Site icon Vistara News

ದಶಮುಖ ಅಂಕಣ | ನಲಿವುದಕೆ ಒಲಿವುದಕೆ ಹೊಸಹಾದಿ ಬೇಕು

new life

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/01/WhatsApp-Audio-2023-01-02-at-4.15.10-PM.mp3

ʻಹೊಸದುʼ ಎನ್ನುತ್ತಿದ್ದಂತೆ ಎಷ್ಟೊಂದು ಪುಳಕ ಮನದಲ್ಲಿ! ಹೊಸದು ಏನಾದರೂ ಆಗಿರಬಹುದು, ಇಂಥದ್ದೇ ಎಂದಿಲ್ಲ. ಹೊಸ- ತಿಂಡಿ, ಬಟ್ಟೆ, ಪುಸ್ತಕ, ಸಿನೆಮಾ, ಆಟಿಕೆ, ಗೆಳೆಯ, ಊರು, ಕೆಲಸ- ಕಡೆಗೆ ಕನ್ನಡಕ, ಹಲ್ಲುಸೆಟ್ಟಿನವರೆಗೂ ಬಂತು. ಹೊಸದು ಎಂದಾಕ್ಷಣ ಒಮ್ಮೆಯಾದರೂ ಕಣ್ಣು ಅರಳದೇ ಇರುವುದೇ ಇಲ್ಲ. ಹೊಸ ಆಟಿಕೆಯನ್ನು ದಿನವಿಡೀ ಆಡಿ, ರಾತ್ರಿ ಮಲಗುವಾಗ ತಮ್ಮ ಹಾಸಿಗೆಯಲ್ಲೇ ಅವುಗಳಿಗೂ ಜಾಗ ಮಾಡುವ ಮಕ್ಕಳಿಂದ ಹಿಡಿದು, ತಮ್ಮ ಹೊಸ ದಂತಪಂಕ್ತಿ ಹಾಕಿಕೊಂಡು ಸಿಕ್ಕವರಲ್ಲೆಲ್ಲಾ ಮುಕ್ತವಾಗಿ ನಗುವ ವೃದ್ಧರವರೆಗೂ ಈ ಮಾತು ಸತ್ಯ. ಹಾಗಾದರೆ ಯಾಕೆ ನಮಗಷ್ಟು ಸಂಭ್ರಮ ʻಹೊಸತುʼ ಎನ್ನುವುದರ ಬಗ್ಗೆ? ಏನೆಲ್ಲ ಭಾವಗಳು ಥಳುಕು ಹಾಕಿಕೊಂಡಿವೆ ಇದರೊಂದಿಗೆ?

ಹೊಸ ವರ್ಷ ಬಂದಾಕ್ಷಣ ಹಳೆಯದೆಲ್ಲಾ ಅಳಿದೇ ಹೋಯಿತು ಎಂಬಂತೆ ಸಂಭ್ರಮಿಸಿದ್ದಾಯ್ತು. ಬರುವಂಥ ಹೊಸ ದಿನಗಳಲ್ಲಿ ಎಲ್ಲವೂ ಒಳಿತಾಗಬಹುದು, ಆಗಲಿ ಎನ್ನುವ ನಿರೀಕ್ಷೆ ಸಹಜ. ಅಂದರೆ, ಹೊಸದು ಎನ್ನುವಲ್ಲಿ ಭಾವನೆಗಳ ದೊಡ್ಡದೊಂದು ಮೆರವಣಿಗೆಯೇ ಹೊರಡುತ್ತದೆ ಎನ್ನುವುದು ಹೌದಾದರೆ, ಯಾವುದು ಅವೆಲ್ಲಾ? ಉದಾಹರಣೆಗೆ ಹೇಳುವುದಾದರೆ, ಹೊಸ ಜೀವವೊಂದು ಕುಟುಂಬಕ್ಕೆ ಆಗಮಿಸಿದ ಕ್ಷಣದಿಂದಲೇ ಆರಂಭವಾಗುತ್ತದೆ, ʻಮಗೂಗೆ ಹೊಸಾ ಹೆಸರಿಡಬೇಕುʼ ಎಂದು ಹೆಸರಿನ ಪಟ್ಟಿಗಳನ್ನೆಲ್ಲಾ ತಡಕಾಡುತ್ತೇವೆ. ಮಗುವಿಗಾಗಿ ಏನೇನೆಲ್ಲಾ ಹೊಸದು ತರುತ್ತೇವೆ, ಮಾಡಿಸುತ್ತೇವೆ. ಹೊಸ ಜೀವದ ಭವಿಷ್ಯಕ್ಕಾಗಿ ಎಷ್ಟೊಂದು ಕನಸು ಕಾಣುತ್ತೇವೆ. ನೋಡಿ, ಹೊಸದು ಎನ್ನುವಲ್ಲಿ ಸಂಭ್ರಮ, ನಿರೀಕ್ಷೆ, ಆಕರ್ಷಣೆ, ಕನಸು- ಎಷ್ಟೊಂದು ಭಾವಗಳು. ಇದು ಇಲ್ಲಿಗೇ ಮುಗಿಯುವುದಿಲ್ಲ.

ಹೊಸ ಊರಿನಲ್ಲಿ ಹೊಸದೊಂದು ಕೆಲಸ ಸಿಕ್ಕಿದೆ ಎಂದುಕೊಳ್ಳೋಣ. ಆ ಕೆಲಸ ಸಿಗುವ ಹಿಂದಿನ ಪ್ರಯತ್ನ, ಅದರಲ್ಲಿ ಸಾಧಿಸಬೇಕಾದ ಪ್ರಗತಿ, ಹೊಸ ಊರು ಹೇಗಿರುತ್ತದೋ ಎಂಬ ಕುತೂಹಲ, ನಮಗೆ ಒಗ್ಗದಿದ್ದರೆ ಎಂಬ ಆತಂಕ- ಪ್ರಯತ್ನ, ಪ್ರಗತಿ, ಕುತೂಹಲ, ಆತಂಕ- ಹೊಸದೆನ್ನುವಾಗಿನ ಭಾವನೆಗಳ ದಿಬ್ಬಣಕ್ಕೆ ಇನ್ನಷ್ಟು ಭಾವಗಳ ಸೇರ್ಪಡೆ. ಹೊಸ ಜೋಡಿಯೊಂದು ಹೊಸ ಬದುಕಿಗೆ ಕಾಲಿಟ್ಟಿದೆ ಎಂಬಲ್ಲಂತೂ ಭಾವನೆಗಳ ದೊಡ್ಡ ಸಂಪುಟವೇ ಸೃಷ್ಟಿಯಾಗುತ್ತದೆ. ಮದುಮಕ್ಕಳು, ಅವರ ಹೆತ್ತವರು, ಕುಟುಂಬ, ಮಿತ್ರರು, ಬಂಧುಗಳು ಎಲ್ಲರ ಪಾಲಿಗೂ ಹೊಸ- ಬಣ್ಣ, ಜೀವನ, ಭಾವನಾ, ಹರುಷ, ಪುಳಕ, ಸುಖ, ಮನೆ, ಜನ, ಊರು, ಅಂಜಿಕೆ, ದುಗುಡ, ರುಚಿ, ಹಬ್ಬ; ಅಬ್ಬಬ್ಬ! ಸತ್ಯ ಹೇಳುವುದಾದರೆ, ಇನ್ನೂ ಹೆಚ್ಚು ವಿವರಿಸುವುದಕ್ಕೆ ಭಾಷೆಯ ಬರ ಎಂದುಕೊಂಡರೆ ತಪ್ಪೇನಿಲ್ಲ!

ಕಾಲದ ಲೆಕ್ಕದಲ್ಲಿ ನೋಡುವುದಾದರೆ ಆಯಾ ಕಾಲಕ್ಕೆ ಒಂದಿಷ್ಟು ಹೊಸದು ಸಂಭವಿಸಲೇ ಬೇಕು. ಈಗಿನ ದಿನಮಾನವನ್ನೇ ತೆಗೆದುಕೊಂಡರೆ- ಸುಗ್ಗಿಯ ಕಾಲವಿದು. ಎಲ್ಲೆಡೆ ಹೊಸ ಪೈರು, ಹೊಸ ಧಾನ್ಯ, ಹೊಸ ಬೆಳೆ, ಹೊಸ ನಗು, ಹೊಸ ಹಿಗ್ಗು, ಹೊಸ ಸಂಪತ್ತು, ಹೊಸ ಸಮೃದ್ಧಿ; ನಿಜಕ್ಕೂ ಹೊಸಭಾವಗಳ ಸುಗ್ಗಿ. ಹಾಗೆಯೇ ಮುಂದುವರಿದರೆ ವಸಂತದಲ್ಲಿ ನವಪಲ್ಲವ, ನವಸುಮ. ಚಿಗುರು, ಹೂವಾದ ಮೇಲೆ ಮಿಡಿ, ಕಾಯಿ ಆಗದಿರುವುದುಂಟೇ? ಅಂದರೆ ಹೊಸ ಫಲವೂ ಬಂತು. ಮುಂದಿನದು ಮಳೆಗಾಲ. ಹಳೆ ನೀರು ಹೋಗಿ ಹೊಸ ನೀರು ಬರುವ ಕಾಲ. ಭೂಮಿ ಹಸಿರಾದ ಹೊಸಬಟ್ಟೆ ತೊಟ್ಟು, ಹೊಸ ಹುಟ್ಟನ್ನು ಸಂಭ್ರಮಿಸುವ ಕಾಲ. ಚಳಿಗಾಲವೆಂದರೆ ತೊಟ್ಟ ಹಸಿರುಡುಗೆಯನ್ನು ಮತ್ತೆ ಬದಲಿಸಿ, ಹೊಸದಕ್ಕೆ ಹಂಬಲಿಸುವ ದಿನಗಳು. ಅಂತೂ, ಕಾಲಕಾಲಕ್ಕೆ ಎಲ್ಲಾ ಋತುಗಳೂ ನವನವೋನ್ಮೇಷಶಾಲಿನಿಯಾಗಿ ನಳನಳಿಸುತ್ತವೆ.

ಹೊಸದು ಎನ್ನುವುದ ಬಗ್ಗೆ ಭಾಷೆಯ ಜಾಯಮಾನವೂ ಕುತೂಹಲಕರವಾದದ್ದು. ಹೊಸತು, ನವೀನ, ನವ್ಯ, ನೂತನ, ನವ (ಒಂಬತ್ತಲ್ಲ!), ಅಭಿನವ ಎಂಬಂಥ ಕೆಲವೇ ಶಬ್ದಗಳು ಇದಕ್ಕೆ ಸಂವಾದಿಯಾಗಿ ದೊರೆಯಬಹುದು. ಹೆಚ್ಚಿನ ಪರ್ಯಾಯಗಳೇ ಇಲ್ಲದೆ ಬದುಕನ್ನೆಲ್ಲಾ ಆವರಿಸಿಕೊಂಡಿರುವ ಶಬ್ದವಿದು ಎಂದರೆ ಅತಿಶಯವಲ್ಲ. ಹಾಗೆಂದು ಹೊಸದು ಎನ್ನುವುದಕ್ಕೆ ಇರುವ ಭಾವಗಳೆಲ್ಲಾ ಸಿಕ್ಕಾಪಟ್ಟೆ ಒಳ್ಳೆಯವು ಎಂಬ ಹಣೆಪಟ್ಟಿ ಕಟ್ಟಲೂ ಆಗದು. ಹೊಸದು ಎನ್ನುವುದರ ಬಗ್ಗೆ ಹೇಗೋ ಏನೋ ಅನ್ನುವ ಕಳವಳ; ಸರಿಯಾಗದಿದ್ದರೆ ಎಂಬ ಆತಂಕ; ಈವರೆಗೆ ಕಾಣದ್ದು ಎಂಬ ಅಂಜಿಕೆ; ಹೇಳಲಾರದಂಥ ಅಪನಂಬಿಕೆ; ಹೊಸದೆಂಬ ಬದಲಾವಣೆಗೆ ಒಗ್ಗಲಾರದ ಹಠಮಾರಿತನ- ಈ ಭಾವಗಳೆಲ್ಲಾ ನಾಣ್ಯದ ಇನ್ನೊಂದು ಮುಖವಿದ್ದ ಹಾಗೆ. ʻಹೊಸಾ ವೈದ್ಯರಿಗಿಂತ ಹಳೇ ರೋಗಿಯೇ ವಾಸಿ, ಹಳೇ ಗಂಡನ ಪಾದವೇ ಗತಿʼ ಮುಂತಾದ ಗಾದೆಗಳೂ ಸಹ ಹೊಸದು ಎನ್ನುವುದ ಮೇಲಿನ ಅಂಜಿಕೆ, ಅಪನಂಬಿಕೆಗಳ ಪ್ರತೀಕವೇ ಅಲ್ಲವೇ? ಹೊಸ ಯೋಜನೆ, ಹೊಸ ಪಕ್ಷ, ಹೊಸ ಸರಕಾರ- ಇಂಥವುಗಳನ್ನೂ ಇದೇ ಪಟ್ಟಿಗೆ ಸೇರಿಸಿದರೆ ಕಿಡಿಗೇಡಿತನವಾದೀತೇ!

ಇದನ್ನೂ ಓದಿ | ದಶಮುಖ ಅಂಕಣ | ಮರೆಯಲಿ ಹ್ಯಾಂಗ- ಅಂದಿನ ಆ ಸೊಬಗ?

ಹೊಸದೇನಾದರೂ ಇಟ್ಟುಕೊಂಡವರ ಅಂಗಚೇಷ್ಟೆಗಳಂತೂ ನಗೆಯುಕ್ಕಿಸುವಂಥವು. ಹೊಸ ವಾಚು ಕಟ್ಟಿಕೊಂಡವರು ಮತ್ಮತ್ತೆ ಗಂಟೆ ನೋಡುವುದು, ಹೊಸ ಬಟ್ಟೆ ತೊಟ್ಟವರು ಸರಭರ ಓಡಾಡುವುದು, ಹೊಸ ನಮೂನೆಯ ಹೇರ್ಕಟ್ ಮಾಡಿಸಿಕೊಂಡವರು ಪದೇಪದೆ ಕೂದಲ ಮೇಲೆ ಕೈಯಾಡಿಸುವುದು, ಹೊಸ ಜಂಬದ ಚೀಲ ಧರಿಸಿದವರು ಅದನ್ನೇ ವಾಲಾಡಿಸುವುದು, ಹೊಸ ಫೋನು, ಹೊಸ ಬೈಕು ತೆಗೆದುಕೊಂಡವರಂತೂ- ಬಿಡಿ, ಹೇಳಿ ಮುಗಿಯುವುದಕ್ಕಿಲ್ಲ ಅವರ ಡೌಲು. ಇನ್ನು ಹೊಸ ಸಂಗಾತಿ ಜೊತೆಗಿದ್ದವರದ್ದಂತೂ, ಕಿಸೆ ತುಂಬಾ ಹಣ ತುಂಬಿಕೊಂಡು ಓಡಾಡುವವರ ಅವಸ್ಥೆ. ಅಂದರೆ, ಈ ಎರಡೂ ಥರದವರು ಪದೇಪದೆ ಮುಟ್ಟಿ ನೋಡಿಕೊಳ್ಳುತ್ತಾರೆ!

ಇದೇ ಹೊತ್ತಿನಲ್ಲಿ ಹೊಸತನವನ್ನು ನಾನಾ ರೀತಿಯಲ್ಲಿ ಬಯಸಿದ ಕನ್ನಡದ ಕವಿಗಳು ನೆನಪಾಗುತ್ತಾರೆ. ಕಯ್ಯಾರ ಕಿಞ್ಞಣ್ಣ ರೈ ಅವರು ʻನವಭಾವ-ನವಜೀವ-ನವಶಕ್ತಿ ತುಂಬಿಸುವ ಹಾಡೊಂದು ಹಾಡಬೇಕುʼ ಎಂಬ ಕವನದಲ್ಲಿ ಹೊಸಭಾವವೆಂದರೆ ಹೊಸ ಶಕ್ತಿ ಸಂಚಾರ ಎಂದು ಪ್ರತಿಪಾದಿಸುತ್ತಾರೆ. ಗೋಪಾಲಕೃಷ್ಣ ಅಡಿಗರ, ʻಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನುʼ ಎಂಬ ಸಾಲುಗಳಲ್ಲಿ ಹೊಸತನದ ಅಡಿಯಲ್ಲಿ ರಸವಿದೆ ಎಂಬ ಭಾವವನ್ನು ಕಾಣಬಹುದು. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಂತೂ, ʻವರುಷಕೊಂದು ಹೊಸದು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆʼ ಎನ್ನುವ ಮೂಲಕ, ನಮ್ಮ ಬದುಕಿಗೂ ವರ್ಷಂಪ್ರತಿ ಇಷ್ಟೊಂದು ಹೊಸತನವಿದ್ದರೆ ಎಷ್ಟೊಂದು ಒಳಿತಾಗಿತ್ತು ಎಂದು ಹಂಬಲಿಸುತ್ತಾರೆ. ಆದರೆ ಡಿ.ವಿ. ಗುಂಡಪ್ಪನವರದ್ದು ಎಲ್ಲದರಲ್ಲೂ ಸಮತೂಕ. ʻಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು/ ಹೊಸ ಯುಕ್ತಿ ಹಳೆ ತತ್ವ ಒಡಗೂಡೆ ಧರ್ಮʼ ಎನ್ನುವ ಮೂಲಕ, ಬದುಕೆಂದರೆ ಹೊಸದು ಮತ್ತು ಹಳತುಗಳ ಪರಿಪಾಕ ಎಂದು ಭಾವಿಸುತ್ತಾರೆ. ಆದರೆ ಹೊಸತನದಲ್ಲೇ ಜೀವನದ ಪ್ರಗತಿಯಿದೆ ಎಂದು ದೃಢವಾಗಿ ನಂಬಿದವರು ಗೋಪಾಲಕೃಷ್ಣ ಅಡಿಗರು. “ಹಿಂದಿನೊಳಿತು ಕೆಡುಕು ಅದು ಭೂತ ವೃತ್ತ/ ಇಂದಿಗದು ಮುಂದಿಗದು ಬರಿಯ ಸ್ಮೃತಿ ಮಾತ್ರ/ ಹಳೆಹಾದಿ ನಡೆ ಕಲಿವವರೆಗೆಮಗೆ ಸಾಕು/ ನಲಿವುದಕೆ ಒಲಿವುದಕೆ ಹೊಸಹಾದಿ ಬೇಕು” ಎಂಬ ನಮ್ಮ ನವ್ಯ ಕವಿಯ ಆಶಯವು ನಮ್ಮೆಲ್ಲರ ಬದುಕಿನಲ್ಲೂ ನವೋದಯವನ್ನು ಮೂಡಿಸಲಿ.

ಇದನ್ನೂ ಓದಿ | ದಶಮುಖ ಅಂಕಣ | ಮಹಾಕಾವ್ಯಗಳೊಂದಿಗೆ ಬೆಸೆದ ಜನಮನ

Exit mobile version