Site icon Vistara News

Consumerism: ಮಿತಿಯಿಲ್ಲದ ಖರೀದಿ; ಮನೋರೋಗಕ್ಕೆ ನಾಂದಿ, ಪರಿಸರ ವಿನಾಶದ ಹಾದಿ!

consumerism

#image_title

ಸೋಮೇಶ್ವರ ಗುರುಮಠ
ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ಜನಾಂಗವು ತಾನೆಂದುಕೊಂಡಂತೆ ಅತ್ಯಂತ ಪ್ರಗತಿಯ ಹಾದಿಯಲ್ಲಿದೆ. ಆದರೆ ಗಮನಿಸಿ, ತಾನೇ ಎಂದುಕೊಂಡ ಆ ಪ್ರಗತಿಯ ಪಥ ನಿರಂತರವಾದ ಪ್ರಕೃತಿವಿನಾಶಕ್ಕೆ ದ್ಯೋತಕವೆನ್ನಿಸಿದೆ. ಇದರಲ್ಲಿ ತನ್ನತನದ ಮುನ್ನೆಲೆಯ ಹೊರತಾಗಿ ಮತ್ತೇನನ್ನೂ ಕಾಣಲಾರೆವು. ತನ್ನ ಮೂಗಿನ ನೇರಕ್ಕೆ ಇತರೆ ಜೀವವೈವಿಧ್ಯ ಮತ್ತು ಪ್ರಕೃತಿಯ ಸ್ಥಿತಿಗತಿಗಳು ಕಾರ್ಯನಿರ್ವಹಿಸಬೇಕೆನ್ನುವುದೇ ಪರಮೋಚ್ಚ ಗುರಿಯೆನ್ನುವಂತಿದೆ. ಇದರ ಮಧ್ಯೆ ಆಧುನಿಕ ನಾಗರೀಕತೆಗಳೆಲ್ಲವೂ ಏಕಸ್ವರೂಪಿ ಹಿನ್ನೆಲೆಯನ್ನು ಹೊಂದಿರುವುದು ಸರ್ವತೋಮುಖ ಅಭಿವೃದ್ಧಿಯ ಸಂಕೇತವೆಂಬಂತೆ ಕಾಣುವ ಮುಂದುವರಿದ ದೇಶಗಳ ಪರಿಸ್ಥಿಯನ್ನೊಮ್ಮೆ ಗಮನಿಸಿ.

ಜಾಗತೀಕರಣದ ಛಾಯೆಯ ಪ್ರಮುಖ ಭಾಗವೊಂದರಂತಿರುವ ‘ಗ್ರಾಹಕೀಕರಣ’ ಇತ್ತೀಚಿನ ದಿನಮಾನಗಳಲ್ಲಿ ಹವ್ಯಾಸದಿಂದ ವ್ಯಸನಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಅದರ ಪ್ರಭಾವ ಎಷ್ಟರ ಮಟ್ಟಿಗೆ ತೆರಳಿ ನಿಂತಿದೆಯೆಂದರೆ, ತ್ಯಾಗ ಮತ್ತು ಉಳಿತಾಯವೆಂಬ ಕಲ್ಪನೆಗಳಿಲ್ಲಿ ಸಂಪೂರ್ಣವಾಗಿ ಮಾಯವಾಗಿದೆಯೆಂದರೆ ಅತಿಶಯೋಕ್ತಿಯೆನಿಸಿದು. 2009ರಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ ದಕ್ಷಿಣ ಕೋರಿಯಾದ ಸರ್ಕಾರವು ತನ್ನ ಜಿ.ಡಿ.ಪಿಯ ಒಟ್ಟಾರೆ 2% ಭಾಗವನ್ನು ಅಂದರೆ ಸರಿಸುಮಾರು 28.1 ಬಿಲಿಯನ್ ಡಾಲರ್ ಮೊತ್ತವನ್ನು ಪರಿಸರ ಸಂರಕ್ಷಣೆ ನಿಮಿತ್ತ ನಿರ್ವಹಿಸಲಾಗುವ ಗ್ರೀನ್ ಯೋಜನೆಗಳಿಗಾಗಿ ಮುಡಿಪಾಗಿಟ್ಟಿತ್ತು.  ಅದರ ಮಗದೊಂದು ಪ್ರಮುಖೋದ್ದೇಶವೆಂದರೆ ಕನಿಷ್ಠವೆಂದರೂ ಒಂದು ಮಿಲಿಯನ್ ಗ್ರೀನ್ ಉದ್ಯೋಗವನ್ನು ಈ ಯೋಜನೆಗಳು ಸೃಷ್ಟಿಸುವುದರ ಜೊತೆಯಲ್ಲೇ, ಕಾರ್ಬನ್ ಹೊರಸೂಸುವಿಕೆಯ ಮೇಲಿನ ನಿಯಂತ್ರಣ ಮತ್ತು ಆರ್ಥಿಕ ಪ್ರಗತಿಯನ್ನು ಹೊಂದಬೇಕೆನ್ನುವುದು ಅದರಿಚ್ಛೆಯಾಗಿತ್ತು. ಅಂದುಕೊಂಡಂತೆ  ಕೆಲಕಾಲ ಎಲ್ಲವೂ ನಡೆಯಿತು ಆದರೆ ಯೋಜನೆಯ ಅಂತಸ್ಸತ್ವ ಬಹುಕಾಲ ಉಳಿಯಲಿಲ್ಲ. 2009ರಿಂದ 2014ರ ಮಧ್ಯೆ ಕೋರಿಯಾದ ಕಾರ್ಬನ್ ಉತ್ಸರ್ಜನವು ಮೊದಲಿಗಿಂತ 11.8 % ಏರಿಕೆಯಾಯಿತು. ಸ್ವಚ್ಛ ಶಕ್ತಿಕೇಂದ್ರ ಸ್ಥಾಪನೆ, ಸುಸ್ಥಿರ ಅಭಿವೃದ್ಧಿ ಹಾಗೂ  ಪರಿಸರ ಸ್ನೇಹಿ ರೇಲ್ವೆ ವ್ಯವಸ್ಥೆ ನಿರ್ಮಾಣಗಳೆಲ್ಲವೂ ಜೊತೆಗೂಡಿದರೂ ‘ಹಸಿರು ಅಭಿವೃದ್ಧಿ ಯೋಜನೆಯ’ ತಂತ್ರಗಾರಿಕೆ ಅಂದುಕೊಂಡಂತೆ ಕೈಗೂಡಲಿಲ್ಲ. ಇದಕ್ಕೆ ಪ್ರಮುಖ ಕಾರಣವೇನಿರಬಹುದು? ಹಸಿರು ಶಕ್ತಿ ಕ್ರಾಂತಿಯನ್ನು ದುರ್ಬಲಗೊಳಿಸಿದ ಅಂಶಗಳಾವುವು?

ಇದಕ್ಕೆ ಪ್ರಮುಖ ಕಾರಣವೇ ನಿರಂತರ ಖರೀದಿಸುವ, ಸ್ವೀಕರಿಸುವ ಮತ್ತು ಬಳಸುವ ಮಾನಸಿಕತೆ! ಕನ್ಸೂಮರಿಸಮ್ ಎಂದು ಸಂಬೋಧಿಸಲ್ಪಡುವ ಈ ಮಾನಸಿಕತೆ ನವನಾಗರೀಕತೆಯನ್ನು ಹೇಗೆ ಕಾಡುತ್ತಿದೆ ಎಂಬುದಕ್ಕೆ ‘ಹವಾಮಾನ ಬದಲಾವಣೆಗಿಂತ’ ವರ್ತಮಾನದಲ್ಲಿ ಮಗದೊಂದು ಉದಾಹರಣೆ ಬೇಕೇ? ಪ್ರತೀ ಕ್ರಿಸ್ಮಸ್ ಹಬ್ಬದಂದು ನ್ಯೂಯಾರ್ಕ್, ವಾಷಿಂಗ್ಟನ್, ಫ್ಲೋರಿಡಾದಂತಹ ನಗರಗಳ ಬೀದಿಗಳು ಮರ, ದೀಪಾಲಂಕಾರ, ಪ್ಲಾಸ್ಟಿಕ್ ಕೈ ಚೀಲ, ವಸ್ತುಮಳಿಗೆಗಳ ಜೊತೆಯಲ್ಲೇ, ನಿರ್ವಿಘಟಿತ ಮಟ್ಟಕ್ಕೆ ತಲುಪಿದ ತ್ಯಾಜ್ಯಗಳಿಂದ ಭರಪೂರವಾಗಿ ಕಂಗೊಳಿಸುತ್ತವೆ. ಕ್ರಿಸ್ಮಸ್ ರೀತಿಯ ಹಬ್ಬಗಳನ್ನು ಅಲ್ಲಿನ ಬೃಹತ್ ಕಂಪನಿಗಳು ತಮ್ಮ  ವಾರ್ಷಿಕ ಉತ್ಪನ್ನಗಳ ಮಾರಾಟಕ್ಕೆ ಸುಗ್ಗಿಕಾಲವೆಂದೇ ಪರಿಗಣಿಸಿವೆ. ಇದರ ಪರಿಣಾಮವಾಗಿ ಒಬ್ಬ ಸಾಮಾನ್ಯ ಅಮೇರಿಕನ್ ವ್ಯಕ್ತಿಯು ವರ್ಷಕ್ಕೆ 650 ಕಿಲೋ ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೇರಿಸುವ ಮತ್ತಲ್ಲಿನ ಒಟ್ಟಾರೆ ಸಮುದಾಯ 2.6 ಬಿಲಿಯನ್ ಡಾಲರ್ ಮೊತ್ತವನ್ನು ರ‍್ಯಾಪಿಂಗ್ ಪೇಪರ್ಗಳ ಮೇಲೆ  ಅದೊಂದೇ ಹಬ್ಬದ ಸಂದರ್ಭದಲ್ಲಿ ವಿನಿಯೋಗಿಸುತ್ತದಂತೆ. ಸ್ಥಳೀಯರೇ ಹೇಳುವಂತೆ 150 ವರ್ಷಗಳ ಹಿಂದೆ ಈಗಿನ ರೀತಿಯಲ್ಲಿ ರ‍್ಯಾಪ್ ಮಾಡಿದ ಉಡುಗೊರೆಗಳನ್ನು ನೀಡುವ ಪದ್ದತಿಯೇ ಇರಲಿಲ್ಲವಂತೆ. ಬ್ಲಾಕ್ ಫ್ರೈಡೆಯಂತಹ ಸಂದರ್ಭದಲ್ಲಿ ‘ಮೇಸಿ’ಯಂತಹ ಅರ್ಬನ್ ಸ್ಟೋರ್‌ಗಳು, ಇತರೆ ಉತ್ಪನ್ನ ತಯಾರಕ ಸಂಸ್ಥೆಗಳು ವಿಶೇಷವಾಗಿ ‘ಮೊಬೈಲ್, ಆಟೋಮೊಬೈಲ್, ಗೃಹೋಪಯೋಗಿ ವಸ್ತುಗಳ’ ನಿರ್ಮಾಣಕಾರರು ಜಾಹಿರಾತಿನ, ವಿಶೇಷ ಅವಧಿಗಾಗಿ ಮೀಸಲಿರಿಸುವ ಇ.ಎಂ.ಐ, ಹಬ್ಬಗಳಿಗೋಸ್ಕರವಾಗಿಯೇ ಇರುವ ರಿಯಾಯಿತಿ ದರದ ಮುಖಾಂತರ ಮೇಲ್ಕಂಡ ಸ್ವರೂಪದ ಉಡುಗೊರೆಗಳನ್ನು ನೀಡುವುದು ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಮಹೋನ್ನತ ರೀತಿ ಹಾಗೂ ಇಂತಹುದೇ ಸಿದ್ಧ ಮಾದರಿಯು ಸೂಕ್ತವಾದುದೆಂದು ಈ ಹಂತಗಳಲ್ಲಿ ಹೇಳುತ್ತಾ ಹೋದರು. ಅವಾವುವೆಂದರೆ ಮೃದುಮನೋಒತ್ತಡ, ಸಾಮಾನ್ಯ ಸಮಾಜವೆಂಬ ತಂತ್ರಗಾರಿಕೆ, ಜಾಹೀರಾತು , ಸಾಮಾಜಿಕ ಒತ್ತಡ ಮತ್ತು ತನ್ನ ಬಳಿ ಇಂತಹ ಉತ್ಪನ್ನಗಳಿವೆ ಎಂಬುದು ವೈಯುಕ್ತಿಕ ಸಾಧನೆಯ ಪ್ರತೀಕವೆಂಬ ಭ್ರಮಾ ಲೋಕದ ಪರಿಕಲ್ಪನೆಗಳನ್ನು  ಮೇಲ್ಕಂಡ ಹಂತಗಳಲ್ಲಿ ಬಿತ್ತುತ್ತಾ ಹೊರಟರು.

ಇಂತಹ ಪ್ರಯತ್ನಗಳಿಂದ ಮನುಷ್ಯ ಜೀವನ ಮಟ್ಟ ಸುಧಾರಿಸಿದ್ದಕ್ಕಿಂತ ಹೆಚ್ಚಾಗಿ ಕಾರ್ಪೊರೇಟ್ ಕಂಪನಿಗಳ ಜೇಬು ತುಂಬಿದ್ದೇ ಹೆಚ್ಚು. ರಸ್ತೆಗಳಲ್ಲಿನ ಬಿಲ್ಬೋರ್ಡ್, ವೃತ್ತಪತ್ರಿಕೆಗಳ ಮುಖಪುಟಗಳು, ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಗೊಳ್ಳುವ ಜಾಹೀರಾತುಗಳು ನಮ್ಮನ್ನೆತ್ತ ಕರೆದೊಯ್ಯುತ್ತಿವೆ? ಆ ಉತ್ಪನ್ನ ನಮ್ಮ ಬಳಿಯಿಲ್ಲದಿದ್ದಲ್ಲಿ ಏನೋ ಕಳೆದುಕೊಂಡಿದ್ದೇವೆಂಬ ಭಾವಸೃಷ್ಟಿಯಾಗುವಂತೆ ಮಾಡಿದ್ದಾರೆ ಅಲ್ಲವೇ? ಅಮೆರಿಕನ್ ಸೈಕಾಲಜಿಸ್ಟ್ ಅಸೋಸಿಯೇಷನ್ ವರದಿಯೇ ಹೇಳುವಂತೆ ಅವಶ್ಯಕತೆಗಿಂತ ಹೆಚ್ಚು ಖರೀದಿಸುವುದು ಮಾನಸಿಕ ಕ್ಷೋಭೆಗೆ  ಕಾರಣವಾಗುವುದರ ಜೊತೆಯಲ್ಲೇ ‘ಪರಿಸರನಾಶದ ಬೆಲೆ’ ತೆರುವಂತಹ ಪರಿಸ್ಥಿತಿಗೂ ಮುನ್ನುಡಿ ಬರೆಯಬಹುದೆನ್ನುತ್ತಾರೆ. ದಿ ಗಾರ್ಡಿಯನ್ ಪತ್ರಿಕೆ 2017ರಲ್ಲಿ ಪ್ರಕಟಿಸಿದ ವರದಿಯೊಂದರ ಪ್ರಕಾರ ವಿಶ್ವದಲ್ಲಿ ವಾಯುಮಂಡಲವನ್ನು ಸೇರುತ್ತಿರುವ ಹಾನಿಕಾರಕ ಹಸಿರುಮನೆ ಅನಿಲಗಳ ಒಟ್ಟಾರೆ ಪ್ರಮಾಣದ ಶೇಕಡಾ 71 ರಷ್ಟು ಭಾಗ ಕೊಡುಗೆ ನೀಡುತ್ತಿರುವುದು ಕೇವಲ ನೂರು ಕಂಪನಿಗಳು ಮಾತ್ರ. ವಿಪರ್ಯಾಸವೆಂದರೆ ಜನಮಾನಸವು ಬಳಸುವ ಬಹುಪಾಲು ಉತ್ಪನ್ನಗಳನ್ನು ತಯಾರಿಸುವುದು ಅವೇ ಕಂಪೆನಿಗಳಂತೆ! ಇದರಲ್ಲಿ ಮತ್ತಷ್ಟು ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ, ಭಾರತಕ್ಕೆ ಹೋಲಿಕೆ ಮಾಡಿ ನೋಡಿದಾಗ ಅಮೇರಿಕಾದ ಒಬ್ಬ ವ್ಯಕ್ತಿಯು ಇಲ್ಲಿನ ಸಾಮಾನ್ಯನಿಗಿಂತ ನೂರುಪಟ್ಟು ಹೆಚ್ಚಿನ ಶಕ್ತಿ ಸಂಪನ್ಮೂಲಗಳನ್ನು ಬಳಸುತ್ತಿದ್ದಾನಂತೆ. ಅವನದೇ ರೀತಿಯಲ್ಲಿ ಜಗತ್ತಿನ ಪ್ರತೀ ರಾಷ್ಟ್ರದ ವ್ಯಕ್ತಿಯೂ ಬದುಕಲು ಆರಂಭಿಸಿದರೆ  ನಿಸರ್ಗದ ಅಧೋಗತಿಯು ಅಷ್ಟೇ ವೇಗದಲ್ಲಿ ಬಂದಪ್ಪಳಿಸಲಿದೆ.

ಹೀಗಿರುವಾಗ ಖರೀದಿಸುವ ಈ ಗುಣಸ್ವಭಾವಗಳಿಗೆ ವ್ಯಕ್ತಿಯೋರ್ವನನ್ನು ದೂಷಿಸುವುದು ತರವಲ್ಲ. ಆತ ಇಂತಹ ಮಾನಸಿಕತೆಯನ್ನು ಹೊಂದಲೆಂದೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ, ಅಂತಹ ವಾತಾವರಣವನ್ನು ನಿರ್ಮಿಸುತ್ತಿರುವ ಕಂಪನಿಗಳ ಅಂತರ್ಯವನ್ನೊಮ್ಮೆ ಅರಿತು, ಅದರ ಕುರಿತಂತೆ ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಕಾರ್ಬನ್ ಫೂಟ್ಪ್ರಿಂಟ್ ತಗ್ಗಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ಮುಖವಾಡವನ್ನು ಹೊತ್ತುಬರುವ ಹಲವಾರು ಉತ್ಪನ್ನಗಳು ಮತ್ತಷ್ಟು ಅಪಾಯಕಾರಿಯೆಂದು ಅಮೇರಿಕೆಯ ನಿರ್ಮಾಪಕ ಮತ್ತು ಚಿತ್ರೋದ್ಯಮದ ಪ್ರಮುಖರಾದ ಮಾರ್ಕ್ ಕೌಫ್ಮ್ಯಾನ್ ಹೇಳುತ್ತಾರೆ. ಅದೊಂದು ಉತ್ಪನ್ನ ಮಾರಾಟದ ಜಾಹೀರಾತಿನ ತಂತ್ರಗಾರಿಕೆಯೆಂದೂ ಆರೋಪಿಸುತ್ತಾರೆ. ಆರ್ಥಿಕ ಪ್ರಗತಿ ಎಂಬ ಮಾಯಾಜಾಲದಲ್ಲಿ ಸಿಲುಕಿರುವ ನಾವು ಪ್ರತೀ ಜಿ.ಡಿ.ಪಿ ಹೆಚ್ಚಳ  ಕೂಡ ಪರಿಸರಕ್ಕೆ ಹೇಗೆ ಮಾರಕವಾಗಬಲ್ಲದೆಂಬುದನ್ನು ಅರಿಯುವಲ್ಲಿ ಸೋತಿದ್ದೇವೆ. ಕೇವಲ ಒಂದು ಶೇಕಡಾ ಜಿ.ಡಿ.ಪಿ ಬೆಳವಣಿಗೆ 0.5 ರಿಂದ 0.8% ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಬಲ್ಲದು. 2043ರಕ್ಕೆ ವಿಶ್ವ ಆರ್ಥಿಕ ದೈತ್ಯನಾಗಲು ಹೊರಟ ರಾಷ್ಟ್ರಗಳು, ತಮ್ಮ ಪ್ರಜೆಗಳ ಖರೀದಿಸುವ ಶಕ್ತಿಯನ್ನು ಹೆಚ್ಚಿಸುವತ್ತ ದೃಷ್ಟಿಯನ್ನು ನೆಟ್ಟಿದ್ದಾರೆಯೇ  ಹೊರತಾಗಿ ಅದರಿಂದ ತಮ್ಮದೇ ನೈಸರ್ಗಿಕ ಸಂಪನ್ಮೂಲಗಳು, ಅರಣ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಬಹುದಾದ ಅಂಶಗಳನ್ನು ಗಮನಿಸುವಲ್ಲಿ ಸೋತಿದ್ದಾರೆ. ನಮ್ಮೆಲ್ಲ ಹಸಿರುಅಭಿವೃದ್ಧಿ ಯೋಜನೆಗಳು, ರಾಜತಾಂತ್ರಿಕ ನೀತಿಗಳು, ಆರ್ಥಿಕತೆಯನ್ನೇ ಕೇಂದ್ರವಾಗಿರಿಸಿಕೊಂಡು ನಿರ್ಮಿಸಲ್ಪಡುತ್ತಿವೆಯೇ ವಿನಃ ಪರಿಸರವನ್ನಲ್ಲ. ಅದೇ ಕಾರಣಕ್ಕಾಗಿಯೇ ‘ರಾಯ್ ಟರ್ಸ್’ ಸೂಕ್ಶ್ಮವಾಗಿ 2009ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಯೋಜನೆಯ ವೈಫಲ್ಯಕ್ಕೆ ಪ್ರಮುಖ ಕಾರಣವೊಂದನ್ನು ವರದಿಯ ಮುಖಾಂತರ ಪ್ರಕಟಿಸಿತು. ಜೀರೋ -ಕಾರ್ಬನ್ ಹೊರಸೂಸುವಿಕಾ ಯೋಜನೆ, ಸುಸ್ಥಿರ ಅಭಿವೃದ್ಧಿಯತ್ತ ಮುಖಮಾಡಿದ ತೈಲರಹಿತ ವಿದ್ಯುತ್ ಉತ್ಪಾದನೆ ಮತ್ತು ಇನ್ನೂ ಅನೇಕ ಯೋಜನೆಗಳ ಮುಖಾಂತರ ಯಾವುದನ್ನೆಲ್ಲ ಉಳಿತಾಯ ಮಾಡಿತ್ತೋ ಅವುಗಳನ್ನೆಲ್ಲ ಅದೇ ಐದು ವರ್ಷಗಳಲ್ಲಿನ ಜನಮಾನಸದ ‘ವಿಪರೀತ ಖರೀದಿ ಪ್ರವೃತ್ತಿಯ’ ಹೆಚ್ಚಳಕ್ಕಾಗಿ ಕಳೆದುಕೊಳ್ಳಬೇಕಾದ ಸ್ಥಿತಿ ಬಂದೊದಗಿತು. 

ಜಾಗತಿಕ ಮಟ್ಟದ ಈ ಸಮಸ್ಯೆಗೆ ನಾವೂ ಹೇಗೆ ಕೊಡುಗೆಯನ್ನು ನೀಡುತ್ತಿದ್ದೇವೆಂಬುದನ್ನೊಮ್ಮೆ ಆತ್ಮಾವಲೋಕನದ ಮುಖಾಂತರ ಅರಿಯುವ ಪ್ರಯತ್ನ ಮಾಡಬಹುದೇ? ಕಳೆದ ವರ್ಷದ ಜುಲೈನಲ್ಲಿ ಜೀ ಫೈವ್ ಸಂಸ್ಥೆ ನಡೆಸಿದ ಸಾಮಾಜಿಕ ಸಮೀಕ್ಷೆಯ ವರದಿ ಹೇಳುವುದೇನೆಂದರೆ ನಗರ ಪ್ರದೇಶದ, ಅದರಲ್ಲೂ ವಿಶೇಷವಾಗಿ ಟೆಕ್ಕಿಗಳು ಮತ್ತು ಯುವಕರ ಸಮುದಾಯ ತಾವು ಖರೀದಿಸಿದ ಮೊಬೈಲ್ ಅನ್ನು ಕೇವಲ ಆರು ತಿಂಗಳ ಅಥವಾ ಹೆಚ್ಚೆಂದರೆ ವರ್ಷದ ಅವಧಿಯಲ್ಲೇ ಬದಲಾಯಿಸಿ ಮತ್ತೊಂದು ಮೊಬೈಲ್ ಕೊಂಡುಕೊಳ್ಳುತ್ತಿದ್ದಾರಂತೆ. ನಮ್ಮ ಸುತ್ತಮುತ್ತಲಿನ ಸ್ನೇಹಿತರ ವರ್ಗವನ್ನೇ ಒಮ್ಮೆ ಗಮನಿಸಿ. ಕೊಂಡ ಮೊಬೈಲ್, ಲ್ಯಾಪ್ಟಾಪ್, ವಾಚ್, ಬಟ್ಟೆ, ದ್ವಿಚಕ್ರ ವಾಹನ ಇತ್ಯಾದಿಗಳೆಲ್ಲ ಕೆಲ ತಿಂಗಳುಗಳಲ್ಲೇ, ದಿನಗಳಲ್ಲೇ, ಅಥವಾ ಬಂದ ಕ್ಷಣದಲ್ಲೇ ಔಟ್ ಡೇಟ್ ಎಂದು ದೂರಿ ಮಗದೊಂದನ್ನು ಖರೀದಿಸಲು ಕಾದ ಬಕಪಕ್ಷಿಗಳಂತೆ ನಿಂತ ಜೀವನ ಅವರದಾಗಿರುತ್ತದೆ. ಮುಂದೊಮ್ಮೆ ಅವರ ಜೀವನದಿಂದ ನಾವೂ ಬೆಲೆ ತೆರಬೇಕಾಗಿ ಬರಬಹುದು.

ಹಾಗಿದ್ದಲ್ಲಿ ಇದನ್ನೆಲ್ಲಾ ನಿಯಂತ್ರಿಸಲು ಆಯ್ಕೆಗಳೇ ಇಲ್ಲವೇ? ಹಾಗೇನಿಲ್ಲ ಖಂಡಿತಾ ಇದೆ. ಅ ಗ್ಲೋಬಲ್ ಸಿನಾರಿಯೋ ಎಂಬ ಜೋಯೆಲ್ ಎಂ ಹೋಪ್ಕಿನ್ಸ್, ಜೆ.ಕೆ. ಸ್ಟೀನ್ ಬೆರ್ಗೆರ್, ನರಸಿಂಹ ಡಿ ರಾವ್ ಮತ್ತು ಯಾನ್ನಿಕ್ ಆಸ್ವಾಲ್ಡ್ ಎಂಬ ನಾಲ್ಕು ತಜ್ಞರ ವರದಿಯ ಪ್ರಕಾರ 2050 ರ ಹೊತ್ತಿಗೆ ಸದ್ಯದ ಜನಸಂಖ್ಯೆ ಹೆಚ್ಚಿ, ಈಗಿನ ಪರಿಸ್ಥಿತಿಗಿಂತಲೂ ಹೆಚ್ಚು ಖರೀದಿಸುವ ಪ್ರವೃತ್ತಿ ಹಾಗೇ ಉಳಿದರೆ ನಿಸರ್ಗದ ಸ್ಥಿತಿ ಅಧೋಗತಿಗಿಳಿವುದಂತೂ ಖಚಿತ. ಇಂತಿರುವಾಗ 1960 ರ ದಶಕದಲ್ಲಿ ಒಬ್ಬ ಸಾಮಾನ್ಯನ ಬದುಕು ಹೇಗಿತ್ತೋ (ಆತನ ಜೀವನವಿಧಾನ ಮಿತಿಯಾದ ಖರೀದಿಸುವ ಪ್ರವೃತ್ತಿ) ಅದರಂತೆಯೇ ಕೋಟ್ಯಂತರ ನಾಗರೀಕಪ್ರವರ್ಗ ಬದುಕಿ ತೋರಿದಾಗ ಮಾತ್ರವೇ ನಿಸರ್ಗವನ್ನುಳಿಸಿಕೊಳ್ಳಲು ಸಾಧ್ಯವೆಂದಿದ್ದಾರೆ. ಮುಂದುವರಿದ ದೇಶಗಳ ಜನರಂತೂ ತಮ್ಮ ಖರೀದಿಸುವ ಪ್ರವೃತ್ತಿಯನ್ನು ಶೇಕಡಾ 95 ರಷ್ಟು ಇಳಿಸಬೇಕೆಂದು ವರದಿ ಹೇಳಿದೆ. ಇಂತಿರುವಾಗ ಭಾರತೀಯರಾದ ನಮ್ಮ ಪೂರ್ವಜರು ಹಾಕಿಕೊಟ್ಟ ಸರಳ ಜೀವನದ ಪರಿಕಲ್ಪನೆಯನ್ನು ಮತ್ತೆ ಮುನ್ನೆಲೆಗೆ ತರುವುದರ ಮುಖಾಂತರವಾಗಿ ಖರೀದಿಸುವ ಪ್ರವೃತ್ತಿಯನ್ನು ವ್ಯಸನಸ್ವರೂಪಕ್ಕೆ ತಿರುಗುವ ಮುನ್ನವೇ ತಡೆಹಿಡಿಯೋಣ. ಅಷ್ಟೇ ಅಲ್ಲದೇ, ನಮ್ಮ ಜೀವನ ಶೈಲಿ ಇತರ ದೇಶಗಳಿಗೂ ಮಾದರಿಯಾಗುವಂತಿರಲಿ. ಇಲ್ಲದಿದ್ದರೆ ಮಿತಿಯಿಲ್ಲದ ಖರೀದಿ ಮನೋರೋಗಕ್ಕೆ ಹಾದಿಯಾಗುವುದಲ್ಲದೇ, ನಿಸರ್ಗ ವಿನಾಶಕ್ಕೂ ಬುನಾದಿಯಾದೀತು ಎಚ್ಚರ!

ಇದನ್ನೂ ಓದಿ: Team India : ಟೀಮ್​ ಇಂಡಿಯಾದ ಹೊಸ ಜೆರ್ಸಿ ರೇಟ್​ ದುಬಾರಿ, ಆದ್ರೂ ಖರೀದಿಗೆ ಮುಗಿಬಿದ್ದ ಅಭಿಮಾನಿಗಳು!

Exit mobile version