ಈ ಅಂಕಣವನ್ನು ಇಲ್ಲಿ ಆಲಿಸಿ:
ಅಲಿಬಾಬಾ ಮತ್ತು ನಲವತ್ತು ಕಳ್ಳರ ಕಥೆಯನ್ನು ಕೇಳುತ್ತಾ ಕುಳಿತಿದ್ದ ಆ ಪುಟ್ಟ. ನಾಲ್ಕು ದಿನಗೂಡಿ ಅಂತೂ ಆ ಕಥೆ ಹೇಳಿ ಮುಗಿದಿತ್ತು. ಕಡೆಯಲ್ಲಿ ʻನಿನಗೇನಿಷ್ಟವಾಯ್ತು ಈ ಕಥೆಯಲ್ಲಿ?ʼ ಎಂದು ಕೇಳಿದೆ. ʻಮ್ಯಾಜಿಕ್ ಬಾಗಿಲು ಮತ್ತದರ ಬೆಲ್ ಇಷ್ಟವಾಯ್ತುʼ ಎಂದ. ಯಾವ ವಿಷಯ ಹೇಳುತ್ತಿದ್ದಾನೆ ಎಂಬುದು ಬಗೆಹರಿಯದೆ ಮತ್ತೂ ಕೆದಕಿ ಕೇಳಿದೆ. ಕಳ್ಳರ ಗುಹೆಯ ಮ್ಯಾಜಿಕ್ ಬಾಗಿಲು ಮಜವಾಗಿತ್ತು. ಜೊತೆಗೆ, ನಮ್ಮೆಲ್ಲರ ಮನೆಗಳಿಗೆ ಬಾಗಿಲು ತೆರೆಯುವುದಕ್ಕೆ ಇರುವ ʻಡಿಂಗ್ಡಾಂಗ್ ಬೆಲ್ʼ ಬದಲಿಗೆ, ʻಬಾಗಿಲು ತೆಗೆಯೇ ಶೇಷಮ್ಮʼ ಎನ್ನುವ ಬೆಲ್ ಇಷ್ಟವಾಯಿತೆಂದ! ಆ ಮಾಂತ್ರಿಕ ಮಾತುಗಳು ಅವನಿಗೆ ʻಬಾಗಿಲ ಬೆಲ್ʼ ರೀತಿಯಲ್ಲಿ ಕಂಡಿದ್ದವು. ಕಳ್ಳರ ಗುಹೆಯ ಬಾಗಿಲನ್ನಂತೂ ಅವನದ್ದೇ ಆದ ವಿನೂತನ ರೀತಿಯಲ್ಲಿ ಕಲ್ಪಿಸಿಕೊಂಡಿದ್ದ. ಮಕ್ಕಳ ಕಲ್ಪನೆಗಳಿಗೆ ಬಾಗಿಲು, ಚೌಕಟ್ಟು ಯಾವುದೂ ಇಲ್ಲವಲ್ಲ…!
ಇದೇ ಲಹರಿಯಲ್ಲಿದ್ದಾಗ ʻಬಾಗಿಲುʼ ಎನ್ನುವ ಕಲ್ಪನೆಯ ಬಗ್ಗೆಯೇ ಕುತೂಹಲ ಮೂಡಿತು. ಬಾಗಿಲೆಂದರೆ ಮೊದಲಿಗೆ ನೆನಪಾಗುವುದು ಯಾವುದೋ ಕಟ್ಟಡವೊಂದರ ಪ್ರವೇಶದ್ವಾರ. ನಂನಮ್ಮ ಇಷ್ಟಕ್ಕೆ ಅನುಸಾರವಾಗಿ, ಮರ, ಕಬ್ಬಿಣ, ಅಲುಮಿನಿಯಂ, ಗಾಜು ಮುಂತಾದ ಯಾವುದೇ ವಸ್ತುವಿನಿಂದ ಮಾಡಿದ್ದನ್ನು ನಾವು ಕಲ್ಪಿಸಿಕೊಳ್ಳಬಹುದು. ಹಾಗೆಂದು ಭೌತಿಕ ಬಾಗಿಲಿಗೆ ಚೌಕಟ್ಟನ್ನು ಹಾಕಬಹುದೇ ಹೊರತು, ನಮ್ಮ ಕಲ್ಪನೆಯ ಕದಕ್ಕೆಲ್ಲಿದೆ ಚೌಕಟ್ಟು? ಬಾಲ್ಯದಲ್ಲಿ ನಮಗೆ ಪರಿಚಿತವಿದ್ದ ಯಾವುದೋ ಮನೆಯದ್ದೋ, ನಾವು ಆಡಿ ನಲಿದಿದ್ದ ಯಾವುದೋ ದೇವಸ್ಥಾನದ್ದೋ ಬಾಗಿಲು ನೆನಪಾಗಬಹುದು. ಶಾಲೆಯ ಗೇಟು, ದಾರಿ ಬದಿಯಲ್ಲಿ ದೊಡ್ಡದಾಗಿ ನಿಂತಿದ್ದ ಯಾವುದೋ ಬಂಗಲೆಯ ಭವ್ಯ ದ್ವಾರ, ನಮ್ಮಿಷ್ಟದ ಕಾರ್ಟೂನಿನಲ್ಲಿದ್ದ ನಾಯಿ ಮನೆಯ ಪುಟ್ಟ ಬಾಗಿಲು, ಮನೆ ಪಕ್ಕದ ಗುಡಿಸಲಿಗಿದ್ದ ತಡಿಕೆ ಬಾಗಿಲು, ಬೀದಿ ತುದಿಯ ಶೆಟ್ಟರಂಗಡಿಯ ಶಟರು… ಎಲ್ಲವೂ ಬಾಗಿಲೇ ತಾನೆ? ನಮ್ಮ ಮನೋವ್ಯಾಪಾರದಲ್ಲಿ ತೆರೆದುಕೊಳ್ಳುವ ಬಾಗಿಲುಗಳನ್ನು ಮುಚ್ಚುವುದೇ ಕಷ್ಟ.
ನಮ್ಮ ಬಂಧುಗಳ ನೂರೈವತ್ತು ವರ್ಷದ ಹಳೆಯ ಮನೆಯೊಂದು ನೆನಪಿಗೆ ಬರುತ್ತಿದೆ. ಅಂದಿನ ಕಾಲಕ್ಕೆ ತಕ್ಕಂಥ ಬೃಹದಾಕಾರದ ಮಣ್ಣಿನ ಮನೆಯದು. ಹೆಬ್ಬಾಗಿಲು ದಾಟಿ ಒಳಗೆ ಹೋಗುತ್ತಿದ್ದಂತೆ ಚುಟ್ಟಿ ಅಂಗಳ, ಅದನ್ನು ದಾಟಿ ಮನೆಯೊಳಗೆ ಹೋಗುವಲ್ಲಿ ಪ್ರಧಾನ ಬಾಗಿಲಿತ್ತು. ಅದರ ಚೌಕಟ್ಟು-ಕದವೆಲ್ಲ ಬಹಳ ಕಲಾತ್ಮಕವಾಗಿದ್ದರೂ ಬಾಗಿಲ ಎತ್ತರ ಸಣ್ಣದಿತ್ತು. ಎತ್ತರ ಇದ್ದವರು ಬಗ್ಗಿ ನಡೆಯದಿದ್ದರೆ, ತಲೆ ಘಟ್ಟಿಸಿಕೊಳ್ಳುವುದು ಖಾತ್ರಿಯಾಗಿತ್ತು. ʻಹೀಗೇಕೆ?ʼ ಎಂದು ಅವರ ಮನೆಯ ಅಜ್ಜಿಯನ್ನು ಕೇಳಿದಾಗ, ʻಎಷ್ಟು ಎತ್ತರ ಬೆಳೆದರೂ ಬಾಗಿಲ ದೇವರಿಗೆ ಬಗ್ಗಲೇ ಬೇಕು. ಇಲ್ಲದಿದ್ದರೆ ತಲೆ ಹೋಗುತ್ತದೆ ಅನ್ನೋದನ್ನು ನೆನಪಿಸುವುದಕ್ಕೆʼ ಎಂದು ಹೇಳಿದ್ದರು. ಹಳೆಯ ಜನರ ಬದುಕಿನ ತತ್ವಗಳು ಸರಳವಾಗಿದ್ದರೂ ಎಷ್ಟೊಂದು ಮಾರ್ಮಿಕವಾಗಿರುತ್ತಿದ್ದವು ಎನಿಸಿ ಅಚ್ಚರಿಪಟ್ಟಿದ್ದೆ. ಮಾತ್ರವಲ್ಲ, ಯಾರ ಮನೆಯ ಕದ ದಾಟಿ ಹೋಗುವಾಗಲೂ ವಿನಮ್ರವಾಗಿದ್ದರೆ ಮಾತ್ರವೇ ಅಲ್ಲಿನ ಮನಗಳ ಒಳಗೆ ಪ್ರವೇಶ ಸಾಧ್ಯ ತಾನೆ?
ಹಳೆಯ ಮನೆಗಳ ಬಾಗಿಲುಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಗುರುತಿಸಬಹುದಾಗಿತ್ತು. ಬಾಗಿಲು-ಚೌಕಟ್ಟುಗಳ ಕಲಾತ್ಮಕ ಕೆತ್ತನೆಗಳಂತೂ ಸರಿ, ಅದಲ್ಲದೆ ಭದ್ರತೆಗಾಗಿ ಕೆಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದ್ದರು. ಉದಾ, ಮನೆಯ ಭಾರದ ಹೆಬ್ಬಾಗಿಲು ಮುಚ್ಚಿ-ತೆರೆದು ಮಾಡುವಾಗ ಶಬ್ದ ಆಗಬೇಕು, ಅಗುಳಿ ತೆಗೆದು-ಹಾಕುವಾಗಲೂ ಸಶಬ್ದವಾಗಿಯೇ ಇರಬೇಕು. ಇದರಿಂದ ಬಾಗಿಲಲ್ಲೇನೋ ಚಟುವಟಿಕೆ ನಡೆಯುತ್ತಿದೆ ಎಂಬುದು ಮನೆಮಂದಿಗೆಲ್ಲ ಗಮನಕ್ಕೆ ಬರಬೇಕು. ಮಾತ್ರವಲ್ಲ, ಬಾಗಿಲ ಅಗುಳಿ ಅಥವಾ ಚಿಲಕ ತೆರೆಯುವಾಗ ಸಣ್ಣದೊಂದು ಹೆಚ್ಚುವರಿ ʻಬೀಗʼ ಇರುತ್ತಿತ್ತು. ಅದನ್ನು ಸಾಮಾನ್ಯವಾಗಿ ʻಕಳ್ಳ ಬೀಗ, ಕಳ್ಳ ಮಿಡʼ ಎಂದೆಲ್ಲ ಕರೆಯುತ್ತಿದ್ದರು. ಅದನ್ನು ತೆರೆಯುವುದು ಹೇಗೆ ಎಂಬುದು ಆಯಾ ಮನೆಯವರು ಅಥವಾ ಪರಿಚಿತರಿಗಷ್ಟೇ ಗೊತ್ತಿರುತ್ತಿತ್ತು.
ಇವೆಲ್ಲ ಹಳೆಯ ಮನೆಗಳ ಮಾತಾಯಿತು. ಇತ್ತೀಚಿನ ಮನೆಗಳಲ್ಲಿ ಮೊದಲಿನಂತೆ ಹೆಚ್ಚು ಗೋಡೆಗಳಿಲ್ಲದ ಕಾರಣ, ಬಾಗಿಲುಗಳ ಸಂಖ್ಯೆ ಸಹಜವಾಗಿ ಮೊದಲಿಗಿಂತ ಕಡಿಮೆಯಾಗಿದೆ. ಉದಾ, ಅಡುಗೆಮನೆ ಮತ್ತು ಊಟದ ಮನೆಗಳು ಪ್ರತ್ಯೇಕವಲ್ಲ. ಇವೆರಡರ ನಡುವೆ ಗೋಡೆ-ಬಾಗಿಲುಗಳಿಲ್ಲ. ಅಂತೆಯೇ ಪ್ರತ್ಯೇಕ ಉಗ್ರಾಣವೂ ಅಪರೂಪ. ನೀರುಮನೆ ಮತ್ತು ಶೌಚಾಲಯಗಳು ಪ್ರತ್ಯೇಕವಾಗದೆ ಒಂದಾಗಿವೆ. ಹೀಗಾಗಿ ಇನ್ನಷ್ಟು ಗೋಡೆ-ಬಾಗಿಲುಗಳು ಕಡಿಮೆಯಾಗಿದ್ದು ಸುಳ್ಳಲ್ಲ. ಹಾಗೆಂದು ಮನೆಮಂದಿಯೆಲ್ಲಾ ಒಟ್ಟಾಗಿ ಸೇರಿ ನಲಿಯುತ್ತಾರೆಂದು ಭಾವಿಸುವಂತೆಯೂ ಇಲ್ಲ. ಭೌತಿಕ ಬಾಗಿಲುಗಳು ಕಡಿಮೆಯಾಗಿದ್ದರೂ, ಮನದ ಕದಗಳನ್ನು ಮುಚ್ಚಿಕೊಳ್ಳುವವರೇ ಹೆಚ್ಚಾಗಿದ್ದಾರಲ್ಲ.
ಬಾಗಿಲುಗಳಲ್ಲಿ ಮೊದಲಿನಂತೆ ಮರವನ್ನೇ ಬಳಸುವ ಅವಕಾಶ, ಅನಿವಾರ್ಯತೆ- ಎರಡೂ ಈಗಿಲ್ಲ. ಕಾಡುಗಳೆಲ್ಲ ಕಣ್ಮರೆಯಾಗಿರುವುದರಿಂದ ಮರದ ಬಾಗಿಲುಗಳು ಬಹಳ ತುಟ್ಟಿ ಎನಿಸುತ್ತವೆ. ಅದರಲ್ಲೂ ಟೀಕ್ ಅಥವಾ ಸಾಗುವಾನಿಯ ಬಾಗಿಲೆಂದರೆ ಈಗ ಐಷಾರಾಮಿನ ವಿಷಯ. ಅದರ ಬದಲಿಗೆ ಸ್ಟೀಲ್, ಕಬ್ಬಿಣ, ಗಾಜು, ಫೈಬರ್, ಅಲ್ಯುಮಿನಿಯಂ, ಯುಪಿವಿಸಿ ಮುಂತಾದ ಹಲವು ಬಾಳಿಕೆ-ತಾಳಿಕೆ ಇರುವಂಥ ವಸ್ತುಗಳ ಬಾಗಿಲುಗಳು ಜನಪ್ರಿಯಗೊಂಡಿವೆ. ಒಂದೊಮ್ಮೆ ಮರವೇ ಬೇಕೆಂದರೆ ಅದರಲ್ಲೂ ಬರ್ಮಾ, ಘಾನಾ, ಕೊಲಂಬಿಯಾ ಮುಂತಾದೆಡೆಗಳ ಟೀಕ್ಗಳು ನಮ್ಮ ಪರಂಪರಾಗತ ತೇಗದ ಮರಗಳಿಗಿಂತ ಕಡಿಮೆ ಖರ್ಚಿನಲ್ಲಿ ಲಭ್ಯವಿವೆ. ಅದಲ್ಲದೆ, ಹಲಸು, ಹೊನ್ನೆ, ಸಾಲ್, ರಬ್ಬರ್ ಮತ್ತು ಕಾಡು ಮರಗಳೂ ಈಗ ಬಾಗಿಲಿಗೆ ಬಳಕೆಯಾಗುತ್ತಿವೆ.
ಬಾಗಿಲು, ಕದ, ದ್ವಾರ ಎಂದೆಲ್ಲಾ ಕರೆಸಿಕೊಳ್ಳುವ ಈ ಶಬ್ದಕ್ಕೂ ನಾಗರಿಕತೆಗೂ ಹಳೆಯ ನಂಟು ಎಂಬುದು ತಿಳಿದಿದ್ದೇ. ಅದೇ ಕಾರಣಕ್ಕೆ ಊರುಗಳಿಗೂ ಇಂಥ ಹೆಸರುಗಳು ಬಂದಿರಬಹುದು. ಊರ ಬಾಗಿಲಲ್ಲಿ ಹೊಳೆಯಿದೆ ಎಂಬ ಕಾರಣಕ್ಕೆ ಹೊಳೆಬಾಗಿಲು ಎಂಬ ಹೆಸರಿನ ಊರೇ ಇದೆ. ಮೂಡು ದಿಕ್ಕಿಗಿರುವ ಊರು ಎಂಬ ಕಾರಣಕ್ಕೆ ಮೂಡುಬಾಗಿಲು ಎನ್ನುವ ಊರು, ಈಗ ಮುಳಬಾಗಿಲು ಎನಿಸಿಕೊಂಡಿರುವುದು ಇತಿಹಾಸ. ಆದರೆ ಬಾಗಿಲಕೋಟೆಯಲ್ಲಿ ಬಾಗಿಲು ಹುಡುಕುವುದು, ದ್ವಾರಕೆಯಲ್ಲಿ ದ್ವಾರ ಹುಡುಕುವುದು ಪ್ರಯೋಜನ ಆದೀತೊ ಇಲ್ಲವೊ ಗೊತ್ತಿಲ್ಲ. ಊರ ಬಾಗಿಲು ಅಥವಾ ಪುರದ್ವಾರವನ್ನು ಅಗಸೆಬಾಗಿಲು ಎಂದು ಕರೆಯುವುದು ರೂಢಿ. ಶಿರಸಿಯ ಹೊರವಲಯದಲ್ಲಿನ ಪ್ರದೇಶವೊಂದು ಈಗಲೂ ಅಗಸೆಬಾಗಿಲು ಎಂದೇ ಕರೆಸಿಕೊಳ್ಳುತ್ತದೆ. ಹಾಗಂತ ಊರು ಅದರಾಚೆಗೂ ಬೆಳೆದಿದೆ ಎನ್ನುವುದು ಬೇರೆ ಮಾತು.
ಭಾಷೆಯ ಜಾಯಮಾನದಲ್ಲೂ ಬಾಗಿಲೆಂಬುದಕ್ಕೆ ಹಲವು ಛಾಯೆಯ ಅರ್ಥಗಳುಂಟು. ʻನಮ್ಮನೆ ಬಾಗಿಲಿಗೆ ಬಂದು ಕೇಳಿದವರʼ ಬಗ್ಗೆ ವ್ಯಕ್ತವಾಗುವ ಸಹಾನುಭೂತಿಯ ಭಾವನೆ, ʻನಾನೇನು ಯಾರ್ಮನೆ ಬಾಗಿಲಿಗೆ ಹೋಗ್ಲಿಲ್ಲʼ ಎನ್ನುವಾಗ ಸ್ವಾಭಿಮಾನವಾಗಿ ಬದಲಾಗುತ್ತದಲ್ಲ. ʻಬಾಗಿಲು ಹಾಕಿಬಿಟ್ಟರುʼ, ʻಬಾಗಿಲು ಕಾಯ್ತಿದ್ದೆʼ ಎನ್ನುವಾಗಲೂ ಭಿನ್ನ ಅರ್ಥಗಳೇ ಒಡಮೂಡುತ್ತವೆ. ಇನ್ನು, ಬಾಗಿಲ ತೋರಣ, ಬಾಗಿಲುಪಟ್ಟಿ, ಬಾಗಿಲ ರಂಗೋಲಿ ಮುಂತಾದವು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳಾಗಬಹುದು. ಬಾಗಿಲು ಕಾಯುವವ ಅಥವಾ ದ್ವಾರಪಾಲಕ ಎನ್ನುವುದಕ್ಕೆ ಹಲವು ಪರ್ಯಾಯಗಳು ಭಾಷೆಯಲ್ಲಿವೆ. ಪ್ರಹರಿ, ಪ್ರತಿಹಾರಿ, ಪಡಿಹಾರ, ಬಾಗಿಲಗಾಹಿ, ಬಾಗಿಲಭಟ- ನೋಡಿ, ಬಾಗಿಲ ಕಾಯುವ ಕೆಲಸಕ್ಕೂ ಎಷ್ಟೊಂದು ಗೌರವವಿದೆ.
ಈ ಕುರಿತಾದ ಗಾದೆಗಳು ಸಹ ಬಹಳಷ್ಟಿವೆ. ʻಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲ ಹಾಕಿದರುʼ, ʻಅದೇ ಉಂಡೇನು ಕದ ತೆಗಿʼ, ʻಬಾಗಿಲು ಹಾಕಿದರೆ ಒಂದೇ ದೂರು, ಬಾಗಿಲು ತೆರೆದರೆ ನೂರು ದೂರುʼ, ʻಕಾಲು ನಿಲ್ಲದೆ ಕಂಡವರ ಬಾಗಿಲಿಗೆ ಹೋದ್ರೆ, ಬಾಯಿ ನಿಲ್ಲದ ಮಾತು ಕೇಳ್ಬೇಕುʼ ಇಂಥವು ಇನ್ನಷ್ಟು ಸಿಗಬಹುದು.
ಇದನ್ನೂ ಓದಿ: ದಶಮುಖ ಅಂಕಣ: ʼಮುನಿಸು ತರವೇ…!’ ಎಂಬ ಮಧುರ ಮಂತ್ರ
ಸಾಹಿತ್ಯದಲ್ಲಿ ಬಾಗಿಲು ಎನ್ನುವುದು ಹಲವು ಅನನ್ಯ ಪ್ರತಿಮೆಗಳನ್ನು ಸೃಷ್ಟಿಸಿದೆ. ಇದೇ ಹಿನ್ನೆಲೆಯಲ್ಲಿ ಕುಮಾರವ್ಯಾಸ, ಹರಿದಾಸರಿಂದ ಹಿಡಿದು ಇತ್ತೀಚಿನ ಲೇಖಕರವರೆಗೆ ಬಾಗಿಲಿನ ಕುರಿತಾದ ಕಲ್ಪನೆಗಳು ತೆರೆದುಕೊಳ್ಳುತ್ತಲೇ ಇವೆ. ಬಾಗಿಲೆನ್ನುವುದು ಕೆಲವೊಮ್ಮೆ ಆನುಷಂಗಿಕವಾಗಿ ಪ್ರಸ್ತಾಪಗೊಂಡರೆ ಕೆಲವೊಮ್ಮೆ ಪ್ರತಿಮೆಯಾಗಿ ನಿಲ್ಲುತ್ತವೆ. ʻಅರಗಿನರಸನ ಬಾಗಿಲಲಿ ದಳ್ಳುರಿಗೆ ತಡವೇ?ʼ ಎಂಬಂತೆ ಕುಮಾರವ್ಯಾಸ ದ್ರೋಣಪರ್ವದಲ್ಲಿ ಪ್ರಾಸಂಗಿಕವಾಗಿ ಬಾಗಿಲನ್ನು ಪ್ರಸ್ತಾಪಿಸಿದರೆ, ʻಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆʼ ಎಂದು ಕನಕದಾಸರು ಬಾಗಿಲನ್ನೇ ಮುಕ್ತಿಯ ಪ್ರತಿಮೆಯಾಗಿ ನಿಲ್ಲಿಸುತ್ತಾರೆ. ʻತುಂಬಿದ ಪಟ್ಟಣಕೊಂಬತ್ತು ಬಾಗಿಲುʼ ಎನ್ನುತ್ತಾ ದೇಹದ ನವದ್ವಾರಗಳನ್ನು ಪುರಂದರ ದಾಸರು ಪ್ರಸ್ತಾಪಿಸಿದರೆ, ʻಒಂದು ದ್ವಾರದಲಿ ಬಂದ ಆತ್ಮಂಗೆ ಹಲವು ದ್ವಾರ ಉಂಟೆಂದು ಹೊಲಬುದಪ್ಪಿ ನುಡಿವರು ನೋಡಾʼ ಎನ್ನುವ ಮೋಳಿಗೆ ಮಾರಯ್ಯ, ದಾರಿ ತಪ್ಪುವ ಲೋಕದ ಬಗೆಯನ್ನು ಪ್ರಸ್ತಾಪಿಸುತ್ತಾನೆ. ʻಬಾಗಿಲಲಿ ಕೈ ಮುಗಿದು ಒಳಗೆ ಬಾ ಯಾತ್ರಿಕನೆʼ ಎಂದು ಕುವೆಂಪು ಕರೆದರೆ, ʻಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದʼ ಎಂದು ಬೇಂದ್ರೆ ಬಣ್ಣಿಸುತ್ತಾರೆ. ತಮ್ಮ ಕವನ ಸಂಕಲನವನ್ನು ʻತೆರೆದ ಬಾಗಿಲುʼ ಎಂದು ಕೆ.ಎಸ್. ನರಸಿಂಹ ಸ್ವಾಮಿಗಳು ಕರೆದರೆ, ʻಮುಚ್ಚಿದ ಬಾಗಿಲುʼನ್ನು ತ್ರಿವೇಣಿ ಕಾದಂಬರಿಯಾಗಿಸುತ್ತಾರೆ. ಜಯಂತ ಕಾಯ್ಕಿಣಿ ʻತೆರೆದಷ್ಟೇ ಬಾಗಿಲʼ ಕಥೆ ಹೇಳುತ್ತಾರೆ. ಅಂತೂ ಬಾಗಿಲೆಂಬುದು ಮನದ ಕದ ತಟ್ಟಿದ್ದು ಎಷ್ಟೊ ಏನೊ.
ಬಾಗಿಲೆಂಬುದನ್ನು ಭೌತಿಕ ಎಂದುಕೊಂಡರೆ ಅಷ್ಟಕ್ಕೇ ಸೀಮಿತ. ಲೌಕಿಕವೆಂದು ಭಾವಿಸಿದರೆ ಅದೂ ಹೌದು. ಸರಿಯಾಗಿ ತಟ್ಟಿದರೆ ಪರಮಾರ್ಥಕ್ಕೂ ತೆರೆದೀತು ಎಂದು ನಂಬಿದರೆ… ಇಲ್ಲವೆಂದವರಾರು? ಛೇ! ಇವ್ಯಾವುದೂ ಬೇಡ ಎನಿಸಿ, ʻಬಾಗಿಲು ತೆಗೆಯೇ ಶೇಷಮ್ಮʼ ಎಂದು ಬೆಲ್ ಬಾರಿಸಿದರೆ ಮಾಯಾ ಲೋಕಕ್ಕೂ ತೆರೆದುಕೊಂಡೀತು. ನಮಗೆ ಬೇಕಾದ ಕದಗಳ ಕರೆಗಂಟೆ ಇರುವುದು ನಂನಮ್ಮ ಕೈಯಲ್ಲೇ!
ಇದನ್ನೂ ಓದಿ: ದಶಮುಖ ಅಂಕಣ: ಪಯಣವೋ ನಿಲುಗಡೆಯೋ…!