Site icon Vistara News

ಭಾವಲೋಕದೊಳ್ ಅಂಕಣ : ಪ್ರೀತಿ ಮಾಡಬಾರದು, ಮಾಡಿದರೆ ಯಾರಿಗೂ ಹೆದರಬಾರದು!

Bhavalokadol love story

ಪ್ರೀತಿ ಎಂಬ ಭಾವದೊಳಗೆ (Love and Emotion) ಅದೆಷ್ಟೋ ಭಾವನೆಗಳು ಅಡಗಿ ಕೂತಿರುತ್ತದೆ. ಪ್ರೀತಿಯಲ್ಲಿ ನಗು, ಸಂತೋಷ, ಸಂಭ್ರಮ, ಸಾನಿಧ್ಯ, ಸಾಕ್ಷಾತ್ಕಾರದ ಜೊತೆಗೆ ಯಾತನೆ, ಸಿಟ್ಟು, ಅಳು, ಭಯ ಕೂಡ ಬೆರೆತು ಹೋಗಿದೆ. ಪ್ರೀತಿಯೊಳಗಿನ ಯಾವುದೇ ಭಾವವೂ ಪ್ರೀತಿಯನ್ನು ಮತ್ತಷ್ಟು ಬೆಸೆಯುವ ಸೇತುವೆಯಾಗಬೇಕೇ (Love is like bridge, not wall) ಹೊರತು ಬೇರ್ಪಡಿಸುವ ಬೇಲಿಯಾಗಬಾರದು. ಆ ರೀತಿ ಬೇಲಿಯಾಗಿ ಬೆಳೆಯುವ ಭಾವಕ್ಕೆ ಕೊಡಲಿ ಪೆಟ್ಟು ಕೊಡಲೇಬೇಕು (ಭಾವಲೋಕದೊಳ್‌ ಅಂಕಣ)!

ಪ್ರೀತಿಯಲ್ಲಿ ಭಯ!?

ಪ್ರೀತಿಯಲ್ಲಿ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೋ ಭಯವೆಂಬ (Love and fear) ಭೂತ ಅಡಗಿಕೂತಿದೆ. ಆ ಪ್ರೀತಿಯಲ್ಲಿ ಭಯಕ್ಕೆ ಅದೆಷ್ಟೋ ಆಯಾಮಗಳಿವೆ. ಅವನನ್ನೊ/ ಅವಳನ್ನೊ ಕಳೆದುಕೊಳ್ಳುವ ಭಯ. ಪ್ರೀತಿ ದೂರಾಗುವುದೆನೋ ಎಂಬ ಭಯ? ಸಣ್ಣ ತಪ್ಪಿಗೆ ಏನೆನ್ನುವಳೋ ಎಂಬ ಭಯ!? ಸ್ನೇಹಿತರ ಜೊತೆ ಅವನೇನಾದ್ರೂ ನೋಡಿದರೆ ಸಿಡುಕುತ್ತಾನೆನೋ ಎಂಬ ಭಯ? ನಮ್ಮ ಪ್ರೀತಿಗೆ ಮನೆಯಲ್ಲಿ ಒಪ್ಪದಿದ್ದರೆ ಏನಾದೀತು ಎಂಬ ಭಯ? ಪ್ರೀತಿಸಿ ಮದುವೆಯಾದ್ರೆ ಮುಂದಿನ ಜೀವನದ ಅಸ್ತಿತ್ವವೇನು ಎಂಬ ಭಯ?

ಪ್ರೀತಿಸಿ ಮನೆ ಬಿಟ್ಟು ಹೋದ ಬಳಿಕ ಮನೆಯವರ ಗತಿಯೇನು! ಅಪ್ಪ ತಡೆಯುತ್ತಾನಾ ಎಂಬ ಭಯ!? ಪ್ರೀತಿಸಿದವಳನ್ನು ಸಾಕಬಲ್ಲೆನೇ ಎಂಬ ಭಯ!? ಇಷ್ಟು ಗಾಡವಾಗಿ ಪ್ರೀತಿಸುತ್ತಿದ್ದೀನಲ್ಲ ಇವನಿಲ್ಲದಿದ್ದರೆ/ಇವಳಿಲ್ಲದ್ದರೆ ಬದುಕಬಲ್ಲೇನೆ ಎಂಬ ಭಯ? ಜಗತ್ತಿನ ಸರ್ವ ಸಂತೋಷ ನೀಡಿದ ಈ ಪ್ರೀತಿಗೆ ನೋಯಿಸಿಬಿಡ್ತಿನಾ ಎಂಬ ಭಯ? ಹೀಗೆ ಭಯದ ಕಾರಣಗಳು ಬೆಳೆಯುತ್ತಲೇ ಹೋಗುತ್ತವೆ ಹೊರತು ಭಯದ ನೆರಳು ದೂರಾಗುವುದಿಲ್ಲ. ಭಯಕ್ಕೆ ತಕ್ಷಣಕ್ಕೊಂದು ಪರಿಹಾರ ಬೇಕಿರುತ್ತದೆ, ಕೆಲವೊಮ್ಮೆ ಶಾಶ್ವತ ಪರಿಹಾರದ ಅನಿವಾರ್ಯತೆ ಕೂಡ ಇರಬಹುದು. ಕೈ ಹಿಡಿದು ‘ಭಯಪಡಬೇಡಾ everything will be alright’ ಅನ್ನೋ ಸಾಂತ್ವನದ ಸ್ಪಂದನೆ ಬೇಕಾಗಿರುತ್ತದೆ.

ಪ್ರೀತಿಯನ್ನು ಕೊಲ್ಲುತ್ತಾ ಭಯ!?

ಪ್ರೀತಿಯ ಉಳಿವಿಗೆ ಅದೆಷ್ಟೊ ವಿಷಯಗಳು ಒಟ್ಟಾಗಿ ಕೆಲಸ ಮಾಡಬೇಕಾಗಿರುತ್ತದೆ. ಆ ಭಾವದಲ್ಲಿ ನೆಗೆಟಿವಿಗೆ ಜಾಗ ಇರಕೂಡದು. ಭಯ ಕಣ್ಣಿಗೆ ಕಾಣದೆ ಕಣ್ಣಾಮುಚ್ಚಾಲೆ ಆಡಿಸುತ್ತದೆ. ಭಯ ಎಂಬ ಕಾರಣ ನೀಡಿ ನಮ್ಮೊಳಗೆ ಒಂದಿಷ್ಟು ವಿಷಯಗಳನ್ನು ತುಂಬಿಕೊಂಡು, ಅವಿತುಕೊಂಡುಕೆಲವೊಮ್ಮೆ ಮುಚ್ಚಿಟ್ಟುಕೊಂಡು ಉಳಿದುಬಿಡುತ್ತೇವೆ. ಆದ್ರೆ ಖಂಡಿತವಾಗಿಯೂ ಆ ಭಯ ಪ್ರೀತಿಯ ಗಿಡವನ್ನು ಹೊಸಕಿ ಹಾಕುತ್ತದೆಯೇ ಹೊರತು, ಬೆಳೆಸಿ ಹೆಮ್ಮರವಾಗಿಸುವುದಿಲ್ಲ. ಪ್ರೀತಿಯ ಅಸ್ತಿತ್ವದ ಭಯಕ್ಕೆ ಅತಿಯಾದ ಪ್ರೀತಿಯೆ ಕಾರಣ ಎಂದು ಸಮಜಾಯಿಷಿ ನೀಡಬಹುದು. ಆದರೆ ಪ್ರೀತಿ ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಪಡಬಹುದು. ಆದರೆ ಪ್ರೀತಿಸಿದವರ ಮೇಲಿನ ಭಯಕ್ಕೆ ಎಲ್ಲವನ್ನೂ ಮುಚ್ಚಿಡಲು ಶುರು ಮಾಡಿದಾಗ ಪ್ರೀತಿಯಲ್ಲಿ ಸುಳ್ಳು, ಮೋಸ, ಕಪಟತೆ, ನಾಟಕೀಯತೆ ಎಂಟ್ರಿ ಕೊಡುತ್ತದೆ. ಅಷ್ಟರಲ್ಲಾಗಲೇ ಪ್ರೀತಿಗೆ ಒಂದೊಂದೆ ಪೆಟ್ಟು ಬೀಳುತ್ತಾ ಒಲವಿನ ದಾರ ಸವೆಯುತ್ತಿರುತ್ತದೆ..

ನಾವ್ಯಾಕೆ ಭಯ ಪಡಬೇಕು!?

ಪ್ರೀತಿ ಅನ್ನೋದೇ ಪರಸ್ಪರ ಒಪ್ಪುವುದು, ಗೌರವಿಸುವುದು, ಬಾಂಧವ್ಯದಲ್ಲೆ ಸಂಧಿಯಾಗುವುದು, ಸಂಬಂಧದಲ್ಲಿ ಬಂಧಿಯಾಗುವುದು. ಆದರೆ ಅದೇ ಪ್ರೀತಿಯಲ್ಲಿ ನಾವು ಭಯದಲ್ಲಿ, ಹೆದರಿಕೆಯಲ್ಲಿ ಬದುಕಬೇಕಾ!?

ನಾವು ಯಾವಾಗ ಭಯ ಪಡ್ತೀವಿ ಅಂದ್ರೆ ಒಂದೋ ಏನಾದ್ರೂ ತಪ್ಪು ಮಾಡಿದ್ದಾಗ, ಇಲ್ಲ ಪ್ರೀತಿಸಿದವರ ಮೇಲಿನ ಹೆದರಿಕೆಯಿಂದ. ಈ ಎರಡು ವಿಷಯಗಳು ಪ್ರೀತಿಯಲ್ಲಿ ಇರಕೂಡದು. ನಾನು ಏನೇ ಮಾಡಿದ್ರೂ ಅವನು/ಅವಳು ನನ್ನ ಜೊತೆ ನಿಲ್ಲುತ್ತಾರೆ ಎಂಬ ಧೈರ್ಯವೇ ಪ್ರೀತಿ. ನಾನೇನು ತಪ್ಪು ಮಾಡಿಲ್ಲ, ತಪ್ಪು ಅನ್ಸಿದ್ರೆ ನಾನು ಅದನ್ನ ಮಾಡಲ್ಲ ಅನ್ನೋದೆ ನಮ್ಮ ವ್ಯಕ್ತಿತ್ವ ತೋರಿಸುತ್ತದೆ. ಹಾಗಿದ್ದಾಗ ಭಯದ ಮಾತೆಲ್ಲಿ!

ನಾನು ಏನು ತಪ್ಪು ಮಾಡದಿದ್ದರೂ ಅವನಿಗೋ, ಅವಳಿಗೊ ಅದು ತಪ್ಪಾಗಿ ಕಾಣುತ್ತದೆ. ಆ ಕಾರಣಕ್ಕೆ ಹೆದರುತ್ತೇವೆ ಎಂದರೆ ಅಲ್ಲಿ ಭಯ ಮಾತ್ರ ಇರುತ್ತೆ ಹೊರತು, ಪ್ರೀತಿ ಇರಲ್ಲ. ಹೆದರಿಕೆಯಿಂದ ಪ್ರೀತಿಯಲ್ಲಿ ಉಳಿಯಲು ಸಾಧ್ಯವಿಲ್ಲ. ಅಂತಹ ಪ್ರೀತಿ ನಿಜಕ್ಕೂ ಭಯದಲ್ಲೇ ಬದುಕಿಸುತ್ತದೆ ಹೊರತು ಪ್ರೀತಿಯಲ್ಲಿ ಉಸಿರಾಡಿಸುವುದಿಲ್ಲ…

ಪ್ರೀತಿಯಲ್ಲಿ ಭಯವಿರದಿದ್ದರೆ!?

ಪ್ರೀತಿಯಲ್ಲಿ ಭಯಪಡಬಾರದು ಅನ್ನೋ ಕಾರಣಕ್ಕೆ ಪ್ರೀತಿಸಿದವರ ಭಾವನೆಗೆ ಎದುರಾಗುವ ಅವಶ್ಯಕತೆ ಇಲ್ಲ. ಅಥವಾ ನಾನು ಮಾಡಿದ್ದೆ ಸರಿ ಎಂಬ ವಾದ ಬೇಕಾಗಿಲ್ಲ. ಪ್ರೀತಿಯ ಭಾವಕ್ಕೆ ಭಯಪಡಬಾರದು ನಿಜ! ಹಾಗಾಂತ ಅದು ಸ್ವೇಚ್ಚಾಚಾರಕ್ಕೆ ದಾರಿಯಾಗಕೂಡದು. ಪ್ರೀತಿಯನ್ನ ಪ್ರೀತ್ಸೋದೇ ಪ್ರೀತಿ. ಕೆಲವೊಂದು ಭಯಕ್ಕೆ ಪರಿಹಾರ ಹುಡುಕಿಕೊಳ್ಳಿ, ಕೆಲವೊಂದು ಭಯವನ್ನು ಹೋಗಲಾಡಿಸಿ, ಭಯವಿಲ್ಲದೆ ಬದುಕಿ. ಬದುಕುವ ಪ್ರತಿ ಕ್ಷಣವನ್ನು ಪ್ರೀತಿಸಿ.

ಇದನ್ನೂ ಓದಿ: ಭಾವಲೋಕದೊಳ್‌ ಅಂಕಣ : ಪ್ರೀತಿ ಇರುವುದು ತಾಜ್‌ಮಹಲಿನ ಗೋಡೆಯಲ್ಲಿ ಅಲ್ಲ, ಪುಟ್ಟ ಗುಡಿಸಲಿನ ಗೂಡಿನಲ್ಲಿ!

Exit mobile version