ಉಸಿರಾಡದೆ ಮನುಷ್ಯ ಬದುಕೋದಕ್ಕೆ ಹೇಗೆ ಸಾಧ್ಯ ಇಲ್ಲವೋ, ಹಾಗೇ ಸಂಬಂಧದಲ್ಲಿ ಪ್ರೀತೀನೇ ಇರದಿದ್ದರೆ ಬದುಕೋದು ಹೇಗೆ? ಅಷ್ಟರ ಮೇಲೂ ಬದುಕ್ತಿದ್ದಾರೆ ಅಂದ್ರೆ ಅವ್ರು ಆ ಸಂಬಂಧದಲ್ಲಿ ಸತ್ತು ಸುಮಾರು ವರ್ಷಗಳಾಗಿದೆ. ಸಂಬಂಧಕ್ಕೊಂದು ಅಂತ್ಯ ಸಂಸ್ಕಾರ ಮಾಡಿಲ್ಲ ಅಷ್ಟೇ!
ಪ್ರೀತಿ ಎಂಬ ಭಾವಕ್ಕೆ ಅಕ್ಷರಗಳ ಸಾಲಿನ,
ಪದಪುಂಜಗಳ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಅದೊಂದು ಭಾವ, ಭಾವ ಮೀರಿದ ಬದುಕು, ಬದುಕು ಕಟ್ಟುವ ಕನಸು, ಕನಸು ನನಸಾಗಿಸುವ ದಾರಿ, ದಾರಿಗೊಂದು ಬೆಳಕು, ಬೆಳಕಿಗೊಂದು ಹೆಜ್ಜೆ, ಹೆಜ್ಜೆಗೊಂದು ಶಕ್ತಿ, ಶಕ್ತಿಯಲ್ಲೇ ಆರಾಧಿಸುವ ಭಕ್ತಿ, ಭಕ್ತಿ ಮಾತ್ರವೇ ಪ್ರೀತಿ.
‘ಪ್ರೀತಿ ಅಂದ್ರೆ ಏನ್ ಹೇಳು ಗುರು?’ ಅಂತ ಸಡನ್ ಆಗಿ ಕೇಳಿದ್ರೆ ನಿಜಕ್ಕೂ ಒಂದೇ ಉತ್ತರ – “ಪ್ರೀತಿಯನ್ನ ಪ್ರೀತ್ಸೋದೆ ಪ್ರೀತಿ….”
ಪ್ರೀತಿ! ಅದೊಂದು ಅನುಭವ. ಅದನ್ನು ಅನುಭವಿಸಬೇಕೆ ಹೊರತು ವರ್ಣಿಸಲಾಗದು. ಪ್ರೀತಿ ದೇಹ, ಭಾವ, ಬಣ್ಣ, ಬದುಕು,
ಜೀವನ, ಜಾತಿ, ಧರ್ಮ, ಅಂತರ ಎಲ್ಲವನ್ನೂ ಮೀರಿದ್ದು, ಮೀರಿಸಿದ್ದು.
ಯಾವ ಕ್ಷಣದಲ್ಲಿ ಪ್ರೀತಿಯ ಎಸಳು ಚಿಗುರೊಡೆದು ಹೆಮ್ಮರವಾಗಿ ಬೆಳೆಯುತ್ತೊ ಗೊತ್ತಿಲ್ಲ. ಆದ್ರೆ ಆ ಬೆಳವಣಿಗೆಯ ಪ್ರತಿ ಕ್ಷಣವನ್ನು ಆಸ್ವಾದಿಸುವುದೇ ಪ್ರೀತಿ. ಅವನನ್ನೋ, ಅವಳನ್ನೋ ಪ್ರೀತಿಸುವ ಭಾವವನ್ನೇ ಪ್ರೀತಿಸಬೇಕು ಅದುವೇ ಪ್ರೀತಿ. ಅವಳೆದೆಯ ಕೊನೆಯ ನಾದದ ಸದ್ದಲ್ಲಿ ಕಂಡ ಪ್ರೀತಿಯ ಅರ್ಥ ಪ್ರಪಂಚದ ಯಾವ ಮೂಲೆಯಲ್ಲೂ ಸಿಗದು. ಅವನ ತೋಳಿನ ಅಪ್ಪುಗೆಯಲ್ಲಿ ಸಿಕ್ಕ ಬೆಚ್ಚಗಿನ ಭಾವ ಕೋಟಿ ಕೊಟ್ಟರೂ ಕೊಳ್ಳಲಾಗದು.
ಅವನು ಅವಳನ್ನು ಅದೆಷ್ಟು ಪ್ರೀತಿಸ್ತಾನೆ ಗೊತ್ತಾ!? ಎಂಬ ಪ್ರಶ್ನೆಯಲ್ಲೆ ಅವನ ಪ್ರೇಮದ ಆಳ – ಅಗಲಗಳಿರುತ್ತದೆ. ಮಾತೇ ಆಡದೇ ಅವಳನ್ನು ಕಣ್ಣು ಮಿಟುಕಿಸದೇ ದಿಟ್ಟಿಸುವ ಭಾವದಲ್ಲಿ ಅವನು ಬದುಕುತಿದ್ದಾನೆ. ಮಾತುಗಳ ನಡುವೆಯೂ ಅವನು ಮಾತ್ರ ಮಹಾಮೌನಿ. ಅವಳ ಕಣ್ಣ ಕೊನೆಯ ತುದಿಯ ಕಣ್ಣೋಟದಲ್ಲೇ ಪ್ರೇಮಬರಹಕೆ ಅಕ್ಷರಗಳ ಹುಡುಕುತ್ತಾನೆ. ಅವಳ ಹಾರಾಡುವ ಕೂದಲ ಎಳೆಯನ್ನು ಸರಿ ಮಾಡಿ ಕಿವಿಯ ಹಿಂದಕ್ಕೆ ಹಾಕುವ ಕ್ಷಣದಲ್ಲೇ ಖುಷಿಪಡುತ್ತಾನೆ. ಅವಳ ಆಗಮನಕ್ಕೆ ಕಾದು ಕೂರುವ ಕ್ಷಣವನ್ನೇ ತಪಸ್ಸು ಎಂದು ಭಾವಿಸುತ್ತಾನೆ. ಚಂದ್ರಮನ ಬೆಳದಿಂಗಳಲ್ಲಿ ಮಾತೇ ಆಡದೇ ಅವಳ ಹೆಜ್ಜೆಯ ಜೊತೆಗೆ ಹೆಜ್ಜೆ ಹಾಕುವುದರಲ್ಲಿ ಸಂಭ್ರಮಿಸುತ್ತಾನೆ. ಅವಳ ಕಾಲ್ಗೆಜ್ಜೆಯ ಸದ್ದಿಗೆ ಮಿಡಿಯುತ್ತಾನೆ. ಅವಳ ಸೌಂದರ್ಯದ ಸ್ಪರ್ಶಕ್ಕೆ ಬದುಕುತ್ತಾನೆ. ಬಿಸಿ ಅಪ್ಪುಗೆಯ ಆಲಿಂಗನಕ್ಕೆ ಸಂತಸದ ಮಳೆಗೈಯುತ್ತಾನೆ…
ಅವಳೇನು ಕಡಿಮೇನಾ! ಅವಳ ಪ್ರೀತಿಯ ಆಳವನ್ನು ಅಳತೆ ಮಾಡಲು ಸಾಧ್ಯವಿರದಷ್ಟು ವಿಸ್ತಾರವಾಗಿದ್ದಾಳೆ. ಅವಳಿಗೆ ಬೇಕಿರುವುದು ಪ್ರೀತಿಯಷ್ಟೆ! ಕಣ್ಣ ಮುಂದೆ ಕೂತವನು ಅವಳನ್ನು ಸಂಭ್ರಮಿಸುವುದೇ ಹೆಣ್ಣಾದ ಅವಳಿಗೂ ಸಂಭ್ರಮ. ಕೈ ಹಿಡಿದು ನಡೆಸುವ ಅಪ್ಪನವನು, ಆಗಲ್ಲ ಎಂದರೆ ತಲೆ ಸವರಿ ನಡೆಸುವ ಅಮ್ಮನವನು, ಪ್ರೀತಿಯ ವಿಷಯದಲ್ಲಂತೂ ಹೇಳತೀರದ ಜೊತೆಗಾರನವನು.
ದಣಿದು ಬಂದರೆ ಕಾಲು ಒತ್ತಿ ಹಗುರಾಗಿಸುವ ಅವನೊಳಗಿನ ಪ್ರೀತಿ, ಕಣ್ಣಲ್ಲೇ ಪ್ರೀತಿಯನ್ನೆಲ್ಲ ಧಾರೆ ಎರೆಯುವ ಅನುಭುಕ್ತಿ. ಕ್ಷಣ ಕ್ಷಣವೂ ಆರಾಧಿಸುವ ಅವನ ಪ್ರೀತಿಯನ್ನೇ ಅವಳು ಪ್ರೀತಿಸುತ್ತಾಳೆ…
ಪ್ರೀತಿಯನ್ನ ಪ್ರೀತಿಸೋದೆ ಪ್ರೀತಿ. ನಾವು ಪ್ರೀತಿಸಿದವರು ಹೀಗೆ ಇರಬೇಕು, ಹೀಗೆ ಮಾಡಬೇಕು, ಎಲ್ಲದಕ್ಕೂ ಹೀಗೆ ರಿಯಾಕ್ಟ್ ಮಾಡಬೇಕು ಅನ್ನೋ ಎಕ್ಸ್‌ಪೆಕ್ಟೇಷನ್‌ಗೆ ತಕ್ಕಂತೆ ನಮ್ಮ ಪ್ರೀತಿ ಬದಲಾಗಬಾರದು. ನಮ್ಮ ಪ್ರೀತಿಯನ್ನಷ್ಟೇ ನಾವು ಆರಾಧಿಸಬೇಕು. ಪ್ರೀತಿಸಿದವರ ಸಾಂಗತ್ಯವನ್ನೇ ಅನುಭವಿಸಬೇಕು, ಆಗ ತನ್ನಿಂದ ತಾನಾಗೆ ಪ್ರೀತಿ ಎಲ್ಲವನ್ನೂ ಕೊಡುತ್ತದೆ. ಪ್ರೀತಿಗೆ ಸರಿ ತಪ್ಪುಗಳ ಕಟ್ಟಳೆಯಿಲ್ಲ. ಹಾಗಂತ ಮಾಡಿದ್ದೆಲ್ಲ ಸರಿಯೂ ಅಂತಲ್ಲ. ಮಾಡುವ ಪ್ರತಿ ಕೆಲಸದಲ್ಲೂ ಪ್ರೀತಿ ಇರಬೇಕಾದರೆ ಅಲ್ಲಿ ತಪ್ಪು, ಒಪ್ಪಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪರಸ್ಪರ ಕೇವಲ ಸಂಬಂಧಗಳಾಗಿ ಬದುಕುವುದರಲ್ಲಿ ಪ್ರೀತಿ ಇಲ್ಲ, ಬಿಡಿಸಲಾಗದ ಬಂಧವಾಗೋದು ಪ್ರೀತಿ. ಪ್ರತಿ ಹಗಲು, ರಾತ್ರಿ, ಕ್ಷಣ ಕ್ಷಣಕ್ಕೂ ಸಾನಿಧ್ಯಕ್ಕೆ ಹಾತೊರೆಯುವ ಪ್ರೀತಿಗೆ ಕಳಂಕವಿಲ್ಲ, ಕಪಟವಿಲ್ಲ. ಅದೊಂದು ಭಾವಸೇತುವೆ, ಎರಡು ಹೃದಯಗಳನ್ನು ಒಂದೇ ತೂಗುಯ್ಯಾಲೆಯಲ್ಲಿ ಸೇರಿಸಿ ನಲಿಸುವ ಒಲವಿನ ಕವಿತೆ..
ಇದನ್ನೂ ಓದಿ : ಭಾವಲೋಕದೊಳ್ ಅಂಕಣ: ಮಗಳೆಂಬ ಗರಿಕೆಗೆ ಅಪ್ಪನೆಂಬ ಆಲದ ಮರ