Site icon Vistara News

ಭಾವಲೋಕದೊಳ್‌ ಅಂಕಣ : ಮೊದಲ ಬಾರಿ ಅವಳು ಬಂದು ಕೈ ಹಿಡಿದಾಗ ನಾನು ಏನೂ ಆಗಿರಲಿಲ್ಲ, ಮುಂದೆ ಅವಳೇ ಎಲ್ಲವೂ ಆದಳು!

Bhavalokadol

#image_title

ಅವಳೆಂದರೆ ಸಂಭ್ರಮ, ಸಂತೋಷ, ಸಡಗರ. ಅವಳ ಜೊತೆಗಿರಲು ಪ್ರತಿ ಬಾರಿ ಯಾವುದಾದರೊಂದು ಕಾರಣಗಳನ್ನು ಹುಡುಕುತಿದ್ದರೆ ಅವಳು ಮಾತ್ರ ಕಾರಣವೇ ಇಲ್ಲದೆ ಕಣ್ಣ ಮುಂದೆ ಪ್ರತ್ಯಕ್ಷಳಾಗಿಬಿಡ್ತಾಳೆ. ಅವಳದು ಥೇಟ್ ಅಮ್ಮನಷ್ಟೇ ಪ್ರೀತಿ ಆದ್ರೆ ಅಮ್ಮನನ್ನು ಮೀರಿಸುವಷ್ಟು ಸಿಟ್ಟು. ಕಡ್ಡಿ ಮುರಿಯುವಂತೆ ಮಾತನಾಡುವ ಅವಳ ಪ್ರತಿ ಮಾತು ಕೂಡ ಒಂದು ವಾಗ್ದಾನ. ಅವಳ ಮಾತಿನೊಳಗೊಂದು ಸಂದೇಶವಿದೆ, ಸ್ಪಷ್ಟತೆಯಿದೆ, ಸರಳತೆಯಿದೆ, ಸೂಕ್ಷ್ಮತೆಯಿದೆ. ಅವಳೆಂದರೇ ಎಲ್ಲರಿಗೂ ಅದೆಂತದೋ ಸೆಳೆತ, ಒಲವು, ಪ್ರೀತಿ.

ಅವಳು ಅಷ್ಟೇ, ಕೈಚಾಚುವ ಮುನ್ನವೇ ಕೈಮೀರಿದ ಮಡಿಲು ನೀಡಿ ಅಂಗಳದ ಅಕ್ಕರೆಯನ್ನೇ ಧಾರೆ ಎರೆದುಬಿಡ್ತಾಳೆ. ಆದ್ರೆ ಅವಳ ಆಂತರ್ಯದೊಳಗಿರುವ ದುಗುಡ, ದುಮ್ಮಾನಗಳಿಗೆ ಹೊರಪ್ರಪಂಚದ ಅರಿವಿಲ್ಲ. ಅದೆಷ್ಟೋ ನಿಗೂಢತೆಗಳು ಅವಳೊಳಗೆ ಮುಳುಗಿಹೋಗಿವೆ. ತೆರೆದ ಪುಸ್ತಕದಂತೆ ಕಂಡರೂ ಅವಳೊಳಗಿನ ಅದೆಷ್ಟೋ ಗಂಟುಗಳು ಬಿಡಿಸುವುದಿರಲಿ ಕೊನೆಯ ತುದಿಯ ಆಳವು ಸಿಗುವುದಿಲ್ಲ. ಅವಳ ಆಸೆಗಳ ಕನಸು ಆಗಸವನ್ನೇ ಮೀರಿದ್ದು, ಸಮುದ್ರವನ್ನೆ ತನ್ನದಾಗಿಸಿಕೊಳ್ಳುವ ಬಯಕೆ. ಅದು ಕೇವಲ ಬಯಕೆಯಲ್ಲ, ಅದೊಂದು ಧೀಶಕ್ತಿ, ಪಡೆದೇ ತೀರುತ್ತೇನೆಂಬ ಹಠ. ಹಠವನ್ನು ಮೀರಿದ ನಂಬಿಕೆ. ಅವಳ ಎಲ್ಲ ಕನಸುಗಳು ನನಸಾಗಿದ್ದು ಹಾಗೆ ಅಲ್ಲವೇ? ನನ್ನನ್ನು ಪಡೆದುಕೊಳ್ಳುವ ಕನಸನ್ನು ಸೇರಿ

ಅವಳ ಪ್ರೀತಿ ನನ್ನಡೆಗೆ ಕೈ ಚಾಚಿದಾಗ ನಾನೇನಾಗಿದ್ದೆ ಮಹಾ!?
ಸಾಧಿಸುತ್ತೀನಿ, ಗೆಲ್ಲುತ್ತೀನಿ ಎಂಬ ಆಸೆಯೊಂದುಬಿಟ್ಟರೆ ಬೇರೆನೂ ನನ್ನ ಬಳಿ ಇರಲಿಲ್ಲ.
ಕನಿಷ್ಠ ಅವಳ ಅಪ್ಪನ ಮುಂದೆ ನಿಂತೂ ‘ನಿಮ್ಮ ಮಗಳನ್ನು ಮದ್ವೆ ಮಾಡಿಕೊಡಿ ಸಾಕುವ ಶಕ್ತಿ‌ ನನಗಿದೆ’ ಎಂದು ಹೇಳುವ ಧೈರ್ಯವೂ ಇರಲಿಲ್ಲ.ಆದ್ರೆ ಬೆಟ್ಟದಷ್ಟು ಪ್ರೀತಿ, ತೀರಲಾರದಷ್ಟು ಪ್ರೇಮ ಅವಳ ಮೇಲಿತ್ತು. ಹೃದಯದೊಳಗೆ ಗುಡಿಸಲಿನಂತ ಗೋಪುರ ಕಟ್ಟಿ ಸಾಕುತ್ತಿದ್ದರೂ, ರಾಣಿಯಂತಿರುವ ಅವಳನ್ನು ‘ಪ್ರೇಮದ ಗೂಡಿಗೆ ಬಾ’ ಎಂದು ಕರೆಯುವ ಬಾಯಿರಲಿಲ್ಲ. ಜೀವನದಲ್ಲಿ ಸೋತಿರುವ ನಾನು, ಗೆದ್ದು ಬೀಗುತ್ತಿರುವ ಅವಳ ಗೆಲುವಿಗೆ ಅಡ್ಡವಾಗಲು ಇಷ್ಟಪಡಲಿಲ್ಲ.

‘ನಿನ್ನಯ ಋಣ ನನ್ನಯ ಎದೆ ಮೇಲಿದೆ, ಹಣೆಬರಹಕ್ಕಿಲ್ಲ. ಹೊರಟು ಬಿಡು ನಿನಗಾಗಿ ಸಂಭ್ರಮದ ಸಾಮ್ರಾಜ್ಯವೊಂದು ಕಾಯುತಿದೆ. ಅಲ್ಲಿ ರಾಣಿಯಾಗಿ ಮೆರೆಯಬೇಕಾದವಳ ಬಗ್ಗೆ ತಿರುಕನ ಕನಸು ಸಾಧ್ಯವಿಲ್ಲ, ಮುಂದೊಂದು ಜನ್ಮವಿದ್ದರೆ ಮತ್ತೆ ಸಿರಿತನದಲ್ಲಿ ಹುಟ್ಟಿ ಬಂದು ನಿನ್ನ ಕೈ ಹಿಡಿಯುವೆʼ
ಎಂದು ಹೇಳಿಯೆಬಿಟ್ಟೆ. ಬರೀ ಪ್ರೀತಿಯಲ್ಲೆ ಮುಳುಗಿಸಿದ್ದವಳು, ಒಮ್ಮೆಲೇ ಉರಿದು ಹೋದಳು, ಬಿಟ್ಟರೆ ಪ್ರೇಮಿ ಎಂಬುದನ್ನು ಮರೆತು ಕೊಂದುಬಿಡುತ್ತಾಳೆನೋ ಎಂಬಷ್ಟು ವ್ಯಾಘ್ರತೆ ಅವಳ ಕಣ್ಣಲ್ಲಿತ್ತು.

ʻನಾ ಆಸೆ ಪಟ್ಟಿದ್ದು ನನಗೆ ಬೇಕಾದಾಗ ಸಿಗದಿದ್ದರೆ, ಇನ್ಯಾವತ್ತಿಗೂ ಬೇಡ. ಈ ಬದುಕಿಗೆ ನೀನು ಬೇಕು, ನಿನ್ನನ್ನು ಪಡೆದುಕೊಂಡೇ ಬದುಕುವೆ. ಬದುಕಲಾಗದಿದ್ದರೆ ಸಾಯುವೆ, ಸಾಯುವಾಗಲಾದರೂ ಸುಮ್ಮನೆ ಸೋಲುವವಳಲ್ಲ, ನಿನ್ನ ಕೈಯಲ್ಲಿ ಮಾಂಗಲ್ಯ ಕಟ್ಟಿಸಿಕೊಂಡ ನಂತರವೇ ನಾನು ಚಿತೆ ಏರುವವಳು ಎಂದು ನನ್ನ ಉತ್ತರಕೂ ಕಾಯದೇ ಹೊರಟುಬಿಟ್ಟಳು.

ತಿರುಗಿ ನೋಡದೆ ಹೋದವಳು, ಮೂರು ತಿಂಗಳು ಕಳೆದು ಎದುರು ನಿಂತು ‘ನಾಳೆಯೇ ಮದ್ವೆ, ತಾಳಿ ಕಟ್ಟಿದ ತಕ್ಷಣ ಬೆಂಗಳೂರಿನಲ್ಲಿ ಬದುಕು, ಅನ್ನ ಹುಟ್ಟಿಸಿಕೊಳ್ಳುವ ಶಕ್ತಿ ನನಗಿದೆ, ನೀನೇನಿದ್ದರೂ ಕನಸು ಕಟ್ಟು, ಆ ಕನಸುಗಳ ನನಸಾಗಿಸುವ ಪ್ರಯತ್ನ ಮಾಡು’ ಎಂದು ಒಂದೇ ಉಸಿರಿನಲ್ಲಿ ಹೇಳಿಯೇಬಿಟ್ಟಳು.

ಎಂಥವನಿಗಾದರೂ ಅದೆಂಥ ಶಕ್ತಿ ಈ ಹುಡುಗಿಯದು ಎನಿಸುವಷ್ಟರ ಮಟ್ಟಿಗೆ ಗಟ್ಟಿಗಿತ್ತಿಯವಳು. ಹೇಳಿದಂತೆ ಮಾಡುವ ಜಾಯಮಾನದವಳು. ಹಾಗೇ ಮಾಡಿದಳು. ಬೆಂಗಳೂರಿನ ಬನಶಂಕರಿ ದೇವಿ ಅವಳ ಆರಾಧ್ಯ ದೈವ. ಆ ದೇವರ ಮುಂದೆ ತಾಳಿ ಕಟ್ಟಿದ ಮರುಕ್ಷಣ ಮುಂದೇನು ಎಂಬ ಪ್ರಶ್ನೆ ಬಿಟ್ಟರೆ ಇನ್ಯಾವ ಭಾವವೂ ನನ್ನಲಿರಲಿಲ್ಲ. ಅಲ್ಲಿಂದ ಎರಡು ವರ್ಷ ಕಳೆದುಹೋಗಿದ್ದೆ ಗೊತ್ತಾಗಿಲ್ಲ. ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿಯಿಂದ ಹೊರಬರುವ ಪ್ರಯತ್ನದಲ್ಲಿದ್ದಾಗಲೇ ಅವಳು 3 ತಿಂಗಳ ಗರ್ಭಿಣಿ. ಕೆಲಸ ಹುಡುಕುವ ಪ್ರಯತ್ನದಲ್ಲಿದ್ದ‌ ನನಗೆ ಸಂಭ್ರಮದ ಪರಿವೇ ಗೊತ್ತೇ ಆಗಲಿಲ್ಲ. ರೋಸಿ ಹೋಗಿದ್ದ ಬದುಕನ್ನು ಕಟ್ಟಿಕೊಳ್ಳುವ ತಾಪತ್ರಯದಲ್ಲಿ ಅವಳನ್ನು ಪ್ರೀತಿಸುವ ಪ್ರೇಮ ಮರೆತುಹೋಗಿದ್ದು ಅರಿವಿಗೆ ಬರಲಿಲ್ಲ. ನನ್ನನ್ನೇ ನಂಬಿ ಬಂದವಳನ್ನು ದಡ ಸೇರಿಸುವ ಹೋರಾಟದಲ್ಲಿ ಅವಳೆಡೆಗೆ ನನ್ನಲ್ಲಿರುವ ಮಮತೆ, ವಾತ್ಸಲ್ಯ,ಮರೆತುಹೋಗಿದ್ದು ಗೊತ್ತಾಗಲಿಲ್ಲ.

ಪುಟ್ಟದೊಂದು ಮನೆ, ಮನೆಯಲ್ಲೊಂದಿಷ್ಟು ಪಾತ್ರೆ, ಕಾಲಿಗೆ ತಾಕುವ ಗೋಡೆ, ನಿದ್ರೆಗೆ ಜಾರಿದರೆ ಬೆವೆತುಹೋಗುವಷ್ಡು ಸೆಕೆ, ಮೂರೊತ್ತಿಗೂ ಒಂದೇ ಊಟ. ಹೇಗಿದ್ದ ಅವಳ ಜೀವನವನ್ನು ಹೇಗೆ ಮಾಡಿಬಿಟ್ನಲ್ಲ ಎಂಬ ಪಶ್ಚಾತ್ತಾಪ ನನ್ನ ಹೆಗಲೇರಿತ್ತು. ಸಾಯುವ ಮಾತನಾಡಿ ತಾಳಿ ಕಟ್ಟಿಸಿಕೊಂಡವಳಿಗೆ ಚೆಂದದೊಂದು ಬದುಕು ಕಟ್ಟಿಕೊಡಲಾಗಲಿಲ್ಲವಲ್ಲ ಎಂಬ ಭಾವ ಕೊರೆಯುತ್ತಿತ್ತು.

ಇಷ್ಟೆಲ್ಲ ಕತ್ತಲೆಯ ಕೂಪದಲ್ಲಿದ್ದರೂ ಅವಳು ಮಾತ್ರ ಒಂದಕ್ಷರದ ಮಾತನಾಡಲಿಲ್ಲ. ಒಂದೊತ್ತಿನ ಅಪಸ್ವರವೊಂದನ್ನು ಹೇಳಲಾಗದೇ ಗರ್ಭದಲ್ಲೆ ಅವಿತುಬಿಟ್ಟಳು. ಚೊಚ್ಚಲ ಹೆರಿಗೆಯ ಸಂಭ್ರಮದ ಸಾನಿಧ್ಯ ಸಿಗದಿದ್ದರೂ ಕಣ್ಣಂಚಲ್ಲೆ ಕೊಂಚ ನೀರು ಹರಿಸಿ ಮರೆತುಬಿಟ್ಟಳು. ತಾನು ಇಷ್ಟಪಟ್ಟಿದ್ದು ಸಿಗದಿದ್ದರೆ ಬೇಕಾಗಿಲ್ಲ ಎಂದವಳು, ಇಡೀ ಬದುಕೇ ಇಲ್ಲದಿದ್ದರೂ ಬದುಕಿಬಿಟ್ಟಳು. ಸಹನೆಯೆಂಬ ಸಾಕ್ಷಾತ್ಕಾರವೊಂದನ್ನು ತನ್ನೊಳಗೆ ತುಂಬಿಕೊಂಡು ನನ್ನಲ್ಲೇ‌ ಉಳಿದುಬಿಟ್ಟಳು…

ಭಗವಂತ ಕೈಬಿಡಲಿಲ್ಲ, ಕನಸು ಕಳೆದುಹೋಗಲಿಲ್ಲ. ಅದೆಷ್ಟೋ ಸಂಕಷ್ಟಗಳ ಬಳಿಕ ಹೊಸ ಬದುಕೊಂದು ಶುರುವಾಯಿತು. ಮಗನ‌ ಕಾಲ್ಗುಣದಿಂದಲೇ ಎಲ್ಲವೂ ಸಾಧ್ಯವಾಯಿತು, ನಾ ನಂಬಿದ ದೇವರಿಂದ ನನಸಾಯಿತು ಎಂದು ಅವಳು ಅದೆಷ್ಟೆ ಉತ್ತರ ಕೊಟ್ಟರು ಅದ್ಯಾವುದು ನಿಜವಾದ ಉತ್ತರವಾಗಿರಲಿಲ್ಲ. ಆ ಅಮೂರ್ತ ಪ್ರೇಮದ ಅವಳ ಒಲವೇ ಗೆಲುವಿಗೆ ಕಾರಣ. ಸಹನೆಯನ್ನು ತುಂಬಿಕೊಂಡವಳ ಹೆಜ್ಜೆ ಗುರುತುಗಳೇ ಸಾಧನೆಗೆ ಮೆಟ್ಟಿಲು. ಸೋತರೂ ಹಿಂಜರಿಯದ ಅವಳ ಧೀಶಕ್ತಿ ಬದುಕಿಗೊಂದು ತಿರುವು. ಎಲ್ಲವನ್ನೂ ಮೀರಿ ಏನೂ ಕೊಡಲಾಗದ ಯೋಗ್ಯತೆ ಇರದಿದ್ದರೂ ತನ್ನೊಳಗಿನ ಸರ್ವಸ್ವವನ್ನೂ ನನ್ನಡೆಗೆ ಹರಿದುಬಿಟ್ಟ ಅವಳ ತ್ಯಾಗವೊಂದೇ ಕನಸಿನ ಗೋಪುರಕ್ಕೆ ಗಟ್ಟಿ ಅಡಿಪಾಯ.

ಅವಳು ಅದೆಷ್ಟೋ ಅಸಂಖ್ಯ ಪರದೆಯ ಭಾವಜೀವ. ಉಸಿರೆಳೆದುಕೊಂಡು ಸೋತೆ ಅನ್ನುವಷ್ಟರಲ್ಲಿ ಬೆನ್ನಲುಬಾಗಿ ನಿಂತು ಉಸಿರು ನೀಡಿ ಬದುಕಿಸಿಬಿಡ್ತಾಳೆ. ತನ್ನೊಳಗೆ ಸಾವಿರ ಸಾವಿರ ಚಿಂತೆಗಳು ಕೊಳೆತು ಕಳೇಬರಗಳಾಗಿದ್ದರೂ ನನ್ನಯ ಸಣ್ಣ ಒಂದು ಗಾಯಕ್ಕೆ ನೊಂದುಬಿಡುತ್ತಾಳೆ. ಹಸಿವು ಅನ್ನುವಷ್ಟರಲ್ಲಿ ಕೈಯಲ್ಲಿ ತುತ್ತನು ಹಿಡಿದು ನಿಂತು ಹಸಿವ ನೀಗಿಸುವಳು. ಕೊನೆಗೆ ಅವಳು ಮಾತ್ರ ಅದೆಷ್ಟೊ ಬಣ್ಣದ ಭಾವ ಜೀವ ಹೊತ್ತು ಪ್ರೇಮದ ಕಾಮನಬಿಲ್ಲು….

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ಮಕ್ಕಳ ನೆರಳಿಗೂ ಕಷ್ಟ ಬರದಂತೆ ಕಾಪಾಡುವ ದೇವರಲ್ಲವೇ ಅಮ್ಮ?

Exit mobile version