Site icon Vistara News

ಭಾವಲೋಕದೊಳ್‌ ಅಂಕಣ : ಪ್ರೀತಿ ಇರುವುದು ತಾಜ್‌ಮಹಲಿನ ಗೋಡೆಯಲ್ಲಿ ಅಲ್ಲ, ಪುಟ್ಟ ಗುಡಿಸಲಿನ ಗೂಡಿನಲ್ಲಿ!

Love story surimallesh Colum
Bhavalokadol column

ಬದುಕೆಂಬ ಬಯಕೆಗೆ ಆಡಂಬರದ ಜೀವನ‌ ನಡೆಸಿದರೂ ಮುಗ್ದ ಮನಸ್ಸು ಬಯಸೋದು ಮಾತ್ರ ಮುಷ್ಟಿಯೊಳಗಿನ ಮುಗ್ಧ ಪ್ರೇಮ ಪಾತ್ರ. ಆ ಪ್ರೇಮಕ್ಕೆ ಮನೆ, ಬಂಗಲೆ, ಕಾರು, ಆಳು, ಕಾಳು, ಕನಸು ಎಲ್ಲವನ್ನೂ ಕೊಟ್ಟರೂ ಪ್ರೀತಿಸುವವರ ಸಾಂಗತ್ಯವೊಂದಿರದಿದ್ದರೆ (ಭಾವಲೋಕದೊಳ್‌ ಅಂಕಣ) ಅದು ಕೊರಗುತ್ತದೆ, ಬಾಡಿ ಬೆಂಡಾಗುತ್ತದೆ, ಮೂಲೆ ಸೇರಿ ಕಣ್ಣೀರಾಗುತ್ತದೆ.

ಪ್ರೀತಿಗೆ ಬೇಕಿರುವುದು ದೊಡ್ಡ ಅರಮನೆಯಲ್ಲ, ಸಾನಿಧ್ಯದ ಅಪ್ಪುಗೆ ಮಾತ್ರ. ಜೊತೆಗೆ ನಿಂತು ನಾನಿದ್ದೇನೆ ಎಂಬ ಭಾವವೊಂದನ್ನೇ ಪ್ರೀತಿ ಬಯಸೋದು…

Love is in the little things

ಪ್ರೀತಿ ಅಡಗಿರೋದು ಸಣ್ಣ ಸಣ್ಣ ವಿಷಯಗಳಲ್ಲೇ ಹೊರತು ಬೆಲೆಬಾಳುವ ಬದುಕಿನಲ್ಲಲ್ಲ. ಪ್ರೀತಿ ಸಣ್ಣದೆಂಬ ಎಳೆಯನ್ನು ಪೋಣಿಸುತ್ತಲೇ ದೊಡ್ಡದೊಂದು ಹಾರವಾಗಿ ಕೊರಳಿಗೇರಿ ಸಂಭ್ರಮಿಸುತ್ತದೆ. ಅದು ಯಾವುದೇ ಸಂಬಂಧವಾಗಿರಲಿ ಸಣ್ಣ ಸಣ್ಣ ವಿಷಯಗಳು ಕೊಡುವ ಖುಷಿಯ ಭಾವವೇ ಬೇರೆ.

ದಿನ ಶುರುವಾಗುತ್ತಲೇ ಪ್ರೇಮಕ್ಕೊಂದು ಪ್ರೀತಿ ತುಂಬಿದ ಗುಡ್‌ಮಾರ್ನಿಂಗ್ ಮೆಸೇಜ್, ಒಂದು ಸಣ್ಣ ಕಾಲ್ ಮಾಡಿ ಧ್ವನಿಯಲ್ಲೇ ಅಪ್ಪುಗೆ ನೀಡಿ ಇಡಿ ದಿನಕ್ಕೊಂದು ಶಕ್ತಿ ತುಂಬೋದು. ಸುತ್ತಲ ಪ್ರಪಂಚದ ಮುಂದೆ ಗಟ್ಟಿಯಾಗಿ ಕೈ ಹಿಡಿಯುವುದು, ತಲೆ ಸವರಿ ಮುತ್ತಿಕ್ಕುವುದು, ಅಪ್ಪುಗೆ ನೀಡಿ ಜೊತೆಯಾಗೋದು, ತಿನ್ನುವ ಪ್ರತಿ ತುತ್ತು, ಕುಡಿಯುವ ಪ್ರತಿ ಗುಟುಕು ನಮ್ಮವರಿಗಾಗಿ ಮೀಸಲಿಡುವುದು, ನಮ್ಮವರ ಸಂತಸವನ್ನು ನಾವು ಸಂಭ್ರಮಿಸುವುದು, ಅವರ ಸಣ್ಣ ನೋವಿಗೆ ನಾವು ಮರುಗುವುದೇ ಪ್ರೀತಿ….

ಪ್ರೀತಿಯಲ್ಲಿ ನಿರೀಕ್ಷೆ ಅಪೇಕ್ಷೆಗಳಿವೆ. ಆ ಪ್ರೀತಿ ಸಣ್ಣದೊಂದು ನಗು, ಮಡಿಲು, ಅಪ್ಪುಗೆ, ಸಾನಿಧ್ಯ, ಸಮಯ, ಪ್ರಾಮುಖ್ಯತೆ, ನಂಬಿಕೆಯನ್ನಷ್ಟೆ ಬಯಸುತ್ತದೆ. ಯಾವಾಗ ಪ್ರೀತಿಯಲ್ಲಿ ಈ ಸಣ್ಣ ವಿಷಯಗಳು ಕಳೆದುಹೋಗುವುದೋ ದೊಡ್ಡ ಸಂಬಂಧವಾದರೂ ಒಂದೇ ಸಲಕ್ಕೆ ಮುರಿದುಹೋಗುತ್ತದೆ.

ಇದನ್ನೂ ಓದಿ: ಭಾವಲೋಕದೊಳ್‌ ಅಂಕಣ: ಹೃದಯವೇ ಬಯಸಿದೆ ನಿನ್ನನೆ, ತೆರೆಯುತ ಕನಸಿನ ಕಣ್ಣನೆ…

ಯಾವುದೇ ಸಂಬಂಧವಾದರೂ ಅದರ ಅವನತಿಗೆ ಕಾರಣವಾಗುವುದು ಸಣ್ಣ ಸಣ್ಣ ವಿಷಯಗಳ ನಿರ್ಲಕ್ಷ್ಯದಿಂದ. ಪ್ರೀತಿಯಲ್ಲಿ ಹೊಗಳಿಕೆ, ಸ್ಪರ್ಶ, ಸಾನಿಧ್ಯ, ತುಂಟತನ, ಮಮತೆ, ತಾಯ್ತನ, ಸ್ವಾರ್ಥಗಳೆಲ್ಲವೂ ತುಂಬಿರಲೇಬೇಕು. ಮೇಲ್ನೊಟಕ್ಕೆ ಇಷ್ಟೇ ತಾನೆ ಎನಿಸಿದರೂ ಆ ಭಾವಗಳು ತುಂಬವ ಬದುಕು ನಿಜಕ್ಕೂ ಅದ್ಬುತ. ಹಾಗಾಗಿ ಪ್ರೀತಿಯಲ್ಲಿ ಸಣ್ಣ ಭಾವನೆಗಳನ್ನು ನಿರ್ಲಕ್ಷಿಸಕೂಡದು, ಕಡೆಗಣಿಸಬಾರದು..

ನಿಮ್ಮೊಳಗಿನ ಒಲವಿನ ಕಣವನ್ನಾಗಲಿ, ಅವು ಬದುಕಿಸುವ ಕ್ಷಣವನ್ನಾಗಲಿ ಕಳೆದುಕೊಳ್ಳಬೇಡಿ… ಪ್ರೀತಿ ಬದುಕಿರುವುದೇ ಸಣ್ಣ ಸಣ್ಣ ವಿಷಯಗಳಲ್ಲಿ….

Exit mobile version