ಈ ಅಂಕಣವನ್ನು ಇಲ್ಲಿ ಆಲಿಸಿ:
ಬಹಳ ವರ್ಷಗಳಿಂದ ನಮ್ಮ ನೆರೆಯಲ್ಲಿದ್ದವರು ಊರು ಬಿಟ್ಟು ಹೋಗುವವರಿದ್ದರು. ಹಲವಾರು ವರ್ಷಗಳಿಂದ ಇದೇ ಊರಿನಲ್ಲಿದ್ದು, ಈ ಜಾಗಕ್ಕೆ ಈ ಜನರೊಂದಿಗೆ ಚೆನ್ನಾಗಿ ಒಗ್ಗಿಹೋಗಿದ್ದರು. ಈಗ ಬೇರೆ ಊರಿಗೆ ಹೋಗುವುದು ಅವರಿಗೆ ಅನಿವಾರ್ಯವಾಗಿತ್ತು. ಹೊರಡುವ ದಿನದವರೆಗೂ ಈ ಬಗ್ಗೆ ಯೋಚಿಸಲು ಸಮಯವೇ ಇಲ್ಲದಷ್ಟು ವ್ಯಸ್ತರಾಗಿದ್ದರು ಅಂಕಲ್ ಮತ್ತು ಆಂಟಿ. ಆದರೆ ಹೊರಡುವ ದಿನದಂದು ನೆರೆಯವರಿಂದ ಬೀಳ್ಕೊಡುವಾಗ ಆಂಟಿ ಬಿಕ್ಕಿ ಬಿಕ್ಕಿ ಅಳುತ್ತಾರೆ ಎಂದು ಎಣಿಸಿದ್ದ ಎಲ್ಲರಿಗೂ ಅಚ್ಚರಿ ಕಾದಿತ್ತು. ಆಂಟಿ ಮ್ಲಾನವದನರಾಗಿ ಬೀಳ್ಕೊಂಡಿದ್ದರು; ಗೋಳೊ ಎಂದು ಅಂಕಲ್ ಅತ್ತಿದ್ದರು. ಅವರ ವಸ್ತುಗಳನ್ನು ತುಂಬಿಕೊಂಡ ಟ್ರಕ್ಕು ಮರೆಯಾದ ಮೇಲೆ ಅಲ್ಲಿದ್ದವರೆಲ್ಲಾ ಮಾತಾಡಿದ್ದು ಅದೊಂದೇ ವಿಷಯ- ಅಂಕಲ್ಲಿನ ಹೆಂಗರುಳು ಮತ್ತು ಅವರ ಬಿಕ್ಕುತ್ತಿದ್ದ ಕೊರಳು!
ಅಲಾಲಾಲಾಲ! ಇಷ್ಟು ವರ್ಷ ನಮ್ಮೊಂದಿಗೆ ಎಷ್ಟೊಂದು ಹೊಂದಿಕೊಂಡಿದ್ದರು ಎಂಬ ವಿಷಯವೇ ಮರೆ ಮಾಚುವಂತೆ, ಎಲ್ಲರ ಬಾಯಲ್ಲೂ ಇದ್ದಿದ್ದು ಅಂಕಲ್ಲಿನ ಕಣ್ಣೀರು! ಈ ಪರಿಯಲ್ಲಿ ಎಲ್ಲರೂ ಚರ್ಚಿಸುವಂಥದ್ದೇನು ಮಾಡಿಬಿಟ್ಟರು ಅವರು ಎನಿಸಿತು. ಊರು ಬಿಟ್ಟು ಹೋಗುವಾದ ಸಹಜವಾಗಿ ಅವರಲ್ಲಿದ್ದ ವಿಷಾದ ಭಾವವನ್ನು ಕಣ್ಣೀರಿನ ಮೂಲಕ ಹೊರಹಾಕಿದ್ದರಷ್ಟೇ. ಉಳಿದವರ ಪಾಲಿಗೆ ಇದು ಅನಿರೀಕ್ಷಿತವಾಗಿದ್ದರೆ ಅದರಲ್ಲಿ ಅಂಕಲ್ ಪಾತ್ರವೇನು? ಹಾಗೆ ನೋಡಿದರೆ ಆದ ಬೇಸರವನ್ನು ಹೊರಗೆಡವದೆ ಭಾರವಾದ ಮನಸ್ಸಿನಿಂದ ಆಂಟಿ ಬೀಳ್ಕೊಂಡಿದ್ದರು. ಅಂಕಲ್ ಮಾತ್ರ ಗಾಡಿ ಹತ್ತಿದ ಮೇಲೆ ಮಕ್ಕಳಂತೆ ಎಲ್ಲರಿಗೂ ಟಾಟಾ ಮಾಡಿದ್ದರು.
ಇದನ್ನೆಲ್ಲಾ ನೋಡುತ್ತಿದ್ದಂತೆ ಅಳುವಿನ ಬಗ್ಗೆಯೇ ಮನಸ್ಸು ಧ್ಯಾನಿಸತೊಡಗಿತು. ಏನು ಅಳುವೆಂದರೆ? ಕಣ್ಣಲ್ಲಿ ನೀರು ಹರಿಸುವುದನ್ನು ಅಳು ಎನ್ನಬಹುದೇ? ಕಣ್ಣೀರಿಲ್ಲದೆ ಅಳುವುದಿಲ್ಲವೇ? ಯಾಕಾಗಿ ಅಳುತ್ತೇವೆ? ಶಾಲೆಗಳಲ್ಲಿ ಕಲಿತಂತೆ ನಗು ಎಂಬುದರ ವಿರುದ್ಧ ಪದವೇ ಅಳು ಎಂಬುದು? ಅಳು ಅಥವಾ ಕಣ್ಣೀರು ಎಂಬುದು ಲಿಂಗ-ಸೂಕ್ಷ್ಮ ವಿಷಯವೇ? ಹಾಗಿಲ್ಲದಿದ್ದರೆ ಅಂಕಲ್ಲಿನದ್ದು ಹೆಂಗರುಳು ಹೇಗಾದೀತು? ಅಥವಾ ಅಳುವೆಲ್ಲಾ ಮಹಿಳೆಯರಿಗೇ ಮಾರಿ ಹೋಗಿದ್ದೇ? ಭೀತಿ, ನಗು, ಕೋಪ, ಬೇಸರ, ಸಂತೋಷ ಇತ್ಯಾದಿಗಳ ಸಾಲಿನಲ್ಲೇ ಅಳುವೂ ಒಂದು ಮಾನವ ಸಹಜ ಸಂವೇದನೆಯೇ ತಾನೇ? ಅತ್ತಾಗ ಮನಸ್ಸು ಹಗುರಾಗುವುದು ಹೌದೆಂದಾದರೆ, ಅಳುವುದರ ಬಗ್ಗೆ ಇಷ್ಟೊಂದು ಪೂರ್ವಗ್ರಹ ಯಾಕಾಗಿ ಇದೆ?
ಅಳುವುದರ ಬಗ್ಗೆ ವಿಜ್ಞಾನ ಏನೆನ್ನುತ್ತದೆ ಎಂಬುದನ್ನು ಗಮನಿಸಿದರೆ, ದೇಹ ಮತ್ತು ಮನಸ್ಸಿಗೆ ಅಗತ್ಯವಾದ ಮತ್ತು ಲಾಭದಾಯಕವಾದ ಕ್ರಿಯೆಯಿದು. ಕಣ್ಣುಗಳನ್ನು ಶುಚಿ ಮಾಡುವುದರಿಂದ ಹಿಡಿದು ಮನಸ್ಸಿನ ರಾಡಿ ತೊಳೆಯುವವರೆಗೆ ಸ್ವಚ್ಛತಾ ಕಾರ್ಯವೂ ಕಣ್ಣೀರಿಗೆ ಉಂಟು. ಹಲವು ನಿಮಿಷಗಳವರೆಗೆ ಅತ್ತಾಗ ದೇಹದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ನಿಂದಾಗಿ ದೇಹ-ಮನಸ್ಸುಗಳು ಹಗುರವಾಗಿ, ಒತ್ತಡ ನಿವಾರಣೆಯಾಗಿ, ನಾವು ಸಮಾಧಾನ ಹೊಂದುತ್ತೇವೆ ಎನ್ನುತ್ತವೆ ಅಧ್ಯಯನಗಳು. ಹಾಗಾದರೆ ಅಳುವುದು ಅಥವಾ ಕಣ್ಣೀರು ಹಾಕುವುದೆಂದರೆ ಮಾಡಬಾರದ್ದಲ್ಲ; ನಮ್ಮ ಸ್ವಾಸ್ಥ್ಯ ಸಾಧಿಸುವಲ್ಲಿ ಅವುಗಳಿಗೂ ಪಾಲುಂಟು.
ಹಾಗೆ ನೋಡಿದರೆ ಈ ದೇಹವೆಂಬ ಮೂಳೆ-ಮಾಂಸದ ಚರಿತೆಯಲ್ಲಿ ಅಳುವಿನದ್ದು ಗಣ್ಯ ಪಾತ್ರವೇ. ಮಗು ಹುಟ್ಟಿದ ತಕ್ಷಣ ಮಾಡುವ ಮೊದಲ ಕ್ರಿಯೆಯೆಂದರೆ ಅಳುವುದು. ಶಿಶುವಿನ ಉಸಿರಾಟ ಆರಂಭವಾಗುವುದಕ್ಕೆ ಅಗತ್ಯವಾಗಿ ಬೇಕಾದ ಕ್ರಿಯೆಯಿದು. ಮಗುವಿನ ಮೊದಲ ಅಳು ಕೇಳಿದಾಗ ಸುತ್ತಲಿನ ಎಲ್ಲರ ಮುಖದಲ್ಲಿ ನಗು ಅರಳುತ್ತದೆ. ಬದುಕಿನ ಇನ್ನೊಂದು ತುದಿಯನ್ನು ಗಮನಿಸಿದರೆ, ವ್ಯಕ್ತಿ ನಿರ್ಗಮಿಸುತ್ತಿದ್ದಂತೆ ಸುತ್ತಲಿನ ಎಲ್ಲರ ಕಣ್ಣಲ್ಲಿ ನೀರು. ಅಂತೂ ಹುಟ್ಟು-ಸಾವೆಂಬ ಎರಡೂ ಮುಖಗಳಲ್ಲಿ ಅಳುವು ಮುಖ್ಯ ಭೂಮಿಕೆಯಲ್ಲೇ ಇದೆ. ಇವೆರಡರ ನಡುವಿನ ಅವಧಿಯಲ್ಲಿ ಆಗಾಗ ಬಂದು ಹೋಗುವ ಅತಿಥಿ ಕಲಾವಿದನ ಪಾತ್ರ ಇದರದ್ದು.
ಅಳುವಿಗೆ ಅಂಟಿದ ಭಾವಗಳು ಯಾವುವು ಎಂದು ನೋಡಿದರೆ ಬಹುಪಾಲು ಶೋಕಭಾವದ್ದೇ ಮೇಲುಗೈ. ಕಂಬನಿ, ಕಣ್ಣೀರು, ಅಶ್ರು, ಉಮ್ಮಳ, ಗದ್ಗದಿಸುವುದು ಎಂದೆಲ್ಲಾ ಕರೆಸಿಕೊಳ್ಳುವ ಈ ಅಳು ಬಂತೆಂದರೆ ದುಃಖ, ವ್ಯಥೆ, ವಿಷಾದ, ಬೇಸರ ಮುಂತಾದ ತಪ್ತ ಭಾವಗಳದ್ದೇ ಕಾರುಭಾರು. ಹಾಗೆಂದು ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದವರಿಗೆ ಬರುವುದು ಕಣ್ಣೀರೇ ಹೌದಾದರೂ ಅದು ಆನಂದಭಾಷ್ಪ; ಸಂಗೀತದಲ್ಲಿ ಲೀನವಾಗಿ ಕಣ್ಣೀರುಗರೆದರೆ ಅದು ಭಾವಾತಿರೇಕ; ಪ್ರೀತಿ ಪಾತ್ರರನ್ನು ಅಪ್ಪಿ ಕಂಬನಿಗರೆದರೆ ಅದು ಭಾವೋನ್ಮಾದ; ಅಮ್ಮನ ಕಾಣದೆ ಗುಮ್ಮನ ನೆನಪಾಗಿ ಮಗು ಅಳುವಾಗ ಅದು ಹೆದರಿಕೆ; ಕಣ್ಮರೆಯಾದ ಆಪ್ತರನ್ನು ನೆನೆದು ಅತ್ತರೆ ಅದು ಅಶ್ರುತರ್ಪಣ; ಆದರೆ ಕ್ಯಾಮೆರಾಗಳನ್ನು ಕಂಡಾಕ್ಷಣ ರಾಜಕಾರಣಿಗಳ ಕಣ್ಣಲ್ಲಿ ಬರುವುದು ಮಾತ್ರ ಮೊಸಳೆ ಕಣ್ಣೀರು! ಪಾಪ, ಹೀಗೆ ಮೊಸಳೆಗಳ ಮನ ನೋಯಿಸುವುದು ಎಷ್ಟು ಸರಿ?
ಕೆಲವು ಗೋಳಾಡುವ ಸಿನೆಮಾಗಳನ್ನು ನೋಡಿ ಚಿತ್ರಮಂದಿರದಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದು ಸಾಲದಂತೆ, ಮನೆವರೆಗೂ ಘಟ್ಟಿಸಿ ಅಳುತ್ತಾ ಬಂದವರ ಕಥೆಗಳಿವೆ. ನಾಟಕ ನೋಡುತ್ತಾ ಭೋರಾಡಿ ಅತ್ತು, ಪ್ರೇಕ್ಷಕರಿಗೆ ಹೆಚ್ಚುವರಿ ಮನರಂಜನೆ ಒದಗಿಸಿದ ಘಟನೆಗಳಿವೆ. ಒಡೆಯ/ ಒಡತಿಯನ್ನು ಕಳೆದುಕೊಂಡ ಸಾಕು ಪ್ರಾಣಿಗಳು ಊಟ ಬಿಟ್ಟು ಕಣ್ಣೀರಿಟ್ಟ ಸಂಗತಿಗಳಿವೆ. ಮದುವೆಯಾಗಿ ತವರು ಬಿಡುವಾಗ, ಉದ್ಯೋಗ ನಿಮಿತ್ತ ಊರು ಬಿಡುವಾಗ, ಶಿಕ್ಷಣದ ನಿಮಿತ್ತ ದೇಶ ಬಿಡುವಾಗ, ಬೇಕಾದ್ದನ್ನು, ಬೇಕಾದವರನ್ನು ಕಳೆದುಕೊಂಡಾಗ, ಅವಘಡಗಳಲ್ಲಿ ಮನೆ-ಮಾರು ಕಳೆದುಕೊಂಡಾಗ- ಹೀಗೆ ಕಣ್ಣೀರು ಬರುವುದಕ್ಕೆ ಕಾರಣಗಳು ಲೆಕ್ಕವಿಲ್ಲದಷ್ಟಿವೆ. ಅಳುವುದಕ್ಕೆ ನೂರು ಕಾರಣಗಳಿದ್ದರೆ, ನಗುವುದಕ್ಕೆ ನೂರೊಂದು ಕಾರಣಗಳಿವೆ ಎಂಬ ನಂಬಿಕೆಯೇ ತಾನೇ ಬದುಕನ್ನು ಸುಂದರವಾಗಿಸುವುದು.
ಅಳುವಿನ ಬಗ್ಗೆ ಭಾಷೆಯ ಜಾಯಮಾನವನ್ನು ಗಮನಿಸೋಣ. ತಟ್ಟಿಮುಟ್ಟಿದ್ದಕ್ಕೆ ಅಳುವವರಿಗೆ ಅಳುಮುಂಜಿ, ಅಳುಬುರುಕ ಎನ್ನುವ ಹೆಸರು ಸಾಮಾನ್ಯ. ಕಣ್ಣೀರ ಧಾರೆ, ಕಂಬನಿ ಕೋಡಿ ಎಂಬೆಲ್ಲಾ ಶಬ್ದಗಳು ಶೋಕದ ಮಹಾಪೂರವನ್ನೇ ಹರಿಸುತ್ತವೆ. ಅತಿ ಕಷ್ಟದ ಅಥವಾ ಹೀನಾಯ ಬದುಕಾಗಿದ್ದರೆ ಕಣ್ಣೀರಲ್ಲಿ ಕೈತೊಳಿ ಅಥವಾ ಕಣ್ಣೀರ ಕೂಳು ಎನ್ನುವಂಥ ಬಳಕೆಗಳಿವೆ. ಜೊತೆಗೆ, ಕೆಲವು ಗಾದೆಗಳೂ ದೊರೆಯಬಹುದು ಈ ಬಗ್ಗೆ. ಹೊಡೆದಂತೆ ಮಾಡ್ತೇನೆ ಅತ್ತಂತೆ ಮಾಡು, ನಕ್ಕಷ್ಟೇ ಅಳಬೇಕು, ಮಗು ಅತ್ತ ಹೊರತು ತಾಯಿ ಹಾಲೂಡುವುದಿಲ್ಲ ಮುಂತಾದ ಗಾದೆಗಳಲ್ಲಿ ಜೀವನಾನುಭವದ ಎಳೆಯೂ ಉಂಟು. ಆದರೆ ಅಳುವ ಗಂಡನ್ನು ನಂಬಬೇಡ, ನಗುವ ಹೆಣ್ಣನ್ನು ನಂಬಬೇಡ ಎಂಬಂಥ ನಾಣ್ಣುಡಿಗಳು ಮಾತ್ರ ಸಮಾಜದಲ್ಲಿ ಪ್ರಚಲಿತವಿದ್ದ ಲಿಂಗ ಸಂಬಂಧೀ ಪೂರ್ವಗ್ರಹಗಳ ಬಗ್ಗೆ ವಿಷಾದ ಮೂಡಿಸುತ್ತವೆ.
ಇದನ್ನೂ ಓದಿ: ದಶಮುಖ ಅಂಕಣ: ʻಕಾಯುವಿಕೆಗಿಂತನ್ಯ ಸುಖವು ಬೇರಿಲ್ಲ!ʼ
ಕಾವ್ಯ ಪ್ರಪಂಚಕ್ಕೆ ವಿಷಾದ, ಶೋಕದಂಥ ತಪ್ತ ಭಾವಗಳು ಬಹಳ ಆಪ್ತವಾದವು. ಆದರೆ ಅಳು ಎನ್ನುವುದನ್ನು ತೀರಾ ವಾಚ್ಯವಾಗಿ ಹೇಳುವಂಥದ್ದು ಕಡಿಮೆ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ, “ಬಾನಿನಲ್ಲಿ ಒಂಟಿ ತಾರೆ/ ಸೋನೆ ಸುರಿವ ಇರುಳ ಮೋರೆ/ ಕತ್ತಲಲ್ಲಿ ಕುಳಿತು ಒಳಗೆ/ ಬಿಕ್ಕುತಿಹಳು ಯಾರೊ ನೀರೆ” ಎಂಬ ಹೇಳಿಯೂ ಹೇಳದಂಥ ಸಾಲುಗಳಂಥವು ಬಹಳಷ್ಟು ದೊರೆತಾವು. ಅಳುವಿನೊಂದಿಗೆ ನಗುವಿಗೂ ಜಾಗ ಇರುವಂಥ ಸಾಲುಗಳು ಹಲವಾರಿವೆ. ಬೇಂದ್ರೆಯವರ “ನನ ಕೈಯ ಹಿಡಿದಾಕೆ ಅಳು ನುಂಗಿ ನಗುವೊಮ್ಮೆ ನಾನೂನು ನಕ್ಕೇನ” ಎಂಬಂಥವು, ಅಥವಾ ಗೋಪಾಲಕೃಷ್ಣ ಅಡಿಗರ “ಅಳುವ ಕಡಲೊಳಗೆ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ” ಮುಂತಾದವು ಮನದಲ್ಲಿ ಮಿಶ್ರ ಭಾವಗಳನ್ನು ಮೂಡಿಸುತ್ತವೆ. ಕೆಲವು ಸಾಲುಗಳು ಅಳುವನ್ನು ಮಾಧ್ಯಮವಾಗಿ ಇರಿಸಿಕೊಂಡು ಗಹನವಾದ ಮತ್ತೇನನ್ನೋ ಹೇಳುತ್ತವೆ. ಉದಾ, ಶಿಶುನಾಳ ಶರೀಫರ “ಅಳಬೇಡ ತಂಗಿ ಅಳಬೇಡ, ನಿನ್ನ ಕಳುಹ ಬಂದವರಿಲ್ಲಿ ಉಳಿಹಿ ಕೊಂಬುವರಿಲ್ಲ” ಎಂಬ ತತ್ವಪದ. “ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ ಬೇಟೆಗಾರಗೆ ದಯ ಹುಟ್ಟೀತೆ” ಎಂಬಂಥ ದಾಸರ ಪದಗಳೂ ಇದೇ ಸಾಲಿನವು.
ಜನಪದರಲ್ಲೂ ಅಳು ಎಂಬುದು ಬದುಕಿನೊಂದಿಗೇ ಬೆರೆತಿರುವಂಥದ್ದು. “ಅತ್ತರೆ ಅಳಲವ್ವ ಈ ಕೂಸು ನನಗಿರಲಿ/ ಕೆಟ್ಟರೆ ಕೆಡಲಿ ಮನಿಗೆಲಸ/ ಕಂದನಂಥ ಕೂಸು ಇರಲವ್ವ ಮನಿತುಂಬ” ಎನ್ನುವ ತಾಯಿಗೆ ಕೂಸಿನ ಅಳುವು ದೊಡ್ಡ ವಿಷಯವೇ ಅಲ್ಲ. “ಅಳುವುದೇತಕೆ ತಮ್ಮ/ ಅತ್ತರಂಜಿಪ ಗುಮ್ಮ” ಅಥವಾ “ಯಾಕಳುವೆ ರಂಗಯ್ಯ ಬೇಕಾದ್ದು ನಿನಗೀವೆ”, “ಅಳಬೇಡ ತಮ್ಮಯ್ಯ ಅಳಿರ ಕಣ್ಣಿಗೆ ನಿದ್ದೆ” ಮುಂತಾದ ಲಾಲಿ ಹಾಡುಗಳಲ್ಲಿ ಅಳುವೆಂಬುದು ಕೂಸಿನ ಜೊಲ್ಲಿನಷ್ಟೇ ಆಪ್ಯಾಯಮಾನವಾದುದು.
ನಗುವಿನಂತೆ ಅಳುವುದಕ್ಕೊಂದು ದಿನ, ನಗೆ ಕ್ಲಬ್‌ಗಳಂತೆ ಅಳು ಕ್ಲಬ್‌ಗಳೂ ಇವೆ. ಆದರೆ ಇಷ್ಟೆಲ್ಲಾ ಔಪಚಾರಿಕತೆಯ ಅಗತ್ಯವಿಲ್ಲ ಎಂದೆನಿಸಿದರೆ ಅತ್ತು ಹಗುರಾಗುವುದಕ್ಕೆ ಹಿಂಜರಿಯಬೇಡಿ. ನಕ್ಕಾಗ ಜೊತೆಗೆ ನಗುವುದು ಎಂದು ಖುಷಿಯೊ, ಅತ್ತಾಗ ಕಂಬನಿ ಒರೆಸುವುದೂ ಅಷ್ಟೇ ಆಪ್ಯಾಯಮಾನ. ಹೌದು, ಅಳುವುದರಲ್ಲೂ ಹಿತವಿದೆ!
ಇದನ್ನೂ ಓದಿ: ದಶಮುಖ ಅಂಕಣ: ಮಳೆಯೆಂಬ ಮಹಾಕಾವ್ಯದಲಿ ಮಿಂದು…