ಆಧುನಿಕ ಕರ್ನಾಟಕದ ಕನಸು ಕಟ್ಟಿದ ಮುಖ್ಯಮಂತ್ರಿಗೆ ಇಂದು ಹುಟ್ಟು ಹಬ್ಬ
ಕರ್ನಾಟಕ ರಾಜ್ಯದ ಶ್ರೇಷ್ಠ ಮುಖ್ಯಮಂತ್ರಿಗಳ ಪಟ್ಟಿಯನ್ನು ಮಾಡಿದಾಗ ಅತ್ಯಂತ ಎತ್ತರದಲ್ಲಿ ನಿಲ್ಲುವ ಒಂದು ಹೆಸರು ದೇವರಾಜ್ ಅರಸು ಅವರದ್ದು. ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಅರಸು ಅವರು ಕೈಗೊಂಡ ಅಷ್ಟೂ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿ ಆಗಿದ್ದವು ಮತ್ತು ನಮ್ಮ ರಾಜ್ಯದಲ್ಲಿ ಮೌನ ಸಾಮಾಜಿಕ ಕ್ರಾಂತಿಗೆ ಕಾರಣವಾದವು ಅಂದರೆ ಅದರಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆ ಇಲ್ಲ. ಇಂದು ಅವರ ಯೋಜನೆಗಳ ಫಲಾನುಭವಿಗಳು ಇಡೀ ರಾಜ್ಯದಲ್ಲಿ ಹರಡಿದ್ದಾರೆ.
ಆದ್ದರಿಂದ ಅವರನ್ನು ನೆನೆಯದೇ ನಾವು ಕನ್ನಡಿಗರು ಮುಂದೆ ಹೋಗುವುದು ಹೇಗೆ? ಈ ಹುಟ್ಟುಹಬ್ಬ ಒಂದು ನೆಪ ಮಾತ್ರ.
ಕಲ್ಲಹಳ್ಳಿಯ ಜಮೀನ್ದಾರರ ಕುಟುಂಬ
ಹುಣಸೂರು ತಾಲೂಕಿನ ಕಲ್ಲಹಳ್ಳಿಯ ಜಮೀನ್ದಾರರ ಕುಟುಂಬ ಅವರದ್ದು. ಮೈಸೂರು ಒಡೆಯರಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದ ಮನೆತನ ಅವರದ್ದು. ಹುಟ್ಟಿದ್ದು 1915ರ ಆಗಸ್ಟ್ 20ರಂದು. ಮುಂದೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ಅವರು ತನ್ನ ಊರಿನಲ್ಲಿ ಕೃಷಿ ಮಾಡಿಕೊಂಡು ಇದ್ದವರು. ಸ್ವಾತಂತ್ರ್ಯ ಚಳುವಳಿಯನ್ನು ಕಣ್ಣಾರೆ ಕಂಡಿದ್ದ ಕಾರಣ ಮತ್ತು ಹಿಂದುಳಿದ ವರ್ಗಗಳ ಸಂಕಷ್ಟಗಳ ಅರಿವು ಇದ್ದ ಕಾರಣ ಅವರು ರಾಜಕೀಯ ಜೀವನಕ್ಕೆ ಬರಲೇ ಬೇಕಾಯಿತು. ಪರಿಣಾಮವಾಗಿ 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು ವಿಧಾನಸಭೆಯನ್ನು ಪ್ರವೇಶ ಮಾಡಿದರು. ಕಾಂಗ್ರೆಸ್ ಪಕ್ಷದ ಮಹಾನ್ ನಾಯಕರಾದರು. ಪ್ರಧಾನಿ ಇಂದಿರಾಗಾಂಧಿ ಅವರ ನಿಕಟವರ್ತಿ ಆದರು. ನೀತಿ ನಿರೂಪಣೆ ಮಾಡುವ ಕೇಂದ್ರದ ಕಾಂಗ್ರೆಸ್ ಸಿಂಡಿಕೇಟ್ ಸದಸ್ಯರಾದರು. ಎಂಟು ವರ್ಷಗಳ ಕಾಲ ( ಎರಡು ಅವಧಿಗೆ) ಕರ್ನಾಟಕದ ಮುಖ್ಯಮಂತ್ರಿ ಕೂಡ ಆದರು. ಹುಣಸೂರು ಅವರನ್ನು ಪ್ರತೀಬಾರಿ ಗೆಲ್ಲಿಸುತ್ತಾ ಹೋಯಿತು.
ಹಿಂದುಳಿದ ವರ್ಗಗಳ ಪ್ರಬಲ ನಾಯಕ
ಕಾಂಗ್ರೆಸ್ ಪಕ್ಷ ಮುಂದೆ ಸಂಸ್ಥಾ ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಎಂದು ಒಡೆದಾಗ ಅರಸು ಅವರು ಇಂದಿರಾ ಜೊತೆಗೆ ನಿಂತರು. ಆಗಿನ ಕಾಲದ ಘಟಾನುಘಟಿ ನಾಯಕರಾದ ದೇವೇಗೌಡ, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಮೊದಲಾದವರ ಮಧ್ಯೆ ಕೂಡ ಪ್ರಬಲ ನಾಯಕರಾಗಿ ಹೊರಹೊಮ್ಮಿದರು. ಅವರ ನಾಯಕತ್ವದಲ್ಲಿ 1971ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ 27 ಸೀಟು ಗೆದ್ದು ಜಯಭೇರಿ ಬಾರಿಸಿತು. 1972ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 216ರಲ್ಲೀ 165 ಸೀಟು ( 75% ) ಅಧಿಕಾರಕ್ಕೆ ಬಂದಿತು.
ಆ ಸಂಖ್ಯಾಬಲದ ಶಕ್ತಿಯಿಂದ ದೇವರಾಜ್ ಅರಸು ಅವರು 1972-77ರ ಅವಧಿಗೆ ಪೂರ್ಣ ಐದು ವರ್ಷಗಳ ಮುಖ್ಯಮಂತ್ರಿ ಆಗಿ ಹೊರಹೊಮ್ಮಿದರು. ನಂತರ ಇಂದಿರಾ ಕಾಂಗ್ರೆಸ್ ಸೇರಿದ ಅರಸು 1978-1980ರ ಅವಧಿಗೆ ಮತ್ತೆ ಮುಖ್ಯಮಂತ್ರಿ ಆದರು. ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿ ಅವರು ಕರ್ನಾಟಕದಲ್ಲಿ ಮೌನ ಸಾಮಾಜಿಕ ಕ್ರಾಂತಿಯನ್ನು ಮಾಡಿದರು.
ನೂರಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳು
ದೇವರಾಜ್ ಅರಸು ಅವರ ಅಧಿಕಾರದ ಅವಧಿಯಲ್ಲಿ ನಾಡು ನೂರಾರು ವಿಧಾಯಕ ಕಾರ್ಯಕ್ರಮಗಳಿಗೆ ಸಾಕ್ಷಿ ಆಯಿತು. ಹಿಂದುಳಿದ ವರ್ಗಗಳ ಬಗ್ಗೆ ಅವರಿಗೆ ಇದ್ದ ನಿಜವಾದ ಕಾಳಜಿ ಅವರನ್ನು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಆಗಿ ಮಾಡಿತು.
1) ಅವರ ಅವಧಿಯಲ್ಲಿ ಮೈಸೂರು ರಾಜ್ಯವು ಕರ್ನಾಟಕ ಎಂಬ ವಿಸ್ತಾರವಾದ ಹೆಸರನ್ನು ಪಡೆಯಿತು. ( 1973 ನವಂಬರ್ 1).
2) ‘ಉಳುವವನೇ ಹೊಲದೊಡೆಯ’ ಎಂಬ ಪ್ರಬಲ ಕಾನೂನನ್ನು ರಾಜ್ಯದಲ್ಲಿ ಅತ್ಯಂತ ಪರಿಣಾಮಕಾರಿ ಆಗಿ ಅನುಷ್ಟಾನ ಮಾಡಿದ ಕೀರ್ತಿಯು ಅವರಿಗೆ ಸಲ್ಲಬೇಕು. ಇದರಿಂದ ಶ್ರೀಮಂತ ಜಮೀನ್ದಾರರನ್ನು ಎದುರು ಹಾಕಿಕೊಂಡರೂ ಅರಸು ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಮಹದುಪಕಾರ ಮಾಡಿದರು. ಅದರ ಫಲವನ್ನು ಕರ್ನಾಟಕದ ಮುಕ್ಕಾಲು ಭಾಗ ಜನರು ಇಂದಿಗೂ ಉಣ್ಣುತ್ತಿದ್ದಾರೆ.
3) ಪ್ರಧಾನಿ ಇಂದಿರಾ ಗಾಂಧಿ ಕರೆ ನೀಡಿದ್ದ ‘ ಗರೀಬಿ ಹಠಾವೋ’ ಮತ್ತು 20 ಅಂಶಗಳ ಕಾರ್ಯಕ್ರಮಗಳನ್ನು ಅವರು ಅತ್ಯಂತ ಸಕ್ಷಮವಾಗಿ ಜಾರಿಗೆ ತಂದರು.
4) ಆಗ ಕರ್ನಾಟಕದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಇದ್ದ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಉಚಿತ ವಸತಿ ಯೋಜನೆ ಜಾರಿಗೆ ತಂದರು. ಅವರಿಗೆ ಸಾಲ ಮನ್ನಾ ಯೋಜನೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದರು.
5) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕಾಯಕಲ್ಪ ಮಾಡಿದರು. ಇಡೀ ಕರ್ನಾಟಕದ ಎಲ್ಲ ತಾಲೂಕುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಹುಡುಗರ ಮತ್ತು ಹುಡುಗಿಯರ ಹಾಸ್ಟೆಲುಗಳನ್ನು ( ಬಿಸಿಎಂ ಹಾಸ್ಟೆಲ್) ಉನ್ನತೀಕರಣ ಮಾಡಿದರು. ಅವುಗಳಿಗೆ ಅನುದಾನವನ್ನು ಹೆಚ್ಚು ಮಾಡಿದರು. ಇಂದು ಕರ್ನಾಟಕದಲ್ಲಿ ಲಕ್ಷಾಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗ ಪಡೆದು ಸ್ವಾವಲಂಬಿ ಆಗಿದ್ದರೆ ಅದಕ್ಕೆ ಕಾರಣ ಅರಸು ಅವರ ದೂರದೃಷ್ಟಿಯ ಯೋಜನೆ.
6) ಆಗ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಸಿಟಿಯ ಕನಸು ಆರಂಭ ಆಯಿತು. ಆ ಯೋಜನೆಯ ಸ್ಥಾಪಕರಾದ ಆರ್ ಕೆ ಬಾಳಿಗಾ ಅವರನ್ನು ಕರೆದು ಮಾತನಾಡಿ ‘ ನಾನಿದ್ದೇನೆ ‘ ಎಂದು ಧೈರ್ಯ ತುಂಬಿದ್ದು ದೇವರಾಜ್ ಅರಸು. ಅದರಿಂದಾಗಿ ಮುಂದಿನ ದಿನಗಳಲ್ಲಿ ಇಲೆಕ್ಟ್ರಾನಿಕ್ ಸಿಟಿ ನಮ್ಮ ರಾಜ್ಯದಲ್ಲಿ ಉದ್ಘಾಟನೆ ಆಗಿ ಸಾವಿರಾರು ಮಂದಿಗೆ ಉದ್ಯೋಗ ನೀಡಿತು.
7) ರೈತರ ನೀರಿನ ಬವಣೆ ತಪ್ಪಿಸಲು ಆಗಿನ ಕಾಲದ ಅತೀ ದೊಡ್ಡ ಕಾಳಿ ನೀರಾವರಿ ಯೋಜನೆ ಸ್ಥಾಪನೆ ಮಾಡಿದರು.
8) 16,000 ಹಿಂದುಳಿದ ವರ್ಗದ ವಿದ್ಯಾವಂತ ಯುವಕ, ಯುವತಿಯರಿಗೆ ಸ್ಟೈಪಂಡ್ ( ಮಾಸಿಕ ಸಹಾಯಧನ ನೀಡುವ) ಯೋಜನೆಯನ್ನು ಜಾರಿಗೆ ತಂದರು.
9) ಸಾವಿರಾರು ದಲಿತ ವಿದ್ಯಾರ್ಥಿಗಳಿಗೆ ಉಚಿತ ನರ್ಸಿಂಗ್ ಮತ್ತು ಕಂಪ್ಯೂಟರ್ ತರಬೇತಿಗೆ ವ್ಯವಸ್ಥೆ ಮಾಡಿದರು.
10) ದಲಿತರು ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಲು ಕಾನೂನು ಗಟ್ಟಿ ಮಾಡಿದರು.
11) ಸಮಾಜದ ಮೇಲ್ವರ್ಗದ ಜನರ ಹತ್ತಿರ ಸಾಲ ತೆಗೆದುಕೊಂಡು ಅವರ ಊಳಿಗ ಮಾಡುತ್ತಿದ್ದ ಸಾವಿರಾರು Bonded ಕಾರ್ಮಿಕರನ್ನು ಋಣಮುಕ್ತ ಮಾಡುವ ಒಂದು ಮಹತ್ವದ ಶಾಸನವನ್ನು 1976ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಲೋಕಸಭೆಯಲ್ಲಿ ಮಾಡಿದರು. ಅದನ್ನು ಅರಸು ಅವರು ಕರ್ನಾಟಕದಲ್ಲಿ ನೂರಕ್ಕೆ ನೂರರಷ್ಟು ಜಾರಿಗೆ ತಂದರು.
ಈ ಎಲ್ಲ ಯೋಜನೆಗಳ ಮೂಲಕ ಅರಸು ಅವರು ‘ಆಧುನಿಕ ಕರ್ನಾಟಕದ ನಿರ್ಮಾಪಕ ‘ ಎಂದೇ ಕರೆಸಿಕೊಂಡರು.
ಅರಸು ಕೊನೆಯ ದಿನಗಳು ದಾರುಣ ಆಗಿದ್ದವು
ಇಂತಹ ಮೇರು ಮುಖ್ಯಮಂತ್ರಿ ಅರಸು ಯಾವುದೋ ಕಾರಣಕ್ಕೆ ಇಂದಿರಾ ಗಾಂಧಿ ಅವರ ಜೊತೆ ಮನಸ್ತಾಪ ಮಾಡಿಕೊಂಡರು. ಇಡೀ ಬದುಕಿನಲ್ಲಿ ಇಂದಿರಾ ಗಾಂಧಿ ಅವರನ್ನು ಐಕಾನ್ ಆಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದ ಅರಸು ತನ್ನ ಅಧಿಕಾರದ ಅವಧಿಯ ಕೊನೆಯ ಭಾಗದಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ನಿಂತರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರನ್ನು ಕರೆದು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದ ಅರಸು ಮುಂದೆ ಅದೇ ಇಂದಿರಾ ಗಾಂಧಿ ಅವರ ಮುನಿಸಿಗೆ ಕಾರಣ ಆದರು. ಪರಿಣಾಮವಾಗಿ ಇಡೀ ಕಾಂಗ್ರೆಸ್ ಪಕ್ಷದ ನಾಯಕರು ಅವರ ವಿರುದ್ದ ತಿರುಗಿ ಬಿದ್ದರು. ಇದರ ಪರಿಣಾಮವಾಗಿ ಅರಸು 1980ರಲ್ಲಿ ಅಧಿಕಾರವನ್ನು ಕಳೆದುಕೊಂಡರು. ಅವರ ಪಕ್ಷದಲ್ಲಿಯೇ ಅವರು ಮೂಲೆಗುಂಪು ಆದರು. ಇದರಿಂದ ಮಾನಸಿಕವಾಗಿ ಜರ್ಜರಿತ ಆದ ಅರಸು 1982 ಜೂನ್ ಆರರಂದು ಸ್ವರ್ಗಸ್ಥರಾದರು.
ಭರತ ವಾಕ್ಯ
ಏನಿದ್ದರೂ ನವ ಕರ್ನಾಟಕದ ನಿರ್ಮಾಣಕ್ಕೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅವರ ಕೊಡುಗೆಗಳನ್ನು ನಾವು ಖಂಡಿತವಾಗಿ ಮರೆಯಬಾರದು.