Site icon Vistara News

ಸೈಬರ್‌ ಸೇಫ್ಟಿ ಅಂಕಣ: ಕ್ಯೂಆರ್ ಕೋಡ್ ವಂಚನೆ ಬಗ್ಗೆ ಹುಷಾರು!

upi payment fraud

ಭಾರತ ಡಿಜಿಟಲ್ ಪೇಮೆಂಟಿನಲ್ಲಿ (Digital payment) ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ನಮ್ಮ ದಿನನಿತ್ಯದ ಬಹುತೇಕ ವ್ಯವಹಾರಗಳಿಗೆ ಮೊಬೈಲ್ ಬಳಕೆ ಸರ್ವೇಸಾಮಾನ್ಯವಾಗಿದೆ. ನಗರಗಳಲ್ಲಂತೂ ಜೇಬಿನಲ್ಲಿ ನಗದು ಹಣವಿಲ್ಲದಿದ್ದರೂ ಮೊಬೈಲ್ ಇದ್ದರೆ ಸಾಕು ಮತ್ತದರಲ್ಲಿ ಸಾಕಷ್ಟು ಡಾಟ (ಇಂಟರ್‌ನೆಟ್‌ ಪ್ಯಾಕ್) ಇರಬೇಕು. ಯಾವುದೇ ಖರೀದಿಯ ಪಾವತಿ ಇರಲಿ ಅಥವಾ ಯಾರಿಗಾದರೂ ಹಣ ಕೊಡುವುದಿರಲಿ, ಎಲ್ಲರೂ ಬಳಸುವುದು ಅವರವರ ಮೊಬೈಲ್ ಮತ್ತು ಏಕೀಕೃತ ಪಾವತಿಗಳ ಇಂಟರ್ಫೇಸ್ ಅಥವಾ ಯುಪಿಐ (UPI) ಬಳಸುವ (UPI payment) ಆಪ್. ಹಣ ಪಾವತಿಗೂ, ಸ್ವೀಕೃತಿಗೂ ನೀವು ಯಾವುದೇ ಆಪ್ ಬಳಸಿದರೂ ಅದನ್ನು ಕಾರ್ಯಗತ ಮಾಡುವುದು ಯುಪಿಐ. ಎಲ್ಲಾ ಕಡೆಗಳಲ್ಲಿಯೂ ಈ ವ್ಯವಹಾರವನ್ನು ಸುಗಮಗೊಳಿಸಿರುವುದು ಕ್ಯೂಆರ್ ಕೋಡ್ (QR code) ಎನ್ನುವ ತಂತ್ರಜ್ಞಾನ. ಹಣದ ವರ್ಗಾವಣೆಗೆ ಎಲ್ಲರೂ ಎಲ್ಲಡೆ ಬಳಸುತ್ತಿರುವ ಡಿಜಿಟಲ್ ಸೌಲಭ್ಯ. ಬೀಡಾ ಅಂಗಡಿ, ಎಳನೀರು ವ್ಯಾಪಾರಿ, ತರಕಾರಿ ಗಾಡಿಯವರು, ಹೂವಾಡಗಿತ್ತಿಯಿಂದ ದೊಡ್ದ ಮಾಲ್‌ನ ಶೋರೂಮಿನವರೂ ಹಣ ಪಡೆಯಲು ಬಳಸುತ್ತಿರುವುದು ಇದೇ ಕ್ಯೂಆರ್ ಕೋಡ್.

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (Unified payment interface) ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮೂಲಕ ನಿಯಂತ್ರಿಸಲ್ಪಡುವ ನೈಜ-ಸಮಯದಲ್ಲಿ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ಪೇಟಿಎಮ್ ಕಂಪೆನಿ 2015ರಲ್ಲಿ ಡಿಜಿಟಲ್ ಪೇಮೆಂಟ್ ಪಡೆಯಲು ಕ್ಯೂಆರ್ ಕೋಡನ್ನು ಬಳಕೆಗೆ ತಂದರು. ಇದು ವ್ಯಾಪಾರಿಗಳಿಗೆ, ವಿಶೇಷವಾಗಿ ಸಣ್ಣ ಅಂಗಡಿಗಳಿಗೆ ಇಂಟರ್ನೆಟ್ ಸಂಪರ್ಕ ಅಥವಾ POS ಯಂತ್ರದ ಅಗತ್ಯವಿಲ್ಲದೇ ಶೂನ್ಯ ಮುಂಗಡ ವೆಚ್ಚದಲ್ಲಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ನೆರವಾಯಿತು. ನಗದಿನಿಂದ ಡಿಜಿಟಲ್ ಆಗಿ ವಹಿವಾಟಿನ ಪರಿವರ್ತನೆಗೆ ಕಾರಣೀಕರ್ತವಾಗಿಯಿತು.

ಯಾವುದಾದರೂ ವಿಧಾನದ ಬಳಕೆ ಜನಪ್ರಿಯವಾಗಲು ಆ ಕಾರ್ಯವಿಧಾನದ ಸರಳತೆ, ಸೌಕರ್ಯ ಮತ್ತು ಸೌಲಭ್ಯವನ್ನು ಅವಲಂಬಿಸಿರುತ್ತದೆ. ಯುಪಿಐ ಬಳಸಿ ಡಿಜಿಟಲ್ ಪಾವತಿ ಮಾಡುವುದು ಈಗ ನಮ್ಮ ದೈನಂದಿನ ಭಾಗವಾಗಿದೆ. ಈ ಜನಪ್ರಿಯತೆ ಮತ್ತು ಅವಲಂಬನೆ ಸಹಜವಾಗಿ ಸೈಬರ್ ಕ್ರಿಮಿನಲ್‌ಗಳ ಗಮನವನ್ನು ತನ್ನತ್ತ ಸೆಳೆದಿದೆ.

ಕಳೆದ ಕೆಲವು ವರ್ಷಗಳಿಂದ, ಫಿಶಿಂಗ್ ಲಿಂಕ್‌ಗಳು, ಸಿಮ್ ಸ್ವಾಪ್‌ಗಳು, ವಿಶಿಂಗ್ ಕರೆಗಳು ಮುಂತಾದವುಗಳ ಮೂಲಕ ಸೈಬರ್ ವಂಚನೆಗಳು ಗಮನಾರ್ಹವಾಗಿ ಹೆಚ್ಚಿವೆ. ವಂಚಕರು ಜನರನ್ನು ಮೋಸಗೊಳಿಸಲು ಮತ್ತು ವಂಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ನಮ್ಮನ್ನು ಕಂಗೆಡಿಸಿರುವುದು ಹಳೆಯದಾದ ಕ್ಯೂಆರ್ ಕೋಡ್ ಪ್ರಕರಣಗಳು. ಬಹಳಷ್ಟು ಜನರು ಇದಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿರುವುದು ಬೆಂಗಳೂರಿನ ಸೈಬರ್ ಪೋಲೀಸರ ನಿದ್ದೆಗೆಡಿಸಿದೆ.

ಒಂದು ಘಟನೆಯಲ್ಲಿ, ಪ್ರತಿಷ್ಠಿತ ಸಂಸ್ಥೆಯೊಂದರ ಪ್ರಾಧ್ಯಾಪಕರು ಆಗಸ್ಟ್ 11ರಂದು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ವಾಷಿಂಗ್ ಮೆಷಿನ್ ಅನ್ನು ಮಾರಾಟ ಮಾಡಲು ಲಿಸ್ಟಿಂಗ್‌ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಖರೀದಿದಾರನು ತಕ್ಷಣವೇ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿ ಚೌಕಾಸಿ ಮಾಡದೇ ನಮೂದಿಸಿದ ಬೆಲೆಗೆ ಒಪ್ಪಿಕೊಂಡರು. ಖರೀದಿದಾರನು ಮಾರಾಟಗಾರನಿಗೆ ಹಣ ಸ್ವೀಕರಿಸಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಸೂಚಿಸಿದನು. ಪಾವತಿಯನ್ನು ತ್ವರಿತವಾಗಿ ಮಾರಾಟಗಾರನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದನು. ದುರದೃಷ್ಟವಶಾತ್, ಅವರ ಮಾತುಗಳಿಗೆ ಮರುಳಾಗಿ ಪ್ರಾಧ್ಯಾಪಕರು ಕೆಲವು ವಹಿವಾಟುಗಳನ್ನು ಮಾಡಿ 63,000 ರೂ.ಗಳನ್ನು ಕಳೆದುಕೊಂಡರು.

ಅದೇ ರೀತಿ, ಗೃಹಿಣಿಯೊಬ್ಬಳು ತನ್ನ ವೀಣೆಯ ಚಿತ್ರವನ್ನು ಅದೇ ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಪೋಸ್ಟ್ ಮಾಡಿದ ನಂತರ ಇದೇ ರೀತಿಯ ಸಂಕಷ್ಟವನ್ನು ಎದುರಿಸಿದಳು. ಖರೀದಿದಾರನಂತೆ ಪೋಸ್ ಮಾಡಿ ಕರೆ ಮಾಡಿದ ವ್ಯಕ್ತಿ ಸಂತ್ರಸ್ತೆಯ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ ಆಕೆಯ ಮೊಬೈಲ್ ಫೋನ್‌ಗೆ ಕ್ಯೂಆರ್ ಕೋಡ್ ಕಳುಹಿಸಿದ್ದಾನೆ. ಸ್ಕ್ಯಾನ್ ಆಗ್ತಿದ್ದಂತೆ ಕೆಲವೇ ಸೆಕೆಂಡುಗಳಲ್ಲಿ 20,000 ರೂ. ಕಳೆದುಕೊಂಡರು.

ಕ್ಯೂಆರ್ ಕೋಡ್-ಸಂಬಂಧಿತ ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯಿಂದ ನಗರದ ಪೊಲೀಸರು ಹೆಣಗಾಡುತ್ತಿದ್ದಾರೆ. ಪೊಲೀಸರ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ 2017ರಿಂದ ಮೇ 31, 2023 ರವರೆಗೆ ದಾಖಲಾದ 50,000ಕ್ಕೂ ಹೆಚ್ಚು ಸೈಬರ್ ಕ್ರೈಮ್ ಪ್ರಕರಣಗಳಲ್ಲಿ 41% (20,662 ಪ್ರಕರಣಗಳು) ಕ್ಯೂಆರ್ ಕೋಡ್ ಹಗರಣಗಳು, ಮೋಸಗೊಳಿಸುವ ಲಿಂಕ್‌ಗಳು ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿಯ ಅನಧಿಕೃತ ಬಳಕೆಗೆ ಸಂಬಂಧಿಸಿವೆ.

ಈ ವರ್ಷದ ಮೊದಲಾರ್ಧದಲ್ಲಿ 7,000 ಪ್ರಕರಣಗಳು ಮತ್ತು 950 ಕ್ಯೂಆರ್ ಕೋಡ್-ಸಂಬಂಧಿತ ಪ್ರಕರಣಗಳು ವರದಿಯಾಗಿದೆ. ಸೈಬರ್ ಅಪರಾಧಿಗಳು ನಮ್ಮ ದುರ್ಬಲತೆಗಳನ್ನು ಬಳಸಿಕೊಳ್ಳಲು ಹೆಚ್ಚು ಅತ್ಯಾಧುನಿಕ ವಿಧಾನಗಳನ್ನು ಬಳಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನಗರ ಪೊಲೀಸರು ಇದನ್ನು ಎದುರಿಸಲು ಕಾರ್ಯತಂತ್ರಗಳನ್ನು ಮರುಪರಿಶೀಲಿಸುತ್ತಿದ್ದಾರೆ. ಜಾಗೃತಿ ಪ್ರಯತ್ನಗಳ ಹೊರತಾಗಿಯೂ, ಡಿಜಿಟಲ್ ಲ್ಯಾಂಡ್‌ಸ್ಕೇಪ್‌ನಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯ ಎಂದು ಈ ಪ್ರಕರಣಗಳು ತಿಳಿಸುತ್ತಿವೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಆನ್‌ಲೈನ್ ಕಳ್ಳರಿದ್ದಾರೆ, ಜಾಗ್ರತೆ!

ಹಿಂದಿನ ಜಾಗೃತಿ ಅಭಿಯಾನಗಳ ಹೊರತಾಗಿಯೂ, ಇತ್ತೀಚಿನ ಪ್ರಕರಣಗಳ ಉಲ್ಬಣವು ಸೈಬರ್ ಅಪರಾಧಿಗಳ ಪ್ರಗತಿಯನ್ನು ತಡೆಯಲು ನಿರಂತರ ಜಾಗರೂಕತೆ ಮತ್ತು ಶಿಕ್ಷಣದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ನೆನಪಿಡಿ. ನೀವು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡುವುದು ಬೇರೆಯವರಿಗೆ ಹಣ ಪಾವತಿಸಲು ಮಾತ್ರ. ನಿಮಗೆ ಹಣ ಬರುವುದಿದ್ದರೆ ಸ್ಕ್ಯಾನಿಂಗ್ ಮಾಡುವ ಅಥವಾ ಓಟಿಪಿ ತಿಳಿಸುವ ಅವಶ್ಯಕತೆ ಇಲ್ಲ. ನೀವು ಜಾಗರೂಕರಾಗಿದ್ದರೆ ಸೈಬರ್ ಕ್ರಿಮಿನಲ್‌ಗಳ ಸಂಚಿನಿಂದ ಪಾರಾಗಬಹುದು. ಅಕಸ್ಮಾತ್ ನೀವು ಈಗಾಗಲೇ ವಂಚಿತರಾಗಿದ್ದರೆ, ಭಾರತದ ಸೈಬರ್ ಕ್ರೈಮ್ ಸಹಾಯವಾಣಿ 1930ಕ್ಕೆ ಕರೆಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ https://cybercrime.gov.in/ಗೆ ಹೋಗಿ ಅಲ್ಲಿನ ಸೂಚನೆಗಳನ್ನು ಅನುಸರಿಸಿ ನಿಮ್ಮ ದೂರು ದಾಖಲಿಸಿ. ನಿಮ್ಮ ವಂಚನೆಯ ಸನ್ನಿವೇಶವನ್ನು ಇತರರೊಂದಿಗೆ ಹಂಚಿಕೊಂಡು ಅವರನ್ನು ಜಾಗ್ರತರನ್ನಾಗಿ ಮಾಡಲು ಬಯಸುವುದಾದರೆ ನಿಮ್ಮ ಅನುಭವವನ್ನು ನನ್ನೊಂದಿಗೆ ಇಮೇಲ್ (winkrish@gmail.com) ಮೂಲಕ ತಿಳಿಸಿ. ನಿಮ್ಮ ಗುರುತನ್ನು ಅನಾವರಣಗೊಳಿಸದೆ ಆ ಸನ್ನಿವೇಶ ಮತ್ತು ಅದರಿಂದ ಕಲಿಯಬಹುದಾದ ಪಾಠವನ್ನು ಮುಂದಿನ ಲೇಖನಗಳಲ್ಲಿ ಉಲ್ಲೇಖಿಸುತ್ತೇನೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಲೋಕದ ಷರ್ಲಾಕ್ ಹೋಮ್ಸ್

Exit mobile version