Site icon Vistara News

ದಶಮುಖ ಅಂಕಣ | ಚಂದ್ರಲೋಕದಲ್ಲಿ ಒಂದು ಯಾನ

moon alaka

ಈ ಅಂಕಣವನ್ನು ಇಲ್ಲಿ ಕೇಳಬಹುದು:

https://vistaranews.com/wp-content/uploads/2022/11/WhatsApp-Audio-2022-11-07-at-1.05.35-PM-1.mp3

ಇಂದು ಚಂದ್ರಗ್ರಹಣ. ತನ್ನಷ್ಟಕ್ಕೆ ತಾನು ಸಂಭವಿಸುವ ಖಗೋಳದ ವಿದ್ಯಮಾನದ ಬಗ್ಗೆ ಮಾನವರ ಕುತೂಹಲ ಸಹಜ. ಈ ಕೌತುಕ ಕೆಲವರನ್ನು ವೈಜ್ಞಾನಿಕ ದೃಷ್ಟಿಕೋನ ಹೊಂದಲು ಪ್ರೇರೇಪಿಸಿದರೆ, ಕೆಲವರನ್ನು ಭಯದಿಂದ ಮೌಢ್ಯದತ್ತ ದೂಡುತ್ತದೆ. ನಿಗದಿತ ಸಮಯಕ್ಕೆ ಆರಂಭವಾಗಿ, ಕರಾರುವಾಕ್ಕಾದ ಸಮಯಕ್ಕೇ ಮುಗಿಯುವ ಈ ಘಟನೆಯ ಬಗ್ಗೆ, ಘಟನೆಗೆ ಕಾರಣರಾದವರ ಬಗ್ಗೆ ನಮ್ಮ ಭಾವನೆಗಳು ನಿಗದಿತ ದಿಕ್ಕಿನೆಡೆಗೇ ಹರಿಯಬೇಕೆಂದಿಲ್ಲವಲ್ಲ. ಈಗಾದದ್ದೂ ಅದೇ! ಗ್ರಹಣದ ನೆವನದಲ್ಲಿ ಚಂದ್ರ ಮನವನ್ನು ಆವರಿಸಿಕೊಂಡಿದ್ದ. ಅರಿಯುವ ಮುನ್ನವೇ ಲಹರಿಯೊಂದು ಹುಟ್ಟಿಕೊಂಡಿತು.

ಬಾಲ್ಯಕ್ಕೂ ಚಂದ್ರನಿಗೂ ಬಿಟ್ಟೂಬಿಡದ ನಂಟು. ಅಮ್ಮನ ಸೊಂಟದ ಮೇಲೆ ಕುಳಿತು ಚಂದಮಾಮನನ್ನು ನೋಡುತ್ತಾ ಬಾಯಿಗೆ ತುತ್ತುಣಿಸಿಕೊಳ್ಳುವ ದಿನಗಳಿಂದಲೇ ನಮ್ಮ ಮತ್ತು ಅವನ ಗೆಳೆತನ ಆರಂಭವಾಗುತ್ತದಲ್ಲ. ಹೀಗೆ ಎಳೆಯ ಕಂದಮ್ಮಗಳಿಂದ ಆರಂಭವಾದರೆ, ಶಾಲೆಗೆ ಹೋಗುವ ಚಿಣ್ಣರಿಂದ ಹಿಡಿದು, ಪ್ರೇಮಿಗಳ ಪ್ರೀತಿಪಾತ್ರನೂ ಆಗಿ, ಕಡೆಗೆ ಎಷ್ಟು ದೊಡ್ಡವರಲ್ಲೂ ಎಳೆತನ ಎಬ್ಬಿಸಿ, ತಲೆ ನೆರೆತು ಆರಾಮ ಕುರ್ಚಿಯಲ್ಲಿ ಕುಳಿತವರಿಗೂ ಆರಾಮ ನೀಡುವವ ಈತ. ಹಾಗೆಂದೇ ಇರಬೇಕು, ಚಂದ್ರಮನ ಕುರಿತಾದ ಪ್ರಶ್ನೆ, ಕುತೂಹಲ, ಕವಿಸಮಯ, ಮಾತು, ಕಥೆ, ಆಟ, ತುಂಟಾಟಗಳಿಗೆ ತುದಿ-ಮೊದಲೇ ಇಲ್ಲ. ನಮ್ಮ ಭಾಷೆಯ ಜಾಯಮಾನದಲ್ಲೂ ಚಂದಿರನ ಬಗ್ಗೆ ಬರುವಂಥ ಹೆಸರು, ವರ್ಣನೆಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ.

ಚಂದ್ರನ ಮೇಲಿರುವ ಕಲೆಗಳ ಬಗ್ಗೆ ಚಿಕ್ಕವರಿದ್ದಾಗ ಅಜ್ಜಿಕಥೆಯೊಂದು ಕೇಳಿದ್ದು ನೆನಪಾಗುತ್ತದೆ. ಒಂದಾನೊಂದು ಕಾಡಿನಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದ ಮೊಲದ ಮರಿಯೊಂದು, ಬೆಳದಿಂಗಳ ರಾತ್ರಿಯಲ್ಲಿ ತೊರೆಯ ಬಳಿ ಕುಳಿತು ಶೋಕಿಸುತ್ತಿತ್ತು. ಆಗ ಆಕಸ್ಮಿಕವಾಗಿ ಸಿಂಹಿಣಿಯ ಕೈಗೆ ಸಿಕ್ಕಿಬಿತ್ತು. ಆ ಕಾಲದಲ್ಲಿ ಸಿಂಹಿಣಿಗೂ ಕೇಸರಗಳಿದ್ದುವಂತೆ. ಕಾಡನ್ನು ಪಾಲಿಸುವವರಿಗೆ ಅನಾಥರನ್ನು ರಕ್ಷಿಸುವುದು ಧರ್ಮ ಎಂದು ನಡುಗುತ್ತಲೇ ಹೇಳಿದ ಮೊಲದ ಮರಿಗೆ, ಕಾಡಿನ ನ್ಯಾಯದ ಪ್ರಕಾರ ತಾನೀಗ ನಿನ್ನನ್ನು ತಿನ್ನಲೇಬೇಕೆಂದು ಅಬ್ಬರಿಸಿತು ಸಿಂಹಿಣಿ. ʻಕಾಪಾಡಿ…ʼ ಎಂದು ಹುಯಿಲಿಡುತ್ತಿದ್ದ ಮೊಲವನ್ನು ಕಂಡು ಕನಿಕರಗೊಂಡ ಚಂದ್ರ, ಪುಟ್ಟ ಮೊಲವನ್ನು ಬಿಟ್ಟುಬಿಡುವಂತೆ ಸಿಂಹಿಣಿಯಲ್ಲಿ ಕೇಳಿದ. ಬೋಳುಮಂಡೆಯ ಚಂದ್ರನ ಮಾತನ್ನು ಕೇಳಿ ವ್ಯವಹಾರ ಮಾಡುವವಳು ತಾನಲ್ಲ ಎಂದ ಸಿಂಹಿಣಿಯ ಮಾತಿಗೆ ಕೋಪಗೊಂಡ ಚಂದ್ರ, ನಿನ್ನ ಮಂಡೆಯೂ ಬೋಳಾಗಲಿ ಎಂದು ಶಪಿಸಿ, ಮೊಲವನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡನಂತೆ. ಅದರಿಂದ ಚಂದ್ರನಲ್ಲಿ ಕೃತಜ್ಞತೆಯಿಂದ ಕೈ ಮುಗಿದು ಕುಳಿತ ಮೊಲದ ಕಲೆ ಕಂಡರೆ, ಸಿಂಹಣಿಯ ಕೇಸರಗಳೆಲ್ಲಾ ಉದುರಿ ಬೋಳಾದವಂತೆ. ಈ ಕಥೆ ಹೀಗಾದರೆ, ಮಗುವಾಗಿದ್ದಾಗ ಶ್ರೀರಾಮನು ಚಂದ್ರನನ್ನು ಬಯಸಿ ರಚ್ಚೆ ಹಿಡಿದ ಕಥೆ ನಮಗ್ಯಾರಿಗೆ ಗೊತ್ತಿಲ್ಲ? ಮಂಥರೆ ತಂದು ಕೊಟ್ಟ ಕನ್ನಡಿಯಲ್ಲಿ ಚಂದ್ರಬಿಂಬವನ್ನು ಕಂಡು, ಚಂದ್ರನೇ ಕೈಗೆ ಸಿಕ್ಕ ಎಂದು ಸಂತೋಷಪಟ್ಟ ಕಥೆ ಇಂದಿಗೂ ಮಕ್ಕಳನ್ನು ರಂಜಿಸುವಂಥ ಗುಣವುಳ್ಳದ್ದು.

ಚಂದ್ರನ ಕುರಿತಾದ ಶಿಶುಗೀತೆಗಳಿರುವುದು ಒಂದೇ ಎರಡೇ. “ದೇವರ ಪೆಪ್ಪರಮೆಂಟೇನಮ್ಮಾ ಗಗನದೊಳಲೆಯುವ ಚಂದಿರನು?/ ಎಷ್ಟೇ ತಿಂದರು ಖರ್ಚೇ ಆಗದ ಬೆಳೆಯುವ ಪೆಪ್ಪರಮೆಂಟಮ್ಮಾ!” ಎನ್ನುವ ಮೂಲಕ ಕುವೆಂಪು ಅವರೊಳಗಿರುವ ಮಗು ಚಂದ್ರನನ್ನು ತಿಂದು ನೋಡಿದರೆ ಹೇಗಿದ್ದೀತು ಎಂದು ಯೋಚಿಸುತ್ತದೆ. “ಚಂದಿರನೇತಕೆ ಓಡುವನಮ್ಮಾ, ಮೋಡಕೆ ಬೆದರಿಹನೇ?” ಪದ್ಯವಂತೂ ಈಗಿನ ಅಜ್ಜ-ಅಜ್ಜಿಯರ ಕಾಲದಲ್ಲೂ ಶಿಶುಗೀತೆಯಾಗಿ ಇದ್ದಿರಬಹುದು. ಇದೇ ಪದ್ಯದಲ್ಲಿ ಮುಂದುವರಿದು, “ಚಂದಿರನೆನ್ನಯ ಗೆಳೆಯನು ಅಮ್ಮಾ ನನ್ನೊಡನಾಡುವನು/ ನಾನೂ ಓಡಲು ತಾನೂ ಓಡುವ ಚೆನ್ನಿಗ ಚಂದಿರನು” ಎನ್ನುವ ಕವಿ ನೀ. ರೆ. ಹಿರೇಮಠ ಅವರ ವರ್ಣನೆಯಂತೂ ನಮ್ಮನ್ನು ಥಟ್ಟನೆ ಚಿಣ್ಣರನ್ನಾಗಿಸಿ, ಯಾವುದೋ ಒಂದು ಗೊತ್ತಿಲ್ಲದ ಜಾಗಕ್ಕೆ ಕರೆದೊಯ್ಯುವ ಸಂಜೆಯ ಬಸ್ಸಿನಲ್ಲಿ ನಮ್ಮನ್ನು ಕುಳ್ಳಿರಿಸಿಬಿಡುತ್ತದೆ. ಬಾಲ್ಯದ ಆ ಬಸ್ಸು ಎಷ್ಟೇ ವೇಗದಲ್ಲಿ ಓಡಿದರೂ, ಕಿಟಕಿಯಲ್ಲಿ ನೋಡಿದಾಗೆಲ್ಲ ತಪ್ಪದೇ ಗೋಚರಿಸುತ್ತಿದ್ದ ಆ ಚಂದಿರ ಹುಟ್ಟಿಸುತ್ತಿದ್ದ ಬೆರಗೇನು ಸಾಮಾನ್ಯದ್ದೇ? ಬಿ. ಎಂ. ಶರ್ಮಾ ಅವರ ʻಬಾವಿಯಲ್ಲಿ ಚಂದ್ರʼ ಕವನದಲ್ಲಿ ಗೋಪಿ ಮತ್ತು ಪುಟ್ಟು ಬಾವಿಯಲ್ಲಿ ಇಣುಕಿ ನೋಡಿದಾಗ ಒಂದು ಘೋರ ಅನಾಹುತವಾಗಿಬಿಡುತ್ತದೆ. “ಬಾವಿಲಿ ಚಂದ್ರನ ಬಿಂಬವ ಕಂಡು/ ಚಂದ್ರನು ಬಾವಿಗೆ ಬಿದ್ದನು ಎಂದು/ ಅಯ್ಯೋ! ಪಾಪವೆ! ಎನ್ನುತಲೊಂದು/ ಕೊಕ್ಕೆಯ ಹುಡುಕಿದರು”. ಚಂದ್ರನ ಹೆಸರಿನಲ್ಲಿ ಚಿಣ್ಣರ ಚಿತ್ತ ನಡೆಸುವ ತುಂಟಾಟಗಳ ಕ್ಯಾನ್ವಾಸ್‌ ಸಹ ಆಕಾಶದಷ್ಟೇ ದೊಡ್ಡದು.

ಇಂತಿಪ್ಪ ಚಂದ್ರ ಇರುವಂತೆ ಇರದಷ್ಟು ಚಂಚಲ. ಹಾಗಾಗಿ ಯಾವತ್ತು ಹೇಗಿರುತ್ತಾನೆ ಎಂಬುದನ್ನು ತುಂಬಾ ರಸವತ್ತಾಗಿ ವರ್ಣಿಸುತ್ತಾರೆ ನಮ್ಮ ದ. ರಾ ಬೇಂದ್ರೆಯವರು. ಬಿದಿಗೆ ಚಂದಿರನಿಗೆ ದೀಪ ಹಚ್ಚಿದಂತೆ ಜೋಡಿದ್ದರೆ, ಚವತಿ ಚಂದ್ರ ಕೋಡು ಮೂಡಿದಂತೆ ಇರುತ್ತಾನೆ. “ಅಷ್ಟಮಿ ಚಂದಿರನು ಬಂದ/ ಅರ್ಧಬಿಟ್ಟು ಅರ್ಧ ತಿಂದ/ ಉಂಡಿ ಚೆಲ್ಲಿ ಕೊಟ್ಟನಿಲ್ಲಿ ಹುಡುಗನಾವನು?” ಎಂಬ ಕವಿಕಲ್ಪನೆ ಚಂದ್ರನಷ್ಟೇ ಪ್ರಿಯ ಎನಿಸುವುದಿಲ್ಲವೇ? ಇಂಥ ಚಂದ್ರನ ಮೇಲೆ ಮನುಷ್ಯ ಕಾಲಿಟ್ಟಾಗ ಅಜ್ಞಾತ ಕವಿಯೊಬ್ಬರಿಗೆ ಸಿಕ್ಕಾಪಟ್ಟೆ ಗಾಬರಿಯಾಗಿರಬೇಕು. ಹಾಗೆಂದೇ ಎಲ್ಲಾ ಮಕ್ಕಳ ಪರವಾಗಿ, “ಚಂದ್ರಲೋಕದೊಳಿನ್ನು ಮನೆಯ ಕಟ್ಟುವರಂತೆ/ ಇರುವೊಬ್ಬ ಚಂದ್ರನನು ಅಂದಗೆಡಿಸುವರೇ?/ ಚಂದಮಾಮ ಎಂದು ಕರೆವುದಾರಮ್ಮ/ ಬಾಲರಾನಂದಕೆ ಬರೆಯ ಕೊಡಿಸುವರೇ?” ಎಂದು ಮನಸ್ಸು ಕರಗುವಂತೆ ದುಃಖಿಸುತ್ತಾರೆ.

ಇವೆಲ್ಲ ಮಕ್ಕಳ ಮನದ ಮಾತುಗಳಾದವು. ದೊಡ್ಡವರೇನು ಕಡಿಮೆಯೇ? ರಸ್ತೆ ಮೇಲೆ ನಡೆಯುವ ಮದಿರಾಪ್ರಿಯರ ಪಾಲಿಗೆ ಲೋಕವೇ ತೂರಾಡಿದರೂ, ಚರಂಡಿ ತಾ ದಾರಿ ತಪ್ಪಿದರೂ, ತಪ್ಪದೇ ದಾರಿ ದೀಪವಾಗುವವ ಚಂದ್ರನೇ ತಾನೆ? ಹಾಗೆಂದೇ ನಮ್ಮ ಜಿ.ಪಿ. ರಾಜರತ್ನಂ ಅವರು ʻಬೆಳದಿಂಗಳ ರಾತ್ರಿʼ ಅನ್ನುವ ಕವನದಲ್ಲಿ ಹೇಳಿದ್ದು, “ಆಕಾಶದ ಚಂದ್ರನ್ನ ಪಡಖಾನೆ ದೀಪಕ್ಕೆ ಹೋಲಿಸದೆ ಹೋಯ್ತಂದ್ರೆ ತೆಪ್ಪಾಯ್ತದೆ”. ಇನ್ನು, “ಉಡುಗಣವೇಷ್ಟಿತ ಚಂದ್ರ ಸುಶೋಭಿತ”, “ತಿಂಗಳ ಚೆಲುವಿನ ಮಂಗಳ ಮೂರುತಿ”ಯಂಥ ವರ್ಣನೆಗಳು ಹಲವೆಡೆ ದೊರೆಯಬಹುದು. ಚಂದ್ರನ ಬೆಳಕನ್ನೇ ಸೇವಿಸಿ ಬದುಕುವ ಚಕೋರ ಪಕ್ಷಿಯ ಕಲ್ಪನೆಯಂತೂ ರಮ್ಯ ಕವಿಸಮಯ. ಕೆ.ಎಸ್.‌ ನರಸಿಂಹಸ್ವಾಮಿ ಅವರ “ಕಬ್ಬಿಗನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು” ಸಾಲುಗಳನ್ನು ಬದಲಿಸಿ, “ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು/ ಅಲ್ಲಿಯ ಒಡೆತನ ಸಿಗುವಂತಿದ್ದರೆ ನನಗೇ ಸಿಗಬೇಕು” ಎಂದು ಉಲ್ಲೇಖಿಸಿದ್ದನ್ನೂ ಕೇಳಿದ್ದೇನೆ. ಹೀಗೆನ್ನುವಲ್ಲಿ, ಚಂದಿರ-ಚಂದಿರನೂರು ಎಂಬೆಲ್ಲಾ ಕಲ್ಪನೆಗಳು ನಮಗೆಷ್ಟು ಪ್ರಿಯವಾದವು ಎಂಬುದಕ್ಕೆ ಬೇರೆ ಸಾಕ್ಷಿ ಬೇಕೆ?

ಇದನ್ನೂ ಓದಿ | ದಶಮುಖ ಅಂಕಣ | ಶಾಂತಿಯ ಸಾರುವ ಕಾಂತಿಯ ಕಿಡಿಗಳು

ಚಂದ್ರನೊಂದಿಗೆ ಹೊಂದಿಕೊಂಡಂಥ ಹೆಸರುಗಳೂ ಒಂದಕ್ಕಿಂದ ಒಂದು ಚಂದ. ಮೃಗಾಂಕ, ಶಶಾಂಕ, ತಿಂಗಳು, ತಂಗದಿರ ಮುಂತಾದ ಹೆಸರುಗಳೇ ತಂಪಾದ ಭಾವನೆ ಮೂಡಿಸುತ್ತದೆ. ಇಂದುಮತಿ, ಇಂದುವದನೆ, ಇಂದುಲೇಖಾ ಎಂದೆಲ್ಲಾ ಕರೆದರೆ ಚಂದ್ರಮತಿ, ಚಂದ್ರಮುಖಿ, ಚಂದ್ರಲೇಖೆಯರೇನೂ ಬೇಸರಿಸಲಾರರು. ಆದರೆ ಚಂದ್ರಕಳಾಧರಿಯರನ್ನು ʻಚಂದ್ರಕಲೆʼ ಎಂದು ಕರೆದರೆ ಕುಚೇಷ್ಟೆಯಾದೀತು, ಎಚ್ಚರ! ʻಪೂರ್ಣಚಂದ್ರʼನತ್ತ ನಗೆಚೆಲ್ಲುವ ʻಪೂರ್ಣಿಮೆʼಯ ಕಂಡು ಚಂದ್ರಶೇಖರ, ಸೋಮಶೇಖರರ ಮುಖದಲ್ಲೂ ನಗೆ ಮೂಡಬಹುದು. ಪ್ರೇಮಿಗಳ ಪಾಲಿಗೆ ʻಕಡಲಮೋಹಿತʼ; ತಾರೆಯರ ಪಾಲಿಗೆ ʻಉಡುಪತಿʼ; ನಿಶೆಯ ಪಾಲಿಗೆ ʻಯಾಮಿನೀಕರʼ.

ನಮಗೆಲ್ಲಾ ಇಷ್ಟೊಂದು ಪ್ರಿಯನಾದ ಚಂದ್ರನನ್ನೂ ಶಾಪ ಬಿಡಲಿಲ್ಲ. ಭಾದ್ರಪದ ಚೌತಿಯಂದು ಸಿಕ್ಕಾಪಟ್ಟೆ ತಿಂದು ಹೊಟ್ಟೆ ಒಡೆದುಕೊಂಡು, ಹಾವು ಸುತ್ತಿಕೊಂಡ ಗಣಪತಿಯನ್ನು ಕಂಡು ನಕ್ಕನಂತೆ ಚಂದ್ರ. ಕುಪಿತನಾದ ಗಣಪತಿ, ಚೌತಿ ಚಂದ್ರನ ಮುಖ ನೋಡಿದವರ ಮೇಲೆ ಆಪಾದನೆ ಬರಲಿ ಎಂದು ಶಪಿಸಿದ ಕಥೆ ಹೊಸದೇನಲ್ಲ. ಕೃಷ್ಣನ ಮೇಲೆ ಬಂದ ಕಳ್ಳತನದ ಆಪಾದನೆ ಹೋಗುವುದಕ್ಕೆ ಶಮಂತಕ ಮಣಿಯನ್ನು ತಂದು, ಈ ನೆವದಲ್ಲಿ ಇನ್ನೊಂದೆರಡು ಮದುವೆಯಾಗಬೇಕಾಯ್ತು. ಮೊದಲಿಗೆ ನಷ್ಟ ಎನಿಸಿದ್ದು ಮತ್ತೆ ಲಾಭವಾಗುವುದು ಹೀಗೇ ಅಲ್ಲವೇ? ಈ ಲಾಭ-ನಷ್ಟಗಳು ಏನೇ ಇರಲಿ, ಗ್ರಹಣದ ಹೆಸರಿನಲ್ಲಿ ಚಂದಿರನ ಮೇಲೆ ಒಂದಿಷ್ಟು ಹರಟೆಯಾಯಿತು. ಚಂದ್ರನ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಬರಿಗಣ್ಣಿನಲ್ಲಿ ಮಾತ್ರ ಗ್ರಹಣದ ಚಂದ್ರನನ್ನು ನೋಡಬೇಡಿ. ಈಗ ಕ್ಷೇಮವಾಗಿ ಗ್ರಹಣ ನೋಡುವ ಸಾಧನಗಳು ಲಭ್ಯವಿವೆ. ಈಗಲೂ ಪ್ರಯೋಜನ ಪಡೆಯದೆ ಹೆದರಿಕೊಂಡು ಕುಳಿತರೆ ನಷ್ಟ ಯಾರಿಗೆ ಎನ್ನುವುದನ್ನು ನಾವು ಯೋಚಿಸಬೇಕು. “ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜೀವನಕೆ ಮಂಕುತಿಮ್ಮ” ಎಂಬ ಕವಿವಾಣಿ ಸದಾ ನಮ್ಮ ಮನದಲ್ಲಿರಲಿ.

ಇದನ್ನೂ ಓದಿ | ದಶಮುಖ ಅಂಕಣ | ನೆಲದ ಮೇಲೆಯೇ ನಡೆವ ದೇವರುಗಳು

Exit mobile version