Site icon Vistara News

ದಶಮುಖ ಅಂಕಣ: ʼಮುನಿಸು ತರವೇ…!’ ಎಂಬ ಮಧುರ ಮಂತ್ರ

munisu tarave

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2024/01/WhatsApp-Audio-2024-01-16-at-10.53.44-AM.mp3

ಅದೊಂದು ಪಾರ್ಕು. ಬೆಂಚೊಂದರ ಮೇಲೆ ಅಜ್ಜ- ಮೊಮ್ಮಗಳು ಕುಳಿತಿದ್ದರು; ಆದರೆ ದೂರ ದೂರಾಗಿ. ನೀರಾಡುವ ಕಣ್ಣು ಮತ್ತು ಕೆಂಪಾದ ಕದಪನ್ನು ಹೊತ್ತು, ಆಗಾಗ ಮೂಗೊರೆಸಿಕೊಳ್ಳುತ್ತಾ ಕುಳಿತಿದ್ದ ಆ ಪುಟ್ಟಿ, ಮುನಿಸೇ ಮೂರ್ತಿವೆತ್ತು ಬೊಂಬೆಯ ರೂಪದಲ್ಲಿ ಬಂದಂತೆ ಕಾಣುತ್ತಿದ್ದಳು. ಮತ್ತೊಂದು ತುದಿಯಲ್ಲಿ ಪೆಚ್ಚ ಮೋರೆಯ ಅಜ್ಜ ಆಗಾಗ ಪುಟ್ಟಿಯತ್ತ ನೋಡುತ್ತಾ ಕುಳಿತಿದ್ದರು. ಒಂದೆರಡು ಸುತ್ತು ವಾಕಿಂಗ್‌ ಮುಗಿಸಿ ಬರುವಷ್ಟರಲ್ಲಿ ಅವರಿಬ್ಬರ ನಡುವೆ ಹೆಚ್ಚಿನ ಸಂಧಾನವಾದಂತೆ ಕಾಣಲಿಲ್ಲ. ಇನ್ನೊಂದೆರಡು ಸುತ್ತು ಬರುವಷ್ಟರಲ್ಲಿ, ಅಜ್ಜ ಮಾತಾಡುತ್ತಿದ್ದರೆ ಕಿವಿಗೆ ಬೆರಳಿಟ್ಟುಕೊಂಡು ಕೂತಿದ್ದಳು ಹುಡುಗಿ. ಇವರ ಮುನಿಸು ಇವತ್ತಿಗೆ ಮುಗಿಯುವುದಲ್ಲ ಎನಿಸಿ ನಗು ಬಂತು. ಮತ್ತೆರಡು ಸುತ್ತು ಬರುವಷ್ಟರಲ್ಲಿ, ಮೂಗೊರೆಸಿಕೊಳ್ಳುತ್ತಾ ಏನೇನೋ ದೂರುತ್ತಿದ್ದ ಮೊಮ್ಮಗಳತ್ತ ಅಸಹಾಯಕರಾಗಿ ನೋಡುತ್ತಿದ್ದರು ತಾತ. ಮೋಡ ಕವಿದಿದ್ದ ಆಗಸದಿಂದ ಒಂದೊಂದು ಹನಿ ಉದುರುತ್ತಿತ್ತು. ʻಜೋರಾಗಿ ಮಳೆ ಬಂದೇ ಬಿಟ್ಟರೆ… ಕೊಡೆಯೂ ಇಲ್ಲವಲ್ಲ, ವಾಕಿಂಗ್‌ (walking) ಮೊಟಕು ಮಾಡುವುದೇʼ ಎಂಬ ಗೊಂದಲದಲ್ಲಿ ಬಿದ್ದೆ. ಆದರೂ ಇನ್ನೊಂದೆರಡು ಸುತ್ತು ಹಾಕಿಯೇ ಬಿಡುವುದೆಂದು ಮುಂದುವರಿಸಿದೆ. ಮತ್ತೆ ಆ ಜಾಗಕ್ಕೆ ಬರುತ್ತಿದ್ದಂತೆ ಆ ಬೆಂಚಿನೆಡೆಗೇ ದೃಷ್ಟಿ ಹೋಯಿತು. ಅಜ್ಜನನ್ನು ಅಪ್ಪಿ ಹಿಡಿದ ಪುಟ್ಟಿ ನಗುತ್ತಿದ್ದಳು, ಅಜ್ಜ ಕಣ್ಣೊರೆಸಿಕೊಳ್ಳುತ್ತಿದ್ದರು. ಅಂತೂ ಮೋಡ ಹರಿದು ಮಳೆಯ ಭೀತಿ ದೂರಾಗಿತ್ತು! ಮುನಿಸೆಂಬ ಒಂದು ಭಾವ ಸೃಷ್ಟಿಸಿದ್ದ ಸುಂದರ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಅಯಾಚಿತವಾಗಿ ಒದಗಿತ್ತು ಆ ದಿನ.

ಮುನಿಸೆಂದರೆ ನಿಜಕ್ಕೂ ಅಷ್ಟೊಂದು ಸುಂದರ ಭಾವವೇ ಅಥವಾ ಆ ಗೊಂಬೆಯಂಥ ಮಗು ತೋರಿದ್ದಕ್ಕೆ ಮುನಿಸೂ ಸುಂದರವಾಗಿ ಕಂಡಿತ್ತೇ? ಮುನಿಸೆಂದರೆ ಕೋಪ, ಕಿನಿಸಿಗಿಂತ ಭಿನ್ನವೇ ಅಥವಾ ಮುಖ ಭಿನ್ನವಾದರೂ ನಾಣ್ಯ ಒಂದೆಯೇ? ಯಾರು- ಯಾರ ಮೇಲೆ ಬೇಕಿದ್ದರೂ ಮುನಿಸಿಕೊಳ್ಳಬಹುದೇ ಅಥವಾ ಅದಕ್ಕೂ ಸಂವಿಧಾನವೇನಾದರೂ ಉಂಟೇ? ಬದುಕಿನ ಉಳಿದೆಲ್ಲ ರಸಗಳಂತೆಯೇ ಅಲ್ಲವೇ ಮುನಿಸೆಂಬುದು? ಹಾಗಾದರೆ ಅದೊಂದು ಭಾವಕ್ಕೆ ಇಷ್ಟೊಂದು ಸುಮ್ಮಾನವನ್ನೇಕೆ ಅಂಟಿಸಿದ್ದೇವೆ ನಾವು?

ಕೋಪಕ್ಕೂ ಮುನಿಸಿಗೂ ಇರುವ ವ್ಯತ್ಯಾಸವೇನು ಎಂದು ಕೇಳಿದರೆ, ಗೆರೆ ಹೊಡೆದಂತೆ ಹೇಳುವುದು ಕಷ್ಟ. ಆದಾಗ್ಯೂ, ಕೋಪದಷ್ಟು ಸಾಂದ್ರವಲ್ಲದ ಸಿಟ್ಟನ್ನು ಮುನಿಸು ಎನ್ನಬಹುದೇ? ಅಂದರೆ, ತುಸು ಕೋಪ ಅಥವಾ ನಸು ಕೋಪವನ್ನು ಮುನಿಸು ಎನ್ನೋಣವೇ? ಕೋಪ-ತಾಪಗಳಿಗಿಂತ ಸುಲಭವಾಗಿ ಕರಗಬಲ್ಲ ಸಿಟ್ಟೇ ಮುನಿಸೆಂದರೆ? ಮುನಿಸಿಕೊಳ್ಳುವುದರ ಹಿಂದೂ ಒಂದು ಸಲುಗೆ, ಆಪ್ತ ಭಾವಗಳು ಇರಬಹುದೇ? ಅಮೂರ್ತವಾದ ಭಾವಗಳಿಗೆ ನಂನಮ್ಮ ಮನಸ್ಸೇ ರಂಗು ತುಂಬಬೇಕೆ ಹೊರತು, ಇಂಥ ಪ್ರಶ್ನಾವಳಿಗಳಿಗೆ ಉತ್ತರಿಸುವುದು ಹೇಗೆ? ರಸ-ಭಾವಗಳ ಉಗಮ ಮತ್ತು ವಿಕಾಸಗಳಿಗೆ ಮನಸ್ಸೇ ಪಾತಳಿಯಷ್ಟೆ.

ಅಜ್ಜನ ಮಾತಿಗೆ ಕಿವಿಮುಚ್ಚಿಕೊಂಡೊ ಇಲ್ಲವೇ ಅಪ್ಪಿಕೊಳ್ಳುವ ಮೂಲಕವೊ ತನ್ನ ಭಾವವನ್ನು ಆ ಪುಟ್ಟಿ ಪ್ರಕಟಿಸಿದಂತೆ, ನಮ್ಮ ಕೃತಿಯ ಮೂಲಕ ಭಾವವನ್ನು ಇನ್ನೊಬ್ಬರಿಗೆ ತಿಳಿಯಪಡಿಸುವವರು- ನಾವು. ಹಾಗಾಗಿ ಭಾವವು ʻಕೋಪʼ ಎಂಬುದೇ ಆದರೂ, ಅದರ ತೀವ್ರತೆಯನ್ನು ಅಳೆಯುವುದಕ್ಕೆ, ಭಾಷೆ ಬಲ್ಲ ನಾವು ಒಂದಿಷ್ಟು ಶಬ್ದಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಉದಾ, ಖತಿಗೊಳ್ಳು, ಕನಲು, ಕ್ರೋಧ, ಆಕ್ರೋಶಗೊಳ್ಳು, ಕೆರಳು- ಇಂಥವು ಮುನಿಸು, ಸಿಟ್ಟು ಮುಂತಾದ ಶಬ್ದಗಳಿಗಿಂತ ತೀವ್ರ ಭಾವವನ್ನು ಸೂಚಿಸುತ್ತವೆ ತಾನೆ.

ಮುನಿಸಿಕೊಂಡವರ ಪ್ರತಿಕ್ರಿಯೆಗಳು ಹೇಗಿರುತ್ತವೆ? ಏನನ್ನೆಲ್ಲಾ ಮಾಡುತ್ತಾರೆ ಕೋಪಿಸಿಕೊಂಡವರು? ಮಾತು ಬಿಟ್ಟು ಕೂರುವುದು, ಅಳುವುದು, ಕೂಗಾಡುವುದು, ವಾಕಿಂಗ್‌ ಹೋಗುವುದು, ಸಿಕ್ಕಾಪಟ್ಟೆ ತಿನ್ನುವುದು, ಬೆವರು ಹರಿಯುವಂತೆ ಏನನ್ನಾದರೂ ಮಾಡುವುದು, ಅಂತರ್ಮುಖಿ ಆಗುವುದು, ವಿಪರೀತ ಮಾತಾಡಿ ಹಗುರ ಮಾಡಿಕೊಳ್ಳುವುದು, ಎಷ್ಟು ಕೇಳಿದರೂ ಮುನಿಸಿನ ಕಾರಣ ಹೇಳದೆ ಸತಾಯಿಸುವುದು, ಪುಸ್ತಕ ಓದೀಓದಿ ಸಮಾಧಾನ ಮಾಡಿಕೊಳ್ಳುವುದು, ಮುನಿಸು ಹರಿಯುವವರೆಗೆ ನಿದ್ದೆ ಮಾಡುವುದು- ಇದನ್ನು ಪಟ್ಟಿ ಮಾಡುತ್ತಾ ಹೋದರೆ ಮಾನವನ ನಿಗೂಢ ಮತ್ತು ಕುತೂಹಲಕಾರಿ ಸ್ವಭಾವಗಳ ದೊಡ್ಡ ಸಂಪುಟವನ್ನೇ ಸಿದ್ಧಪಡಿಸಬಹುದು.

ಮುನಿಸು ಮೂಡುವುದಕ್ಕೆ ಪ್ರತ್ಯೇಕ ಸಮೀಕರಣ ಉಂಟೋ ಅಥವಾ ಯಾರ ನಡುವೆಯಾದರೂ ಮೂಡಬಹುದೋ? ಮನುಷ್ಯ ಸಹಜವಾದ ಉಳಿದೆಲ್ಲಾ ಭಾವಗಳಂತೆ ಇದೂ ಹೌದು ಎಂದಾದರೆ, ಮುನಿಸು ಯಾರ ನಡುವೆಯಾದರೂ ಮೂಡಬಹುದು. ತಂದೆ-ಮಕ್ಕಳಲ್ಲಿ, ತಾಯಿ-ಮಕ್ಕಳಲ್ಲಿ, ಒಡಹುಟ್ಟಿದವರಲ್ಲಿ, ಗೆಳೆಯರಲ್ಲಿ, ಗೆಳತಿಯರಲ್ಲಿ, ಬಂಧುಗಳಲ್ಲಿ, ಮಿತ್ರರಲ್ಲಿ, ಪ್ರೇಮಿಗಳಲ್ಲಿ, ಹಿರಿ-ಕಿರಿಯರ ನಡುವೆ, ಗುರು-ಶಿಷ್ಯರಲ್ಲಿ, ನೆರೆ-ಹೊರೆಯಲ್ಲಿ, ಸಾಕು ಪ್ರಾಣಿಗಳ ಮೇಲೆ… ಹೀಗೆ ಎಲ್ಲಾದರೂ ಸೈ. ಆದರೆ ಗಂಡ-ಹೆಂಡಿರ ನಡುವಿನ ಮುನಿಸಿಗೆ ಮಾತ್ರ ವಿಶೇಷವಾದ ಗಂಧ ಲೇಪನ ಇರುವುದು ಹೌದು.

ಇದೇ ಹಿನ್ನೆಲೆಯಲ್ಲಲ್ಲವೇ ಕೃಷ್ಣ-ಸತ್ಯಭಾಮೆಯರ ದಾಂಪತ್ಯ ಗಮನ ಸೆಳೆಯುವುದು! ಅವರಿಬ್ಬರ ನಡುವಿನ ನಸುಗೋಪ, ಹುಸಿಮುನಿಸು, ತಿಳಿಹಾಸ್ಯಗಳು ನಮ್ಮದೇ ಸುತ್ತಲಿನ ಕಥೆಗಳು ಎನಿಸುತ್ತವೆ. ಕೃಷ್ಣನ ಲೋಲುಪತೆಗೆ ಪ್ರತಿಯಾಗಿ ಭಾಮೆಯ ಹಠಮಾರಿತನ, ಉದ್ದುರುಟುತನಗಳು ಈ ದೇವ-ದಾಂಪತ್ಯಕ್ಕೊಂದು ನವಿರಾದ ಮಾನವೀಯ ಸ್ಪರ್ಶ ನೀಡುತ್ತವೆ. ದೇವರಾದರೇನು, ಅವರದ್ದೂ ಸಂಸಾರವೇ ತಾನೆ, ಪ್ರಣಯವಿದ್ದ ಮೇಲೆ ಮುನಿಸೂ ಇರಬೇಕಲ್ಲ ಎಂಬ ಭಾವ ಮೂಡಿಸುತ್ತವೆ. ಆದರೂ ಬೇರಾವುದೇ ದೇವ ದಾಂಪತ್ಯದಲ್ಲಿ ಈ ಪರಿಯ ಕೋಪ-ಮುನಿಸುಗಳು ಕಂಡುಬರಲಿಕ್ಕಿಲ್ಲ.

ಹರಪನಹಳ್ಳಿ ಭೀಮವ್ವನ ರಚನೆಯೊಂದರಲ್ಲಿ ಶಿವ-ಪಾರ್ವತಿಯರ ನಡುವಿನ ಸುಂದರ ಹುಸಿ ಮುನಿಸಿನ ಪ್ರಸಂಗವೊಂದು ಮುದ ನೀಡುತ್ತದೆ. ಶಿವ ಬಂದು ಬಾಗಿಲು ತಟ್ಟಿ ʻನಾ ಬಂದೆನು ಬಾಗಿಲ ತೆಗೆಯೆ ಜಾಣೆʼ ಎಂದು ಪಾರ್ವತಿಯಲ್ಲಿ ಹೇಳುತ್ತಾನೆ. ಆದರೆ ಹೊತ್ತಲ್ಲದ ಹೊತ್ತಿನಲ್ಲಿ ಬಂದ ಈಶ್ವರನ ಮೇಲೆ ಮುನಿಸಿಕೊಂಡ ಪಾರ್ವತಿ ಬಾಗಿಲು ತೆರೆಯದೆ ನೆವ ಹೇಳುತ್ತಾಳೆ. ಬಂದವ ಪಶುಪತಿ, ಚಂದ್ರಶೇಖರ, ಸರ್ಪಶರೀರಿ, ನೀಲಕಂಠ, ಶೂಲಿ, ರುಂಡಮಾಲಿ, ಭೂತನಾಥ ಎಂದೆಲ್ಲಾ ತನ್ನ ಅಭಿದಾನಗಳನ್ನು ಶಿವ ಬಣ್ಣಿಸಿಕೊಳ್ಳುತ್ತಾ, ʻಬಾಗಿಲು ತೆಗಿʼ ಎಂದು ಆಕೆಯನ್ನು ಅನುನಯಿಸುತ್ತಾನೆ. ಆದರೆ ಅವನ ಎಲ್ಲಾ ಪ್ರಭಾವಳಿಗಳನ್ನು ಒಂದೊಂದಾಗಿ ಹರಿದೆಸೆಯುವ ಪಾರ್ವತಿ, ʻಮೂಕನಂತಿರುವೆನು ನಾನು ಇನ್ನುʼ ಎಂದು ಒಪ್ಪಿಕೊಂಡ ಮೇಲೆಯೆ ಈಶ್ವರನಿಗೆ ತನ್ನಂತರಂಗದ ಬಾಗಿಲು ತೆರೆಯುತ್ತಾಳೆ. ʻಗಂಡ-ಹೆಂಡಿರ ಜಗಳ ಗಂಧ ತೀಡಿದ್ಹಾಂಗ, ಲಿಂಗಕ್ಕೆ ಎರಕ ಹೊಯ್ದಾಂಗʼ ಎಂದು ಹಾಡಿದ ಜನಪದರ ಮನದಲ್ಲಿ ಇಂಥದ್ದೇ ಚಿತ್ರಗಳು ಮೂಡಿರುವುದಕ್ಕೆ ಸಾಕು.

ದಾಂಪತ್ಯದ ಮುನಿಸುಗಳು ಹಲವಾರು ಕವಿತೆಗಳಿಗೆ ವಸ್ತುವಾಗಿದೆ. ಕೆ.ಎಸ್.‌ ನರಸಿಂಹ ಸ್ವಾಮಿಗಳ ಜನಪ್ರಿಯ ಕವಿತೆ ʻತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿʼ ಕವನದಲ್ಲಿ ಮನೆಗೆ ಹಿಂದಿರುಗದ ಪತ್ನಿಯ ಮೇಲೆ ಪತಿ ಮುನಿದಿದ್ದಾನೆ. “ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ/ ಚುಚ್ಚದಿರಿ ಮೊನೆಯಾದ ಮಾತನೆಸೆದು” ಎಂದು ರಮಿಸುತ್ತಿದ್ದಾಳೆ ಪತ್ನಿ. ಬಿ. ಆರ್.‌ ಲಕ್ಷ್ಮಣರಾಯರ ಕವಿತೆಯಲ್ಲಿ ಮಡದಿಯೇ ಮುನಿಸಿಕೊಂಡಿದ್ದಾಳೆ. “ಬಾಳ ಗೆಳತಿಯೆ ತರವೇ/ ನನ್ನಲ್ಲಿ ಈ ಕೋಪ?/ ಮೊದಲಿನಂತೆ ನಾನಿಲ್ಲ/ ಎನ್ನುವ ಆರೋಪ” ಎಂದು ಸಂತೈಸುತ್ತಿದ್ದಾನೆ ಪತಿ.

ಇದನ್ನೂ ಓದಿ: ದಶಮುಖ ಅಂಕಣ: ಕಾಲನೆಂಬ ಮಾಯ್ಕಾರ…!

ಬರೀ ದಾಂಪತ್ಯದ ಮುನಿಸಿನ ಕುರಿತೇ ಮಾತಾಡಿದರೆ ಪ್ರೇಮಿಗಳು ಕೋಪಿಸಿಕೊಂಡಾರು! ಸುಬ್ರಾಯ ಚೊಕ್ಕಾಡಿಯವರ ಕವಿತೆಯ ಪ್ರಣಯಿಗಳಲ್ಲಿ ಹುಡುಗಿಗೇಕೋ ಕೋಪ. “ಮುನಿಸು ತರವೇ ಮುಗುದೆ/ ಹಿತವಾಗಿ ನಗಲೂ ಬಾರದೆ” ಎಂದು ಕೇಳುವ ಹುಡುಗನಿಗೆ, “ಜೀವನದ ನೂರು ಕನಸು ನನಸಾಗಿದೆ/ ಮುನಿಸೇಕೆ ಈ ಬಗೆ ಮೂಡಿದೆ” ಎಂದು ಚಿಂತಿಸುತ್ತಾನೆ. ಇನ್ನು ಬೇಂದ್ರೆಯವರ ಕವನ ಪ್ರೇಮಿಗಳಲ್ಲಿ ಹುಡುಗನೇ ಮುಖ ಊದಿಸಿಕೊಂಡಂತಿದೆ! “ಬಂತ್ಯಾಕ ನಿನಗ ಇಂದು ಮುನಿಸು/ ಬೀಳಲಿಲ್ಲ ನನಗ ಇದರ ಕನಸು/ ರಾಯ ತಿಳಿಯಲಿಲ್ಲ ನಿನ್ನ ಮನಸು/ ನೀ ಹೊರಟಿದ್ದೀಗ ಎಲ್ಲಿಗೀ?” ಎಂಬ ಸಾಲುಗಳು ಎಷ್ಟು ಪರಿಚಿತವೋ ಅಷ್ಟೇ ಆಪ್ತವೂ ಹೌದು.

ಕೋಪ-ಮುನಿಸುಗಳ ಮೇಲೆ ಭಾಷೆಯಲ್ಲಿ ಒಂದಿಷ್ಟು ಗಾದೆಗಳೂ ದೊರೆಯಬಹುದು. ʻಕೊಟ್ಟು ಬರೋ ನಿಷ್ಠುರಕ್ಕಿಂತ ಕೊಡದೇ ಬರೋ ಮುನಿಸೇ ಲೇಸುʼ, ʻಮುನಿಸಿಕೊಂಡು ಕೊಯ್ದ ಮೂಗು ಶಾಂತಿಯಲ್ಲಿ ಬರೋದಿಲ್ಲʼ, ʻಕಡುಕೋಪ ಬಂದಾಗ ತಡ್ಕೊಂಡೋನೇ ಜಾಣʼ, ʻಬಡವನ ಕೋಪ ದವಡೆಗೆ ಮೂಲʼ, ʻಅತ್ತೆ ಮೇಲಿನ ಕೋಪ ಕೊತ್ತಿ ಮೇಲೆʼ, ʻಕಂಡಿದ್ದು ಕಂಡಂಗೆ ಹೇಳಿದ್ರೆ ಕೆಂಡದಂಥ ಕೋಪʼ… ಇಂಥವು ಇನ್ನೂ ಎಷ್ಟೊ ಇರಬಹುದು. ಮನುಷ್ಯ ಸಹಜವಾದ ಸ್ವಭಾವವೆಂದ ಮೇಲೆ, ಈ ಕುರಿತ ಜೀವನಾನುಭವದ ನುಡಿಗಳಿಗೆ ಬರವೇ?

ʻಮುನಿಸು ತರವೇ!ʼ ಎಂದು ಯಾರನ್ನಾದರೂ ಕೇಳುವಂಥ ಅಥವಾ ಕೇಳಿಸಿಕೊಳ್ಳುವಂಥ ಸಂದರ್ಭಗಳು ಎಲ್ಲರ ಬದುಕಿನಲ್ಲೂ ಎಷ್ಟೋ ಬಾರಿ ಬಂದಿರುತ್ತವೆ. ಹೆಚ್ಚಿನ ಸಾರಿ ಇದಕ್ಕೆ ತೀರಾ ಸಣ್ಣದೇನೋ ಕಾರಣವಿರುತ್ತದೆ. ಕೆಲವೊಮ್ಮೆಯಂತೂ ಮಾರನೇ ದಿನಕ್ಕೆ ಆ ಕಾರಣವೇ ಮರೆತು ಹೋಗಿರಬಹುದು. ತೆಗೆದು ಬಿಸಾಡಿ ಅದನ್ನೆಲ್ಲ ಮನದಿಂದ! “ರಸವೆ ಜನನ, ವಿರಸ ಮರಣ, ಸಮರಸವೇ ಜೀವನ” ಎಂಬ ಕವಿವಾಣಿ ಮುನಿದ ಮನಗಳನ್ನೆಲ್ಲ ಸಂತೈಸಲಿ.

ಇದನ್ನೂ ಓದಿ: ದಶಮುಖ ಅಂಕಣ: ಪಯಣವೋ ನಿಲುಗಡೆಯೋ…!

Exit mobile version