Site icon Vistara News

ಭಾವಲೋಕದೊಳ್‌ ಅಂಕಣ : ನೆನಪು, ಮರೆವುಗಳ ಮಾಯಾಜಾಲ; ಕೆಲವನ್ನು ಮರೆತೆನೆಂದರೂ ಮರೆಯಲಿ ಹೇಗೆ?

Nenapu

#image_title

ಆ ಮರೆವು ಎಂಬುದಕ್ಕೆ ಅದೆಂತಹ ಅಗಾಧ ಶಕ್ತಿಯಿದೆ. ಮರೆವು ಎಂಬ ಆಂತರ್ಯದ ಆ ಗುಣವೊಂದಿರದಿದ್ದರೆ ಮನುಷ್ಯ ಮಟ್ಟಸದ ಮಸಣದಲ್ಲಿ ಅಲೆಮಾರಿಯಾಗಿ ಅಲೆದಾಡುತ್ತಿದ್ದ. ವರ್ಷ ತುಂಬದ ಎಳೆಯ ಕಂದಮ್ಮ ಅಂಗಳದಲ್ಲಿ ಒದ್ದಾಡಿ ಮೈ ಮಣ್ಣಾದಾಗ ಅಮ್ಮನಿತ್ತ ಆ ಪೆಟ್ಟಿನ ನೋವು ಅದೇ ರಾತ್ರಿ ಅಮ್ಮ ಎದೆಗವಚಿಕೊಂಡು ತಲೆಸವರಿ ಮಡಿಲ ಹಾಡೊಂದನ್ನು ಹಾಡಿದಾಗಲೇ ಮರೆತುಹೋಗಿತ್ತು. ಓದಿನಲ್ಲಿ ಮುಂದಿದ್ದರೂ ಸಹ ಲೆಕ್ಕಾಚಾರದ ಗಣಿತ ಮಾತ್ರ ಮಸ್ತಕದ ಒಳಗೆ ಇಳಿಯಲೇ ಇಲ್ಲ ಎಂದು ಲೆಕ್ಕದ ಮೇಷ್ಟ್ರು ಬೆತ್ತ ಹಿಡಿದು ಕೊಟ್ಟ ಬಿಸಿ ಏಟು ಪರೀಕ್ಷೆಯಲ್ಲಿ ಲೆಕ್ಕದಲ್ಲೇ ಅತಿ ಹೆಚ್ಚು ಅಂಕ ಗಳಿಸಿದೊಡನೆ ಮರೆತೇಹೋಗಿತ್ತು.
ದೀಪಾವಳಿಗೆ ತಂದುಕೊಡುತ್ತಿದ್ದ ಪಟಾಕಿ ‘ಈ ವರುಷ ಸಾಧ್ಯವಾಗಿಲ್ಲವೋ ಮಗನೇ!’ ಎಂದು ಅಪ್ಪ ಹೇಳಿದಾಗ ಆದ ನೋವು, ಆ ದಿನ ಅಪ್ಪ ಹೆಗಲ ಮೇಲೆ ಹೊತ್ತು ಜಾತ್ರೆ ತೋರಿಸಿದಾಗ ಮರೆತೇ ಹೋಗಿತ್ತು.
ನನ್ನೊಂದಿಗೆ ಆಡಲು ಯಾರಿಲ್ಲ ಎಂಬ ಕೊರಗಿನ ನೋವು ಕಬ್ಬಡಿಯಲ್ಲಿ ಗೆದ್ದಾಗ ಮರೆತಿತ್ತು.
ಹೀಗೆ ಮನಸ್ಸಿಗೆ ಏನಾಗುತ್ತಿದೆ ಎಂದು ಗೊತ್ತಾಗದಾಗ ಆದ ನೋವು ಮರೆತೇಹೋಗಿತ್ತು. ಆದರೆ ಪ್ರಪಂಚದ ಎಲ್ಲವೂ ಅರಿತಾಗ ಮರೆಯಲು ಆಗುತ್ತಲೇ ಇಲ್ಲವಲ್ಲ ಯಾಕೆ…!?

‘ಅಂಗೈ ಹಿಡಿದು ಆಕಾಶದತ್ತ ಕಣ್ಣಾಡಿಸಿ, ಸಾಕಾಯ್ತು ಹೋಗಿಬರುತ್ತೇನೆ, ಗಟ್ಟಿಯಾಗಿ ಬದುಕು ಮಗನೇ!’
ಎಂದು ಹೇಳಿ ಹೊರಟ ಅಮ್ಮನ ಸಾವು ಮರೆಯಲಾಗುತ್ತಿಲ್ಲ. ಮಸಣವೆಲ್ಲ ಹುಡುಕುಡುಕಿ ಮಣ್ಣಿನ ಕಣದಲ್ಲಿ ಎದ್ದು ಬರುವಳೆನೋ ಎಂದು ಶೋಧಿಸುವ ಹುಚ್ಚುತನ ತಲೆ ಏರಿದೆ. ಆಳೆತ್ತರದ ಅಪ್ಪ, ಗುಟುರು ಹಾಕಿ ಗುಡುಗಿದರೆ‌ ಮೂಲೆ ಸೇರುತ್ತಿದ್ದ ನಾವುಗಳು ಅಪ್ಪನೆದುರೆ ನಿಂತು ಸೆಟೆದು ಎದುರಾಡಿದ ಮಾತಿನ ನೋವಿನ ಪಶ್ಚಾತ್ತಾಪ ಮರೆಯಾಗುತ್ತಿಲ್ಲ.
ಬದುಕು ಒಂಟಿಯಲ್ಲ, ಜಂಟಿಯಾಗಿ‌ ಹೆಗಲಿಗೆ ಹೆಗಲಾಗಿ ಸಾಗುವ ಎಂದು ಕನಸು ಕಟ್ಟಿಕೊಟ್ಟು ಪ್ರೀತಿಸಿದವಳು ಮರೆಯಾಗಿದ್ದಕ್ಕೆ ಹೃದಯ ಮಾತ್ರ ಮರುಗುತ್ತಿದೆಯಲ್ಲ, ಸಂತಸದ ದಿಬ್ಬಣ ಕಂಡಾಗಲೆಲ್ಲ, ಕಂಕಣ ಕಟ್ಟಿದರೂ ಹಸೆಮಣೆಯನ್ನು ಏರದೆ ಬಿಟ್ಟು ಹೋದಳಲ್ಲ‌ ಎಂದು ಕ್ರೋಧತೆಯು ಮನದಾಳದಲ್ಲಿ‌ ಮನೆಮಾಡಿದೆ. ಸಾಕ್ಷಾತ್ಕಾರದ ಸಪ್ತಪದಿ ತುಳಿಯುವ ಮುನ್ನವೇ ಎದೆಯಾಳದೊಳಗಿನಿಂದ ಹೊರನಡೆದವಳ ನೆನಪುಗಳು ಮಾಸದೆ ಕಣ್ಕಟ್ಟಿದೆ. ಹೇಳಿಕೊಳ್ಳುವಷ್ಟಲ್ಲದಿದ್ದರೂ‌ ಬದುಕುವಷ್ಟು ಗಟ್ಟಿತನವಿದ್ದರೂ ಯಾವುದೂ ಆಗುತ್ತಿಲ್ಲ.


ಹೊಟ್ಟೆಪಾಡಿಗೊಂದು ಕೆಲಸ ಬೇಕು, ಕಮಿಟೆಡ್‌ ಕೆಲಸದಲ್ಲೊಂದು ಅವಮಾನ. ‘you are unfit to work here’ ಎಂದು ಚೀರಾಡಿ ಎಲ್ಲರೆದುರು ಕೂಗಿ ಹೀಯಾಳಿಸುವ ಬಾಸ್‌ನ ಮಾತುಗಳು ಎಷ್ಟೇ ಗಟ್ಟಿ ಎಂದುಕೊಂಡರೂ ಕುಗ್ಗಿಸಿಬಿಡುತ್ತೆ. ಮುಂದಕ್ಕೂ ಸಾಗಲಾಗದೇ ಅದೇ ಕೆಲಸದಲ್ಲಿ ಗಂಟುಬಿದ್ದಿರುವ ಯಾತನೆಯ ನೋವು ಮರೆಯಾಗುತ್ತಿಲ್ಲ. ಹೀಗೆ ಪ್ರತಿ ಯಾತನೆಯಲ್ಲೊಂದು ನೋವಿದೆ, ನೆನಪಿನಲ್ಲೊಂದು ಕರಾಳತೆಯಿದೆ.
ಮರೆತೆನೆಂದರೂ ಮರೆಯಾಗದೇ ಕಾಡುತ್ತಿದೆ. ಮರೆಯಬೇಕೆಂದುಕೊಂಡಷ್ಟು ಆ ನೆನಪುಗಳು ಗುಂಡಿಯೊಳಗೆ ಹೂತಿಟ್ಟ ಅವಶೇಷದ ಕಳೇಬರ ಎದ್ದುಬಂದು ಕಣ್ಣೆದುರಿಗೆ ಕುಣಿಯುವಂತೆ ನರ್ತಿಸುತ್ತಿದೆ.

ಮರೆವು ಇದು ವರವೂ ಹೌದು, ಶಾಪವೂ ಹೌದು. ಕಾಣದ ಶಕ್ತಿಯ ಭಗವಂತ ಮನುಷ್ಯನನ್ನು ಅದೆಂತಹ ಮಾಯಜಾಲದಿ ಸೃಷ್ಟಿಸಿದ್ದಾನೆ. ಕೋಟಿಗೆ ಮೀರಿದ ಮನುಷ್ಯ ಸಂಕುಲ, ಎಲ್ಲರೂ ಭಿನ್ನವೆ, ಎಲ್ಲರೂ ವಿಭಿನ್ನರೆ. ಯಾರಿಗಾರೂ ಹೋಲಿಕೆಯಿಲ್ಲ. ಆದ್ರೆ ಕೆಲವೊಂದನ್ನು ಮಾತ್ರ ಮನುಷ್ಯನಲ್ಲಿ ತುಂಬಿ ಕಳುಹಿಸಿದ್ದಾನೆ ಅದನ್ನು ಗೆಲ್ಲಲು ಆಗುತ್ತಿಲ್ಲ, ಅರಿಯಲು ಬರುತ್ತಿಲ್ಲ.

ಅಳು, ನಿದ್ರೆ, ಹಸಿವು, ಕಾಮ, ಆಸೆ, ಮರೆವು ಇವುಗಳನ್ನು ಮನುಷ್ಯ ತನ್ನೊಳಗೆ ರೂಢಿಸಿಕೊಂಡು ಬದುಕುತ್ತಿದ್ದಾನೆ.
ಮನುಷ್ಯ ಖಂಡಿತವಾಗಿಯೂ ಕೆಲವೊಂದನ್ನು ಮರೆಯಲೇ ಬೇಕು. ಆಂತರ್ಯದ ಅವಮಾನ,
ಅಂತರ್ಗತದ ಕಣ್ಣೀರು, ಕಷ್ಟದಲ್ಲಿ ಹೀಯಾಳಿಸಿದವರ ಚುಚ್ಚುಮಾತುಗಳು, ಎದೆಯೊಡೆದ ಕಟು ಸತ್ಯಗಳು,
ಸೋತು ಸುಣ್ಣವಾದ ಪ್ರಯತ್ನ, ಎಲ್ಲವೂ ನನ್ನದೆಂಬ ಸುಳ್ಳಿನ ಜಾಲ, ಬಿಟ್ಟುಹೋದವರ ನೆನಪುಗಳು,
ಕಾರಣವಿಲ್ಲದೆ ಗುದ್ದಾಡಿದ ಜಗಳ, ಕೋಪದ ಬುದ್ಧಿಗೆ ಆಡಿದ ಮಾತುಗಳು, ಎಂದೋ ಕನಸಿನಲ್ಲಿ ಕಂಡ ಭೀಭತ್ಸ
ಹೀಗೆ ಇದೆಲ್ಲವೂಗಳನ್ನು ಮನುಷ್ಯ ಮರೆಯಲೇಬೇಕು. ಮರೆತಿಲ್ಲವಾದರೆ ಅವನು ಮರೆಯಾಗುವವರೆಗೂ ಅದು ಅವನನ್ನೆ ಮರೆಸುತ್ತದೆ, ಹಿಂಸಿಸುತ್ತದೆ, ಕೊಲ್ಲುತ್ತದೆ, ಕಾಡುತ್ತದೆ.

ಅಮ್ಮನಿತ್ತ ಮುತ್ತು, ಮೊದಲು ಗೆದ್ದ ಮೆಡಲ್, ಸ್ನೇಹಿತರ ಜೊತೆ ನೋಡಿದ‌ ಸಿನಿಮಾ, ಕಟ್ಟೆಯ ಮೇಲೊಂದಿಷ್ಟು ಹರಟೆ, ಅಜ್ಜ ಕಲಿಸಿದ ನೀತಿ ಪಾಠಗಳು, ಅಜ್ಜಿ‌ ಕಲಿಸಿದ ಗಾದೆಗಳು, ಪ್ರೀತಿಸಿದವಳ ಜೊತೆ ಕಳೆದ ಮಧುರ ಕ್ಷಣಗಳು, ಕೊನೆಗೂ ಪಡೆದುಕೊಂಡ ರ‍್ಯಾಂಕ್‌, ಕಷ್ಟಪಟ್ಟು ಪಡೆದುಕೊಂಡ ಕೆಲಸ, ಮುದ್ದು ಮಗಳು ಅಪ್ಪ‌ ಎಂದ ಕೂಗು, ನಿಮ್ಮನ್ನು ಪಡೆದ ನಾನೇ ಪುಣ್ಯವಂತೆ ಎಂಬ ಹೆಂಡತಿಯ ಸಂತಸ, ನೆಮ್ಮದಿಯ ಉಸಿರು, ಅತ್ತಾಗ ಕಣ್ಣೊರೆಸಿದ ಕೈ, ಸೋತು ಬಿದ್ದಾಗ ಆಶ್ರಯ ನೀಡಿದ ಹೆಗಲು, ಯಾರೂ ಇಲ್ಲದಿದ್ದಾಗ ಜೊತೆಯಾದವರು, ಕಷ್ಟದಲ್ಲಿ ಕಟ್ಟಿದ ಬದುಕು, ಬಡತನದಲ್ಲಿ ಅನ್ನವಿಕ್ಕಿದ ಜೀವವನ್ನು ಮನುಷ್ಯ ಮರೆಯಲೇ ಕೂಡದು. ಇವೆಲ್ಲವೂಗಳನ್ನು ನೆನಪಿನಬುತ್ತಿಯಲ್ಲಿ ಜೋಪಾನ ಮಾಡಿಕೊಳ್ಳಬೇಕು.

ಬದುಕು ದೊಡ್ಡದು, ಈ ಬದುಕನ್ನು ಬದುಕಲೇಬೇಕು. ಕಷ್ಟಗಳಿದ್ದರೆ ಮರೆಯಬೇಕು, ಸಂತಸವಿದ್ದರೆ‌ ನೆನೆಯಬೇಕು. ನೆನ್ನೆಗಳ ಮರೆಯಬೇಕು, ನಾಳೆಗಳ ಹುಡುಕಬೇಕು. ಇಂದು ಜೀವಿಸಬೇಕು. ಕತ್ತಲೆಯ ನೆನಪುಗಳನ್ನು ಮರೆತು, ನಮ್ಮೊಳಗಿನ ಕೃತಜ್ಞತೆಯ ನೆನಪುಗಳ ಜೊತೆ ಬದುಕಬೇಕು.

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ಬ್ರೇಕಪ್ ಎಂಬ ಮೂರಕ್ಷರದ ಪದ ನೂರು ಜನುಮ ಸವೆಸಿದರೂ ಮುಗಿಯದ ನೋವಿನ ಹಾದಿ!

Exit mobile version