Site icon Vistara News

ಭಾವಲೋಕದೊಳ್..‌ : ಈ ಹಾಡೆಂದರೆ, ಬದುಕನು ರಮಿಸೋ ತಾಯಮ್ಮ, ಹೃದಯದ ಮಾತಿನ ಗುಂಗಮ್ಮ!

music Bhavalokadol

#image_title

ಕೆಲವೊಂದು ಹಾಡುಗಳೆ ಹಾಗೇ ಅಲ್ವಾ? ಗೊತ್ತಿಲ್ಲದೆ ಮನಸ್ಸಿನಾಳಕ್ಕೆ ಇಳಿದುಬಿಡುತ್ತವೆ. ಎಲ್ಲೋ ಒಮ್ಮೆ ಕೇಳಿದ ಸಾಲುಗಳೇ ಎದೆಗವಚಿಕೊಂಡು ಕಾಡಲು ಶುರುವಿಟ್ಟುಬಿಡುತ್ತದೆ. ಹಾಡಿನ ಭಾವ, ಎದೆಯಾಳದ ಸಾಹಿತ್ಯ, ಮನಮಿಡಿಯುವ ಸಂಗೀತ, ಸ್ವರ ಮೀಟುವ ನಾದತಂತಿಗಳು, ಹಾಡುಗನ ಶೃತಿಯ ಲಹರಿಯಲ್ಲೊಂದು ಗಟ್ಟಿ ಸೆಳೆತ, ಕಣ್ಣಿಗೆ ಕಟ್ಟುವ ಕಲ್ಪನೆಗಳು ಕಣ್ಣಲ್ಲಿ ನೀರು ಜಿನುಗಿಸಿ ಎದೆ ಭಾರ ಇಳಿಸಿ ಮನಸ್ಸಿಗೊಂದು ಮುದ‌ ನೀಡುತ್ತದೆ.

ನೋವಿರಲಿ, ನಗುವಿರಲಿ, ಕಷ್ಟದ ದಿನಗಳಿರಲಿ, ಸಂಭ್ರಮದ ಸಡಗರವಿರಲಿ, ವಿಷಾದದ‌ ಆಕ್ರಂದನವಿರಲಿ, ಸೋಲಿನ ಹತಾಶೆಯಿರಲಿ, ಗೆಲುವಿನ ಉನ್ಮಾದವಿರಲಿ ಒಂಟಿತನದ ಬೇಸರವಿರಲಿ, ಪ್ರೀತಿಯ ಅಪ್ಪುಗೆಯಿರಲಿ, ಸ್ನೇಹದ ಒಡನಾಟವಿರಲಿ, ಪ್ರಕೃತಿಯ ನಿರ್ಲಿಪ್ತ ಶಾಂತಿಯಿರಲಿ, ಅದು ಯಾವುದೇ ಭಾವವಿದ್ದರೂ ಮುದ್ದು ಮಗುವಿಗೆ ಅಮ್ಮನ ಮಡಿಲು ಬೇಕೆನಿಸುವಂತೆ ನಮ್ಮಿಷ್ಟದ ಹಾಡೊಂದು ಆಗಾಗ ಭಾವಬದುಕಿಗೆ ಬೇಕೆನಿಸುತ್ತದೆ. ಕಿವಿ ಹಾಡಿನ ಸಾಲುಗಳ ಏರಿಳಿತ ಆಲಿಸುತ್ತಿದ್ದರೆ ಹೃದಯದೊಳಗಿನ ಭಾವ ತರಂಗ ತಲೆಯಾಡಿಸುತ್ತಿರುತ್ತದೆ.

ಕೆಲವೊಂದು ಹಾಡುಗಳಂತೂ ನನಗಾಗೇ ಬರೆದಿರೋದು ಅನಿಸುತ್ತದೆ. ಹಾಡಿನ ಸಾಹಿತ್ಯ ನನ್ನ ಜೀವನದ ಪ್ರತಿಕನ್ನಡಿ ಅನಿಸುತ್ತದೆ. ಹಾಡಿನ ಸಾಹಿತಿ ಕತ್ತಲೆಯ ಮರೆಯಲ್ಲಿ ನನ್ನ ಬದುಕನ್ನೇ ಕದ್ದು ನೋಡಿ ಬಿಳಿ ಹಾಳೆಯ ಮೇಲೆ ಸಾಲುಗಳಾಗಿ ಗೀಚಿ ಹಾಡಾಗಿ ಹೊರತಂದಿರುವನೇನೋ ಅನಿಸುತ್ತದೆ. ಎಲ್ಲೋ ಹುಡುಕುತ್ತಿರುವ ಪ್ರಶ್ನೆಗಳಿಗೆ ಯಾವುದೋ ಸಿನಿಮಾದ ಯಾವುದೋ ಹಾಡು ಉತ್ತರ ನೀಡುತ್ತದೆ. ಸಾವಿರಾರು ಸಿನಿಮಾದ ಲಕ್ಷಾಂತರ ಹಾಡುಗಳ ಕೋಟ್ಯಾಂತರ ಸಾಲುಗಳಿದ್ದರೂ ನಮ್ಮಿಷ್ಟದ ಹಾಡಿನ ಸಾಲು ಮಾತ್ರ ನನ್ನದೇ ಎನಿಸುತ್ತದೆ.

ಒಂದು ಹಾಡಿಗೆ ಅದೆಂಥ ಶಕ್ತಿ ಇದೆ ಗೊತ್ತಾ!? ಒಂದು ಹಾಡು, ಕೈಕಟ್ಟಿ ಕೂತು ಕಣ್ಣಿರಾದಾಗ ಬೆನ್ನು ತಟ್ಟಿ ನಡೆ ಮುಂದೆ ಅಂತ ಮುನ್ನಡೆಸುತ್ತದೆ. ಪ್ರೀತಿಯ ಸೋಲಿಗೆ ಪಕ್ಕದಲ್ಲೆ ಕೂತು ಸಾಂತ್ವನವಾಗುತ್ತದೆ. ಜೋಳಿಗೆ ತುಂಬ ಕಷ್ಟ ತುಂಬಿರುವ ಬದುಕಿಗೆ ಸಾಧನೆಯ ಶಿಖರ ಏರುವ ಧೈರ್ಯ ತುಂಬಿಸುತ್ತದೆ, ಸಿಹಿ ಖುಷಿಯ ಕ್ಷಣಗಳನ್ನು ಸಂತೋಷ ಭರಿತ ಹಾಡೊಂದು ಮತ್ತಷ್ಟು ಹೆಚ್ಚಿಸುತ್ತದೆ, ಪ್ರೀತಿಯಲ್ಲಿ ಮುಳುಗಿದ ಯೌವ್ವನದ ಮನಸ್ಸಿಗೆ ಪ್ರೇಮಗೀತೆಯೊಂದು ಮತ್ತಷ್ಟು ಮುದ ನೀಡುತ್ತದೆ, ಕೋಪದ ಕ್ರೌರ್ಯದಲ್ಲಿ ಹಾಡಿನ ಸಾಲೊಂದು ಜ್ವಾಲಾಮುಖಿ ಏರಿಸುತ್ತದೆ. ಎಂದೋ ನಡೆದ ಘಟನೆಗಳ ನೆನಪುಗಳು ಪರದೆಯ ಮೇಲಿನ ಚಿತ್ರದಂತೆ ಕಣ್ಣ ಮುಂದೆ ಓಡುತ್ತಿರುತ್ತದೆ. ಹೀಗೆ ಪ್ರತಿ ಘಟನೆಗಳು ಮನುಷ್ಯನೊಳಗಿನ ಯಾವುದೋ ಭಾವವನ್ನು ಹಾಡಾಗಿ ಹಾಡಿಸುತ್ತದೆ.

ಸಂಗೀತ ಗೊತ್ತಿಲ್ಲದವನೂ ಕೆಲವು ಹಾಡುಗಳಿಗೆ ತಲೆಯಾಡಿಸುತ್ತಾ ತಲ್ಲೀನನಾಗುತ್ತಾನೆಂದರೆ ಅದು ಹಾಡಿನ ಶಕ್ತಿ, ಸಂಗೀತದ ಮಹಿಮೆ. ಅಂದಿನ ಗ್ರಾಮೋಫೋನ್, ಟೇಪ್‌ ರೆಕಾರ್ಡರ್‌ ಕ್ಯಾಸೆಟ್ಸ್‌ನಿಂದ ಹಿಡಿದು ಇವತ್ತಿನ ಬ್ಲೂಟೂತ್,
ಹೆಡ್‌ಫೋನ್, ಇಯರ್‌ಫೋನ್‌ವರೆಗೂ ಹಾಡುಗಳು ಬದಲಾಗಿವೆ. ಹಾಡುಗಳ ಶೈಲಿಯು ಬದಲಾಗಿದೆ, ಹಾಡು ಕೇಳುವ ಸಾಧನಗಳು ಬದಲಾಗಿದೆ. ಆದರೆ ಹಾಡು ಕೇಳುವುದು ಮಾತ್ರ ಬದಲಾಗಿಲ್ಲ. ಯಾಕೆಂದರೆ ಹಾಡು, ಸಂಗೀತ ಅಂತ್ಯವೇ ಇಲ್ಲದ ನಿರಂತರ!…

ಹಾಡಿಗೆ ಭಾಷೆ ಮುಖ್ಯ ಅಲ್ಲ ಭಾವನೆ ಮುಖ್ಯ, ಎಷ್ಟೋ ಸಲ ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ ಅದರ ನಾದಕ್ಕೆ ಮನಸ್ಸು ಸೋತು ಹೋಗಿರುತ್ತದೆ. ವಿಶ್ವದಲ್ಲಿ ಅದೆಷ್ಟೊ ಭಾಷೆಗಳು, ಭಾಷೆಗೆ ತಕ್ಕಂತೆ ಸಂಗೀತ, ಸಂಗೀತಕ್ಕೆ ತಕ್ಕಂತೆ ಸಾಹಿತ್ಯ, ಸಾಹಿತ್ಯಕ್ಕೆ ತಕ್ಕಂತೆ ಹೆಜ್ಜೆಯ‌ ಗೆಜ್ಜೆಗಳಿವೆ. ಹಿಂದೂಸ್ತಾನಿ, ಕರ್ನಾಟಿಕ್ ಶಾಸ್ತ್ರೀಯ ಸಂಗೀತ, ಜಾನಪದ‌ ಸಂಗೀತ, ವೆಸ್ಟರ್ನ್ ಮ್ಯೂಸಿಕ್, ರಾಕ್ ಮ್ಯೂಸಿಕ್, ಪಾಪ್ ಮ್ಯೂಸಿಕ್, ರ‍್ಯಾಪ್‌ ಸಾಂಗ್ಸ್, ಭಾವಗೀತೆಗಳು, ಗಝಲ್, ಲಾವಣಿ, ಭಾಂಗ್ರಾ, ಸೂಫಿ, ಡಿಜೆ ಹೀಗೆ ನೂರಾರು ಬಗೆಯ ಶೈಲಿಗಳು ಸಂಗೀತದ ಎಲ್ಲೆಗಳನ್ನು ಮೀರಿ ನಿಂತಿವೆ.

ಪ್ರತಿಸಲ ಕೇವಲ ತನ್ಮಯತೆಗೆ ಅಲ್ಲದೇ ಯಾವುದೋ ಕೆಲಸ ಮಾಡುವಾಗ ಪ್ಲೇ ಆಗುವ ಹಳೇ ಹಾಡುಗಳು, ಕಾರ್‌ನಲ್ಲಿ ಹೋಗುವಾಗ ಬರುವ ಎಫ್ ಎಂ‌ನ ಹಾಡುಗಳು, ರೆಸ್ಟೊರೆಂಟ್‌ನಲ್ಲಿನ ಸಣ್ಣ ದನಿಯ ಹಾಡುಗಳು, ಹಬ್ಬ, ಜಾತ್ರೆಗಳಲ್ಲಿ ಹಾಕುವ ಜೋರು ದನಿಯ ಹಾಡುಗಳು ಬೋರ್ ಎನಿಸದೆ ಆ ಕ್ಷಣಗಳನ್ನು ಎಂಗೇಜ್ ಮಾಡಿಸುತ್ತದೆ. ಒಂಟಿ ಪಯಣದಲ್ಲೋ, ಮುಸ್ಸಂಜೆಯ ಮಳೆಯಲ್ಲೊ, ಕಡಲ ತೀರದ ಹೆಜ್ಜೆಯಲ್ಲೊ, ಆಗಸದ ಹಾರಾಟದಲ್ಲೊ,
ಒಂದು ಲಾಂಗ್ ಡ್ರೈವ್‌ನಲ್ಲೊ ಕಿವಿಗೆ ಹಾಡೊಂದು ಬೀಳುತ್ತಿದ್ದರೆ, ಸುತ್ತಲಿನ ಪ್ರಪಂಚವನ್ನೆ ಮರೆತು ನಮ್ಮೊಳಗೆ ಕಳೆದುಹೋಗುತ್ತೇವೆ.

ದೇಹವನ್ನು ಬದುಕಿಸುವುದು ನೀರು, ನಿದ್ರೆ, ಆಹಾರ
ಮನಸ ಬದುಕಿಸುವುದು ಸಂಗೀತ, ಸಾಹಿತ್ಯ, ಸಂಚಾರ….

ಇದನ್ನೂ ಓದಿ : ಭಾವಲೋಕದೊಳ್‌ ಅಂಕಣ : ನೆನಪು, ಮರೆವುಗಳ ಮಾಯಾಜಾಲ; ಕೆಲವನ್ನು ಮರೆತೆನೆಂದರೂ ಮರೆಯಲಿ ಹೇಗೆ?

Exit mobile version