Site icon Vistara News

ಚಂದ್ರಶೇಖರ ಭಂಡಾರಿ | ಹೊ.ವೆ. ಶೇಷಾದ್ರಿಯವರಿಂದ ಪ್ರೇರಿತರಾಗಿ ಸಾಹಿತ್ಯ ಕ್ಷೇತ್ರಕ್ಕೆ ಧುಮುಕಿದ ಪ್ರಚಾರಕ

chandrashekhara bhandari

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಹಾಗೂ ಲೇಖಕ ಚಂದ್ರಶೇಖರ ಭಂಡಾರಿ (87) ಅವರು ಭಾನುವಾರ ಮದ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆರ್‌ಎಸ್‌ಎಸ್‌ ಪ್ರಚಾರಕರಾಗಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಣೆ ಮಾಡಿಕೊಳ್ಳುವ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು ಚಂದ್ರಶೇಖರ್ ಭಂಡಾರಿ. ಅವರ ಕಿರು ಪರಿಚಯ ಇಲ್ಲಿದೆ.

ಚಂದ್ರಶೇಖರ ಭಂಡಾರಿ ಅವರು ಕನ್ನಡ ಸಾಹಿತ್ಯ ವಲಯದಲ್ಲಿ ಪರಿಚಿತ ಹೆಸರು. ಅವಿಶ್ರಾಂತ ಸಂಘಟನಾತ್ಮಕ ಚಟುವಟಿಕೆಯ ಜೊತೆಗೆ ತಮ್ಮ ಆಳವಾದ ಅಧ್ಯಯನ, ವಿಸ್ತಾರವಾದ ವಿಮರ್ಶೆ ಹಾಗೂ ನಿರಂತರ ಬರವಣಿಗೆಯೊಂದಿಗೆ ಸಮಾಜಕಾರ್ಯದಲ್ಲಿನ ಅನುಭವಗಳಿಂದ ಅಕ್ಷರಲೋಕಕ್ಕೆ ಮೆರುಗು ನೀಡಿದವರು.
ವಿಟ್ಟಪ್ಪ ಭಂಡಾರಿ ಹಾಗೂ ಕಮಲಾವತಿ ದಂಪತಿಗಳ ಐದನೆಯ ಹಾಗೂ ಕಿರಿಯ ಮಗನಾಗಿ ಮೇ 4, 1935ರಲ್ಲಿ ಮಂಗಳೂರಿನಲ್ಲಿ ಚಂದ್ರಶೇಖರ ಭಂಡಾರಿ ಅವರು ಜನಿಸಿದರು.

ಅವರಿಗೆ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರು. ಶಾಲಾ ದಿನಗಳಿಂದಲೇ ಚಂದ್ರಶೇಖರ ಭಂಡಾರಿ ಅವರಿಗೆ ಆರ್‌ಎಸ್‌ಎಸ್‌ ಒಡನಾಟವಿತ್ತು. ತಮ್ಮ ಹೈಸ್ಕೂಲು ವಿದ್ಯಾಭ್ಯಾಸವನ್ನು ಮಂಗಳೂರಿನ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಮುಗಿಸಿ ನಂತರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಹಾಗೂ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್. ಶಿಕ್ಷಣ ಪೂರೈಸಿದರು. 1958ರಿಂದ 1961ರ ತನಕ ಅಧ್ಯಾಪಕರಾಗಿ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್‌ನಲ್ಲಿ ಹಾಗೂ ಉಡುಪಿ ಸಮೀಪದ ಕಲ್ಯಾಣಪುರದಲ್ಲಿನ ಮಿಲಾಗ್ರಿಸ್ ಹೈಸ್ಕೂಲ್‌ನಲ್ಲಿ ಕಾರ್ಯನಿರ್ವಹಿಸಿದರು.

1961ರಿಂದ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಸಮಾಜಕಾರ್ಯದಲ್ಲಿ ನಿರತರಾದರು. ಸುದೀರ್ಘ 62 ವರ್ಷಗಳ ಕಾಲ ಪ್ರಚಾರಕರಾಗಿದ್ದರು. ಚಂದ್ರಶೇಖರ ಭಂಡಾರಿ ಅವರು ಮಂಗಳೂರು, ತುಮಕೂರು ಹಾಗೂ ಮೈಸೂರು ವಿಭಾಗಗಳ ವಿವಿಧ ಪ್ರದೇಶಗಳಲ್ಲಿ ವಿಭಾಗ ಪ್ರಚಾರಕ್ ಸೇರಿ ವಿವಿಧ ಹಂತಗಳಲ್ಲಿ ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸಿದರು.

1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭೂಗತರಾಗಿ ಕೆಲಸ ಮಾಡಿದ ಅವರು 1984ರಲ್ಲಿ, ಆರ್‌ಎಸ್‌ಎಸ್‌ ಪ್ರಚಾರಕ ಹಾಗೂ ಚಿಂತಕ ಹೊ.ವೆ. ಶೇಷಾದ್ರಿ ಅವರ ಅಪೇಕ್ಷೆಯಂತೆ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1994ರಲ್ಲಿ ಕರ್ನಾಟಕದ (ಎರಡೂ ಪ್ರಾಂತದ) ಪ್ರಚಾರ ಪ್ರಮುಖರಾಗಿ 2012ರ ತನಕ ಜವಾಬ್ದಾರಿ ನಿರ್ವಹಿಸಿದ್ದರು. 2000ರಲ್ಲಿ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಸಂಸ್ಥಾಪಕ ವಿಶ್ವಸ್ಥರಾಗಿ ಕಾರ್ಯನಿರ್ವಹಿಸಿದರು. 2012ರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಾಂತ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದರು.

ನಿರಂತರ ಸಾಹಿತ್ಯರಚನೆಯಲ್ಲಿ ಹಾಗೂ ದೇಶಭಕ್ತಿಗೀತೆಗಳ ಸಂರಚನೆಯಲ್ಲಿ ತೊಡಗಿದ್ದ ಚಂದ್ರಶೇಖರ ಭಂಡಾರಿ ಅವರಿಂದ ರಚಿಸಲ್ಪಡುತ್ತಿದ್ದ ಕೃತಿಗಳು ಅವರನ್ನು ಇತಿಹಾಸಕಾರರಾಗಿ, ಅನುವಾದಕರಾಗಿ, ವೈಚಾರಿಕ ವಿಷಯಗಳ ಪ್ರತಿಪಾದಕರಾಗಿ, ಸಂಶೋಧಕರಾಗಿ, ಪತ್ರಕರ್ತರಾಗಿ ರೂಪಿಸಿದುವು. ಸ್ವತಂತ್ರ ಕೃತಿಗಳು, ಸಹಲೇಖಕರಾಗಿ ಮತ್ತು ಅನುವಾದಕರಾಗಿ ಅವರಿಂದ ಮೂಡಿಬಂದ ಕೃತಿಗಳು ಓದುಗರ ಮನಸ್ಸಿನಲ್ಲಿ ಹಾಗೂ ವೈಚಾರಿಕ ವಲಯದಲ್ಲಿ ಅಚ್ಚಳಿಯದ ಪ್ರಭಾವ ಬೀರಿದೆ.

ರಾಷ್ಟ್ರೀಯ ವಿಚಾರಧಾರೆಯ ಹಲವಾರು ಲೇಖನ-ಅಂಕಣಗಳು ಕರ್ನಾಟಕದ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು ಹಲವು ದೇಶಭಕ್ತಿ ಗೀತೆಗಳನ್ನು ರಚಿಸಿದ್ದಾರೆ. ಅವರು ರಚಿಸಿದ ‘ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು’ ಈ ಗೀತೆಯು ಕನ್ನಡ ಶಾಲಾಪಠ್ಯಪುಸ್ತಕದಲ್ಲಿ ಪ್ರಕಟವಾಗಿದ್ದು, ಮಕ್ಕಳಿಗೆ ದೇಶಭಕ್ತಿಯ ಭಾವನೆಯನ್ನು ಮೂಡಿಸಿದೆ. ಇದರ ಜತೆಗೆ ಅವರು ಜಾಗರಣ ಪ್ರಕಟಣೆಗಳ ಸಾಹಿತ್ಯ, ಆಪ್ತಸಂವಾದ ವಾರ್ತಾಪತ್ರಿಕೆ, ಸಮಾಚಾರ ಸಮೀಕ್ಷೆ ಮತ್ತು ಸಾಮಯಿಕ ಲೇಖನಗಳನ್ನು ನಿರಂತರವಾಗಿ ರಚಿಸಿದ್ದಾರೆ.

ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿದ ‘ಸಾಮಾಜಿಕ ಕ್ರಾಂತಿಸೂರ್ಯ ಡಾ|| ಬಾಬಾಸಾಹೇಬ ಅಂಬೇಡ್ಕರ್’ ಕೃತಿಗೆ ಕರ್ನಾಟಕ ಸರಕಾರದ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ವತಿಯಿಂದ ನೀಡುವ 2011ನೇ ಸಾಲಿನ ಅನುವಾದ ಪ್ರಶಸ್ತಿ ಲಭಿಸಿತ್ತು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಬೆಂಗಳೂರು ವಿಶ್ವವಿದ್ಯಾಲಯದ ಆವರಣ ಜ್ಞಾನಭಾರತಿಯ ಕಲಾಗ್ರಾಮದಲ್ಲಿ 2014ರ ಜೂನ್ 19ರಂದು ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಂಡಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಇದನ್ನೂ ಓದಿ | RSS ಪ್ರಚಾರಕ, ಅಂಬೇಡ್ಕರ್‌ ಕುರಿತ ಕೃತಿಯ ಅನುವಾದಕ ಚಂದ್ರಶೇಖರ ಭಂಡಾರಿ ನಿಧನ

Exit mobile version