ಬದುಕಿಗೊಂದು ಕನಸಿರಬೇಕು, ಕನಸಿಗೊಂದು ಗುರಿ ಇರಬೇಕು. ಗುರಿ ಇಲ್ಲದ ಬದುಕು, ಕನಸಿಲ್ಲದ ಮನಸ್ಸು ಮರುಭೂಮಿಯಂತೆ ಬರಡು. ಆ ಕನಸು ಚಿಕ್ಕದೋ, ದೊಡ್ಡದೋ ಗಾತ್ರ ಮುಖ್ಯವಲ್ಲ ಕನಸು ಮುಖ್ಯ.
ಜೀವನದಲ್ಲಿ ಕನಸು ಕಟ್ಕೊಂಡು ಹೋಗ್ಬಾರದು ಅದ್ರ ಪಾಡಿಗೆ ಅದು ಬಂದ ಹಾಗೆ ಹೋಗ್ತಿರಬೇಕು, ಜೀವನ ಕ್ಯಾಲ್ಕುಲೇಟರ್ ಅಲ್ಲ, ಲೆಕ್ಕಾಚಾರ ಹಾಕಿ ಬದುಕೋಕೆ ಆಗಲ್ಲ, ಹೀಗೆ ಬದುಕಬೇಕು, ಹಿಂಗೇ ಬದುಕಬೇಕು ಅಂತ ಬಾಳೋಕೆ ಆಗಲ್ಲ, ಇವತ್ತಿಂದು ಇವತ್ತಿಗೆ ನಾಳೆದು ನಾಳೆಗೆ-ಲೈಫ್ ಎಂಜಾಯ್ ಮಾಡು ಗುರು!: ಹೀಗೆ ನೂರಾರು ಜನ ಇವತ್ತಿಗಾಗಿ ಬದುಕುತ್ತಾ ನಾಳೆಯ ಬಗ್ಗೆ ಯೋಚನೇನೆ ಮಾಡಬಾರದು ಅಂತೆಲ್ಲ ಹೇಳುತ್ತಾರೆ. ಆದರೆ, ನಿಜವೆಂದರೆ ಜೀವನ ನಾಳೆಗಾಗಿ ಬದುಕೋದು ಅಲ್ವಾ?
ಖಂಡಿತ ಮನುಷ್ಯ ಕನಸಿನಿಂದ, ಕನಸಿಗಾಗಿ, ಕನಸಿಗೋಸ್ಕರ ಬದುಕುವವನು. ಇಲ್ಲ ಅಂದ್ರೆ ಮನುಷ್ಯನ ಜೀವನಕ್ಕೆ ಅರ್ಥ ಏನಿದೆ ಹೇಳಿ!? ಎಂದೋ ಕಂಡ ಕನಸನ್ನೊ, ಮನಸಿನಾಳದಲ್ಲೆಲ್ಲೋ ಮೂಡಿದ ಆಸೆಯೊಂದನ್ನು ಬೆನ್ನಟ್ಟಿ ಗುರಿ ತಲುಪಿ, ಅದನ್ನು ಪಡೆದು ಗೆದ್ದ ಖುಷಿಯಲ್ಲಿ ಸಂಭ್ರಮಿಸುವುದೇ ಬದುಕು.
ತಾನಿಷ್ಟ ಪಟ್ಟ ತಿಂಡಿ ತಿನಿಸು ತಿನ್ನೋದೇ ಮಗುವಿನ ಪುಟ್ಟ ಕನಸು, ಎಕ್ಸಾಂನಲ್ಲಿ ಒಳ್ಳೆ ಮಾರ್ಕ್ಸ್ ತೆಗೆದರೆ ಸೈಕಲ್ ಸಿಗುತ್ತೆ ಅನ್ನೋದೇ ಒಬ್ಬ ಸ್ಕೂಲ್ ಹುಡುಗನ ಆಸೆಯ ಕನಸು. ಈ ಬಾರಿಯ ಹಬ್ಬಕ್ಕಾದ್ರೂ ಹೊಸ ಬಟ್ಟೆ ಹಾಕೊಬೇಕು ಎನ್ನುವುದು ಗುಡಿಸಲಿನಲ್ಲಿರುವ ಬಡಮಗುವಿನ ಸಣ್ಣ ಕನಸು. ನನ್ನ ಮಗನನ್ನು ಒಳ್ಳೆಯ ಕಾಲೇಜಿಗೆ ಸೇರಿಸಬೇಕು, ತನ್ನ ಮಗಳನ್ನ ಓದಿಸಿ ಉತ್ತಮ ಕೆಲಸಕ್ಕೆ ಸೇರಿಸಬೇಕು ಎಂಬುದೇ ತಂದೆಯ ಕಾಳಜಿಯ ಕನಸು. ತನ್ನ ಮಗಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಡಬೇಕು ಎಂಬುದೆ ತಾಯಿಯ ಅಕ್ಕರೆಯ ಕನಸು. ಈ ಸಲದ ಚೀಟಿ ಕೂಗಿ ಹೆಂಡ್ತಿಗೊಂದು ಮಾಂಗಲ್ಯಸರ ಮಾಡಿಸಬೇಕು ಎಂಬುದು ಗಂಡನ ಪ್ರೀತಿಯ ಕನಸು. ದುಡಿದು ಸುಸ್ತಾಗಿ ಬರೋ ಗಂಡನಿಗಾಗಿ ರುಚಿ ರುಚಿಯ ಅಡುಗೆ ಮಾಡಬೇಕು ಎಂಬುದು ಹೆಂಡತಿಯ ಪ್ರೇಮದ ಕನಸು. ತಿಂಗಳ ಸಂಬಳದಲ್ಲಿ ಸ್ವಲ್ಪ ಸ್ವಲ್ಪವೇ ಕೂಡಿಟ್ಟು ತನ್ನಿಷ್ಟದ ಸೂಪರ್ ಬೈಕ್ ಕೊಂಡುಕೊಂಡು ಸ್ನೇಹಿತರ ಜೊತೆ ಲಾಂಗ್ ಡ್ರೈವ್ ಹೋಗೋದು ಸ್ನೇಹದ ಕನಸು, ಏನಾದ್ರೂ ಆಗಲಿ ಹೊಸ ಬಿಸಿನೆಸ್‌ನಲ್ಲಿ ಗೆದ್ದೇ ಗೆಲ್ತೀನಿ ಎಂಬುದು ನಂಬಿಕೆಯ ಕನಸು, ಈ ಸಲ ಇಂಟರ್‌ವ್ಯೂ ಕ್ಲಿಯರ್ ಮಾಡಿ ಒಳ್ಳೆಯ ಉದ್ಯೋಗ ಪಡೆದುಕೊಳ್ಳುತ್ತೇನೆ ಎಂಬುದು ಪರಿಶ್ರಮದ ಕನಸು, ನಾನು ಪ್ರೀತಿಸಿದ ಹುಡುಗಿಯನ್ನು/ಹುಡುಗನನ್ನು ಮದುವೆಯಾಗ್ತೀನಿ ಅನ್ನೋದು ಒಲವಿನ ಕನಸು, ನಮಗಾಗಿ ಸಣ್ಣ ಗೂಡು ಕಟ್ಟೋಣ ಎಂಬುವುದು ಭವಿಷ್ಯದ ಕನಸು, ರಿಟೈರ್ ಆದ್ಮೇಲೆ ಕಾಶಿ, ಕೈಲಾಸ ಯಾತ್ರೆ ಮಾಡಬೇಕು ಎಂದು ಈಗಿನಿಂದಲೇ ಹಣ ಮೀಸಲಿಡುವುದು ಭಕ್ತಿಯ ಸಾಕ್ಷಾತ್ಕಾರದ ಕನಸು, ಮಕ್ಕಳ ಮುಂದಿನ ಭವಿಷ್ಯಕ್ಕೆ ಏನಾದ್ರೂ ಮಾಡಬೇಕು ಎಂದು ಇನ್ಶುರೆನ್ಸ್ ಬಾಂಡ್ ತೆಗೆದುಕೊಳ್ಳುವುದು ಲೆಕ್ಕಾಚಾರದ ಕನಸು… ಹೀಗೆ ಬದುಕೆಂದರೆ ಕನಸುಗಳ ದಾರಿಯಲ್ಲೇ ಸಾಗುವ ಪಯಣ.
ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕನಸುಗಳಲ್ಲೇ ಕಳೆದುಹೋಗುತ್ತಾನೆ. ನಿಜಕ್ಕೂ ಆ ಕನಸುಗಳೇ ಮನುಷ್ಯನನ್ನು ಬದುಕಿಸುವುದು. ಅಳು, ಬೇಸರ, ಹತಾಶೆ, ಸಿಟ್ಟು, ಆಕ್ರೋಶ, ಕಣ್ಣೀರು, ಕಷ್ಟ ಏನೇ ಬಂದರೂ ನಿನ್ನ ಕನಸೊಂದು ನನಸಾದರೆ ಈ ಸಮಯ ಕಳೆದುಹೋಗುತ್ತದೆ ಧೃತಿಗೆಡಬೇಡ ಎಂದು ಮನಸ್ಸು ಆಗಾಗ ಹೇಳುತ್ತಿರುತ್ತದೆ.
ಮನುಷ್ಯ ಕನಸನ್ನೇ ಕಾಣದಿದ್ದರೆ ಇಂದು ಅಂಗೈನಿಂದ ಅಂತರ್ಜಾಲದವರೆಗೂ, ಭೂಗರ್ಭದಿಂದ ಬಾಹ್ಯಾಕಾಶದವರೆಗೂ ಏನನ್ನೂ ಕಂಡು ಹಿಡಿಯುತ್ತಿರಲಿಲ್ಲ. ಕೇವಲ ಇವತ್ತಿಗೋಸ್ಕರ ಬದುಕಿದ್ರೆ ನಮ್ಮ ಕಣ್ಣ ಮುಂದಿರುವ ಯಾವುದು ನಿರ್ಮಾಣವಾಗ್ತಿರಲಿಲ್ಲ. ಸಿನಿಮಾದಲ್ಲೊಂದು ಸಿದ್ದಾಂತವಿದೆ: Every story should have motive and purpose ಅಂತ. ಪ್ರತಿಯೊಂದು ಕಥೆ ಅಥವಾ ಪಾತ್ರಕ್ಕೂ ಒಂದು ಉದ್ದೇಶ ಇರಬೇಕು. ತೆರೆ ಮೇಲೆ ಬರುವ ಎರಡು ಗಂಟೆ ಸಿನಿಮಾದಲ್ಲಿ ಈ ಸಿದ್ಧಾಂತ ಇಲ್ಲ ಅಂದ್ರೆ ‘ಫಿಲ್ಮ್ ಅಲ್ಲಿ ಕಥೆನೇ ಇಲ್ಲ ಗುರು’ ಅಂತೀವಿ. ಇನ್ನು ಇಷ್ಟು ದೊಡ್ಡ ಜೀವನದಲ್ಲಿ ಉದ್ದೇಶ, ಪ್ರೇರಣೆ, ಆಶಯ, ಗುರಿ,ಕನಸು ಇಲ್ಲದಿದ್ರೆ ಅದು ಬದುಕು ಅನಿಸಿಕೊಳ್ಳುತ್ತಾ !?…
ಜೀವನದಲ್ಲಿ ಬೌಂಡರಿಯನ್ನೇ ಹಾಕಿಕೊಳ್ಳದೇ ಕನಸು ಕಾಣಬೇಕು. ಹಾಗೇ ಕನಸು ಕಂಡವರು ಮಾತ್ರ ಸಾಧಕರೆನಿಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದವರು ಕಂಡ ಕನಸು ಸೂಪರ್‌ಸ್ಟಾರ್ ರಜನಿಕಾಂತ್‌ರನ್ನಾಗಿ ಮಾಡಿದೆ, ಮಣ್ಣಿನಲ್ಲಿ ಉಳುಮೆ ಮಾಡುತ್ತಿದ್ದ ದೇವೇ ಗೌಡ್ರು ಕಂಡ ಕನಸು ದೇಶದ ಪ್ರಧಾನಿಯನ್ನಾಗಿ ಮಾಡಿದೆ. ರಾಮೇಶ್ವರಂನಲ್ಲಿ ಪೇಪರ್ ಹಾಕ್ತಿದ್ದ ಹುಡುಗನ ಕನಸು ಮಿಸೈಲ್ ಮ್ಯಾನ್ ಅಬ್ದುಲ್ ಕಲಾಂರನ್ನಾಗಿ ಮಾಡಿದೆ, ಜೋಳಿಗೆಯಲ್ಲಿ ಬೇಡಿ ಮಠ ಕಟ್ಟಿದವರ ಕನಸು ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯನ್ನಾಗಿ ಮಾಡಿದೆ.
ಹೀಗೆ ನೂರಾರು, ಸಾವಿರಾರು, ಲಕ್ಷಾಂತರ ಸಾಧಕರನ್ನು ಸೃಷ್ಟಿಸಿದ್ದು ನಾಳೆ ಎಂಬ ಸಾಧನೆಯ ಕನಸು.
ಕನಸುಗಳಿಗೆ ಆಳ ಅಗಲವಿಲ್ಲ. ಆದರೆ ಕನಸನ್ನು ನನಸು ಮಾಡಿಕೊಳ್ಳುವ ದಾರಿ ಮಾತ್ರ ಬಲು ದೂರವಾದುದು, ಕಠಿಣವಾದುದು ಕೂಡ. ಕನಸನ್ನು ಬೆನ್ನಟ್ಟಿ ಹೊರಟ ಪಯಣಿಗ ಎಂದಿಗೂ ಹಿಂದೆ ತಿರುಗಿ ನೋಡಬಾರದು.
ಸತತ ಪರಿಶ್ರಮ, ನಿರಂತರ ಹೆಜ್ಜೆ, ಯಾರಿಗೂ ಅಂಜದ ಧೈರ್ಯ, ತನ್ನ ಮೇಲಿನ ಗಟ್ಟಿ ನಂಬಿಕೆ, ಸಾಧಿಸಿಯೇ ತೀರುತ್ತೇನೆ ಎಂಬ ಹಸಿವು, ಭವಿಷ್ಯದ ದಿನಗಳ ಆಸೆ, ಕಂಡಿರುವ ಆಶಯ, ಸಮಯದ ಅರಿವಿಲ್ಲದೇ ಮಾಡುವ ಕೆಲಸ ಎಂತಹ ಕನಸನ್ನು ಬೇಕಾದರೂ ನನಸು ಮಾಡಿಬಿಡುತ್ತೆ.
ಸೋ.. ನೀವಿನ್ನೂ ಕನಸೇ ಕಂಡಿಲ್ಲವಾದರೆ ಇವತ್ತೇ ಕನಸು ಕಾಣಲು ಶುರು ಮಾಡಿ. ಆ ಕನಸು ನಿಮ್ಮನ್ನು ತನ್ನೆಡೆಗೆ ಸೆಳೆಯುತ್ತಿದ್ದರೆ ನೀವು ಬದುಕುತ್ತಿದ್ದೀರಿ ಎಂದರ್ಥ.…ʻಕನಸು ದೊಡ್ಡದಾಗಿದ್ರೆ ಬದುಕು ಒಂಟಿಯಲ್ಲʼ
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮಹತ್ವಾಕಾಂಕ್ಷೆಯ ಮತ್ತೊಂದು ಹೆಸರು; ಹ್ಯಾಪಿ ಬರ್ತ್‌ಡೇ ಪುರಚ್ಚಿ ತಲೈವಿ ಜಯಲಲಿತಾ!