Site icon Vistara News

ಗ್ರಾಹಕ ಜಾಗೃತಿ | ವೈದ್ಯರು ಚಿಕಿತ್ಸೆ ನೀಡುವಾಗ ಕೇರ್‌ಲೆಸ್‌ ಮಾಡಿದರೆ ಏನು ಮಾಡಬೇಕು?

doctor

ವಿಶಾಲವಾದ ಅರ್ಥದಲ್ಲಿ ಎಲ್ಲ ಖರೀದಿದಾರರು ಮತ್ತು ಸೇವೆಯನ್ನು ಹಣಕ್ಕೆ ಪಡೆಯುವವರು ಗ್ರಾಹಕರು. ಎಲ್ಲಿ ಗ್ರಾಹಕ ಜಾಗೃತನಾಗಿರುತ್ತಾನೋ ಅಲ್ಲಿ ವ್ಯವಹಾರದಲ್ಲಿ ಮೋಸ ಕಡಿಮೆಯಾಗಿರುತ್ತದೆ. ಭಾರತ ಸರ್ಕಾರವೇ ಜಾಗೋ ಗ್ರಾಹಕ್ ಎಂದು ಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಎಂಬ ಸಚಿವಾಲಯವೇ ಇದೆ.

ಒಂದು ವೇಳೆ ಗ್ರಾಹಕ ತನಗೆ ಮೋಸವಾಗಿದೆ ಎಂದು ಭಾವಿಸಿದರೆ ಅದಕ್ಕೆ ಆತ ಪರಿಹಾರವನ್ನು ಎಲ್ಲಿ ಹೇಗೆ ಪಡೆಯಬಹುದು? ಸರ್ಕಾರವು ಇದಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಿದೆ. ನ್ಯಾಯಾಂಗಕ್ಕೆ ಸಮಾನಾಂತರವಾಗಿ ಮತ್ತು ಅಷ್ಟೇ ಅಧಿಕಾರವನ್ನು ಹೊಂದಿರುವ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವನ್ನು ಹುಟ್ಟುಹಾಕಿದೆ. ಜಿಲ್ಲಾ ಮಟ್ಟದಲ್ಲಿ ಗ್ರಾಹಕ ವ್ಯಾಜ್ಯ ನಿವಾರಣೆ ವೇದಿಕೆಗಳು ಇದ್ದರೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಗಗಳಿವೆ. ಜಿಲ್ಲಾ ವೇದಿಕೆಯ ತೀರ್ಪು ತೃಪ್ತಿ ತರದಿದ್ದರೆ ರಾಜ್ಯ ಆಯೋಗಕ್ಕೂ, ರಾಜ್ಯ ಆಯೋಗದ ತೀರ್ಪಿನ ವಿರುದ್ಧ ರಾಷ್ಟ್ರೀಯ ಆಯೋಗಕ್ಕೂ ಮೇಲ್‌‌ಮನವಿ ಸಲ್ಲಿಸಬಹುದು.

ಬಹುತೇಕ ಜನರಿಗೆ ವೈದ್ಯಕೀಯ ಸೇವೆಯು ಗ್ರಾಹಕ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂಬುದು ಗೊತ್ತಿರಲಿಕ್ಕಿಲ್ಲ. ವೈದ್ಯೋ ನಾರಾಯಣೋ ಹರಿಃ ಎಂದು ವೈದ್ಯರಿಗೆ ದೇವರ ದರ್ಜೆಯನ್ನು ನೀಡಿದ್ದರೂ ವೈದ್ಯರಿಂದಲೂ ಲೋಪಗಳು ಆಗುತ್ತವೆ. ಅವರ ಸೇವಾನ್ಯೂನತೆಯ ಪರಿಣಾಮವಾಗಿ ರೋಗಿ ಪ್ರಾಣವನ್ನೂ ಕಳೆದುಕೊಳ್ಳಬಹುದು. ಇಂಥ ಸಂದರ್ಭದಲ್ಲಿ ಗ್ರಾಹಕ ವೇದಿಕೆಯು ನೊಂದವರಿಗೆ ಪರಿಹಾರವನ್ನು ನೀಡುತ್ತದೆ. ಇಲ್ಲಿ ಅಂಥ ಒಂದು ಪ್ರಕರಣವಿದೆ.

ದೆಹಲಿಯ ದಿನೇಶ ಗುಪ್ತಾ ಎಂಬವರಿಗೆ ಪಿತ್ತಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅವರ ಮನೆಯವರು ಶಕುಂತಲಾ ನರ್ಸಿಂಗ್‌ಹೋಂನಲ್ಲಿ ಡಾ.ವಿಕಾಸ ಗುಪ್ತಾ ಎನ್ನುವವರಿಗೆ ತೋರಿಸುತ್ತಾರೆ. ಅವರು ರೋಗಿಗೆ ಲೆಪರೋಸ್ಕೋಪಿಕ್ ಕೋಲೆಸಿಸ್ಟೆಕ್ಟೋಮಿ ಶಸ್ತ್ರಚಿಕಿತ್ಸೆ ಮಾಡಿಸಲು ಸಲಹೆ ನೀಡುತ್ತಾರೆ. ದಿನೇಶ ಗುಪ್ತಾ ಅವರ ಕುಟುಂಬದವರ ಒಪ್ಪಿಗೆಯ ಮೇರೆಗೆ 04-01-2008ರಂದು ಶಸ್ತ್ರಚಿಕಿತ್ಸೆ ನಡಡೆಯುತ್ತದೆ. ಎರಡು ದಿನ ಬಿಟ್ಟು ಅಂದರೆ, 6ನೆ ತಾರೀಕಿನಂದು ರೋಗಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ ಇಲ್ಲದ ಕಾರಣ ರೋಗಿಯನ್ನು ಸರ್‌ ಗಂಗಾರಾಂ ಆಸ್ಪತ್ರೆಗೆ ಸಾಗಿಸುತ್ತಾರೆ. ಅಲ್ಲಿ ನಾಲ್ಕು ದಿನಗಳ ಬಳಿಕ 10ನೆ ತಾರೀಕಿನಂದು ರೋಗಿ ದಿನೇಶ ಗುಪ್ತಾ ಸಾವನ್ನಪ್ಪುತ್ತಾರೆ. ಮರಣೋತ್ತರ ಪರೀಕ್ಷೆಯಲ್ಲಿ ಹುಣ್ಣಿನಿಂದ ರಂಧ್ರವಾಗಿ ರಕ್ತ ನಂಜೇರಿ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಆಸ್ಪತ್ರೆಯ ವಿರುದ್ಧ ಅಸಮಾಧಾನ ತಳೆದ ದಿನೇಶ ಗುಪ್ತಾ ಅವರ ಪತ್ನಿ ಮಂಜು ಗುಪ್ತಾ ಮತ್ತು ಮೂವರು ಮಕ್ಕಳು ದೆಹಲಿ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ದೂರನ್ನು ದಾಖಲಿಸುತ್ತಾರೆ.

ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಪ್ರತಿವಾದಿಗಳು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪವನ್ನು ಅಲ್ಲಗಳೆಯುತ್ತಾರೆ. ಪ್ರಚಲಿತದಲ್ಲಿರುವ ಚಿಕಿತ್ಸಾ ಕ್ರಮಗಳನ್ನೇ ಕೈಗೊಂಡಿರುವುದಾಗಿ ಅವರು ಪ್ರದಿಪಾದಿಸುತ್ತಾರೆ. ನರ್ಸಿಂಗ್‌ಹೋಂ ಸುಸಜ್ಜಿತವಾಗಿತ್ತು. 3ನೆ ಪ್ರತಿವಾದಿ ಡಾ.ಭೂಪಿಂದರ್‌ ಧಾಮಿ ಅವರನ್ನು ಸುಳ್ಳೇ ಸೇರಿಸಲಾಗಿದೆ. ಚಿಕಿತ್ಸೆ ನೀಡುವಾಗ ಅವರು ಅಲ್ಲಿರಲೇ ಇಲ್ಲ ಎಂದು ಹೇಳುತ್ತಾರೆ. ವಿಮೆ ಕಂಪನಿ ಕೂಡ ವೈದ್ಯರು ಯಾವುದೇ ತಪ್ಪೆಸಗಿಲ್ಲ ಎಂದು ಹೇಳಿ ತನ್ನ ಜವಾಬ್ದಾರಿಯನ್ನು ನಿರಾಕರಿಸುತ್ತದೆ. 5ನೆ ಪ್ರತಿವಾದಿ ಡಾ.ಮೋಹಿತ್‌ ಗರ್ಗ್‌, ತಾನು ಕೇವಲ ಅರಿವಳಿಕೆ ತಜ್ಞ. ತನ್ನ ಪಾತ್ರ ಸೀಮಿತವಾದದ್ದು. ಶಸ್ತ್ರಚಿಕಿತ್ಸೆಯಲ್ಲಾಗಲಿ ಆ ನಂತರ ತಲೆದೋರಿದ ಸಮಸ್ಯೆಯಲ್ಲಾಗಲಿ ತನ್ನ ಪಾತ್ರವಿಲ್ಲ ಎಂದು ಹೇಳುತ್ತಾರೆ.

ದೂರನ್ನು ಪುರಸ್ಕರಿಸಿದ ಜಿಲ್ಲಾ ವೇದಿಕೆಯು 20-11-2012ರಂದು ನೀಡಿದ ತನ್ನ ತೀರ್ಪಿನಲ್ಲಿ ಪ್ರತಿವಾದಿಗಳಾದ 1ರಿಂದ 4 ಮತ್ತು 6ನೆ ಪ್ರತಿವಾದಿ 10 ಲಕ್ಷ ರುಪಾಯಿಗಳನ್ನು ಜಂಟಿಯಾಗಿ ಅಥವಾ ಬೇರೆಬೇರೆಯಾಗಿ ಮತ್ತು ದೂರಿನ ವೆಚ್ಚವೆಂದು 20 ಸಾವಿರ ರುಪಾಯಿಗಳನ್ನು ನೀಡಬೇಕು ಹಾಗೂ 4ನೆ ಪ್ರತಿವಾದಿ ಡಾ.ವಿವೇಕ ಗುಪ್ತಾ ಅವರು ವೃತ್ತಿ ಎಡವಟ್ಟಿಗೆ ವಿಮೆ ರಕ್ಷಣೆ ಪಡೆದಿರುವುದರಿಂದ ಅವರ ಪಾಲನ್ನು ಓರಿಯಂಟಲ್‌ ಇನ್ಸುರೆನ್ಸ್ ಕಂಪನಿ ನೀಡಬೇಕು ಎಂದು ಆದೇಶಿಸಿತು.

ಇದರ ವಿರುದ್ಧ ಡೆಲ್ಲಿ ರಾಜ್ಯ ಗ್ರಾಹಕ ಆಯೋಗದಲ್ಲಿ ಜನಕರಾಜ್‌ ಧಾಮಿ, ಡಾ.ಭೂಪಿಂದರ್‌ ಪಾಲ್‌ ಮತ್ತು ಓರಿಯಂಟಲ್‌ ಇನ್ಸುರೆನ್ಸ್‌ ಕಂಪನಿ ಮೇಲ್ಮನವಿ ಸಲ್ಲಿಸಿದವು. ರಾಜ್ಯ ಆಯೋಗವು 18-10-2019ರಂದು ನೀಡಿದ ತೀರ್ಪಿನಲ್ಲಿ ಮೇಲ್ಮನವಿಯನ್ನು ವಜಾ ಮಾಡಿತಲ್ಲದೆ ಪರಿಹಾರವನ್ನು ಇತ್ಯರ್ಥಪಡಿಸುವಂತೆ ವಿಮೆ ಕಂಪನಿಗೆ ಆದೇಶ ನೀಡಿತು.

ಇದರ ವಿರುದ್ಧ ಪ್ರತಿವಾದಿ ನಂ.1 ಮತ್ತು 2 ಆದ ಜನಕರಾಜ್‌ ಧಾಮಿ ಮತ್ತು ಶಕುಂತಲಾ ನರ್ಸಿಂಗ್‌ ಹೋಂನ ಪರವಾಗಿ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಇವರ ಪರವಾಗಿ ವಾದ ಮಂಡಿಸಿದ ವಕೀಲರು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿಯೇ ನಡೆದಿದೆ. ಅದಾದ 2 ದಿನದ ಬಳಿಕ ರೋಗಿಯಲ್ಲಿ ಹುಣ್ಣಿನ ಮತ್ತು ರಂಧ್ರದ ಸಮಸ್ಯೆ ತಲೆದೋರಿದೆ. ತಕ್ಷಣವೇ ಅವರನ್ನು ಸರ್‌ ಗಂಗಾರಾಂ ಆಸ್ಪತ್ರೆಗೆ ಒಯ್ಯಲಾಗಿದೆ. ಅಲ್ಲಿಗೆ ಸೇರಿಸುವ ಸಮಯದಲ್ಲಿ ರೋಗಿಯ ಸ್ಥಿತಿ ತೃಪ್ತಿಕರವಾಗಿಯೇ ಇತ್ತು. ಕೂಡಲೇ ಮರುಶಸ್ತ್ರಚಿಕಿತ್ಸೆ ನಡೆಸುವ ಸ್ಥಿತಿಯಲ್ಲಿ ಅವರು ಇದ್ದರು. ಆದರೆ ಅಲ್ಲಿ ಎರಡು ದಿನ ಅನಗತ್ಯವಾಗಿ ವಿಳಂಬ ಮಾಡಿ 10-01-2008ರಂದು ಶಸ್ತ್ರಚಿಕಿತ್ಸೆ ಮಾಡಿದರು. ಈ ವಿಳಂಬ ಮತ್ತು ಸರಿಯಯಾದ ಚಿಕಿತ್ಸೆಯನ್ನು ಸರ್‌ ಗಂಗಾರಾಂ ಆಸ್ಪತ್ರೆಯಲ್ಲಿ ನೀಡದೇ ಇದ್ದುದರಿಂದಲೇ ರೋಗಿಯ ಸಾವು ಸಂಭವಿಸಿದೆ. ಇದರಲ್ಲಿ ಶಕುಂತಲಾ ನರ್ಸಿಂಗ್‌ ಹೋಂನ ಯಾವುದೇ ತಪ್ಪು ಇಲ್ಲ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಇದೆ. ಆದರೆ ಮೌಲಾನಾ ಆಝಾದ್‌ ಮೆಡಿಕಲ್‌ ಕಾಲೇಜಿನಲ್ಲಿ ದೂರುದಾರರು ಪ್ರಭಾವ ಬಳಸಿ ಸಾವಿನ ಕಾರಣವನ್ನು ಶಸ್ತ್ರಚಿಕಿತ್ಸೆಯ ಬಳಿಕ ಉಂಟಾದ ಹುಣ್ಣು ರಂಧ್ರದಿಂದ ರಕ್ತ ನಂಜೇರಿದ್ದರಿಂದ ಸಂಭವಿಸಿದೆ ಎಂದು ಬದಲಿಸಿದ್ದಾರೆ ಎಂದು ವಾದಿಸಿದರು.

ಸರ್‌ ಗಂಗಾರಾಂ ಆಸ್ಪತ್ರೆಯು ನೀಡಿದ ಹೆಲ್ತ್‌ ಬುಲೆಟಿನ್‌ನಲ್ಲಿ ಶಕುಂತಲಾ ನರ್ಸಿಂಗ್‌ ಹೋಂನ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಮೌಲಾನಾ ಆಝಾದ್‌ ಮೆಡಿಕಲ್‌ ಕಾಲೇಜಿನ ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆಯ ವರದಿಯನ್ನು ವೈದ್ಯರ ಸಮಿತಿಯೊಂದು ಪರಿಶೀಲಿಸಿತ್ತು. ಅದು ಶಕುಂತಲಾ ನರ್ಸಿಂಗ್‌ ಹೋಂನ ವೈದ್ಯರ ಲೋಪಗಳ ಕಡೆಯೇ ಬೆರಳು ಮಾಡಿತ್ತು. ಈ ಸಂಬಂಧದಲ್ಲಿ ಡೆಲ್ಲಿ ಮೆಡಿಕಲ್‌ ಕೌನ್ಸಿಲ್‌ (ಡಿಎಂಸಿ) ಆ್ಯಕ್ಟ್‌ ಸೆಕ್ಷನ್‌ 27ರ ಅಡಿಯಲ್ಲಿ ಸಾಧ್ಯವಿರುವ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಡಿಎಂಸಿ ಆದೇಶವನ್ನು ನೀಡಿತ್ತು.

ಡಿಎಂಸಿ ಈ ವಿಷಯಗಳನ್ನು ಗಮನಿಸಿತ್ತು- ಶಸ್ತ್ರಚಿಕಿತ್ಸೆಯನ್ನು ಮಾಡಿದವರು ಡಾ.ವಿಕಾಸ ಗುಪ್ತಾ. ಅವರಿಗೆ ನೆರವು ನೀಡಿದವರು ಶ್ರೀ ಜೆ.ರಾಜ್‌ ಧಾಮಿ. ಈ ರಾಜ್‌ ಧಾಮಿಯು ನರ್ಸಿಂಗ್‌ ಹೋಂನ ಮಾಲೀಕ. ಮತ್ತು ಅವರು ಸೂಕ್ತ ಅರ್ಹತೆಯನ್ನು ಪಡೆದ ವೈದ್ಯ ಅಥವಾ ಸರ್ಜನ್‌ ಆಗಿರಲಿಲ್ಲ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ದಿನೇಶ ಗುಪ್ತಾ ತೀವ್ರ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಹೀಗಿದ್ದರೂ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ.ವಿಕಾಸ ಗುಪ್ತಾ ರಾತ್ರಿ 8-30ಕ್ಕೆ ಆಸ್ಪತ್ರೆಯನ್ನು ಬಿಟ್ಟು ತೆರಳಿದರು. ನಂತರ ರಾಜ್‌ ಧಾಮಿ ಮತ್ತು ಅವರ ಜೂನಿಯರ್‌ ನೋಡಿಕೊಂಡರು. ರಾಜ್‌ ಧಾಮಿ ವೈದ್ಯ ವೃತ್ತಿ ನಡೆಸುವ ಅರ್ಹತೆ ಪಡೆಯದೇ ಇದ್ದರೂ ತಮ್ಮ ಹೆಸರಿನ ಹಿಂದೆ ಡಾ. ಎಂದು ಬಳಸುತ್ತಿದ್ದರು. ರಾಜ್‌ ಧಾಮಿ ಮತ್ತು ಡಾ.ವಿಕಾಸ ಗುಪ್ತಾ ಅವರು ಮೆಡಿಕಲ್‌ ಕೌನ್ಸಿಲ್‌ ಎದುರು ಒಪ್ಪಿಕೊಂಡಿರುವಂತೆ, ಮರುದಿನ ಬೆಳಿಗ್ಗೆ 10 ಗಂಟೆಯ ವರೆಗೂ ರೋಗಿಯ ಹದಗೆಟ್ಟ ಸ್ಥಿತಿಯ ಕುರಿತು ಅವರಿಗೆ ಮಾಹಿತಿಯನ್ನು ನೀಡಿರಲಿಲ್ಲವಂತೆ 5ನೆ ತಾರೀಖು ರೋಗಿಯ ಸ್ಥಿತಿ ಹಾಗೆಯೇ ಇತ್ತು. 6ನೆ ತಾರೀಖು ರೋಗಿಯ ಲಕ್ಷಣಗಳಲ್ಲಿ ಬದಲಾವಣೆಯಾಗಿತ್ತು. ಕರುಳಿಗೆ ರಂಧ್ರ ಬಿದ್ದಿರಬಹುದು, ಕೂಡಲೆ ಮರು ಶಸ್ತ್ರಚಿಕಿತ್ಸೆ ನಡೆಸಬೇಕು ಎಂದುಕೊಂಡರು. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಐಸಿಯು ಬೇಕಾಗುತ್ತಿತ್ತು. ಆದರೆ ಆ ಆಸ್ಪತ್ರೆಯಲ್ಲಿ ಐಸಿಯು ಇಲ್ಲದ ಕಾರಣಕ್ಕೆ ಡಾ.ವಿಕಾಸ ಗುಪ್ತಾ ರೋಗಿಯನ್ನು ಬೇರೆಡೆಗೆ ಕರೆದೊಯ್ಯಲು ಹೇಳುತ್ತಾರೆ.

ಇದನ್ನೂ ಓದಿ: ಸೈನ್ಸ್‌ ಸೆನ್ಸ್‌ ಅಂಕಣ: ʼಲಿಡಾರ್‌ʼ ಶೋಧ ಬೆಳಕಿಗೆ ತಂದ ಕಾಡಾದ ನಾಡಿನ ಕಥೆ

ಅರ್ಹತೆ ಇಲ್ಲದವರಿಗೆ ರೋಗಿಯನ್ನು ಒಪ್ಪಿಸಿದಾಗ…

ದಿನೇಶ ಗುಪ್ತಾ ಅವರಿಗೆ ನಡೆಸಿದಂಥ ಶಸ್ತ್ರಚಿಕಿತ್ಸೆಯಲ್ಲಿ ಹುಣ್ಣು ಆಗುವ ಸಾಧ್ಯತೆ ಮಂದಿನ 24ರಿಂದ 72 ಗಂಟೆಗಳಲ್ಲಿ ಇರುವುದು ಸಾಮಾನ್ಯ. ಶಸ್ತ್ರಚಿಕಿತ್ಸೆಯ ನಂತರ ವಹಿಸಬೇಕಾದ ಕಾಳಜಿಯಲ್ಲಿ ನ್ಯೂನತೆ ಕಂಡುಬಂದಿದೆ ಎಂದು ಡಿಎಂಸಿ ವರದಿ ಹೇಳಿತ್ತು. ಶಸ್ತ್ರಚಿಕಿತ್ಸಕನೊಬ್ಬ ರೋಗಿಯನ್ನು ಅರ್ಹತೆ ಇಲ್ಲದ ವ್ಯಕ್ತಿಯ ಕೈಗೆ ಒಪ್ಪಿಸಿಹೋದ ಅಂಶವನ್ನು ಇಲ್ಲಿ ಗಂಭೀರವಾಗಿ ಪರಿಗಣಿಸಲಾಯಿತು. ಅರ್ಹತೆ ಇಲ್ಲದ ವ್ಯಕ್ತಿಯೊಬ್ಬ ವೈದ್ಯನೆಂದು ಹೇಳಿಕೊಂಡು ನರ್ಸಿಂಗ್‌ಹೋಂ ನಡೆಸುವುದು, ಜನರನ್ನು ಮತ್ತು ಡಾ.ವಿಕಾಸ ಗುಪ್ತಾರಂಥ ವೈದ್ಯರನ್ನು ತಮ್ಮ ಬೋನಿಗೆ ಬೀಳಿಸಿಕೊಳ್ಳುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ ಎಂದು ಡಿಎಂಸಿ ಅಭಿಪ್ರಾಯ ಪಟ್ಟಿತು. ಈ ಕಾರಣಕ್ಕೆ ಡಾ.ವಿಕಾಸ ಗುಪ್ತಾ ಅವರ ಹೆಸರನ್ನು ಸ್ಟೇಟ್‌ ಮೆಡಿಕಲ್‌ ರೆಜಿಸ್ಟ್ರಾರ್‌ನಲ್ಲಿ 30 ದಿನಗಳ ಕಾಲ ಅಮಾನತು ಗೊಳಿಸಲು ಮತ್ತು ಮೆಡಿಕಲ್‌ ರೆಜಿಸ್ಟ್ರಾರ್‌ನಲ್ಲಿ ಈ ಕಳಂಕವನ್ನು ದಾಖಲುಗೊಳಿಸಲು ಡಿಎಂಸಿಯು ಮೆಡಿಕಲ್‌ ರೆಜಿಸ್ಟ್ರಾರ್‌ಗೆ ಆದೇಶಿಸಿತು. ಹಾಗೆಯೇ ಶಕುಂತಲಾ ನರ್ಸಿಂಗ್‌ ಹೋಂ ವಿರುದ್ಧ ತನಿಖೆ ನಡೆಸುವಂತೆ ಮತ್ತು ಜೆ.ರಾಜ್‌ ಧಾಮಿಯನ್ನು ಡಿಎಂಸಿ ಆ್ಯಕ್ಟ್‌ 27ರ ಅಡಿ ವಿಚಾರಣೆಗೊಳಪಡಿಸಲು ಆರೋಗ್ಯ ಸೇವೆಗಳ ನಿರ್ದೇಶಕರಿಗೆ ಮನವಿ ಮಾಡಿತು. ರಾಜ್ಯ ಆಯೋಗ ತನ್ನ ತೀರ್ಪು ನೀಡುವಾಗ ಈ ಅಂಶಗಳನ್ನೆಲ್ಲ ಗಮನಿಸಿತ್ತು.

ಅಲ್ಲದೆ ಪರಿಣತರಾದ ಡಾ.ಆರ್‌.ಶರ್ಮಾ ಅವರ ಅಭಿಪ್ರಾಯವನ್ನು ಪಡೆದುಕೊಂಡಿತ್ತು. ಅವರ ಪ್ರಕಾರ ಶಕುಂತಲಾ ನರ್ಸಿಂಗ್‌ ಹೋಂನಲ್ಲಿ ರೋಗಿಗೆ ಆರಂಭದಲ್ಲಿ ಕಾಣಿಸಿಕೊಂಡ ಸಮಸ್ಯೆಯು ಇಂಥ ಶಸ್ತ್ರಚಿಕಿತ್ಸೆಯ ನಂತರ ಸಾಮಾನ್ಯವಾದದ್ದು. ಹೀಗಾಗಿ ಅಲ್ಲಿ ವೈದ್ಯರಿಗೆ ಅದರ ತೀವ್ರತೆ ತಕ್ಷಣ ಗೊತ್ತಾಗಲಿಲ್ಲ. ಅದನ್ನು ಸಾರಾಸಗಟಾಗಿ ನಿರ್ಲಕ್ಷ್ಯ ಎಂದು ಹೇಳುವ ಹಾಗಿಲ್ಲ. ಸರ್ ಗಂಗಾರಾಂ ಆಸ್ಪತ್ರೆಗೆ ಒಯ್ಯುವಂತೆ ಸಕಾಲದಲ್ಲಿಯೇ ಸೂಚಿಸಲಾಗಿತ್ತು ಎಂದು ಇವರು ಹೇಳುತ್ತಿದ್ದಾರೆ. ಆದರೆ ಸರ್‌ ಗಂಗಾರಾಂ ಆಸ್ತ್ರತ್ರೆಯ ಮರಣ ಸಾರಾಂಶ ಪತ್ರದಲ್ಲಿ ರೋಗಿಯನ್ನು ತಂದಾಗ ಹೊಟ್ಟೆ ನೋವಿನ ಜೊತೆಗೆ ಉಸಿರಾಟದ ಸಮಸ್ಯೆ, ತಲೆ ಸುತ್ತುಬರುವುದು ಎರಡು ದಿನಗಳ ವರೆಗೆ ಇತ್ತು. ಅದಕ್ಕಾಗಿಯೇ ಅವರನ್ನು ಆಕ್ಸಿಜನ್‌ ನೀಡಿ ಐಸಿಯುನಲ್ಲಿ ಇಡಲಾಗಿತ್ತು. ಸಿಟಿ ಸ್ಕ್ಯಾನ್‌ ಮಾಡಿದಾಗ ರಂಧ್ರದಲ್ಲಿ ಸೋರಿಕೆ ಇರುವುದನ್ನು ಕರುಳುರೋಗ ತಜ್ಞರು ಪತ್ತೆ ಮಾಡಿದರು. ಕೂಡಲೆ ಅವರನ್ನು ಶಸ್ತ್ರಚಿಕಿತ್ಸೆಗೆ ಒಯ್ಯಲಾಯಿತು. ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಅಲ್ಲಿಯೇ ರೋಗಿ ಸಾವನ್ನಪ್ಪಿದರು ಎಂದು ಹೇಳಲಾಗಿತ್ತು. ಈ ಎಲ್ಲ ಅಂಶಗಳನ್ನು ಗಮನಿಸಿ ರಾಜ್ಯ ಆಯೋಗ ತೀರ್ಪು ನೀಡಿತ್ತು.

ರಾಷ್ಟ್ರೀಯ ಆಯೋಗವು ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗದ ತೀರ್ಪನ್ನು ಮೆಚ್ಚಿಕೊಂಡಿತು. ಆದರೆ 10 ಲಕ್ಷ ರುಪಾಯಿ ಪರಿಹಾರವನ್ನು ಜಂಟಿಯಾಗಿ ಅಥವಾ ಬೇರೆಬೇರೆಯಾಗಿ ನೀಡಬೇಕು ಎಂದಿರುವುದನ್ನು ಮಾರ್ಪಡಿಸುವುದಾಗಿ ಹೇಳಿತು. ಕಾರಣ, ವಿಮೆ ಕಂಪನಿಯಲ್ಲಿ ಇಂಥ ಜಂಟಿ ಹಂಚಿಕೆಯಲ್ಲಿ ಯಾರ ಪಾಲು ಎಷ್ಟು ಎಂದು ನಿರ್ಧರಿಸಲು ಮಾನದಂಡವಿಲ್ಲ. ಅದು ವಿಳಂಬಕ್ಕೆ ಕಾರಣವಾಗುತ್ತದೆ. ಈ ರೀತಿಯ ಪ್ರಕರಣಗಳಲ್ಲಿ ಏನು ಮಾಡಬೇಕೆಂದು ಸುಪ್ರೀಂ ಕೋರ್ಟ್‌ M/s Sheth M L Vaduwala Eye Hospital Vs Oriental Insurance Company Limited and Others [Civil Appeal Nos 7611-7634 of 2021] ಪ್ರಕರಣದಲ್ಲಿ ನೀಡಿದ ತೀರ್ಪಿನ ಮಾರ್ಗದರ್ಶನವಿದೆ. ಈ ಪ್ರಕರಣದಲ್ಲಿ 4ನೆ ಪ್ರತಿವಾದಿ ಶಸ್ತ್ರಚಿಕಿತ್ಸೆ ನೀಡಿದ ವೈದ್ಯ ಡಾ.ವಿಕಾಸ ಗುಪ್ತಾ ಅವರಿಗೆ ವಿಮೆ ರಕ್ಷಣೆ ಇದೆ. ಕಾರಣ ವಿಮೆ ಕಂಪನಿಯು ಅವರ ಭಾಗವೆಂದು 5 ಲಕ್ಷ ರು. ನೀಡಬೇಕು. ಉಳಿದವನ್ನು ಆಸ್ಪತ್ರೆ ನೀಡಬೇಕು. ಅವರು ವಿಮೆ ಸೌಲಭ್ಯ ಹೊಂದಿರುವ ದಾಖಲೆ ನೀಡಿಲ್ಲ. ವ್ಯಾಜ್ಯದ ವೆಚ್ಚ 20 ಸಾವಿರವನ್ನೂ ಆಸ್ಪತ್ರೆಯವರೇ ನೀಡಬೇಕು. ತೀರ್ಪು ನೀಡಿದ 6 ವಾರಗಳಲ್ಲಿ ಪರಿಹಾರ ಸಂದಾಯವಾಗಬೇಕು. ಇಲ್ಲದಿದ್ದರೆ ಅದಕ್ಕೆ ಶೇ.9ರಂತೆ ಬಡ್ಡಿ ಅನ್ವಯವಾಗುತ್ತದೆ ಎಂದು 2022ರ ಜನವರಿ 19ರಂದು ಆದೇಶಿಸಿತು.

ಅಂಕಣಕಾರರ ಪರಿಚಯ: ಡಾ. ವಾಸುದೇವ ಶೆಟ್ಟಿ ಅವರು ಹಿರಿಯ ಪತ್ರಕರ್ತರು. ಗ್ರಾಹಕರ ಹಕ್ಕುಗಳ ಪ್ರತಿಪಾದಕರು. ಕಳೆದ ಹಲವು ವರ್ಷಗಳಿಂದ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ: Emergency 1975 | ನೀವು ಭಾರತೀಯರೋ, ರಾಷ್ಟ್ರೀಯರೋ? ತುರ್ತು ಪರಿಸ್ಥಿತಿಯ ಮೆಲುಕು

Exit mobile version