Site icon Vistara News

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

dashamukha column madness

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2024/04/WhatsApp-Audio-2024-04-23-at-12.29.12-PM.mp3

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Exit mobile version