Site icon Vistara News

ಭಾವಲೋಕದೊಳ್‌ ಅಂಕಣ : ಮಕ್ಕಳ ನೆರಳಿಗೂ ಕಷ್ಟ ಬರದಂತೆ ಕಾಪಾಡುವ ದೇವರಲ್ಲವೇ ಅಮ್ಮ?

Mother

#image_title

ಅವಳು ಸಂಬಂಧದಲ್ಲಿ ಅಮ್ಮ, ಆದರೆ ಅದನ್ನೂ ಮೀರಿದ ಮುದ್ದು ಕಂದಮ್ಮ.
ಜಗತ್ತಿನ ಮಮತೆಯನ್ನೆಲ್ಲ ತನ್ನೊಳಗೆ ತುಂಬಿಕೊಂಡಿರುವಳೇನೋ ಅನ್ನುವಷ್ಟು ಮುಗ್ಧ ಜೀವ.
ಒಳಿತು ಕೆಡುಕುಗಳ ಕಂಡವಳು ಮಕ್ಕಳಿಗೆ ಮಾತ್ರ ಒಳಿತನ್ನೇ ಬಯಸುತ್ತಾಳೆ, ಅದಕ್ಕಾಗಿಯೇ ಬದುಕುತ್ತಾಳೆ.
ಅವಳಿಗೆ ಮಕ್ಕಳೇ ಪ್ರಪಂಚ. ಒಂದು ಹೊತ್ತು ಅನ್ನವಿರದಿದ್ದರೂ ತಡೆದುಬಿಡ್ತಾಳೆ, ಮಕ್ಕಳ ಕಣ್ಣಲ್ಲಿ ಒಂದು ಹನಿ ನೀರು ಬಂದರೆ ಸಹಿಸಲಾರಳು. ಮಕ್ಕಳ ಮೇಲಿನ ನೆರಳಿಗೂ ಕಷ್ಟ ಬಾರದಂತೆ ಕಾಪಾಡುತ್ತಾಳೆ.
ಅಮ್ಮನೆಂಬ ಅಪೂರ್ವ ಜೀವ, ಜೀವಾಳವನ್ನು ಪ್ರೀತಿಸದವರು ಯಾರಿದ್ದಾರೆ ಹೇಳಿ!?.

ಕೋತಿ ಮರಿಯೊಂದು ತನ್ನ ಹೆತ್ತಮ್ಮನ ಗರ್ಭಚೀಲವನ್ನು ಬಿಗಿ ಹಿಡಿದಿಟ್ಟುಕೊಳ್ಳುವಂತೆ‌ ನಾವು ಅಮ್ಮನ ಮಡಿಲಲ್ಲಿ ಬೆಚ್ಚಗಿರಲು ಬಯಸುತ್ತೇವೆ. ಅವಳೆಂದರೆ ಅದೇನೋ ಒಲವು, ಸೆಳೆತ, ಹಂಬಲ, ಸಂಭ್ರಮ. ಕನಸು, ಜಗತ್ತು, ಜೀವನ,
ಉಸಿರು, ಶಕ್ತಿ, ಭಕ್ತಿ, ಬದುಕು, ಸರ್ವಸ್ವ, ಸರ್ವವೂ ಅವಳೇ. ಅಮ್ಮ ಅಂದ್ರೇನೆ ಅದೊಂದು ಪರಿಪೂರ್ಣತೆ.

ಒಂಭತ್ತು ತಿಂಗಳು ಒಬ್ಬಂಟಿಗನಾಗಿ ಕೈ‌ಕಾಲು ಬಿಗಿ ಹಿಡಿದು, ಅವಳೆದೆಯ ಹೃದಯಬಡಿತದ ಆಲಾಪವನ್ನೇ ಕೇಳುತ್ತಿದ್ದವರು ಒಮ್ಮೆಲೇ ಹೊರಬಂದು ಅತ್ತುಬಿಡುತ್ತೇವೆ. ಹೊರ ಪ್ರಪಂಚದ ವಾತಾವರಣಕ್ಕೆ ಕಂದಮ್ಮ ಅಳುತಿದೆ ಎಂದು ಡಾಕ್ಟರ್ ಸಮಜಾಯಿಷಿ ಕೊಟ್ಟರೂ ಆದರೆ ಅವಳೊಳಗೆ ಕುಳಿತುಕೊಂಡು ಅವಳ ಹೃದಯದೊಂದಿಗೆ ಮಾತಾಡುವ ಸಾನಿಧ್ಯ ಕಳೆದುಹೋಯ್ತಲ್ಲ ಎಂದು ನಾವು ಕೊರಗಿ‌ ಕಣ್ಣಿರಾಗುವ ಕ್ಷಣವದು.

ಬದುಕೆಂಬ ಹೋರಾಟದಲ್ಲಿ ಅದೆಷ್ಟೋ ಸೋಲು, ಸವಾಲುಗಳನ್ನು ಉಂಡು ಕೈಲಾಗದು ಎಂದು ಕುಸಿದುಬಿದ್ದಾಗ ಅಮ್ಮನ‌ ಅಪ್ಪುಗೆಯೊಂದೇ ಧೈರ್ಯದ ಶಕ್ತಿ ತುಂಬುತ್ತದೆ. ಅವಳೇನು ಕಡಿಮೆ ಅನುಭವಿಸಿದ್ದಾಳಾ!?

ಬಡತನ, ಅವಮಾನ, ಅಪ್ಪನ ಕಾಟ, ಅಜ್ಜಿಯ ಹೊಡೆತ, ಸಂಬಂಧಿಕರ ಕಿರುಕುಳ, ಖಾಲಿ ಕೈ, ಹಸಿದ ಹೊಟ್ಟೆ, ದಣಿದ ದೇಹ, ನೊಂದ ಜೀವ, ಬರಿದಾದ ಬದುಕು, ಉಡಲೊಂದು ಸೀರೆ, ಸೀರೆಯ ಬಣ್ಣದಲ್ಲೇ ಮಾಸಿ ಹೋದ ಕನಸು, ಕನಸುಗಳ ಕಾಣುವುದೇ ಮರೆತ ಮರೆವು ಅದೆಷ್ಟೋ ಬಿರುಕುಗಳು ಅವಳ ಜೀವನವನ್ನೇ ಛಿದ್ರವಾಗಿಸಿದೆ.
ಆದರೂ ಗಟ್ಟಿಯಾಗಿ ಕಾಲೂರಿ ನಿಂತಿದ್ದಾಳೆ.

ಬಿದ್ದ ಪ್ರತಿ ಇಟ್ಟಿಗೆಯನ್ನು ಮತ್ತೆ ಜೋಡಿಸಿ ಕಟ್ಟಿದ್ದಾಳೆ. ಮಡಿಲೊಳಗಿನ ಮಕ್ಕಳು ಕೈಗೆ ಬಂದರೆ ಕಟ್ಟಿದ ಇಟ್ಟಿಗೆಗಳ ಗೋಪುರಕ್ಕೊಂದು ಮನೆಯ ರೂಪ ಕೊಡುತ್ತಾರೆನೋ, ತನ್ನನ್ನು ಒಂದಿಷ್ಟು ಹೊತ್ತು ಕೂರಿಸಿ ಅನ್ನವಿಕ್ಕುತ್ತಾರೆನೋ ಎಂದು ಕೊನೆಯ ಹೆಜ್ಜೆಯನ್ನಿಡುತ್ತಿದ್ದಾಳೆ.

ಜಗತ್ತಿನ ಎಲ್ಲ ಅಮ್ಮಂದಿರ ಕಷ್ಟಗಳು ಒಂದೇ‌. ಆದರೆ ಆ ಯಾತನೆಯ ರೂಪಗಳು ಬೇರೆ‌. ಕಷ್ಟಗಳನ್ನು ಅನುಭವಿಸುವ ದಾರಿ ಬೇರೆ. ಅಮ್ಮನೆಂಬ ಅದೊಂದು ರೂಪ ಧರೆಗಿಳಿದು ಬಂದ ದೇವತೆ. ಅದೊಂದು ವ್ಯಕ್ತಿ, ಶಕ್ತಿ. ಅದು ಇರದಿದ್ದರೆ ಏನಾಗಿರುತ್ತಿತ್ತು ಈ ಬದುಕು!?

ಮೂರು ದಿನದ ಎಳೆಯ ಕಂದಮ್ಮನನ್ನು ಹೆಗಲಿಗೆ ಜೋಳಿಗೆ ಕಟ್ಟಿಕೊಂಡು ಹಸಿ ಮೈಯಲ್ಲೇ ಇಟ್ಟಿಗೆ ಹೊರುವ ಗಾರೆ ಕೆಲಸದವಳ ತಾಯ್ತನವೇ ದೇವರು. ವಯಸ್ಸು 70 ಆದರೂ ಮನೆಮನೆಗೂ ತಿರುಗಿ ಅಡುಗೆ‌ ಮಾಡಿ, ಮುಸುರೆ ತಿಕ್ಕಿ ಕೈಯಗಲದ ಕಾಸು ತಂದು ಮಗನ ಕೈಗಿಟ್ಟು ‘ನಿನಗೆ ಉಪ್ಯೋಗ ಆಯ್ತಾದ ನೋಡ್ಮಗ’ ಎನ್ನುವವಳು ಅಮ್ಮ. ಬದುಕೆಲ್ಲ ದುಡಿದು ಬಸವಳಿದಿದ್ದರೂ ಇನ್ನೊಂದಿಷ್ಟು ದುಡಿದು ಮಗನ ಕಷ್ಟ ಕಳೆವ ಭಾವವೇ ದೇವರು.

ಮೂರು ದಿನ ಜ್ವರದಲ್ಲೇ ನರಳಿದ್ದರೂ ಗೊತ್ತೇ ಆಗದೆ ಬದುಕುವ ಅವಳು ಮಕ್ಕಳು ಒಂದು ಹೊತ್ತು ನರಳುವಷ್ಟರಲ್ಲಿ ಆಸ್ಪತ್ರೆಯ ಬಾಗಿಲಲ್ಲಿ ನಿಂತು ಡಾಕ್ಟರ್‌ನ ಮುಂದೆ ಶರಣಾಗಿರುತ್ತಾಳೆ. ಅವಳ ಶರಣಾಗತಿಯ ಕಣ್ಣಲಿದ್ದವನೇ ದೇವರು. ಅಕ್ಷರದ ಪರಿವೇ ಇಲ್ಲದವಳು ಮಕ್ಕಳಿಗೊಂದಿಷ್ಟು ಪುಸ್ತಕ ಕೊಟ್ಟು, ಕಾಲೇಜು ಮೆಟ್ಟಿಲು ಹತ್ತಿಸುವುದೇ ಬದುಕಿನ ಸಾಕ್ಷಾತ್ಕಾರವೆಂದುಕೊಂಡಿದ್ದಾಳೆ. ಅವಳ ತ್ಯಾಗದ ಸಾಕ್ಷಾತ್ಕಾರದಲ್ಲಿ ದೇವರಿದ್ದಾನೆ. ಕಾಶಿ, ಧರ್ಮಸ್ಥಳಕ್ಕೆ ಹೋಗಲು ಹುಂಡಿಗೆ ದುಡ್ಡು ತುಂಬಿದವಳು ಮಕ್ಕಳ‌ ಸಣ್ಣ ಬಯಕೆಗೆ ಹುಂಡಿ ಒಡೆದು ಚಿಲ್ಲರೆ ಕಾಸಿನ ಗಂಟನ್ನೇ ಮಕ್ಕಳ ಕೈಗಿಡುವ ಅವಳ ತ್ಯಾಗದಲ್ಲೇ ಮೋಕ್ಷವಿದೆ, ದೈವವಿದೆ.

ಅಮ್ಮ ಎಂಬ ಪದದಲ್ಲೇ ತ್ಯಾಗಮಯಿ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ಅವಳ ಒಡಲಲ್ಲೂ ಬಯಕೆಗಳಿವೆ, ಆಸೆಗಳಿವೆ. ಆದರೆ ಅದೆಲ್ಲವೂ ಪ್ರೀತಿಯ ಸರಳರೇಖೆಯಲ್ಲಿ ಅಡಗಿ ಕುಳಿತಿದೆ. ತಾನು ಮಾಡಿದ ಅಡುಗೆಯನ್ನು ಮಕ್ಕಳು ಚಪ್ಪರಿಸಿ ಉಣ್ಣಬೇಕು, ಬರುವ ದೀಪಾವಳಿಗಾದರೂ ರೇಷ್ಮೆ ಸೀರೆ ಕೊಳ್ಳಬೇಕು, ಮುದ್ದು ಮಕ್ಕಳು ತನ್ನ ಗಂಡನನ್ನು ಗೌರವಿಸಬೇಕು, ಮಗನ ಬೈಕ್‌‌ನಲ್ಲಿ ಹಿಂದೆ ಕೂತು ಮಾರ್ಕೆಟ್ ಬೀದಿ ಸುತ್ತಬೇಕು.
ಮಗಳ ಜಡೆ ಹೆಣೆದು ಹೂ‌ವು ಮುಡಿಸಬೇಕು, ಮನೆಯವರ ಜೊತೆಗೂಡಿ ಸಿನಿಮಾ ನೋಡಿ ವಿದ್ಯಾರ್ಥಿ ಭವನ್‌ ದೋಸೆ ರುಚಿಯ ಸವಿಯಬೇಕು. ಮಕ್ಕಳ ಗೆಲುವು ಸಂಭ್ರಮಿಸಬೇಕು, ಮೊಮ್ಮಕ್ಕಳ ಎತ್ತಿ ಮುದ್ದಾಡಬೇಕು.
ಕಣ್ಣ‌ ಮುಂದೆಯೇ ಮಕ್ಕಳ ಸಂತೋಷಕ್ಕೆ ಸಾಕ್ಷಿಯಾಗಬೇಕು. ಅವಳ ಎಲ್ಲ ಬಯಕೆಗಳಲ್ಲೂ ಇನ್ನೊಬ್ಬರ ಖುಷಿಯಿದೆ. ಮತ್ತೊಬ್ಬರ ಗೆಲುವು, ಸಂತೋಷ, ಸಂಭ್ರಮಗಳನ್ನು ಬಯಸುವವಳೇ ಅಮ್ಮ….

ಅದೆಷ್ಟೇ ಬೆಳೆದು ನಿಂತರೂ ಅದೊಂದು ಅಪೂರ್ವ ಪ್ರೇಮವನ್ನು ಮೀರಿಸುವ ಇನ್ನೊಂದು ಭಾವ, ಜೀವ ಸಿಗಲೇ ಇಲ್ಲ. ಎಷ್ಟೇ ಸಂಬಂಧಗಳು ಸಿಕ್ಕು ಬದುಕು ತುಂಬಿದರೂ ಅವಳೊಬ್ಬಳಿಲ್ಲದಿದ್ದರೆ ಎಲ್ಲವೂ ಖಾಲಿ ಖಾಲಿ. ಬೆಳಗ್ಗೆ ಕಣ್ತೆರೆದು ಹೊರಬೀಳುವುದರಿಂದ ರಾತ್ರಿ ಕತ್ತಲೆಯ ಗೂಡು ಸೇರುವವರೆಗೂ ಅವಳೊಬ್ಬಳ ಗೈರು ಜೀವ ಹೀರಿಬಿಡುತ್ತದೆ. ತುತ್ತು ಅನ್ನ ತಿನಿಸುವುದರಿಂದ, ಪೂರ್ಣಿಮೆಯ ಚಂದ್ರನ ಬೆಳದಿಂಗಳಲ್ಲಿ ಮಡಿಲು ನೀಡಿ ಜೋಗುಳ ಹಾಡುವವರೆಗೂ ಅವಳ ಸ್ಥಾನ ಯಾರಿಗೂ ತುಂಬಲು ಸಾಧ್ಯವಾಗಲಿಲ್ಲ. ವರುಷ ಕಳೆದಂತೆ ಬೆಳೆದುದರ ಸಂಭ್ರಮಕ್ಕಿಂತ ಕೊರಗು ಹೆಚ್ಚಾಗಿದೆ, ಅಮ್ಮನ ಮಡಿಲಲ್ಲೆ ಇದ್ದಿದ್ದರೆ ಅವಳಿಂದ ಕೊಂಚ ದೂರವಾದೊಡನೇ ಅಮ್ಮಾ……
ಎಂದು ಹಠ ಹಿಡಿದು ಮತ್ತೆ ಓಡಿ ಮಡಿಲು ಸೇರಬಹುದಿತ್ತು…..

ಬರಿದಾಗದ ಪ್ರೇಮದಲ್ಲೇ ಬದುಕಿದವಳು…
ತನಗಾಗಿ ಕ್ಷಣ ಕೂಡ ಚಿಂತಿಸದೇ ಕಾಲ ಕಳೆದವಳು…
ಉಸಿರಲ್ಲಿ ಉಸಿರಾಗಿ ಮಕ್ಕಳ ಪೊರೆದವಳು…
ಉಳಿದವರ ಸಂಭ್ರಮದಿ ತನ್ನ ನೋವ ಮರೆತವಳು…
ತಾನು ಬದುಕಿ, ತನ್ನವರ ಬದುಕು ಬದಲಾಯಿಸಿದವಳು…
ಜೀವ, ಜೀವನದ ಪ್ರೇಮವೇ ಅಮ್ಮ….

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ಕ್ಷಮಿಸಿ ಇದು ಒನ್‌ ವೇ.. ಇಲ್ಲಿ ತಿರುಗಿ ಬರುವಂತಿಲ್ಲ.. ಕೇವಲ ತಿರುಗಿ ನೋಡಬಹುದು ಅಷ್ಟೆ!

Exit mobile version