Site icon Vistara News

ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

fasting dashamukha column

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2024/03/WhatsApp-Audio-2024-03-12-at-10.31.52-AM.mp3

ದಶಮುಖ ಅಂಕಣ: ಪಕ್ಕದ ಮನೆಯಿಂದ ಬರುವ ಶಿವರಾತ್ರಿಯ ಹೇಳಿಕೆಯನ್ನು ಪ್ರತಿವರ್ಷವೂ ಕಾಯುತ್ತಿರುತ್ತೇನೆ ಎಂದು ಮೂರೂ ಬಿಟ್ಟೇ ಒಪ್ಪಿಕೊಳ್ಳುತ್ತೇನೆ! ಕಾರಣ, ಸಂಜೆ ಅವರು ಫಲಾಹಾರ ಎಂಬ ಹೆಸರಿನಲ್ಲಿ ನೀಡುವ ರಸಕವಳ. ಬೆಳಗಿನಿಂದ ಉಪವಾಸವಿದ್ದು, ಆಚೆಮನೆಯ ಅತ್ತಿಗೆ ಮಾಡುವುದು ಜಪ-ತಪಕ್ಕಿಂತ ಮುಖ್ಯವಾಗಿ ಸಂಜೆಯ ಫಲಾಹಾರದ ತಯಾರಿ. ಕೆಲಸ ಇರುವುದು ಅವರಿಗೆ ಮಾತ್ರವಲ್ಲ, ಮನೆಯ ಗಂಡಸರೂ ಪರಾತಗಟ್ಟಲೆ ಹಣ್ಣು ಸುಲಿದು, ಬಿಡಿಸಿ, ಹೆಚ್ಚಬೇಕು ರಸಾಯನಕ್ಕಾಗಿ. ನಾನಾ ರೀತಿಯ ಉಂಡೆಗಳಿಗೆ ಹಾಕುವ ಬೆಲ್ಲದ ಪಾಕದ ಘಮಕ್ಕೆ ಬೇಡವೆಂದರೂ ಲಾವಾದಂತೆ ಒತ್ತರಿಸಿ ಬರುತ್ತದೆ ಲಾಲಾರಸ. ಸಂಜೆ ನಾಲ್ಕಾಗುತ್ತಿದ್ದಂತೆ ಬರುವ ರವೆ ಹುರಿಯುವ ಪರಿಮಳಕ್ಕೆ ಮೂಗರಳುತ್ತದೆ. ಶಿವಪೂಜೆಗೆಂದು ಘಂಟೆ ʻಠಣ್‌ʼಗುಡುತ್ತಿದ್ದಂತೆ ಕರಡಿಗಳೆಲ್ಲ ತಿನ್ನುವುದಕ್ಕೆ ಹಾಜರು! ದೇವನಿಗೆ ಭೇದವಿಲ್ಲವಲ್ಲ, ಹಾಗಾಗಿ ಬೆಳಗಿನಿಂದ ಉಪವಾಸ ಇದ್ದವರು, ಇಲ್ಲದಿದ್ದವರೆಂಬ ವ್ಯತ್ಯಾಸ ಮಾಡದೆ ಕವಳ ಕತ್ತರಿಸುತ್ತೇವೆ. ಇಷ್ಟು ಹೊಟ್ಟೆಭಾರ ಆದ ಮೇಲೆ ರಾತ್ರಿಯಿಡಿ ಭಜನೆ ಮಾಡುವುದು ಕನಸಿನಲ್ಲೇ. ಅಂದಹಾಗೆ, ಇದು ಉಪವಾಸ-ಜಾಗರಣೆಯ ಹಬ್ಬ!!

ನಮ್ಮದೇ ತಿನ್ನುವ ಅಭ್ಯಾಸಗಳು ʻಉಪವಾಸʼ ಎನ್ನುವ ವಿಷಯದ ಬಗ್ಗೆ ಹೀಗೊಂದು ಲಹರಿಯನ್ನು ಹುಟ್ಟುಹಾಕುತ್ತಿವೆ. ಒಂದಿಲ್ಲೊಂದು ಕಾರಣಕ್ಕೆ ಉಪವಾಸ ಮಾಡುವ ಶ್ರದ್ಧೆಯನ್ನು ತನ್ನ ಅನುಯಾಯಿಗಳಿಗೆ ಪ್ರತಿಯೊಂದು ಧರ್ಮವೂ ಬೋಧಿಸುತ್ತದೆ. ಒಂದೊಮ್ಮೆ ಧರ್ಮವೇ ನೇರವಾಗಿ ಉಪವಾಸದ ಆಚರಣೆಯನ್ನು ಪ್ರತಿಪಾದಿಸದಿದ್ದರೂ, ಆ ಅಭ್ಯಾಸವಂತೂ ನಾನಾ ಕಾರಣಗಳಿಗಾಗಿ ಎಲ್ಲಾ ಧರ್ಮಗಳಲ್ಲಿ ಚಾಲ್ತಿಗೆ ಬಂದಿರುತ್ತದೆ. ಸ್ವಾಮಿ ಕಾರ್ಯ, ಸ್ವಕಾರ್ಯ ಎಂಬಂತೆ- ದೇವರ ಮೆಚ್ಚುಗೆಗೆ, ಆರೋಗ್ಯದ ಹೆಚ್ಚಳಕ್ಕೆ- ಎರಡಕ್ಕೂ ಆಯಿತೆನ್ನುವ ಉಪವಾಸವನ್ನು ವ್ರತವಾಗಿಸಿ ಬಹಳಷ್ಟು ಸಂದರ್ಭಗಳಲ್ಲಿ ಆಚರಿಸಲಾಗುತ್ತದೆ. ಈಗಿನ ಉಪವಾಸಗಳ ಬಗ್ಗೆ ಮತ್ತೆ ಮಾತನಾಡೋಣ. ಆದರೆ ಹಿಂದಿನ ಕಾಲದಲ್ಲಿ ಯಾರಿಗೆ, ಯಾಕಾಗಿ ಮತ್ತು ಹೇಗಿರುತ್ತಿತ್ತು ಉಪವಾಸ? ಈಗ ಉಪವಾಸಗಳ ವ್ಯಾಖ್ಯೆ, ಸ್ವರೂಪಗಳು ಬದಲಾದವೇ ಅಥವಾ ಅದನ್ನು ಆಚರಿಸುವವರು ಬದಲಾದರೇ?

ಹಿಂದೆ ಯಾವೆಲ್ಲ ಕಾರಣಗಳಿಗಾಗಿ ಉಪವಾಸ ಆಚರಿಸುತ್ತಿದ್ದರು? ಶಿವರಾತ್ರಿ, ನವರಾತ್ರಿಯಂಥ ಹಬ್ಬಗಳಿಗೆ, ಸಂಕಷ್ಟಿ, ಏಕಾದಶಿಯಂದು, ತಿಥಿ-ಶ್ರಾದ್ಧ, ಪಕ್ಷಗಳಂಥ ಹಿರಿಯರ ದಿನಗಳ ಹೊತ್ತಿನಲ್ಲಿ, ವಾರಕ್ಕೊಮ್ಮೆ ಒಪ್ಪತ್ತು ಎನ್ನುವವರು ಸಾಮಾನ್ಯವಾಗಿ ಉಪವಾಸ ಮಾಡುವುದು ಮಾಮೂಲಾಗಿತ್ತು. ಅದರಲ್ಲೂ ವಿಧವೆಯರ ಪಾಲಿಗಂತೂ ತಿನ್ನುವ ದಿನಗಳಿಗಿಂತ, ತಿನ್ನದಿರುವ ದಿನಗಳೇ ಹೆಚ್ಚಿರುತ್ತಿದ್ದವು. ಹಾಗೆನ್ನುತ್ತಿದ್ದಂತೆ ನನ್ನ ಮುತ್ತಜ್ಜಿಯ ನೆನಪಾಗುತ್ತದೆ. ಹದಿಹರೆಯ ಮಾಸುತ್ತಿದ್ದಂತೆ ಮಂಡೆ ಬೋಳಿಸಿ, ಮಡಿ ಸೀರೆಯುಟ್ಟವರು ಆಕೆ. ಮುಂದಿನ ಸುಮಾರು ೮೦ ವರ್ಷಗಳ ಕಾಲ ಆಕೆ ಒಪ್ಪತ್ತು ಉಂಡುಕೊಂಡೇ ಜೀವ ಸವೆಸಿದ್ದರು; ಬೆಳಗಿನ ತಿಂಡಿಯೂ ಇಲ್ಲ, ರಾತ್ರಿಯೂಟವೂ ಇಲ್ಲ! ದಿನವಿಡೀ ಒಂದಿಲ್ಲೊಂದು ಕೆಲಸದಲ್ಲೇ ಇರುತ್ತಿದ್ದ ಆಕೆಗೆ ಹೆಸರಿಗೂ ಒಂದು ರೋಗವಿರಲಿಲ್ಲ. ಮನೆಯಲ್ಲಿ ಎಂಥಾ ಮದುವೆ-ಹಬ್ಬಗಳೇ ಇದ್ದರೂ, ಆಕೆ ತಮ್ಮ ಉಪವಾಸದ ನೇಮವನ್ನು ತಪ್ಪಿಸಿದವರಲ್ಲ; ಅಥವಾ ತಪ್ಪಿಸದಂಥ ಒತ್ತಡವೂ ಆಕೆಯ ಮೇಲಿತ್ತೆಂದರೆ ತಪ್ಪಾಗುವುದಿಲ್ಲ.

ಉಪವಾಸಕ್ಕೂ ಮಾನಸಿಕ ಸಂಯಮಕ್ಕೂ ಸಂಬಂಧವುಂಟೇ? ಕಾರಣ, ವರ್ಷಕ್ಕೆ ಒಂದು ಶಿವರಾತ್ರಿ ಬಂತೆಂದರೆ ಆಹಾರ ಬಿಡುವುದಕ್ಕಿಂತ ತಿನ್ನುವುದು ಹೇಗೆ ಎಂಬ ಲೆಕ್ಕಾಚಾರದಲ್ಲೇ ಇರುತ್ತೇವೆ ನಾವು. ಹಾಗಿರುವಾಗ ಎಷ್ಟೆಷ್ಟೋ ವರ್ಷಗಳ ಕಾಲ, ಕಿಂಚಿತ್‌ ಬೇಸರವಿಲ್ಲದಂತೆ ಉಪವಾಸವನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರಲ್ಲ ಹಿಂದಿನವರು, ಅದು ಹೇಗೆ ಸಾಧ್ಯವಾಯಿತು ಅವರಿಗೆ? ಮನೆಯ ಉಳಿದವರೆಲ್ಲ ಏನೇ ಮಾಡಿದರೂ, ಏನೇ ತಿಂದರೂ ತಮಗೂ ಬೇಕೆಂದು ವ್ರತಿಗಳಿಗೆ ಅನಿಸುತ್ತಿರಲಿಲ್ಲವೇ? ಹಾಗಾದರೆ ಉಪವಾಸಿಗಳ ಗ್ರಹಣ ಶಕ್ತಿಗಳು ಕೆಲಸ ಮಾಡುತ್ತಿರಲಿಲ್ಲವೇ ಅಥವಾ ಅವರ ಗ್ರಹಣೇಂದ್ರಿಯಗಳನ್ನು ಮೀರಿ ಅವರ ಮನಸ್ಸು ಕೆಲಸ ಮಾಡುತ್ತಿತ್ತೇ? ನೇರವಾಗಿ ಸಂಯಮವನ್ನು ಮನದಲ್ಲಿ ಬಿತ್ತುವ ಬದಲು, ರಸನೆಯ ಚಾಪಲ್ಯಕ್ಕೆ ಕಡಿವಾಣ ಹಾಕುವ ಮೂಲಕ ಅದನ್ನು ಪರೋಕ್ಷವಾಗಿ ಮಾಡುವ ಕ್ರಮವೇ ಇದು?

ಉಪವಾಸವನ್ನು ಔಷಧಿಯಾಗಿಯೂ ಬಳಸಬಹುದೇ? ʻಲಂಘನಂ ಪರಮೌಷಧಂʼ ಎನ್ನುತ್ತದೆ ಆರ್ಯುರ್ವೇದ. ಅದೇ ಹಿನ್ನೆಲೆಯಲ್ಲಿ ಹಳೆಯ ಕಥೆಯೊಂದಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಯುರ್ವೇದ ವೈದ್ಯರ ಬಳಿಗೆ ಚಿಕಿತ್ಸೆಗಾಗಿ ಹೋದ. ಈತನ ಪ್ರವರವನ್ನೆಲ್ಲ ಕೇಳಿದ ವೈದ್ಯರು ಅತಿಯಾಗಿ ತಿಂದಿದ್ದರಿಂದ ರೋಗಿಗೆ ಅಜೀರ್ಣವಾಗಿದೆ ಎಂದು ತೀರ್ಮಾನಿಸಿ, ʻಲಂಘನಂ ಪರಮೌಷಧಂ, ಅಷ್ಟು ಮಾಡು ಸಾಕು. ಇನ್ನೇನೂ ಬೇಡ ನಿನಗೆʼ ಎಂದು ಕಳಿಸಿದರು. ಆದರೆ ಎಲ್ಲಿಂದ ಎಲ್ಲಿಗೆ ಲಂಘಿಸಬೇಕು ಎಂಬುದೇ ಬಗೆಹರಿಯದೆ ಗೊಂದಲಕ್ಕೆ ಬಿದ್ದ ರೋಗಿ. ಬೇರೆಲ್ಲೂ ಕಾಣದೆ, ಮನೆಯ ಹೊಸಿಲಲ್ಲಿ ಒಳಗಿಂದ ಹೊರಗೆ- ಹೊರಗಿಂದ ಒಳಗೆ ಜಿಗಿಯತೊಡಗಿದ. ಈತನ ಚರ್ಯೆ ಕಂಡು ಮನೆಮಂದಿಗೆ ಹೆದರಿಕೆಯಾಯಿತು. ಹೊಟ್ಟೆ ನೋವಷ್ಟೇ ಇದ್ದರೆ ಸುಧಾರಿಸಬಹುದಿತ್ತು, ಇದೀಗ ಮಾನಸಿಕ ತೊಂದರೆಯೂ ಶುರುವಾಯಿತಲ್ಲ ಎಂದು ಬೆದರಿ ಮತ್ತೆ ಅದೇ ವೈದ್ಯರಲ್ಲಿ ಕರೆದಿಯ್ದರು. ವಿಷಯ ಅರಿತ ವೈದ್ಯರು ನಗು ತಡೆಯಲಾರದೆ, ಅಜೀರ್ಣಕ್ಕೆ ಉಪವಾಸವೇ ಮದ್ದೆಂದು ಸೂಚಿಸಿದ್ದಾಗಿ ರೋಗಿಗೆ ತಿಳಿಸಿ ಹೇಳಿದರು.

ಹಾಗಾದರೆ ಇನ್ನೂ ಯಾವುದೆಲ್ಲ ಕಾರಣಗಳಿಗೆ ಉಪವಾಸ ಮಾಡುತ್ತೇವೆ ನಾವು? ಆತ್ಮ ಸಾಧನೆಗಾಗಿ, ನಿಗ್ರಹಕ್ಕಾಗಿ, ವ್ರತಕ್ಕಾಗಿ, ತಪಕ್ಕಾಗಿ ಅಥವಾ ಇನ್ನಾವುದೇ ಆಧ್ಯಾತ್ಮಿಕ ಉದ್ದೇಶಗಳು ಇದಕ್ಕಿರಬಹುದು. ಅದಿಲ್ಲದಿದ್ದರೆ, ಸತ್ಯಾಗ್ರಹ, ಮುಷ್ಕರ, ಪ್ರತಿಭಟನೆಯ ಅಂಗವಾಗಿ ಯಾವುದನ್ನೋ ಪ್ರತಿಪಾದಿಸುವ ಗುರಿ ಇದಕ್ಕಿರಬಹುದು. ಉಪವಾಸವನ್ನೇ ಪ್ರತಿಭಟನೆಯ ಅಸ್ತ್ರವಾಗಿಸಿಕೊಂಡಿದ್ದ ಮಹಾತ್ಮ ಗಾಂಧೀಜಿಯಿಂದ ಹಿಡಿದು ಇತ್ತೀಚಿನ ಇರೋಮ್‌ ಶರ್ಮಿಳಾವರೆಗೆ ಹಲವರನ್ನು ಭರತಭೂಮಿ ಕಂಡಿದ್ದಿದೆ. ಅತ್ತ, ಕೈವಲ್ಯಕ್ಕಾಗಿ ನಿರಾಹಾರಿಗಳಾಗಿ ಸಲ್ಲೇಖನದಂಥ ಕಠಿಣ ವ್ರತ ಕೈಗೊಂಡವರ ಬಗ್ಗೆಯೂ ಕೇಳಿದ್ದೇವೆ; ಇತ್ತ, ʻಆಮರಣಾಂತʼ ಉಪವಾಸ ಸತ್ಯಾಗ್ರಹ ಕೈಗೊಂಡು ಕೆಲವೇ ತಾಸುಗಳಲ್ಲಿ ʻಮರುಜನ್ಮʼ ಪಡೆಯುವ ಇಂದಿನ ರಾಜಕೀಯ ಸತ್ಯಾಗ್ರಹಿಗಳ ಬಗ್ಗೆಯೂ ಕೇಳಿದ್ದೇವೆ. ಜೋಳಿಗೆಯಲ್ಲಿ ಏನೂ ಇಲ್ಲದ ಅನಿವಾರ್ಯತೆಯಲ್ಲಿ ತಿನ್ನದಿರುವಾಗ ಅದನ್ನೂ ಉಪವಾಸವೆಂದೇ ಕರೆಯುತ್ತೇವಲ್ಲ. ಇನ್ನೊಬ್ಬರ ಹಸಿವಿನ ನೋವು ಅರಿಯುವ ದಾರಿಯೂ ಹೌದಿದು ಎನ್ನುತ್ತಿದ್ದರು ರಂಜಾನ್‌ನಲ್ಲಿ ಉಪವಾಸ ಮಾಡುತ್ತಿದ್ದ ಕೆಲವು ಮಿತ್ರರು.

ತೂಕ ಇಳಿಸುವುದಕ್ಕಾಗಿಯೊ ಅಥವಾ ಯಾರದ್ದೋ ಮೇಲಿನ ಸಿಟ್ಟಿಗೊ ಊಟ ಬಿಡುವಂಥ ವೈಯಕ್ತಿಕ ಕಾರಣಗಳೂ ಉಪವಾಸದ ಹಿಂದೆ ಇರಬಹುದು. ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವ ಕಾರಣಕ್ಕೆ ಮಧ್ಯಂತರ ಉಪವಾಸ ಮಾಡುವ ಉತ್ಸಾಹಿಗಳು ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ತೂಕ ಇಳಿಸುವುದು ಮಾತ್ರವೇ ಅಲ್ಲ, ದೇಹದ ಚಯಾಪಚಯವನ್ನು ಸರಿಪಡಿಸುವಂಥ ಹಲವು ಮಹತ್ವದ ಕೆಲಸಗಳು ಉಪವಾಸದಿಂದ ಸಾಧ್ಯವಿದೆ ಎನ್ನುತ್ತವೆ ಕೆಲವು ಅಧ್ಯಯನಗಳು. ಬ್ರಿಟನ್‌ನ ಪ್ರಧಾನಿ ರಿಷಿ ಸುನಕ್‌ ಅವರು ವಾರಕ್ಕೆ ೩೬ ತಾಸುಗಳ ಸತತ ಉಪವಾಸ ಮಾಡುವ ಸುದ್ದಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತಲ್ಲ. ಅಂತೂ ಇತ್ತೀಚಿನ ತೂಕ ಇಳಿಸುವ ಉತ್ಸಾಹಿಗಳನ್ನು ಕಂಡು, ʻತನು ಕರಗದವರಲ್ಲಿ…ʼ ವಚನಕ್ಕೆ ಹೊಸ ಅರ್ಥ ಹುಟ್ಟಿದರೆ ಅಚ್ಚರಿಯಿಲ್ಲ.

ಉಪವಾಸದ ಹಿಂದೆ ಹಲವಾರು ಗಾದೆಗಳು ಭಾಷೆಯ ಜಾಯಮಾನದಲ್ಲಿ ದೊರೆಯಬಹುದು. ʻಉಪವಾಸ ಇದ್ರೂ ಉಪದ್ರ ಇರಬಾರದು; ಉಂಡು ಊರು ಹಾಳ್ಮಾಡೊ ಎಂದರೆ, ಉಪಾಸವಿದ್ದೇ ಮಾಡ್ತೇನೆ ಎಂದನಂತೆ; ಉಂಡಾಗ ಉಗಾದಿ, ಮಿಂದಾಗ ದೀವಳಿಗೆ, ಹೊಟ್ಟೆಗಿಲ್ದಾಗ ಏಕಾದಶಿʼ ಮುಂತಾದ ಇನ್ನಷ್ಟು ಗಾದೆಗಳು ಚಾಲ್ತಿಯಲ್ಲಿ ಇರಬಹುದು.

ಕನ್ನಡದ ಎರಡು ಪ್ರಸಿದ್ಧ ಶಿಶುಗೀತೆಗಳು ಇಲ್ಲಿ ನೆನಪಾಗುತ್ತಿವೆ. ಮಚ್ಚಿಮಲೆ ಶಂಕರನಾರಾಯಣ ರಾಯರ ʻಮಂಗಗಳ ಉಪವಾಸʼವನ್ನು ಕೇಳದವರಾರು? ʻಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು/ ಮಂಗಗಳೆಲ್ಲವು ಒಟ್ಟಿಗೆ ಸೇರುತ ಒಂದುಪವಾಸವ ಮಾಡಿದವುʼ ಎಂದು ಪ್ರಾರಂಭವಾಗುವ ಈ ಪದ್ಯ ಕೊನೆಗೊಳ್ಳುವಷ್ಟರಲ್ಲಿ, ಬಾಳೆಯ ಹಣ್ಣನ್ನು ʻಜಗಿದೂ ಜಗಿದೂ ನುಂಗಿದವೆಲ್ಲವು/ ಆಗಲೆ ಮುಗಿಯಿತು ಉಪವಾಸʼ ಎಂದಾಗುತ್ತದೆ. ಯಾವುದಾದರೂ ತಿನಿಸನ್ನು ʻಹಿಡ್ಕೊಂಡಿರ್ತಿನಿ ಕೊಡುʼ ಎಂದು ಮಕ್ಕಳು ಹೇಳುತ್ತಿದ್ದಂತೆ ʻಮಂಗನುಪವಾಸʼ ಎಂದು ಛೇಡಿಸುವುದು ನಮ್ಮ ಶಾಲೆಯ ದಿನಗಳಲ್ಲಿ ಮಾಮೂಲಾಗಿತ್ತು.

ಇದನ್ನೂ ಓದಿ: ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

ಹಾಗೆ ನೋಡಿದರೆ ಮಂಗಗಳ ಉಪವಾಸಕ್ಕೆ ಬಾಳೆಹಣ್ಣು ಬಿಟ್ಟರೆ ಬೇರೇನಿರಲಿಲ್ಲ. ಆದರೆ ಆಚೆ ಮನೆಯ ಸುಬ್ಬಮ್ಮನ ಏಕಾದಶಿಯ ಮೆನು ಕೇಳಿ ಎದೆ ಒಡೆದರೆ ಅಚ್ಚರಿಯಿಲ್ಲ. ಏಕಾದಶಿಯ ಬೆಳಗಿನಿಂದ ಪ್ರಾರಂಭಿಸಿದರೆ, ಉಪ್ಪಿಟ್ಟು, ಅವಲಕ್ಕಿ, ಪಾಯಸ, ನಾಲ್ಕು ಬಾಳೆ ಹಣ್ಣು, ಚಕ್ಕುಲಿ-ಕೋಡುಬಳೆ, ಗಂಟೆಗೆರಡು ಸೀಬೆ ಹಣ್ಣು, ನಡುವಿಗೆ ಕಿತ್ತಳೆ, ರವೆಉಂಡೆ, ಹುರುಳಿ ಕಾಳಿನ ಉಸಲಿ, ಐದಾರು ಇಡ್ಲಿ, ಆಮೇಲೆ ಸೀಮೆ ಹಸುವಿನ ಹಾಲು! ಕವಿ ಸಿ. ಆರ್.‌ ಸತ್ಯ ಅವರ ಕಲ್ಪನೆಯ ಈ ಸುಬ್ಬಮ್ಮ ಒಂದೊಂದು ಏಕಾದಶಿ ಮುಗಿಯುವಷ್ಟರಲ್ಲಿ ಎಷ್ಟೆಷ್ಟು ಕೇಜಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದರೋ, ದೇವರೇ ಬಲ್ಲ. ಕಾರಣ ಏಕಾದಶಿಗೇ ಇಷ್ಟಾದರೆ, ಗಡದ್ದು ತಿನ್ನುವುದಕ್ಕೆಂದೇ ಖ್ಯಾತವಾದ ದ್ವಾದಶಿಯ ಪಾರಣೆಗೆ…!

ಉಪವಾಸಗಳ ಹೆಸರಿನಲ್ಲಿ ಒಂದಿಷ್ಟು ಹರಟಿದ್ದಾಯ್ತು. ಉಪವಾಸವನ್ನು ಯಾವುದೇ ಕಾರಣಕ್ಕೆ ಮಾಡುವುದಾದರೂ, ಚಪಲ, ಚಾಂಚಲ್ಯಗಳಿಗೆ ಕಡಿವಾಣ ಹಾಕುವುದಕ್ಕೆ ಅದು ನೆರವಾಗುತ್ತದೆ ಎಂಬುದು ಸ್ವಾನುಭವದ ಮಾತು. ಆಹಾರವೇ ರೋಗಗಳಿಗೆ ಮೂಲವಾಗಿರುವ ಇಂದಿನ ದಿನಗಳಲ್ಲಿ ಉಪವಾಸವೇ ಔಷಧಿಯಾದೀತು ಎನ್ನುವುದು ಸುಳ್ಳೇನಲ್ಲ.

ಇದನ್ನೂ ಓದಿ: ದಶಮುಖ ಅಂಕಣ: …. ನೋಡಲಿಕ್ಕೆ ಹೋಗೋಣು ಬಾರೆ!

Exit mobile version