Site icon Vistara News

ಭಾವಲೋಕದೊಳ್‌ ಅಂಕಣ : ಕೊನೆಯದೊಂದು ಸಹಿ ಹಾಕಿ ಹೋಗುತ್ತೇನೆ, ನಿನ್ನ ಬಾಳು ಇನ್ನಾದರೂ ಸಿಹಿಯಾಗಿರಲಿ..

Bhavalokadol

#image_title

ನೆತ್ತಿ ಮೇಲಿನ ಸೂರ್ಯ ಸುಡು ಸುಡುವ ಬೆಂಕಿಯಾಗಿದ್ದಾನೆ. ಕೆಂಪು ಬಣ್ಣದಲ್ಲಿ ಕಳೆದುಹೋದ ಕಟ್ಟಡದಲ್ಲಿ ಕಪ್ಪು ಬಿಳುಪಿನ ಕೋಟ್ ಧರಿಸಿದ ವಕೀಲರು ತುಂಬಿ ಹೋಗಿದ್ದಾರೆ. ಹೊರಗಡೆಯಲ್ಲಿ ಒಂದೇ ಸಮನೆ ಗಿಜಿಗುಡುವ ಜನ. ಮೂಲೆಯಲ್ಲೊಂದು ಟೇಬಲ್‌ ಮೇಲೆ ಟೈಪಿಂಗ್ ಕುಟ್ಟುವ ಸದ್ದು. ಕೈಯಲ್ಲಿ ಫೈಲ್ ಹಿಡಿದ ವಕೀಲರು ತಮ್ಮ ಅಪ್ಲಿಕೇಶನ್‌ಗೆ ಸಹಿ ಹಾಕಿಸಿಕೊಳ್ಳುವ ಭರದಲ್ಲಿದ್ದಾರೆ. ಮಾಂಗಲ್ಯದಲ್ಲಿ ಬಂಧಿಯಾದ ಗಂಡ ಹೆಂಡತಿಯರು
ಬಂಧ ಕಳೆದುಕೊಳ್ಳಲು ಸಿದ್ಧವಾಗಿದ್ದಾರೆ. ಜಡ್ಜ್ ಒಂದು ಸಹಿ‌ ಹಾಕಿ ಕೇಸ್ ಕ್ಲಿಯರ್ ಮಾಡಿದ್ರೆ ಸಾಕ್ಷಿ ಹೇಳಲು ಅಗ್ನಿದೇವ ಬಂದರೂ ಆ ಬಂಧವನ್ನು ಮರಳಿ ಬೆಸೆಯಲಾಗದು.

‘You are lucky I say! ನಿಮ್ಮ ಹೆಂಡ್ತಿ ಜೀವನಾಂಶ ಏನು ಬೇಡ, ವಿಚ್ಚೇದನ ಕೊಟ್ಟರೆ ಸಾಕು ಅಂತ ಜಡ್ಜ್ ಮುಂದೆ ಹೇಳಿದ್ದಾರೆ. ಇಲ್ಲೊಂದು ಸೈನ್ ಮಾಡಿ‌ಬಿಡಿ ಎಲ್ಲ ಮುಗಿದೇ ಹೋಗುತ್ತದೆ’ ಎಂದು ಹೇಳುತ್ತಲೇ ಲಾಯರ್ ಕೈಗೊಂದು ಪೆನ್ನು ಕೊಟ್ಟು ಹೊರಟೇ ಹೋದ. ಪುಸ್ತಕಗಟ್ಟಲೇ ಅಕ್ಷರಗಳನ್ನು ಬರೆದ ನನಗೆ ಇದೊಂದು ಸಹಿ ಹಾಕಲು ಸಾಧ್ಯವೇ ಆಗುತ್ತಿಲ್ಲ. ನಿಜಕ್ಕೂ ಕೈಗಳು ನಡುಗುತಿವೆ. ಸಹಿ ಹಾಕಬೇಕಾದ ನನ್ನ ಹೆಸರೇ ಮರೆತಂತಾಗಿದೆ. ಎದೆ ಭಾವ ಬಿಗಿಯಾಗಿದೆ, ಇದೊಂದು ಸಹಿ ಹಾಕಿಬಿಟ್ಟರೆ ನಿಜಕ್ಕೂ ಎಲ್ಲವೂ ಮುಗಿದೇ ಹೋಗುತ್ತಾ ಎಂಬ ಪ್ರಶ್ನೆಯೊಂದು ಅಂತರಾಳದಲ್ಲಿ ಆವರಿಸಿದೆ!

ಇನ್ನೂ ಆ ಕ್ಷಣ ಕಣ್ಣಿಗೆ ಕಟ್ಟಿದಂತಿದೆ. ಮದುವೆ ಮನೆಯ ತುಂಬಾ ನೆಂಟರಿಷ್ಟರು ನೆರೆದಿದ್ದರು. ಮಂಟಪದ ಮುಂದುಗಡೆಯೇ ನನ್ನ ಸ್ನೇಹಿತ ಪಡೆ ಕೂತು ಹರಟೆ ಹೊಡೆಯುತ್ತಿತ್ತು, ಮುದ್ದು ತಂಗಿ ನನ್ನ ಹಿಂದೆಯೇ ನಿಂತು ಬೆಂಗಾವಲಾಗಿದ್ದಳು. ಅಪ್ಪನಿಗೆ ಬಂದು ಹೋಗುವವರ ಕಡೆಗೆ ಗಮನವಿದ್ದರೆ, ಅಮ್ಮನಿಗೆ ಶಾಸ್ತ್ರಗಳ ತಲೆಬಿಸಿಯಾಗಿತ್ತು. ಹಸೆಮಣೆ ಮೇಲೆ ಕೂತು ಯಜ್ಞ ಕುಂಡಕ್ಕೆ ಹವಿಸ್ಸು ನೀಡುತ್ತಿದ್ದ ಮನಸ್ಸು ಭಗವಂತನಿಗಿಂತ ಹೆಚ್ಚಾಗಿ ನಿನ್ನನ್ನೇ ನೆನೆಯುತ್ತಿತ್ತು. ನಿನ್ನನ್ನು ಯಾವಾಗ ನೋಡ್ತಿನೋ ಎಂದು ಕಾಯುತ್ತಿದ್ದ ಕ್ಷಣವದು.

ಕೊನೆಗೂ ಸುತ್ತಲೂ ಸ್ನೇಹಿತೆಯರ ಕೂಡಿಸಿಕೊಂಡು ಹಸೆಮಣೆಗೆ ನೀನು ಹೆಜ್ಜೆ ಹಾಕಿದೆ. ಕಡು ಕೆಂಪನೆಯ ಸೀರೆಯಟ್ಟ ನೀನು ಯಾವ ದೇವತೆಗೂ ಕಡಿಮೆ ಇರಲಿಲ್ಲ. ನಿನ್ನ ಸೀರೆಯ ಸೆರಗಿನಲ್ಲೇ ಸೌಂದರ್ಯವನ್ನೆಲ್ಲ ಇಳಿಬಿಟ್ಟಂತಾಗಿತ್ತು. ಮುಖಭಾವದಲ್ಲಿ ಅದೆಷ್ಟೇ ರಂಗು ಬಳಿದಿದ್ದರೂ ನಿನ್ನಯ ನಗುವೊಂದೆ ಎಲ್ಲವನ್ನೂ ಮೀರಿಸಿತ್ತು. How devine beauty she is ಅಂತ ಮನಸ್ಸಲ್ಲೆ ಅಂದುಕೊಂಡು ಸಂಭ್ರಮಿಸಿದ ಕ್ಷಣವದು.

ಕಿರುಬೆರಳು ಬೆಸೆದುಕೊಂಡ ಆ ಕ್ಷಣ…

ಪಕ್ಕಕ್ಕೆ ಬಂದು ಕೂತ ನಿನ್ನನ್ನು ನೋಡುತ್ತಲೇ ನಾನು ಹಿಗ್ಗಿ ಕುಣಿದಿದ್ದೆ. ನಾದಸ್ವರ ಮೊಳಗುತ್ತಿದ್ದಂತೆಯೇ ಮಾಂಗಲ್ಯ ಕೈನಲ್ಲಿ ಹಿಡಿದು ನಿನ್ನ ಸುತ್ತಳಿಸಿ ಕೊರಳಿಗೆ ಗಂಟು ಹಾಕುತ್ತಲೇ ಇದು ಬಿಡಿಸಲಾಗದ ಬಂಧವಾಗಲಿ ಎಂದು ಮನಸ್ಸಲ್ಲೇ ಹರಕೆ ಮಾಡಿಕೊಳ್ಳುತ್ತಿದ್ದೆ. ಕಣ್ಣಂಚಲ್ಲಿ ಸಂತಸಕ್ಕೋ ಸಂಭ್ರಮಕ್ಕೋ, ಸಾನಿಧ್ಯಕ್ಕೋ ಗೊತ್ತಾಗದಿದ್ದರೂ ಹನಿಯೊಂದು ರೆಪ್ಪೆಯಿಂದ ಜಾರಿತ್ತು.

ಇಷ್ಟು ಪ್ರೀತಿಸಿ ಸಂಭ್ರಮಿಸಿದ ಹೃದಯದ ಮೇಲೆ ದ್ವೇಷ ಮೂಡಿದ್ದಾದರೂ ಯಾವಾಗ ಎಂದು ನಿಜಕ್ಕೂ ನನಗೂ ಗೊತ್ತಾಗಲಿಲ್ಲ. ಬಹುಶಃ ಕಂಡಿದ್ದ‌ ಕನಸುಗಳೆಲ್ಲ ದೂರವಾಗಿದ್ದರ ಫಲವಿರಬೇಕು. ನಿನ್ನೆಡೆಗೆ ಕೊಪ್ಪರಿಕೆಯಷ್ಟು ತುಂಬಿದ ಪ್ರೀತಿ ಸಹ ಬರಿದಾಗಿತ್ತು. ಕೂತರೆ ತಪ್ಪು, ನಿಂತರೆ ತಪ್ಪು ಎಂದು ಮೂದಲಿಸುತ್ತಲೇ ಇದ್ದ ನಿನ್ನಯ ಗುಣಗಳು ನನ್ನನ್ನೇ ಹುಡುಕುವಂತಾಗಿತ್ತು. ಮೊದಲ ಬಾರಿಗೆ ಕಂಠಪೂರ್ತಿ ಕುಡಿದು ನನ್ನ ಬಗ್ಗೆ ನಾನೇ ಅವಲೋಕಿಸಿದರೂ ನೀನು ಕೊಟ್ಟ ದೋಷಪಟ್ಟಿಯಲ್ಲಿ ಒಂದು ಕೂಡ ಸರಿಯಲ್ಲ ಎನಿಸಿತು.

ಅದೆಷ್ಟು ನಾನಾಗಿದ್ದ ನಾನು ಕೂಡ ನಿನ್ನಯ ಮುಂದೆ ಬೊಂಬೆಯಾಗಿದ್ದೆ. ದಿನಕಳೆದಂತೆ ನನ್ನಡೆಗೆ ನೀ ತೋರಿದ ಅಸಹನೆ, ತಾತ್ಸಾರ ಹೇಳಲಾರದಷ್ಟು ಯಾತನೆಯಾಗಿತ್ತು. ಇನ್ನಾಗದು ಎಂದು ನೀನು ನನ್ನ ಬಿಟ್ಟು ತವರು ಸೇರಿದ ನಿನ್ನನ್ನು ಕಾಲು ಹಿಡಿದು ಬೇಡಿದರೂ ನೀ ಮಾತ್ರ ಬರಲು ಒಪ್ಪಲೇ ಇಲ್ಲ.

ನನ್ನವಳು ತಾನೇ ಬಾರದೆ ಎಲ್ಲಿಗೆ ಹೋದಾಳು ಎಂದು ಉಸಿರೆಳೆದುಕೊಳ್ಳುವಷ್ಟರಲ್ಲಿ ನನ್ನೊಡಲಿನ ಉಸಿರನ್ನೇ ನೀನು ನಿಲ್ಲಿಸಿದ್ದೆ. ನನ್ನಯ ಮೇಲಿನ ಮುನಿಸಿಗೆ ಗರ್ಭದಲ್ಲಿ ಚಿಗುರೊಡೆದಿದ್ದ ಕೂಸನ್ನೆ ಚಿವುಟಿ ಹಾಕಿದ್ದೆ. ಓಡಿ ಬಂದು ಶಪಿಸೋಣವೆಂದರೆ ಕೇಳುವ ಹಕ್ಕು ನಿನಗಿಲ್ಲ ಎಂದು ಬಾಗಿಲು ಮುಚ್ಚಿಬಿಟ್ಟೆ. I can’t resist this moment ಎಂದು ಮನದಲ್ಲೇ ಉದ್ಗರಿಸಿದ್ದು ಆಗಲೇ. ಸಾಕು ಇನ್ನು ಎಳೆದಾಡಿ ಜಗ್ಗಿದರೆ ಹರಿಯುವುದು ಮಾಂಗಲ್ಯದಾರ ಮಾತ್ರವಲ್ಲ ಸಂಬಂಧದ ಕೊಂಡಿ ಎಂದು ಅರಿತು ನೀ ಕಳುಹಿಸಿದ ವಿಚ್ಚೇದನಕ್ಕೆ ಸಹಿ ಹಾಕಲು ಬಂದು ನಿಂತಿದ್ದೇನೆ.

ಅನಾಥವಾಯಿತು ಪ್ರೀತಿ

ಈ ಕ್ಷಣಕ್ಕೂ ಇಲ್ಲಿಯವರೆಗೂ ಹೆಜ್ಜೆ ಹಾಕಿದ್ದು‌ ಎಲ್ಲವನ್ನೂ ಮುಗಿಸಿಕೊಂಡು ಹೋಗಲಿಕ್ಕಲ್ಲ. ನಿನ್ನನ್ನು ನೋಡಲು ಮತ್ತೊಂದು ಅವಕಾಶ ಸಿಕ್ಕಿತಲ್ಲ ಎಂದು. ಅದೆಷ್ಟೇ ನೀನು ದೂರಾ ಹೋದರೂ ನನ್ನ ಎದೆಗೂಡಿನಿಂದ ಮಾತ್ರ ಆಚೆ ಹೋಗಿಲ್ಲ. ಒಳ್ಳೆಯದಕ್ಕೋ, ಕೆಡುಕಿಗೋ ದಿನವೂ ನಿನದೆ ನೆನಪು. ಮೊನ್ನೆಯಷ್ಟೇ ನೀನು ಎರಡನೆಯ ಮದುವೆಯಾಗುತ್ತಿರುವ ವಿಷಯ ನಿನ್ನ ಸ್ನೇಹಿತರಿಂದ ತಿಳಿಯಿತಾದರೂ ನಿಜಕ್ಕೂ ಆ ನಿರ್ಧಾರ ನಿನ್ನದಾ ಎಂಬ ಪ್ರಶ್ನೆ ಎದೆ ಹಿಂಡಿದೆ. ಪಥ ಬದಲಿಸಿಕೊಂಡು ಬದುಕು ಕಟ್ಟ ಹೊರಟಿರುವ ನಿನಗೆ ಮತ್ತೊಮ್ಮೆ ನೋವು ಸಿಗದಿರಲಿ. ನನ್ನಲ್ಲಿ ಸಿಗಲಿಲ್ಲವೆಂದೂ ಹುಡುಕಿ ಹೊರದಬ್ಬಿದ ನಿನಗೆ ಆ ಜೀವದಲ್ಲಾದರೂ ನೆಮ್ಮದಿ ಸಿಗಲಿ. ಆದರೆ ಅವನಲ್ಲಿ ನನ್ನನ್ನು ಹುಡುಕುವ ಪ್ರಯತ್ನ ಮಾತ್ರ ಮಾಡಬೇಡ!

ನಡುಗುವ ಕೈಯಲ್ಲೇ ಕೊನೆಯದೊಂದು ಸಹಿ ಹಾಕಿ ಹೊರಡುತ್ತೇನೆ, ನನ್ನಯ ಕೂಸು ಹೋದ ಜಾಗಕೆ!

ಸೋತು ಹೋದ ಹೃದಯಕೆ ನೆನಪುಗಳೇ ದೀವಟಿಗೆ!
ಮುರಿದ ಹೋದ ಹಡಗಿಗೆ ಸಾಗರವೇ ಸಾನಿಧ್ಯ !
ಬಂಧ ಮುಗಿದರೂ ಭಾವ ತೀರದು !
ಬಣ್ಣ ಬದಲಾದರೂ ಬದುಕು ಬದಲಾಗದು!

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ!

Exit mobile version