20 ಗುಂಟೆ ಜಮೀನು, 40 ತೆಂಗಿನ ಮರ, 10 ಕುರಿ, 4 ಹಸು, 2 ಎಮ್ಮೆ ಇಟ್ಟುಕೊಂಡು ಜೀವನ ದೂಡುತ್ತಿರುವ ಅವನು ಒಬ್ಬ ಸಾಮಾನ್ಯ ರೈತ. ಶರ್ಟು ಪ್ಯಾಂಟು ಹಾಕಿ ರೂಢಿಯಿಲ್ಲ. ಎಲ್ಲೋ ಮಗಳ ಮದುವೆಯ ಆರತಕ್ಷತೆಯಲ್ಲಿ ಎಲ್ಲರೂ ಬಲವಂತ ಮಾಡಿ ಊರ ಟೈಲರ್ ಬಳಿ ಹೊಲಿಸಿದ್ದ ದೊಗಳೆ ಶರ್ಟು, ಬೆಲ್ ಬಾಟಮ್ ಪ್ಯಾಂಟ್ ಹಾಕಿದ್ದ. ಅದನ್ನು ಫೋಟೊ ತೆಗೆಸಿದ ನಂತರ ತಕ್ಷಣ ಕಳಚಿ ಬಿಸಾಡಿದ್ದ. ಅವನೇನಿದ್ದರೂ ಒಂದು ಚಡ್ಡಿ, ಪೈಜಾಮದಂತ ಶರ್ಟು ಧರಿಸಿ ಹೆಗಲ ಮೇಲೆ ಅಂಗವಸ್ತ್ರದಂತ ಟವಲ್ ಹಾಕಿಕೊಂಡು ಸೂರ್ಯ ನೆತ್ತಿಗೆ ಬರುವಷ್ಟರಲ್ಲಿ ಎತ್ತಿಗೆ ನೊಗ ಕಟ್ಟಿ ಹೊಲ ಉಳಲು ಹೊರಟು ಬಿಡುವ ಸಾಮಾನ್ಯ ಕೃಷಿಕ. ಎಲ್ಲೋ ಪ್ಯಾಟೆಗೆ ಹೋದಾಗ ಪಂಚೆ ಉಟ್ಕೊಂಡು ತಲೆಗಿಷ್ಟು ಎಣ್ಣೆ ಹಾಕಿ ಕ್ರಾಪ್ ತೆಗೀತಾನೆ ಬಿಟ್ಟರೆ ಇನ್ನುಳಿದಾಗ ಅವನ ಬಗ್ಗೆ ಅವನಿಗೆ ಯೋಚನೆಯೇ ಇಲ್ಲ. ಅವನ ಚಿಂತೆ ಏನಿದ್ದರೂ ಹಸುವಿನ ಹಾಲು, ಗದ್ದೆಯ ಪೈರು, ತೆಂಗಿನ ಮರದ ಹೊಂಬಾಳೆ, ಮಳೆ ಬಂದಾಗ ಸೋರುವ ಮಾಡು,
ಕೊಯ್ಲಿಗೆ ಬಂದಿರುವ ಭತ್ತ, ಕಟಾವು ಮಾಡಿ ಹಾಕಿರುವ ಕಬ್ಬು, ಲಕ್ವ ಬಡಿದು ಮಲಗಿರುವ ಅವ್ವ, ಎದೆ ಎತ್ತರಕೆ ಬೆಳೆದಿರುವ ಮಗಳು, ಆಗಾಗ ಸಿಡುಕುವ ಅಷ್ಟೇ ಪ್ರೀತಿಸುವ ಹೆಂಡತಿ, ಕತ್ತೆ, ಕಿರುಬ, ಹಂದಿಗಳಿಂದ ಜಮೀನು ಕಾಯುವ ಕೆಲಸ ಇಷ್ಟೇ ಅವನ ಬದುಕು…
ಕಳೆದ ದೀಪಾವಳಿಯಲ್ಲಿ ಸಾಲ ಸೋಲ ಮಾಡಿ ಮೂರನೇ ಮಗಳ ಮದುವೆ ಮಾಡಿ ಮುಗಿಸಿದ್ದಾನೆ. ಆ ಮನೆಯ ಕೊನೆಯ ಮದುವೆಯಾಗಿದ್ದರಿಂದ ಅವನ ಹೆಗಲ ಮೇಲೆ ದಂಡಿ ಜವಾಬ್ದಾರಿ ಇತ್ತು. ಅಲ್ಲದೇ ಎರಡು ಹೆಣ್ಣು ಮಕ್ಕಳ ಮದುವೆಗೆ ಮಾಡಿದ್ದ ಸಾಲದ ಬಡ್ಡಿಯೇ ಇನ್ನೂ ತೀರಿರಲಿಲ್ಲ. ಇನ್ನು ಈ ಮದುವೆಗೆ ದುಡ್ಡು ಹೊಂಚುವಷ್ಟರಲ್ಲಿ ಹೆಗಲಿನ ಭಾರಕ್ಕೆ ಅವನ ಬೆನ್ನು ಮುರಿದಿತ್ತು.
ಅದರಲ್ಲೂ ಗಂಡಿನ ಕಡೆಯವರು ಬೆಂಗಳೂರಿನವರು. ಹುಡುಗ ಸರ್ಕಾರಿ ಕಚೇರಿಯಲ್ಲಿ ಕ್ಲರ್ಕ್. ಮೊದಲೆರಡು ಸಂಬಂಧಕ್ಕಿಂತ ಒಳ್ಳೆಯ ಸಂಬಂಧವಾಗಿರುವುದರಿಂದ ವರದಕ್ಷಿಣೆಯೂ ಹೆಚ್ಚು. ಅದನ್ನು ಹೊಂಚಲು ಇವನ ಪರದಾಟಗಳು ಹೆಚ್ಚಾಗಿತ್ತು. ಊರ ಪಟೇಲರ ಬಳಿ, ಪಕ್ಕದಳ್ಳಿಯ ಜಮೀನ್ದಾರರ ಬಳಿ, ಚೇರ್ಮನ್ ರಾಮೇಗೌಡರ ಬಳಿ ‘ಕಡೆ ಮಗಳು ಗೌಡ್ರೇ! ಲಗ್ನಕ್ಕೆ ಇನ್ನು ಹತ್ತೇ ದಿನ ಇರೋದು, ಇದೊಂದುಕಿತ ಇಲ್ಲ ಅನ್ಬೇಡ್ರಾ, ಯಂಗಾದ್ರುವೆ ದುಡ್ಡು ಹೊಂಚ್ಕೊಡಿ, ಅದೊಂದು ಕೂಸು ಪಾಪದವಳು ಕೊನೆಯಾಗಿ ಹುಟ್ಟುಬುಟ್ಟವಳೇ, ಒಳ್ಳೇದು ಕೆಟ್ಟದ್ದು ಅಂತ ಉಂಡಿಲ್ಲ-ತಿಂದಿಲ್ಲ, ಒಳ್ಳೇದನ್ನ ನೋಡಿಲ್ಲ, ಆ ಮಗಿ ನೀರು ಉಯ್ಕೊಂಡು ಹೆಣ್ಣಾದಾಗ್ಲೂವೆ ನನ್ನ ದರಿದ್ರಕ್ಕೆ ಒಂದು ಹೊಸಕೆ ಹಾಕಿ ಶಾಸ್ತ್ರ ಮಾಡಿಲ್ಲ. ದೊಡ್ಡವರಿಬ್ಬರು ಮದ್ವೆಯಾಗಿ ಹೋದ್ಮೆಲೆ ಗಂಡಮಗಿನಾಂಗೆ ಹಸು- ಕರ ಒಡ್ಕಂಡು
ನೀರು ಸೇದ್ಕಂಡು, ಮನೆ ಕಡೆನು ನೋಡ್ಕೊಂಡು ನಮಗೆ ಒತ್ತಾಸೆಯಾಗಿದ್ಲು. ಈಗ ಮದ್ವೆಯಾಯ್ತವ್ಳೆ, ಕಷ್ಟನೋ ಸುಖನೋ ಇದೊಂದು ಮದ್ವೆ ಮಾಡುದ್ರೆ ನನ್ನ ತಲೆ ಮ್ಯಾಲಿನ ಭಾರ ಇಳಿತಾದೆ. ಆಮ್ಯಾಕೆ ಇದ್ರೆ ಗಂಜಿನೋ ಅಂಬಲಿನೋ ಉಣ್ಣೋದು ಇಲ್ಲಾಂದ್ರೆ ಶಿವ ಅಂತ ಭೂಮ್ತಾಯಿ ಮ್ಯಾಲೆ ತಲೆ ಇಟ್ಕೊಂಡು ಮಲ್ಗೋದು, ಹೆಂಗೋ ಆ ಮಗಿನ್ ಕೊರಳಿಗೆ ತಾಳಿ ಅಂತ ಒಂದು ಬಿದ್ದುಬುಟ್ಟು ಗಂಡನ ಮನೆಗೆ ಕಳ್ಸ್ಕೊಟ್ಟಮ್ಯಾಲೆ ನಂಗೆ ಇನ್ನೇನ್ ಇದ್ದಾದು
ಮಗಳು ನೆರ್ವಿ ಮುಗಿಸಿ ನಿಮ್ಮ ಮನ್ಯಾಗೆ ಜೀತ ಮಾಡಿ ಸಾಲ ತೀರಿಸ್ತೀನಿ’ ಅಂತ ಗೋಗರೆದು ಸಾಲ ತಂದು ಮಗಳ ಮದುವೆ ಮಾಡಿದ್ದ.
ಅಷ್ಟಾದರೂ ಕೊಡಬೇಕಿದ್ದ ಚಿನ್ನ ಹೊಂಚೊಕೆ ಆಗಿಲ್ಲ, ಬರೋ ಯುಗಾದಿ ಅಷ್ಟರಲ್ಲಿ ಕೊಡುಸ್ತೀನಿ ಅಂತ ಬೀಗರಿಗೆ ಒಪ್ಪಿಸಿ ತಾಳಿ ಒಂದು ತಂದುಕೊಟ್ಟು ಮದುವೆ ಮುಗಿಸಿದ್ದ. ಹೋಗಲಿ ಆ ಮದ್ವೇನಾದ್ರು ಸಲೀಸಾಗಿ ಆಯ್ತಾ!? ಎಷ್ಟೇ ಆದರೂ ಬೆಂಗಳೂರಿನ ಜನ ಹಳ್ಳಿ ಮದುವೆ ಎಲ್ಲಿ ಒಪ್ಪಿಗೆಯಾಗುತ್ತೆ? ವೀಳ್ಯದೆಲೆ ಶಾಸ್ತ್ರದಿಂದ ಹಿಡಿದು ಅರಿಶಿಣ ಶಾಸ್ತ್ರದ ತನಕ ಎಲ್ಲದರಲ್ಲೂ ಕೊಸರೆ, ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಮೊಸರಲ್ಲಿ ಕಲ್ಲು ಹುಡುಕಿದವರೆ ಹೆಚ್ಚು.
ಗಡಿಗೆ ನೀರು ತಂದು ಮಗಳು ಕೈಗೆ ಕಂಕಣ ಕಟ್ಟಿಸಿ ಅಳಿಮಯ್ಯನ ಕೈಗೆ ವಾಚ್ ಹಾಕ್ಸಿ ಕಾಲು ತೊಳೆದು ಕನ್ಯಾದಾನ ಮಾಡಿ, ಸೇರಿದ ಜನಕ್ಕೆ ಹೋಳಿಗೆ ಊಟ ಹಾಕಿಸಿ ಕೈಗೊಂದು ತಾಂಬೂಲ ಕೊಟ್ಟು ಗಂಡಿನ ಮನೆಗೆ ಹೊಸ ಪಾತ್ರೆ-ಪಗಡು ಸಾಮಾನು ಗಾಡಿಗೆ ತುಂಬಿಸಿ, ಮಗಳನ್ನು ಕಳಿಸಿಕೊಡುವಾಗ ಆಳೆತ್ತರದ ಅಪ್ಪ ಕಣ್ಣೀರಾಗಿದ್ದ.
‘ಕೂಸೆ ಇಟ್ವರ್ಷ ನನ್ನ ಮನೆ ಬೆಳಕಾಗಿ ಉಣ್ಕಂಡು, ಕುಣ್ಕಂಡು, ನಲಿದಾಡ್ಕಂಡು ಇದ್ಯಲ್ಲವ್ವ. ಈಗ ಪರರ ಮನೆ ಹೊಕ್ಕಿದ್ಯಾ, ಆ ಮನೆ ದೀಪ ಬೆಳಗಬೇಕಾದವಳು ನೀನವ್ವ. ನಿಂಗೆ ವಸಿ ಕ್ಯಾಣ ದಾಸ್ತಿ, ಯಾರಾದ್ರೂ ರೇಗುದ್ರೆ ರೋಸೊತ್ತು ಅನುಸರಿಸಿಕೊಂಡು ಹೋಗವ್ವ, ನಾವ್ಯಾರು ಇಲ್ಲಂತ ಗುಮ್ಮನಂಗೆ ಮೂಲೆ ಸೇರ್ಕೊಂಡು ಗೊಳೋ ಅಂತ ಅಳ್ಬೇಡವ್ವ, ಇಲ್ಲಿ ನಿಮ್ಮ ಅಪ್ಪಯ್ಯನ ಜೀವ ನಿಲ್ವಲ್ದು. ನಮ್ಗೇನು ಊರಲ್ಲಿ ದೊರೆ ಮಕ್ಕಳಂಗೆ ಇರ್ತೀವಿ ಮಗಾ. ನೀನು ನಮ್ಮ ಚಿಂತೆ ಬಿಟ್ಟು ಸಂದಾಗಿರ್ಬೇಕು. ಹೊತ್ತಾರೆನೆ ಎದ್ದು ಹಟ್ಟಿ ಬಾಗಿಲು ತೊಳ್ದು ದೇವ್ರು ಮುಂದೆ ದೀಪ ಹಚ್ಚಿ ಕಾಪಿ ಗೀಪಿ ಕಾಯ್ಸಿ ಯಜಮಾನ್ರುಗೆ ಕೊಡಬೇಕವ್ವ. ರುಚ್ ರುಚಿಯಾಗಿ ಅಡುಗೆ ಮಾಡಿ ದುಡ್ಕಂಡ್ ಬಂದ ಗಂಡಂಗೆ ಉಣ್ಣಕ್ಕಿಕ್ಕಿ, ಅವನು ಹೇಳ್ದಾಂಗೆ ಕೇಳ್ಕಂಡು ಸಂತೋಸವಾಗಿ ಗಂಡನ ಕೂಟ ಇರ್ಬೇಕು. ನಿಮ್ಮವ್ವನಂತೆ ತವರು ಮನೆಗೆ ಒಳ್ಳೆ ಹೆಸರು ತರ್ಬೇಕು. ನೀನಲ್ದೆ ಇಂತ ಹೆಣ್ಣು ಎಲ್ಲಿ ಸಿಕ್ಕಾದು ಅಂತ ನಿಮ್ಮ ಅತ್ತೆ ಮಾವ ನೂರು ಕಡೆ ಹೇಳಂಗೆ ಬಾಳ್ವೆ ಮಾಡ್ಕಂಡು ಅತ್ತೆ ಮಾವನ್ನ ಸಂದಾಗಿ ನೋಡ್ಕೊಬೇಕು. ಯುಗಾದಿಗೆ ಬಂಗಾರ ಇಡ್ಕಂಡು ನಿನ್ನ ಅಂಗಳಕ್ಕೆ ನಾನು ಬರುವಷ್ಟರಲ್ಲಿ ಬಂಗಾರದಂತ ಸುದ್ದಿ ಕೊಡಬೇಕು. ನಗ್ ನಗ್ತಾ ಹೋಗ್ಬಾರೆ ನನ್ನ ಕಂದ’ ಅಂತ ಗಂಡನ ಮನೆಯಲ್ಲಿ ಹೇಗೆ ಬದುಕಬೇಕು ಅಂತ ತನಗೆ ತೋಚಿದ ರೀತಿಯಲ್ಲಿ ಹೇಳ್ತಾನೆ ಅವನು ದುಃಖದ ಕಣ್ಣಿರಲ್ಲಿ ಕಳೆದು ಹೋದ.
ಅಪ್ಪನೆಂಬ ಆಲದ ಮರ ಅದೆಷ್ಟೊಂದು ದಣಿವರಿಯದೆ ದುಡಿದ, ಅದೆಷ್ಟು ಅವಮಾನಗಳನ್ನು ತನ್ನೊಳಗೆ ಅದುಮಿಕೊಂಡ, ಹಸಿವಿನ ನೋವನ್ನ ಮಕ್ಕಳ ಅನ್ನದಲ್ಲಿ ಮರೆತುಹೋದ, ಮೈ ಕೈ ನೋವನ್ನ ಒಂದೊತ್ತಿನ ನಿದ್ರೆಯಲ್ಲಿ ಕಳೆದುಬಿಟ್ಟ, ವರ್ಷಪೂರ್ತಿ ದುಡಿದು ವರ್ಷಕ್ಕೊಂದು ಹಬ್ಬಕ್ಕೂ ಇಲ್ಲವಾದ, ಮಕ್ಕಳಿಗೆ ಹೊಸ ಬಟ್ಟೆ ತಂದುಕೊಟ್ಟು ತನ್ನ ಮಾಸಿದ ಬಟ್ಟೆಯಲ್ಲೆ ಸಂತೋಷ ಪಟ್ಟ, ತಾನೇ ಅರೆಹೊಟ್ಟೆಯಲ್ಲಿದ್ದರೂ ಬಂದ ನೆಂಟರಿಗೆ ಮೃಷ್ಟಾನ್ನವಿಟ್ಟ, ಟೆಂಟ್‌ಗೆ ಸಿನಿಮಾ ನೋಡಲು ಕಳ್ಸಿ ಅವನು ಕತ್ತಲಲ್ಲೇ ಜೀತ ಮಾಡಿದ, ಸುಡೋ ಜ್ವರ ಬಂದಾಗಲೂ ‘ನಂಗೇನಾಗದೆ ಮಗ ಕಲ್ಲು ಗುಂಡಂಗೆ ಇದ್ದೀನಿ’ ಅಂತ ನೀರು ಕಟ್ಟೊಕೆ ಹೋದ. ‘ಸಾಕು ನೀನು ಮನೇಲಿ ಇರಪ್ಪಯ್ಯಾ’ ಅಂದ್ರೆ ‘ಒಬ್ಳೇ ಎಲ್ಲಾ ಕಷ್ಟನೂ ಹೊರಕಾಗುತ್ತಾ ಕಂದ ನಿನ್ನ ಜೊತೆ ನಾನಿರ್ತೀನಿ’ ಅಂದ. ಇಷ್ಟು ವರ್ಷ ಒಬ್ಬಂಟಿಗನಾಗಿದ್ದರೂ ಮಗಳ ಕಷ್ಟದಲ್ಲಿ ಒಂಟಿಯಾಗಿ ಬಿಡಲಿಲ್ಲ. ಹೆಣ್ಣೆಂಬ ಜೀವಕೆ ಅಪ್ಪ ಆಲದ ಮರವಾದ….
ಇದನ್ನೂ ಓದಿ: ಭಾವಲೋಕದೊಳ್ ಅಂಕಣ : ಸೋತಾಗಿದೆ, ಸತ್ತಾಗಿದೆ, ಬರಿದಾಗಿದೆ, ಎಲ್ಲವೂ ಮುಗಿದಿದೆ; ಇನ್ನೇನಿದೆ?