Site icon Vistara News

ದಶಮುಖ ಅಂಕಣ: ಬಿಡುವೆಂಬ ಬಿಡುಗಡೆಯ ಹಾದಿ!

leisure1

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/04/WhatsApp-Audio-2023-04-25-at-111.mp3

ʻನಿಮ್ಮ ವಿರಾಮದ ಓದಿಗೆ…ʼ ಎನ್ನುತ್ತಾ ಸಂದೇಶವೊಂದು ಮೊಬೈಲಿಗೆ ಒತ್ತರಿಸಿಕೊಂಡು ಬಂತು. ಮಿತ್ರರೊಬ್ಬರು ಬಿಡುವಿನ (leisure) ಕಾಲದಲ್ಲಿ ಕೈಗೊಂಡಿದ್ದ ತಮ್ಮ ಚಾರಣದ ಅನುಭವಗಳನ್ನು ಬರೆದುಕೊಂಡಿದ್ದರು. ಮಾತ್ರವಲ್ಲ, ರಜಾದಿನಗಳಲ್ಲಿ (holidays) ಹತ್ತಿರ ಪ್ರದೇಶಗಳಲ್ಲಿ ಎಲ್ಲೆಲ್ಲಿ ಚಾರಣ ಮಾಡಬಹುದು ಎಂಬ ಮಾಹಿತಿಯನ್ನೂ ಅವರ ಬರಹ ಒಳಗೊಂಡಿತ್ತು. ಇದನ್ನೆಲ್ಲಾ ಓದುತ್ತಿದ್ದಂತೆ, ʻವಿರಾಮ, ಬಿಡುವು, ರಜಾದಿನʼ ಇತ್ಯಾದಿಗಳ ಬಗ್ಗೆ ಮನಸ್ಸು ಮಥಿಸುವುದಕ್ಕೆ ಪ್ರಾರಂಭಿಸಿತು.

ಏನು ವಿರಾಮವೆಂದರೆ? ಆರಾಮದಿಂದಿರುವುದು ವಿರಾಮವೇ? ಅದೊಂದು ರೀತಿಯ ವಿಶ್ರಾಂತಿಯೇ? ಕೆಲಸಗಳ ನಡುವಿನ ಸಂದಿ-ಗೊಂದಿಗಳನ್ನು ಬಿಡುವು ಎನ್ನಬಹುದೇ? ವಿಶ್ರಾಂತಿ, ಬಿಡುವುಗಳಲ್ಲಿ ವ್ಯತ್ಯಾಸವುಂಟೇ? ಹಾಗಾದರೆ ರಜಾದಿನವನ್ನು ಏನೆಂದು ಕರೆಯಬಹುದು? ಬಿಡುಗಡೆ ಎನ್ನೋಣವೇ? ನಿವೃತ್ತಿಯನ್ನು ವಿರಾಮದ ಸಾಲಿಗೆ ಸೇರಿಸಬಹುದೇ? ಯಾಕೆ ಬಯಸುತ್ತದೆ ಮನಸ್ಸು ವಿರಾಮವನ್ನು? ಏನನ್ನು ಮಾಡಬೇಕೆಂದು ಬಯಕೆಯಾಗುತ್ತದೆ ವಿರಾಮದ ಸಮಯದಲ್ಲಿ? ವಿರಾಮ ಇಲ್ಲದಿದ್ದರೆ ಸಮಸ್ಯೆಯೇ? ವಿರಾಮವೇ ಹೆಚ್ಚಾದರೆ ಅದೂ ಸಮಸ್ಯೆಯಲ್ಲವೇ? ಅಂತೂ ತುದಿ-ಮೊದಲಿಲ್ಲದ ಜಿಜ್ಞಾಸೆಗಳ ಸುಳಿಯಲ್ಲಿ ಸಿಲುಕಿತ್ತು ಮನಸ್ಸು. ಈ ಎಲ್ಲಾ ಪ್ರಶ್ನೆಗಳಿಗೊಂದು ವಿರಾಮ ಹಾಕಬೇಕಲ್ಲ.

ಈ ಪ್ರಶ್ನೆಗಳ ಸುರುಳಿಯಿಂದ ಬಿಡುಗಡೆಗೋ ಎಂಬಂತೆ ಒಂದಿಷ್ಟು ಜನರನ್ನು ಸುಮ್ಮನೆ ಕೇಳುತ್ತಿದ್ದೆ- ʻವಿರಾಮ ಎಂದರೆ ಏನು ನಿಮ್ಮ ಲೆಕ್ಕದಲ್ಲಿ?ʼ. ʻಶಾಲೆಗೆ ರಜವಿದ್ದರೆ ಅದೇ ವಿರಾಮʼ ಎಂಬ ಬಾಲ ಕಲ್ಪನೆಯಿಂದ ಆರಂಭವಾಗಿ, ʻವೀಕೆಂಡ್‌ನಲ್ಲಿ ದೊರೆಯುವುದೇ ರಜೆ, ಮನೆ ಕೆಲಸದಿಂದ ಮುಕ್ತರಾಗುವುದೇ ಬಿಡುವು, ಮನಸೋಇಚ್ಛೆ ಶಾಪಿಂಗ್‌ ಮಾಡುವಷ್ಟು ಸಮಯ ಸಿಕ್ಕರೆ ಅದೇ ಫ್ರೀ ಟೈಮ್‌ʼ ಎಂದು ನಾನಾ ಲೌಕಿಕಗಳನ್ನು ಹಾದು, ʻಈ ಲೋಕದ್ದೆಲ್ಲಾ ಬರೀ ಅಲ್ಪವಿರಾಮ. ಸರಿಯಾದ ಬಿಡುವು ಅಂದ್ರೆ ಪೂರ್ಣವಿರಾಮʼ ಎಂದೆಲ್ಲಾ ಆಧ್ಯಾತ್ಮದವರೆಗೆ ತಲುಪಿತು.

ಹಾಗೆ ನೋಡಿದರೆ, ವಿರಾಮ ಎಂದರೇನು ಎಂಬುದಕ್ಕಿಂತ ವಿರಾಮದಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ಹೆಚ್ಚಿನ ಕಲ್ಪನೆಗಳು ಜನರ ಮನದಲ್ಲಿ ಇದ್ದಂತೆ ಭಾಸವಾಯಿತು. ʻಕೆಲಸದ ಒತ್ತಡ ಸಿಕ್ಕಾಪಟ್ಟೆ ಇರುವಾಗ ಒಂದಿಡೀ ವಾರ ರಜ ಹಾಕಿಕೊಂಡು ನಿದ್ದೆ ಮಾಡುವುದು, ಮೊಬೈಲ್‌ ಸಿಗ್ನಲ್‌ ಸಿಗದಂತಹ ಸ್ಥಳದಲ್ಲಿ ಪ್ರವಾಸ ಹೋಗುವುದು, ಸರ್ವಾಂಗ ಸುಂದರ ರೆಸಾರ್ಟ್‌ನಲ್ಲಿ ಬಿದ್ದುಕೊಂಡು ಕಾದಂಬರಿ ಓದುವುದು, ಪ್ರಪಂಚದ ಎಕ್ಸಾಟಿಕ್‌ ಎನ್ನುವಂಥ ರೆಸ್ಟೋರೆಂಟ್‌ಗಳಲ್ಲಿ ತಿಂಡಿ ತಿನ್ನುವುದು, ಒಬ್ಬಳೇ ದೇಶ-ದೇಶಗಳನ್ನು ಸುತ್ತುವುದು, ಭಾಷೆ ತಿಳಿಯದ ನಾನಾ ದೇಶಗಳ ಸಿನೆಮಾ ನೋಡುವುದು, ಜರ್ಮನಿಯ ವೇಗ ಮಿತಿ-ರಹಿತ ಹೈವೇಗಳಲ್ಲಿ ಉಸಿರುಗಟ್ಟುವಂತೆ ಕಾರೋಡಿಸುವುದು, ವರ್ಷಾನುಗಟ್ಟಳೆಯಿಂದ ಭೇಟಿಯಾಗದ ಸ್ನೇಹಿತರನ್ನೆಲ್ಲಾ ಭೇಟಿ ಮಾಡುವುದು, ಜೋರು ಮಳೆಯಲ್ಲಿ ಬಿಸಿ ಬಜ್ಜಿ ತಿನ್ನುತ್ತಾ ಚಹಾ ಕುಡಿಯುವುದು, ನದೀ ತೀರದಲ್ಲಿ ಒಲೆ ಹೂಡಿ ಅಡುಗೆ ಮಾಡಿಕೊಂಡು ಅಲ್ಲೇ ಟೆಂಟು ಹೂಡುವುದು, ತೀರ್ಥಯಾತ್ರೆ ಹೋಗುವುದು, ಓತಪ್ರೋತವಾಗಿ ಕವಿತೆ ಬರೆಯುವುದು…ʼ ಹೀಗೆ ಒಂದಕ್ಕಿಂತ ಒಂದು ಆಸಕ್ತಿಕರ ಮತ್ತು ಮೋಜಿನ ಬಯಕೆಗಳು ಮೂಡಿ ಬಂದವು. ಆದರೆ ಹೆಚ್ಚಿನ ಒಲವು ವ್ಯಕ್ತವಾಗಿದ್ದು ಪ್ರವಾಸ, ತಿರುಗಾಟದ ಬಗ್ಗೆಯೇ.

ಯಾಕೆ ಅಗತ್ಯ ಎನಿಸುತ್ತದೆ ನಮಗೆ ವಿರಾಮ? ಬಿಡುವಿಲ್ಲದ ಬದುಕಿಗೊಂದು ಅಲ್ಪವಿರಾಮ ಹಾಕುವುದಕ್ಕೆಂದೇ? ಉಸಿರಾಡುವ ಸಣ್ಣದೊಂದು ಅವಕಾಶಕ್ಕೆ ಇದು ಆಸ್ಪದವೇ? ಕೆಲವೊಮ್ಮೆ ದೇಹ-ಮನಸ್ಸುಗಳಿಗೆ ತೀವ್ರ ದಣಿವಾದಾಗ ವಿರಾಮವೆಂಬುದು ಸರ್ವರೋಗವನ್ನೂ ನಿವಾರಿಸುವ ಮಾಯಾಮದ್ದಿನಂತೆ ಕೆಲಸ ಮಾಡುತ್ತದಲ್ಲ. ಹಾಗೆ ನೋಡಿದರೆ ಬಿಡುವು ಅಥವಾ ರಜಾ ಎನ್ನುವ ಕಲ್ಪನೆಗಳು ಬಹುಶಃ ನಾಗರಿತೆಯಷ್ಟೇ ಹಳೆಯದ್ದಿರಬಹುದು. ಕಾರಣ, ಹಾಡು, ನೃತ್ಯ, ಚಿತ್ರಕಲೆ ಮುಂತಾದ ಲಲಿತಕಲೆಗಳ ಉಗಮಕ್ಕೂ, ಬಿಡುವಿನ ಸಮಯದಲ್ಲಿನ ಮನೋಲ್ಲಾಸದ ಕಲ್ಪನೆಗೂ ಪ್ರಾಚೀನ ಕಾಲದ ನಂಟು. ಯಾವುದೋ ಕಾಲದಲ್ಲಿ ಅಳಿದ ನಾಗರಿಕತೆಗಳ ಕುರುಹುಗಳಲ್ಲೂ ಕಲೆಯ ಘಮ ಕಾಣುವುದೇ ಇದಕ್ಕೆ ಸಾಕ್ಷಿಯಾದೀತು. ಸಿಂಧೂ ಕಣಿವೆಯಲ್ಲಿ ದೊರೆತ ಲೋಹದ ಮೂರ್ತಿಗಳು, ಅಜಂತ, ಎಲ್ಲೋರಾದ ಗುಹಾಂತರ ದೇವಾಲಯಗಳ ಶಿಲೆಗಳಲ್ಲಿ ಮೂಡಿದ ಚಿತ್ತಾರಗಳು- ಇಂಥವು ಬಹಳಷ್ಟು ಕಾಣಸಿಗುತ್ತವೆ. ಇಂಥದ್ದೇ ಬಿಡುವಿನ ಕಾಯಕದ ಕಲ್ಪನೆಗಳು ವಿಸ್ತಾರಗೊಂಡು ಹಲವಾರು ಕಲೆಗಳು, ರಂಗಚಟುವಟಿಕೆಗಳು, ಪ್ರವಾಸ, ನಾನಾ ಹೆಸರಿನ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಪ್ರಚಲಿತಕ್ಕೆ ಬಂದಿರಬಹುದೇ? ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳಿಗೆ ಬಿಡುವಿರುವ ದಿನಗಳಲ್ಲೇ ನಾನಾ ದೇವರುಗಳ ತೇರು, ಜಾತ್ರೆಗಳು ನಡೆಯುವುದನ್ನು ಏನೆಂದು ವಿಶ್ಲೇಷಿಸಬಹುದು? ಈ ಜಾತ್ರೆಗಳ ಬೆನ್ನಿಗೇ ತೆರೆದುಕೊಳ್ಳುತ್ತಿದ್ದ ನಾಟಕ, ಸಿನೆಮಾ, ಸರ್ಕಸ್‌ನಂಥವನ್ನು ಮರೆಯಲುಂಟೇ?

ನಾಟಕ, ಸಿನೆಮಾ ಎನ್ನುತ್ತಿದ್ದಂತೆ ಹಿಂದಿನ ದಿನಗಳ ಭಾನುವಾರ ಸಂಜೆಯ ಸಡಗರ ನೆನಪಾಗುತ್ತದೆ. ಟಿವಿ ಸಂಸ್ಕೃತಿ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳವು. ಭಾನುವಾರವೆಂದರೆ ಸಾಮಾನ್ಯ ಸಂಭ್ರಮವೇ? ಇಡೀ ವಾರದ ಶ್ರಮವೆಲ್ಲಾ ಕಳೆಯುವ ವಿರಾಮದ ದಿನವದು. ಆದರೆ ಆ ದಿನ ಉಳಿದೆಲ್ಲಾ ದಿನಗಳಿಗಿಂತ ಹೆಚ್ಚಿನ ಗಡಿಬಿಡಿ! ಬೆಳಗ್ಗೆ ಟಿವಿಯಲ್ಲಿ ರಾಮಾಯಣ/ ಮಹಾಭಾರತ ಬರುವುದರೊಳಗೆ ಮನೆಯ ಮಕ್ಕಳು, ಮಹಿಳೆಯರಿಂದ ಹಿಡಿದು ಸರ್ವರೂ ತಂತಮ್ಮ ಕೆಲಸಗಳನ್ನು ನಿಪಟಾಯಿಸಿ ಪರದೆಯ ಮುಂದೆ ಪ್ರತಿಷ್ಠಾಪಿಸಿಕೊಳ್ಳಬೇಕು. ಅದರಲ್ಲೂ ಆ ಊರಿನಲ್ಲಿರುವುದು ಒಂದೆರಡೇ ಟಿವಿಗಳು ಎಂದಾದರೆ, ಆಯಾ ಮನೆಗಳು ಭಾನುವಾರಗಳಂದು ಪುಕ್ಕಟ್ಟೆ ಚಿತ್ರಮಂದಿರಗಳಾಗಿ ರೂಪಾಂತರ ಹೊಂದುತ್ತಿದ್ದವು. ಕಾರಣ, ಬೆಳಗಿನ ರಾಮಾಯಣ ಮಾತ್ರವಲ್ಲದೆ ಸಂಜೆ ಪ್ರಸಾರವಾಗುತ್ತಿದ್ದ ಚಲನಚಿತ್ರ. ಮನೆಮಂದಿಯನ್ನು ಮಾತ್ರವೇ ಅಲ್ಲ, ಇಡೀ ಊರು-ಕೇರಿಗಳನ್ನು ತಮ್ಮ ಬಿಡುವಿನ ವೇಳೆಯಲ್ಲಿ ಒಂದಾಗಿಸಿ ಕೂರಿಸುತ್ತಿದ್ದ ಚಟುವಟಿಕೆಗಳವು. ಗ್ರಾಮೀಣ ಭಾಗಗಳಲ್ಲಿ ಪ್ರಚಲಿತವಿದ್ದ ನಾಟಕ, ಗೊಂಬೆಯಾಟದಂಥ ರಂಗಕಲೆಗಳು, ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳ ಜೀವನಾಡಿ ಎನಿಸಿರುವ ಯಕ್ಷಗಾನ, ತಾಳಮದ್ದಳೆಯಂಥ ಸಾಂಸ್ಕೃತಿಕ ತೊರೆಗಳ ಮೂಲಸೆಲೆಯನ್ನು ಬಿಡುವಿನ ಸಮಯದ ಮನೋಲ್ಲಾಸದ ಚೌಕಟ್ಟಿನಲ್ಲಿ ಹುಡುಕಬಹುದೇ?

ಭಾಷೆಯ ಜಾಯಮಾನದಲ್ಲಿ ʻವಿರಾಮʼವನ್ನು ಹುಡುಕುವುದು ಆಸಕ್ತಿಕರ ವಿಷಯ.  ಉದಾ, ಬೇಸಿಗೆ ರಜೆಯ ದಿನಗಳಿವು. ಆದರೆ ಮನೆಯಲ್ಲಿ ಅಮ್ಮಂದಿರಿಗೆ ವಿಶ್ರಾಂತಿಯಿಲ್ಲದ ಕಾಲ. ಮಕ್ಕಳೇನು ಕಡಿಮೆಯೇ? ಸೂಟಿಯ ಒಂದೊಂದು ಕ್ಷಣವೂ ಹಾಳಾಗಲು ಅವಕಾಶ ನೀಡದಂತೆ, ಕಟ್ಟುವಡೆದ ಎಳೆಗರುವಿನಂತೆ ಸ್ವಚ್ಛಂದವಾಗಿ ಹಾರಾಡುತ್ತಾರೆ. ಮಕ್ಕಳ ಭರಪೂರ ಕೆಲಸದಿಂದ ಪ್ರೇರಣೆ ಪಡೆದ ಸೂರ್ಯನೂ ನಿವೃತ್ತಿಯಿಲ್ಲದೇ ನಿಗಿನಿಗಿ ಉರಿಯುತ್ತಾನೆ. ಅಷ್ಟಾದರೂ ಬಿಸಿಲು-ನೆರಳಿನ ಅಂತರವೇ ಗ್ರಹಿಸದಂತೆ ಬಯಲಿನಲ್ಲಿ ಕುಣಿಯುವ ಮಕ್ಕಳನ್ನು ಕಂಡಾಗ, ಇಂಥದ್ದೇ ಬಿಡುಗಡೆ ನಮಗೂ ಬೇಕೆನಿಸಿದರೆ ಅಚ್ಚರಿಯಿಲ್ಲ. ನೋಡಿ, ವಿರಾಮ ಎಂಬ ಪದಕ್ಕೆ ಮಾಮೂಲು ಬಳಕೆಯ ಅರ್ಥಗಳ ಜೊತೆಜೊತೆಗೆ ಅವಕಾಶ, ಸ್ವಚ್ಛಂದತೆ, ಅಂತರ, ಬಯಲು… ಎಷ್ಟೆಲ್ಲಾ ಛಾಯೆಗಳಿವೆಯಲ್ಲ ಒಂದು ಶಬ್ದಕ್ಕೆ.

ಸಾಹಿತ್ಯವೂ ಬಿಡುವಿನ ಸೃಷ್ಟಿಯ ಒಂದು ಸಾಧ್ಯತೆ ಎಂದು ಗ್ರಹಿಸಿದರೆ, ಕವಿ ಮನಸ್ಸಿನ ಚೇಷ್ಟೆಗಳತ್ತಲೂ ಕಣ್ಣಾಡಿಸಬಹುದು. ತಮಗೆಲ್ಲಾ ಬೇಸಿಗೆ ರಜೆ ಬಂದಿದೆ ಎಂದು ಸಂಭ್ರಮಿಸುವ, ಕವಿ ಬಿ.ಆರ್.‌ ಲಕ್ಷ್ಮಣ ರಾವ್‌ ಅವರ ಕಲ್ಪನೆಯ ಒಂದಿಷ್ಟು ಮಕ್ಕಳಿಗೆ, ಸೂರ್ಯನ ಮಹಿಮೆಯನ್ನು ಹಾಡಬೇಕೆನಿಸುತ್ತದೆ. ʻಏಕೆ ರವಿಗಿಂತ ತಾಪ?/ ಯಾರ ಮೇಲವನ ಕೋಪ?ʼ ಎಂದು ಯೋಚಿಸುವ ಮಕ್ಕಳಿಗೆ ಕಡೆಗೆ ಅರಿವಾಗುವುದು, ʻಮೋಡ ಕೂಡಿಸಲು, ಇಳೆಗೆ ಮಳೆ ತರಲು/ ದುಡಿಯುತಿಹನು, ಪಾಪʼ ಎಂಬ ಸೂರ್ಯನ ನಿವೃತ್ತಿಯೇ ಇಲ್ಲದ ಕೆಲಸ.

ಇದನ್ನೂ ಓದಿ: ದಶಮುಖ ಅಂಕಣ: ನೆಂಟರೊಂದಿಗಿನ ನಂಟೆಂಬ ಅಂಟು

ʻಭಾನುವಾರʼ ಎಂಬ ಬಿಡುವು, ಹಲವು ಕವಿಗಳ ಗಮನ ಸೆಳೆದಿದ್ದಿದೆ. ಕೆ.ಎಸ್.‌ ನರಸಿಂಹಸ್ವಾಮಿಗಳ ʻಇಂದು ಭಾನುವಾರʼ ಎನ್ನುವ ಪದ್ಯದ ಕೆಲವು ಸಾಲುಗಳಿವು- ʻಇಂದು ಭಾನುವಾರ. ಶಾಲೆಯಂಗಳದಲ್ಲಿ/ ಕತ್ತೆಗಳ ಸಂಸಾರ; ಧೂಳು ಸರಿಯುವ ಬೀದಿ./ ಮುಚ್ಚಿದಂಗಡಿಯ ಆ ಕಪ್ಪು ಹಲಗೆಯನೋದಿ:/ ಸಂಡೇ ಹಾಲಿಡೆ./ ವಾರಕ್ಕೆ ಒಂದು ದಿನ ಅಂಗಡಿಯ ಮುಚ್ಚುವುದು/ ನಮ್ಮ ಕಾಲದ ಒಂದು ಶಿಸ್ತು./ ಅಂಗಡಿಯ ಮುಚ್ಚಿದರೆ ಹಗುರಾಗುವುದಿಲ್ಲ/ ನಮ್ಮ ಹೆಗಲೇರಿರುವ ವಸ್ತು./ʼ ವಿರಾಮ ತೆಗೆದುಕೊಂಡಿದ್ದರಿಂದ ನಮ್ಮ ಹೆಗಲೇರಿರುವ ಕರ್ತವ್ಯ, ಹೊಣೆಗಾರಿಕೆ ಹಗುರಾಗುವುದಿಲ್ಲ ಎಂಬುದು ಕವಿಯ ಇಂಗಿತ ಇರಬಹುದೇ?

ಜಿ.ಎಸ್.‌ ಶಿವರುದ್ರಪ್ಪನವರ ಭಾನುವಾರ ಇದಕ್ಕಿಂತ ಸ್ವಲ್ಪ ಭಿನ್ನ. ʻಅಂಥ ಅವಸರವಿಲ್ಲ/ ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ ಕೊಡಬಹುದು/ ಬೆಳೆದಿರುವ ಗಡ್ಡ ಇನ್ನೂ ಒಂದೆರಡು ತಾಸು/ ಕಾಯಬಹುದುʼ ಎಂದು ಆರಂಭದಲ್ಲೆ ಹೇಳುತ್ತಾರೆ ಕವಿ. ಇಂಥ ನಿರುಮ್ಮಳತೆಯ ಲಹರಿಯಲ್ಲಿ ಕಚೇರಿಯ ಕೆಲಸಗಳನ್ನು, ದಿನದ ಜಂಜಾಟಗಳೆಲ್ಲವನ್ನೂ ಮರೆತ ಅವರಿಗೆ ಕವಿತೆಯ ಅಂತ್ಯದಲ್ಲಿ ಹೊಸ ಜ್ಞಾನೋದಯವಾಗುತ್ತದೆ- ʻಇಂಥ ಭಾನುವಾರದ ಒಂದು ಕ್ಷಣವನ್ನೇ/ ನಿತ್ಯವಾಗಿಸಿಕೊಂಡಿರಬಹುದೇ/ ಸಂತ-ಸಿದ್ಧರ ಮನಸು?/ ಹಾಗೆ ನೋಡಿದರೆ ಈ ಒಂದು ಕ್ಷಣದಲ್ಲಿ/ ನಾನೂ ಒಬ್ಬ ಸಿದ್ಧ/ ಅಥವಾ ಸ್ವಲ್ಪ ಕೆಳಗಿನ ಬುದ್ಧ!ʼ

ಇಂಥ ಭಾನುವಾರದ ಅಥವಾ ಬಿಡುವಿನ ಸಮಯದ ಬುದ್ಧರು ನಾವೆಲ್ಲರೂ ಹೌದಲ್ಲವೇ?

ಇದನ್ನೂ ಓದಿ: ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ

Exit mobile version