Site icon Vistara News

ದಶಮುಖ ಅಂಕಣ | ಮರೆಯಲಿ ಹ್ಯಾಂಗ- ಅಂದಿನ ಆ ಸೊಬಗ?

indian wedding

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/12/Dashamukha09.mp3

ಬಹು ಕಾಲದ ಗೆಳತಿಯೊಂದಿಗೆ ಇತ್ತೀಚೆಗೆ ಮಾತಾಡುತ್ತಾ ಕುಳಿತಿದ್ದೆ. ಮಾತು-ಮಾತು ಮಥಿಸಿ, ನಾವಿಬ್ಬರೂ ಹೇಗೆ ಗೆಳತಿಯರಾಗಿದ್ದು ಎಂಬ ನೆನಪು ಕೆದಕುವುದಕ್ಕೆ ಶುರುವಾಯಿತು. ಇಬ್ಬರೂ ಬಾಲ್ಯದ ಗೆಳತಿಯರು ಎಂಬುದು ನಿಜ, ಆದರೆ ಸಹಪಾಠಿಗಳಲ್ಲ; ನೆಂಟರೊ ಸಂಬಂಧಿಗಳೊ ಅಲ್ಲ; ನೆರೆಹೊರೆಯವರಲ್ಲ, ಒಂದೇ ಊರಿನವರೂ ಅಲ್ಲ; ಹಾಗೆಂದು ಫೋನಿಲ್ಲದ ಆ ದಿನಗಳಲ್ಲಿ ಪತ್ರ ಬರೆದುಕೊಳ್ಳುತ್ತಿದ್ದೆವು; ಸಂಕ್ರಾಂತಿಗೋ ದೀಪಾವಳಿಗೋ ಗ್ರೀಟಿಂಗ್ ಕಾರ್ಡು ಕಳಿಸಿಕೊಳ್ಳುತ್ತಿದ್ದೆವು. ಇಷ್ಟೆಲ್ಲಾ ಮಾಡುತ್ತಾ ಇಂದಿನವರೆಗೂ ಸಂಪರ್ಕದಲ್ಲಿರುವ ನಾವು ಒಬ್ಬರಿಗೊಬ್ಬರು ಸಿಕ್ಕಿದ್ದು ಹೇಗೆ ಎಂಬುದೇ ಮರೆತು ಹೋದಂತಿತ್ತು. ಆದರೆ ಕೆದಕುತ್ತಾ ಹೋದಂತೆ ನನ್ನ ಚಿಕ್ಕಮ್ಮನ ಮನೆಯೂ ಆಕೆಯ ಅಜ್ಜಿಯ ಮನೆಯೂ ಒಂದೇ ಊರು ಎಂಬುದು ಅರಿವಾಯಿತು. ಆಗಲಿ ಏನೀಗ? ಅಷ್ಟಕ್ಕೇ ಗೆಳತಿಯರಾಗಬೇಕೆಂದಿಲ್ಲವಲ್ಲ. ನಾನು ಚಿಕ್ಕಿಯ ಮನೆಗೆ ಹೋದಾಗ, ಅವಳೂ ಅಜ್ಜಿಯ ಮನೆಗೆ ಬಂದಿದ್ದಳು. ಆಗ ಆ ಊರಿನಲ್ಲಿ ನಡೆದಿದ್ದ ಯಾವುದೋ ಮದುವೆಗೆ ಇಬ್ಬರೂ ಸಾಕ್ಷಿಯಾಗಿದ್ದೆವು. ಆ ಮದುವೆ ಯಾರದ್ದೆಂದು ಇಬ್ಬರಿಗೂ ಗೊತ್ತಿರಲಿಲ್ಲ ಮತ್ತು ಅದನ್ನು ತಿಳಿಯುವ ಅಗತ್ಯ ಮಕ್ಕಳಾದ ನಮಗೆ ಇಲ್ಲ ಎಂದೇ ಭಾವಿಸಿದ್ದೆವು!

ಎಳವೆಯಲ್ಲಿ ಹೀಗೆ ಆರಂಭವಾಗಿತ್ತು ನಂಟು ಎಂಬುದು ಒಂದು ವಿಷಯ. ಆದರೆ ಅಂದಿನ ಮದುವೆಗಳು ಅಥವಾ ಯಾವುದೇ ಸಮಾರಂಭಗಳು ಇರುತ್ತಿದ್ದ ಬಗೆಯೇನು ಎಂಬುದು ಇನ್ನೊಂದು ವಿಷಯ. ನಾಲ್ಕಾರು ದಿನಗಳ ಮೊದಲೇ ಬಂಧು-ಮಿತ್ರರು ಸೇರಬೇಕು, ಮನೆಯೆದುರು ಚಪ್ಪರ ಏಳಬೇಕು, ಮಕ್ಕಳು-ಮರಿ ಗದ್ದಲ ಮಾಡಬೇಕು, ಆಡಂಬರಕ್ಕಿಂತ ಆನಂದ ಹರಿದಾಡಬೇಕು. ಅದೇನು ಮದುವೆಯೇ ಆಗಬೇಕೆಂದು ಇರಲಿಲ್ಲ. ಸಣ್ಣದೊಂದು ದೇವರ ಕಾರ್ಯವೋ, ಹರಿದಿನವೋ ಆದರೂ ಸರಿಯೇ. ಅದಲ್ಲದಿದ್ದರೆ, ಅಚೀಚೆಯ ಮನೆಗಳ ಅಡುಗೆ ಒಲೆಗಳಲ್ಲಿ ದೊಡ್ಡಹೊಗೆ ಬಂತು ಅಥವಾ ಕಜ್ಜಾಯದ ಪರಿಮಳ ಬಂದರೂ ಮಕ್ಕಳ ಖರ್ಚಿಗೆ ಸಾಕಿತ್ತು. ಅದರಲ್ಲೂ ನೆರೆಮನೆಯ ಅಕ್ಕನನ್ನು ನೋಡಲು ಗಂಡಿನವರು ಬರುತ್ತಾರೆ ಎಂಬ ಸುದ್ದಿಯೇನಾದರೂ ಸಿಕ್ಕಿಬಿಟ್ಟರೆ, ಅದರ ಸೊಗಸೇ ಬೇರೆ.

ಅವರ ಮನೆಯ ದೊಡ್ಡಮ್ಮ ಅಡುಗೆ ಮನೆಯಲ್ಲಿ ರವೆ ಹುರಿಯುವ ಪರಿಮಳಕ್ಕೆ ಸರಿಯಾಗಿ ಆಚೀಚೆ ಮನೆಯ ಮಕ್ಕಳು ಘೇರಾಯಿಸಬೇಕು. “ಹುಷ್! ಇಲ್ಲೆಲ್ಲಾ ಬಂದು ಗಲಾಟೆ ಮಾಡಂಗಿಲ್ಲ” ಎಂದು ಅವರನ್ನು ದೊಡ್ಡವರು ಕಣ್ಣಲ್ಲೇ ಗದರಿಸಬೇಕು. ಅಲ್ಲಿಂದ ಅಕ್ಕನನ್ನು ಅರಸುತ್ತಾ ಮಕ್ಕಳೆಲ್ಲಾ ಅವಳ ಕೋಣೆಗೆ ಸಾಗಬೇಕು. ಅಲ್ಲಿ ಅಕ್ಕನಿಗೆ ಅವಳ ಅತ್ತಿಗೆಯೋ ಅಕ್ಕನೋ ಸೀರೆ ಉಡಿಸುತ್ತಿದ್ದರೆ, ಇನ್ನೊಬ್ಬರು ಹೆರಳು ಹಾಕುತ್ತಿರಬೇಕು. ತಮ್ಮೊಂದಿಗೆ ಆಡಿಕೊಂಡು, ಗುಬ್ಬಿ ಎಂಜಲು ಮಾಡಿ ಸೀಬೆ ಕಾಯಿ ತಿನ್ನುತ್ತಿದ್ದ ಪಕ್ಕದ್ಮನೆ ಅಕ್ಕ, ಇಂದು ಕೆಂಪಾಗಿ ಮಲ್ಲಿಗೆ ಮುಡಿದು ನಿಂತಿರುವುದನ್ನು ಕಂಡು ಚಿಣ್ಣರೆಲ್ಲ ಅರಳುಗಣ್ಣು ಬಿಡಬೇಕು. ಕಿಟಕಿಯಲ್ಲಿ ಮುಖವಿಟ್ಟು ಹೊರಗೆ ನೋಡುತ್ತಿದ್ದ ಚಿಣ್ಣನೊಬ್ಬ, ʻಬಂತು ಬಂತು ಕಾರ್ ಬಂತುʼ ಎಂದು ಚಿಟ್ಟನೇ ಚೀರಿ, ಅಲ್ಲೊಂದು ಸಂಚಲನ ಸೃಷ್ಟಿಸಬೇಕು. ಮನೆಯ ಉಳಿದ ಮಹಿಳೆಯರೂ ಕಿಟಕಿಯಲ್ಲಿ ಇಣುಕಿ, ʻಉದ್ದ ಇದ್ದಾರೆʼ ಎಂದೋ ʻಸ್ವಲ್ಪ ಕಪ್ಪು!ʼ ಎಂದೋ ಪಿಸುಗುಟ್ಟಿಕೊಳ್ಳಬೇಕು.

ಇಂಥ ಸಂದರ್ಭಕ್ಕೆಂದೇ ಸೃಷ್ಟಿಯಾದ ಕೆಲವು ಕವನಗಳು ನಮಗೆ ಸಾಹಿತ್ಯದಲ್ಲಿ ದೊರೆಯಬಹುದು. ಆದರೆ ಎಲ್ಲಕ್ಕಿಂತ ಮೊದಲು ನೆನಪಾಗುವುದು ಕೆ.ಎಸ್.ನರಸಿಂಹ ಸ್ವಾಮಿ ಅವರ ʻಶಾನುಭೋಗರ ಮಗಳುʼ ಕವಿತೆ. ಈ ಕವನದಲ್ಲಿ ಬರುವ ೧೨ರ ಬಾಲೆ ಸೀತೆ, ತಾಯಿಯಿಲ್ಲದ ತಬ್ಬಲಿ ಹುಡುಗಿ. ಆದರೆ ಉಪಾಯದಿಂದ ತನ್ನ ಹಿತ ಕಾಯ್ದುಕೊಳ್ಳುವಷ್ಟು ಜಾಣೆ. “ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು/ ಹೆಣ್ಣ ನೋಡಲು ಬಂದ ಅವರ ಮನೆಗೆ/ ವೈದಿಕರ ಮನೆಗಳಲಿ ಊಟ ಹೊತ್ತಾಗುವುದು/ ಒಲ್ಲೆನೆಂದಳು ಸೀತೆ ಕೋಣೆಯೊಳಗೆ/” ಕಡೆಗೆ ಆ ಹುಡುಗ ತನ್ನ ಕೂದಲಿಗಿಂತಲೂ ತುಸು ಕಪ್ಪು! ಅದಕ್ಕಾಗಿ ಬೇಡವೆಂದೆ ಎಂಬ ರಹಸ್ಯವನ್ನು ಆಕೆ ತನ್ನ ಸೋದರಿಯಲ್ಲಿ ಹೇಳಿಕೊಳ್ಳುತ್ತಾಳೆ. ಕವನದ ಅಂತ್ಯದಲ್ಲಿ, “ಶಾನುಭೋಗರ ಮಗಳು ರತ್ನದಂತಹ ಹುಡುಗಿ/ ಗಂಡು ಸಿಕ್ಕುವುದೊಂದು ಕಷ್ಟವಲ್ಲ/ ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ/ ತಡವಾದರೇನಂತೆ ನಷ್ಟವಿಲ್ಲ/” ಎಂದು ಕವಿ ಸಮಾಧಾನ ಹೇಳುತ್ತಾರೆ. ೧೨ರ ಬಾಲೆಗೆ ಮದುವೆ! ಅದರಲ್ಲೂ ತಡವಾಯಿತೆಂಬ ಮಾತು!

ಮೊದಲಿನ ಈ ಪ್ರಕ್ರಿಯೆಗಳೆಲ್ಲಾ ಮುಗಿದು ಮದುವೆಮನೆಯವರೆಗೆ ವಿಷಯ ಬಂತೋ, ಅದರ ರಂಗು-ಗುಂಗು ಹೇಳತೀರದ್ದು. ಮೇಲ್ನೋಟಕ್ಕೆ ಎರಡು ಕುಟುಂಬಗಳನ್ನು ಬೆಸೆಯುವ ಕ್ರಿಯೆಯೆಂಬಂತೆ ಕಂಡರೂ, ಇದಕ್ಕೆಷ್ಟೊಂದು ಆಯಾಮಗಳು! ಚಿಕ್ಕ ಮಕ್ಕಳ ʻಮದುವೆ-ಆಟʼದ ಕಲ್ಪನೆ ಕಂಡಾಗಲೇ ನಮಗದು ಅರ್ಥವಾಗಬೇಕು. “ಹುಲಿಯೂ ನರಿಯೂ ಕೂಡಿದವು/ ಮಂಗನ ಮದುವೆಯ ಮಾಡಿದವು/ ಮಂಗಗೆ ಧೋತರ ಉಡಿಸಿದವು/ ಬಣ್ಣದ ಅಂಗಿಯ ತೊಡಿಸಿದವು/ ಪ್ರಾಣಿಗಳೆಲ್ಲವೂ ಸೇರಿದವು/ ಮಂಗನ ಮದುವೆಯ ಮಾಡಿದವು” ಎನ್ನುವ ಈ ಸಾಲುಗಳಲ್ಲಿ ʻಮದುವೆʼ ಎನ್ನುವುದಕ್ಕಿರುವ ಸಾಮಾಜಿಕ ಆಯಾಮವನ್ನು ಗಮನಿಸಿ. ಎಲ್ಲರೂ ಸೇರಬೇಕು, ಸಂಭ್ರಮಿಸಬೇಕು, ಮದುಮಗನಿಗೆ ಅಲಂಕಾರ ಮಾಡಬೇಕು- ಎಂಬಿತ್ಯಾದಿ ವಿಷಯಗಳು ಎಳವೆಯಿಂದಲೇ ಪಾಠವಾಗುತ್ತವೆ. ಹಾಗೆಯೇ “ಕುದುರೇಯ ತಂದೀವ್ನಿ/ ಜೀನಾವ ಬಿಗಿದಿವ್ನಿ/ ಬರಬೇಕು ತಂಗಿ ಮದುವೆಗೆ/” ಎನ್ನುವಂಥ ಜನಪದದ ಸಾಲುಗಳೂ ಈ ವಿಷಯದಲ್ಲಿ ನಮಗೆ ಇನ್ನಷ್ಟು ವಿವರಗಳನ್ನು ನೀಡುತ್ತವೆ. ಮನೆಯ ಚಾಕರಿಗೆ ಜನರಿಲ್ಲ, ಹಾಗಾಗಿ ಮದುವೆಗೆ ಬರಲಾಗದು ಎಂಬ ತಂಗಿಯ ಮಾತಿಗೆ- ಅದಕ್ಕೆಲ್ಲಾ ಜನ ಇರಿಸುತ್ತೇನೆ, ಮದುವೆಗೆ ಮಾತ್ರ ತಪ್ಪಿಸಲಿಕ್ಕಿಲ್ಲ ಎಂದು ಅಣ್ಣ ಆಗ್ರಹಿಸುತ್ತಾನೆ. ಮಳೆ ಬಂದು ಹೊಳೆ ತುಂಬಿದೆ, ಬರಲಾಗದು ಎಂಬ ತಂಗಿಯ ತೊಂದರೆಗೆ- ಚಿನ್ನದ ಹರಿಗೋಲಿಗೆ ರನ್ನದ ಹುಟ್ಟುಹಾಕಿ ನಿನ್ನ ಕರೆದೊಯ್ಯುವೆ ಎಂದು ಸಮಾಧಾನ ಪಡಿಸುತ್ತಾನೆ. ತಂಗಿಯ ತಾಪತ್ರಯ ಇಲ್ಲಿಗೂ ಮುಗಿಯುವುದಿಲ್ಲ! ರನ್ನದಂಥ ಮಗು ರಗಳೆ ಮಾಡುತ್ತಿದೆ, ಬರಲಾಗದು ಮದುವೆಗೆ ಎಂಬ ತಂಗಿಯ ತಕರಾರಿಗೆ- ರನ್ನದ ಮಗುವಿಗೆ ಚಿನ್ನದ ಬಳೆ ಇಡುತ್ತೇನೆ, ಬಾ ಮದುವೆಗೆ ಎಂದು ಅಣ್ಣ ಒತ್ತಾಯಿಸುತ್ತಾನೆ. ಹೀಗೆ ಬಂಧುಗಳೆಲ್ಲಾ ಸೇರಿದ ಸಂದರ್ಭದಲ್ಲೇ ಒಬ್ಬರಿಗೊಬ್ಬರು ಪರಿಚಯವಾಗಿ, ಇನ್ನೊಂದು ಮದುವೆಗೂ ಮೂಲವಾಗುವ ಸಂದರ್ಭಗಳು ಎಷ್ಟೋ ಇವೆಯಲ್ಲ. ಸಣ್ಣ ಖುಷಿಗಳು ಸಂಭ್ರಮ ಎನಿಸುವುದೇ ನಮ್ಮೊಂದಿಗೆ ನಮ್ಮವರು ಸೇರಿದಾಗಲಲ್ಲವೇ?

ಇದನ್ನೂ ಓದಿ | ದಶಮುಖ ಅಂಕಣ | ಮಹಾಕಾವ್ಯಗಳೊಂದಿಗೆ ಬೆಸೆದ ಜನಮನ

ಮದುವೆ ಮನೆಯೆಂದರೆ ಎಲ್ಲವೂ ಸೊಗಸು ಎನ್ನುವುದೂ ತುಸು ಕಷ್ಟವೇ. ಲಗ್ನವನ್ನು ಭಗ್ನಗೊಳಿಸಲು ಯತ್ನಿಸುವ ಪರಂಪರೆಯೇನು ಇಂದು-ನಿನ್ನೆಯದ್ದೇ? ಬೀಗರನ್ನು ಮಾತಾಡಿಸಿದ್ದು ಸರಿಯಾಗಲಿಲ್ಲ, ಕೊಟ್ಟ ಉಡುಗೊರೆ ಕಡಿಮೆಯಾಯಿತು, ಹುಡುಗಿಗೆ ಉಡಿಸಿದ ಸೀರೆ ಗಿಡ್ಡವಾಯಿತು, ವರನಿಗೆ ಹಾಕಿದ ಸರ ಸಪೂರವಾಯಿತು, ವಾಲಗದವರ ಶ್ರುತಿ ಸರಿಯಿಲ್ಲ, ಊಟಕ್ಕೆ ಹಾಕಿದ ಬಾಳೆ ಸೊಟ್ಟಗಿದೆ, ಸಾರಿಗೆ ಒಗ್ಗರಣೆ ಸಾಕಾಗಲಿಲ್ಲ, ಕೇಸರಿಭಾತಿಗೆ ತುಪ್ಪ ಇನ್ನಷ್ಟು ಬೇಕಿತ್ತು- ಇಂಥ ಯಾವ ಕಾರಣಗಳನ್ನೂ ಊಹಿಸಿಕೊಳ್ಳಬಹುದಿತ್ತು ಮದುವೆಮನೆಯಲ್ಲಿ ತಕರಾರು ಏಳುವುದಕ್ಕೆ. “ಮದುವೆ ಮನೆಲ್ಲಿ ಮಾವಿನ ಗೊರಟೆ, ಮದುಮಗನ ತಾಯಿ ಜಗಳಕ್ಕೆ ಹೊರಟೆ” ಎಂಬಂಥ ಗಾದೆಗಳನ್ನು ಕುಚೇಷ್ಟೆ ಎನ್ನೋಣವೇ? ಇದೇ ನಿಟ್ಟಿನಲ್ಲಿ ಹಲವಾರು ಪ್ರದೇಶಗಳಲ್ಲಿ ಬೀಗರು ಒಬ್ಬರಿಗೊಬ್ಬರು ಜರಿಯುವ ಹಾಡುಗಳೂ ಪ್ರಚಲಿತದಲ್ಲಿವೆ. ಕುಶಾಲಿಗೆ ಕುಶಾಲು, ಜಿದ್ದಿಗೆ ಜಿದ್ದು!

ವಿವಾಹ ಮಂಟಪದ ವಿಪತ್ಪರಂಪರೆಗಳು ನಮ್ಮ ಪೌರಾಣಿಕ ಕಥಾನಕಗಳನ್ನೂ ಕಳೆಗಟ್ಟಿಸಿವೆ! ಮಹಾಭಾರತದ ಕಥಾನಕಗಳಲ್ಲಿ ಕಲ್ಯಾಣಕ್ಕಾಗಿ ಕಾಳಗಗಳು ನಡೆಯುವುದು ಅಥವಾ ಕಾಳಗಗಳಿಂದಲೇ ಕಲ್ಯಾಣವಾಗುವುದು ಒಂದೆರಡಲ್ಲ. ಕೃಷ್ಣನ ಬಹುತೇಕ ಮದುವೆಗಳಿಗೆ ಊದಿದ್ದು ವಾಲಗವಲ್ಲ, ಯುದ್ಧಕಹಳೆಗಳೇ! ತಮ್ಮನಾದ ವಿಚಿತ್ರವೀರ್ಯನಿಗೆ ಹೆಣ್ಣು ತರುವುದಕ್ಕೆ ಹೋದ ಭೀಷ್ಮನೂ ಯುದ್ಧ ಮುಗಿಸಿಯೇ ಹುಡುಗಿಯರನ್ನು ತಂದವನು. ಪಾಂಡವರ ವಲ್ಲಭೆ ದ್ರೌಪತಿಯ ವಿವಾಹವಂತೂ ಹೆಸರು ಮಾತಿನದ್ದು. ಕ್ಷಾತ್ರಪಂಥಕ್ಕೆ ಸೇರದವನೊಬ್ಬ ಬಿಲ್ಲೆತ್ತಿದ ಎಂಬ ಕಾರಣಕ್ಕೆ ತರಲೆ ತೆಗೆದ ದುರ್ಯೋಧನ ಮತ್ತವನ ಪಟಾಲಂ, ಕಡೆಯಲ್ಲಿ ಪಾಂಡವರಿಂದ ಪೆಟ್ಟು ತಿಂದು ಹೋದ ಕಥೆಯನ್ನು ನಾವೆಲ್ಲ ಕೇಳಿದ್ದೇವಲ್ಲ. ಸನ್ಯಾಸಿ ವೇಷದಿಂದ ಸಂಪಾದಿಸಿದ ಪುಣ್ಯ ಸಾಕಾಗದ ಅರ್ಜುನನಿಗೆ, ಸುಭದ್ರೆಯನ್ನು ರಥ ಏರಿಸಿಕೊಂಡು ಹೋಗುವಾಗ ಬಿಲ್ಲು ಹಿಡಿಯುವುದು ಅನಿವಾರ್ಯವಾಯಿತು. ಹಾಗಾಗಿ ಪುರಾಣ ಕಾಲದ ಕಲ್ಯಾಣಗಳಿಗೂ ಕಾಳಗಗಳಿಗೂ ಅವಿನಾಭಾವ ನಂಟು.

ಇಂದು ಅಷ್ಟೆಲ್ಲಾ ಕಷ್ಟಪಡುವ ಅಗತ್ಯವೇ ಇಲ್ಲ. ಎಷ್ಟು ಹತ್ತಿರದ ನೆಂಟರಿಗೂ ತಮ್ಮವರ ಮದುವೆಯಲ್ಲಿ ಸಂಭ್ರಮ, ಸಡಗರಕ್ಕೆಲ್ಲಾ ಸಮಯವೇ ಇರುವುದಿಲ್ಲ. ಹೊರಟಿರುವ ಕಲ್ಯಾಣ ಮಂಟಪದಲ್ಲಿ ಪಾರ್ಕಿಂಗ್ ಎಲ್ಲಿ ಮಾಡುವುದು ಎಂಬುದನ್ನು ನೋಡಿಕೊಂಡರಾಯಿತು!

ಇದನ್ನೂ ಓದಿ | ದಶಮುಖ ಅಂಕಣ | ಹೇಮಂತ ಎಂಬ ಧೀಮಂತ ಋತು

Exit mobile version