ಕ್ರಿಪ್ಟೋಕರೆನ್ಸಿ (cryptocurrency) ವರ್ಚುವಲ್ ಅಥವಾ ಡಿಜಿಟಲ್ ಕರೆನ್ಸಿ. ಇವುಗಳು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ವಿಕೇಂದ್ರೀಕೃತವಾಗಿದೆ (Decentralised). ಇದನ್ನು ವ್ಯವಹಾರಗಳಲ್ಲಿ ಬಳಸಲು ಭಾರತದಲ್ಲಿ ಕೆಲವು ಅವುಗಳಲ್ಲಿ ಹಲವು ಗೌಪ್ಯತೆ (privacy) ಮತ್ತು ಅನಾಮಧೇಯತೆಯನ್ನು (anonymity) ಹೆಚ್ಚಿಸುವ ಪ್ರಯತ್ನ ಮಾಡುತ್ತಿವೆ. ಕೆಲವು ಕರೆನ್ಸಿಗಳು ಎಲ್ಲಾ ವಹಿವಾಟುಗಳ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡುತ್ತವೆ – ಪರಿಪೂರ್ಣ ಪಾರದರ್ಶಕತೆ. ಇನ್ನುಳಿದವು ಗೌಪ್ಯತೆಯನ್ನು ಐಚ್ಛಿಕವಾಗಿಸುತ್ತಾರೆ (optional) ಅಥವಾ ಸೂಚ್ಯವಾಗಿ (implicit) ಇರಿಸುತ್ತಾರೆ.
ನಮ್ಮಲ್ಲಿ ಹೆಚ್ಚಿನವರು ಕ್ರಿಪ್ಟೋಕರೆನ್ಸಿಗಳ ಬಗ್ಗೆ ಕೇಳಿದಾಗ ಮನಸ್ಸಿಗೆ ಥಟ್ ಅಂತ ಬರುವುದು ಬಿಟ್‌ಕಾಯಿನ್ (Bitcoin- BTC). ಬಳಕೆದಾರರಿಗೆ ತಮ್ಮ ಹಣ ಪಾವತಿ ಮಾಡಲು ಪೀರ್-ಟು-ಪೀರ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪರಿಕಲ್ಪನೆಯನ್ನು ಮೊದಲ ಬಾರಿ ಪರಿಚಯಿಸಿದ್ದು ಬಿಟ್‌ಕಾಯಿನ್. ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದ ಮೇಲೆ ಬಿಟ್‌ಕಾಯಿನ್‌ನ ಅನಾಮಧೇಯ ಸಂಸ್ಥಾಪಕ, ಸತೋಶಿ ನಕಾಮೊಟೊ ಅವರು 2008ರಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿದರು. 2009ರಲ್ಲಿ ಬಿಟ್‌ಕಾಯಿನ್ ಎಲೆಕ್ಟ್ರಾನಿಕ್ ಪೀರ್-ಟು-ಪೀರ್ ಪರ್ಯಾಯ ಹಣಕಾಸಿನ ವ್ಯವಸ್ಥೆಯಾಗಿ ಹೊರಹೊಮ್ಮಿತು.
ಕೇವಲ 21 ಮಿಲಿಯನ್ ಬಿಟ್‌ಕಾಯಿನ್ ಅನ್ನು ಮಾತ್ರ ಉತ್ಪಾದಿಸಬಹುದು. ಈ ಮಿತಿಯನ್ನು ಬಿಟ್‌ಕಾಯಿನ್ನಿನ ಕೋಡ್ ಅಥವಾ ಡಿಎನ್ಎಯಲ್ಲೇ ಅಳವಡಿಸಲಾಗಿದೆ. ಇಲ್ಲಿಯವರೆಗೆ, ಸುಮಾರು 18.8 ಮಿಲಿಯನ್ ಬಿಟ್‌ಕಾಯಿನ್ ಗಣಿಗಾರಿಕೆ ಮಾಡಲಾಗಿದೆ. ಕ್ರಿಪ್ಟೋ ಡೇಟಾ ಸಂಸ್ಥೆಯ ಚೈನಾಲಿಸಿಸ್ ಪ್ರಕಾರ, ಸುಮಾರು 20% ಬಿಟ್‌ಕಾಯಿನ್ ಕಳೆದುಹೋಗಿದೆ ಅಥವಾ ಉಪಯೋಗಿಸಲಾಗದ ವ್ಯಾಲೆಟ್‌ಗಳಲ್ಲಿ ಸಿಲುಕಿಕೊಂಡಿದೆ. ಇಂದು ಅದು 3.76 ಮಿಲಿಯನ್ BTC ಗೆ (ಸುಮಾರು $190 ಶತಕೋಟಿ ಮೌಲ್ಯದ) ಸಮನಾಗಿದೆ.
ನೀವು ನಿಮ್ಮ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಎಕ್ಸ್‌ಚೇಂಜ್ ಮೂಲಕ ಬದಲಾಯಿಸಿಕೊಳ್ಳಬಹುದು. ಅಥವಾ ಕೆಲವು ಆ್ಯಪ್‌ಗಳ ಮೂಲಕ, ವೆಬ್‌ಸೈಟ್‌ಗಳ ಮೂಲಕ ಅಥವಾ ಕ್ರಿಪ್ಟೋ ಎಟಿಎಂ ಮೂಲಕ ಕ್ರಿಪ್ಟೋಕರೆನ್ಸಿಯನ್ನು ಖರೀದಿಸಬಹುದು. ಕೆಲವರು “ಗಣಿಗಾರಿಕೆ” (crypto mining) ಎಂಬ ಸಂಕೀರ್ಣ ಪ್ರಕ್ರಿಯೆಯ ಮೂಲಕ ಕ್ರಿಪ್ಟೋಕರೆನ್ಸಿಯನ್ನು ಗಳಿಸುತ್ತಾರೆ. ಇದು ಜಟಿಲವಾದ ಗಣಿತದ ಒಗಟುಗಳನ್ನು ಪರಿಹರಿಸುವ ಮುಖಾಂತರ ಸಾಧಿಸುತ್ತಾರೆ. ಇದಕ್ಕೆ ಸುಧಾರಿತ ಮತ್ತು ಅಧಿಕ ಸಾಮರ್ಥ್ಯವುಳ್ಳ ಕಂಪ್ಯೂಟರ್ ಉಪಕರಣಗಳ ಅಗತ್ಯವಿರುತ್ತದೆ. ಕ್ರಿಪ್ಟೋಕರೆನ್ಸಿಯ ಮೌಲ್ಯವು ಹೆಚ್ಚಾದಂತೆ ಘಾತೀಯವಾಗಿ(exponentially), ಅವುಗಳ ಗಣಿಗಾರಿಕೆಯ ಅಗತ್ಯವೂ ಹೆಚ್ಚಾಗುತ್ತದೆ.
ಕ್ರಿಪ್ಟೋಕರೆನ್ಸಿಯನ್ನು ಡಿಜಿಟಲ್ ವ್ಯಾಲೆಟ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಅದು ಆನ್‌ಲೈನ್‌ನಲ್ಲಿರಬಹುದು (ಕ್ಲೌಡ್), ನಿಮ್ಮ ಕಂಪ್ಯೂಟರ್‌ನಲ್ಲಿ ಅಥವಾ ಬಾಹ್ಯ ಹಾರ್ಡ್ ಡ್ರೈವ್‌ನಲ್ಲಿರಬಹುದು. ಡಿಜಿಟಲ್ ವ್ಯಾಲೆಟ್ ನಿರ್ದಿಷ್ಟವಾದ ವ್ಯಾಲೆಟ್ ವಿಳಾಸವನ್ನು ಹೊಂದಿರುತ್ತದೆ. ಇದು ಸಂಖ್ಯೆಗಳು ಮತ್ತು ಅಕ್ಷರಗಳ ದೀರ್ಘವಾದ ಸ್ಟ್ರಿಂಗ್ (string) ಆಗಿರುತ್ತದೆ.
ನಿಮ್ಮ ಆನ್‌ಲೈನ್ ಎಕ್ಸ್‌ಚೇಂಜ್ ಪ್ಲಾಟ್‌ಫಾರಂ ಸ್ಥಗಿತಗೊಂಡರೆ, ನೀವೇನಾದರೂ ಕ್ರಿಪ್ಟೋಕರೆನ್ಸಿಯನ್ನು ತಪ್ಪಾದ ವ್ಯಕ್ತಿಗೆ ಕಳುಹಿಸಿದರೆ, ನಿಮ್ಮ ಡಿಜಿಟಲ್ ವ್ಯಾಲೆಟ್‌ನ ಪಾಸ್‌ವರ್ಡ್ ಅನ್ನು ಕಳೆದುಕೊಂಡರೆ ಅಥವಾ ನಿಮ್ಮ ಡಿಜಿಟಲ್ ವ್ಯಾಲೆಟ್ ಕಳುವಾದರೆ ಅಥವಾ ಹ್ಯಾಕ್ ಆದರೆ – ನೀವು ನಿಮ್ಮ ಹಣವನ್ನು ಮರುಪಡೆಯಲು ನಿಮಗೆ ಸಹಾಯ ಮಾಡಲು ಯಾರೂ ಮುಂದಾಗುವುದಿಲ್ಲ.
ಪ್ರಮುಖವಾಗಿ ಗೌಪ್ಯತೆ-ಆಧಾರಿತ ವೈಶಿಷ್ಟ್ಯಗಳಿಗಾಗಿ ಸೈಬರ್ ಕ್ರಿಮಿನಲ್‌ಗಳಲ್ಲಿ ಜನಪ್ರಿಯತೆ ಮತ್ತು ಸ್ವೀಕೃತಿಯನ್ನು ಸಾಧಿಸಿದ ಮತ್ತೊಂದು ಕರೆನ್ಸಿ ಮೊನೆರೊ(XMR). ಇದು ಖಾಸಗಿ ಮತ್ತು ಸೆನ್ಸಾರ್ಶಿಪ್-ನಿರೋಧಕ ವಹಿವಾಟುಗಳಲ್ಲಿ ಹೆಚ್ಚಿನ ಬಳಕೆ ಹೊಂದಿರುವ ಕ್ರಿಪ್ಟೋಕರೆನ್ಸಿ. ಇದರಲ್ಲಿರುವ ವಿವಿಧ ಗೌಪ್ಯತೆಯನ್ನು ಹೆಚ್ಚಿಸುವ ತಂತ್ರಜ್ಞಾನಗಳು ಅದರ ಬಳಕೆದಾರರ ಅನಾಮಧೇಯತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 2014ರಲ್ಲಿ ಬಳಕೆಗೆ ಬಂದ ಮೊನೆರೊ ಆಗಸ್ಟ್ 2023ರ ಕಡೆಯ ವಾರದಲ್ಲಿ $146.22ನಲ್ಲಿ ವ್ಯಾಪಾರವಾಗುತ್ತಿತ್ತು ಮತ್ತು $2.68 ಶತಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿತ್ತು.
ಪೂರ್ವನಿಯೋಜಿತವಾಗಿ ಪ್ರತಿ ಬಳಕೆದಾರನು ಅನಾಮಧೇಯರಾಗಿರುವಂತಹ ಏಕೈಕ ಪ್ರಮುಖ ಕ್ರಿಪ್ಟೋಕರೆನ್ಸಿ ಮೊನೆರೊ. ಇದನ್ನು ಕಳುಹಿಸುವವರು, ಸ್ವೀಕರಿಸುವವರು ಮತ್ತು ಅವರ ಪ್ರತಿಯೊಂದು ವಹಿವಾಟಿನ ಮೊತ್ತವನ್ನು ನೆಟ್‌ವರ್ಕ್‌ನಲ್ಲಿ ಭಾಗವಹಿಸುವ ಇತರರಿಂದ ಮರೆಮಾಚಲಾಗಿದೆ.
ಬಿಟ್‌ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಹೆಚ್ಚಿನ ಪ್ರಮುಖ ಕ್ರಿಪ್ಟೋಕರೆನ್ಸಿ ನೆಟ್‌ವರ್ಕ್‌ಗಳು ಬ್ಲಾಕ್‌ಚೈನ್ ತಂತ್ರಜ್ಞಾನದ ಪಾರದರ್ಶಕತೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ. ಅಂದರೆ ಇವುಗಳನ್ನು ಬಳಸಿದ ವಹಿವಾಟುಗಳನ್ನು ವಿಶ್ವದ ಯಾರಾದರೂ ಪತ್ತೆ ಹಚ್ಚಬಹುದು ಮತ್ತು ಪರಿಶೀಲಿಸಬಹುದು. ಆದ್ದರಿಂದಲೇ ಗೌಪ್ಯತೆ ಮತ್ತು ಅನಾಮಧೇಯತೆಯನ್ನು ಕಾಪಾಡಿಕೊಳ್ಳುವ ಗುಣವುಳ್ಳ ಮೊನೆರೊ ಸೈಬರ್ ಕ್ರಿಮಿನಲ್‌ಗಳಿಗೆ ಬಹು ಪ್ರಿಯವಾದ ಹಣ.ಅದು ಒದಗಿಸುವ ಅನಾಮಧೇಯತೆಯಿಂದಾಗಿ ಡಾರ್ಕ್ ವೆಬ್‌ನಲ್ಲಿ ಮಾದಕವಸ್ತು ವ್ಯಾಪಾರದಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಕೆಯಾಗಿದೆ ಮೊನೆರೊ. ಕೆಲವರು ಇದನ್ನು ‘ಅಪರಾಧಿಗಳ ಕರೆನ್ಸಿ’ ಎಂದು ಉಲ್ಲೇಖಿಸಿದ್ದಾರೆ.
ಪೊರ್ಟಿಗಾರ್ಡ್ ಲ್ಯಾಬ್ಸ್ ಇತ್ತೀಚೆಗೆ ದುರುದ್ದೇಶಪೂರಿತ VBA ಮ್ಯಾಕ್ರೋಗಳನ್ನು ಒಳಗೊಂಡಿರುವ ಮೈಕ್ರೋಸಾಫ್ಟ್ OLE ಫೈಲ್ ಫಾರ್ಮ್ಯಾಟ್‌ನಲ್ಲಿ Excel ಫೈಲುಗಳನ್ನು ಗುರುತಿಸಿದೆ. ಆ ಫೈಲ್‌ಗಳ ಹೆಸರುಗಳು: Pago_detalles.xls, makbuzu.xls ಮತ್ತು Pago.xls. ಅವುಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಅವೆಲ್ಲವೂ Monero (XMR) ಕ್ರಿಪ್ಟೋಕರೆನ್ಸಿಯ ಗಣಿಗಾರಿಕೆ ಮಾಡಲು ಬಳಸಲ್ಪಡುತ್ತವೆ ಎನ್ನುವುದು ಪತ್ತೆಯಾಯಿತು.
2017ರಲ್ಲಿ ಜಗತ್ತಿನಾದ್ಯಂತ ಸುದ್ಧಿಯಾದ ವಾನಕ್ರೈ (WannaCry) ರಾನ್‌ಸಮ್‌ವೇರ್ ದಾಳಿ ವಸೂಲಿ ಮಾಡಿದ ಹಣವನ್ನು ಮೊನೆರೊಗೆ ಪರಿವರ್ತಿಸಲಾಗಿದೆ ಎಂದು ವರದಿಯಾಗಿದೆ. ಮೊನೆರೊ ಕರೆನ್ಸಿಯ ಪೂರೈಕೆಯು ವಾಸ್ತವಿಕವಾಗಿ ಅನಂತವಾಗಿದೆ. ಇದು ಬಿಟ್‌ಕಾಯಿನ್‌ನಂತೆ 21 ಮಿಲಿಯನ್‌ಗೆ ಸೀಮಿತವಾಗಿಲ್ಲ.
ಕ್ರಿಪ್ಟೋಜಾಕಿಂಗ್ ಎನ್ನುವುದು ಒಂದು ರೀತಿಯ ಸೈಬರ್ ಕ್ರೈಮ್ ಆಗಿದ್ದು, ಕ್ರಿಪ್ಟೋಕರೆನ್ಸಿಗಾಗಿ ಗಣಿಗಾರಿಕೆ ಮಾಡಲು ಸೈಬರ್ ಕ್ರಿಮಿನಲ್‌ಗಳು ನಿಮ್ಮ ಸಾಧನಗಳನ್ನು (ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಸರ್ವರ್‌ಗಳು) ಅನಧಿಕೃತವಾಗಿ ಬಳಸುತ್ತಾರೆ. ಸೈಬರ್‌ಕ್ರೈಮ್‌ನ ಅನೇಕ ರೂಪಗಳಂತೆ, ಉದ್ದೇಶವು ಲಾಭವಾಗಿದೆ, ಆದರೆ ಇತರ ಬೆದರಿಕೆಗಳಿಗಿಂತ ಭಿನ್ನವಾಗಿ, ನಿಮ್ಮಿಂದ ಸಂಪೂರ್ಣವಾಗಿ ಮರೆಮಾಚಿರುತ್ತಾರೆ.
ಕ್ರಿಪ್ಟೋಜಾಕಿಂಗ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಲು ಸೈಬರ್ ಅಪರಾಧಿಗಳು ಸಾಧನಗಳನ್ನು ಹ್ಯಾಕ್ ಮಾಡುತ್ತಾರೆ. ಸಾಫ್ಟ್‌ವೇರ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ರಿಪ್ಟೋಕರೆನ್ಸಿಗಳನ್ನು ರಹಸ್ಯವಾಗಿ ಗಣಿಗಾರಿಕೆ ಮಾಡಲು ವಿಕ್ಟಿಮ್‌ನ ಸಾಧನವನ್ನು ಉಪಯೋಗಿಸಿಕೊಳ್ಳಲು ಹ್ಯಾಕರ್‌ಗಳು ಎರಡು ಮಾರ್ಗಗಳನ್ನು ಅನುಸರಿಸುತ್ತಾರೆ:
1) ಇಮೇಲ್‌ನಲ್ಲಿ ಕ್ರಿಪ್ಟೋಮೈನಿಂಗ್ ಕೋಡ್ ಇರುವ ದುರುದ್ದೇಶಪೂರಿತ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಪ್ರೇರೇಪಿಸಿ ವಿಕ್ಟಿಮ್‌ನನ್ನು ಬಲೆಯಲ್ಲಿ ಕೆಡವುವುದು.
2) ಜಾವಾಸ್ಕ್ರಿಪ್ಟ್ ಕೋಡ್‌ನೊಂದಿಗೆ ವೆಬ್‌ಸೈಟ್ ಅಥವಾ ಆನ್‌ಲೈನ್ ಜಾಹೀರಾತನ್ನು ಸೋಂಕಿಸುವ ಮೂಲಕ ವಿಕ್ಟಿಮ್‌ನ ಬ್ರೌಸರ್‌ನಲ್ಲಿ ಒಮ್ಮೆ ಲೋಡ್ ಆಗುವಂತ ಸ್ವಯಂ-ಕಾರ್ಯನಿರ್ವಹಣೆಯ ತಂತ್ರಗಾರಿಕೆ.
ಇತರ ರೀತಿಯ ಮಾಲ್‌ವೇರ್‌ಗಳಂತೆ, ಕ್ರಿಪ್ಟೋಜಾಕಿಂಗ್ ಸ್ಕ್ರಿಪ್ಟ್‌ಗಳು ಕಂಪ್ಯೂಟರ್‌ಗಳು ಅಥವಾ ವಿಕ್ಟಿಮ್‌ಗಳ ಡೇಟಾವನ್ನು ಹಾನಿಗೊಳಿಸುವುದಿಲ್ಲ. ಆದಾಗ್ಯೂ, ಅವರು ಕಂಪ್ಯೂಟರ್ ಸಂಪನ್ಮೂಲಗಳನ್ನು ಕದಿಯುತ್ತಾರೆ. ವೈಯಕ್ತಿಕ ಬಳಕೆದಾರರಿಗೆ, ನಿಧಾನಗತಿಯ ಕಂಪ್ಯೂಟರ್ ಕಾರ್ಯಕ್ಷಮತೆ ಕಿರಿಕಿರಿಯನ್ನು ಉಂಟುಮಾಡಬಹುದು. ಆದರೆ ಬ್ಯುಸಿನೆಸ್ ಕಂಪ್ಯೂಟರ್‌ಗಳಿಗೆ ಕ್ರಿಪ್ಟೋಜಾಕಿಂಗ್ ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ ಕ್ರಿಪ್ಟೋಜಾಕ್ ಮಾಡಲಾದ ಕಂಪ್ಯೂಟರ್‌ಗಳಿದ್ದರೆ ಆ ಸಂಸ್ಥೆಗಳ ನೈಜ ಮತ್ತು ಕಾರ್ಯಾಚರಣೆಯ ವೆಚ್ಚ ಹೆಚ್ಚುತ್ತದೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಳಿವಿನ ಅಂಚಿನಲ್ಲಿ ಝಣ ಝಣ ಕಾಂಚಾಣ!
ಕಡಿಮೆ ಬಜೆಟ್ ಕಂಪ್ಯೂಟರ್‌ಗಳಲ್ಲಿ ಮೊನೆರೊವನ್ನು ಗಣಿಗಾರಿಕೆ ಮಾಡಬಹುದಾದ್ದರಿಂದ, ಕ್ರಿಪ್ಟೋಜಾಕಿಂಗ್ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳನ್ನು ಗುರಿಪಡಿಸುವ ವಿಧಾನಗಳನ್ನು ಬಳಸಿಕೊಂಡು ಆಂಡ್ರಾಯ್ಡ್ ಮೊಬೈಲ್‌ಗಳಿಗೂ ಸಹ ತಗಲ್ಹಾಕಿಕೊಳ್ಳಬಹುದು. ಮೊಬೈಲಿಗೆ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ನಲ್ಲಿ ಮರೆಮಾಡಲಾಗಿರುವ ಟ್ರೋಜನ್ ಮೂಲಕ ದಾಳಿಗಳು ಸಂಭವಿಸಬಹುದು ಅಥವಾ ಫೋನ್‌ಗಳನ್ನು ಸೋಂಕಿತ ಸೈಟ್‌ಗೆ ಮರುನಿರ್ದೇಶಿಸಬಹುದು. ಮೊಬೈಲ್ ಫೋನ್‌ಗಳು ತುಲನಾತ್ಮಕವಾಗಿ ಸೀಮಿತ ಸಂಸ್ಕರಣಾ ಶಕ್ತಿಯನ್ನು ಹೊಂದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ದಾಳಿಗಳು ಸಂಭವಿಸಿದಾಗ, ಅವು ಕ್ರಿಪ್ಟೋಜಾಕರ್‌ಗಳ ಪ್ರಯತ್ನಗಳನ್ನು ಸಮರ್ಥಿಸಲು ಸಾಕಷ್ಟು ಸಾಮೂಹಿಕ ಶಕ್ತಿಯನ್ನು ಒದಗಿಸುತ್ತವೆ.
2019ರಲ್ಲಿ, ಡೌನ್‌ಲೋಡ್ ಮಾಡಿದವರ ಸಂಪನ್ಮೂಲಗಳನ್ನು ಬಳಸಿಕೊಂಡು ಕ್ರಿಪ್ಟೋಕರೆನ್ಸಿಯನ್ನು ರಹಸ್ಯವಾಗಿ ಗಣಿಗಾರಿಕೆ ಮಾಡಿದ ಎಂಟು ಪ್ರತ್ಯೇಕ ಅಪ್ಲಿಕೇಶನ್‌ಗಳನ್ನು ಮೈಕ್ರೋಸಾಫ್ಟ್ ಸ್ಟೋರ್‌ನಿಂದ ಹೊರಹಾಕಲಾಯಿತು. ಅಪ್ಲಿಕೇಶನ್‌ಗಳು ಮೂರು ವಿಭಿನ್ನ ಡೆವಲಪರ್‌ಗಳಿಂದ ಬಂದಿವೆ ಎಂದು ಭಾವಿಸಲಾಗಿದೆ, ಆದರೂ ಒಂದೇ ವ್ಯಕ್ತಿ ಅಥವಾ ಸಂಸ್ಥೆಯು ಅವರೆಲ್ಲರ ಹಿಂದೆ ಇದೆ ಎಂದು ಶಂಕಿಸಲಾಗಿದೆ. ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಕೀವರ್ಡ್ ಹುಡುಕಾಟಗಳ ಮೂಲಕ ಮತ್ತು ಉಚಿತ ಅಪ್ಲಿಕೇಶನ್‌ಗಳ ಪಟ್ಟಿಗಳ ಮೂಲಕ ಸಂಭಾವ್ಯ ಟಾರ್ಗೆಟ್‌ಗಳು ಕ್ರಿಪ್ಟೋಜಾಕಿಂಗ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಡೌನ್‌ಲೋಡ್ ಮಾಡಿದಾಗ ಮತ್ತು ಅಪ್ಲಿಕೇಶನ್‌ಗಳಲ್ಲಿ ಒಂದನ್ನು ಪ್ರಾರಂಭಿಸಿದಾಗ, ಕ್ರಿಪ್ಟೋಜಾಕಿಂಗ್ ಜಾವಾಸ್ಕ್ರಿಪ್ಟ್ ಕೋಡ್ ಕಾರ್ಯಾರಂಭ ಮಾಡಿ ಗಣಿಗಾರಿಕೆ ಶುರುವಾಗುತ್ತದೆ. ನಿಮ್ಮ ಸಾಧನದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ.
ಆದ್ದರಿಂದ ನಿಮ್ಮ ಮೊಬೈಲಿನಲ್ಲಿ ಬಳಸದ ಆ್ಯಪ್‌ಗಳನ್ನು ತೆಗೆದು ಹಾಕಿ, ಮತ್ತು ಹೊಸ ಆ್ಯಪ್‌ಗಳನ್ನು ಸ್ಥಾಪಿಸುವಾಗ ಜಾಗರೂಕರಾಗಿರಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು