Site icon Vistara News

ಭಾವಲೋಕದೊಳ್‌ ಅಂಕಣ : ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ!

love

#image_title

ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ?
ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ?
ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ?
ಮೂರು ಸ್ವರದ ಹಾಡಿನಲ್ಲಿ ಹೃದಯವನು ಹರಿಬಿಡಬಹುದೆ?
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೆ……….

ಜಯಂತ್ ಕಾಯ್ಕಿಣಿಯ ಸಾಲುಗಳು ಕಾಡುತಿದೆ ಕಣೋ..
ಏ! ಹುಡ್ಗ ನೆನಪಿದ್ಯಾ ನಿನಗೆ, ನೀನಾಡಿದ ಆ ಎಲ್ಲಾ ಮಾತುಗಳು! ಕಾ‌ಲ ಕಳೆದರೂ ಕನಸು ಬಿಡದೇ ನಿನ್ನೊಟ್ಟಿಗೆ ಇರ್ತೀನಿ ಅಂತ ವರುಷಗಳ ಹಿಂದೆ ಕೊಟ್ಟ ಮಾತು.

ಇಂದು ಕಾಲ ಕಳೆದು ಹೋಗಿದೆ, ಕನಸುಗಳು ಚೂರಾಗಿ ಸತ್ತು ಹೋಗಿದೆ. ಆದ್ರೆ ನೀನು ಮಾತ್ರ ನನ್ನೊಳಗಿನಿಂದ ಮರೆಯಾಗಿಲ್ಲ ಕಣೋ. ಈ ದಿನ ನೆನಪಿದ್ಯಾ! ವರುಷಗಳ ಹಿಂದೆ ಕೈಯಲ್ಲಿ ಗುಲಾಬಿ ತುಂಬಿದ ಗುಚ್ಛವೊಂದನು ಹಿಡಿದು ಮಂಡಿಯೂರಿ ‘ಪ್ರೀತಿಗೆ ಶರಣಾಗಿರುವೆ, ನಿನ್ನ ಪ್ರೀತಿ ಎಂಬ ಅಮೃತ ಕೊಟ್ಟು ಬದುಕಿಸುವೆಯಾ’ ಎಂದು ಬೇಡಿದ್ದೆ. ನಿನ್ನ ಕಂಗಳ ಅಂಚಿನಲ್ಲಿ ಹನಿಯೊಂದು ಹರಿದಿದ್ದನ್ನು ನನ್ನ ನೋಟಕ್ಕಿಂತ ಹೃದಯವೇ ಬೇಗನೇ ಗುರುತಿಸಿತ್ತು.

ಹುಡುಗಿಯರೆಂದರೆ ಕನಿಷ್ಠವೆಂಬಂತೆ ಕಾಣುವ ಕಾಲದಲ್ಲೂ ಕಣ್ಣೀರು ಹಾಕಿ ಪ್ರೇಮ ನಿವೇದನೆ ಮಾಡುವ ಹುಡುಗ ಕಣ್ಮುಂದಿದ್ದಾನೆ ಕೈಹಿಡಿದು ಒಪ್ಪಿಬಿಡು, ಬಿಗಿದಪ್ಪಿ ಅಪ್ಪಿಬಿಡು ಎಂದು ಮನಸ್ಸು ಅದೆಷ್ಟೇ ಬಾರಿ ಸಾರಿ ಸಾರಿ ಹೇಳಿದರೂ ನಾನು ಮಾತ್ರ ಮುಖಭಾವದಲ್ಲಿ ಅದೆಲ್ಲವನ್ನೂ ಮುಚ್ಚಿಟ್ಟುಬಿಟ್ಟೆ.

ಮುದ್ದುಮುಖದ ಚೆಲುವನನ್ನು ಸ್ವಲ್ಪ ಕಾಡಿಸುವ ಬಯಕೆ ನನ್ನದಾಗಿತ್ತು. ನೀನು ಒಳ್ಳೆಯವನೇ‌ ಕಣೋ!‌ But I don’t have feelings for you ಅಂದೊಡನೆ ಎಷ್ಟು ಕುಸಿದುಹೋದೆ ನೀನು. ನಾನಿರದಿದ್ದರೆ ನಿನ್ನ ಬದುಕೆ ಇಲ್ಲ ಎಂಬಂತೆ ಮರುಗಿದೆ. ನಿಂತಲ್ಲೆ ಸೋತು ಕೈಚೆಲ್ಲಿ ಕೂತುಬಿಟ್ಟೆ, ನೀ ಬಿಕ್ಕಳಿಸಿ ಅಳದಿದ್ದರೂ ನಿನ್ನ ಎದೆಯೊಳಗಿನ ಕೂಗು ನನ್ನನ್ನು ತಾಕಿತ್ತು. ಮುಖ ಭೂಮಿ ನೋಡುತ್ತಾ ಮಂಕಾಗಿತ್ತು.

ಪಟಪಟನೆ ಕವಿಯಂತೆ ಮಾತನಾಡುವ ಹುಡುಗ ಅದೆಷ್ಟು ಬೇಗ ಮೌನಿಯಾದನಲ್ಲ ಅನಿಸಿದ್ದು ಆಗಲೇ. ಇನ್ನೂ ಕಾಡಿಸಿದ್ರೆ ನನ್ನನ್ನೆ ನಾನು ಕ್ಷಮಿಸಿಕೊಳ್ಳಲಾರೆ ಎಂದು ನಿನ್ನ ಕಂಬನಿಯ ಕಣ್ಣೀರಿಗೆ ಬಿಸಿಮುತ್ತು ನೀಡಿ ಹಾರೈಸಿಬಿಟ್ಟೆ, ಆ ಕ್ಷಣ ನಾನು ಕಳೆದುಹೋದದ್ದು ನಿನ್ನೊಳಗಿನ ಪ್ರೀತಿಗೊ, ಮುಗ್ಧ ಭಾವಕ್ಕೋ, ಅಂತಃಕರಣದ ಕರುಣೆಗೋ, ಒಡಲಾಳದ ಮಮತೆಗೋ ಇಂದಿಗೂ ಕೂಡ ಉತ್ತರ ಸಿಗಲೇ ಇಲ್ಲ ಕಣೋ ಹುಡುಗ….

ಪ್ರೇಯಸಿಯ ಹೊರತಾಗಿ ಅದೆಷ್ಟು ಅಮ್ಮನಾಗಿದ್ದೆ ನಾ ನಿನಗೆ. ನಿನ್ನ ಊಟ, ಬಟ್ಟೆ, ಬದುಕು, ಬವಣೆ ಎಲ್ಲವೂ ನನ್ನದಾಗಿತ್ತು. ಎಲ್ಲಾ ಆಯ್ಕೆಗಳು ನನ್ನದೇ ಆಗಿತ್ತು. ನಾ ಹೇಳಿದ್ದು ನಿನಗೆ ಹಿಡಿಸದಿದ್ದರೂ ಉಸಿರೆತ್ತದೆ ನೀನು ಅದನ್ನೆ ಪಾಲಿಸುತ್ತಿದ್ದೆ. ಎದೆಯಾಳದಲಿ ಪಾಪದ ಕೂಸಿದು! ಎಂದು ನಿನ್ನ ಬಗ್ಗೆ ಮರುಕ ಹುಟ್ಟಿದರೂ ‘ನಾನೇನು ಅವನಿಗೆ ಕೆಟ್ಟದ್ದೂ ಹೇಳ್ತಿದ್ದೀನಾ, ಎಲ್ಲಾ ಅವನ ಒಳ್ಳೆದಕ್ಕೆ ಅಲ್ವಾ! ಅವನಿಗೆ ಇಷ್ಟ ಆಗಿಲ್ಲ ಅಂತ ನನಗೂ ಗೊತ್ತು! ಆದ್ರೆ ಅವನ ಇಷ್ಟಕ್ಕಿಂತ ಅವನ ಒಳ್ಳೇದು ನನಗೆ ಮುಖ್ಯ’ ಅಂತ ನನಗೆ ನಾನೆ ಎಷ್ಟು ಸಮಜಾಯಿಷಿ ಕೊಟ್ಕೋತಿದ್ದೆ.

ನಿನ್ನ ಕೆಲಸಕ್ಕೊಂದು ರಜೆ ಯಾವಾಗ ಸಿಗುವುದೋ? ನನ್ನಿಷ್ಟದ ಡೈರಿಮಿಲ್ಕ್ ಹಿಡಿದು ನನ್ನೆಡೆಗೆ ನೀನು ಯಾವಾಗ ಓಡಿ ಬರುವೆಯೋ ಎಂದು ಮನಸ್ಸು ಹಿಡಿದು ಕಾಯುತ್ತಿದ್ದೆ ಕಣೋ ಹುಡುಗ. ವಾರ ಬಿಟ್ಟು ಬಂದ ಸಂಭ್ರಮದಲ್ಲಿ ನನ್ನ ಮುಂದೆ ಕೂತು ವಾರದ ವ್ಯವಹಾರವನ್ನೆಲ್ಲ ನೀನು ಒಪ್ಪಿಸುತ್ತಿದ್ರೆ‌ ನಾನು ಮಾತ್ರ ನಿನ್ನ ಕಣ್ಣಂಚಿನ ವೇಗ, ನಿನ್ನ ತುಂಟಿಯಂಚಿನ ಮುಗ್ಧ ನುಡಿಗೆ ಮರುಳಾಗುತ್ತಿದ್ದೆ. ಅದೆಷ್ಟು ಮುಗ್ಧತೆ ತುಂಬಿತ್ತು ಹುಡುಗ‌ ನಿನ್ನಲ್ಲಿ!

ಗೊತ್ತೆ ಆಗದೇ ಅಂಗೈ ಹಿಡಿದು ಮೆಲ್ಲನೆಯ ಮುತ್ತೊಂದನ್ನು ನನಗಾಗಿ ಕಡಲಾಳದಲ್ಲಿ ಹಿಡಿದು ಬಂದ ಉಡುಗೊರೆಯೆನೋ ಎಂಬಂತೆ ಕೊಟ್ಟು ಮರೆಯಾಗುತ್ತಿದ್ದೆ. ನೀ ಕೊಟ್ಟ ಮುತ್ತೊಂದನ್ನೆ ಒಂದೊಂದಾಗಿ ಎದೆಗೂಡಿನಲ್ಲಿ ಜೋಪಾನ ಮಾಡಿಟ್ಟಿರುವೆ. ಈಗ ಮುತ್ತು ಕೊಡಲು ನೀನಿರದಿದ್ದರೂ ನೀ ಕೊಟ್ಟು ಹೋದ ಮುತ್ತುಗಳ ರಾಶಿಯಲ್ಲೆ‌ ಮುಳುಗಿರುವೆನಲ್ಲ ಎಂಬ ಸಾರ್ಥಕ ಭಾವವಿದೆ ಕಣೋ ಹುಡುಗ.

ಅಷ್ಟು ಮುದ್ದು ತುಂಬಿದರೂ ಒಂದು ದಿನಕ್ಕೂ‌ ನೀನು ಮಾತ್ರ ನನ್ನೊಳಗೆ ಇಳಿಯುವ ಬಯಕೆ ಕಾಣಲಿಲ್ಲ. ಪ್ರತಿ ಸ್ಪರ್ಶದಲ್ಲೂ ನನ್ನ ಹುಡುಗನು ಕಾಮದ ಕಣ್ಣಿಗೆ ಮರೆಯಾಗುವೆನೇನೋ ಎನಿಸಿದರೂ ನೀನು ಮಾತ್ರ ದಿವ್ಯ ಸಾನಿಧ್ಯ ನೀಡುವ ಪ್ರೀತಿ ನೀಡಿದೆ. ನಿನ್ನೊಂದಿಗಿನ ಪ್ರತಿಕ್ಷಣವೂ ಕಾಮದ ಬಯಕೆ ಮೀರಿದ ಪ್ರೇಮದ ಸಾಕ್ಷಾತ್ಕಾರ.

ನಾನು ಪ್ರೇಮದ ಹುಚ್ಚಿ ಕಣೋ ಹುಡುಗ…! ನೀನು ಒಂದೆ ಉಸಿರಲ್ಲಿ ನನ್ನೆಡೆಗಿನ ಪ್ರೇಮವನ್ನೆಲ್ಲ ಅಕ್ಷರಗಳಲಿ ಹೇಳಿ ಮುಗಿಸಿಬಿಡುವೆ, ಎಷ್ಟಾದರೂ ಮಾತಿನ ಮಲ್ಲ ನೀನು. ಆದ್ರೆ‌ ನಾನು ನಿನ್ನ ಮುಂದೆ ಮಹಾಮೌನಿ.
ನಿನ್ನಡೆಗಿನ ವಿಸ್ತಾರ ಪ್ರೇಮದ ಬಣ್ಣನೆಗೆ ನನಗೆ ಪದಗಳೆ ಸಿಗುತಿರಲಿಲ್ಲ, ಸಿಕ್ಕರೂ ಹೇಳದೆ ನಿನ್ನೊಳಗೆ ಕಳೆದುಹೋಗುವುದಷ್ಟೇ‌ ನನಗೆ ಗೊತ್ತಿರುವುದು. ನಿನ್ನ ಪ್ರೀತಿಸುವುದು, ಕಾಡಿಸುವುದು, ಪೀಡಿಸುವುದು, ಮುದ್ದು ಮಾಡಿ ಅಪ್ಪುಗೆ ನೀಡುವುದು, ಗುದ್ದಾಡಿ ಕಣ್ಣೀರಾಗುವುದು, ಒದ್ದಾಡಿ ಮಡಿಲು ಬೇಡುವುದು, ಗೋಗರೆದು ತುತ್ತ ಉಣುವುದು, ಉಪ್ಪು ಮೂಟೆ ಕೂತು ಮೆರೆದಾಡುವುದು, ನಿನ್ನ ಬಿಗಿದಪ್ಪಿ ಕುಣಿದಾಡುವುದು, ನಿನ್ನಯ ಮಡಿಲಲ್ಲಿ ಕನಸಾಗುವುದು ಇಷ್ಟೇ ಗೊತ್ತಿದ್ದು‌ ಕಣೋ ಹುಡುಗ ನನಗೆ.

ನಾನೆಂದಿಗೂ ನಿನ್ನ ಹಣ ಕೇಳಲಿಲ್ಲ, ನಿನ್ನ ಅಂತಸ್ತು ಬಯಸಲಿಲ್ಲ, ಅಧಿಕಾರ ಬೇಡಲಿಲ್ಲ. ಯಾಕೆಂದ್ರೆ‌ ನನಗೆ ಅದ್ಯಾವುದೂ ಬೇಕಿರಲಿಲ್ಲ ಕಣೋ. ನನಗೆ ಬೇಕಾಗಿದ್ದಿದ್ದು ನೀನು ಮಾತ್ರ! ಬರೀಯ ನೀನು ಮಾತ್ರ.
ದೃಷ್ಟಿಯಾಗುವಷ್ಟು ಸೌಂದರ್ಯ ತುಂಬಿದ ಭಗವಂತ, ಖಾಲಿ ಪ್ರೀತಿಯ ಬಾಟಲೊಂದನ್ನು ನನ್ನೊಳಗೆ ತುಂಬಿ ಕಳುಹಿಸಿದ. ಅದೆಷ್ಟೇ ತುಂಬಿದರೂ‌ ನಿನ್ನಯ ಪ್ರೀತಿ ಮಾತ್ರ ನನ್ನೊಳಗೆ ಪೂರ್ಣವೇ ಆಗುತ್ತಿಲ್ಲ. ಅಕ್ಷಯವಾಗುವಷ್ಟು ಪ್ರೀತಿ ಕೊಟ್ಟುಬಿಡೋ! ನಿನ್ನೆಲ್ಲ ಪ್ರೀತಿಯನ್ನು ನನಗಾಗಿ ಮೀಸಲಿಟ್ಟುಬಿಡೋ, ಎಲ್ಲವನ್ನೂ ನನಗೆ ಕೊಟ್ಟುಬಿಡೋ ಎಂದು ನಿನ್ನಯ ಮುಂದೆ ಸುಮ್ಮನೆ ಅರಕೆ ಮಾಡಿಕೊಂಡೆ ಕಣೋ ಹುಡುಗ…

ಮುದ್ದುಮುಖದ ಮುಗ್ಧ ಹುಡುಗ ನೀನಾದರೂ ಪ್ರೀತಿಯ ವಿಷಯದಲ್ಲಿ ಮಾತ್ರ ನೀನು ಮೋಸಗಾರ ಕಣೋ. ನಿನ್ನ ಪ್ರೀತಿಯನ್ನೆಲ್ಲ ನನಗೆ ಮಾತ್ರ ಕೇಳಿದ್ದು ಸ್ವಾರ್ಥವಾದರೂ ಪ್ರೀತಿಯಲ್ಲಿ ಸ್ವಾರ್ಥಕ್ಕಿಂತ ಶ್ರೇಷ್ಠ ಭಾವ ಬೇರೊಂದಿಲ್ಲ ಕಣೋ.

Everything is fair in love and war. ಆದ್ರೆ‌ ನಿನಗೆ ಅದು ಗೊತ್ತಾಗಲೇ ಇಲ್ಲ. ನನ್ನ ಪ್ರೀತಿ ನಿನಗೆ ಉಸಿರುಗಟ್ಟಿಸಿದೆ, ತಾಳಲಾರದ ಹಿಂಸೆ ನೀಡಿದೆ, ಕೈ ಕಟ್ಟಿ ಕೂರಿಸಿದೆ ಎಂದು ನನ್ನೊಳಗೆ ಅರಿವಾಗಲು ಶುರುವಾಗಿಬಿಡ್ತು. ಭರಿಸಲಾಗದ ಬಡತನವನ್ನಾದರೂ ಭಗವಂತ ನೀಡಿದ್ರೆ ಮೈಮುರಿದು ದುಡಿದು ಬದುಕ ಗೆಲ್ಲುತ್ತಿದ್ದೆ. ಆದ್ರೆ‌ ನೀನು ಮಾತ್ರ ನಿನ್ನ ಪ್ರೇಮದ ವಿಷಯದಲ್ಲಿ ನನ್ನನ್ನು ಭಿಕ್ಷುಕಿಯನ್ನಾಗಿ ಮಾಡಿಬಿಟ್ಟೆ, ಪ್ರೇಮದ ವಿಷಯದಲ್ಲಿ ನಾನೆಂಬ ನನ್ನ ಮುಂದೆ ನೀನು ಬಲು ಕಂಜೂಸಾಗಿ ಬಿಟ್ಟೆ. ಕೊಡು ಕೊಡು ಎಂದು ನಿನ್ನ ಮುಂದೆ ಪ್ರೀತಿ ಬೇಡಿ ಬೇಡಿ‌ ಸಾಕಾಯ್ತು ಕಣೋ! ಸ್ವಾಭಿಮಾನಕ್ಕೆ‌ ಧಕ್ಕೆಯಾದ್ರೆ ತಡೆಯುತ್ತಿದ್ದೆ ಆದರೆ ಆಂತರ್ಯದ ಪ್ರೇಮಕ್ಕೆ ಬಿದ್ದ ಕೊಡಲಿ ಪೆಟ್ಟು ತಡೆಯಲಾಗುತ್ತಿಲ್ಲ. ಸಾಕೆನಗೆ ಹೊರಟುಬಿಡೋ ಹುಡುಗ ಎಂದೊಡನೆ‌ ಬಿಗಿದಪ್ಪಿ ಕಣ್ಣೀರಾಗುತ್ತಿಯಾ ಎಂದು ನೆನೆಸಿದ್ದೆ ಆದ್ರೆ‌ ನೀನು ಮಾತ್ರ ಪಂಜರದಿಂದ ಬಿಡುಗಡೆಗೊಂಡ ಪಕ್ಷಿಯಾಗಿ ಹಾರಿಹೋದೆ. ಹೋಗಲಿ ಬಿಡು..

ನಿನ್ನ ಹಾರಾಟಕ್ಕಿಂತ ನೆಮ್ಮದಿ ನನಗೆಲ್ಲಿಹುದು. ಆಕಾಶದೆತ್ತರಕೆ ನೀ ಹಾರಿದಾಗ ನಿನ್ನ ರೆಕ್ಕೆಯಾಗಿ ಜೊತೆಯಾಗಬೇಕೆಂಬ ಕನಸು ಕಟ್ಟಿದ್ದೆ. ಪರವಾಗಿಲ್ಲ ಇಂದು ನನ್ನೊಳಗೆ ಚಪ್ಪಾಳೆಯಾಗಿದ್ದೇನೆ. ನಿನ್ನ ಕಾಲಿನ ವೇಗ ಹೆಚ್ಚಾಗಿದೆ ಕಣೋ! ಅದಕ್ಕೆ ನೀನು ಮುಂದೆ ಸಾಗಿದ್ಯಾ ನಾನು ತುಂಬಾ ಗಟ್ಟಿಗಿತ್ತಿ ಹಾಗಾಗಿ ನಿಂತಲ್ಲೆ ನೆಲೆಯೂರಿದ್ದೇನೆ.

ಆಗಾಗ ಒಂಟಿಯಾಗಿರುವೆನೋ ಅನಿಸುತಿದೆ. ಆದರೆ ಆ ಕ್ಷಣ ನೆನಪಿನ ಬುತ್ತಿಯಿಂದ ಹೊರಬರುವ ನೀನು ಪಕ್ಕದಲ್ಲೆ ಕೂತು ಹೆಗಲು ನೀಡಿ ಸಂತೈಸುತ್ತಿಯಲ್ಲ ಎಲ್ಲವೂ ಮರೆತುಹೋಗುತಿದೆ, ಮತ್ತೊಮ್ಮೆ ಬರಬೇಡ‌ ಕಣೋ ಹುಡುಗ! ಕಳೆದುಹೋದ ಭಾರವಾದ ಪುಟಗಳ ಪುಸ್ತಕದ ಪ್ರೀತಿಯ ಮುಂದೆ ನಿನ್ನ ಈಗಿನ ಅಸ್ತಿತ್ವ ಖಾಲಿ ಖಾಲಿ ಹಾಳೆಗಳು…..
ಮರೆಯಲಾಗದ ಹುಡುಗ ನೀನು, ಅದಕ್ಕೆ ನನ್ನೊಳಗೆ ಅಚ್ಚಿಳಿಸಿಕೊಂಡಿದ್ದೇನೆ…

– ನಾನೇ..

ಇದನ್ನೂ ಓದಿ ಭಾವಲೋಕದೊಳ್‌ ಅಂಕಣ : ಥೀಮ್‌ ಇಲ್ದಿದ್ರೆ ಸಿನಿಮಾದಲ್ಲಿ ಲೈಫೇ ಇಲ್ಲ ಅಂತೀವಿ, ಇನ್ನು ಲೈಫಲ್ಲಿ ಕನಸೇ ಇಲ್ದಿದ್ರೆ ಹೇಗಿದ್ದೀತು ಹೇಳಿ?

Exit mobile version