Site icon Vistara News

ದಶಮುಖ ಅಂಕಣ: ಮಳೆಯೆಂಬ ಮಹಾಕಾವ್ಯದಲಿ ಮಿಂದು…

rain in village

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/07/WhatsApp-Audio-2023-07-04-at-074.mp3

ಯಾಕೋ ಮಳೆಯ ಬಗ್ಗೆ ಬರೆದಷ್ಟಕ್ಕೂ ಹನಿ ಕಡಿಯುವುದೇ ಇಲ್ಲ. ಈಗಂತೂ ಆಷಾಢ. ಆಗಸದಲ್ಲಿ ಆಷಾಢದ ಮೋಡಗಳು ಕವಿಯುತ್ತಿದ್ದಂತೆ ಮಳೆಯೆಂಬ ಕಾವ್ಯ ಭೋರ್ಗರೆಯುವುದಕ್ಕೆ ಮೊದಲಾಗುತ್ತದೆ. ಯಾವುದೇ ಹಬ್ಬ-ಹರಿದಿನ, ಕಾರ್ಯ-ಖಟ್ಳೆಗಳ ಉಸಾಬರಿ ಇಲ್ಲದೆ, ತನ್ನಷ್ಟಕ್ಕೆ ಶ್ರುತಿ ಹಿಡಿದು ಮಳೆ ಸುರಿಯುವ ಕಾಲ. ಪ್ರಣಯಿಗಳಿಗೆ ಮನಸೆಂಬ ನವಿಲು ಗರಿಗೆದರುವ ದಿನಗಳಾದರೆ, ಹೊಸಜೋಡಿಗಳಿಗೆ ವಿಪ್ರಲಂಭ ಶೃಂಗಾರದ ಕಾಲ. ನಿಸರ್ಗಪ್ರಿಯರಿಗೆ ನಿರೀಕ್ಷೆಯ ಸಮಯವಾದರೆ, ಕವಿ ಮನಸ್ಸುಗಳಿಗೆ ಕೋಡಿ ಬೀಳುವ ಕಾಲ. ಆದರೆ ಮಳೆಗೆ ಮಾತ್ರ ಆಷಾಢವೆಂಬುದು ಬಿಡುವಿರದ ಪರ್ವಕಾಲ. ಇಂಥ ಹೊತ್ತಿನಲ್ಲಿ ಮಳೆ ಕುರಿತಾದ ಕಾವ್ಯಗಳಲ್ಲಿ ನೆನೆದು ನೀರಾಗುವ ಬಯಕೆ ಕಾಡುತ್ತಿದೆ.

ಒಂದಾನೊಂದು ಕಾಲದಿಂದ ಹಿಡಿದು ಇಂದಿನವರೆಗೂ ಆವರಿಸಿಕೊಂಡಿರುವ ಕವಿರತ್ನ ಕಾಳಿದಾಸನಿಂದ ತೊಡಗಿ, ತೀರಾ ಇತ್ತೀಚಿನ ಕವಿಗಳಿಗೂ ಮಳೆಯೆಂದರೆ ಮುಗಿಯದ ಮಾಯೆ. ಹಾಗೆಂದೇ, ʻಆಷಾಢಸ್ಯ ಪ್ರಥಮ ದಿವಸೇ…ʼ ಎಂದು ಆರಂಭವಾಗುವ ಕಾಳಿದಾಸನ ಮೇಘದೂತ ಕಾವ್ಯ ಇಂದು ನೆನಪಾಗುತ್ತಿದೆ. ಶಾಪಗ್ರಸ್ತನಾಗಿ ಭುವಿಗಿಳಿದ ಯಕ್ಷನೊಬ್ಬ ಅಲಕಾವತಿಯಲ್ಲಿರುವ ತನ್ನ ಪ್ರಿಯೆಗೆ ಮೇಘರಾಜನನ್ನೇ ದೂತನನ್ನಾಗಿಸಿಕೊಂಡು ಸಂದೇಶ ಕಳುಹಿಸುವುದನ್ನು ವರ್ಣಿಸುವ ಈ ಕಾವ್ಯಲಹರಿ ಯಾರನ್ನೂ ಪುಳಕಗೊಳಿಸೀತು. ಹೌದು, ಕುಬೇರನ ಸೇವಕನಾಗಿದ್ದ ಯಕ್ಷನೊಬ್ಬನಿಗೆ ತನ್ನೊಡೆಯನಿಗೆ ದಿನವೂ ಪೂಜೆಗೆಂದು ಹೂವು ತರುವ ಕೆಲಸ. ಆದರೆ ಈ ಕೆಲಸಕ್ಕೆಂದು ಮುಂಜಾನೆಯ ಹೊತ್ತು ಮನದನ್ನೆಯನ್ನು ಅಗಲಲಾರದೆ, ಕರ್ತವ್ಯಚ್ಯುತನಾದ. ಇದರಿಂದ ಕುಪಿತನಾದ ಕುಬೇರ, ʻನೀನು ಯಾರನ್ನು ಒಂದರೆಕ್ಷಣ ಅಗಲಿರಲಾರೆಯೋ, ಆಕೆಯಿಂದ ಒಂದು ವರ್ಷ ದೂರವಿರುʼ ಎಂದು ಶಾಪವಿತ್ತ. ಯಕ್ಷ ತನ್ನ ಪ್ರಭುವನ್ನು ಕಾಡಿದ-ಬೇಡಿದ; ಆದರೆ ವರ್ಷಾಂತ್ಯದೊಳಗೆ ಶಾಪಾಂತ್ಯವಿಲ್ಲ ಎಂದಾಯಿತು.

ಭುವಿಗಿಳಿದ ಯಕ್ಷ ರಾಮಗಿರಿಯಲ್ಲಿ ಪರ್ಣಕುಟಿಯನ್ನು ಕಟ್ಟಿಕೊಂಡು ವಾಸಿಸತೊಡಗಿದ. ಕಾಂತಾವಿಯೋಗದ ಒಂದೊಂದು ಕ್ಷಣವೂ ಆತನಿಗ ಪಾಲಿಗೆ ಒಂದೊಂದು ಯುಗವಾಯಿತು. ಅಷ್ಟೆ, ಶೋಕವೇ ವಾಲ್ಮೀಕಿಯ ಬಾಯಲ್ಲಿ ಶ್ಲೋಕವಾದಂತೆ, ಯಕ್ಷನ ಮಧುರಯಾತನೆಯೇ ಕಾಳಿದಾಸನಲ್ಲಿ ಕಾವ್ಯಕೋಡಿಯಾಗಿ ಹರಿಯಿತು. ಎಂಟು ತಿಂಗಳು ಕಳೆಯುವಷ್ಟರಲ್ಲಿ ಆತನ ಮುಂಗೈಯಲ್ಲಿದ್ದ ಚಿನ್ನದ ಕಡಗ ಮೊಳಕೈ ಮೇಲೇರುವಷ್ಟು ಸೊರಗಿದ ಹೊತ್ತಲ್ಲೇ ಬಂತಲ್ಲ ಆಷಾಢದ ಪ್ರಥಮ ದಿನ… ಆಗಲೇ ಆಗಸದ ಭರ್ತಿ ಮೋಡಗಳು ಆವರಿಸಿಕೊಳ್ಳಬೇಕೆ! ದೊಡ್ಡ ಆನೆಯೊಂದು ಕ್ರೀಡಿಸುತ್ತಿರುವ ಪರಿಯಲ್ಲೇ ಈ ಮೋಡಗಳು ಢಿಕ್ಕಿ ಹೊಡೆದಂತೆ ಕಂಡವು ಈ ತಪ್ತನ ಕಣ್ಣಿಗೆ. ಆ ಕ್ಷಣದಲ್ಲೇ ದೂರದ ಅಲಕೆಯಲ್ಲಿರುವ ತನ್ನ ನಲ್ಲೆಗೆ ಸಂದೇಶ ತಲುಪಿಸುವ ಹರಿಕಾರನೊಬ್ಬ ಆತನಿಗೆ ಕಂಡಿದ್ದ ಆ ಮೋಡಗಳಲ್ಲಿ. ಮೇಘದೂತದ ಉದ್ದಕ್ಕೂ ಕಾವ್ಯಪ್ರಿಯರಿಗೆ ಸವಿಯಲು ದೊರೆಯುವುದು ವಿಪ್ರಲಂಭ ಶೃಂಗಾರದ ರಸಪಾಕ. ಅಲಕಾನಗರಿಗೆ ಹೋಗುವ ದಾರಿ, ಹೋದ ಮೇಲೆ ತನ್ನ ಮನೆಯನ್ನು, ಮನದನ್ನೆಯನ್ನು ಗುರುತಿಸುವ ರೀತಿ… ಎಲ್ಲದರ ಸರಸ ಚಿತ್ರಣವನ್ನು ನೀಡುವ ಯಕ್ಷ, ಓದುಗರ ಭಿತ್ತಿಯಲ್ಲಿ ಭಾವಗಳ ಚಿತ್ತಾರ ಮೂಡಿಸುತ್ತಾನೆ. ಅಂತೂ ಆಗಿನಿಂದ ಈಗಿನವರೆಗೂ ಆಷಾಢಕ್ಕೂ ವಿರಹಕ್ಕೂ ಮಧುರವಾದ ನಂಟು!

ಮೋಡಗಳಲ್ಲಿ ಪ್ರಾಣಿ, ಪಕ್ಷಿ, ಮುಖ ಮುಂತಾದ ಏನೇನೋ ಆಕೃತಿಗಳನ್ನು ಹುಡುಕುವುದನ್ನು ಎಲ್ಲರೂ ಮಾಡುತ್ತೇವೆ. ಆದರೆ ನಮ್ಮ ಕಾವ್ಯಾನಂದರು ಒಂದು ಹೆಜ್ಜೆ ಮುಂದೆಯೇ ಇದ್ದಾರೆ- ʻಮೋಡಗಳ ಜಡೆ ಬಿಚ್ಚಿ ಮೈದೊಳೆದುಕೊಳುತಿಹಳು/ ಬಯಲ ಭಾಮಿನಿ ಜಗದ ಮಣೆಯ ಮೇಲೆ/ ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ/ ಇದಕೆ ಜನವೆನ್ನುವುದು ಮಳೆಯ ಲೀಲೆʼ ಎನ್ನುತ್ತಾ ಜಗತ್ತನ್ನೇ ಮಣೆಯಾಗಿಸಿ, ಬಯಲನ್ನು ಭಾಮಿನಿಯನ್ನಾಗಿ ಮಾಡುತ್ತಾರೆ. ಆಕೆಯ ಸ್ನಾನದ ಹೊತ್ತಿನಲ್ಲಿ ಮೇಘಾಚ್ಛಾದಿತ ಕೇಶರಾಶಿಯಿಂದ ಸುರಿಯುವ ನೀರೇ ಭೂಮಿಗೆ ಮಳೆ! ಇದೇ ಮಳೆ ಹನಿಗಳು ಜಿ.ಎಸ್.‌ ಶಿವರುದ್ರಪ್ಪನವರ ಕಣ್ಣಿಗೆ ಪಂಜರದಂತೆ ಕಾಣುತ್ತವೆ. ʻಮಳೆ ಹನಿಗಳ ಪಂಜರ! ದೈತ್ಯ ಸೆರೆಯ ಕಂಬಿಯೊಳಗೆ ಬಂತು ದೇವಕುಂಜರʼ ಎಂದು ʻಕೃಷ್ಣಶಕ್ತಿʼ ಎನ್ನುವ ಕವನದಲ್ಲಿ ಅವರು ಬಣ್ಣಿಸುತ್ತಾರೆ. ಕೃಷ್ಣನ ಹುಟ್ಟಿಗೆ ಪಂಜರ ಮಾತ್ರವಲ್ಲ, ಮಳೆಯೊಂದಿಗೂ ನಂಟಿದೆಯಲ್ಲ. ಎಚ್‌. ಎಸ್.‌ ವೆಂಕಟೇಶಮೂರ್ತಿ ಅವರ ಕೃಷ್ಣನ ಕವನಗಳಲ್ಲಿ ಮಳೆಯೊಂದು ಸುಂದರ ರೂಪಕ. ʻಇರುಳ ಸಮಯ ಸುರಿ ಮಳೆಯೊಳಗೆ/ ದೋಣಿಗಳಿಳಿದಿವೆ ಹೊಳೆಯೊಳಗೆʼ ಎನ್ನುತ್ತಾ ಇರುಳ ಮಳೆಯಲ್ಲೇ ಕೃಷ್ಣನನ್ನು ಹಂಬಲಿಸುತ್ತಾ ಹೊಳೆಗಿಳಿಯುವ ಗೋಪಿಕೆಯರಿಗೆ, ʻಸೆರಗೆ ಹಾಯಿ, ಹೃದಯವೆ ಹುಟ್ಟುʼ.

ಮಳೆಗೂ ಮೊದಲು ಬರುವ ಗಾಳಿಯ ಆರ್ಭಟದ ಬಗ್ಗೆ ಕರಾವಳಿ ಸೀಮೆಯ ಕವಿಗಳ ಕಾವ್ಯಗಳು ಅದ್ಭುತ ಚಿತ್ರಣಗಳನ್ನು ನೀಡಿವೆ. ಈ ಹೊತ್ತಲ್ಲಿ ಪಂಜೆ ಮಂಗೇಶರಾಯರ ʻತೆಂಕಣ ಗಾಳಿಯಾಟʼವನ್ನು ನೆನೆಯದಿರಲು ಸಾಧ್ಯವೇ? ಬಂತು ಬಂತು ಎನ್ನುತ್ತಾ ಕುತೂಹಲ ಕೆರಳಿಸುವ ಕವಿ, ತೆಂಕಣ ಗಾಳಿಯ ರಂಗಪ್ರವೇಶಕ್ಕೆ ಬೇಕಾದ ಪರಿಕರಗಳನ್ನು ಪ್ರಕೃತಿ ಅಣಿಗೊಳಿಸುವ ಪರಿಯನ್ನು ಸಚಿತ್ರವಾಗಿ ಬಣ್ಣಿಸಿದ್ದಾರೆ. ʻಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ/ ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ/ ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ/ ಅಬ್ಬರದಲಿ ಭೋರ್‌ ಭೋರನೆ ಗುಮ್ಮಿಸಿʼ ಬರುತ್ತವೆ ಮಾರುತಗಳು. ಇಡೀ ಕರಾವಳಿಯನ್ನು ಕಿತ್ತು-ಕುಡುಗಿ ದಾಂಗುಡಿ ಇಡುವ ಇವು ಮಾಡುವುದೇನು ಎಂದರೆ- ʻಪಡುವಣ ಮೋಡವ ಬೆಟ್ಟಕೆ ಗಟ್ಟಕೆ/ ಹೊಡೆತಟ್ಟುತ ಕೋಲ್‌ ಮಿಂಚನು ಮಿರುಗಿಸಿ/ ಗುಡುಗನು ಗುಡುಗಿಸಿ, ನೆಲವನು ನಡುಗಿಸಿ/ ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿʼ ಇವುಗಳ ಜೊತೆಗೆ ಜಡಿಮಳೆ, ಬಿರುಮಳೆಯನ್ನೂ ತರುತ್ತವೆ. ಅಕ್ಷರಶಃ, ಕಾವ್ಯದಲ್ಲೇ ರುದ್ರ-ರಮಣೀಯ ದೃಶ್ಯಗಳನ್ನು ಕವಿ ಸುಲಲಿತವಾಗಿ ಕೆತ್ತಿದ್ದಾರೆ. ಕಡೆಂಗೋಡ್ಲು ಶಂಕರಭಟ್ಟರ ʻಕಾರ್ಗಾಲದ ವೈಭವʼವೂ ಮಳೆಯ ಭವ್ಯವಾದ ವರ್ಣನೆಯನ್ನೇ ಮುಂದಿಡುತ್ತದೆ. ʻಕೆರೆಗಳನುಕ್ಕಿಸಿ ತೊರೆಗಳ ಸೊಕ್ಕಿಸಿ/ ಗುಡ್ಡವ ಬೆಟ್ಟವ ಕೊರೆಕೊರೆದು/ ಕಡಲಿನ ತೆರೆಗಳ ರಿಂಗಣಗುಣಿಯಿಸಿ/ ಮೊರೆ ಮೊರೆವುದದೋ ಸರಿ ಸರಿದುʼ ಎನ್ನುತ್ತಾ ಮಳೆಯಿಂದ ಒದ್ದೆಯಾದ ಮನದೊಳಗೇ ನಮ್ಮನ್ನು ನಿಲ್ಲಿಸಿಬಿಡುತ್ತಾರೆ ಕವಿ.

ಇದನ್ನೂ ಓದಿ: ದಶಮುಖ ಅಂಕಣ: ಮಳೆ ಕಾಣದೆ ಮೊರೆವ ಮನ!

ಮಳೆಗೂ ಎದೆಯ ಬನಿಗೂ ಸುಗಮ ಸಾಂಗತ್ಯವಿದೆ. ಲಯದ ಹರಿವಲ್ಲೇ ಕಾವ್ಯ ದರ್ಶನ ಮಾಡಿಸುವ ದ. ರಾ. ಬೇಂದ್ರೆ ಅವರು, ʻಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೆವು/ ಮಳೆಯೊಳಗೆ ಜಳಕ ಮಾಡೋಣ ನಾವೂನೂ/ ಮೋಡಗಳ ಆಟ ನೋಡೋಣʼ ಎಂದು ಕರೆಕರೆದು ನೆನೆಯುವ ಆಸೆ ಹುಟ್ಟಿಸುತ್ತಾರೆ. ಆದರೆ ಬಿ. ಆರ್.‌ ಲಕ್ಷ್ಮಣರಾಯರು ಮಳೆಯನ್ನು ಕರೆವಾಗಿನ ವರಸೆಯೇ ಬೇರೆ. ʻಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನಲ್ಲೆ ಬರಲಾಗದಂತೆ/ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ ಹಿಂದಿರುಗಿ ಹೋಗದಂತೆʼ ಎನ್ನುವ ತುಂಟ ಆಸೆ ಅವರದ್ದು. ಇನ್ನು ಚೆನ್ನವೀರ ಕಣವಿಯವರಿಗೆ ಮಳೆಯಲ್ಲೂ ಲಲಿತ ಲಯವೊಂದು ಕೇಳುತ್ತದೆ. ʻಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ಸೋ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತುʼ ಎನ್ನುವ ಅವರಿಗೆ ಸೋನೆಮಳೆಯ ಸೋ ಶ್ರುತಿ ಮಂಗಳರವದಂತೆ ಕೇಳುತ್ತದೆ. ʻಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತ್ತಿತ್ತುʼ ಎಂಬಂತೆ ಮಳೆಯಲ್ಲಿ ತೊಯ್ದ ಭುವಿಯನ್ನು ಅವರು ವರ್ಣಿಸುತ್ತಾರೆ. ದಾಂಪತ್ಯ ಕಾವ್ಯಗಳಲ್ಲಿ ಶೃಂಗಾರದ ಮಳೆಯನ್ನೇ ಕರೆಯುವ ಕೆ. ಎಸ್.‌ ನರಸಿಂಹಸ್ವಾಮಿ ಅವರ ಮಳೆ ಸ್ವಲ್ಪ ಭಿನ್ನ. ʻಬಾನ ಕಣ್ಣಿನ ತುಂಬಾ ನೀರಾಡಿತು/ ಮನೆಮನೆಯ ಬಾಗಿಲು ಮಳೆ ತಟ್ಟಿತು/ ಉತ್ತ ಮಣ್ಣಿನ ಕನಸು ಕೆನೆಗಟ್ಟಿತು/ ಶ್ರಾವಣ ಭಾದ್ರಪದ- ವರ್ಷ ಋತುʼ ಎನ್ನುತ್ತಾ ಇಡೀ ಮಳೆಗಾಲಕ್ಕೆ ಸಲ್ಲುವ ಕನಸೊಂದನ್ನು ಮುಂದಿಡುತ್ತಾರೆ.

ಜನಪದ ಸಾಹಿತ್ಯದಲ್ಲೂ ಮಳೆಹಾಡುಗಳಿಗೆ ಬರವಿಲ್ಲ. ʻಹುಯ್ಯೋ ಹುಯ್ಯೋ ಮಳೆರಾಯ/ ಬಾಳೆಯ ತೋಟಕೆ ನೀರಿಲ್ಲʼದಂಥ ಶಿಶುಗೀತೆಗಳು ಈಗಲೂ ಆಪ್ತವೆನಿಸುತ್ತವೆ, ʻಮಾಯದಂಥ ಮಳೆ ಬಂತಣ್ಣ ಮದಗಾದ ಕೆರೆಗೆʼ ಹಾಡಿನ ಉದ್ದಕ್ಕೂ ಮಳೆಯೆಂದರೆ ಕೇವಲ ಮಳೆಯಲ್ಲ, ಗಂಗಮ್ಮ ತಾಯಿ.

ಹೌದು, ಮಳೆಯೆಂಬುದು ಇಳೆಯೆಲ್ಲ ಅನುರಣಿಸುವ ಮಾಯೆ. ʻಸುರಿಯಲಿ ತಂಪೆರೆಯಲಿ ಜೀವನಪ್ರೀತಿಯ ಮಳೆ/ ಹರಿಯಲಿ ಭೋರ್ಗರೆಯಲಿ ಬತ್ತಿದೆದೆಗಳಲಿ ಹೊಳೆʼ ಎಂಬ ಕವಿವಾಣಿಯ ಆಶಯದಂತೆ- ಮನೆಗಳ ಮೇಲೆ ಮಾತ್ರವಲ್ಲ, ಮನಗಳ ಮೇಲೂ ಸುರಿಯಲಿ ಸೋನೆ. ಒಣ ಬದುಕಿನಿಂದ ಬರಡಾದ ಕೊರಡುಗಳು ಮತ್ತೆ ಕೊನರಲಿ. ಹಸಿರಿನ ಉನ್ಮಾದ ಹರಡಲಿ. ಬರಲಿ, ಮಳೆ ಬರಲಿ.

ಇದನ್ನೂ ಓದಿ: ದಶಮುಖ ಅಂಕಣ: ನೆರಳಲ್ಲಿ ಅರಳಿದ ಚಿತ್ರಗಳು

Exit mobile version