Site icon Vistara News

ದಶಮುಖ ಅಂಕಣ | ಮಹಾಕಾವ್ಯಗಳೊಂದಿಗೆ ಬೆಸೆದ ಜನಮನ

dashamukha

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/12/WhatsApp-Audio-2022-12-05-at-1.47.18-PM.mp3

ಇತ್ತೀಚೆಗೆ ಯಾವುದೋ ಬೆಟ್ಟ ಹತ್ತುವುದಕ್ಕೆ ಹೋಗಿದ್ದಾಗ, ಆ ಬೆಟ್ಟದ ತಪ್ಪಲಿನ ಊರಿನ ಜನ ನಮ್ಮೊಂದಿಗೆ ದಾರಿಹೋಕರಾಗಿ ಸಿಕ್ಕಿದ್ದರು. ಸುಮ್ಮನೆ ನಡೆಯಲಾರದೆ ಅವರನ್ನು ಮಾತಿಗೆಳೆದಿದ್ದೆವು. ನಿಮ್ಮೂರಿಗೆ, ಪಕ್ಕದಲ್ಲಿರುವ ಈ ಬೆಟ್ಟಕ್ಕೆ ಇಂಥ ಹೆಸರುಗಳೇಕೆ ಬಂತು ಎಂದು ಕೇಳಿದ್ದಕ್ಕೆ ತಮಗೆ ತಿಳಿದ ಸ್ಥಳಪುರಾಣವನ್ನು ಅವರು ಬಿಚ್ಚಿದ್ದರು. ಒಂದಿಷ್ಟು ಬಂಡೆಗಲ್ಲುಗಳೇ ಪೇರಿಸಿಕೊಂಡು ನಿರ್ಮಾಣವಾಗಿದ್ದ ಈ ಬೆಟ್ಟದಲ್ಲಿ, ಹಿಂದೊಮ್ಮೆ ಪಾಂಡವರು ಬೀಡು ಬಿಟ್ಟಿದ್ದರಂತೆ ಎಂದು ಪ್ರಾರಂಭಿಸಿದ ಅವರು, “ಅದ್ಕ ನಮ್ಮೂರ್ಗ, ಈ ಬೆಟ್ಟುಕ್ಕ ಈ ಹೆಸರು ಬಂದಿರದು. ಅಲ್ಲಿ ಕಾಣ ಹೊಲತ್ತಾವ ಎಡಕ್‌ ತಿರೀಕ್ಕಂಡ್ರೆ, ಬೆಟ್ಟುದ್‌ ತಪ್ಪುಲ್ಗಂಟ ದಾರಿಯೈತೆ. ಅಂಗೇ ಅತ್ಕ ಮೇಲೋದ್ರೆ, ಕುಂತಿ ಸೀರೆ ಒಗದ್ಬುಟ್‌ ಒಣಗಾಕಿದ್ದು, ಭೀಮನ್‌ ಎಜ್ಜೆ ಎಲ್ಲಾ ಕಾಣ್ತವೆ. ಐಕ್ಳುಗೆಲ್ಲಾ ತೋರ್ಸೀರಂತೆ” ಅಂತೆಲ್ಲಾ ವಿವರ ನೀಡಿದರು. ನಾವೆಷ್ಟೇ ಮೇಲೆ ಹತ್ತಿದರೂ ಅಂಥವೇನೂ ನಮ್ಮ ಕಣ್ಣಿಗೆ ಬೀಳಲಿಲ್ಲ ಎನ್ನುವುದು ಬೇರೆ ಮಾತು.

ಇದು ಕೇವಲ ಪ್ರಾಸಂಗಿಕವಾಗಿ ನೀಡಿದ ಉದಾಹರಣೆಯಷ್ಟೆ. ಭೀಮ, ಹನುಮ, ರಾಮ, ಲಕ್ಷ್ಮಣ, ಸೀತೆ ಎಂದೆಲ್ಲಾ ರಾಮಾಯಣ ಮತ್ತು ಮಹಾಭಾರತದ ಪಾತ್ರಗಳ ಹೆಸರುಗಳನ್ನು ಹೊತ್ತ, ಐತಿಹ್ಯವನ್ನು ಹೊಂದಿರುವ ಊರು, ಕೇರಿ, ಬೆಟ್ಟ, ಗುಡ್ಡ, ನದಿ, ತೊರೆ, ಕೆರೆಯಂಥವು ದೇಶದ ಉದ್ದಗಲಕ್ಕೂ ದೊರೆಯಬಹುದು ನಮಗೆ. ಈ ಪುರಾಣದ ಕಥೆಗಳನ್ನೇ ಆಧಾರವಾಗಿಸಿಕೊಂಡ ಗಾದೆಗಳು, ನುಡಿಗಟ್ಟುಗಳು, ಜನಪದ ಹಾಡುಗಳು, ಅವುಗಳನ್ನೇ ಮೂಲವಾಗಿಸಿಕೊಂಡು ಹುಟ್ಟಿದ ನಾನಾ ಕಲಾಪ್ರಕಾರಗಳು, ಕೊನೆಗೆ ಹಳೆಗನ್ನಡ ಕಾವ್ಯಗಳವರೆಗೆ ಅಸಂಖ್ಯ ಎನ್ನುವಷ್ಟು ದೊರೆಯುತ್ತವೆ ನಮಗೆ. ಈ ಎರಡೂ ಮಹಾಕಾವ್ಯಗಳಲ್ಲಿ ಸುದೀರ್ಘಕಾಲ ವನವಾಸಕ್ಕೆ ಹೋಗುವ ಸನ್ನಿವೇಶಗಳು ಬರುವುದರಿಂದ, ಆ ಪಾತ್ರಗಳು ದೇಶದ ಉದ್ದಗಲಕ್ಕೆ ಸಂಚರಿಸಿದಂತೆ ಅವರ ಹೆಜ್ಜೆಗಳು ಎಲ್ಲೆಲ್ಲೂ ಹರಡಿಬಿದ್ದಿವೆ. ಅವರು ಬಳಸಿದ ಪಾತ್ರೆಗಳು, ಅಡುಗೆಗೆ ಒಲೆಯಾದ ಕಲ್ಲುಗಳು, ಮಲಗೆದ್ದ ಗುಹೆಗಳು, ಸ್ನಾನ ಮಾಡಿದ ತೀರ್ಥಗಳು, ಒಣಗಿಸಿದ ವಸ್ತ್ರಗಳು, ಮುಡಿದ ಹೂವುಗಳು, ನಡೆದ ಹಾದಿಗಳು… ಹೇಳಿದಷ್ಟಕ್ಕೂ ಮುಗಿಯುವುದೇ ಇಲ್ಲ. ತಾರ್ಕಿಕವಾಗಿ ನೋಡುವುದಾದರೆ, ಯಾವುದೇ ವ್ಯಕ್ತಿ ತನ್ನ ಒಂದು ಜೀವಿತಾವಧಿಯಲ್ಲಿ, ಕೇವಲ ಕಾಲ್ನಡಿಗೆಯಲ್ಲಿ, ಈ ವಿಶಾಲ ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾದೀತು. ಆದರೆ ಇಲ್ಲಿ ಭಾವನೆಗಳಿಗೆ ಇರುವಷ್ಟು ಸ್ಥಾನ ತರ್ಕಕ್ಕಿಲ್ಲ.

ಪುರಾಣಗಳು ಮತ್ತು ಮಹಾಕಾವ್ಯಗಳು ಲಾಗಾಯ್ತಿನಿಂದಲೂ ಜನರ ಮನಸ್ಸನ್ನು ಈ ಪರಿಯಲ್ಲಿ ಆವರಿಸಿಕೊಂಡಿರುವ ಬಗ್ಗೆ ಸೋಜಿಗ ಎನಿಸುತ್ತದೆ. ಅದಕ್ಕೇನು ಕಾರಣವಿರಬಹುದು ಎಂಬ ಕುತೂಹಲಕ್ಕಷ್ಟೆ ಕೆದಕುತ್ತಾ ಹೋದರೆ- ಅಂದಿನ ಕಾಲದ ಜನಜೀವನದ ಬಗ್ಗೆ ನಮಗೆ ಲಭ್ಯವಿರುವ ವಿಸ್ತೃತ ವಿವರಗಳಿವು ಎಂಬುದಕ್ಕೆ ಜನಮಾನಸದ ಗಮನ ಸೆಳೆಯಿತೇ? ಈ ಕಾವ್ಯಗಳು ಒಮ್ಮೆಲೇ ಜನಿಸದೆ ಶತಮಾನಗಳ ವ್ಯಾಪ್ತಿಯಲ್ಲಿ ವಿಸ್ತಾರಗೊಂಡ ಸಾಹಿತ್ಯ ಎಂಬ ತಜ್ಞರ ಅಭಿಮತದ ಹಿನ್ನೆಲೆಯಲ್ಲಿ- ಇದೊಂದು ತಮ್ಮದೇ ಪ್ರಾಚೀನ ವಿಶ್ವಕೋಶದಂತೆ ಜನಪದರಿಗೆ ಭಾಸವಾಯಿತೇ? ಅಂದರೆ, ತಮ್ಮದೇ ಕಥೆಗಳನ್ನು, ತಮ್ಮದೇ ಮನದ ಕಪ್ಪು-ಬಿಳುಪು ಬಿಂಬಗಳನ್ನು, ಎಲ್ಲೋ ಕೇಳಿದ್ದ-ಕಂಡಿದ್ದ-ಅನುಭವಿಸಿದ್ದ ಘಟನೆಗಳ ಛಾಯೆಯನ್ನು, ಸುಪ್ತವಾದ ಏನೇನೋ ಕನವರಿಕೆಗಳನ್ನು, ಕೋಪ-ತಾಪಗಳನ್ನು ದೇವರ ಈ ಕಾವ್ಯಗಳಲ್ಲಿ ಕಂಡಿದ್ದಕ್ಕೆ ಜೀವರಿಗೆ ಇದು ಆಪ್ತವೆನಿಸಿತೆ? ಒಂದಿಷ್ಟು ಚರಿತ್ರೆ, ಬಹಳಷ್ಟು ಪುರಾಣ, ದಂತಕಥೆಗಳು, ಪ್ರಕ್ಷೇಪಗಳು, ಆಧ್ಯಾತ್ಮ, ದಾರ್ಶನಿಕತೆ, ನ್ಯಾಯಶಾಸ್ತ್ರ, ರಾಜ್ಯಶಾಸ್ತ್ರ, ಮಾನವ ಶಾಸ್ತ್ರಗಳ ಬಹಳಷ್ಟು ವಿಚಾರಗಳನ್ನು ಒಂದು ಕಥೆಯೆಂಬ ಸೂತ್ರದಲ್ಲಿ ಹೆಣೆದು, ರಸಾಸ್ವಾದಕ್ಕೆ ಸರಿಹೋಗುವಂತೆ ಕಾವ್ಯಸ್ವರೂಪದಲ್ಲಿ ನೀಡಿರುವುದಕ್ಕೆ ಕಾಲ-ದೇಶ-ಪಾತ್ರಗಳ ಹಂಗಿಲ್ಲದಂತೆ ಜನಮನದಲ್ಲಿ ನೆಲೆಗೊಂಡಿತೇ? ಅಂತೂ ಈ ಮಹಾಕಾವ್ಯಗಳನ್ನು, ಕಥೆ-ಉಪಕಥೆಗಳ ಸಮೇತ, ಜನರೇಕೆ ಎದೆಗವಚಿಕೊಂಡರು ಎಂಬ ಬಗ್ಗೆ ಕುತೂಹಲ ತಣಿಸಿಕೊಳ್ಳುವಾಗ ಇನ್ನಷ್ಟು ಮತ್ತಷ್ಟು ಪ್ರಶ್ನೆಗಳೇ ಎದುರಾಗುತ್ತೆ.

ಇಡಿಯಾಗಿ ಕಥೆಯನ್ನು ತಮ್ಮದಾಗಿಸಿಕೊಳ್ಳುವುದು ಒಂದು ರೀತಿ. ಆ ಕಥೆಗಳ ಒಂದೊಂದೇ ಪಾತ್ರಗಳನ್ನು ನಿತ್ಯದ ಬದುಕಿನ ಭಾಗವಾಗಿಸಿಕೊಳ್ಳುವುದು ಇನ್ನೊಂದು ರೀತಿ. ಈ ಮಹಾಕಾವ್ಯಗಳ ಪಾತ್ರಗಳಾದರೂ ಅಷ್ಟೇ ವೈವಿಧ್ಯಮವಾಗಿವೆಯೆನ್ನಿ. ಮಹಾಭಾರತದಷ್ಟು ಕ್ಲಿಷ್ಟವಲ್ಲದ ರಾಮಾಯಣ, ಒಂದು ಸುಂದರ, ಸುಕುಮಾರ ಕಾವ್ಯ. ಪ್ರೀತಿ, ಪ್ರೇಮ, ವಾಂಛೆ, ವಾತ್ಸಲ್ಯ, ಭಕ್ತಿ, ಹುಳುಕು, ಕೆಡುಕು, ದುಷ್ಟತನ… ಹೀಗೆ ಹಲವು ಭಾವಗಳು ಪೋಣಿಸಿಕೊಂಡು ಕುಳಿತಿವೆ ಕಾವ್ಯದಲ್ಲಿ. ಈ ಕಾವ್ಯ ನಮ್ಮಲ್ಲಿ ಹಾಸು-ಹೊಕ್ಕಾಗಿರುವ ಬಗ್ಗೆ ಉದಾಹರಣೆಗೆ ಹೇಳುವುದಾದರೆ, ನೀವು ಇನ್ನೊಬ್ಬರೊಂದಿಗೆ ಯಾವುದೋ ವಿಷಯ ಮಾತಾಡುತ್ತಾ ಕುಳಿತಿದ್ದೀರಿ. ವಿಷಯ ನೀವು ಭಾವಿಸಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಉದ್ದವಾಗಿದ್ದಕ್ಕೆ, ʻನಿಂದೊಳ್ಳೆ ರಾಮಾಯಣʼ ಎಂದು ಮೂದಲಿಸುತ್ತೀರಿ. ಮೂದಲಿಕೆಯ ಮಾತು ಹರಿತವಾಗಿ ಎದುರಿನವರಿಗೆ ʻರಾಮಬಾಣʼದಂತೆ ನಾಟುತ್ತದೆ. ನೀನು ಆಡುವ ಮಾತೆಲ್ಲಾ ಇಂಥದ್ದೇ ಆದರೆ- ಬಾಯಿಮುಚ್ಚು ಎಂದು ʻಸುಗ್ರೀವಾಜ್ಞೆʼ ಹೊರಡಿಸುತ್ತಾರೆ ಅವರು. ವಿಷಯ ಯಾಕೋ ʻಹನುಮಂತನ ಬಾಲʼದಂತೆ ಬೆಳೆಯುತ್ತಿದೆ ಎಂದು ನಿಮಗನ್ನಿಸಿದರೆ, ʻಶಬರಿಯಂತೆ ಭಕ್ತಿʼ ತೋರುತ್ತೀರಿ; ʻರಾಮ-ಲಕ್ಷ್ಮಣರಂತೆʼ ಇದ್ದ ನಾವು ʻವಾಲಿ-ಸುಗ್ರೀವʼರಂತೆ ಜಗಳವಾಡಬಹುದೇ ಎಂದು ಮನವೊಲಿಸುತ್ತೀರಿ. ನೀವೆಷ್ಟೇ ಮನವೊಲಿಸಿದರೂ ಅವರ ಮನಸ್ಸಿಗದು ತಾಗುವುದೇ ಇಲ್ಲ- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗುತ್ತದೆ! ನಿಮಗೆ ಕೊಟ್ಟ ಸಲಿಗೆ ಹೆಚ್ಚಾಯಿತು- ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಂತೆ ನೀವೂ ಆಡುತ್ತಿರುವುದಾಗಿ ಎದುರಿನವರು ದೂರುತ್ತಾರೆ. ಇಷ್ಟಾದರೂ ಈಗ ಮಾತಾಡುತ್ತಿರುವ ವಿಷಯವೇನು ಎಂಬುದು ನಿಮಗೆ ಅರ್ಥವಾಗಲಿಲ್ಲವೇ? ಅಯ್ಯೋ ರಾಮ! ರಾತ್ರಿ-ಬೆಳಗು ರಾಮಾಯಣ ಕೇಳಿ, ಬೆಳಗ್ಗೆದ್ದು ರಾಮಂಗೆ ಸೀತೆಗೆ ಏನು ಸಂಬಂಧ ಅನ್ನುವ ಲೆಕ್ಕ ನಿಮ್ಮದು!

ರಾಮಾಯಣವೇ ಇಷ್ಟಾದ ಮೇಲೆ ಮಹಾಭಾರತವಂತೂ ನಿಜಕ್ಕೂ ಸಂಕೀರ್ಣ ಕಥೆ. ಇಲ್ಲಿ ಯಾವುದೇ ವ್ಯಕ್ತಿಗಳು ಪೂರ್ತಿ ಒಳ್ಳೆಯವರು ಅಥವಾ ಪೂರಾ ಕೆಟ್ಟವರು ಎಂದು ನಿರ್ಧರಿಸಲೇ ಆಗದಂತೆ, ಪರಿಸ್ಥಿತಿಯ ಕೈಗೊಂಬೆಗಳಂತೆ ವರ್ತಿಸುತ್ತಾರೆ. ಒಮ್ಮೊಮ್ಮೆಯಂತೂ ಇಡೀ ಕಾವ್ಯದ ವಸ್ತುವೇ ಕಲಹ ಮತ್ತು ದ್ವೇಷವೇ ಎಂಬ ಭ್ರಮೆ ಹುಟ್ಟಿಸಿಬಿಡುವಷ್ಟು ಅನ್ಯಾಯದ ಕಥೆಯನ್ನೇ ಹೇಳುತ್ತಾ ಹೋಗುತ್ತದೆ. ಅನ್ಯರಿಗಾಗಿ ಬದುಕು ಮೀಸಲಿಡುವ ಭೀಷ್ಮನೂ ಪ್ರಮಾದಗಳಿಂದ ಹೊರತಲ್ಲ; ವಿದುರನಂಥ ಬುದ್ಧಿವಂತನ ಪಾಲಿಗೆ ಬರುವುದೂ ತೆಗಳಿಕೆ, ತುಚ್ಛೀಕಾರಗಳೆ; ದುಷ್ಟಕೂಟ ಸೇರುವ ಕರ್ಣನಿಗೂ ದಾನಶೂರನೆಂಬ ನೆಗಳ್ತೆ; ಭಗವದ್ಗೀತೆ ಬೋಧಿಸಿದವನೂ ಕೆಲವೊಮ್ಮೆ ಜಾಣ ಸಂಚುಗಾರನಂತೆ ಕಾಣುತ್ತಾನೆ. ಅಂತೂ ಅತಿಮಾನುಷರಂತೆ ಕಾಣುವವರು ಕೆಲವೊಮ್ಮೆ ಹುಲುಮಾನವರಂತೆ ತೋರುತ್ತಾರೆ; ಲೌಕಿಕರಂತೆ ಬದುಕುವವರು ಕೆಲವೊಮ್ಮೆ ಅಲೌಕಿಕಕ್ಕೆ ಸಲ್ಲುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮಾನವ ವ್ಯಕ್ತಿತ್ವಗಳ ಎಲ್ಲಾ ಮುಖವಾಡ, ಸಾಧ್ಯತೆಗಳಿಗೆ ಹಿಡಿದ ಕನ್ನಡಿಯಂತಿದೆ ಈ ಮಹಾಕಾವ್ಯ.

ಇದನ್ನೂ ಓದಿ | ದಶಮುಖ ಅಂಕಣ | ಹೇಮಂತ ಎಂಬ ಧೀಮಂತ ಋತು

ಮಹಾಭಾರತದ ಮಟ್ಟಿಗೆ ಅದರ ಮುಖ್ಯಕಥೆಯ ಜೊತೆಜೊತೆಗೆ ಉಪಕಥೆಗಳೂ ನಾನಾ ರೀತಿಯಲ್ಲಿ ಸಾಮಾನ್ಯರ ಜೀವನದೊಂದಿಗೆ ಥಳುಕು ಹಾಕಿಕೊಂಡಿವೆ. ಸತ್ಯ ಹರಿಶ್ಚಂದ್ರ, ಸತಿ ಸಾವಿತ್ರಿ, ಬೆಂಬಿಡದ ನಕ್ಷತ್ರಿಕ, ಪಾಕ ಹಾಕುವ ನಳ, ಬಲಭೀಮ, ದಾನಶೂರ ಕರ್ಣ ಮುಂತಾದವರು ನಮ್ಮ ನಿತ್ಯದ ಜೀವನದಲ್ಲಿ ಯಾವ್ಯಾವುದೋ ತಿರುವುಗಳಲ್ಲಿ ಎದುರಾಗುತ್ತಲೇ ಇರುತ್ತಾರೆ. ಮಾತ್ರವಲ್ಲ, ಭೀಷ್ಮ ಪ್ರತಿಜ್ಞೆ, ಕುರುಡು ವ್ಯಾಮೋಹ, ಶಕುನಿ ಬುದ್ಧಿ, ಕೃಷ್ಣನ ಲೆಕ್ಕ, ತ್ರಿಶಂಕು ಸ್ವರ್ಗ- ಇಂಥ ಅನೇಕ ನುಡಿಗಟ್ಟುಗಳು ದಿನಬಳಕೆಯಲ್ಲಿ ನಾನಾರ್ಥಗಳನ್ನು ಹೊಳೆಯಿಸುತ್ತಲೇ ಇರುತ್ತವೆ. ಎಷ್ಟು ಒದ್ದಾಡಿದರೂ ಈ ನುಡಿಗಟ್ಟುಗಳ ಜಾಯಮಾನ ಹಿಡಿತಕ್ಕೆ ಸಿಗುತ್ತಿಲ್ಲವೇ? ಪ್ರಯತ್ನ ಬಿಡಬೇಡಿ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾದರೆ ಕಷ್ಟ!

ಒಂದಕ್ಕೊಂದು ವ್ಯತಿರಿಕ್ತ ಎಂದು ಕಾಣುವ ಪುರಾಣದ ಈ ಕಥೆ-ಕಾವ್ಯಗಳು ನಮ್ಮದೇ ಕಾರಣಗಳಿಗೆ ನಮಗೆ ಇಷ್ಟವಾಗಬಹುದು ಅಥವಾ ಆಗದೆಯೂ ಇರಬಹುದು. ಆದರೆ ನಮ್ಮ ಸುತ್ತಲಿನ ಜಗತ್ತಿನಲ್ಲಿ ಈ ಪೌರಾಣಿಕ ಕಥಾನಕಗಳ ಸೊಲ್ಲುಗಳು ಬೇರ್ಪಡಿಸಲಾಗದಂತೆ ಹೆಣೆದುಕೊಂಡಿರುವುದಂತೂ ಸತ್ಯ.

ಇದನ್ನೂ ಓದಿ | ದಶಮುಖ ಅಂಕಣ | ಚಂದ್ರಲೋಕದಲ್ಲಿ ಒಂದು ಯಾನ

Exit mobile version