Site icon Vistara News

ಗ್ರಾಹಕ ಜಾಗೃತಿ ಅಂಕಣ | ಬ್ಯಾಂಕ್‌ಗಳು ವಿಳಂಬವಾಗಿ ಸಲ್ಲಿಸಿದರೆ ಮೇಲ್ಮನವಿ ವಜಾ

customer

ಗ್ರಾಹಕ ನ್ಯಾಯಾಲಯಗಳ ಸ್ಥಾಪನೆಯ ಉದ್ದೇಶ ತ್ವರಿತವಾಗಿ, ಸರಳವಾಗಿ ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸಬೇಕು ಎಂಬುದು. ಕೆಲವೊಮ್ಮೆ ಸಣ್ಣ ಸಣ್ಣ ಮೊತ್ತಗಳಿಗೂ ದೊಡ್ಡ ದೊಡ್ಡ ಸಂಸ್ಥೆಗಳು ಮೇಲ್ಮನವಿಯನ್ನು ಸಲ್ಲಿಸಿ ವ್ಯರ್ಥವಾಗಿ ಕಾಲ ವಿಳಂಬಕ್ಕೆ ಕಾರಣವಾಗುತ್ತವೆ. ಇದರ ಬಗ್ಗೆ ಗ್ರಾಹಕ ನ್ಯಾಯಾಲಯಗಳು ಕಟುವಾಗಿ ಟಿಪ್ಪಣಿಯನ್ನು ಮಾಡುತ್ತ ಬಂದಿವೆ. ಹೀಗಿದ್ದೂ ವಿಳಂಬವಾಗಿ ಮೇಲ್ಮನವಿಯನ್ನು ಸಲ್ಲಿಸಿ ವಿನಾಯ್ತಿಯನ್ನು ಬೇಡುವ ಪರಿಪಾಠವನ್ನು ಸಂಸ್ಥೆಗಳು ರೂಢಿಸಿಕೊಂಡಿವೆ. ಇಲ್ಲಿ ಅಂಥ ಒಂದು ಪ್ರಕರಣವಿದೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅರುಣ ಮಾನದೇವರಾವ್‌ ಗಾವಂಡೆ ಎಂಬವರು ಐಸಿಐಸಿಐ ಬ್ಯಾಂಕಿನಿಂದ 3.60 ಲಕ್ಷ ರುಪಾಯಿ ಗೃಹಸಾಲವನ್ನು ಪಡೆದಿದ್ದರು. ಬ್ಯಾಂಕು ತಮ್ಮಿಂದ ಅಧಿಕ ಬಡ್ಡಿಯನ್ನು ವಸೂಲು ಮಾಡಿದೆ ಎಂಬ ತಕರಾರನ್ನು ಗಾವಂಡೆಯವರು ಅಮರಾವತಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಜಿಲ್ಲಾ ವೇದಿಕೆಯು 03-10-2015ರಂದು ನೀಡಿದ ತೀರ್ಪಿನಲ್ಲಿ ದೂರನ್ನು ಭಾಗಶಃ ಪುರಸ್ಕರಿಸಿತು. ಮತ್ತು ಹೆಚ್ಚುವರಿಯಾಗಿ ವಸೂಲು ಮಾಡಿರುವ 78,123 ರುಪಾಯಿಗಳನ್ನು ಸಾಲದ ಉಳಿದಿರುವ ಮೊತ್ತದಲ್ಲಿ ಮರುಹೊಂದಾಣಿಕೆ ಮಾಡಬೇಕು ಮತ್ತು 01-01-2013ರಿಂದ ಅನ್ವಯವಾಗುವಂತೆ ಈ ಹಣಕ್ಕೆ ಶೇ.8ರಂತೆ ಬಡ್ಡಿಯನ್ನು ನೀಡಬೇಕು. ಪರಿಹಾರವೆಂದು 10 ಸಾವಿರ ರುಪಾಯಿಗಳನ್ನು ಮತ್ತು ವ್ಯಾಜ್ಯದ ವೆಚ್ಚವೆಂದು 5 ಸಾವಿರ ರುಪಾಯಿಗಳನ್ನು ನೀಡಬೇಕು ಎಂದು ಆದೇಶಿಸಿತು.

ಇದರ ವಿರುದ್ಧ ಬ್ಯಾಂಕು ಮಹಾರಾಷ್ಟ್ರ ರಾಜ್ಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಆದರೆ ಮೇಲ್ಮನವಿಯನ್ನು ಅವಧಿ ಮೀರಿ ಸಲ್ಲಿಸಲಾಗಿತ್ತು. ಗ್ರಾಹಕ ರಕ್ಷಣೆ ಕಾಯ್ದೆ 2019ರ ಸೆಕ್ಷನ್‌ 41ರ ಪ್ರಕಾರ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ 45 ದಿನಗಳ ಒಳಗಾಗಿ ರಾಜ್ಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ. ಆದರೆ ಈ ಪ್ರಕರಣದಲ್ಲಿ ಬ್ಯಾಂಕು ಒಟ್ಟೂ 97 ದಿನಗಳಷ್ಟು ವಿಳಂಬವನ್ನು ಮಾಡಿತ್ತು. ಈ ವಿಳಂಬವನ್ನು ಮನ್ನಿಸಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಬೇಕು ಎಂದು ಕೋರಿತು. ಆದರೆ ರಾಜ್ಯ ಆಯೋಗವು, ಕಾಲಮಿತಿಯಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಮೇಲ್ಮನವಿಯನ್ನು ವಜಾ ಮಾಡಿತು.

ಇದನ್ನೂ ಓದಿ: ಗ್ರಾಹಕ ಜಾಗೃತಿ | ವಿದ್ಯುತ್‌ ಶಾಕ್‌ನಿಂದ ಸತ್ತರೆ ವಿದ್ಯುತ್‌ ನಿಗಮ ಪರಿಹಾರ ನೀಡಬೇಕು

ಹಠ ಬಿಡದ ತ್ರಿವಿಕ್ರಮನಂತೆ ಬ್ಯಾಂಕು ರಾಷ್ಟ್ರೀಯ ಆಯೋಗದಲ್ಲಿ ರಾಜ್ಯ ಆಯೋಗದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು. ರಾಜ್ಯ ಆಯೋಗವು ಅತ್ಯಂತ ಕಾಳಜಿಪೂರ್ವಕವಾಗಿ ಮತ್ತು ಗಮನ ಕೇಂದ್ರೀಕರಿಸಿ ತೀರ್ಪನ್ನು ನೀಡಿದೆ ಎಂದು ರಾಷ್ಟ್ರೀಯ ಆಯೋಗ ಕಂಡುಕೊಂಡಿತು. ಹೀಗಿದ್ದೂ ಅದು ಮತ್ತೊಮ್ಮೆ ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿತು. ರಾಜ್ಯ ಆಯೋಗದಲ್ಲಿ ಬ್ಯಾಂಕು ಮೇಲ್ಮನವಿಯನ್ನು ಸಲ್ಲಿಸಿದ್ದು 4 ತಿಂಗಳು 6 ದಿನಗಳ ಬಳಿಕ, ಅಂದರೆ 126 ದಿನಗಳ ನಂತರ. ರಾಜ್ಯ ಆಯೋಗದಲ್ಲಿ ವಿಳಂಬ ಮನ್ನಿಸುವ ಮನವಿ ಮಾಡುವಾಗ ಬ್ಯಾಂಕು ವಿಳಂಬ ಕೇವಲ 97 ದಿನಗಳು ಮಾತ್ರ ಎಂದು ವಾದಿಸಿತ್ತು. ಬ್ಯಾಂಕಿನ ವಿವಿಧ ಹಂತಗಳಲ್ಲಿ ಸಂಬಂಧಪಟ್ಟವರಿಂದ ಅನುಮತಿಯನ್ನು ಪಡೆದುಕೊಳ್ಳುವುದಕ್ಕೆ ಇಷ್ಟು ದಿನಗಳು ಬೇಕಾಯಿತು ಎಂದು ಬ್ಯಾಂಕಿನ ಪರವಾಗಿ ವಾದಿಸಲಾಗಿತ್ತು.

ಆದರೆ ಇದು ಸಕಾರಣವಾದ ಸಮರ್ಥವಾದ ಸಮರ್ಥನೆ ಎಂದು ರಾಜ್ಯ ಆಯೋಗ ಭಾವಿಸಲಿಲ್ಲ. ಬ್ಯಾಂಕ್‌ ಅಧಿಕಾರಿಗಳ ಜಡ್ಡುಗಟ್ಟಿದ ಧೋರಣೆಯೇ ಇದಕ್ಕೆ ಕಾರಣ. ಏನು ಮಾಡಬೇಕಿತ್ತೋ ಅದನ್ನು ಸಕಾಲದಲ್ಲಿ ಮಾಡದಿರುವುದರಿಂದ ಈ ವಿಳಂಬ. ಇದನ್ನು ನಿರ್ಲಕ್ಷಿಸಲು ಆಗಲಾರದು. ನೀಡಬೇಕಾಗಿರುವಷ್ಟು ಒತ್ತು ನೀಡದೆ ಇರುವುದು ಮತ್ತು ಪೂರ್ವಸಿದ್ಧತೆ ಇಲ್ಲದಿರುವುದು ಇಲ್ಲಿ ಕಾಣುತ್ತದೆ. ಕಾಲಮಿತಿಯ ವಿಷಯದಲ್ಲಿ ನಡೆಯುತ್ತದೆ ಎನ್ನುವ ಧೋರಣೆ, ಸಿಬ್ಬಂದಿಯ ವ್ಯವಸ್ಥಾಪನೀಯ ಅದಕ್ಷತೆ ಅಥವಾ ವಿಷಯದಲ್ಲಿ ಸರಿಯಾದ ಶ್ರದ್ಧೆ ಇಲ್ಲದಿರುವುದು ಇಲ್ಲಿ ಕಾಣಿಸುತ್ತದೆ. ವಿಳಂಬವಾಗಿರುವುದಕ್ಕೆ ಯಾರೊಬ್ಬರೂ ಉತ್ತಮ ವಿವರಣೆಯೊಂದಿಗೆ ಮುಂದೆ ಬಂದಿಲ್ಲ ಎಂದು ಟಿಪ್ಪಣಿಯನ್ನು ಮಾಡಿತ್ತು.

ಇದನ್ನೂ ಓದಿ: ವಿಸ್ತಾರ Money Guide| ಅಂಚೆ ಉಳಿತಾಯ ಗ್ರಾಹಕರಿಗೆ ನೂತನ ಸೇವೆ, ಮೊಬೈಲ್‌ನಲ್ಲೇ ಸಕಲ ಮಾಹಿತಿ

ಇದನ್ನೆಲ್ಲ ಪರಿಗಣಿಸಿದ ರಾಷ್ಟ್ರೀಯ ಆಯೋಗ, ಮೇಲ್ಮನವಿಯನ್ನು ಪರಿಶೀಲಿಸುವಾಗ ಪ್ರಕರಣವನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಾಧ್ಯವೆ ಎಂಬುದು ಮುಖ್ಯವಾಗುತ್ತದೆ. ಅಥವಾ ಮೇಲ್ಮನವಿ ತನ್ನನ್ನು ಸಮರ್ಥಿಸಿಕೊಳ್ಳುವಂತಿರಬೇಕು. ಅಥವಾ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಉತ್ತಮಪಡಿಸುವಂಥ ಸಾಧ್ಯತೆಗಳು ಕಂಡುಬರಬೇಕು. ಆ ಆದೇಶದಲ್ಲಿ ಏನಾದರೂ ವಿಕೃತತೆ ಕಂಡುಬರಬೇಕು. ಅಥವಾ ಆದೇಶ ನೀಡುವಾಗ ವಾಸ್ತವಾಂಶಗಳನ್ನು ತಪ್ಪಾಗಿ ಅನುಸಂಧಾನ ಮಾಡಿರುವುದು, ಕಾಯಿದೆಯನ್ನು ತಪ್ಪಾಗಿ ಅರ್ಥೈಸಿರುವುದು ಕಂಡುಬರಬೇಕು. ಆದರೆ ಪ್ರಸ್ತುತ ಪ್ರಕರಣದಲ್ಲಿ ಹಾಗೇನೂ ಆಗಿಲ್ಲ. ಪ್ರಕರಣದ ವಾಸ್ತವಾಂಶಗಳನ್ನು ಆಧರಿಸಿಯೇ ತೀರ್ಪು ನೀಡಲಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ವಿವಾದದ ಮೊತ್ತವೂ ತುಂಬ ಅಲ್ಪವಾದುದು. ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ವಜಾ ಮಾಡುವುದಾಗಿ ಹೇಳಿತು.

ತೀರ್ಪು- ಜನವರಿ 5, 2022

(ಡಾ. ವಾಸುದೇವ ಶೆಟ್ಟಿ ಅವರು ಹಿರಿಯ ಪತ್ರಕರ್ತರು. ಗ್ರಾಹಕರ ಹಕ್ಕುಗಳ ಪ್ರತಿಪಾದಕರು. ಕಳೆದ ಹಲವು ವರ್ಷಗಳಿಂದ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.)

Exit mobile version