Site icon Vistara News

ದಶಮುಖ ಅಂಕಣ: ಶುಭಾಶಯ ಪತ್ರಗಳೆಂಬ ಚಿತ್ರ-ಕಾವ್ಯಗಳು

greeting card

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/11/WhatsApp-Audio-2023-11-07-at-11.10.34-AM.mp3

ಅಟ್ಟಕ್ಕಿರಿಸಿದ್ದ ಹಳೆಯ ಒಂದಿಷ್ಟು ವಸ್ತುಗಳನ್ನು ತೆಗೆಯುವಾಗ ಆಕಸ್ಮಿಕವಾಗಿ ಅದೊಂದು ರಟ್ಟಿನ ಪೆಟ್ಟಿಗೆ ಕೈಗೆ ಬಂದಿತ್ತು. ಚೆಂದದ ಚಿತ್ರವಿರುವ ಮುಚ್ಚಲಿನ ಪೆಟ್ಟಿಗೆಯನ್ನು ನೋಡುತ್ತಿದ್ದಂತೆ ಏನೋ ಬೇಕಾದ ವಸ್ತುಗಳನ್ನೇ ಇದರಲ್ಲಿ ಇರಿಸಿದ್ದೇನೆ ಎಂಬುದು ಖಾತ್ರಿಯಾಗಿತ್ತು. ಸುತ್ತಲೂ ಸಾಕಷ್ಟು ಧೂಳು ಅಂಟಿಕೊಂಡು, ಬಹಳ ಕಾಲದಿಂದ ಒಂದು ಸ್ಪರ್ಶಕ್ಕಾಗಿ ಈ ಪೆಟ್ಟಿಗೆ ಕಾದು ಕುಳಿತಂತೆ ಕಾಣುತ್ತಿತ್ತು. ಧೂಳು ಝಾಡಿಸಿ ಒಳಗೆ ತೆಗೆದರೆ, ಒಂದಾನೊಂದು ಕಾಲದ ಗ್ರೀಟಿಂಗ್ ಕಾರ್ಡುಗಳು… ಒಂದೆರಡಲ್ಲ, ನೂರಾರು! ಎಂದೋ ತುಂಬಿಸಿ ಮುಚ್ಚಿಟ್ಟಿದ್ದ ಆ ಪೆಟ್ಟಿಗೆ ಅಚಾನಕ್ಕಾಗಿ ಕೈಗೆ ಬಂದಾಗ ಮಳೆ ಮೋಡಕ್ಕೆ ಗರಿಬಿಚ್ಚಿದ ನವಿಲಾಗಿತ್ತು ಮನಸ್ಸು. ಎಷ್ಟು ಭಾವ, ಎಷ್ಟು ಬಣ್ಣ ಆ ಶುಭಾಶಯ ಪತ್ರಗಳಲ್ಲಿ. ಮೊದಲ ವರ್ಷದ ಹುಟ್ಟಿದ ದಿನಕ್ಕೆಂದು ಸೋದರಮಾವ ಕಳಿಸಿದ್ದ ಗೊಂಬೆ ಗ್ರೀಟಿಂಗ್ ಕಣ್ಣಿಗೆ ಬೀಳುತ್ತಿದ್ದಂತೆ ಆದ ಸಡಗರವನ್ನು ಬಣ್ಣಿಸುವುದಕ್ಕೆ ನಿಘಂಟುಗಳನ್ನೆಲ್ಲಾ ಕಿತ್ತು ಕುಡುಗಿದರೂ ಶಬ್ದಗಳು ಸಿಗಲಿಕ್ಕಿಲ್ಲ. ಎಂಥಾ ಮುದವಿತ್ತೇ, ಬಾಲ್ಯಕೆ…!

ಇನ್ನೇನು ಬಂತು ದೀಪಾವಳಿ… ಎನ್ನುವಾಗಲೇ ಶುರುವಾಗುತ್ತಿತ್ತು ಗ್ರೀಟಿಂಗ್ ಕಾರ್ಡುಗಳ ಭರಾಟೆ. ಅದಕ್ಕಿಂತ ಮೊದಲಿನ ಹಬ್ಬಗಳಿಗೆ ಇವನ್ನೆಲ್ಲಾ ಕಳಿಸುವ ವಾಡಿಕೆ ಇರಲಿಲ್ಲ. ದೀವಳಿಗೆಯ ಹಬ್ಬದ ನಂತರ ಕ್ರಿಸ್ಮಸ್, ಹೊಸವರ್ಷ ಮತ್ತು ಸಂಕ್ರಾಂತಿ, ಅಪರೂಪಕ್ಕೆ ಯುಗಾದಿ- ಇವಿಷ್ಟು ಹಬ್ಬಗಳಿಗೆ ಶುಭಾಶಯ ಪತ್ರಗಳ ವಿನಿಮಯ ಜೋರು. ಈ ಸಾರ್ವತ್ರಿಕ ದಿನಗಳನ್ನು ಬಿಟ್ಟರೆ ಬೇರೆ ಸಂದರ್ಭಗಳೂ ಇರುತ್ತಿದ್ದವು ಗ್ರೀಟಿಂಗ್ ಕಾರ್ಡುಗಳನ್ನು ಕೊಡುವುದಕ್ಕೆ. ಹುಟ್ಟುಹಬ್ಬ, ಮದುವೆ ದಿನದಂಥ ಜನಪ್ರಿಯ ಸಂದರ್ಭಗಳ ಹೊರತಾಗಿ, ಸಾರಿ, ಮಿಸ್ ಯು, ಸಂತಾಪ, ಬೇಗ ಗುಣವಾಗಲಿ, ಧನ್ಯವಾದ, ಅಭಿನಂದನೆ, ಪ್ರಯಾಣಕ್ಕೆ ಶುಭವಾಗಲಿ, ಓಹ್! ಸ್ವಲ್ಪ ತಡವಾಯ್ತು, ಅಯ್ಯೊ! ಮರೆತೇಬಿಟ್ಟಿದ್ದೆ- ಮುಂತಾದ ಪತ್ರಗಳು ಎಂಥೆಂಥ ಆಪ್ತ ಕ್ಷಣಗಳನ್ನು ಕಟ್ಟಿಕೊಡುತ್ತಿದ್ದವಲ್ಲ.

ಈ ಎಲ್ಲದಕ್ಕಿಂತಲೂ ಮೋಜಿನ ಸಂದರ್ಭವೆಂದರೆ ವ್ಯಾಲೆಂಟೈನ್ ದಿನ. ಗ್ರೀಟಿಂಗ್ ಕಾರ್ಡುಗಳ ಅಂಗಡಿಗಳ ಮುಂದಿನ ಜಾತ್ರೆಯ ವರ್ಣನೆಯೇ ವರ್ಣಮಯ. ನೂರಾರು ಕಾರ್ಡುಗಳನ್ನು ತಡಕಿ ಒಂದನ್ನೂ ಖರೀದಿಸಲಾಗದೆ ಒದ್ದಾಡುವವರು, ಒಬ್ಬರೇ ನಾಲ್ಕಾರು ಕಾರ್ಡುಗಳನ್ನು ಖರೀದಿಸುವವರು, ಸ್ನೇಹಿತರ ಮುಂದೆ ಎದ್ದು ಬರಲಾಗದೆ ಕದ್ದು ಬರುವವರು, ಉಳಿದವರ ಕುತೂಹಲ ಕೆರಳಿಸಲೆಂದೇ ರಾಜಾರೋಷ ಬರುವವರು, ಟೈಂಪಾಸ್ ಮಾಡಲೆಂದೇ ಬರುವವರು ಕೆಲವರಾದರೆ, ಇಲ್ಲೇ ಯಾರಾದರೂ ಸಿಗಬಾರದೇಕೆ ಎಂಬ ಆಸೆ ಹೊತ್ತು ಬರುವವರೂ ಇದ್ದರು, ಅಲ್ಲೇ ಒಂದಿಷ್ಟು ಕಿರುನಗೆ, ಕುಡಿನೋಟಗಳ ವಿನಿಮಯ ಆಗುತ್ತಿದ್ದುದೂ ಸುಳ್ಳಲ್ಲ… ಇಂಥವನ್ನೆಲ್ಲಾ ನೋಡಿ ಪರಲೋಕದಲ್ಲಿರುವ ಸಂತ ವ್ಯಾಲೆಂಟೈನ್ಗೆ ಎಷ್ಟೊಂದು ಸಂತೋಷವಾಗಿರಬೇಡ! ಆದರೆ ಒಬ್ಬರೇ ನಾಲ್ಕಾರು ವ್ಯಾಲೆಂಟೈನ್ ಕಾರ್ಡು ಖರೀದಿಸುವುದನ್ನು ಕಂಡಾಗ ಮಾತ್ರ ನಗು ತಡೆಯಲಾಗುತ್ತಿರಲಿಲ್ಲ. ಮಾತ್ರವಲ್ಲ, ಈ ವ್ಯಕ್ತಿ ಅದನ್ನು ಯಾರಾರಿಗೆ ಕೊಡಬಹುದು, ಕಳೆದ ವರ್ಷ ಯಾರಿಗೆಲ್ಲ ಕೊಟ್ಟಿದ್ದರು ಎಂಬುದರ ಲೆಕ್ಕಾಚಾರ ಇನ್ನೂ ಗಮ್ಮತ್ತಿನದ್ದಾಗಿರುತ್ತಿತ್ತು.

ಶುಭಾಶಯ ಪತ್ರಗಳು ಎಲ್ಲೆಡೆಯೂ ದೊರೆಯುತ್ತಿದ್ದ ಕಾಲವದು. ಹೊಸ ವರ್ಷದ ದಿನದಂದು ಹತ್ತಿಪ್ಪತ್ತು ಕಾರ್ಡುಗಳ ಕಟ್ಟೇ ಕೈಯಲ್ಲಿರುತ್ತಿತ್ತು. ಹೀಗೆ ಕಳ್ಳೆಪುರಿಯಂತೆ ಹಂಚುವುದಕ್ಕಾಗಿ ದುಬಾರಿ ಬೆಲೆಯ ಕಾರ್ಡುಗಳ ಬದಲಿಗೆ ಒಂದು ರೂಪಾಯಿಯ ಕಾರ್ಡುಗಳು ದೊರೆಯುತ್ತಿದ್ದವು. ನಿಗದಿತ ಸ್ಥಳಗಳಲ್ಲಿ ತಳ್ಳು ಗಾಡಿಯಲ್ಲಿ ಇಂಥ ಬಜೆಟ್ ಕಾರ್ಡುಗಳ ಮಾರಾಟ ನಡೆಯುತ್ತಿತ್ತು. ಈ ಕಾರ್ಡುಗಳ ಒಳಗೇನೂ ಬರೆದಿರುತ್ತಿರಲಿಲ್ಲ, ಖಾಲಿ. ಕೊಡುವವರು ಏನೂ ತುಂಬಿಸಿಕೊಳ್ಳಬಹುದಿತ್ತು. ಅದರೊಳಗೇ ಕಲೆ ಅರಳಿಸುವ ಪ್ರತಿಭಾವಂತರೂ ಇರುತ್ತಿದ್ದರು. ಇನ್ನು ಯಾರಿಗೋ ಬರೆದಿದ್ದನ್ನು ಯಾರಿಗೋ ಕೊಟ್ಟು- ಆ ಫಜೀತಿಗಳೆಲ್ಲ ಬ್ಯಾಡ ಬಿಡಿ!

ದೀಪಾವಳಿಗೆ, ಹೊಸವರ್ಷಕ್ಕೆ ಯಾರೆಲ್ಲಾ ಕಾರ್ಡು ಕೊಟ್ಟಿದ್ದಾರೆ ಅಥವಾ ಕಳುಹಿಸಿದ್ದಾರೆ- ಅವರಿಗೆಲ್ಲಾ ಪರತ್ ಪಾವತಿ ಮಾಡುವುದು ಸಂಕ್ರಾಂತಿಯಲ್ಲಿ. ಹೌದು, ಸಂಕ್ರಾಂತಿಗೆಂದೇ ನಮ್ಮನೆಯಲ್ಲಿ ಕನಿಷ್ಟ ೨೫-೩೦ ಕಾರ್ಡುಗಳನ್ನು ಖರೀದಿಸಿ ತರುತ್ತಿದ್ದರು. ಆಗ ಒಂದು ಶನಿವಾರ-ಭಾನುವಾರ ಇದೇ ಕೆಲಸ. ಅವೆಲ್ಲದಕ್ಕೂ ಒಳಗೆ ಆಯಾ ಮನೆಮಂದಿಯ ಹೆಸರನ್ನೆಲ್ಲಾ ಬರೆಯಬೇಕು, ಶುಭಾಶಯ ತಿಳಿಸಬೇಕು, ಕೆಳಗೆ ನಮ್ಮನೆಯ ಸದಸ್ಯರುಗಳ ಹಾಜರಿ ಹಾಕಬೇಕು, ಜೊತೆಗೊಂದು ಸಣ್ಣ ಕ್ಷೇಮ ಸಮಾಚಾರದ ಪತ್ರ, ಇದಿಷ್ಟರ ಜೊತೆಗೆ ಮುದ್ದಾದ ಪುಟ್ಟ ಲಕೋಟೆಯಲ್ಲಿ ಹತ್ತಾರು ಕುಸುರೆಳ್ಳು, ಇವೆಲ್ಲವನ್ನೂ ದೊಡ್ಡ ಲಕೋಟೆಯಲ್ಲಿ ಹಾಕಿ, ಮೇಲೆ ವಿಳಾಸಗಳನ್ನು ಬರೆದು, ಅಂಚೆಚೀಟಿ ಹಚ್ಚಿ ಸೋಮವಾರ ಬೆಳಗ್ಗೆ ಅಂಚೆ ಡಬ್ಬಿಯ ಬಾಯಿಗೆ ತುರುಕಿದರೆ, ಉಸ್ಸಪ್ಪಾ! ಆದರೆ ಎಷ್ಟೊ ವರ್ಷಗಳ ಕಾಲ ತಪ್ಪದೆ ನಡೆದ ಈ ರಿವಾಜಿನಿಂದ ಸಂಬಂಧಗಳನ್ನು ಗಟ್ಟಿ ಮಾಡುವ ಪಾಠ ನಮಗೆಲ್ಲ ಆಗಿದ್ದು ಸತ್ಯ. ಮಾತ್ರವಲ್ಲ, ದೀಪಾವಳಿ ಮತ್ತು ಹೊಸವರ್ಷಕ್ಕೆ ಯಾರದೆಲ್ಲ ಶುಭಾಶಯ ಪತ್ರಗಳು ಬರುತ್ತವೆ ಎಂದು ಅಂಚೆಯಣ್ಣನನ್ನು ಕಾಯುವುದು ತೀರಾ ಪ್ರಿಯವಾದ ಸಂಗತಿಯಾಗಿತ್ತು.

ಈ ಶುಭಾಶಯ ಪತ್ರಗಳ ಒಳಗಿನ ಸಾಲುಗಳ ಬಗ್ಗೆ ಹೇಳಲೇಬೇಕು. ನಾಲ್ಕಾರು ಸಾಲುಗಳಲ್ಲೇ ಬಹಳ ಆಪ್ತವಾದ ಕವನಗಳನ್ನು ಕಟ್ಟಲಾಗುತ್ತಿತ್ತು ಅಲ್ಲಿ. ಅವುಗಳನ್ನು ಬರೆಯುತ್ತಿದ್ದ ಕವಿಗಳು ಸದಾ ಅಜ್ಞಾತರೇ ಆಗಿದ್ದರೂ ಅವರ ಎಷ್ಟೊಂದು ಸಾಲುಗಳು ಇಂದಿಗೂ ನೆನಪಿಗೆ ಬರುತ್ತವೆ.

“ದೀಪ ಬೆಳಗಲಿ ನಗುವ/ ದೀಪ ಬೆಳಗಲಿ ಮೊಗವ/ ದೀಪ ಬೆಳಗಲಿ ಎಲ್ಲರೊಳಗಿನಾ ಮಗುವ/ ದೀಪ ತೊಡೆಯಲಿ ತಮವ/ ದೀಪ ಹರಡಲಿ ಘಮವ/ ದೀಪ ಅರಳಿಸಲೆಲ್ಲರೊಳಗಿನಾ ಸುಮವ”

“ಯಾವ ಗುಡಿಯೆ ಇರಲಿ, ಭಕ್ತಿ ತರಲಿ/ ಯಾವ ಧರ್ಮವೇ ಇರಲಿ, ಬೆಳಕು ತರಲಿ/ ಯಾವ ಹಬ್ಬವೆ ಬರಲಿ, ಶಾಂತಿ ತರಲಿ/ ಸಾಲು ದೀಪಗಳಿರಲಿ, ಸುಖವ ತರಲಿ”

ಮುಂತಾದ ದೀಪಾವಳಿಯ ಸರಳ, ಸುಂದರ ಹಾರೈಕೆಗಳು ಇರುತ್ತಿದ್ದವು. ಇನ್ನು ಸಂಕ್ರಾಂತಿಯ ಕಾರ್ಡುಗಳಲ್ಲಿ ಕುಸುರೆಳ್ಳಿನ ಜೊತೆಗೆ ಅನಾಮಿಕ ಕವಿಗಳ ಕವಿತೆಯ ಘಮ ಜೋರಾಗಿಯೇ ಸೇರುತ್ತಿತ್ತು.

“ಎಳ್ಳು ಬೆಲ್ಲದ ಸವಿಯನೆಲ್ಲ ಒಲವಿನಲ್ಲಿ ಬೆರೆಸಲಿ/ ನೂರು ಕಾಲ ನಮ್ಮನೆಲ್ಲ ನೈಜ ಸುಖದಿ ಇರಿಸಲಿ”

“ಮಾತಿನಂತೆ ಮನವಿರಲಿ, ನುಡಿಯಂತೆ ನಡೆಯಿರಲಿ/ ಎಳ್ಳು-ಬೆಲ್ಲ ಮೆಲ್ಲುವಲ್ಲಿ ನೆನಪೊಂದು ಮೂಡಿ ಬರಲಿ”

“ಎಳ್ಳಿನೊಡನೆ ಬೆಲ್ಲ ಬೆರೆಯೆ ಸಮಪಾಕದ ಬದುಕದು/ ಕಹಿಯ ಮರೆತು ಸಿಹಿಯ ಸವಿವ ಬುದ್ಧಿ ಬಾಳ್ಗೆ ಬೆಳಕದು”

ಇಂಥವು ಲೆಕ್ಕವಿಲ್ಲದಷ್ಟು ಇರುತ್ತಿದ್ದವು. ಆಗಿನ ದಿನಗಳಲ್ಲಿ ಇಂಥವನ್ನು ಬರೆದಿಟ್ಟುಕೊಳ್ಳುವ ಹವ್ಯಾಸಿಗಳೂ ಇದ್ದರು. ಆ ಹಳೆಯ ಶುಭಾಶಯ ಪತ್ರಗಳನ್ನು ಈಗ ತೆರೆದು ಓದಿದರೂ ನೆನಪುಗಳು ತಂತಾನೆ ತಾಜಾ ಆಗುತ್ತವೆ. ಅವುಗಳನ್ನು ಕಳಿಸಿದವರು ಈಗ ಇಲ್ಲದಿದ್ದರೆ, ಅರಿವಿಲ್ಲದೆಯೇ ಕಣ್ಣು ತೇವಗೊಳ್ಳುತ್ತದೆ. ಇನ್ನು ಗೆಳೆಯ-ಗೆಳತಿಯ ಪತ್ರಗಳಾದರೆ… ಮಧುರ ಯಾತನೆ!

ಶುಭಾಶಯ ಪತ್ರಗಳಲ್ಲೂ ಸಂಬಂಧಗಳ ಸಾಲನ್ನು ಸೂಚಿಸುವಂಥದ್ದು ಇರುತ್ತಿದ್ದವು. ಅಪ್ಪನಿಗೆ, ಅಮ್ಮನಿಗೆ, ಮಗಳಿಗೆ, ಮಗನಿಗೆ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಿಗೆ, ಸೋದರ ಸಂಬಂಧಿಗಳಿಗೆ (ಈಗಿನ ಭಾಷೆಯಲ್ಲಿ ʻಕಸಿನ್ʼ), ಗಂಡನಿಗೆ, ಹೆಂಡತಿಗೆ, ಮಿತ್ರರಿಗೆ, ಶಿಕ್ಷಕರಿಗೆ, ನೆರೆ-ಹೊರೆಯವರಿಗೆ- ಹೀಗೆ ಪ್ರತಿ ಸಂಬಂಧವಾಚಕಗಳಿಗೂ ಪ್ರತ್ಯೇಕ ಕಾರ್ಡ್ಗಳನ್ನು ಕಾಣಬಹುದಿತ್ತು. ಇವೆಲ್ಲಾ ನಮ್ಮ ಬಜೆಟ್ ಶುಭಾಶಯ ಪತ್ರಗಳಲ್ಲಿ ಸಿಗುತ್ತಿರಲಿಲ್ಲ. ಅಂಥವಕ್ಕಾಗಿ ಆರ್ಚೀಸ್, ಹಾಲ್ಮಾರ್ಕ್, ಅಮೆರಿಕನ್ ಗ್ರೀಟಿಂಗ್ಸ್ ಮುಂತಾದ ಅಪ್ಪಪ್ಪನ ಬೆಲೆಯ ಶುಭಾಶಯ ಪತ್ರಗಳೇ ಗತಿ. ಇಂಥ ದುಬಾರಿ ಕಾರ್ಡುಗಳ ಅಂಗಡಿಗಳೇ ಮನಮೋಹಕವಾಗಿದ್ದು, ಅಲ್ಲೇನೂ ಕೆಲಸವಿಲ್ಲದಿದ್ದರೂ ಅದರೊಳಗೆ ಸುಮ್ಮನೆ ಅಡ್ಡಾಡಿ, ಸಿಕ್ಕ ಕಾರ್ಡುಗಳನ್ನೆಲ್ಲಾ ಓದುತ್ತಾ ಸಮಯ ಕಳೆಯುತ್ತಿದ್ದೆವು.

ಇದನ್ನೂ ಓದಿ: ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!

ಈ ದುಬಾರಿ ಕಾರ್ಡುಗಳಲ್ಲಂತು ಸಿಕ್ಕಾಪಟ್ಟೆ ನಮೂನೆಗಳು- ಹ್ಯಾಪಿ ಬರ್ತ್ ಡೇ ಎಂದು ಹಾಡೇಳುವ ಕಾರ್ಡುಗಳು, ಪತ್ರ ಬಿಡಿಸುತ್ತಿದ್ದಂತೆ ಉಡುಗೊರೆಯ ಚಿತ್ರವೊಂದು ಧುತ್ತನೆ ಎದ್ದು ಬರುವ ಪಾಪ್ ಅಪ್ ಕಾರ್ಡುಗಳು, ಮಡಿಸಿದ್ದನ್ನು ಬಿಡಿಸುತ್ತಲೇ ಹೋಗುವಂಥ ಮೋಜಿನವು, ಕೈಯಲ್ಲೇ ಮಾಡಿದಂಥವು, ಚಂದದ ವರ್ಣ ಚಿತ್ರಗಳನ್ನು ಹೊಂದಿದವು, ಓರಿಗಾಮಿ ಅಥವಾ ಕ್ವಿಲ್ಲಿಂಗ್ ಹೊಂದಿದ ಕಲಾ ಪತ್ರಗಳು, ಅಥವಾ ಕಳಿಸಿದವರದ್ದು ಇಲ್ಲವೇ ಸ್ವೀಕರಿಸುವವರ ಫೋಟೊ ಕಾರ್ಡುಗಳು- ಹೇಳುತ್ತಾ ಹೋದರೆ ಅದರದ್ದೇ ಒಂದು ಪ್ರಪಂಚ.

ಬಿಡಿ, ಈಗ ಪ್ರಪಂಚ ಬದಲಾಗಿದೆ. ಯಾವುದೇ ಸಂದರ್ಭಕ್ಕೂ ಯಾವುದೋ ಒಂದು ಸಂದೇಶವನ್ನು ನಮ್ಮ ಫೋನಲ್ಲಿರುವ ಎಲ್ಲರಿಗೂ ತಳ್ಳಿ ಅಥವಾ ಸ್ಟೇಟಸ್‌ಗೆ ಅಂಟಿಸಿ ಕೈ ತೊಳೆದುಕೊಳ್ಳುವ ದಿನಗಳಿವು. ಯಾವುದೇ ಆಪ್ತ, ಆರ್ದ್ರ ಭಾವಗಳನ್ನೂ ಎಬ್ಬಿಸದೆ, ಈ ಸಂದೇಶಗಳನ್ನು ಫೋನಿಂದ ಖಾಲಿ ಮಾಡುವುದು ಹೇಗೆ ಎಂಬ ತಲೆಬಿಸಿಯನ್ನಷ್ಟೇ ತರಬಲ್ಲ ಶುಭಾಶಯಗಳಿವು. ಇನ್ನು ಯಾವುದೋ ದೇಶದಲ್ಲಿರುವ ಸೋದರನಿಗೆ ರಾಖಿ ಕಳಿಸಬೇಕೆ? ಅದಕ್ಕಾಗಿಯೇ ಇರುವ ಆಪ್ ಅಥವಾ ವೆಬ್‌ಸೈಟ್‌ಗಳಲ್ಲಿ ಹಣ ಕೊಟ್ಟು, ಬೇಕಾದ್ದನ್ನು ಕ್ಲಿಕ್ಕಿಸಿದರಾಯಿತು. ಅಲ್ಲಿರುವ ಸೋದರನಿಗೆ ಒಂದು ಶುಭಾಶಯ ಪತ್ರ, ನೀವು ಆರಿಸಿದ ರಾಖಿ, ಅರಿಶಿನ, ಕುಂಕುಮ, ಅಕ್ಷತೆ ಮತ್ತು ಬಾಯಿ ಸಿಹಿಗೆ ಚಾಕಲೇಟ್- ಇವಿಷ್ಟು ಅಚ್ಚುಕಟ್ಟಾಗಿ ತಲುಪುತ್ತವೆ. ಹೀಗೆ ಈಗಲೂ ಅಪರೂಪಕ್ಕೆ ಒಮ್ಮೊಮ್ಮೆ ಗ್ರೀಟಿಂಗ್ ಕಾರ್ಡುಗಳು ಬಳಕೆಯಾಗುವುದಿದೆ. ಆದರೆ ಶುಭಾಶಯ ಪತ್ರಗಳ ನೈಜ ಸಂಭ್ರಮ ಏನೆಂದೇ ಅರಿಯದ ಅಥವಾ ಅರಿತೂ ಮರೆತಿರುವ ತಲೆಮಾರುಗಳ ನಡುವೆ, ದೀಪಾವಳಿಯ ಹೊಸಿಲಲ್ಲಿ ಹೀಗೊಂದು ಶುಭಾಶಯದ ಲಹರಿ.

ಇದನ್ನೂ ಓದಿ: ದಶಮುಖ ಅಂಕಣ: ಕೆಡುಕು ಸುಟ್ಟ ಬೂದಿಯಿಂದ ಒಳಿತು ಎದ್ದು ಬರಲಿ

Exit mobile version