Site icon Vistara News

ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದ ಅಂತರಂಗ; ಡೀಪ್ ವೆಬ್ ಮತ್ತು ಡಾರ್ಕ್ ವೆಬ್

dark web

ʻಡೀಪ್ ವೆಬ್ʼ (deep web) ಮತ್ತು ʻಡಾರ್ಕ್ ವೆಬ್ʼ (dark web) ಎಂಬ ಪದಗಳು ಇಂಡೆಕ್ಸ್ ಮಾಡದ ಅಥವಾ ಸಾಂಪ್ರದಾಯಿಕ ಸರ್ಚ್ ಇಂಜಿನ್‌ಗಳ ಮೂಲಕ ಸುಲಭವಾಗಿ ಪ್ರವೇಶಿಸಲಾಗದ ಅಂತರ್ಜಾಲದಲ್ಲಿರುವ (internet) ವಿಭಿನ್ನ ಆದರೆ ಸಂಬಂಧಿತ ಭಾಗಗಳನ್ನು ಉಲ್ಲೇಖಿಸುತ್ತವೆ.

ನಮ್ಮ ದಿನನಿತ್ಯದ ಅಂತರ್ಜಾಲದ ಅಲೆದಾಟ ಹೆಚ್ಚಾಗಿ ಸರ್ಫೇಸ್ ವೆಬ್‌ಗೆ ಸೀಮಿತವಾಗಿರುತ್ತದೆ. ಅಂದರೆ ನಿಮ್ಮ ಗೂಗಲ್ ಸರ್ಚ್, ಅಂತರ್ಜಾಲದಲ್ಲಿ ಪತ್ರಿಕೆಗಳು ಮತ್ತಿತರ ವಾರ್ತೆಗಳು, ನೀವೀಗ ಓದುತ್ತಿರುವ ಅಂಕಣ ಬರಹ ಎಲ್ಲಾ ನಿಮಗೆ ಸರ್ಫೇಸ್ ವೆಬ್‌ನಲ್ಲಿ ಸಿಗುತ್ತದೆ.

‘ಡೀಪ್ ವೆಬ್’ ಸರ್ಚ್ ಇಂಜಿನ್‌ಗಳಿಂದ ಸೂಚಿಕೆ (Index) ಮಾಡದ ಎಲ್ಲಾ ವೆಬ್ ವಿಷಯವನ್ನು ಸೂಚಿಸುತ್ತದೆ. ಇದು ಖಾಸಗಿ ಡೇಟಾಬೇಸ್‌ಗಳು, ಪಾಸ್‌ವರ್ಡ್-ರಕ್ಷಿತ ವೆಬ್‌ಸೈಟ್‌ಗಳು, ಚಂದಾದಾರಿಕೆ ಆಧಾರಿತ ಸೇವೆಗಳು ಮತ್ತು ಕ್ರಿಯಾತ್ಮಕವಾಗಿ ರಚಿಸಲಾದ ವೆಬ್ ಪುಟಗಳನ್ನು ಒಳಗೊಂಡಿದೆ. ಡೀಪ್ ವೆಬ್ ಸರ್ಫೇಸ್ ವೆಬ್‌ಗಿಂತ ಗಮನಾರ್ಹವಾಗಿ ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಪಾಸ್‌ವರ್ಡ್ ಮೂಲಕ ಪ್ರವೇಶಿಸಬಹುದಾದ ಇಂಟರ್ನೆಟ್‌ನ ಭಾಗವಾಗಿದೆ.

ನಿಮ್ಮ ಇಮೇಲ್ ಅಕೌಂಟ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ನಿಮ್ಮ ನೆಟ್ ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಗಳನ್ನು ಬಳಸಲು ನಿಮ್ಮ ಹತ್ತಿರ ಪಾಸ್‌ವರ್ಡ್ ಇರಬೇಕು. ಅದರ ಮೂಲಕ ನೀವು ಆ ಅಕೌಂಟಿನ ಒಳಗೆ ಹೋಗಬಹುದು. ನಿಮ್ಮ ಲಾಗಿನ್ ಪೇಜ್ ಸರ್ಫೇಸ್ ವೆಬ್‌ನಲ್ಲಿರುತ್ತದೆ. ನೀವು ಸರಿಯಾದ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿದರೆ ನಿಮ್ಮೆದುರು ತೆರೆದುಕೊಳ್ಳುವುದೇ ಡೀಪ್ ವೆಬ್. ಸರಳವಾದ ಗೂಗಲ್ ಹುಡುಕಾಟದೊಂದಿಗೆ ನೀವು ಪತ್ತೆ ಮಾಡದ ಡೇಟಾ ಡೀಪ್ ವೆಬ್‌ನಲ್ಲಿದೆ.

ನೀವು ಅಂತರ್ಜಾಲದಲ್ಲಿ ಇನ್ನೂ ಒಳಗೆ (ಕೆಳಗೆ) ಹೋಗಲು ಬಯಸಿದರೆ ನಿಮಗೆ ವಿಶೇಷ ಬ್ರೌಸರ್ ಬೇಕು. ಅಂತರ್ಜಾಲದ ಈರುಳ್ಳಿಯಂತಹ ಪದರಗಳನ್ನು ಸಿಪ್ಪೆ ಸುಲಿದಂತೆ ತೆಗೆಯಲು ಸಹಾಯ ಮಾಡುವ ಒಂದು ಜನಪ್ರಿಯ ಬ್ರೌಸರ್ ಈರುಳ್ಳಿ ರೂಟರ್ (The Onion Router), ಸಾಮಾನ್ಯವಾಗಿ ಟಾರ್ (Tor) ಎಂದು ಕರೆಯುತ್ತಾರೆ.

ಟಾರ್ ಬ್ರೌಸರ್‌ ನಿಮಗೆ ಡಾರ್ಕ್ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಅಗತ್ಯವಿರುವ ನಿರ್ದಿಷ್ಟ ಸಂಪರ್ಕಗಳನ್ನು ಹೊಂದಿಸುತ್ತದೆ. ಇದು ಎನ್‌ಕ್ರಿಪ್ಟ್ ಮಾಡಲಾದ ತಂತ್ರಜ್ಞಾನವನ್ನು ಬಳಸುತ್ತದೆ. ಆದ್ದರಿಂದ ಆನ್‌ಲೈನ್‌ನಲ್ಲಿ ಅನಾಮಧೇಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರಪಂಚದಾದ್ಯಂತ ಸರ್ವರ್‌ಗಳ ಮೂಲಕ ಸಂಪರ್ಕಗಳನ್ನು ರೂಟಿಂಗ್ ಮಾಡುವುದರಿಂದ ಇದನ್ನು ಟ್ರ್ಯಾಕ್ ಮಾಡಲು ಹೆಚ್ಚು ಕಷ್ಟವಾಗುತ್ತದೆ. ನೀವು Tor ಬಳಸುವುದಾದರೆ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಮೂಲಕ ಬಳಸುವುದು ಸುರಕ್ಷಿತ. ಡಾರ್ಕ್ ವೆಬ್‌ನ ಕುಖ್ಯಾತವಾಗಿರುವ ಭೂಗತ ವೆಬ್‌ಸೈಟ್‌ಗಳನ್ನು ಟಾರ್ ಮೂಲಕ ನೀವು ಪ್ರವೇಶಿಸಬಹುದು. .com ಅಥವಾ .orgನಲ್ಲಿ ಕೊನೆಗೊಳ್ಳುವ ಡೊಮೇನ್‌ಗಳನ್ನು ನೋಡುವ ಬದಲು, ಈ ಗುಪ್ತ ಸೈಟ್‌ಗಳು .onionನಲ್ಲಿ ಕೊನೆಗೊಳ್ಳುತ್ತವೆ.

ಡಾರ್ಕ್ ವೆಬ್ಬಿನ ಸೈಟ್‌ಗಳಲ್ಲಿ ಅತ್ಯಂತ ಕುಖ್ಯಾತವಾದದ್ದು ಈಗ ಮುಚ್ಚಲ್ಪಟ್ಟಿರುವ ಸಿಲ್ಕ್ ರೋಡ್. ಇದು ಬಳಕೆದಾರರು ಡ್ರಗ್ಸ್, ಗನ್‌ಗಳು ಮತ್ತು ಎಲ್ಲಾ ರೀತಿಯ ಅಕ್ರಮ ವಸ್ತುಗಳನ್ನು ಖರೀದಿಸಬಹುದಾದ ಆನ್‌ಲೈನ್ ಮಾರುಕಟ್ಟೆಯಾಗಿತ್ತು. FBI 2013ರಲ್ಲಿ ಸಿಲ್ಕ್ ರೋಡ್ ಅನ್ನು ನಿರ್ವಹಿಸುತ್ತಿದ್ದ ರಾಸ್ ಉಲ್ಬ್ರಿಚ್ಟ್ (Ross Ulbricht) ನನ್ನು ಬಂಧಿಸಿ ಸೈಟನ್ನು ನಿಷ್ಕ್ರಿಯಗೊಳಿಸಿದರು. ಆದರೆ ಬ್ಲ್ಯಾಕ್ ಮಾರ್ಕೆಟ್ ರಿಲೋಡೆಡ್‌ನಂತಹ ಸೈಟ್‌ಗಳು ಈಗಲೂ ಕಾರ್ಯನಿರ್ವಹಿಸುತ್ತಿದೆ.

ಸೈಬರ್ ಅಪರಾಧಿಗಳು ಮತ್ತು ಇತರ ದುರುದ್ದೇಶಪೂರಿತ ಕ್ರಿಮಿನಲ್‌ಗಳು ವಿವಿಧ ಕಾನೂನುಬಾಹಿರ ವಿಧಾನಗಳಲ್ಲಿ ಡಾರ್ಕ್ ವೆಬ್‌ನ ಮೇಲೆ ಅವಲಂಬಿತರಾಗಿದ್ದಾರೆ. ಡಾರ್ಕ್ ವೆಬ್‌ ಕಾನೂನುಬಾಹಿರ ಚಟುವಟಿಕೆಯ ಹಾಟ್‌ಸ್ಪಾಟ್‌. ಇಲ್ಲಿ ವಿವಿಧ ರೀತಿಯ ಮಾರುಕಟ್ಟೆಗಳು ಮತ್ತು ಫೋರಂಗಳಿವೆ. ಕ್ರಿಮಿನಲ್‌ಗಳು ಕಾನೂನುಬಾಹಿರ ಉತ್ಪನ್ನಗಳು ಮತ್ತು ಸೇವೆಗಳ ವಹಿವಾಟು ಮಾಡುತ್ತಾರೆ.

ವೈಯಕ್ತಿಕ ಡೇಟಾ ಮತ್ತು ಹ್ಯಾಕ್ ಆದ ಖಾತೆಗಳನ್ನು ಮಾರಾಟ ಮಾಡುವುದರ ಜೊತೆಗೆ, ಸೈಬರ್ ಕ್ರಿಮಿನಲ್‌ಗಳು ವ್ಯಾಪಾರ ಮಾಡುವ ಕೆಲವು ಸರ್ವೀಸಸ್‌ಗಳನ್ನು ನೋಡಿ.

ಆಫ್-ದಿ-ಶೆಲ್ಫ್ ಸಾಫ್ಟ್‌ವೇರ್ ಶೋಷಣೆ ಕಿಟ್‌ಗಳು: ಸಿಸ್ಟಂಗಳಲ್ಲಿನ ದೋಷಗಳ ಮೇಲೆ ದಾಳಿ ಮಾಡಲು ಸೈಬರ್ ಅಪರಾಧಿಗಳು ಬಳಸುವ ಟೂಲ್‌ಕಿಟ್‌ಗಳು. ನಂತರ ಅವರು ಮಾಲ್‌ವೇರ್ ಅನ್ನು ವಿತರಿಸಬಹುದು.

ದುರುದ್ದೇಶಪೂರಿತ ಸಾಫ್ಟ್‌ವೇರ್ (ಮಾಲ್‌ವೇರ್): ಬಳಸಲು ಸಿದ್ಧವಾದ Ransomware, ಮಾಹಿತಿ ಕದಿಯುವವರು, ಕೀಲಾಗ್ಗರ್‌ಗಳು (ಸಾಧನದಲ್ಲಿ ಒತ್ತಿದ ಪ್ರತಿಯೊಂದು ಕೀಲಿಯನ್ನು ರೆಕಾರ್ಡ್ ಮಾಡಲು), ಸ್ಪೈವೇರ್, ಆಡ್‌ವೇರ್, ರೂಟ್‌ಕಿಟ್‌ಗಳು, ಟ್ರೋಜನ್‌ಗಳು ಮತ್ತು ವರ್ಮ್‌ಗಳು (ಸ್ವಯಂ ಪುನರಾವರ್ತನೆಯ ಸಾಮರ್ಥ್ಯಗಳೊಂದಿಗೆ).

ಮಾಲ್ವೇರ್-ಸೇವೆಯಂತೆ (Malware-as-a-service): ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳನ್ನು ಸೈಬರ್ ಕ್ರಿಮಿನಲ್‌ಗಳಿಗೆ ಬಾಡಿಗೆಗೆ ಕೊಡುವ ಚಂದಾದಾರಿಕೆ-ಆಧಾರಿತ ಮಾದರಿ. ದಾಳಿಗೆ ಬೇಕಾದ ದುರುದ್ದೇಶಪೂರಿತ ಸಾಫ್ಟ್‌ವೇರ್, ವಿತರಣಾ ನೆಟ್‌ವರ್ಕ್, ವಿವಿಧ ಶ್ರೇಣಿಗಳ ಟಾರ್ಗೆಟ್ ಮತ್ತು ಬೇಕಾದ ತಾಂತ್ರಿಕ ಬೆಂಬಲ ಹಾಗೂ ಯೋಜನೆಯನ್ನು ನಿರ್ವಹಿಸಲು ವೈಯಕ್ತಿಕ ಡ್ಯಾಶ್‌ಬೋರ್ಡ್.

ಸಾಫ್ಟ್‌ವೇರ್‌ಗಳಲ್ಲಿನ ದೋಷಗಳು: ಸಾಫ್ಟ್‌ವೇರ್ ತಯಾರಕರಿಗೆ ತಿಳಿದಿಲ್ಲದಿರುವ ದೋಷಗಳನ್ನು ಸೈಬರ್ ಅಪರಾಧಿಗಳು ಸಂಸ್ಥೆಗಳ ನೆಟ್‌ವರ್ಕಿನೊಳಗೆ ಅಜ್ಞಾತವಾಗಿ ಒಳನುಸುಳಲು ಬಳಸಬಹುದು.

ರಾಜಿಯಾದ ಸಾಧನಗಳ ನೆಟ್‌ವರ್ಕ್‌ಗಳಿಗೆ ಪ್ರವೇಶ (ಬೋಟ್‌ನೆಟ್‌ಗಳು): ಹ್ಯಾಕರ್‌ಗಳು ತಮ್ಮ ದಾಳಿಯನ್ನು ನಡೆಸಲು ಬೇಕಾಗುವ ಕಂಪ್ಯೂಟಿಂಗ್ ಸಂಪನ್ಮೂಲಗಳು.

ಸೇವೆಯ ವಿತರಣೆ ನಿರಾಕರಣೆ (DDoS): ನೆಟ್‌ವರ್ಕ್ ಟ್ರಾಫಿಕ್‌ ಪ್ರವಾಹದಂತೆ ಜಾಸ್ತಿ ಮಾಡಿ ಕಂಪೆನಿಗಳ ಸಿಸ್ಟಮ್‌ಗಳನ್ನು ಪೂರೈಸುವ ಸೇವೆಗಳೊಂದಿಗೆ ಆಫ್‌ಲೈನ್‌ಗೆ ಕರೆದೊಯ್ಯುವಂತಹ ಬೋಟ್‌ನೆಟ್‌ಗಳನ್ನು ಬಳಸುವುದು.

ಸೈಬರ್ ಕ್ರಿಮಿನಲ್ ತರಬೇತಿ: ಟ್ಯುಟೋರಿಯಲ್‌ಗಳು, ಗೈಡ್‌ಗಳು ಮತ್ತು ವಿವಿಧ ರೀತಿಗಳಲ್ಲಿ ಕ್ರಿಮಿನಲ್ ಕೌಶಲ್ಯವನ್ನು ಕಲಿಸುವ ವಿವಿಧ ರೀತಿಯ ವಿಷಯಗಳು.

ಮನಿ ಲಾಂಡರಿಂಗ್ (money muling): ಸ್ಕ್ಯಾಮರ್‌ಗಳು ಕದಿಯುವ, ಸುಲಿಗೆ ಮಾಡುವ ಅಥವಾ ತಮ್ಮ ಬಲಿಪಶುಗಳಿಂದ ತೆಗೆದುಕೊಳ್ಳುವ ಹಣವನ್ನು ವಿಲೇವಾರಿ ಮಾಡಲು ಸಕ್ರಿಯಗೊಳಿಸುತ್ತದೆ – ಮತ್ತು ಅದನ್ನು ಶುದ್ಧ, ಪತ್ತೆ ಹಚ್ಚಲಾಗದ ನಗದಾಗಿ ಪರಿವರ್ತಿಸುವ ಸೇವೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಬೆದರಿಕೆಗೆ ಧೈರ್ಯವೇ ಔಷಧ

ನಿಮ್ಮ ವೈಯಕ್ತಿಕ ವಿವರಗಳು ಅಂತರ್ಜಾಲದಲ್ಲಿ ಇನ್ನೊಬ್ಬರಿಗೆ ಸಿಗಲು ಮೂರು ಮಾರ್ಗಗಳಿವೆ. ಅದು ನಾವು ಸದಾ ಸಂಚರಿಸುವ ವರ್ಲ್ಡ್ ವೈಡ್ ವೆಬ್ – WWW (ಸರ್ಫೇಸ್ ವೆಬ್), ಡೀಪ್ ವೆಬ್‌ನ ಭಾಗ ಅಥವಾ ಡಾರ್ಕ್ ವೆಬ್‌ನಲ್ಲಿ ಇರಬಹುದು.

  1. ನಿಮ್ಮ ನಿಷ್ಕ್ರಿಯ ಡಿಜಿಟಲ್ ಹೆಜ್ಜೆಗುರುತಿನ (ಮೆಟಾಡೇಟಾ) ಮೂಲಕ. ನೀವು ಇಂಟರ್ನೆಟ್ ಬಳಸುವಾಗ ನೀವು ಅಜಾಗರೂಕತೆಯಿಂದ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಡೇಟಾ. ಇದು ನಿಮ್ಮ IP ವಿಳಾಸವನ್ನು ಒಳಗೊಂಡಿರುತ್ತದೆ (ಇದು ನಿಮ್ಮ ಭೌತಿಕ ಸ್ಥಳವನ್ನು ಸಹ ಬಹಿರಂಗಪಡಿಸುತ್ತದೆ), ನೀವು ಯಾವ ರೀತಿಯ ಸಾಧನವನ್ನು ಹೊಂದಿರುವಿರಿ, ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು (ಬ್ರೌಸಿಂಗ್ ಇತಿಹಾಸ), ನೀವು ಬಳಸುತ್ತಿರುವ ವೆಬ್ ಬ್ರೌಸರ್ ಮತ್ತು ಸರ್ಚ್ ಎಂಜಿನ್‌ಗಳ ವರ್ಶನ್ ಮತ್ತಿತರ ವಿವರಗಳು.
  2. ನಿಮ್ಮ ಸಕ್ರಿಯ ಡಿಜಿಟಲ್ ಹೆಜ್ಜೆಗುರುತಿನ ಮೂಲಕ. ನೀವು ಆನ್‌ಲೈನ್‌ನಲ್ಲಿ ಸ್ವಇಚ್ಛೆಯಿಂದ ಪೋಸ್ಟ್ ಮಾಡುವ ಮಾಹಿತಿಯನ್ನು ಇದು ಪ್ರತಿನಿಧಿಸುತ್ತದೆ – ಚಿತ್ರಗಳಿಂದ ಪೋಸ್ಟ್‌ಗಳವರೆಗೆ, ವಿಡಿಯೊಗಳು, ಲೇಖನಗಳು ಮತ್ತು ಇತರ ವಿವರಗಳು, ನೀವು ಆನ್‌ಲೈನ್‌ನಲ್ಲಿ ಖರೀದಿಸಿದಾಗ ಕೊಡುವ ಮನೆ ವಿಳಾಸ, ಫೋನ್ ಸಂಖ್ಯೆಗಳು, ಇತ್ಯಾದಿ.
  3. ಇತರ ಘಟಕಗಳು ನಿಮ್ಮ ಬಗ್ಗೆ ಬಹಿರಂಗಪಡಿಸುವ ಮಾಹಿತಿಯ ಮೂಲಕ. ಇದು ಸರ್ಕಾರಿ ಸಂಸ್ಥೆಗಳು, ಕ್ರೆಡಿಟ್ ವರದಿಗಳನ್ನು ನೀಡುವ ಕಂಪನಿಗಳು ಮತ್ತು ನಿಮ್ಮ ಬಗ್ಗೆ ಡೇಟಾವನ್ನು ಒಟ್ಟು ಮಾಡುವ ಡೇಟಾ ಬ್ರೋಕರ್‌ಗಳನ್ನು ಒಳಗೊಂಡಿರುತ್ತದೆ. ಇದರಿಂದ ಅವರು ನಿಮ್ಮನ್ನು ಜಾಹೀರಾತುಗಳೊಂದಿಗೆ ಗುರಿಯಾಗಿಸಲು ಬಯಸುವ ಕಂಪನಿಗಳಿಗೆ ಏಕೀಕೃತ ಪ್ರೊಫೈಲ್ ರೀತಿಯಲ್ಲಿ ಮಾರಾಟ ಮಾಡುತ್ತಾರೆ.

ಅಂತರ್ಜಾಲದ ಅಂತರಂಗದಲ್ಲಿ ಅಡಗಿರುವ ಅಪಾಯಗಳನ್ನು ಅರಿತುಕೊಂಡಿರಾ? ಇಲ್ಲಿ “ಅರಿವು ನಿಮ್ಮ ಆಪದ್ರಕ್ಷಕ”.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಫೇಸ್‌ಬುಕ್ ‘ಫ್ರೆಂಡ್ ರಿಕ್ವೆಸ್ಟ್’ ಎಂಬ ಮೋಸದ ಜಾಲ

Exit mobile version