| ಬಿ. ಸೋಮಶೇಖರ್, ಬೆಂಗಳೂರು
ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನವೇ ಕೇಂದ್ರ ಸರ್ಕಾರವು ಚುನಾವಣೆ ಆಯೋಗದ ಆಯುಕ್ತರನ್ನಾಗಿ ಅರುಣ್ ಗೋಯಲ್ ಅವರನ್ನು ನೇಮಿಸಿದೆ. ಚುನಾವಣೆ ಆಯೋಗದ ಮೂರನೇ ಅತ್ಯುನ್ನತ ಪೋಸ್ಟ್‌ಗೆ ಗೋಯಲ್ ಅವರನ್ನು ಏಕಾಏಕಿ ನೇಮಕ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ, ಒಂದೇ ದಿನದಲ್ಲಿ ಅರುಣ್ ಗೋಯಲ್ ಅವರನ್ನು ಚುನಾವಣೆ ಆಯುಕ್ತರನ್ನಾಗಿ ನೇಮಿಸಿರುವ ಕುರಿತು ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.
ಐಎಎಸ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದ ಒಂದೇ ದಿನದಲ್ಲಿ ಚುನಾವಣೆ ಆಯುಕ್ತರಾಗಿ ಆಯ್ಕೆಯಾದ ಅರುಣ್ ಗೋಯಲ್ ಅವರು ಈಗ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಇವರ ನೇಮಕಾತಿ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ. ಅಷ್ಟಕ್ಕೂ, ಅರುಣ್ ಗೋಯಲ್ ಯಾರು? ಇದುವರೆಗೆ ಕೇಂದ್ರ ಸರ್ಕಾರದ ಯಾವ ಹುದ್ದೆಗಳನ್ನು ಇವರು ನಿಭಾಯಿಸಿದ್ದಾರೆ? ಇವರು ನೇಮಕಗೊಂಡಿರುವ ಪ್ರಕ್ರಿಯೆ ಹೇಗಿದೆ? ಇವರ ಕಾರ್ಯವೈಖರಿ, ಆಡಳಿತ, ಇದುವರೆಗಿನ ಸೇವೆ ಹೇಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ಈ ವಾರದ ವ್ಯಕ್ತಿಚಿತ್ರದಲ್ಲಿ ವಿವರಿಸಲಾಗಿದೆ.
ಅರುಣ್ ಗೋಯಲ್ ಯಾರು, ಹಿನ್ನೆಲೆ ಏನು?
1985ನೇ ಐಎಎಸ್ ಬ್ಯಾಚ್‌ನ ಪಂಜಾಬ್ ಕೇಡರ್ ಅಧಿಕಾರಿಯಾಗಿರುವ ಅರುಣ್ ಗೋಯಲ್ ಅವರು ತಮ್ಮ 37 ವರ್ಷದ ನಾಗರಿಕ ಸೇವೆಯಲ್ಲಿ ಪಂಜಾಬ್ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬ್ರಿಟನ್‌ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಚರ್ಚಿಲ್ ಕಾಲೇಜ್‌ನಲ್ಲಿ ಅಭಿವೃದ್ಧಿ ಎಕನಾಮಿಕ್ಸ್‌ನಲ್ಲಿ (Development Economics) ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚಾಕಚಕ್ಯತೆಗೆ ಹೆಸರಾಗಿದ್ದಾರೆ. ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ, ನಿಗದಿತ ಅವಧಿಯಲ್ಲೇ ನಿಯೋಜಿತ ಯೋಜನೆಯನ್ನು ಪೂರ್ಣಗೊಳಿಸುವ ಚಾಕಚಕ್ಯತೆ ಹೊಂದಿರುವ ಕಾರಣದಿಂದಲೇ ಇವರನ್ನು ‘Man Of Business’ ಎಂದು ಕರೆಯುತ್ತಾರೆ. ಇವರು ಸ್ವಯಂ ನಿವೃತ್ತಿ ಪಡೆಯುವ ಮುನ್ನ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಆಗಿದ್ದರು.
ಗೋಯಲ್ ಕಾರ್ಯನಿರ್ವಹಿಸಿದ ಇಲಾಖೆಗಳು
* ಪಂಜಾಬ್ ವಿವಿಧ ಇಲಾಖೆಗಳಲ್ಲಿ ಸೇವೆ 1993-2010
* ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ 2011
* ಕೇಂದ್ರ ಹಣಕಾಸು, ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ 2012-14
* ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ 2015-16
* ಕಾರ್ಮಿಕ & ಉದ್ಯೋಗ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಹಣಕಾಸು ಸಲಹೆಗಾರ 2017
* ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ 2018-19
* ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ 2020-22
ಚುನಾವಣೆ ಆಯೋಗಕ್ಕೆ ನೇಮಕ, ವಿವಾದವೇಕೆ?
ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಅರುಣ್ ಗೋಯಲ್ ಅವರಿಗೆ 60 ವರ್ಷದ ತುಂಬುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ನಿವೃತ್ತರಾಗುವವರಿದ್ದರು. ಆದರೆ, ಕೇಂದ್ರ ಸರ್ಕಾರವು ನವೆಂಬರ್ 18ರಂದು ಗೋಯಲ್ ಅವರಿಗೆ ಸ್ವಯಂ ನಿವೃತ್ತಿ (Voluntary Retirement) ನೀಡಿತು. ಇದಾದ ಒಂದೇ ದಿನದಲ್ಲಿ ಅಂದರೆ, ನವೆಂಬರ್ 19ರಂದು ಚುನಾವಣೆ ಆಯುಕ್ತರನ್ನಾಗಿ ನೇಮಿಸಲಾಯಿತು. ನವೆಂಬರ್ 21ರಂದು ಅವರು ಚುನಾವಣೆ ಆಯೋಗದ ಆಯುಕ್ತರಾಗಿ ಪದಗ್ರಹಣ ಮಾಡಿದರು. ಹೀಗೆ ತರಾತುರಿಯಲ್ಲಿ ಅರುಣ್ ಗೋಯಲ್ ಅವರಿಗೆ ಸ್ವಯಂ ನಿವೃತ್ತಿ ನೀಡಿ, ಒಂದೇ ದಿನದಲ್ಲಿ ಚುನಾವಣೆ ಆಯುಕ್ತರನ್ನಾಗಿ ನೇಮಿಸಿದ ಕಾರಣ ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮುಖ್ಯ ಚುನಾವಣೆ ಆಯುಕ್ತರು ಸೇರಿ ಚುನಾವಣೆ ಆಯೋಗದ ಪ್ರಮುಖ ಹುದ್ದೆಗಳಿಗೆ ನೇಮಿಸುವ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು ಎಂಬ ಕುರಿತು ಅರ್ಜಿಗಳ ವಿಚಾರಣೆ ನಡೆಸುವ ವೇಳೆ ಅರ್ಜಿದಾರರ ಪರ ವಕೀಲರು ಅರುಣ್ ಗೋಯಲ್ ನೇಮಕವನ್ನೂ ಪ್ರಸ್ತಾಪಿಸಿದರು. ಕೇವಲ 24 ಗಂಟೆಯಲ್ಲಿ ಅರುಣ್ ಗೋಯಲ್ ನೇಮಕಕ್ಕೆ ಕಾನೂನು ಸಚಿವಾಯಲಯವು ಸಮ್ಮತಿ ಸೂಚಿಸಿದೆ. ಇದಾದ ಬಳಿಕ ನಾಲ್ವರು ಸದಸ್ಯರ ಸಮಿತಿಯೂ ಗೋಯಲ್ ನೇಮಕಕ್ಕೆ ಅನುಮೋದನೆ ನೀಡಿದ್ದಾರೆ. ಕೊನೆಗೆ ರಾಷ್ಟ್ರಪತಿಯವರ ಅಂಕಿತವೂ ದೊರೆತು, ಒಂದೇ ದಿನದಲ್ಲಿ ಅವರ ನೇಮಕವಾಗಿದೆ ಎಂಬುದನ್ನು ಪ್ರಸ್ತಾಪಿಸಿದರು. ಆಗ ನ್ಯಾಯಾಲಯವು, “ಅರುಣ್ ಗೋಯಲ್ ಅವರನ್ನು ‘ಮಿಂಚಿನ ವೇಗ’ದಲ್ಲಿ ನೇಮಕ ಮಾಡಿದ್ದು ಏಕೆ” ಎಂದು ಪ್ರಶ್ನಿಸಿತು. ಹಾಗೆಯೇ, “ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಿ” ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. “ನಮಗೆ ಅರುಣ್ ಗೋಯಲ್ ಅವರ ಕಾರ್ಯಕ್ಷಮತೆ ಬಗ್ಗೆ ಅನುಮಾನವಿಲ್ಲ. ಆದರೆ, ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಬೇಕು” ಎಂದೂ ಸ್ಪಷ್ಟಪಡಿಸಿತು. ಅಂದಹಾಗೆ, ಕಳೆದ ಆರು ತಿಂಗಳಿಂದ ಚುನಾವಣೆ ಆಯುಕ್ತರ ಹುದ್ದೆ ಖಾಲಿ ಇತ್ತು.
ಕ್ಯಾಲ್ಕುಲೇಟಿವ್ ಟಾಸ್ಕ್‌ಮಾಸ್ಟರ್
ಅರುಣ್ ಗೋಯಲ್ ಅವರ ನೇಮಕಾತಿ ಪ್ರಕ್ರಿಯೆ ಬಗ್ಗೆ ಆಕ್ಷೇಪ, ಅಸಮಾಧಾನಗಳು ಭುಗಿಲೆದ್ದಿವೆಯೇ ಹೊರತು, ಯಾರೂ ಗೋಯಲ್ ಅವರ ದಕ್ಷತೆ, ಕಾರ್ಯಕ್ಷಮತೆಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಕೋರ್ಟ್ ಕೂಡ ಇದನ್ನೇ ಹೇಳಿದೆ. ಅಷ್ಟರಮಟ್ಟಿಗೆ ಉತ್ತಮ ಆಡಳಿತಗಾರರಾಗಿ ಗೋಯಲ್ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಪಂಜಾಬ್‌ನಲ್ಲಿ ಕಾಂಗ್ರೆಸ್, ಅಕಾಲಿ ದಳ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅವರು ಹಲವು ಇಲಾಖೆಗಳಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಯೋಜನೆಯನ್ನು ಕೈಗೆತ್ತಿಕೊಂಡರೂ ಅದಕ್ಕೊಂದು ಟೈಮ್‌ಲೈನ್ ಫಿಕ್ಸ್ ಮಾಡಿ, ನಿಗದಿತ ಅವಧಿಯೊಳಗೆ ಅಚ್ಚುಕಟ್ಟಾಗಿ ಮುಗಿಸುವುದು ಇವರ ಕಾರ್ಯಶೈಲಿಯ ವೈಶಿಷ್ಟ್ಯವಾಗಿದೆ. ಹಾಗಾಗಿಯೇ, ಇವರನ್ನು ‘ಮ್ಯಾನ್ ಆಫ್ ಬ್ಯುಸಿನೆಸ್’, ‘ಕ್ಯಾಲ್ಕುಲೇಟಿವ್ ಟಾಸ್ಕ್‌ಮಾಸ್ಟರ್’ ಎಂದು ಕರೆಯುತ್ತಾರೆ.
ಆಜಾದಿ ಕಾ ಅಮೃತ ಮಹೋತ್ಸವದ ರೂವಾರಿ
ರಾಷ್ಟ್ರೀಯತೆ ಹಾಗೂ ಭಾರತದ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಅಪಾರ ಗೌರವ ಹೊಂದಿರುವ ಅರುಣ್ ಗೋಯಲ್ ಅವರು ಕೇಂದ್ರ ಸರ್ಕಾರದ ಮಹತ್ತರ ಯೋಜನೆ, ಅಭಿಯಾನಗಳಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಅದರಲ್ಲೂ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ “ಆಜಾದಿ ಕಾ ಅಮೃತ ಮಹೋತ್ಸವ” ಆಚರಿಸುವುದರ ಹಿಂದೆ ಗೋಯಲ್ ಕೊಡುಗೆ ಅಪಾರವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ರೂಪುರೇಷೆ, ಜಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಇವರೇ ಬೆನ್ನೆಲುಬಾಗಿ ನಿಂತಿದ್ದರು ಎಂದು ತಿಳಿದುಬಂದಿದೆ. ಅಷ್ಟರಮಟ್ಟಿಗೆ, ಸರ್ಕಾರದ ಮಟ್ಟದಲ್ಲಿ ಗೋಯಲ್ ಪಾತ್ರ ಮಹತ್ವದ್ದಾಗಿದೆ.
ಗೋಯಲ್ ಮುಂದಿರುವ ಸವಾಲುಗಳೇನು?
ಕಳೆದ ಮೇ ತಿಂಗಳಿಂದ ಖಾಲಿ ಇದ್ದ ಚುನಾವಣೆ ಆಯೋಗದ ಆಯುಕ್ತ ಹುದ್ದೆಗೆ ಗೋಯಲ್ ಅವರು ಆಯ್ಕೆಯಾಗಿದ್ದು, ಸದ್ಯ ಉಂಟಾಗಿರುವ ವಿವಾದ ತಾತ್ಕಾಲಿಕವಾಗಿದೆ. ಅಷ್ಟಕ್ಕೂ, ಅವರ ನೇಮಕ ಪ್ರಕ್ರಿಯೆಗಳ ಬಗ್ಗೆ ಮಾತ್ರ ಆಕ್ಷೇಪವಿದೆ. ಇದೆಲ್ಲವನ್ನೂ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಆದರೆ, ಚುನಾವಣೆ ಆಯುಕ್ತರಾಗಿ ಗೋಯಲ್ ಅವರ ಪಾತ್ರವು ಪ್ರಮುಖವಾಗಿದೆ. ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಆಯುಕ್ತ ಅನೂಪ್ ಚಂದ್ರ ಪಾಂಡೆ ಜತೆಗೂಡಿ ಸಾಲು ಸಾಲು ಚುನಾವಣೆಗಳು, ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವತ್ತ ಕಾರ್ಯೋನ್ಮುಖವಾಗಬೇಕಿದೆ. ಕರ್ನಾಟಕ, ತೆಲಂಗಾಣ, ನಾಗಾಲ್ಯಾಂಡ್ ಸೇರಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ, 2024ರಲ್ಲಿ ಲೋಕಸಭೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಮಹತ್ವದ ಜವಾಬ್ದಾರಿ ಇದೆ. 2025ರ ಫೆಬ್ರವರಿಯಲ್ಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ನಿವೃತ್ತರಾಗುವುದರಿಂದ, ಅಷ್ಟೊತ್ತಿಗೆ ಅನೂಪ್ ಚಂದ್ರ ಪಾಂಡೆ (63 ವರ್ಷ ವಯಸ್ಸು) ಅವರೂ ನಿವೃತ್ತರಾಗುವುದರಿಂದ ಗೋಯಲ್ ಅವರೇ ಮುಖ್ಯ ಆಯುಕ್ತರಾಗುವ ಎಲ್ಲ ಸಾಧ್ಯತೆಗಳೂ ಇವೆ. ಇದಕ್ಕೆ ಇನ್ನೂ ಸಮಯವಿರುವುದರಿಂದ ಗೋಯಲ್ ಅವರು ನೇಮಕ ಪ್ರಕ್ರಿಯೆ ವಿವಾದದಿಂದ ಹೊರಬಂದು, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ಆಯೋಜನೆ ಮೂಲಕ ಜನರ ವಿಶ್ವಾಸ ಗಳಿಸಬೇಕಿದೆ.
ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | Sandhya Devanathan | ಫೇಸ್‌ಬುಕ್‌ನ ಭಾರತೀಯ ಘಟಕದ ಹೊಸ ಸಾರಥಿ ಸಂಧ್ಯಾ ದೇವನಾಥನ್