ಈ ಅಂಕಣವನ್ನು ಇಲ್ಲಿ ಕೇಳಿ:
ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ಚಕ್ರ- ಇವುಗಳೆಡೆಗೆ ತಲೆ ಎತ್ತಿ ಎದೆಯುಬ್ಬಿಸಿ ನಡೆಯುವ ದಿನಗಳು ಮತ್ತೊಮ್ಮೆ ಬರುತ್ತಿವೆ. ಅದೇ ಬಣ್ಣದ ಬಟ್ಟೆಗಳನ್ನು ತೊಡುವವರು, ಕೈಗೋ ತಲೆಗೋ ಇದೇ ವರ್ಣಗಳ ಬ್ಯಾಂಡ್ ಧರಿಸಿ ಬೀಗುವವರು, ಕಿವಿಯಲ್ಲಿ ಅಥವಾ ಕುತ್ತಿಗೆಯಲ್ಲಿ ನೀಲಿ ಚಕ್ರ ಧರಿಸಿ ಓಡಾಡುವವರು, ತ್ರಿವರ್ಣಗಳ ದುಪಟ್ಟಾ ಇಲ್ಲವೇ ಸ್ಕಾರ್ಫ್ ಸುತ್ತಿಕೊಳ್ಳುವವರು; ಅಂತೂ ಬಹಳಷ್ಟು ಜನ ತಮ್ಮದೇ ರೀತಿಯಲ್ಲಿ ಈ ಬಣ್ಣಗಳ ಮುಖೇನವಾಗಿ ಗಣರಾಜ್ಯ ದಿನವನ್ನು ಆಚರಿಸುವವರಿದ್ದಾರೆ. ಇದೇ ರೀತಿಯ ಸಂಭ್ರಮವನ್ನು ಸ್ವಾತಂತ್ರ್ಯ ದಿನದಂದೂ ಕಾಣಬಹುದು. ಬದುಕನ್ನು ಸಂಭ್ರಮಿಸುವುದಕ್ಕೆ ಎಷ್ಟೊಂದು ವಿಧಾನಗಳುಂಟು. ಬಣ್ಣಗಳ ಮುಖಾಂತರ ಸಂಭ್ರಮಿಸುವುದೂ ಇವುಗಳಲ್ಲಿ ಒಂದು ಹೌದಲ್ಲವೇ? ನಮಗರಿವಿಲ್ಲದಂತೆಯೇ ಈ ಬಣ್ಣಗಳು ನಮ್ಮ ಬದುಕನ್ನು ಎಷ್ಟೊಂದು ವರ್ಣಮಯವಾಗಿಸಿವೆಯಲ್ಲ.
ಏನು ಬಣ್ಣಗಳೆಂದರೆ? ಅಂದರೆ, ವಿದ್ಯುದಯಸ್ಕಾಂತೀಯ ತರಂಗಗಳ ಬಗೆಗಿನ ಶುಷ್ಕ ಭೌತಶಾಸ್ತ್ರೀಯ ವ್ಯಾಖ್ಯಾನದ ಬಗ್ಗೆಯಲ್ಲ ಇಲ್ಲಿ ಕೇಳುತ್ತಿರುವುದು. ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ- ಬಣ್ಣಗಳ ಸಂಕೇತವೇನು? ಯಾಕಿಂಥಾ ನಂಟು ನಮಗೆ ಬಣ್ಣಗಳೊಂದಿಗೆ? ಬಣ್ಣವಿಲ್ಲದ, ಬಣ್ಣಗೆಟ್ಟ ಬದುಕು ನಮಗೇಕೆ ಕಳಾಹೀನ ಎನಿಸುತ್ತದೆ? ಯಾಕಿಷ್ಟು ಮಹತ್ವವನ್ನು ಬಣ್ಣಗಳಿಗೆ ನೀಡುತ್ತೇವೆ? ಕಣ್ಣಿಗೆ ಚಂದ ಕಾಣುತ್ತದೆ ಎಂದೇ? ಮನಸ್ಸಿಗೆ ಹಿತವಾಗುತ್ತದೆ ಎಂದೇ? ಯಾಕಾಗಿ ನಮ್ಮ ಬದುಕಿಗೆ ಬಣ್ಣಗಳನ್ನು ನಾವು ಅಂಟಿಸಿಕೊಂಡಿದ್ದೇವೆ?
ಈ ಬಣ್ಣಗಳಿಗೆ ನಾವು ಅಂಟಿಸಿರುವ ಸಂಕೇತಗಳು ನಿಜಕ್ಕೂ ಕುತೂಹಲ ಹುಟ್ಟಿಸುತ್ತವೆ. ಹುಟ್ಟುವ ಮೊದಲೇ ನಮಗೂ ಬಣ್ಣಗಳಿಗೂ ನಂಟು ಆರಂಭವಾಗುತ್ತದೆ. ಗರ್ಭಿಣಿಯರಿಗೆ ಕೆಂಪು, ಕಪ್ಪು, ಬಿಳಿ ಇಂಥ ಬಣ್ಣಗಳನ್ನೆಲ್ಲಾ ಉಡಿಸುವುದು ಹಲವು ಕಡೆಗಳಲ್ಲಿ ನಿಷಿದ್ಧ. ಇದಕ್ಕೆ ಪ್ರತಿಯಾಗಿ, ʻಬಸಿರಿಗೆ ಹಸಿರುʼ ಎಂಬ ಕಲ್ಪನೆ ಬಹಳಷ್ಟು ಸಂಸ್ಕೃತಿಗಳಲ್ಲಿದೆ. ಒಡಲು ಸಮೃದ್ಧವಾಗಿರಲಿ ಎಂಬುದಕ್ಕೆ ಸಂಕೇತವಾಗಿ ಹಸಿರು ಬಣ್ಣವನ್ನೇ ಬಳಸಲಾಗುತ್ತದೆ. ಭೂಮಿ ಹಸಿರಾಗಿದೆ, ಕಾಡು-ಹೊಲ-ಗದ್ದೆಗಳು ಹಸಿರಾಗಿವೆ, ಬದುಕು ಹಸಿರಾಗಿದೆ… ಎಂಥ ಯಾವುದೇ ನುಡಿಗಟ್ಟುಗಳಲ್ಲಿ ನಮಗೆ ಕಾಣುವುದು ʻಸಮೃದ್ಧಿʼ ಎಂಬುದೇ ಅಲ್ಲವೇ. ಹಾಗೆಂದು ಹಸಿರು ಬಣ್ಣಕ್ಕೆಲ್ಲಾ ಇದೇ ಅರ್ಥವೆಂದೇನೂ ಅಲ್ಲ. ನೆಲವೆಲ್ಲಾ ಪಾಚಿಗಟ್ಟಿ ಹಸಿರಾಗಿತ್ತು, ಬಿದ್ದ ಹೊಡೆತಕ್ಕೆ ಮೈಯೆಲ್ಲಾ ಹಸಿರಾಗಿತ್ತು- ಇಂಥ ಸಂದರ್ಭಗಳಲ್ಲಿ ಹಸಿರಿನ ಬಳಕೆ ಖುಷಿಯಾಗುವಂಥದ್ದಲ್ಲ. ಒಂದು ಬಣ್ಣಕ್ಕೆ ಎಷ್ಟೊಂದು ಮುಖಗಳು!
ಹುಟ್ಟಿದ ಮಗುವೂ ಬಣ್ಣಗಳಿಂದ ಮುಕ್ತವಲ್ಲ. ಹೆಣ್ಣು ಮಗುವಾದರೆ ಗುಲಾಬಿ ಬಟ್ಟೆಗಳು, ಗಂಡು ಮಗುವಾದರೆ ನೀಲಿ ವಸ್ತ್ರಗಳು. ಪಶ್ಚಿಮ ದೇಶಗಳಲ್ಲಿ ಆರಂಭವಾದ ಇಂಥ ಮಾರುಕಟ್ಟೆ ಕೇಂದ್ರಿತ ಕ್ರಿಯೆಗಳೆಲ್ಲಾ ಈಗ ಸಂಪ್ರದಾಯ ಎಂಬ ಮಟ್ಟಿಗೆ ಹಲವಾರು ದೇಶಗಳಲ್ಲಿ ಪಾಲನೆಯಾಗುತ್ತಿವೆ. ಪುಟ್ಟ ಮಕ್ಕಳನ್ನು ಬಣ್ಣದ ಚಿಟ್ಟೆಗಳಂತೆ ಸಿಂಗರಿಸಬೇಕು ಎಂಬ ಆಸೆಯಿದ್ದರೆ, ಕೆಲವು ದೇಶಗಳಲ್ಲಿ ಅದು ಕಷ್ಟವೇ. ಕಾರಣ, ಮಕ್ಕಳ ವಸ್ತ್ರಗಳು ದೊರೆಯುವುದೇ ಚರ್ವಿತಚರ್ವಣ ಗುಲಾಬಿ-ನೀಲಿ ಬಣ್ಣಗಳಲ್ಲಿ! ಅಂಗಡಿಗಳಲ್ಲಿ ಮಕ್ಕಳಿಗೆ ʻನ್ಯೂಟ್ರಲ್ ಕಲರ್ʼ ಎಂಬ ಕಲ್ಪನೆಯಲ್ಲಿ ಹುಡುಕಾಡಿದರೆ ಹಳದಿ, ಬಿಳಿ, ಕಪ್ಪು ಮುಂತಾದ ಬೆರಳೆಣಿಕೆಯ ಬಣ್ಣಗಳಷ್ಟೇ ದೊರೆಯುತ್ತವೆ. ಇದು ಬಣ್ಣಗಳನ್ನು ಕೇವಲ ಬಣ್ಣಗಳಾಗಿಯೇ ಪ್ರಸ್ತಾಪಿಸಿ ಹೇಳಿದ್ದು. ಈ ಮಕ್ಕಳು ಹುಟ್ಟಿದ ಮೇಲೆ ಜಾತಿ-ಧರ್ಮಗಳ ಆಧಾರದಲ್ಲಿ ಕೇಸರಿ, ಬಿಳಿ, ಹಸಿರು ಎಂದೆಲ್ಲಾ ವಿಂಗಡಿಸುವುದು ಬೇರೆ ವಿಷಯ, ಬಿಡಿ.
ಹುಟ್ಟಿಗೊಂದೇ ಅಲ್ಲ, ಸಾವಿಗೂ ಬಣ್ಣದ ಛಾಯೆಯಿದೆ. ಬಹಳಷ್ಟು ಸಂಸ್ಕೃತಿಗಳಲ್ಲಿ ಸಾವಿಗೂ- ಕಪ್ಪು ಬಣ್ಣಕ್ಕೂ ನಂಟು. ದುಃಖವನ್ನು ತೋರಿಸಬೇಕೆಂದರೆ ಕಪ್ಪು ಬಟ್ಟೆಗಳನ್ನು ಧರಿಸಿ ಹೋಗಬೇಕು. ಕೆಲವೆಡೆ ಸಂತಾಪಕ್ಕೆ ಬಿಳಿ ಬಟ್ಟೆಗಳನ್ನೂ ಧರಿಸುವ ಕ್ರಮವಿದೆ. ಹಾಗಾದರೆ ಸಾವಿಗೂ ಕಪ್ಪು-ಬಿಳುಪಿಗೂ ಏನು ಸಂಬಂಧ ಎಂದರೆ, ಹಾಗೇನಿಲ್ಲ. ಸ್ವಚ್ಛತೆ, ಸರಳತೆಗಳಿಗೆ ಬಿಳಿ; ಶಾಂತಿಗೆ ಹಾರಿಸುವುದೂ ಬಿಳಿಯ ಪಾರಿವಾಳವೇ. ಏಳು ಬಣ್ಣಗಳು ಸೇರಿ ಆಗುವ ಬಿಳಿಯ ಬಣ್ಣಕ್ಕೆ ಇದಿಷ್ಟೇ ವ್ಯಾಪ್ತಿ ಎನ್ನಲೂ ಆಗದು. ಹಾಲಿನಂಥ ಮನಸ್ಸು, ಬೆಳುದಿಂಗಳಂಥ ಮೈ ಎಂಬಂಥ ಬಳಕೆಗಳಿಗೆ ಇರುವ ಸ್ವಾಗತಾರ್ಹವಾದ ಅರ್ಥಗಳು ಹಿಮದಂತೆ ಕೊರಡಾದ ಮನಸ್ಸುಗಳಿಗೆ, ಮಳೆ ಸುರಿಸದ ಬಿಳಿ ಮೋಡಗಳಿಗೆ ಇರುವುದಿಲ್ಲವಲ್ಲ. ಇನ್ನು, ಕಪ್ಪು ಬಣ್ಣದಲ್ಲಿ ಸಾರಾಸಗಟಾಗಿ ಸಾವು, ಭೀತಿ, ರಾತ್ರಿ, ಶೋಕ, ಅಶುಭ ಎಂಬಂಥ ಛಾಯೆಗಳನ್ನೇ ಹುಡುಕಬೇಕೆಂದಿಲ್ಲ. ಕಾಳಿ, ಶಿವಲಿಂಗ, ಸಾಲಿಗ್ರಾಮ ಮುಂತಾದವೆಲ್ಲಾ ಕಪ್ಪು ಬಣ್ಣದವೇ ಆಗಿ, ಕರಿ ಬಣ್ಣಕ್ಕೊಂದು ಶಕ್ತಿ ಸ್ವರೂಪವೂ ಒದಗಿದೆ. ಹಾಗೆಯೇ ಕಪ್ಪು ಕೂದಲಿನ ಚೆಲುವು ಬಿಳಿಗೂದಲಿಗಿಲ್ಲ; ಕರಿಮೋಡಕ್ಕಿರುವ ಘನತೆ ಬಿಳಿ ಮೋಡಕ್ಕಿಲ್ಲ. ಬಿಳಿಯ ಹಾಳೆಯ ಮೇಲೆ ಕಪ್ಪು ಮಸಿಯಲ್ಲಿ ಬರೆದ ಪ್ರೇಮಕಾವ್ಯದಲ್ಲಿ ಪ್ರೀತಿಯ ಕೊರತೆಯಿಲ್ಲ!
ಇದನ್ನೂ ಓದಿ | ದಶಮುಖ ಅಂಕಣ | ನಲಿವುದಕೆ ಒಲಿವುದಕೆ ಹೊಸಹಾದಿ ಬೇಕು
ಕೆಂಪು ಬಣ್ಣವೆಂದರೆ ಮುಖ ತಿರುಗಿಸುವವರು ಹಲವರಿದ್ದಾರೆ. ಒಂದಾನೊಂದು ಕಾಲದಲ್ಲಿ ʻಶರಾಬು ಅಂಗಡಿʼ ಎಂಬ ಕೆಂಪು ಬಣ್ಣದ ಫಲಕ ನೋಡಿದ್ದ ನೆನಪೋ, ಯಾವುದೋ ಆಕ್ರಮಣವೋ, ಬರವೋ, ಕ್ರಾಂತಿಯೋ, ಹಿಂಸೆಯೋ, ರಕ್ತವೋ ಅಂತೂ ಕೆಂಪಿನತ್ತ ಅವರು ವಿರಕ್ತರು. ಆದರೆ ಕೆಂಪು ಎಂದರೆ ಪ್ರೀತಿಯೂ ಹೌದಲ್ಲ, ಎನ್ನುತ್ತಾರೆ ಕೆಲವರು ನಾಚಿ ಕೆಂಪಾಗುತ್ತಾ.
ದೇಶಭಕ್ತಿ ಎನ್ನುವುದು ಈ ದಿನಗಳಲ್ಲಿ ಕೇಸರಿ ಬಣ್ಣ ಪಡೆದಿದ್ದರೂ, ಮೂಲತಃ ಅದು ವೈರಾಗ್ಯದ, ತ್ಯಾಗದ ಸಂಕೇತ ಎನಿಸಿತ್ತು. ನೀಲಿ ಬಣ್ಣ ತಂಪು, ಗಾಂಭೀರ್ಯ, ಸ್ಥಿರತೆಯ ಪ್ರತೀಕ. ಕಪ್ಪು ಕೃಷ್ಣನ ಮೈಯನ್ನು ನೀಲಿಯೆಂದು ಸಂಭ್ರಮಿಸುವ ನಾವು, ನಮ್ಮಲ್ಲೇ ಯಾರದ್ದಾದರೂ ಮೈ ನೀಲಿ ಆದರೆ ಆಸ್ಪತ್ರೆಗೆ ಓಡುತ್ತೇವೆ ಎಂಬುದು ಬೇರೆ ಮಾತು.
ಕೆಂಪು, ಹಳದಿ ಮತ್ತು ನೀಲಿ ವರ್ಣಗಳು ಪ್ರಾಥಮಿಕ ಬಣ್ಣಗಳು. ಹಾಗೆಯೇ ಸೆಕೆಂಡರಿ (೧೧), ಟರ್ಶಿಯರಿ (೧೮), ಕ್ವಾಟರ್ನರಿ (೩೨) ಎಂದೂ ವರ್ಣಗಳನ್ನು ವಿಭಾಗಿಸಲಾಗಿದೆ. ಇವುಗಳಲ್ಲೂ ಕಡು, ತಿಳಿ, ಮಬ್ಬು ಎಂಬಂಥ ಹಲವು ಶೇಡ್‌ಗಳಿವೆ. ಅಂತೂ ವರ್ಣಗಳು ಮತ್ತವುಗಳ ಛಾಯೆಗಳನ್ನು ಸೇರಿಸಿದರೆ ಕೋಟಿಗಟ್ಟಲೆ ಬಣ್ಣಗಳಾಗುತ್ತವೆ. ವರ್ಣಗಳ ವೈಭವ ಸಾಮಾನ್ಯದ್ದೇ! ಬಣ್ಣಗಳ ಗುಣಗಳ ಆಧಾರದ ಮೇಲೆ, ನಮ್ಮ ಮನಸ್ಸಿನ ಮೇಲೆ ಅವು ಬೀರುವ ಪರಿಣಾಮಗಳನ್ನು ಆಧರಿಸಿ, ವರ್ಣ ಚಿಕಿತ್ಸೆಯೆಂಬ ಪದ್ಧತಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ದೇಹದ ಏಳು ಚಕ್ರಗಳ ಮೂಲಕ ಮಾಡುವ ಎನರ್ಜಿ ಹೀಲಿಂಗ್ ಪದ್ಧತಿಯಲ್ಲೂ ಬಣ್ಣಗಳ ಬಳಕೆ ನಿಖರ ಹಾಗೂ ವ್ಯಾಪಕವಾಗಿದೆ.
ಇದನ್ನೂ ಓದಿ | ದಶಮುಖ ಅಂಕಣ | ಮರೆಯಲಿ ಹ್ಯಾಂಗ- ಅಂದಿನ ಆ ಸೊಬಗ?
ಭಾಷೆಯ ಜಾಯಮಾನದಲ್ಲಿ ಬಣ್ಣಗಳ ಬಳಕೆಯನ್ನು ಅಲ್ಲಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಸರ್ವ ಬಣ್ಣ ಮಸಿ ನುಂಗಿತು, ಬಾಯಿ ಬಿಟ್ಟರೆ ಬಣ್ಣಗೇಡು, ಹುಲಿ ಬಣ್ಣಕ್ಕೆ ನರಿ ಮೈ ಸುಟ್ಟುಕೊಂಡಿತು, ನವಿಲು ಕುಣಿದಿದ್ದು ಕಂಡು ಕೆಂಬೂತವೂ ಕುಣಿಯಿತು- ಇಂಥ ಅನೇಕ ಗಾದೆ ಮಾತುಗಳು ನಮ್ಮ ಭಾಷೆಯಲ್ಲಿ ಹಾಸುಹೊಕ್ಕಾಗಿರುವ ಬಣ್ಣಗಳನ್ನು ಎತ್ತಿ ತೋರಿಸುತ್ತವೆ. “ಕರಿಯ ಹೆಂಡತಿಯೆಂದು ಬೇಸರ ಪಡಬೇಡ/ ನೇರಳೆ ಹಣ್ಣು ಬಲು ಕಪ್ಪು/ ಆದರೂ ತಿಂದು ನೋಡಿದರೆ ರುಚಿ ಬಹಳ” ಎಂಬಂಥ ಜಾನಪದ ತ್ರಿಪದಿಗಳು ಬಣ್ಣಕ್ಕೆ ನೀಡುವ ಮಹತ್ವ ಅತಿಯಾದರೆ ಕಷ್ಟ ಎಂದೂ ಎಚ್ಚರಿಸುತ್ತವೆ.
ಪ್ರಕೃತಿಯಲ್ಲೂ ಎಲ್ಲಾ ಬಣ್ಣಗಳು ಒಂದಕ್ಕೊಂದು ಹೊಂದಿಕೊಂಡಂಥವು. ಅಂದರೆ ನೀಲ ಸಾಗರದೊಳಗೆ ಕಿತ್ತಳೆ ಮೀನು, ಹಸಿರು ಗಿಡದಲ್ಲಿ ಕೆಂಪು ಗುಲಾಬಿ, ಮಣ್ಣು ಕಂಪಿನಲ್ಲಿ ಕಾಮನಬಿಲ್ಲು, ಶ್ವೇತ ಪದ್ಮದಲ್ಲಿ ನೀಲ ಭೃಂಗ, ಕಪಿಲೆಯ ಕೆಚ್ಚಲಲ್ಲಿ ಬಿಳಿ ಹಾಲು; ಎಳೆ ಚಿಗುರಿನ ಬಣ್ಣ ತುಸು ಮಾಗಿದ್ದಕ್ಕಿಲ್ಲ, ಮಿಡಿಗಾಯಿಯ ಬಣ್ಣ ಕಳಿತ ಫಲಕ್ಕಿಲ್ಲ; ನೀಲಾಕಾಶದಲ್ಲಿ ಮೂಡಿ ಬರುವ ರಂಗಿನಾಟವನ್ನು ನೋಡದವರಾರು? ಒಂದೊಂದು ಬಣ್ಣಕ್ಕೂ ಒಂದೊಂದು ಬೆರಗು!
“ಈ ವರ್ಣ ಮೈತ್ರಿ ಅನಿವಾರ್ಯ ಗೆಳತಿ ಸರ್ವತ್ರ ವಿಶ್ವಪ್ರಕೃತಿ/ ತೋರುವುದು ಇದನೆ, ಸಾರುವುದು ಇದನೆ, ಇದೆ ನೋಡು ಅದರ ನೀತಿ/ ಹೊತ್ತಾರೆ ಕೆಂಪು, ಮತ್ತಷ್ಟು ಹಳದಿ, ಹೊತ್ತೇರೆ ಬಿಳುಪು ಗೆಳತಿ” ಎನ್ನುವ ಕವಿ ಸಿದ್ಧಯ್ಯ ಪುರಾಣಿಕರು, “ದೇಹಕ್ಕೆ ಬಣ್ಣ, ದೇಶಕ್ಕೆ ಬಣ್ಣ, ಆತ್ಮಕ್ಕೆ ಯಾವ ಬಣ್ಣ?” ಎಂದು ಕೇಳುತ್ತಾ ನಮ್ಮ ಬಣ್ಣಗಳನ್ನೆಲ್ಲ ಕಳಚಿ ನಗ್ನವಾಗಿಸಿರುವುದು ಎಷ್ಟೊಂದು ಔಚಿತ್ಯಪೂರ್ಣವಾಗಿದೆಯಲ್ಲ.
ಇದನ್ನೂ ಓದಿ | ದಶಮುಖ ಅಂಕಣ | ಮಹಾಕಾವ್ಯಗಳೊಂದಿಗೆ ಬೆಸೆದ ಜನಮನ