ವಿದ್ಯುತ್ತು ದೇಶದ ಹಳ್ಳಿಹಳ್ಳಿಗೂ ಇಂದು ತಲುಪಿದೆ. ವಿದ್ಯುತ್ ಉತ್ಪಾದನೆ, ವಿತರಣೆ ಒಂದು ಜಾಲದ ಮೂಲಕ ಗ್ರಾಹಕನವರೆಗೆ ತಲುಪುತ್ತದೆ. ಬಹುತೇಕ ವಿದ್ಯುತ್ ಬಳಕೆದಾರರಿಗೆ ತಾನು ಗ್ರಾಹಕನೆಂಬ ಕಲ್ಪನೆ ಇರುವುದಿಲ್ಲ. ವಿದ್ಯುತ್ ಪೂರೈಕೆಯ ಸೇವೆಯಲ್ಲಿ ವ್ಯತ್ಯಯವಾಗಿ ಬಳಕೆದಾರನಿಗೆ ಹಾನಿ ಸಂಭವಿಸಿದರೆ ಅದಕ್ಕೆ ವಿದ್ಯುತ್ ನಿಗಮಗಳು ಪರಿಹಾರವನ್ನು ನೀಡಬೇಕಾಗುತ್ತದೆ. ವಿದ್ಯುತ್ ತೆಗೆಯುವುದಿದ್ದರೂ ಗ್ರಾಹಕರಿಗೆ ಮುಂಚಿತವಾಗಿ ತಿಳಿಸಬೇಕಾಗುತ್ತದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಎಂಬ ಸುದ್ದಿ ಅಥವಾ ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟವಾಗುವುದು ಇಂಥ ಉತ್ತರದಾಯಿತ್ವದ ಕಾರಣದಿಂದಾಗಿಯೇ.
ಪ್ರಸ್ತುತ ಪ್ರಕರಣವು ಚಿತ್ರದುರ್ಗ ಜಿಲ್ಲೆಯ ಗ್ರಾಹಕ ವೇದಿಕೆಯಲ್ಲಿ ದಾಖಲಾಗಿದ್ದು. ವಿದ್ಯುತ್ ಇಲಾಖೆಯ ನೌಕರರು ವಿದ್ಯುತ್ ವಯರಿಗೆ ಸರಿಯಾಗಿ ಟೇಪನ್ನು ಅಂಟಿಸದೇ ಇದ್ದುದರಿಂದ ಗೋಲಿಯಾಡುತ್ತಿದ್ದ ಬಾಲಕನೊಬ್ಬ ಗೋಲಿ ಹೆಕ್ಕಲು ಹೋದಾಗ ಆ ವಯರನ್ನು ಮುಟ್ಟಿ ಪ್ರಾಣ ಕಳೆದುಕೊಳ್ಳುತ್ತಾನೆ. ಆತನ ಸಾವಿಗೆ ಯಾರು ಪರಿಹಾರವನ್ನು ಕೊಡಬೇಕು ಎಂಬ ವಿಚಾರ ಗ್ರಾಹಕ ವೇದಿಕೆಯ ಮೆಟ್ಟಿಲನ್ನು ಏರಿತ್ತು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಭೋವಿ ಕಾಲನಿಯ ಶಿವಮೂರ್ತಿ ಎಂಬವರ ಪುತ್ರ ಕಿರಣ್ 01-06-2015ರಂದು 1 ಗಂಟೆ ಸುಮಾರಿಗೆ ಪಂಪ್ ಹೌಸ್ ಹತ್ತಿರ ಸ್ನೇಹಿತನ ಜೊತೆ ಗೋಲಿಯಾಡುತ್ತಿದ್ದ. ಕಿರಣ್ ಆಡುತ್ತಿದ್ದ ಗೋಲಿ ಪಂಪ್ ಹೌಸ್ ಹತ್ತಿರ ಇದ್ದ ವಿದ್ಯುತ್ ಕಂಬದ ಬಳಿ ಹೋಗಿ ಬಿತ್ತು. ಅದನ್ನು ತರಲು ಆತ ಹೋದಾಗ ಅಲ್ಲಿದ್ದ ವಯರಿಗೆ ಆತನ ಕೈ ತಾಗಿ ವಿದ್ಯುತ್ ಹರಿದು ಆಘಾತಕ್ಕೊಳಗಾಗುತ್ತಾನೆ. ಆತನನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಒಯ್ಯುತ್ತಾರೆ. ಚಿಕಿತ್ಸೆ ಫಲಿಸದೆ ಬಾಲಕ ಆಸ್ಪತ್ರೆಯಲ್ಲಿ ಸಾಯುತ್ತಾನೆ. ಈ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಇಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ 31-07-2015ರಂದು ನೀಡಿದ ವರದಿಯಲ್ಲಿ ವಿದ್ಯುತ್ ವಯರುಗಳನ್ನು ಸರಿಯಾಗಿ ಮುಚ್ಚಿದ್ದರೆ ಈ ದುರಂತ ಘಟನೆ ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ತಮ್ಮ ಮಗನ ಸಾವು ಸಂಭವಿಸಿದೆ ಎಂದು ಹೆತ್ತವರು ದೂರಿದರು. ಈ ಸಂಬಂಧ ಅವರು ಪರಿಹಾರಕ್ಕಾಗಿ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ ಅಲ್ಲಿ ಪ್ರಕರಣ ಇತ್ಯರ್ಥವಾಗಲಿಲ್ಲ. ಇದರಿಂದ ನೊಂದ ಅವರು ಪರಿಹಾರ ಕೋರಿ ನಾಲ್ವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಚಿತ್ರದುರ್ಗ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ತಮಗೆ 10 ಲಕ್ಷ ರು.ಗಳನ್ನು ಪರಿಹಾರವಾಗಿ ಕೊಡಿಸಬೇಕು. ಇದಕ್ಕೆ ಶೇ.12ರಂತೆ ಬಡ್ಡಿಯನ್ನು ಮತ್ತು ಇತರ ಪರಿಹಾರಗಳನ್ನು ಕೊಡಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ಗ್ರಾಹಕ ಜಾಗೃತಿ | ವೈದ್ಯರು ಚಿಕಿತ್ಸೆ ನೀಡುವಾಗ ಕೇರ್‌ಲೆಸ್ ಮಾಡಿದರೆ ಏನು ಮಾಡಬೇಕು?
ಇಲ್ಲಿ ಮೊದಲನೆ ಪ್ರತಿವಾದಿಯನ್ನಾಗಿ ಹಿರಿಯೂರಿನ ಬೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್, 2ನೆ ಪ್ರತಿವಾದಿ ಮೊಳಕಾಲ್ಮೂರು ಪಟ್ಟಣದ ಬೆಸ್ಕಾಂ ಅಸಿಸ್ಟಂಟ್ ಎಂಜಿನಿಯರ್, ಮೂರನೆ ಪ್ರತಿವಾದಿ ಬೆಸ್ಕಾಂ ಗ್ರೇಡ್ 2 ಮೆಕಾನಿಕ್ ಹಾಗೂ 4ನೆ ಪ್ರತಿವಾದಿ ಬೀದಿದೀಪ ನಿರ್ವಹಣೆ ಮಾಡುವ ಗುತ್ತಿಗೆದಾರ. 2ನೆ ಪ್ರತಿವಾದಿಯು ತನ್ನ ಉತ್ತರದಲ್ಲಿ, ಬೆಸ್ಕಾಂ ಕೆಪಿಟಿಸಿಎಲ್ ಅಡಿಯಲ್ಲಿ ಬರುತ್ತದೆ. ಪ್ರತಿವಾದಿ 2 ಮತ್ತು 4ರ ನಡುವೆ ಬೀದಿದೀಪ ನಿರ್ವಹಣೆಯ ವಿಷಯದಲ್ಲಿ ಒಂದು ಒಪ್ಪಂದ 29-03-2010ರಂದು ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ ಯಾವುದೇ ಆಸ್ತಿ ಅಥವಾ ಜೀವಹಾನಿ ಸಂಭವಿಸಿದಲ್ಲಿ ಪರಿಹಾರ ನೀಡುವುದಕ್ಕೆ ವಿದ್ಯುತ್ ಪೂರೈಕೆದಾರರು ಹೊಣೆಗಾರರಾಗುವುದಿಲ್ಲ. ಪ್ರತಿವಾದಿ 4 ಇಡೀ ಪಟ್ಟಣದ ಬೀದಿ ದೀಪದ ನಿರ್ವಹಣೆ ಮಾಡುವವವರು. ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದರೆ ಅದಕ್ಕೆ ಅವರನ್ನೇ ಹೊಣೆ ಮಾಡಬೇಕು. ಕಾರಣ ತಮ್ಮ ವಿರುದ್ಧದ ದೂರನ್ನು ವಜಾ ಮಾಡಬೇಕು ಎಂದು ಕೋರಿದರು.
ಪ್ರತಿವಾದಿ 4 ಸಲ್ಲಿಸಿದ ಉತ್ತರದಲ್ಲಿ, ತಮ್ಮ ಜವಾಬ್ದಾರಿ ವಿದ್ಯುತ್ ಬಲ್ಬು ಮತ್ತು ಟ್ಯೂಬುಗಳನ್ನು ಪೂರೈಸುವುದು ಮಾತ್ರ. ವಯರುಗಳು ಮತ್ತು ಇತರ ವಸ್ತುಗಳ ನಿರ್ವಹಣೆ ಮೊದಲ ಮೂವರು ಪ್ರತಿವಾದಿಗಳಿಗೆ ಸಂಬಂಧಿಸಿದ್ದು. ವಿದ್ಯುತ್ ನೆಲದಲ್ಲಿ ಇಳಿಯುತ್ತಿದ್ದುದು ತಮಗೆ ಗೊತ್ತಿದ್ದರೂ ಸೂಕ್ತ ಕ್ರಮ ಜರುಗಿಸಲಿಲ್ಲ ಎಂಬ ಆರೋಪ ಸುಳ್ಳು. ಈ ವಿಷಯದಲ್ಲಿ ತಮಗೆ ಜ್ಞಾನವೂ ಇಲ್ಲ. ಇದರಲ್ಲಿ ತಮ್ಮ ಹೊಣೆಗಾರಿಕೆ ಏನೂ ಇಲ್ಲ. ಕಾರಣ ತಮ್ಮ ವಿರುದ್ಧದ ದೂರನ್ನು ವಜಾ ಮಾಡಿ ಎಂದು ಕೋರಿದರು.
ಜಿಲ್ಲಾ ವೇದಿಕೆಯು ದೂರನ್ನು ಪುರಸ್ಕರಿಸಿ ಪ್ರತಿವಾದಿ 1ರಿಂದ 3ನೆಯವರು ದೂರುದಾರರಿಗೆ 9.50 ಲಕ್ಷ ರೂ. ಪರಿಹಾರ ನೀಡಬೇಕು. ಘಟನೆ ನಡೆದ ದಿನದಿಂದ ಶೇ.9ರಂತೆ ಬಡ್ಡಿ ನೀಡಬೇಕು. ಅಲ್ಲದೆ ದೂರುದಾರರಿಗೆ ಆಗಿರುವ ತೊಂದರೆಗೆ 10 ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚವೆಂದು 5 ಸಾವಿರ ರೂ.ಗಳನ್ನು ತೀರ್ಪು ಬಂದ 30 ದಿನಗಗಳ ಒಳಗಾಗಿ ನೀಡಬೇಕು ಎಂದು ಆದೇಶಿಸಿತು. ಪ್ರತಿವಾದಿ 4ನ್ನು ಆರೋಪದಿಂದ ಮುಕ್ತಗೊಳಿಸಿತು.
ಈ ತೀರ್ಪಿನಿಂದ ಅಸಮಾಧಾನಗೊಂಡ ಪ್ರತಿವಾದಿ 1, 2, 3 ಕರ್ನಾಟಕ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದರು. ಈ ಮೂವರು ತಮ್ಮ ಹೊಣೆಗಾರಿಕೆಯನ್ನು ತಪ್ಪಿಸಿಕೊಂಡು ಅದನ್ನು ಪ್ರತಿವಾದಿ 4ರ ಮೇಲೆ ಹೊರಿಸಲು ಯತ್ನಿಸುತ್ತಿರುವುದನ್ನು ರಾಜ್ಯ ಆಯೋಗ ವಿಚಾರಣೆ ವೇಳೆ ಮನಗಂಡಿತು. ಕಿರಣನ ಮರಣೋತ್ತರ ಪರೀಕ್ಷೆಯಲ್ಲಿ ಸಾವು ವಿದ್ಯುತ್ ಆಘಾತ ಮತ್ತು ಆನಂತರದ ಹೃದಯಸ್ತಂಭನದಿಂದ ಸಂಭವಿಸಿದೆ ಎಂದು ಹೇಳಲಾಗಿತ್ತು. ಪೊಲೀಸರ ಆರೋಪಪಟ್ಟಿಯಲ್ಲಿ ಸ್ವಿಚ್‌ಬೋರ್ಡ್‌ನಿದ ಹೊರಬಂದ ವಯರು ತಗುಲಿಯೇ ಶಾಕ್ ಆಗಿದ್ದು. ಆ ವಯರನ್ನು ಸರಿಯಾಗಿ ಟೇಪಿನಿಂದ ಮುಚ್ಚಿದ್ದರೆ ಶಾಕ್ ಆಗುತ್ತಿರಲಿಲ್ಲ. ಈ ಕೆಲಸ ಮಾಡಬೇಕಾದವರು ಪ್ರತಿವಾದಿ 1, 2 ಮತ್ತು 3. ಇದು ಅವರ ಕರ್ತವ್ಯದ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಇದನ್ನೂ ಓದಿ: ಗ್ರಾಹಕ ಜಾಗೃತಿ | ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರಷ್ಟೇ ಯಶಸ್ವಿನಿ ವಿಮೆ ಪರಿಹಾರ
ಸುಪ್ರೀಂ ಕೋರ್ಟ್ ಲೆಕ್ಕಹಾಕಿರುವ ರಾಷ್ಟ್ರೀಯ ವರಮಾನ ಮತ್ತು ಸಾವಿಗೀಡಾದ ವ್ಯಕ್ತಿ ಕುಟುಂಬದ ಸಂಪಾದನೆ ಮಾಡದ ಸದಸ್ಯ ಎಂಬುದನ್ನು ಪರಿಗಣಿಸಿ ಜಿಲ್ಲಾ ವೇದಿಕೆಯು 9 ಲಕ್ಷ ರೂಪಾಯಿ ಪರಿಹಾರ ನಿಗದಿ ಮಾಡಿತ್ತು. ಮತ್ತು ದೂರುದಾರರು ವೈದ್ಯಕೀಯ ವೆಚ್ಚದ ಬಿಲ್, ಪ್ರಯಾಣದ ಖರ್ಚು ವಿವರ ಸಲ್ಲಿಸಿರಲಿಲ್ಲ. ಅದಕ್ಕೆ 50 ಸಾವಿರ ರುಪಾಯಿ ಮತ್ತು ಮಾನಸಿಕ ಕಿರಿಕಿರಿಗಾಗಿ 10 ಸಾವಿರ ರುಪಾಯಿ ಮತ್ತು ವ್ಯಾಜ್ಯದ ವೆಚ್ಚ 5 ಸಾವಿರ ರುಪಾಯಿಗಳನ್ನು ಪರಿಹಾರ ನೀಡಬೇಕೆಂದು ಹೇಳಿರುವುದು ಸರಿಯಾಗಿದೆ. ಆದರೆ ಬಡ್ಡಿಯನ್ನು ಶೇ. 9ರಷ್ಟು ಎಂಬುದು ಅಧಿಕವಾಗಿದೆ. ಅದನ್ನು ಶೇ.6ಕ್ಕೆ ಇಳಿಸಿರುವುದಾಗಿ ತೀರ್ಪನ್ನು ನೀಡಿತು.
ಅಂಕಣಕಾರರ ಪರಿಚಯ: ಡಾ. ವಾಸುದೇವ ಶೆಟ್ಟಿ ಅವರು ಹಿರಿಯ ಪತ್ರಕರ್ತರು. ಗ್ರಾಹಕರ ಹಕ್ಕುಗಳ ಪ್ರತಿಪಾದಕರು. ಕಳೆದ ಹಲವು ವರ್ಷಗಳಿಂದ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.