Site icon Vistara News

ದಶಮುಖ ಅಂಕಣ: ʻ… ನಿನ್ನ ಕಲೆಗೆ ಯಾವುದು ಭಾರʼ!

story1

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/05/WhatsApp-Audio-2023-05-23-at-085.mp3

ಅದು ಕೊನೆಯ ನಿಲ್ದಾಣವಾದ್ದರಿಂದ ಬಸ್ಸು ಖಾಲಿ ನಿಂತಿತ್ತು. ಹಾಳಾದ ರಸ್ತೆಯಲ್ಲಿ ತಾಸುಗಟ್ಟಲೆ ಕೆಂಪು ಬಸ್ಸನ್ನೋಡಿಸಿ ದಣಿದಿದ್ದ ಚಾಲಕ ಮತ್ತು ನಿರ್ವಾಹಕರು ಅಲ್ಲಿಯೇ ಸಮೀಪದ ಅಂಗಡಿಯಲ್ಲಿ ಚಹಾ ಹೀರುತ್ತಿದ್ದರು. ಮೂರು ವರ್ಷದ ಪೋರಿಯೊಂದಿಗೆ ಆತ ಆ ಖಾಲಿ ಬಸ್ಸು ಹತ್ತಿದ್ದರು. ಹತ್ತಿದ ಒಂದೆರಡು ನಿಮಿಷಗಳವರೆಗೆ ಸುಮ್ಮನಿದ್ದ ಆ ಚಿಣ್ಣಿ, ‘ಅಪಾ, ಈ ಬಸ್ಯಾಕೆ ಹೋಗ್ತಾಯಿಲ್ಲ?’ ಎಂದು ಕೇಳಿದಳು. ಕಣ್ಣಳತೆಯ ದೂರದಲ್ಲೇ ಚಹಾ ಕುಡಿಯುತ್ತಾ ನಿಂತಿದ್ದ ಇಬ್ಬರನ್ನು  ತೋರಿಸಿದ ತಂದೆ, ಅವರಿಬ್ಬರೂ ಬರುವವರೆಗೆ ಈ ಬಸ್ಸು ಹೋಗುವುದಿಲ್ಲ ಎಂದರು. ‘ಅವುರ್ಯಾಕೆ ಬತ್ತಾಯಿಲ್ಲ?’ ಎಂದು ಕೇಳಿದಳು. ಅವರು ಚಹಾ ಕುಡಿದಾದ ಮೇಲೆ ಬರುತ್ತಾರೆಂದರು ತಂದೆ. ‘ಮತ್ತೆ…  ಇನ್ನೂ ಯಾಕೆ ಟೀ ಕುಡ್ದಿಲ್ಲ?’ ಎಂದೋ, ಬಸ್ಸು ಹತ್ತುತ್ತಿದ್ದ ಉಳಿದ ಪ್ರಯಾಣಿಕರೆಡೆಗೆ ನೋಡಿ ‘ಅವುರೆಲ್ಲಿಗ್ ಹೋಗ್ತರೆ?’ ಎಂದೋ  ಕೇಳುತ್ತಾ, ತನ್ನ ಪ್ರಶ್ನಿಸುವ ಕಾಯಕವನ್ನು ಆಕೆ ಮುಂದುವರಿಸಿದಳು. ಅವರಿವರ ಬಗ್ಗೆ ಇನ್ನೂ ಹೆಚ್ಚಿನ ವಿವರ ನೀಡದ ತಂದೆ, ಆ ಕೂಸಿಗೊಂದು ಕಥೆ ಹೇಳಲು ಪ್ರಾರಂಭಿಸಿದರು.

ಪ್ರತಿ ಮೂರ್ನಾಕು ನಿಮಿಷಗಳಿಗೊಮ್ಮೆ ‘ಅಪೋವ್! ಈ ಬಸ್ಸು ಯಾವಾಗೋಗ್ತದೆ?’ ಎಂದು ಕೇಳುತ್ತಿದ್ದವಳನ್ನು ಮತ್ತೆ ಕಥೆಯೆಡೆಗೆ ಸೆಳೆಯುತ್ತಿದ್ದರು ತಂದೆ. ಹೀಗೆಯೇ ಸುಮಾರು ಇಪ್ಪತ್ತು ನಿಮಿಷ ಕಳೆಯುವಷ್ಟರಲ್ಲಿ  ಅಂತೂ ಇಂತೂ ಬಸ್ಸು ಹೊರಟಿತು. ಅಷ್ಟರಲ್ಲಿ ಕಥೆ ಕೇಳುತ್ತಾ ಕಣ್ಣು ಬಾಡಿಸಿಕೊಂಡಿದ್ದ ಮಗು ನಿದ್ದೆಗೆ ಜಾರಿದ್ದಳು. ಅಪ್ಪನ ಮುಂದಿನ ಪ್ರಯಾಣ ಸರಾಗವಾಗಿ ಸಾಗಿತ್ತು!  ಅಂದು ಅಪ್ಪ ಕಥೆ ಹೇಳದಿದ್ದರೆ,  ಬಸ್ಸು ಹೊರಡುವುದನ್ನೇ ನಿರೀಕ್ಷಿಸುತ್ತಾ ಬೇಸರವಾಗಿ ಮಗು ರಗಳೆ ತೆಗೆಯುವುದು ನಿಶ್ಚಿತವಾಗಿತ್ತು. ಮುಂದಿನ ಪ್ರಯಾಣದಲ್ಲಿ ಅಪ್ಪ ಹಣ್ಣಾಗುವುದು ಖಾತ್ರಿಯಾಗಿತ್ತು. 

ಆ ಮಗುವೊಂದೇ ಏನು, ನಾವೆಲ್ಲಾ ಬಾಲ್ಯದಲ್ಲಿ ಕಥೆ ಕೇಳಿದವರೇ ಅಲ್ಲವೇ? ನಿದ್ದೆ ಮಾಡದವರಿಗೆ ಕಾಗಕ್ಕ ಗುಬ್ಬಕ್ಕನ ಕಥೆ, ಊಟ ಮಾಡದವರಿಗೆ ಚಂದಮಾಮನ ಕಥೆ, ಸ್ನಾನಕ್ಕೆ ಒಲ್ಲದ ಕೂಸುಗಳಿಗೆ ನದಿಯಲ್ಲಿ  ನೀರಾಡುವ ಕಥೆ, ಅಂಕೆಯಿಲ್ಲದ ಮಕ್ಕಳನ್ನು ತಿದ್ದಲು ಕಪಿ ಲಂಕೆ ಸುಟ್ಟ ಕಥೆ, ಔಷಧ ಕುಡಿಯದ ಮಕ್ಕಳಿಗೆ ಹನುಮಂತ ಸಂಜೀವಿನಿ ತಂದ ಕಥೆ, ಅಳುವ ಮಕ್ಕಳನ್ನು ನಗಿಸಲು ಭೀಮ-ಬಕಾಸುರನ ಕಥೆ, ‘ಕಥೆ ಹೇಳೂ’ ಎಂದೇ ಕಾಡುವ ಮಕ್ಕಳಿಗೆ ಇರುವೆಗಳು ಚೀಲದಲ್ಲಿಂದ ಒಂದೊಂದೇ ಬತ್ತ ಕಚ್ಚಿಕೊಂಡು ಹೋಗುವ ಕಥೆ… ಆ ಕಥೆ, ಈ ಕಥೆ, ಏನೇನೋ ಕಥೆಗಳು. ಆ ಪುಟ್ಟ ಜಗತ್ತನ್ನು  ಎಷ್ಟೊಂದು ವರ್ಣಮಯ ಆಗಿಸುತ್ತಿದ್ದವಲ್ಲ ಈ ಕಥೆಗಳು. ಅದರಲ್ಲೂ  ರಂಗುರಂಗಾಗಿ ಕಥೆ ಹೇಳುವ ಅಜ್ಜ-ಅಜ್ಜಿಯರಿದ್ದರೆ ಆ ಮಕ್ಕಳ ಪುಣ್ಯಕ್ಕೆ ಎಣೆಯುಂಟೇ? ನಾವು ಮಕ್ಕಳಾಗಿದ್ದಾಗ ನನ್ನ ಕಟ್ಟೆಮನೆಯ ಅಜ್ಜ  ನಮ್ಮ ಬಾಲಜಗತ್ತಿಗೆ ಬಣ್ಣ ಚೆಲ್ಲಿರದಿದ್ದರೆ ನಮ್ಮ ಮುಂದಿನ ಬದುಕು ಹೇಗಿರುತ್ತಿತ್ತು ಎಂದು ಎಷ್ಟೋ ಬಾರಿ ಯೋಚಿಸಿದ್ದಿದೆ. ಹಿರಿಯರ ಕಥೆಗಳನ್ನು ಕೇಳೀಕೇಳಿ, ಕೊನೆಗೆ ಮಕ್ಕಳು ತಮ್ಮದೇ ಕಥೆ ಕಟ್ಟಿ ದೊಡ್ಡವರನ್ನೇ ಮರುಳು ಮಾಡತೊಡಗಿದಾಗ, ಬೈಗುಳ ತಪ್ಪಿಸಿಕೊಳ್ಳಲೆಂದು ಸುಳ್ಳೇ ಕಥೆ ಸೃಷ್ಟಿಸುವಾಗ- ಹೀಗೆ ನೆನಪು ಮಾಡಿಕೊಂಡಷ್ಟೂ ದೀರ್ಘವಾಗಿದೆ ಕಥೆಗಳಿಗೂ ಬಾಲ್ಯಕ್ಕೂ ಇರುವ ಅನುಬಂಧ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕಥೆಗಳಿಲ್ಲದೆ ಮಕ್ಕಳ ಬಾಲಲೀಲೆಯೇ ಪೂರ್ಣಗೊಳ್ಳುವುದಿಲ್ಲ. 

ನಮಗೇನೋ ನಮ್ಮ ಬಾಲ್ಯದಿಂದ ಕಥೆಗಳು ಪ್ರಾರಂಭವಾದವು. ಆದರೆ ಈ ಕಥೆಗಳ ಬಾಲ್ಯ ಯಾವುದು? ಎಲ್ಲಿಂದ ಪ್ರಾರಂಭವಾದವು ಈ ಕಥೆಗಳು? ಯಾಕೆ ಅಷ್ಟೊಂದು ಮೆಚ್ಚಾಗುತ್ತವೆ ಕಥನಗಳೆಂಬ ಕಲ್ಪನೆಗಳು? ನಾವೇಕೆ ಕಥೆಗಳನ್ನು ಹೇಳುತ್ತೇವೆ ಮತ್ತು ಕಥೆಗಳು ನಮಗೇನನ್ನು ಹೇಳುತ್ತವೆ? ದೇಶ, ಕಾಲ, ಪಾತ್ರಗಳನ್ನು ಮೀರಿ ಹರಿಯುವ ಈ ಕಥನವಾಹಿನಿಗಳು (ಇಂದಿನ ಕಿರುತೆರೆ ಧಾರಾವಾಹಿಗಳ ಬಗ್ಗೆ ಎಂದು ಅನ್ಯಥಾ ಭಾವಿಸಕೂಡದು!) ಬಾಲ್ಯದಿಂದ ಮುಪ್ಪಿನವರೆಗೆ ಎಲ್ಲರ ಪ್ರೀತಿಯನ್ನೂ ಗಳಿಸಿಕೊಂಡಿದ್ದೇಕೆ? ಪ್ರತಿಯೊಂದಕ್ಕೂ ಇತಿಹಾಸವೆಂಬುದು ಇರುವಂತೆ ಇದಕ್ಕೂ ಇರಬೇಕಲ್ಲವೇ? ಭಾಷೆಯೊಂದಿಗೇ ಕಥೆಗಳ ಉಗಮವೂ ಆಯಿತು ಎನ್ನಬಹುದೇ? ಇದರ ವಿಕಾಸ ಹೇಗಾಯಿತು? ಮುಂತಾದ ಬಹಳಷ್ಟು ಪ್ರಶ್ನೆಗಳು ಕಥೆಗಳ ಜೊತೆಗೇ ಮನದಲ್ಲಿ  ಸುತ್ತುತ್ತಿದ್ದವು. 

ಕಥನಕ್ರಿಯೆಗೆ ಶಿಲಾಯುಗದ ಇತಿಹಾಸವಿದೆ. ಮಾನವರ ನಡುವೆ ಯಾವುದೋ ಒಂದು ರೀತಿಯ ಸಂವಹನ ಆರಂಭವಾಗಿದ್ದೇ, ಅದಕ್ಕೆ ರೆಕ್ಕೆ-ಪುಕ್ಕ-ಬಾಲ-ಕೋಡು ಬೆಳೆದು ಇನ್ನೊಬ್ಬರಿಗೆ ರವಾನೆಯಾಗುತ್ತಿದ್ದವು. ಶಿಲಾಯುಗದಲ್ಲಿ ಅಸ್ತಿತ್ವದಲ್ಲಿದ್ದ  ಗುಹೆಗಳಲ್ಲಿನ ಚಿತ್ರಗಳೇ ಕಥನಕ್ರಿಯೆಗಳ ಬರಹದ ಆದಿಸ್ವರೂಪ ಎಂದು ಇತಿಹಾಸದಲ್ಲಿ ಗುರುತಿಸಲಾಗಿದೆ. ಪ್ರಾಚೀನ ಈಜಿಪ್ತ್‌ನ ಹೈರೋಗ್ಲಿಫಿಕ್ಸ್ ಮಾದರಿಯ ಸಚಿತ್ರ ಭಾಷೆಗಳ ವಿಕಾಸವೂ ಕಥನ ಪರಂಪರೆಯ ಮುಂದುವರಿಕೆಯಲ್ಲಿ ಪ್ರಮುಖ ಹೆಜ್ಜೆ ಎನಿಸಿದೆ. ಆಡುಭಾಷೆಯ ವಿಕಾಸವಾದಂತೆಯೇ ಕಥೆಗಳನ್ನು ಹೇಳುವ-ಕೇಳುವ ಜನಪದ ಸ್ವರೂಪಗಳು, ತೋಂಡೀ ಪರಂಪರೆಗಳು ವಿಸ್ತಾರವಾಗುತ್ತಾ ಹೋದವು. ಹಾಗೆಂದೇ ಎಷ್ಟೋ ಶತಮಾನಗಳ ಹಿಂದಿನ ನಿಗೂಢ ಅಡಗೂಲಜ್ಜಿಯರು ಇಂದಿಗೂ ನಮ್ಮ ಮನದಲ್ಲಿ ಓಡಾಡುತ್ತಿದ್ದಾರೆ. 

ಭಾರತೀಯ ಸಾಹಿತ್ಯ ಚರಿತ್ರೆಯ ಅವಿಚ್ಛಿನ್ನ ಭಾಗವಾಗಿಯೇ ಕಥೆಗಳೂ ಬೆಳೆದುಬಂದಿವೆ ಎಂದರೆ ಅತಿಶಯವಲ್ಲ. ಜನಪದ ಸ್ವರೂಪದ ಕಥೆಗಳನ್ನು ಬಿಟ್ಟು, ಶಿಷ್ಟ ರೀತಿಯ ಪೌರಾಣಿಕ ಚೌಕಟ್ಟಿನಲ್ಲಿ ಕಥೆಗಳಿಗೆ ಶ್ರಿಕಾರ ಹಾಕುವ ಪ್ರಾಚೀನ ವೇದಗಳನ್ನಾಗಲೀ ಮಹಾಕಾವ್ಯಗಳನ್ನಾಗಲಿ ಗಮನಿಸಿದರೆ- ರಾಮಾಯಣವನ್ನು ವಾಲ್ಮೀಕಿಗಳು ಬರೆದಿದ್ದು ಹೌದಾದರೂ ಕಥಿಸಿ ಪ್ರಚುರ ಪಡಿಸಿದ್ದು ಲವ-ಕುಶರಿಂದ; ಮಹಾಭಾರತದ ಕರ್ತೃ ವ್ಯಾಸರು ಹೌದಾದರೂ, ಗಣಪತಿಗೆ ಕಥಿಸಿಯೇ ಅದು ಬರೆಯಲ್ಪಟ್ಟಿದ್ದು. ಇವೆರಡೇ ಕಾವ್ಯಗಳಲ್ಲಿ ಅದೆಷ್ಟೊಂದು ಕಥೆ-ಉಪಕಥೆಗಳು! ರಾಮಾಯಣಕ್ಕಿಂತಲೂ ಮಹಾಭಾರತದ ಉಪಕಥೆಗಳು ಸಾಗರ ಸೇರುವ ನದಿ-ಉಪನದಿಗಳಂತೆ ವಿಪರೀತ ಎನ್ನುವಷ್ಟಿವೆ. ಅತಿಪ್ರಾಚೀನ ಜ್ಞಾನಭಂಡಾರವೆನಿಸಿದ ವೇದಗಳು, ಉಪನಿಷತ್ತುಗಳಲ್ಲೂ ಸಾಂದರ್ಭಿಕವಾಗಿ ಎಷ್ಟೋ ಕಥೆಗಳನ್ನು ಕಾಣಬಹುದು. ಆನಂತರ ವಿಸ್ತಾರಗೊಳ್ಳುತ್ತಾ ಹೋದ ಸಾಹಿತ್ಯ ಪರಂಪರೆಯಲ್ಲಿ, ಉದ್ದಕ್ಕೂ ಹರಿಯುವ ಕಥೆಗಳೇ ಪರಂಪರೆಯ ಜೀವನದಿಗಳು. ಉದಾ, ರಾಜಾಶ್ರಯದಲ್ಲಿದ್ದ ಕವಿಗಳು ರಚಿಸಿದ ರಾಮಾಯಣ-ಭಾರತದ ಮರುರಚನೆಗಳಿರಬಹುದು, ಯಾವುದೋ ಅಜ್ಞಾತ ಕವಿಗಳಿಂದ ರಚಿತವಾದ ಸಾಹಿತ್ಯವಿರಬಹುದು, ತಮಗೆ ಆಶ್ರಯವಿತ್ತ ರಾಜರನ್ನು ಮೆಚ್ಚಿಸಲೆಂದು ಅವರನ್ನೇ ನಾಯಕರನ್ನಾಗಿಸಿ ಕವಿಗಳು ರಚಿಸಿದ ಸಾಹಿತ್ಯವಿರಬಹುದು- ಅಂತೂ ಒಂದಿಲ್ಲೊಂದು ʻಕಥೆʼ ಎನ್ನುವುದು ಇರಲೇಬೇಕು.

ಇದೆಲ್ಲಾ ಓದು-ಬರಹ ಬಲ್ಲವರ ಮಾತಾಯಿತು ಎಂದರೆ ಹಾಗೇನಿಲ್ಲ. ಯಾವುದೇ ರೀತಿಯಲ್ಲಿ ರಚಿತವಾದ ಕಥೆ-ಸಾಹಿತ್ಯಗಳು ಜನಮಾನಸದಲ್ಲಿ ಬೇರೂರಿದ್ದು ಹೇಳುವ-ಕೇಳುವ ಪರಂಪರೆಯಿಂದಲೇ. ಅದು ವಾಚನ-ವ್ಯಾಖ್ಯಾನದಂಥ ಗಮಕ ಪ್ರಕಾರವೇ ಇದ್ದೀತು ಅಥವಾ ದಾಸಸಾಹಿತ್ಯದಂಥ ಭಾಗವತ ಪರಂಪರೆಯೇ ಇದ್ದೀತು. ಕಥೆಗಳ ಬಗೆಗಿನ ಆಸಕ್ತಿಯಿಂದಲೇ ಎಷ್ಟೊಂದು ರಂಗಪ್ರಕಾರಗಳೂ ಹುಟ್ಟುಕೊಂಡಿಲ್ಲವೇ. ಈ ರಂಗಪ್ರಕಾರಗಳ ಇಂದಿನ ರೂಪು ಏನೇ ಆದರೂ, ಮೊದಲಿಗೆ ಜನ್ಮತಾಳಿದ್ದು ಕಥೆ ಹೇಳುವ ಸರಳ ಕ್ರಿಯೆಯಾಗಿಯೇ ತಾನೇ. ಗೊಂಬೆಯಾಟ, ಯಕ್ಷಗಾನ, ನಾನಾ ಸ್ವರೂಪದ ಬಯಲಾಟಗಳಿಂದ ಆರಂಭವಾಗಿ ನಾಟಕಗಳವರೆಗೂ ಇರಬಹುದು; ಲಾವಣಿಗಳು, ಪಾಡ್ದನಗಳು ಮುಂತಾದ ಹಲವು ರೀತಿಯ ಕಥನಕಾವ್ಯಗಳಿರಬಹುದು- ಇವೆಲ್ಲವೂ ಮೂಲಭೂತವಾಗಿ ಕಥನ ಕ್ರಿಯೆಯ ಬೇರೆ ಬೇರೆ ರೂಪಗಳೇ ಅಲ್ಲವೇ. ಇವುಗಳು ಹುಟ್ಟಿಕೊಂಡ ಉದ್ದೇಶದಲ್ಲಿ ಭಿನ್ನತೆ ಇದ್ದರೂ, ಈ ಎಲ್ಲವುಗಳ ಜೀವದ್ರವ್ಯ- ಕಥೆ.

ಇಷ್ಟಕ್ಕೂ ಕಥಾಕಾಲಕ್ಷೇಪಕ್ಕೆ ಅಕ್ಷರದ ಹಂಗೇ ಇಲ್ಲವಲ್ಲ. ʻಒಂದಾನೊಂದು ಊರಲ್ಲಿ…ʼ ಎಂದು ಆರಂಭಿಸುತ್ತಿದ್ದಂತೆ ಕಿವಿ ತನ್ನಷ್ಟಕ್ಕೆ ನಿಮಿರುತ್ತದೆ; ಗಮನ ಬೇಡವೆಂದರೂ ಅದರೆಡೆಯೇ ಸರಿಯುತ್ತದೆ. ಇದನ್ನೇ ಮೂಲವಾಗಿಟ್ಟುಕೊಂಡು ನಮ್ಮಲ್ಲಿ ಪ್ರಚಲಿತವಿರುವ ಕಥಾಪ್ರಕಾರಗಳೇನು ಒಂದೆರಡೇ? ನೀತಿಯನ್ನು ಬೋಧಿಸುವ ಪಂಚತಂತ್ರ ಕಥೆಗಳು, ಬುದ್ಧನ ಬಗ್ಗೆ ಹೇಳುವ ಜಾತಕ ಕಥೆಗಳು, ಜೈನಸಾಹಿತ್ಯ ಪರಂಪರೆಯ ವಡ್ಡಾರಾಧನೆಯ ಕಥೆಗಳು, ಗ್ರೀಸ್ ದೇಶದಿಂದ ಬಂದ ಈಸೋಪನ ಕಥೆಗಳು, ಅರಬ್‌ನ ಮರುಭೂಮಿಯಿಂದ ಬಂದ ಅರೇಬಿಯನ್ ನೈಟ್ಸ್, ಜಾಣ್ಮೆಯೇ ಜೀವಾಳ ಎನಿಸಿದ ಬೀರಬಲ್ಲನ ಕಥೆಗಳು, ತೆನಾಲಿರಾಮನ ಕಥೆಗಳು- ಎಷ್ಟೊಂದು ಹುಲುಸಾಗಿದೆಯಲ್ಲ ಕಥಾಪರಂಪರೆ.

ಇದನ್ನೂ ಓದಿ: ದಶಮುಖ ಅಂಕಣ: ನೆಮ್ಮದಿಯೆಂಬ ಗಮ್ಯದ ಹಾದಿ ಯಾವುದು?

ಕೆಲವೊಮ್ಮೆ ಈ ಕಥೆಗಳ ಹುಟ್ಟಿನ ಹಿಂದೆಯೂ ಕುತೂಹಲದ ಕಥೆಗಳಿರುತ್ತವೆ. ಉದಾ, ಅರೇಬಿಯನ್ ನೈಟ್ಸ್ ಸರಣಿ. ಶಹ್ರಿಯಾದ್ ಎಂಬ ರಾಜ ತನ್ನ ಹೆಂಡತಿಯ ಲೋಲುಪತೆಯಿಂದ ಕುಪಿತನಾಗಿ ಆಕೆಯ ಶಿರಚ್ಛೇದ ಮಾಡಿಸುತ್ತಾನೆ. ಸ್ತ್ರೀಯರೆಲ್ಲರೂ ಇಂಥವರೇ ಎಂಬ ತೀರ್ಮಾನಕ್ಕೆ ಬರುವ ಆತ, ಪ್ರತಿದಿನ ಒಬ್ಬ ಹುಡುಗಿಯನ್ನು ಮದುವೆಯಾಗಿ, ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ತನ್ನ ನವವಧುವನ್ನು ಕೊಲ್ಲಿಸುತ್ತಿದ್ದ. ಕೊನೆಗೆ ಎಂಥಾ ಸ್ಥಿತಿ ಬಂತು ಎಂದರೆ, ರಾಜ್ಯದಲ್ಲಿರುವ ಯೋಗ್ಯ ಹುಡುಗಿಯರೆಲ್ಲಾ ಖರ್ಚಾಗಿ, ಆತನ ಮಂತ್ರಿಯ ಮಗಳು ಶಹರ್ಜಾದ್ ಮಾತ್ರವೇ ಉಳಿಯುವಂತಾಗುತ್ತದೆ. ಮಂತ್ರಿಮಗಳು ಚೆಲುವೆ ಮಾತ್ರವೇ ಅಲ್ಲ, ಮಹಾಬುದ್ಧಿವಂತೆ ಕೂಡಾ. ರಾಜನಿಗೆ ಕಥೆ ಕೇಳುವುದಲ್ಲಿ ಆಸಕ್ತಿಯಿದೆ ಎಂದು ತಿಳಿದುಕೊಳ್ಳುವ ಆಕೆ, ಪ್ರತಿರಾತ್ರಿಯೂ ಒಂದೊಂದು ಕಥೆ ಹೇಳಲು ಪ್ರಾರಂಭಿಸಿ, ಆ ಕಥೆಯನ್ನು ಕುತೂಹಲದ ಘಟ್ಟದಲ್ಲಿ ನಿಲ್ಲಿಸಿಬಿಡುತ್ತಿದ್ದಳು. ಕಥೆಯ ಅಂತ್ಯವನ್ನು ಮಾರನೇ ದಿನವಾದರೂ ತಿಳಿಯಲು ಬಯಸುವ ರಾಜ ಆಕೆಯನ್ನು ಕೊಲ್ಲುವುದನ್ನು ಒಂದೊಂದೇ ದಿನ ಮುಂದೂಡುತ್ತಾ ಬರುತ್ತಿದ್ದ. ಹೀಗೆಯೇ 1001 ರಾತ್ರಿಗಳು ಮುಂದುವರಿಯುತ್ತವೆ. ಇದೇ ಸರಣಿಯ ಭಾಗವಾಗಿ ರಚಿತವಾದ- ಅಲ್ಲಾದ್ದೀನನ ಅದ್ಭುತ ದೀಪ, ನಾವಿಕ ಸಿಂದಬಾದ್‌ನ ಕಥೆಗಳು, ಆಲಿಬಾಬ ಮತ್ತು 40 ಮಂದಿ ಕಳ್ಳರು ಮುಂತಾದ ರೋಚಕ ಕಥೆಗಳು ಇಂದಿಗೂ ಮಕ್ಕಳ ಅಚ್ಚುಮೆಚ್ಚಿನದ್ದಾಗಿವೆ.

ನೀತಿಬೋಧನೆ, ಧರ್ಮಪ್ರಚಾರ, ಮನರಂಜನೆ, ಮನೋವಿಕಾಸದಂಥ ಘನ ಉದ್ದೇಶಗಳಿಂದ ಹಿಡಿದು ಬೇಸರ ಕಳೆಯಲು, ಮಕ್ಕಳಿಗೆ ಊಟವನ್ನೊ ನಿದ್ದೆಯನ್ನೊ ಮಾಡಿಸಲು, ನಡೆಯುವಾಗ ದಾರಿ ಖರ್ಚಿಗೆ- ಹೀಗೆ ಉದ್ದೇಶ ಏನೇ ಇದ್ದರೂ ಕಥೆಗಳು ಎಲ್ಲರಿಗೂ ಮೆಚ್ಚಾಗುತ್ತವೆ. ಇದೇ ಹೊತ್ತಿನಲ್ಲಿ ಪು.ತಿ.ನ ಅವರ ಸಾಲುಗಳು ನೆನಪಾಗುತ್ತಿವೆ:
“ವ್ಯಥೆಗಳ ಕಳೆಯುವ ಕಥೆಗಾರ/ ನಿನ್ನ ಕಲೆಗೆ ಯಾವುದು ಭಾರ?/ ಯಾವುದು ವಿಸ್ತರ, ಯಾವುದು ದುಸ್ತರ/ ನಿನಗೆಲೆ ಹರ್ಷದ ಹರಿಕಾರ/ ನಿನ್ನ ಕಲೆಗೆ ಯಾವುದು ಭಾರ”!

ಇದನ್ನೂ ಓದಿ: ಬಿಡುವೆಂಬ ಬಿಡುಗಡೆಯ ಹಾದಿ!“>ದಶಮುಖ ಅಂಕಣ: ಬಿಡುವೆಂಬ ಬಿಡುಗಡೆಯ ಹಾದಿ!

Exit mobile version