೀಟಿಗೋ, ಅಪ್ಪನ ಆರೋಗ್ಯಕ್ಕೋ, ತಂಗಿಯ ಮದುವೆಗೋ, ತಮ್ಮನ ಓದಿಗೋ, ಹೊಲದ ಉಳುಮೆಗೋ, ಮನೆಯ ಸುಣ್ಣ ಬಣ್ಣಕ್ಕೊ, ಸಾಲದ ಸುಳಿಗೋ ದುಡಿದ ದುಡ್ಡೆಲ್ಲ ಖರ್ಚಾಗಿಬಿಡುತ್ತೆ‌‌. ತಿಂಗಳ ಪೂರ್ತಿಯ ದುಡಿಮೆ ಸಂಬಳ ಬಂದ ದಿನವೇ ಊರಿಗೆ ಹೋಗಿಬಿಡುತ್ತದೆ. ಸಂಬಳದ ಬಂದ ದಿನ ಮಾತ್ರ ಬ್ಯಾಚುಲರ್ ಬದುಕಿಗೆ ಹಬ್ಬ. ಇನ್ನುಳಿದ ದಿನವೆಲ್ಲ ಅದೇ ಖಾಲಿ ಖಾಲಿ ಜೀವನ. ಹಬ್ಬ ಅಂದ್ರೆ ಫುಲ್ ಸೆಲೆಬ್ರೆಷೆನ್ ಏನಿಲ್ಲ ಬೇರೆ ದಿನ ಪೆಗ್‌ಗೆ ನಿಲ್ಲಿಸಿದ್ರೆ ಸಂಬಳದ ದಿನ ಮಾತ್ರ ಫುಲ್ ಬಾಟಲ್, ಒಂದು ಹೊಸ ಶರ್ಟ್ ತೆಗೆದುಕೊಳ್ಳುವುದು, ಥಿಯೇಟರ್‌ಗೆ ಹೋಗಿ ಒಂದು ಸಿನಿಮಾ ನೋಡೋದು, ತನ್ನಿಷ್ಟದ ನಾಟಿ ಹೋಟೆಲ್‌ನಲ್ಲಿ ಬಾಡೂಟ ತಿನ್ನೋದು, ಫ್ರೆಂಡ್ಸ್ ಜೊತೆ ಮಾತಾಡ್ಕೊಂಡು ಟೀ ಕುಡಿಯುತಾ ಹರಟೆ ಹೊಡೆಯೋದು‌, ಬೈಕ್‌ಗೆ ಪೆಟ್ರೋಲ್ ಹಾಕ್ಸಿ ಹುಡುಗಿ ಜೊತೆ ಒಂದು ಲಾಂಗ್ ಡ್ರೈವ್ ಹೋಗೊದು ಇಷ್ಟೆ!

ಸುತ್ತಾಟ, ಹೈಫೈ ಬದುಕು ಕೆಲವೊಮ್ಮೆ ಚೆಂದ ಅನಿಸಿದರೂ ಒಳಗೆ ಯಾರಿಗೂ ಹೇಳಲಾಗದ ನೋವಿರುತ್ತದೆ. ಈ ಊರಲ್ಲಿ ನಾನೊಬ್ಬನೇ ಒಬ್ಬಂಟಿ ಅನಿಸುತ್ತೆ. ತನ್ನ ಜೊತೆ ಇರುವವರೂ ಯಾರು ನನ್ನವರಲ್ಲ ಎಂದು ಭಾಸವಾಗುತ್ತದೆ. ನಮ್ಮೂರಿನ ಮಣ್ಣಿನ ಘಮ ಇಲ್ಲಿಲ್ಲವಲ್ಲವೆನಿಸುತ್ತದೆ. ಹೋಟೆಲ್‌ನಲ್ಲಿ ಊಟ ಮಾಡುವಾಗ ಅಮ್ಮನ ಕೈತುತ್ತು ನೆನಪಾಗಿ ಕಣ್ಣಲ್ಲಿ ನೀರು ತುಂಬುತ್ತದೆ. ಹಸಿವಾದಾಗ ಅನ್ನವಿಕ್ಕಲು ಅಮ್ಮ ಇರಬೇಕಿತ್ತು ಅನಿಸುತ್ತದೆ. ಅಪ್ಪನ ಸ್ಕೂಟರ್ ರೈಡ್ ಬೇಕೆನಿಸುತ್ತದೆ. ತಲೆಗೆ ಎಣ್ಣೆ ತಟ್ಟಿ ಹಂಡೆ ಹೊಲೆ ಸ್ನಾನ ಮಾಡಬೇಕೆಂಬ ಆಸೆ ಆಗುತ್ತೆ. ಹೊಗೆ ತುಂಬಿರುವ ಊರು ಬಿಟ್ಟು ಆಕಾಶ ನೋಡ್ಕೊಂಡು ಅಮ್ಮನ ಮಡಿಲಲ್ಲಿ ಕನಸು ಬೀಳಲಿ ಎಂಬ ಬಯಕೆ ಮೂಡುತ್ತೆ.

ಲೇಟಾಯ್ತು ಮನೆಗೆ ಬೇಗ ಬಾರೋ ಅನ್ನೋರು ಯಾರು ಇಲ್ವಲ್ಲ?, ರೂಂಗೆ ಬೇಗ ಹೋಗಿ ಮಾಡೋದಾದ್ರೂ ಏನು ಅನ್ನೊ ಕೊರಗು ಕಾಡುತ್ತಲೇ ಇರುತ್ತೆ. ಅಕ್ಕ ಪಕ್ಕದ ಮನೆಯವರು ಒಂಚೂರು ಸಾರು ಕೊಟ್ಟು ‘ಅನ್ನಕಿಟ್ಕೊಳಪ್ಪ’ ಅಂದ್ರೆ ಇವತ್ತಿಗೆ ಇಷ್ಟೇ ಸಾಕಪ್ಪ ಅನಿಸಿ ಸಮಾಧಾನದ ಉಸಿರು ಹೊರ ಬೀಳುತ್ತೆ. ಹುಷಾರು ತಪ್ಪಿ ಒಬ್ಬನೆ ಮಲಗಿದ್ದಾಗ ಗಂಜಿ ಕಾಯಿಸಲು ಯಾರಾದ್ರೂ ಇರಬಾರದೆ ಎನಿಸುತ್ತದೆ. ತಿಂಗಳ ಕೊನೆಯಲ್ಲಿ ಕೈಯಲ್ಲಿ ಕಾಸಿಲ್ಲವಾದರೂ ಯಾರಿಗೂ ಹೇಳದೆ ಬದುಕು ನಡೆಸುತ್ತೆ. ವರ್ಷಕ್ಕೊಂದು ಯುಗಾದಿಗೋ, ದೀಪಾವಳಿಗೋ ಮನೆಗೆ ಹೋದಾಗ ಇದೇ ನಿಜವಾದ ಬದುಕು ಅನಿಸಿದರೂ ಹೊಟ್ಟೆಪಾಡಿ‌ನ ಬೆಂಗಳೂರು ಬಾ ಬಾ ಅಂತ ಕೈ ಬೀಸಿ ಕರೆಯುತ್ತಿರುತ್ತದೆ.

ಇದನ್ನೂ ಓದಿ : ಭಾವಲೋಕದೊಳ್‌ : ಯಾವ ತಿರುವಿನಲ್ಲಿ ಯಾರ ಪ್ರೀತಿ ಕಾದಿದೆಯೋ, ಯಾರಿಗೆ ಗೊತ್ತು!

Exit mobile version