Site icon Vistara News

ಭಾವಲೋಕದೊಳ್‌ ಅಂಕಣ : ಕ್ಷಮಿಸಿ ಇದು ಒನ್‌ ವೇ.. ಇಲ್ಲಿ ತಿರುಗಿ ಬರುವಂತಿಲ್ಲ.. ಕೇವಲ ತಿರುಗಿ ನೋಡಬಹುದು ಅಷ್ಟೆ!

love

#image_title

ಜಗತ್ತಿನಲ್ಲಿ ಕೆಲವೊಂದಕ್ಕೆ ಕೇವಲ ಒನ್ ವೇ ಮಾತ್ರ ಸೃಷ್ಟಿಯಾಗಿರುತ್ತದೆ. ಹುಟ್ಟು, ಸಾವುಗಳ ಹಾಗೆ ಕೇವಲ ಒಂದೇ ಟ್ರ್ಯಾಕ್‌ನಲ್ಲಿ ಸಾಗಿಬಿಡುತ್ತದೆ. ಆದರೆ ಕೆಲವೊಂದ್ಸಲ ಮಾತ್ರ ಆ ಟ್ರ್ಯಾಕ್‌ನಲ್ಲಿ ಎಷ್ಟೇ ದೂರ ನಡೆದುಹೋದರೂ ಒಮ್ಮೆ ತಿರುಗಿ ನೋಡಿದಾಗ ನಿಂತಲ್ಲೇ‌ ಉಳಿದುಬಿಟ್ನಲ್ಲ ಎಂಬುದರ ಅರಿವಾಗುತ್ತದೆ. And there is no space to comeback we already gone through that journey and we enjoyed our moments. ಆ ಒಂದೇ ಟ್ರ್ಯಾಕ್‌ನಲ್ಲಿ ಸಾಗುವ ಕೆಲ ಮಧುರ ಕ್ಷಣಗಳು ಬದುಕನ್ನೇ ತುಂಬುವಷ್ಟು ಸುಂದರವಾಗಿರುತ್ತದೆ.

ಒಂದ್ಸಲ‌ ನಿಮ್ಮನ್ನು ನೀವೇ ಕೇಳಿಕೊಳ್ಳಿ.. ನೀವೂ ಆ ಒನ್ ವೇ ಟ್ರ್ಯಾಕ್‌ ಲೈಫ್‌ನಲ್ಲಿ ಬದುಕಿದ್ದೀರಾ ಅಂತ! ಬದುಕಿದ್ದರೆ ಖುಷಿ ಪಡಿ‌, ಬೆಟ್ಟದಷ್ಟು ಆಸೆ ಹೊತ್ತ ಅನುಭವ ನೀಡಿದ್ದು ಅದೇ ಒನ್ ವೇ ಟ್ರ್ಯಾಕ್‌. ಸಾಯುವಷ್ಟು ಒಂಟಿತನ ಕಳೆದದ್ದು ಅದೇ ಒನ್ ವೇ ಟ್ರ್ಯಾಕ್‌. ಬದುಕಿಲ್ಲ ಅಂದ್ರೆ ನೀವು ಬದುಕಿನ ಅತಿ ದೊಡ್ಡ ಅವಕಾಶ ಕಳೆದುಕೊಂಡಿದ್ದೀರಿ ಎಂದೇ ಅರ್ಥ. ಲೈಫ್‌ನಲ್ಲಿ ಆ ಒನ್ ವೇ ಟ್ರ್ಯಾಕ್‌ನಲ್ಲಿ ಸಾಗುವ ಅತಿದೊಡ್ಡ ಜರ್ನಿ ಅಂದ್ರೆ ಅದು ಒನ್ ವೇ ಲವ್ವು! Yes! ಕೇವಲ ಒಂದೆಡೆಯಿಂದ ಮಾತ್ರ ಪ್ರೀತಿಸುವುದು. ಅದು ಹುಡುಗನೇ ಆಗಿರಲಿ, ಹುಡುಗಿಯೇ ಆಗಿರಲಿ. ತನ್ನ ಪ್ರೀತಿಯನ್ನು ಹೇಳಲು ಆಗದೆ, ಹೇಳದೆ ಉಳಿಯಲು ಆಗದೆ ತಮ್ಮೊಳಗೆ ಆ ಪ್ರೇಮದ ಜೊತೆಗೆ ಬದುಕುವುದಿದೆಯಲ್ಲ, ಅದೊಂದು ಧ್ಯಾನ, ಆರಾಧನೆ, ಅಪೇಕ್ಷೆಗಳಿಲ್ಲದ ನಿಸ್ವಾರ್ಥ!

ಆ ಒನ್ ವೇ ಲವ್‌ ಎಲ್ಲಿಂದ ಆರಂಭ ಅಂತ ಕೇಳಿದರೆ ಗೊತ್ತಿಲ್ಲ ಅನ್ನೋ ಉತ್ತರವೇ ಸಿಗುತ್ತೆ. ಪಕ್ಕದ‌ ಮನೆಯ ಹುಡುಗಿಯ ಮುಗ್ಧತೆ, ಬಸ್ ಸ್ಟಾಪ್‌‌ನಲ್ಲಿ ಕಂಡ ಅವಳ ನೋಟ, ದೇವಸ್ಥಾನದ ಪ್ರಾಂಗಣ ಸುತ್ತುತ್ತಿದ್ದ ಅವಳ ಭಕ್ತಿ, ಕ್ಲಾಸ್ ರೂಂ‌‌‌ನಲ್ಲಿ ಪಕ್ಕದಲ್ಲೇ ಕೂರುವ ಅವಳ ಗೆಳೆತನ, ಎದುರಿಗಿನ ಹಾಸ್ಟೆಲ್‌ ಕಿಟಕಿಯೊಳಗಿನ ಅವಳ ಸೌಂದರ್ಯ, ಸದಾ ಪ್ರೀತಿಸುವ ಅವಳ ಒಲವು ಇಷ್ಟಕ್ಕೆ ಎಂದು ಹೇಳಲು ಪ್ರಯತ್ನಿಸಿದರೂ ಅದೆಲ್ಲವನ್ನೂ ಮೀರಿದ ಯಾವುದೋ ಒಂದಂಶ ಅವೆಳೆಡೆಗೆ ಹಿಡಿದು ನಿಲ್ಲಿಸಿದೆ.

ಅವಳಿಗೂ ಹಾಗೇ ಅಲ್ಲವೇ! ಗ್ಯಾಂಗ್ ಕಟ್ಕೊಂಡು ಓಡಾಡೋ ಅವನ ರಗಡ್, ಸಿಗರೇಟು ಎಳೆಯುವ ಸ್ಟೈಲ್, ಸದಾ ಮುಗ್ಧತೆ ತುಂಬಿರುವ ಕಣ್ಣು, ಸದಾ ಹರಟುವ ಬಾಯಿ, ಜಿದ್ದಿಗೆ ಬಿದ್ದವನಂತೆ ಗೆಲ್ಲುವ ಛಲ, ಕಾಲೇಜ್‌ನಲ್ಲಿ ಕೇಳಿದ ಅವನ ಹಾಡು, ಕ್ಯೂ‌ನಲ್ಲಿ ನಿಂತಿದ್ದ ಅವನ ನೋಟ, ಮೊದಲ ಪ್ರಮೋಷನ್‌‌ನಲ್ಲಿ ಗೆದ್ದನೆಂಬ ನಂಬಿಕೆಗಳೇ ಅವನೆಡೆಗೆ ಅವಳನ್ನು ಮಂತ್ರಮುಗ್ಧಳನ್ನಾಗಿಸಿದೆ. ಅವನೆಡೆಗೋ, ಅವಳೆಡೆಗೋ ಹೀಗೆ ಕಾರಣವೇ ಇಲ್ಲದೆ ಬೆಳೆದು‌ ನಿಂತ ಪ್ರೀತಿ, ಪ್ರೇಮಕೆ ನಾಮಕರಣ ಮಾಡಿ ಅವರೆದುರು‌ ನಿಂತು ಘೋಷಿಸಿಬಿಡುವ ಧೈರ್ಯ ಮಾತ್ರ ಬಾರದು.

ಮೊಬೈಲ್‌‌ಗೆ ಸಾವಿರ ಮೇಸೇಜ್ ಬಂದರೂ ಪ್ರೀತಿಸಿದವರ ಒಂದೇ ಒಂದು ಮೆಸೇಜ್‌ಗಾಗಿ ಇಡೀ ದಿನ ಕಾದು ಕುಳಿತಿರ್ತೇವೆ. ಗುಡ್ ಮಾರ್ನಿಂಗ್ ಮೆಸೇಜ್ ಪಕ್ಕದ ಸಣ್ಣ ಹಾರ್ಟ್ ಇಮೋಜಿ ದಿನ ಶುರುಮಾಡಲು ಚಾಲನೆ ಕೊಡುತ್ತದೆ. ಅದೆಷ್ಟೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಅವರ ಮಾತಿಗೆ ಕಿವಿಯಾಗುತ್ತೇವೆ. ಕೇವಲ ಎದುರು ಕೂತು ಅವರೆಡೆಗಿನ ನೋಟದಲ್ಲೆ ಮನ್ವಂತರ ಕಳೆದುಬಿಡುವಷ್ಟು ನೆಮ್ಮದಿ ಸಿಕ್ಕು ಬಿಡುತ್ತದೆ. ಯಾವುದೋ ಕಾರಣಕೆ ಒಂದಿಷ್ಟು ದೂರದಾರೂ ಆತ್ಮವೇ ಚೂರಾದಂತೆ ಚಡಪಡಿಕೆ ಶುರು. ಕಣ್ಣ ಮುಂದೆ ನೋಡುವವರೆಗೂ ಎದೆತಳದಲ್ಲಿನ ಹೃದಯ ಮಾತು ಕೇಳದೆ ಮಂಕಾಗಿರುತ್ತದೆ. ಬೈದರೂ ಚೆಂದ, ಸಿಟ್ಟಾದರೂ ಚೆಂದ ತೋರುವ ಪ್ರತಿ ಕಾಳಜಿಯು ಎದೆಯಲ್ಲಿ ಅಚ್ಚಳಿಯದೆ ನೆನಪುಗಳಾಗುತ್ತದೆ.

ಅದೊಂದು ಸುಂದರ ಪಯಣ. ಆ ಪ್ರೀತಿಯಲ್ಲಿ ಸಣ್ಣ ಸ್ಪರ್ಶಕ್ಕೆ ಸಾವಿರ ಸಾಕ್ಷಾತ್ಕಾರವಿದೆ, ಮೌನದಲ್ಲೇ ಸಾವಿರ ಸಂಭಾಷಣೆಗಳಿವೆ. ನೋಟದಲ್ಲೇ ಪ್ರೇಮದ ಆಲಿಂಗನವಿದೆ, ನಿಶ್ಶಬ್ಧದಲ್ಲಿ ನೀರವ ಪ್ರೇಮವಿದೆ, ಎದುರಿಗೆ ಕಂಡರೆ ಹಿಗ್ಗುವ ಸಂತಸವಿದೆ, ಯಾವಾಗ ಕಾಣಿಸುವರೋ ಎಂಬ ಕೌತುಕವಿದೆ, ಒಂದು ಹೆಜ್ಜೆ ಜೊತೆಗೂಡಲು ಲಕ್ಷ ಕಾಯುವಿಕೆಯಿದೆ, ಹೇಳಿಬಿಡಲೇ‌ ಎಂಬ ಆತುರತೆಯಿದೆ, ಹೇಳದೆ ಉಳಿಯುವ ಭಯವಿದೆ, ಕಳೆದುಕೊಳ್ಳುವ ಆತಂಕವಿದೆ, ಏನೂ ಮಾಡಲಾಗದ ಅಸಹಾಯಕತೆಯಿದೆ, ಅನಿವಾರ್ಯತೆ ಮೀರಿದ ಸೋಲಿದೆ, ಎದುರು‌ ನಿಲ್ಲುವ ಶಕ್ತಿಯ ಕೊರತೆಯಿದೆ, ಪ್ರೀತಿಸಿಬಿಡು ಎಂದು ಬೇಡುವ ಅವಶ್ಯಕತೆಯಿದೆ.

ಅಲ್ಲಿ ಕೇವಲ ಪ್ರೀತಿಗೆ ಮಾತ್ರ ಜಾಗ. ಅಲ್ಲಿ ಪ್ರೀತಿಯ ಹೊರತಾಗಿ ಬೇರೇನೂ ಬೇಕಿಲ್ಲ. ಆ ಪ್ರೀತಿ ಒಳ್ಳೆಯದಾ, ಕೆಟ್ಟದಾ ಎಂದು ಕೇಳಿದರೆ ಅದು ಪ್ರೀತಿಯಷ್ಟೇ. ಏನೇನೂ ಇಲ್ಲದೇ ಕನಿಷ್ಠ ಎದುರಿಗಿನವರು ಪ್ರೀತಿಸುತ್ತಾರೋ ಇಲ್ಲವೋ ಎಂಬ ಸಣ್ಣ ಸ್ಪಷ್ಟತೆಯೂ ಇಲ್ಲದೇ ಅವರನ್ನೆ‌‌ ಹಚ್ಚಿಕೊಂಡು ಪ್ರೀತಿಸುವ ಹುಚ್ಚು. ಅದಕ್ಕೆ ಅಸ್ತಿತ್ವವಿಲ್ಲ, ಕನಿಷ್ಠ ನಂಬಿಕೆಯೂ ಇಲ್ಲ. ಎಲ್ಲದರಲ್ಲೂ ಗ್ಯಾರಂಟಿ ಕೇಳುವ ಮನುಷ್ಯ ಇದೊಂದು ವಿಚಾರದಲ್ಲಿ ಗ್ಯಾರಂಟಿಯ ಮಾತಿರಲಿ ವ್ಯಾಲಿಡಿಟಿಯ ಮಾತು ಮರೆತಿರುತ್ತಾನೆ.

ಅವಳೋ, ಅವನೋ ನಿನ್ನ ಲವ್ ಮಾಡ್ತಾನಾ ಎಂಬ ಪ್ರಶ್ನೆಗೆ ಗೊಂದಲಕ್ಕೆ ಬಿದ್ದಂತೆ ಉತ್ತರ ಹುಡುಕುವ ಪ್ರಯತ್ನ ಮಾಡಿದರೂ ಅದಕ್ಕೆ ಅಂತಿಮ ಉತ್ತರ ಸಿಗದು. ಇಡೀ ಬದುಕಿನುದ್ದಕ್ಕೂ ಆ ಪ್ರೇಮ ನಿವೇದನೆ ಮಾಡಲಾಗಲಿಲ್ಲವಲ್ಲ ಎಂಬ ಕೊರಗಿನ ಜೊತೆಗೆ ಬದುಕಿಗಾಗುವಷ್ಟು ಪ್ರೇಮವನ್ನು ಪಡೆಯದೇ ಬಿಟ್ಡು ಹೋದರಲ್ಲ ಎಂಬ ಯಾತನೆ.
ಹೇಳದೆ ಶುರುವಾದ ಒನ್ ವೇ ಜರ್ನಿ ಡಬಲ್ ವೇ ತಲುಪವ ಮುನ್ನವೇ ಡೆಡ್ ಎಂಡ್‌….

ಇದನ್ನೂ ಓದಿ : ಭಾವಲೋಕದೊಳ್..‌ : ಈ ಹಾಡೆಂದರೆ, ಬದುಕನು ರಮಿಸೋ ತಾಯಮ್ಮ, ಹೃದಯದ ಮಾತಿನ ಗುಂಗಮ್ಮ!

Exit mobile version