ನಿಮ್ಮ ಬ್ಯಾಂಕ್ ಖಾತೆ ಖಾಲಿಯಾದಂತೆ ಕಲ್ಪಿಸಿಕೊಳ್ಳಿ. ನೀವು ಕಷ್ಟಪಟ್ಟು ಗಳಿಸಿದ ಹಣವು ಗಾಳಿಯಲ್ಲಿ ಕಣ್ಮರೆಯಾದರೆ ಏನು ಮಾಡ್ತೀರ? ಹೊಸ ವರ್ಷದ ಆರಂಭದಲ್ಲಿ ಯಾಕೆ ಇಂತಹ ದುಃಸ್ವಪ್ನದ ಪ್ರಸ್ತಾಪನೆ ಮಾಡ್ತಿದ್ದೇನೆ ಅಂತ ಗಾಬರಿಯಾಗತ್ತಿದ್ದೀರಾ? ಇದು ವೈಜ್ಞಾನಿಕ ಕಾಲ್ಪನಿಕ ಕಥೆಯೂ ಅಲ್ಲ, ದುಃಸ್ವಪ್ನವೂ ಅಲ್ಲ. ಪ್ರಪಂಚದಾದ್ಯಂತ ಹೆಚ್ಚಾಗಿರುವ “ತಕ್ಷಣ ಪಾವತಿ” ಅಥವಾ “ತ್ವರಿತ ಪಾವತಿ” ಹಗರಣಗಳ ಆಘಾತಕಾರಿ ಏರಿಕೆ ದುಸ್ವಪ್ನವು ವಾಸ್ತವವಾಗುವ ಸಾಧ್ಯತೆ ಹೆಚ್ಚಿಸಿದೆ.
ನಾನು ಇತ್ತೀಚೆಗೆ ಓದುತ್ತಿದ್ದ Instant Payments Fraud Mitigation ಎಂಬ ರಿಪೋರ್ಟಿನಲ್ಲಿ ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿ ಕಳೆದ 15 ವರ್ಷಗಳ ಅನುಭವ ಮತ್ತು ಕಲಿತ ಪಾಠಗಳ ಬಗ್ಗೆ ವಿವರಿಸಿದ್ದಾರೆ. ಇದರ ಮುಖಾಂತರ ಉತ್ತರ ಅಮೇರಿಕದಲ್ಲಿ ತ್ವರಿತ ಪಾವತಿಯನ್ನು ಬಳಸಿ ಆಗುತ್ತಿರುವ ವಂಚನೆಗಳನ್ನು ತಡೆಯಲು ಮತ್ತು ಕಂಡುಹಿಡಿಯಲು ಬೇಕಾದ ತಂತ್ರಗಾರಿಕೆಯನ್ನು ಸಿದ್ಧಪಡಿಸಬಹುದು ಎಂದು ರಿಪೋರ್ಟಿನ ಲೇಖಕರು ಆಶಿಸುತ್ತಾರೆ. ಆಶ್ಚರ್ಯಕರ ವಿಷಯವೆಂದರೆ ರಿಪೋರ್ಟಿನಲ್ಲಿ ಎಲ್ಲಿಯೂ ಭಾರತದ ಪ್ರಸ್ತಾಪವೇ ಆಗಿಲ್ಲ. ಆನ್ಲೈನ್ ಹಣಕಾಸು ವ್ಯವಹಾರದಲ್ಲಿ ವಿಶ್ವದಲ್ಲೇ ಮೊದಲನೆಯ ಸ್ಥಾನದಲ್ಲಿರುವುದು ನಮ್ಮ ದೇಶ. ಭಾರತದ ಡಿಜಿಟೈಸೇಷನ್ ಯೂಸ್‌ಕೇಸ್ ಮತ್ತು ಸೈಬರ್ ವಂಚನೆ ಪ್ರಕರಣಗಳಿಂದ ಅಮೇರಿಕದವರು ಕಲಿಯುವುದೇನಿಲ್ಲ ಎಂದು ಭಾವಿಸಿರಬಹುದು. ನಾವು ಹಾಗಲ್ಲ, ಕಲಿಯುವಂತಹ ಅವಕಾಶ, ತಿಳಿಯುವಂತ ವಿಷಯ ಎಲ್ಲಿಂದ ಬಂದರೂ ತಗೊಳ್ತೇವೆ ಅಲ್ವಾ? ಹಾಗಾಗಿ ಅವರ ರಿಪೋರ್ಟಿನಲ್ಲಿ ಏನಿತ್ತು ಎಂಬುದನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನ ಮಾಡ್ತೇನೆ.
ವಂಚಕರು ಎರಡು ವಿಧದ ಸಂಚು ಮಾಡುತ್ತರೆ ಎಂದು ವಿಂಗಡಿಸಿದ್ದಾರೆ.
ಡಿಸೆಪ್ಷನ್ ಗೇಮ್: ನಿಮ್ಮ ಬ್ಯಾಂಕಿನನಿಂದ ಎಂದು ಯಾರೋ ಹೇಳಿಕೊಂಡು ಕರೆ ಮಾಡ್ತಾರೆ. ಖಾತೆಯಲ್ಲಿ ಹಣ ಕಡಿಮೆಯಾಗಿದೆ, ಅಥವಾ ನಿಮ್ಮ KYC ನವೀಕರಿಸಬೇಕು ಅಥವಾ ನಿಮ್ಮ ಆಸ್ಥಿ ತೆರಿಗೆ ಕಟ್ಟಬೇಕು ಎಂದು ಹೇಳುತ್ತಾರೆ. ವಂಚನೆಯನ್ನು ತಡೆಗಟ್ಟಲು “ಸುರಕ್ಷಿತವಾಗಿ” ಹಣವನ್ನು ವರ್ಗಾಯಿಸಲು ಅವರು ನಿಮಗೆ ಲಿಂಕ್ ಕೂಡ ಕಳಿಸಬಹುದು. ದುರದೃಷ್ಟವಶಾತ್, ನೀವು ಅಧಿಕೃತ ಪುಷ್ ಪಾವತಿ (APP) ವಂಚನೆಗೆ ಬಲಿಯಾಗಿರುತ್ತೀರಿ.
ಮೋಸದ ಖಾತೆಗಳಿಗೆ ಸ್ವಇಚ್ಛೆಯಿಂದ ಹಣವನ್ನು ಕಳುಹಿಸುವಂತೆ ಸೈಬರ್ ವಂಚಕರು ನಿಮ್ಮೊಂದಿಗೆ ಕುಶಲತೆಯಿಂದ ಕಾರ್ಯನಿರ್ವಹಿಸುತ್ತಾರೆ. ಅವರು ಸಾಮಾನ್ಯವಾಗಿ ಸೋಶಿಯಲ್ ಇಂಜಿನಿಯರಿಂಗ್ ತಂತ್ರಗಳಾದ ಸೋಗು ಹಾಕುವುದು, ಪ್ರಣಯ ಹಗರಣಗಳು, ಸೆಕ್ಸ್‌ಟಾರ್ಷನ್ ಅಥವಾ ಸಹಾಯಕ್ಕಾಗಿ ತುರ್ತು ಮನವಿಗಳನ್ನು ಬಳಸುತ್ತಾರೆ.
ಸ್ನೀಕ್ ಅಟಾಕ್: ನಿಮ್ಮ ಖಾಲಿ ಬ್ಯಾಂಕ್ ಖಾತೆ ಖಾಲಿಯಾದ ದುಸ್ವಪ್ನದಿಂದ ನೀವು ಎಚ್ಚರಗೊಳ್ಳುತ್ತೀರಿ ಎಂದು ಕಲ್ಪಿಸಿಕೊಳ್ಳಿ. ಆನ್‌ಲೈನ್ ಖರೀದಿಗಳನ್ನು ಮಾಡಲು ಅಥವಾ ನಗದು ಹಣವನ್ನು ಹಿಂಪಡೆಯಲು ನಿಮ್ಮ ಕದ್ದ ಕಾರ್ಡ್ ಮಾಹಿತಿಯನ್ನೋ, ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನೋ ಬಳಸಿ ನಿಮ್ಮ ಖಾತೆಯನ್ನು ಖಾಲಿ ಮಾಡಿದ್ದಾರೆ. ಇದು ಅನಧಿಕೃತ ಪಾವತಿ (UP) ವಂಚನೆಯಾಗಿದೆ.
ವಂಚಕರು ನಿಮ್ಮ ಖಾತೆಯ ವಿವರಗಳಿಗೆ ಅನಧಿಕೃತ ಪ್ರವೇಶವನ್ನು ಪಡೆಯುತ್ತಾರೆ ಅಥವಾ ದೃಢೀಕರಣ ಕ್ರಮಗಳನ್ನು ಬೈಪಾಸ್ ಮಾಡುತ್ತಾರೆ. ಅಂದರೆ ನೀವು OTP ಕೊಡದೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗುತ್ತದೆ. ಅವರು ನಿಮ್ಮಿಂದ ಕದ್ದ ರುಜುವಾತುಗಳು, ಹಂಚಿಕೊಂಡ KYC ಮಾಹಿತಿ, SIM ಕಾರ್ಡ್ ಬದಲಾವಣೆ ಅಥವಾ ಮಾಲ್ವೇರ್ ಬಳಕೆಯ ಮೂಲಕ ನಿಮ್ಮ ಖಾತೆಯನ್ನು ತಲುಪಬಹುದು. ಫ್ರಾಡ್ ಮಿಟಿಗೇಶನ್ ರಿಪೋರ್ಟಿನಲ್ಲಿ ನಿಯಂತ್ರಕರು, ಮೂಲಸೌಕರ್ಯ ಪೂರೈಕೆದಾರರು ಮತ್ತು ಪರಿಸರ ವ್ಯವಸ್ಥೆಗೆ 11 ಪ್ರಮುಖ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಹಾಗೂ ತ್ವರಿತ ಪಾವತಿಗಳ ಯುಗದಲ್ಲಿ ಕಷ್ಟಪಟ್ಟು ಗಳಿಸಿದ ನಿಮ್ಮ ಹಣವನ್ನು ಸುರಕ್ಷಿತಗೊಳಿಸಲು ಕೋರಲಾಗಿದೆ.
* ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಲು ಮತ್ತು ನೆಟ್‌ವರ್ಕ್‌ನಾದ್ಯಂತ ಗುಪ್ತ ಮಾಹಿತಿ ವಿನಿಮಯ ಮಾಡಿಕೊಂಡು ಜಾಗರೂಕತೆಯಿಂದ ಇರಲು AI ಬಳಕೆ.
* ವಹಿವಾಟಿನ ಸಮಯದಲ್ಲಿ ಹೆಚ್ಚುವರಿ ಭದ್ರತೆಗಾಗಿ ಬಯೋಮೆಟ್ರಿಕ್ ದೃಢೀಕರಣವನ್ನು ಅಳವಡಿಸಿ.
* ಅಸಾಮಾನ್ಯ ಪಾವತಿ ಮಾದರಿಗಳನ್ನು ಗ್ರಾಹಕರ ಗಮನಕ್ಕೆ ಅಲರ್ಟ್ ಮೂಲಕ ಕಳಿಸಿ ಕಳ್ಳರಿಗಿಂತ ಒಂದು ಹೆಜ್ಜೆ ಮುಂದೆ ಇರಿ.
* ಪಾವತಿದಾರರ ಹೆಸರನ್ನು ಎರಡು ಬಾರಿ ಪರಿಶೀಲಿಸಿ, ನಿಮ್ಮ ಹಣವು ಉದ್ದೇಶಿತ ಸ್ವೀಕರಿಸುವವರನ್ನೇ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಿ.
* ಸುಧಾರಿತ ಡಿಜಿಟಲ್ ರುಜುವಾತುಗಳೊಂದಿಗೆ ನಿಮ್ಮ ಗುರುತನ್ನು ರಕ್ಷಿಸಿಕೊಳ್ಳಿ ಮತ್ತು ಪರಿಶೀಲಿಸಿದ ಡಿಜಿಟಲ್ ಐಡಿ ಬಳಸಿ.
* ವಹಿವಾಟಿನ ಮಿತಿಗಳನ್ನು ಬಳಸಿ ಗ್ರಾಹಕರು ಕಾರ್ಡ್ ಮತ್ತು ಆನ್ಲೈನ್ ಪಾವತಿಗಳ ಮೇಲೆ ಹಿಡಿತ ಇಟ್ಟುಕೊಳ್ಳುವಂತೆ ಜಾಗ್ರತೆಗೊಳಿಸಿ.
* ಬಲವಾದ ಪಾಸ್‌ವರ್ಡ್‌ಗಳು ಮತ್ತು ಬಹು ಅಂಶದ ದೃಢೀಕರಣವನ್ನು (multi-factor authentication) ಬಳಸವುದನ್ನು ಕಡ್ಡಾಯ ಮಾಡಿ.
* ಹಗರಣಗಳ ಸಂದರ್ಭದಲ್ಲಿ ತ್ವರಿತ ಮರುಪಾವತಿಯಾಗುವಂತೆ ಕ್ರಮ ಕೈಗೊಳ್ಳಿ.
* ಸೈಬರ್ ವಂಚನೆಗಳಲ್ಲಿ ಇತ್ತೀಚಿಗೆ ಬಳಕೆಯಾಗುತ್ತಿರುವ ತಂತ್ರಗಳ ಕುರಿತು ಅಪ್‌ಡೇಟ್ ಆಗಿರಿ.
* ತಿಳಿದಿರುವ ವಂಚಕರ ಬಗ್ಗೆ ಮಾಹಿತಿಯನ್ನು ನಿಯಂತ್ರಕರು ಮತ್ತು ಸೇವೆ ಪೂರೈಕೆದಾರರು ಹಂಚಿಕೊಳ್ಳಿ.
* ವಂಚನೆಯನ್ನು ಎದುರಿಸಲು ಬ್ಯಾಂಕುಗಳು, ಕಾನೂನು ಜಾರಿ ನಡುವೆ ಸಹಯೋಗವನ್ನು ಪ್ರೋತ್ಸಾಹಿಸಿ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಸೈಬರ್ ಸುರಕ್ಷತೆಗೆ ಆದ್ಯತೆ, ನಮ್ಮೆಲ್ಲರ ಬದ್ಧತೆ
ಭಾರತದಲ್ಲಿನ ನಿಯಂತ್ರಕರು ಮತ್ತು ಸೇವೆ ಪೂರೈಕೆದಾರರು ಇಲ್ಲಿ ತಿಳಿಸಿರುವ ಬಹಳಷ್ಟು ಕ್ರಮಗಳನ್ನು ತಮ್ಮ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಸುರಕ್ಷತಾ ಕ್ರಮಗಳು ನಿಮ್ಮ ಬ್ಯಾಂಕಿನಲ್ಲಿಯೂ ಅಳವಡಿಸಲ್ಪಟ್ಟಿದೆಯಾ ವಿಚಾರಿಸಿ. ನಿಮ್ಮಲ್ಲಿ ಯಾರಾದರೂ “ಟ್ರಿಕಿ ವರ್ಗಾವಣೆಗಳು” ಅಥವಾ AI ಧ್ವನಿ ಹಗರಣಕ್ಕೆ ಬಲಿಯಾಗಿದ್ದೀರಾ? ನಿಮ್ಮ ಹಣವನ್ನು ರಕ್ಷಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅನುಭವವನ್ನು ನನ್ನೊಂದಿಗೆ (winkrish@gmail.com) ಹಂಚಿಕೊಳ್ಳಿ. ಈ ವರ್ಷ (2024) ಹೆಚ್ಚು ಜಾಣರಾಗಿ ಜಾಗರೂಕತೆಯಿಂದ ಇರುವ ಸಂಕಲ್ಪ ಮಾಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ