ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಅದರ ಸರಿಯಾದ ತಿಳಿವಳಿಕೆ ಇಲ್ಲದೆಯೇ ಅನೇಕರು ಫಲಾನುಭವಿಗಳಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ.
ಬಡವರಿಗೆ ತುರ್ತಾಗಿ ಅನಾರೋಗ್ಯದ ಚಿಕಿತ್ಸೆಗೆ ದೊಡ್ಡ ಮೊತ್ತದ ಅಗತ್ಯ ಒದಗಿದರೆ ಅದನ್ನು ಒದಗಿಸುವುದಕ್ಕೆ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮತ್ತಿತರ ಸಂಸ್ಥೆಗಳ ಮೂಲಕ ಇದಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.
ಮೈಸೂರಿನ 54 ವರ್ಷದ ಚಂದ್ರಶೇಖರ ಎಂಬವರು 31-12-2012ರಂದು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಒಳರೋಗಿಯಾಗಿ ಸೇರ್ಪಡೆಯಾಗುತ್ತಾರೆ. ಅಲ್ಲಿ ಅವರಿಗೆ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ. 3-01-2013ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆಂದು 19,990 ರುಪಾಯಿ ವೆಚ್ಚ ಮಾಡಿರುತ್ತಾರೆ. ಯಶಸ್ವಿನಿ ಯೋಜನೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರಿಂದ ತಮ್ಮ ಚಿಕಿತ್ಸೆಯ ವೆಚ್ಚವನ್ನು ನೀಡುವಂತೆ ಅವರು ಯಶಸ್ವಿನಿ ಕೋ-ಆಪರೇಟಿವ್ ಫಾರ್ಮರ್ಸ್ ಹೆಲ್ತ್ ಕೇರ್ ಟ್ರಸ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ.
ಆದರೆ ಚಂದ್ರಶೇಖರ ಅವರು ಈ ವಿಮೆ ಪಡೆಯಲು ಅರ್ಹರಲ್ಲ ಎಂದು ಟ್ರಸ್ಟ್ ಅವರ ಕೋರಿಕೆಯನ್ನು ತಳ್ಳಿಹಾಕುತ್ತದೆ. ಇದನ್ನು ಪ್ರಶ್ನಿಸಿ ಚಂದ್ರಶೇಖರ ಅವರು ಮಂಗಳೂರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾರೆ. ತಮಗೆ ಚಿಕಿತ್ಸೆಯ ವೆಚ್ಚವನ್ನು ಕೊಡಿಸಬೇಕು ಮತ್ತು ವ್ಯಾಜ್ಯದ ವೆಚ್ಚವನ್ನೂ ಕೊಡಿಸಬೇಕು ಎಂದು ಕೋರಿಕೆ ಸಲ್ಲಿಸುತ್ತಾರೆ.
ವೇದಿಕೆಯಲ್ಲಿ ಪ್ರತಿವಾದಿಗಳ ಪರವಾಗಿ ಹೇಳಿಕೆಯನ್ನು ದಾಖಲಿಸಲಾಯಿತು. ಈ ಯೋಜನೆಯ ಫಲಾನುಭವಿಗಳು ಸದಸ್ಯತ್ವದ ಕಾರ್ಡ್‌ನಲ್ಲಿ ನಮೂದಿಸಿರುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆಗೆ ಒಳಗಾಗಬೇಕು. ಬೇರೆ ಆಸ್ಪತ್ರೆಯಲ್ಲಿ ಮಾಡಿಸಿಕೊಂಡ ಚಿಕಿತ್ಸೆಗೆ ಪರಿಹಾರ ಸಿಗುವುದಿಲ್ಲ. ಪುತ್ತೂರಿನ ಧನ್ವಂತರಿ ಆಸ್ಪತ್ರೆ ಆ ಪಟ್ಟಿಯಲ್ಲಿ ಇಲ್ಲದ ಕಾರಣ ಪರಿಹಾರ ನಿರಾಕರಿಸಲಾಗಿದೆ ಎಂದು ಸಮಜಾಯಿಷಿ ನೀಡಲಾಯಿತು.
ಇದನ್ನೂ ಓದಿ: ಗ್ರಾಹಕ ಜಾಗೃತಿ | ವೈದ್ಯರು ಚಿಕಿತ್ಸೆ ನೀಡುವಾಗ ಕೇರ್‌ಲೆಸ್ ಮಾಡಿದರೆ ಏನು ಮಾಡಬೇಕು?
ಆದರೆ ಜಿಲ್ಲಾ ವೇದಿಕೆಯು ವಿಷಯವನ್ನು ಪರಿಶೀಲಿಸಿ ಪರಿಹಾರವನ್ನು ನೀಡಬಹುದು ಎಂಬ ಅಭಿಪ್ರಾಯಕ್ಕೆ ಬಂತು. ದೂರುದಾರರ ಚಿಕಿತ್ಸೆಯ ಬಿಲ್ ಮೊತ್ತ 19,900 ರುಪಾಯಿಯನ್ನು ದೂರು ದಾಖಲಾದ ದಿನದಿಂದ ಶೇ.8ರ ಬಡ್ಡಿಯೊಂದಿಗೆ ನೀಡಬೇಕು ಮತ್ತು ವ್ಯಾಜ್ಯದ ವೆಚ್ಚ 2000 ರು.ಗಳನ್ನು ಈ ಆದೇಶದ 30 ದಿನಗಳೊಳಗೆ ನೀಡಬೇಕು ಎಂದು ತೀರ್ಪು ನೀಡಿತು.
ಈ ತೀರ್ಪಿನ ವಿರುದ್ಧ ಯಶಸ್ವಿನಿ ಕೋ-ಆಪರೇಟಿವ್ ಫಾರ್ಮರ್ಸ್ ಹೆಲ್ತ್ ಕೇರ್ ಟ್ರಸ್ಟ್ ಕರ್ನಾಟಕ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ದೂರುದಾರರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ನಿಜ. ಬಿಲ್ ಪಾವತಿಸಿದ್ದೂ ನಿಜ. ಆದರೆ ಅವರು ಚಿಕಿತ್ಸೆಗೆ ಒಳಗಾದ ಆಸ್ಪತ್ರೆ ಟ್ರಸ್ಟ್ ನಿಗದಿ ಮಾಡಿರುವ ನೆಟ್‌ವರ್ಕ್ ಆಸ್ಪತ್ರೆಯಲ್ಲ ಎಂದು ಹೇಳಿತು. ಅದರ ಪರವಾಗಿ ಹಾಜರಾದ ವಕೀಲರು ರಾಷ್ಟ್ರೀಯ ಗ್ರಾಹಕ ಆಯೋಗವು ಮೇಲ್ಮನವಿ ಸಂಖ್ಯೆ 1786-1789/2012ರ ತೀರ್ಪನ್ನು 14.05.2013ರಂದು ನೀಡಿದೆ.
ಇದನ್ನೂ ಓದಿ: ಪ್ರಣಾಮ್ ಭಾರತ್ ಅಂಕಣ: ಸ್ಟೆತಾಸ್ಕೋಪಿನ ಆತ್ಮಕಥೆ
ಆ ತೀರ್ಪಿನಲ್ಲಿ, ಯಶಸ್ವಿನಿ ಕೋ ಆಪ್ ಫಾರ್ಮರ್ಸ್ ಹೆಲ್ತ್ ಕೇರ್ ಸ್ಕೀಮಿನಲ್ಲಿ ನೋಂದಣಿ ಮಾಡಿಸಿಕೊಂಡವರು ತಾವು ಅನುಮತಿಸಲಾದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ತಮ್ಮ ಇಷ್ಟದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದರೆ ವೆಚ್ಚಕ್ಕೆ ಅವರೇ ಹೊಣೆ. ಕಾನೂನಿನ ಜ್ಞಾನ ಇಲ್ಲದಿರುವುದು ಕ್ಷಮೆಗೆ ಅರ್ಹವಲ್ಲ ಎಂಬುದು ತಿಳಿದಿರುವ ಸಂಗತಿ. ವೆಚ್ಚ ಮರಳಿ ದೊರೆಯಬೇಕೆಂದರೆ ಅನಕ್ಷರಸ್ಥ ಕೂಡ ತಾನು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಎಂಬುದನ್ನು ಅರಿತಿರಬೇಕು. ಅನುಮತಿಸಲಾದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವುದು ರೋಗಿಯ ಅನಿವಾರ್ಯದ ಕರ್ತವ್ಯ ಎಂದು ಹೇಳಿರುವುದನ್ನು ರಾಜ್ಯ ಆಯೋಗದ ಗಮನಕ್ಕೆ ತಂದರು.
ಈ ಎಲ್ಲ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದಲ್ಲಿ ರೋಗಿ ಮಾನ್ಯತೆ ಪಡೆದ ನೆಟ್ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿಲ್ಲ. ಕಾರಣ ಮಂಗಳೂರು ಜಿಲ್ಲಾ ವೇದಿಕೆ ನೀಡಿದ ತೀರ್ಪನ್ನು ರದ್ದುಗೊಳಿಸುವುದಾಗಿ ರಾಜ್ಯ ಆಯೋಗ ಆದೇಶಿಸಿತು.
ಅಂಕಣಕಾರರ ಪರಿಚಯ: ಡಾ. ವಾಸುದೇವ ಶೆಟ್ಟಿ ಅವರು ಹಿರಿಯ ಪತ್ರಕರ್ತರು. ಗ್ರಾಹಕರ ಹಕ್ಕುಗಳ ಪ್ರತಿಪಾದಕರು. ಕಳೆದ ಹಲವು ವರ್ಷಗಳಿಂದ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.