ಎದೆ ಭಾವ ಉಕ್ಕಿ ಬರುತಿದೆ, ಬಿಕ್ಕಳಿಸಿ ಅಳುವ ಬಯಕೆಯಾಗಿದೆ,
ಆದರೂ ಕಣ್ಣ ಹನಿ ಮಾತ್ರ ಜಾರದೇ ಕಣ್ಣಂಚಲೇ ಕಾದು ಕೂತಿದೆ
ಮಸಣದಿ ಕಾಡುವ ಮಹಾಮೌನವೆಲ್ಲ ನನ್ನೊಳಗೆ ತುಂಬಿ ಹೋಗಿದೆ
ಬಿರು ಬಿಸಿಲಿಗಿಂತ ಒಡಲೊಳಗಿನ ಸಿಟ್ಟು ಆಂತರ್ಯವನ್ನೆಲ್ಲ ಸುಡುತಿದೆ
ನಂಬಿರುವ ದೈವಕ್ಕೂ ಶಪಿಸುವಷ್ಟು ಹತಾಶೆ ಬಂದಾಗಿದೆ
ತಿರುಗುವ ಭೂಮಿಯ ಕೊನೆವರೆಗೂ ಪ್ರಶ್ನೆಗಳೇ ತುಂಬಿ ಹೋಗಿದೆ.
ಉತ್ತರ ಹುಡುಕುವ ಪ್ರಯತ್ನವೆಲ್ಲ ಮುಗಿದು ಹೋಗಿದೆ.
ಸೋತಾಗಿದೆ, ಸತ್ತಾಗಿದೆ, ಬರಿದಾಗಿದೆ, ಎಲ್ಲವೂ ಮುಗಿದು ಹೋಗಿದೆ…
ಜೀವನ ಕೆಲವೊಂದು ಸಲ ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸುತ್ತದೆ! Everything seems to be dead end ಅನಿಸುತ್ತದೆ.
‘ನಾನ್ಯಾಕೆ ಹೀಗಿದ್ದೀನಿ, ನನ್ ಲೈಫ್‌ನಲ್ಲಿ ಯಾಕೆ ಹೀಗಾಯ್ತು? ಇದೊಂದು ಆಗಿರದಿದ್ದರೆ ಎಲ್ಲವೂ ಸರಿ ಇರ್ತಿತಲ್ಲ, ಇವರೊಬ್ಬರು ಇರಬೇಕಾಗಿತ್ತಲ್ಲ, ಪದೇಪದೆ ನನಗೇ ಯಾಕೆ ಹೀಗೆ ಆಗ್ತಿದೆ. Am I deserve this!’ ಪ್ರಶ್ನೆಗಳ ಸರಪಣಿ ಬೆಳೆಯುತ್ತಲೇ ಹೋಗುತ್ತದೆ ಹೊರತು ಒಂದು ಗಂಟನ್ನಾದರೂ ಬಿಡಿಸಿಕೊಳ್ಳುವ ಉತ್ತರದ ಕೀಲಿಕೈ ಸಿಗುವುದೇ ಇಲ್ಲ.
ಜೀವನದಲ್ಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ನಡೆಸುವುದಕ್ಕೂ ಆಗಲ್ಲ. ನಮ್ಮನ್ನು ಮೀರಿದೊಂದು ಶಕ್ತಿ, ವಿಧಿ ಮೇಲೆ ಕೂತು ನಮ್ಮನ್ನು ಬೊಂಬೆಗಳಂತೆ ಆಡಿಸುತ್ತಿದೆ. ಅದರ ತಾಳಕ್ಕೆ ಕುಣಿಯದೇ ಹೊರತು ಬೇರೆ ದಾರಿಯಿಲ್ಲ.
ತುಂಬಾ ಕಾಡುವ ವಿಷಯ ಏನ್ ಗೊತ್ತಾ!?
ನಾವು ಪ್ರೀತಿಸಿದವರ, ಪ್ರೀತಿಸುತ್ತಿರುವವರ, ಪ್ರೀತಿಸಬೇಕಾದವರ ಪ್ರೀತಿಯನ್ನು ನಾವು ಅನುಭವಿಸೋಕೆ ಆಗದೆ ಇರೋದು. ಅವರ ಬದುಕಿನ ಪ್ರತಿ ಕ್ಷಣವನ್ನೂ ನಮ್ಮೊಳಗೆ ತುಂಬಿಕೊಂಡು ಸಂಭ್ರಮಿಸುತ್ತಿದ್ದರೂ, ಅತ್ತಲಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಇದ್ದರೂ ಆ ಭಾವ ನಮ್ಮೊಳಗಿನ ಮನಸಿಗೆ ಮಿಡಿಯುತ್ತಿಲ್ಲ. ಕಣ್ಣೊಳಗೆ ತೃಪ್ತಿ ತಂದಿಲ್ಲ.
ಪ್ರೀತಿಯನ್ನು ಪ್ರೀತ್ಸೋದೆ ಪ್ರೀತಿ ಅಂದ್ರೂ ಕೂಡ ಸಂಪೂರ್ಣವಾಗಿ ಆ ಪ್ರೀತಿಯ ಸ್ವಾದ ಸಿಗದೇ ಖುಷಿಯ ಮಾತೆಲ್ಲಿದೆ ಹೇಳಿ?
ತುಂಬಾ ಸಂಬಂಧಗಳ ನೋವಿಗೆ ಕಾರಣ ಕೂಡ ಇದೇ ಆಗಿರಲಿದೆ. ಅಪ್ಪನ ಭಯ, ಅಣ್ಣನನ್ನು ಕಂಡರೆ ಹೆದರಿಕೆ, ಅಮ್ಮನ ಹಿಡಿತ, ಹೊರ ಪ್ರಪಂಚದ ಕಣ್ಣುಗಳು, ಮುಜುಗರ, ತೆರೆದುಕೊಳ್ಳಲಾಗದ ವ್ಯಕ್ತಿತ್ವ, ನೀನೆ ಎಲ್ಲ ಎಂದು ಹೇಳಲಾಗದಷ್ಟು ಮೌನ, ಪ್ರೀತಿಸುತ್ತೇನೆ ಎಂದು ಹೇಳಿಯೂ ಬಾರದ ಭಾವ ಹೀಗೆ ಅದೆಷ್ಟೋ ಭಾವ ಮೂಡಿ ನಮ್ಮನ್ನು ಎದುರಿಗಿನ ಪ್ರೀತಿಯ ಜೀವಕೆ ಅಷ್ಟೇ ಪ್ರೀತಿಯನ್ನು ಧಾರೆ ಎರೆಯಲು ಸಾಧ್ಯವಿಲ್ಲ.
ಕನ್ನಡಿಯಷ್ಟೇ ಪ್ರತಿಬಿಂಬಿಸುವಷ್ಟೂ ಆಸೆ ಪಟ್ಟರೂ ನಮ್ಮಿಂದ ಅದನ್ನು ಪೂರೈಸಲು ಸಾಧ್ಯವಿಲ್ಲ. ಆಗ ಎದುರಾಗುವುದೇ ‘ನೀನು ಬದಲಾಗಿದ್ಯಾ! ನಿನ್ನ ಪ್ರೀತಿ ಕಡಿಮೆಯಾಗಿದೆ! ನಿನಗೆ ನಾನು ಬೇಡವಾದೆ!’ ಎಂಬ ಮಾತುಗಳು.
ಮನಸ್ಸಿನಾಳದಲ್ಲಿ ಒಂದಿಷ್ಟು ಚಿಂತನೆಗಳು. ಆ ಚಿಂತನೆಗಳೇ ಅರ್ಧ ಪ್ರೀತಿಯ ಸಂಬಂಧವನ್ನು ನಿತ್ರಾಣವಾಗಿರಿಸುತ್ತದೆ.
ಹಾಗಂತ ಅದನ್ನು ಮರೆತೂ ಕೂಡ ಆ ಪ್ರೇಮಿಗೆ ಬದುಕಲಿಕ್ಕೆ ಸಾಧ್ಯವಿಲ್ಲ. ಪ್ರತಿ ಕರೆಗೂ, ಭೇಟಿಗೂ ಬದುಕನ್ನೇ ಕಾದು ಕುಳಿತಿರುವ ಪ್ರೇಮಿ ಅತ್ತಲ್ಲಿಂದ ಅದೇ ಪ್ರೀತಿ ಸಿಗದಿದ್ದರೆ ಕುಗ್ಗುವುದು, ನರಳುವುದು, ಕೊರಗುವುದು ಸಾಮಾನ್ಯ…
ಪ್ರೀತಿ ಸಂಭ್ರಮದ ಸಾನಿಧ್ಯ ನೀಡಿದಷ್ಟೇ, ನರಳಿಸುವ ವಿರಹದ ಯಾತನೆಯನ್ನೂ ನೀಡುತ್ತದೆ. ಅದನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿಯಿರದಿದ್ದರೆ ಬದುಕು ಯಾವುದೋ ತೀರಕ್ಕೆ ಕೊಂಡೊಯ್ದು ಒಂಟಿಯಾಗಿ ನಿಲ್ಲಿಸಿ ಬಿಡುತ್ತದೆ. ಪ್ರೀತಿಯ ಎಲ್ಲ ಭಾವದಲ್ಲೂ ಬದುಕಬೇಕು. ಜೀವನದ ಪ್ರತಿ ಹಂತದಲ್ಲೂ ಪ್ರೀತಿ ಎಂಬ ಒಂದೇ ಭಾವ ಅದೆಷ್ಟೇ ರೋದಿಸಿದರೂ, ಕೊನೆಗೆ ಸಣ್ಣ ನಗುವೊಂದನ್ನು ಮುಖದ ಮೇಲೆರಿಸಿ it’s okay, life is beautiful ಎಂಬ ಉದ್ಗಾರವೊಂದನ್ನು ನಮ್ಮೊಳಗೆ ಹೇಳಿಕೊಳ್ಳಲು ದೊಡ್ಡದೊಂದು ಶಕ್ತಿ ಬೇಕು.
ಸುದೀರ್ಘವಾದುದೊಂದು ಉಸಿರೆಳೆದುಕೊಂಡು ನಮ್ಮಯ ಸ್ವಗತದೊಳಗೆ ಶಕ್ತಿ ತುಂಬಲು ಸಮಯ ಹಿಡಿಯುತ್ತದೆ. ಟೈಮ್ ಆದ್ರೂ ಪರವಾಗಿಲ್ಲ ಅದೊಂದನ್ನು ನಮ್ಮೊಳಗೆ ಹೇಳಿಕೊಳ್ಳುವ ಅವಶ್ಯಕತೆ ಇದೆ. At the end of the day ನಾವು ಏಕಾಂಗಿಗಳೇ, ನಮ್ಮಯ ಬದುಕು, ಬಣ್ಣ, ಒಡನಾಟ, ಜೀವನ, ಜೀವಾಳ ಎಲ್ಲವೂ ನಮ್ಮ ಮೂಗಿನ ತುದಿಗೆ ಮಾತ್ರ ನಿಲುಕಿದ್ದು. ನಾವು ಯಾರಿಂದಲೂ ನಮ್ಮ ಬದುಕಿನ ಸಂಪೂರ್ಣ ಸಂತೋಷವನ್ನೂ ಬಯಸಬಾರದು. ಅವರಿಗೂ ಅವರದೇ ಆದ ಬದುಕಿರುತ್ತದೆ ಎಂದು ಅರಿವಾಗಬೇಕು. ಹಾಗಾಗಿ ನಮ್ಮನ್ನು ನಾವೇ ಮೇಲೇಳಿಸಿಕೊಳ್ಳಬೇಕು. ಮತ್ತೊಂದು ಹೆಜ್ಜೆ ಇಡುತ್ತಾ ನಡೆಯಬೇಕು. ಬದುಕಲ್ಲಿ ನಿರೀಕ್ಷಿಸದ ಯಾವುದೋ ಒಂದು ಸೋಲು, ಘಟನೆ, ಹತಾಶೆ, ಕಹಿ, ಕರಾಳತೆ, ಕೊರಗು ನಡೆದಿರಬಹುದು. ಆದರೆ, ನಿಜಕ್ಕೂ ಅದುವೇ ಬದುಕಿನ ದಿಕ್ಕು ಬದಲಿಸುವ ತಿರುವು. ಆ ತಿರುವನ್ನು ನಂಬಬೇಕಷ್ಟೆ. ನಂಬಿ ಆ ದಾರಿಯಲ್ಲಿ ಹೆಜ್ಜೆ ಹಾಕಬೇಕಷ್ಟೆ. ಆ ಹೆಜ್ಜೆಗಳೇ ಬದುಕಿನ ತುದಿವರೆಗೂ ಸಾಗಿಸುವ ಜೀವನ ಪಾಠಗಳು.
ಇದನ್ನೂ ಓದಿ : ಭಾವಲೋಕದೊಳ್ ಅಂಕಣ : ಬ್ಯಾಚುಲರ್ ಲೈಫ್ ಎಂಬ ಶುದ್ಧ ಪರದೇಸೀ ಬದುಕು! ಕಭೀ ಖುಷಿ ಕಭೀ ಗಮ್!