| ಎಂ.ಕೆ.ಭಾಸ್ಕರ್ ರಾವ್
ಐದು ದಶಕದ ಹಿಂದೆ ಅರಳಿ ಉರುಳಿ ಹೋದ ೧೯೬೯ರ ನೆನಪು ಮತ್ತೆ ಮರುಕಳಿಸಿದೆ. ಬೆಂಗಳೂರು ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಎಐಸಿಸಿ ಅಧಿವೇಶನ. ಸಮಾವೇಶ ಶುರುವಾದಾಗ ಕಾಂಗ್ರೆಸ್ ಒಂದಾಗಿತ್ತು. ಮುಗಿಯುವ ಹೊತ್ತಿಗೆ ಎರಡಾಗಿ ಉದ್ದುದ್ದ ಅಡ್ಡಡ್ಡ ಹೋಳಾಗಿತ್ತು. ಅದಕ್ಕೂ ಪೂರ್ವದಲ್ಲಿಯೇ ಕಾಂಗ್ರೆಸ್ (Congress) ನಾಯಕರ ಮನಸ್ಸು ಒಡೆದು ಹೋಗಿತ್ತು. ಇಂದಿರಾ ಗಾಂಧಿ ಆಗ ಪ್ರಧಾನಿ. ಸಿಹಿ ಇರುವ ಕಡೆ ನೊಣ, ಇರುವೆ ಹೋಗುತ್ತವೆ. ಬಹುತೇಕ ಮುಖಂಡರು ಅಧಿಕಾರದಲ್ಲಿದ್ದ ಇಂದಿರಾರ ಜೊತೆ ಗುರುತಿಸಿಕೊಂಡರು. ವಿರುದ್ಧ ನಿಂತವರು ಎಲ್ಲೆಲ್ಲೋ ಹಂಚಿ ಹೋದರು. ಕ್ರಮೇಣ ಕಾಲದಲ್ಲಿ ಕರಗಿಯೂ ಹೋದರು. ಆ ದಿನಗಳಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವ ರೆಡ್ಡಿ. ಅವರ ಗೆಲುವು ಇಂದಿರಾ ಗಾಂಧಿಯವರಿಗೆ ಬೇಡವಾಗಿತ್ತು.
ಆ ಸಮಯದಲ್ಲಿ ಹಂಗಾಮಿ ರಾಷ್ಟ್ರಪತಿಯಾಗಿದ್ದ ವಿ.ವಿ. ಗಿರಿ ಹುದ್ದೆಗೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ರಾಷ್ಟಪತಿ ಸ್ಥಾನಕ್ಕೆ ಧುಮುಕಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ ವಿರುದ್ಧ ಬಂಡಾಯ ಅಭ್ಯರ್ಥಿ ಎಂದೇ ಅವರನ್ನು ಆಗ ಕರೆಯಲಾಯಿತು. ಆಡಳಿತ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಪ್ರಧಾನಿ ಹೆಗಲೇರಿತ್ತು. ಅದಕ್ಕೆ ಇಂದಿರಾ ಅವರು ಮಾತ್ರ ತಲೆ ಕೆಡಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಶಾಸಕ, ಸಂಸದರಿಗೆ ಅಧಿಕೃತ ಅಭ್ಯರ್ಥಿಗೇ ಮತ ಚಲಾಯಿಸುವಂತೆ “ವ್ಹಿಪ್” ನೀಡುವ ಬದಲಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ ಎಂದು ಬಹಿರಂಗ ಸೂಚನೆ ರವಾನಿಸಿದರು. ಇಂದಿರಾ ಮನಸ್ಸನ್ನು ಅರಿತ “ಮತ”ದಾರರು ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ, ಬಂಡಾಯ ಅಭ್ಯರ್ಥಿಯನ್ನು ರಾಷ್ಟ್ರಪತಿ ಭವನದ ಯಜಮಾನನಾಗಿ ಕಳಿಸಿದರು. ಭಾರತದ ರಾಜಕಾರಣದಲ್ಲಿ ಆತ್ಮಸಾಕ್ಷಿ ಎನ್ನುವುದು ಮುನ್ನಲೆಗೆ ಬಂದ ಮೊದಲ ಪ್ರಕರಣ ಅದು. ಆತ್ಮಸಾಕ್ಷಿ ಎಂದರೆ ಪಕ್ಷದ್ರೋಹ ಎಂಬ ಕುಹಕ ಕೇಳುವಂತಾಗಿದ್ದೂ ಅದೇ ಮೊದಲು.
ಅಷ್ಟುಹೊತ್ತಿಗೆ ಕಾಂಗ್ರೆಸ್ ಇಬ್ಭಾಗವಾಗಿದ್ದ ಕಾರಣ, ಇಂದಿರಾ ವಿರುದ್ಧ ಶಿಸ್ತು ಕ್ರಮದ ಪ್ರಸ್ತಾಪವಾಗಲಿಲ್ಲ. ಯಾರು ಯಾರ ವಿರುದ್ಧ ಕ್ರಮ ಜರುಗಿಸಲು ಸಾಧ್ಯ. ನಂತರದಲ್ಲಿ ಇಂದಿರಾ ಬಣವೇ ಅಧಿಕೃತ ಕಾಂಗ್ರೆಸ್ಸೂ ಆಯಿತಾದ ಕಾರಣ ಇಂದಿರಾ ಮಾಡಿದ್ದೆಲ್ಲವೂ ಕರೆಕ್ಟ್ ಎನಿಸಿತು. ಐವತ್ಮೂರು ವರ್ಷದ ಬಳಿಕ ಈ ಘಟನೆ ಒತ್ತರಿಸಿಕೊಂಡು ನೆನಪಾಗಲು ಕಾರಣ, ಅತ್ತೆ ಇಂದಿರಾ ಇಟ್ಟು ಹೋದ ಹೆಜ್ಜೆಯ ಮೇಲೆ ಅತ್ಯಂತ ನಾಜೂಕಾಗಿ ಹೆಜ್ಜೆ ಊರುತ್ತಿರುವ ಸೊಸೆ ಸೋನಿಯಾ ಗಾಂಧಿ ತೆಗೆದುಕೊಂಡಿರುವ ನಿಲುವು. ಅಂದು ಇಂದಿರಾ ಕಾರ್ಯ ತಂತ್ರಕ್ಕೆ ರಾಷ್ಟ್ರಪತಿ ನೆಪವಾಗಿತ್ತು. ಇವತ್ತು ಸೋನಿಯಾರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಅವರಲ್ಲಿರುವ ಸಾಮರ್ಥ್ಯ ಮರು ಸಾಬೀತು ಮಾಡುವ ಒಂದು ಕಾರಣ.
ಎಐಸಿಸಿ ಅಧ್ಯಕ್ಷ ಹುದ್ದೆ ೨೦೧೯ರಿಂದಲೂ ಖಾಲಿ ಇರುವ ಮತ್ತು ನೆಹರೂ- ಇಂದಿರಾ ಕುಟುಂಬ ನಿಷ್ಠರಿಗೆ ಮಾತ್ರವೇ ರಿಸರ್ವ್ ಆಗಿರುವ ಸ್ಥಾನ. ಅಂದು ಇಂದಿರಾಗೆ ಬೇಕಾದವರೇ ರಾಷ್ಟ್ರಪತಿ ಆದಂತೆ ಈಗ ಸೋನಿಯಾರಿಗೆ ಬೇಕಾದವರೇ ಎಐಸಿಸಿ ಅಧ್ಯಕ್ಷರಾಗುತ್ತಿದ್ದಾರೆ. ಆ ಜಾಗದಲ್ಲಿ ಕರ್ನಾಟಕದ “ಅಮ್ಚಿಗೆಲೆ” ಮಲ್ಲಿಕಾರ್ಜುನ ಖರ್ಗೆ ವಿರಾಜಮಾನರಾಗಲಿದ್ದಾರೆ. ಸೋನಿಯಾ ಮತ್ತು ಅವರ ಇಬ್ಬರು ಮಕ್ಕಳಿಗೆ “ಅತ್ಯಂತ ಆಪ್ತ”ರಾಗಿರುವ ಖರ್ಗೆ ಸೋತರೆ ಮಾತ್ರವೇ ಸುದ್ದಿ. ಗೆದ್ದರೆ ಸುದ್ದಿಯಲ್ಲ; ದೊಡ್ಡ ಸುದ್ದಿಯಂತೂ ಅಲ್ಲವೇ ಅಲ್ಲ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಆರ್‌ಪಿಐ) ಮೂಲಕ ರಾಜಕೀಯ ರಂಗ ತಾಲೀಮಿಗೆ ಇಳಿದ ಖರ್ಗೆ ನಂತರದಲ್ಲಿ ಮುಟ್ಟಿದ್ದೆಲ್ಲ ಚಿನ್ನವಾಗುವ ಮೈದಾಸನಾಗಿದ್ದು ಕಾಂಗ್ರೆಸ್‌ನಲ್ಲಿ. ಚುನಾವಣಾ ರಾಜಕೀಯದಲ್ಲಿ ಖರ್ಗೆ ಹಲವು ಬಾರಿ ಗೆದ್ದವರು. ಒಮ್ಮೆ ಮಾತ್ರವೇ ಸೋತವರು. ಒಂದು ಸೋಲು ತಂದಿತ್ತ ನೋವು; ಹಲವು ಗೆಲುವಿನ ಆನಂದವನ್ನು ಸಂಪೂರ್ಣ ಮಸುಕಾಗಿಸಿದೆ. ಇವತ್ತೂ ಅವರಲ್ಲಿ ಆ ಸೋಲಿನ ಯಾತನೆ ಯಥಾಸ್ಥಿತಿಯಲ್ಲೇ ಇದೆ. ಆದರೂ ಕೆಲವು ಮಾಧ್ಯಮದಲ್ಲಿ ಅವರನ್ನು ಸೋಲಿಲ್ಲದ ಸರದಾರ ಎಂದು ಕರೆಯುವುದುಂಟು. ಖರ್ಗೆ ಅವರಿಗೆ ಒಂಥರಾ ನೆಮ್ಮದಿ ಖುಷಿ ಕೊಡುವ ಸಂಗತಿ ಅದು. ಇರಲಿ.
ಅಧ್ಯಕ್ಷ ಸ್ಥಾನಕ್ಕೆ ನೆಹರೂ-ಇಂದಿರಾ ಕುಟುಂಬದ ಸಕಲ ಸಂಪೂರ್ಣ ಬೆಂಬಲಾಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಿರುವ ಖರ್ಗೆಯವರ ಗೆಲುವಿನ ವಿಚಾರದಲ್ಲಿ ಉಳಿದವರಿಗೆ ಹಾಗಿರಲಿ ಸ್ವತಃ ಮತ್ತೊಬ್ಬ ಅಭ್ಯರ್ಥಿಯಾಗಿರುವ ಶಶಿ ತರೂರ್ ಅವರಿಗೇ ಅನುಮಾನವಿಲ್ಲ. ಮೊನ್ನೆ ಶುಕ್ರವಾರ ದೆಹಲಿ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದ ಆ ಕಾರ್ಯಕ್ರಮದಲ್ಲಿ ಶಶಿ ತರೂರ್ ಬರೋಬ್ಬರಿ ಮೂರು ತಾಸೂ “ರಾಜಕೀಯದಿಂದ ಬಿಡುವು” ಮಾಡಿಕೊಂಡು ನಿರುಮ್ಮಳ ಸ್ಥಿತಿಯಲ್ಲಿ ಕುಳಿತಿದ್ದರು. ಎಐಸಿಸಿ ಅಧ್ಯಕ್ಷ ಚುನಾವಣಾ ಫಲಿತಾಂಶ ಹೀಗೇ ಇರುತ್ತದೆ ಎಂದು ತೀರ್ಮಾನವಾಗಿದೆ ಎಂದು ಶಶಿ ತರೂರರ ಮುಖ ಮುದ್ರೆ ಹೇಳುತ್ತಿತ್ತು. ಅವರ “ಗಪ್ ಚುಪ್” ಬೈಠಕ್‌ಗೆ ಕಾರಣ ಸ್ಪಷ್ಟ. ಸೋನಿಯಾ ಮತ್ತು ಅವರ ಮಕ್ಕಳಿಗೆ ಶಶಿ ಯಾಕೆ ಬೇಡ ಮತ್ತು ಖರ್ಗೆಯವರೇ ಯಾಕೆ ಬೇಕು ಎನ್ನುವುದು ಬಹಳ ಕುತೂಹಲ ಕೆರಳಿಸುವ ಸಂಗತಿಯೇನೂ ಅಲ್ಲ. ಖರ್ಗೆಯವರಲ್ಲಿ ಯಮದಂಡಿ ಪ್ರಮಾಣದಲ್ಲಿರುವ “ಸ್ವಾಮಿನಿಷ್ಠ” ಗುಣ ಶಶಿ ಅವರಲ್ಲಿ ಸೋನಿಯಾರಿಗೆ ಕಂಡಿಲ್ಲ ಎನ್ನುವುದೇ ಈ ಬೇಕು ಮತ್ತು ಬೇಡ ಎನ್ನುವುದರ ಹೂರಣ.
ಖರ್ಗೆಯವರು ಗೆದ್ದರೆ (ಅನುಮಾನ ಬೇಡ ಮಾರಾಯ್ರೆ!) ಎಐಸಿಸಿಗೆ ಅಧ್ಯಕ್ಷರಾದ ಎರಡನೆ ದಲಿತ ಕಾಂಗ್ರೆಸಿಗ ಅವರಾಗಲಿದ್ದಾರೆ. ಬಾಬು ಜಗಜೀವನರಾಂ ಅಧ್ಯಕ್ಷರಾದರೂ ಪೂರ್ಣಾವಧಿ ಇರಲಿಲ್ಲ. ಖರ್ಗೆ ಹುದ್ದೆ ಅಲಂಕರಿಸಿದ ಬಳಿಕ ಪೂರ್ಣಾವಧಿ ಮುಂದುವರಿಯುತ್ತಾರೆ ಎಂಬುದಕ್ಕೆ ಯಾವ ಖಾತ್ರಿಯೂ ಇಲ್ಲ. ಕ್ಷಣಚಿತ್ತ ಕ್ಷಣಪಿತ್ಥ ಮನಃಸ್ಥಿತಿಯ ರಾಹುಲ್, ಹೇಗೆ ಖರ್ಗೆಯವರನ್ನು ಬಳಸಿಕೊಳ್ಳಲಿದ್ದಾರೆ ಎನ್ನುವುದು ಮುಂದೆ ಗೊತ್ತಾಗುತ್ತದೆ. ರಾಷ್ಟ್ರಪತಿ ಹುದ್ದೆ “ರಬ್ಬರ್ ಸ್ಟಾಂಪ್” ಎಂದು ಜನ ಗೇಲಿಮಾಡುವಂತಾಗಿದ್ದು ಫಕ್ರುದ್ದೀನ್ ಅಲಿ ಅಹಮದ್ ಕಾಲಾವಧಿಯಲ್ಲಿ. ಸಂಪುಟದಲ್ಲಿ ಚರ್ಚೆ ಇಲ್ಲದೆ ನಿರ್ಣಯವಾಗದೆ ತುರ್ತು ಪರಿಸ್ಥಿತಿ ಹೇರುವ ತೀರ್ಮಾನಕ್ಕೆ ಇಂದಿರಾ ಬಂದಾಗ ಆ ಸುಗ್ರೀವಾಜ್ಞೆಗೆ ಹಿಂದೆಮುಂದೆ ನೋಡದೆ ಕಣ್ಮುಚ್ಚಿ ಸಹಿ ಹಾಕಿದ ರಾಷ್ಟ್ರಪತಿ ಫಕ್ರುದ್ದೀನ್. ಗಿರಿಯವರ ಕಾಲದಲ್ಲೂ ರಬ್ಬರ್ ಸ್ಟಾಂಪ್ ಹೆಸರು ಯಥಾಸ್ಥಿತಿಯಲ್ಲಿ ಉಳಿದುಕೊಂಡಿತು. ಈಗ ಸೋನಿಯಾ ಗಾಂಧಿ, ಖರ್ಗೆಯವರನ್ನು ಎಐಸಿಸಿ ಸಿಂಹಾಸನದಲ್ಲಿ ಕೂರಿಸುತ್ತಿದ್ದಾರೆ. ಎಲ್ಲ ನಿರ್ಣಯಗಳನ್ನೂ ಸೋನಿಯಾ ಮತ್ತು ಮಕ್ಕಳು ತೆಗೆದುಕೊಳ್ಳುತ್ತಾರೆ. ಅದನ್ನು ಖರ್ಗೆ ಅನುಷ್ಠಾನಕ್ಕೆ ತರುತ್ತಾರೆ.
ಎಐಸಿಸಿ ಕಾರ್ಯಕಲಾಪ ಪಾರದರ್ಶಕವಾಗಿರಬೇಕು; ಅಲ್ಲಿ ಮತ್ತೆ ಜನತಂತ್ರ ಜೀವತಳೆಯಬೇಕು ಎಂದು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ಜಿ-೨೩ ಗುಂಪಿನ ಸದಸ್ಯರಲ್ಲಿ ಶಶಿ ತರೂರ್ ಕೂಡಾ ಒಬ್ಬರು. ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಕಳೆದ ಒಂದೆರಡು ವರ್ಷದಲ್ಲಿ ಮೂವತ್ತಕ್ಕೂ ಅಧಿಕ ಹಿರಿಯ ಕಾಂಗ್ರೆಸ್ ಮುಖಂಡರು ಹೊರಕ್ಕೆ ಹೋಗಿದ್ದಾರೆ. ಒಳಗಿದ್ದುಕೊಂಡೇ ಹೋರಾಡುವ ಇಚ್ಛೆಯಲ್ಲಿ ಅಧ್ಯಕ್ಷ ಸ್ಥಾನಾಕಾಂಕ್ಷಿಯಾಗಿ ಕಣಕ್ಕೆ ಇಳಿದಿರುವ ಶಶಿ ಅವರನ್ನು ಸೋಲಿಸಿ ಮೂಲೆಗುಂಪು ಮಾಡುವ ಕಾರ್ಯತಂತ್ರ ಈಗಾಗಲೇ ಕಾರ್ಯಾರಂಭ ಮಾಡಿದೆ.
ಎಐಸಿಸಿ, ಪಿಸಿಸಿ, ಕಾರ್ಯಕಾರಿ ಸಮಿತಿ ಸದಸ್ಯರನ್ನು ಎಐಸಿಸಿ ನಾಯಕತ್ವ ನೇಮಕ ಮಾಡಿದೆ. ಇವರೇ ಅಧ್ಯಕ್ಷರನ್ನು ಆಯ್ಕೆ ಮಾಡುವ ಮತದಾರರು. ಮತದಾರರ ಪಟ್ಟಿಯಲ್ಲಿ ವಿಳಾಸವಿಲ್ಲದ, ಟೆಲಿಫೋನ್ ನಂಬರ್ ಇಲ್ಲದ ಸಾವಿರಾರು ಹೆಸರುಗಳಿವೆ. ಹೀಗಿರುವಾಗ ಈ ಮತದಾರರನ್ನು ಇಂಥವರೇ ಎಂದು ಗುರುತಿಸಿ ಅವರನ್ನು ಮುಟ್ಟುವ ಬಗೆ ಹೇಗೆ ಎನ್ನುವುದಕ್ಕೆ ಚುನಾವಣಾ ಉಸ್ತುವಾರಿ ಮಧುಸೂಧನ್ ಮಿಸ್ತ್ರಿಯವರಲ್ಲಿ ಉತ್ತರವಿಲ್ಲ. ಸ್ಪರ್ಧಾಕಾಂಕ್ಷಿಗಳು ಮತದಾರರನ್ನು ತಲುಪುವ ಮಾರ್ಗವೆಲ್ಲವೂ ಮುಚ್ಚಿಹೋಗಿರುವ ಸ್ಥಿತಿಯಲ್ಲಿ ಶಶಿ ತರೂರ್ ಗಂಟಲು ಹರಿದು ಕೊಳ್ಳುತ್ತಿರುವ ಪಾರದರ್ಶಕತೆ ಎಲ್ಲಿಂದ ಬರಬೇಕು. ತಥಾಕಥಿತ ಈ ಮತದಾರರಿಗೆ ತಮ್ಮನ್ನು ಎಐಸಿಸಿಗೆ ಪಿಸಿಸಿಗೆ ನೇಮಕ ಮಾಡಿದವರು ಯಾರೆನ್ನುವುದು ಗೊತ್ತಿದೆ. ಆ ಋಣ ತೀರಿಸಿಕೊಳ್ಳುವುದಕ್ಕೆ ತಕ್ಕ ಸಮಯಾವಕಾಶಕ್ಕೆ ಅವರು ಕಾದಿರುತ್ತಾರೆ. ಸೋನಿಯಾ, ರಾಹುಲ್ ಬೆಂಬಲಿತ ಅಭ್ಯರ್ಥಿ ಖರ್ಗೆ ಎಂಬ ಸಂದೇಶ ಈಗಾಗಲೇ ದೇಶದ ಉದ್ದಗಲಕ್ಕೆ ರವಾನೆಯಾಗಿದೆ. ಸರ್ವಸಮ್ಮತ ಆಯ್ಕೆಯಾಗದೆ ಚುನಾವಣೆ ನಡೆದುದೇ ಹೌದಾದಲ್ಲಿ ಯಾರಿಗೆ ತಮ್ಮ ಓಟನ್ನು ಗುದ್ದಬೇಕೆನ್ನುವುದು ಮತದಾರರಿಗೆ ಮನವರಿಕೆಯಾಗಿದೆ.
ಖರ್ಗೆಯವರು ಎಂಥ “ಸ್ವಾಮಿನಿಷ್ಠ” ಎನ್ನುವುದಕ್ಕೆ ಶನಿವಾರ ಅವರು ತೆಗೆದುಕೊಂಡಿರುವ ನಿರ್ಧಾರ ಒಂದು ಪಕ್ಕಾ ಸಾಕ್ಷಿ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಬೇಕು ಎನ್ನುವುದು ನೆಹರೂ-ಇಂದಿರಾ ಕುಟುಂಬದ ಬಯಕೆ ಆಗಿತ್ತು. ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ಸಿಎಂ ಹುದ್ದೆಗೆ ರಾಜಿನಾಮೆ ನೀಡಬೇಕೆಂಬ “ಮೇಲಿನ ಅಪ್ಪಣೆ”ಯನ್ನು ಗೆಹ್ಲೋಟ್ ಉಲ್ಲಂಘಿಸಿ, ಹೈಕಮಾಂಡ್ ವಿರುದ್ಧ ತೋಳೇರಿಸಿ ತೊಡೆ ತಟ್ಟಿದರು. ಇದು ಸೋನಿಯಾ ಮತ್ತು ಅವರ ಮಕ್ಕಳ ಕಣ್ಣನ್ನು ಕೆಂಪಗೆ ಮಾಡಿರುವ ಬೆಳವಣಿಗೆ. ಖರ್ಗೆ ಹೀಗೆ ಮಾಡಲಿಲ್ಲ. ಮಾಡುವವರೂ ಅಲ್ಲ. ಕಾಂಗ್ರೆಸ್‌ಗೆ ಬಂದಾರಭ್ಯ ಅವರ ಹೈಕಮಾಂಡ್ ನಿಷ್ಠೆಗೆ ಒಮ್ಮೆಯೂ ಚ್ಯುತಿ ಎದುರಾದ ಉದಾಹರಣೆ ಇಲ್ಲವೇ ಇಲ್ಲ. ಈ ನಾಮಪತ್ರ ಸಲ್ಲಿಸುವುದಕ್ಕೆ ಮೊದಲು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ, “ನಿಮ್ಮ ಅಂತರಂಗವನ್ನು ನಾನು ಓದಬಲ್ಲೆ” ಎಂದು ಸೋನಿಯಾರಿಗೆ ತಿಳಿಸಿ, ಅವರಿಂದ ಹಂಡ್ರೆಡ್ ಪರ್ಸೆಂಟ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ.
ಎಸ್. ನಿಜಲಿಂಗಪ್ಪನವರು ೧೯೬೯ರಲ್ಲಿ ಅವಿಭಾಜಿತ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆ ಹುದ್ದೆಗೆ ಏರಿದ ಮೊದಲ ಕನ್ನಡಿಗ ಅವರು. ಇದೀಗ ಮತ್ತೊಬ್ಬ ಕನ್ನಡಿಗ ಖರ್ಗೆ ಆ ಸ್ಥಾನಕ್ಕೆ ಬರುವುದು ೯೯.೯೯ ಪರ್ಸೆಂಟ್ ಎನ್ನುತ್ತರಲ್ಲ ಹಾಗೆ ಬಹುತೇಕ ಖಾತ್ರಿಯಾಗಿದೆ. ಅವರು ಎಐಸಿಸಿ ಅಧ್ಯಕ್ಷರಾದರೆ ಮೊದಲು ಅವರು ಎದುರಿಸಬೇಕಾಗಿರುವ ಸವಾಲು ಕರ್ನಾಟಕ ಕಾಂಗ್ರೆಸ್‌ನೊಳಗೆ ನಡೆದಿರುವ ಗುಂಪುಗಾರಿಕೆಯನ್ನು ನಿವಾರಿಸುವುದು. ಖರ್ಗೆ ಹಲವು ಬಾರಿ ಕನಸು ಕಂಡಿದ್ದ ಮುಖ್ಯಮಂತ್ರಿ ಸ್ಥಾನದ ಮೇಲೆ ಇಲ್ಲಿ ಹಲವರು ಕಣ್ಣು ಹಾಕಿದ್ದಾರೆ. ಕಪಿಸಿಸಿ ಅಧ್ಯಕ್ಷ ಡಿ.ಕೆ. ಶೀವಕುಮಾರ್, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮುಸುಕಿನೊಳಗೇ ಯುದ್ಧ ನಡೆದಿದೆ. ರಾಜಸ್ತಾನದಲ್ಲಿ ತಾನು ಮುಖ್ಯಮಂತ್ರಿ ಆಗೇಬಿಟ್ಟೆ ಎಂದು ತಿಳಿದಿದ್ದ ಸಚಿನ್ ಪೈಲಟ್, ಗೆಹ್ಲೋಟ್ ವಿರುದ್ಧ ಸಮರವನ್ನು ಮುಂದುವರಿಸುವವರಿದ್ದಾರೆ. ಛತ್ತೀಸ್‌ಗಢ, ರಾಜಸ್ತಾನ, ಕರ್ನಾಟಕ ಒಳಗೊಂಡಂತೆ ಹಲವು ರಾಜ್ಯ ವಿಧಾನ ಸಭೆಗೆ ಒಂದು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಅಲ್ಲೆಲ್ಲ ಕಾಂಗ್ರೆಸ್ ಚೇತರಿಸಿಕೊಳ್ಳದಿದ್ದರೆ ಸೋನಿಯಾ ನಿಷ್ಠ ಬಣ ಖರ್ಗೆಯವರ ತಲೆದಂಡಕ್ಕೆ ಆಗ್ರಹ ಮಂಡಿಸಲಿದೆ. ಇದನ್ನೆಲ್ಲ ಮನನ ಮಾಡಿಕೊಂಡಿರುವ ಖರ್ಗೆ ಮುಳ್ಳಿನ ಕಿರೀಟ ಧರಿಸಲಿದ್ದಾರೆ. ಖರ್ಗೆ ಎಷ್ಟೆಂದರೂ ನಮ್ಮವರು, ಆ ಮುಳ್ಳು ಅವರನ್ನು ಚುಚ್ಚದಿರಲಿ.
ಇದನ್ನೂ ಓದಿ | Congress President | ಖರ್ಗೆ ಸ್ಪರ್ಧೆ ಹಿಂದಿನ ಲೆಕ್ಕಾಚಾರ ಏನು? ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭ?