Site icon Vistara News

ದಶಮುಖ ಅಂಕಣ: ಅದಲು ಬದಲು ಕಂಚಿ ಕದಲು

palindromes

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2023/01/WhatsApp-Audio-2023-01-30-at-7.50.51-PM.mp3

ಇತ್ತೀಚೆಗೆ ಯಾವುದೋ ಕೌಟುಂಬಿಕ ಸಮಾರಂಭಕ್ಕೆ ಹೋಗಿದ್ದಾಗ, ಎಪ್ಪತ್ತು ಮೀರಿದ ಹಿರಿಯರೊಬ್ಬರು ಭೇಟಿಯಾಗಿದ್ದರು. ಹಲವಾರು ವರ್ಷಗಳ ನಂತರ ಮಾತಿಗೆ ಸಿಕ್ಕಿದ್ದ ಅವರು, ಈಗಿನ ವಯಸ್ಕರೆಲ್ಲರ ಬಾಲ್ಯವನ್ನು ನೆನಪಿಸಿಕೊಳ್ಳುತ್ತಿದ್ದರು. ಆ ಲಹರಿಯ ನಡುವೆ ಎಲ್ಲರೂ ನೆನಪಿಸಿಕೊಂಡ ಒಂದು ವಿಷಯವೆಂದರೆ, ಮಕ್ಕಳನ್ನು ಕಂಡ ಕೂಡಲೇ ಆತ ಮಗ್ಗಿ ಕೇಳುತ್ತಿದ್ದುದು- ಅದೂ ಉಲ್ಟಾ ಮಗ್ಗಿ! ಅಂದರೆ, ಎರಡು ಹತ್ಲೆ ಇಪ್ಪತ್ತು, ಎರಡೊಂಬೋತ್ಲೆ ಹದಿನೆಂಟು… ಹೀಗೆ. ಮಕ್ಕಳಿಗೆ ಮಗ್ಗಿಯನ್ನು ಎಲ್ಲೆಲ್ಲೋ ನಡುನಡುವೆ ಕೇಳುವುದು, ತಲೆಕೆಳಗು ಹೇಳಿಸುವುದು, ವರ್ಣಮಾಲೆಯನ್ನು ಹಿಂದುಮುಂದೆ ಹೇಳಿಸುವುದು- ಇಂಥವೆಲ್ಲಾ ಅವರ ಪ್ರಿಯ ಹವ್ಯಾಸವಾಗಿತ್ತು. ಅದಕ್ಕಾಗಿ ಅವರನ್ನು ಕಾಣುತ್ತಿದ್ದಂತೆಯೇ ತಾವೆಲ್ಲ ಅಡಗಿಕೊಳ್ಳುತ್ತಿದ್ದೆವು ಎಂಬುದನ್ನು ಈಗಿನವರು ನೆನಪಿಸಿಕೊಂಡು ನಗುತ್ತಿದ್ದರು.

ಆ ಕಾಲದ ಶಿಕ್ಷಣ ಪದ್ಧತಿಯಲ್ಲಿ ಪಾಠಗಳನ್ನು ಹಿಂದುಮುಂದೆ, ತಲೆಕೆಳಗೆ, ಅರ್ಧರ್ಧಕ್ಕೆ ಹೇಳಿಸುವಂಥದ್ದು ಸಾಮಾನ್ಯವಾಗಿತ್ತು. ನನ್ನಮ್ಮನ್ನ ತಲೆಮಾರಿನ ಬಹುತೇಕ ಶಿಕ್ಷಿತರಿಗೆ ಮಾಮೂಲಿ ಮಗ್ಗಿಯಷ್ಟೇ ಅಲ್ಲ, ಕಾಲು-ಅರ್ಧ-ಮುಕ್ಕಾಲರ ಮಗ್ಗಿಗಳು (ಕಾಲೊಂದ್ಲ ಕಾಲು, ಕಾಲು ಎರಡ್ಲ ಅರ್ಧ, ಕಾಲು ಮೂರ್ಲೆ ಮುಕ್ಕಾಲು…) ಇಂದಿಗೂ ಕಂಠಪಾಠ! ಮಾತ್ರವಲ್ಲ, ಎಂತಹ ಕ್ಲಿಷ್ಟ ಪಾಠಗಳನ್ನು ನೆನಪಿಡುವುದಕ್ಕೂ ಪ್ರತಿಯೊಬ್ಬರಿಗೂ ಅವರವರದ್ದೇ ಆದ ತಂತ್ರಗಳಿರುತ್ತಿದ್ದವು, ಇಂದಿಗೂ ಇವೆ. ಉದಾ, ಎಲ್ಲ ಕಡೆ ಸ್ಥಿರದೂರವಾಣಿಗಳು ಮಾತ್ರವೇ ಪ್ರಚಲಿತದಲ್ಲಿದ್ದ ಕಾಲದಲ್ಲಿ ಹತ್ತಾರು ದೂರವಾಣಿ ಸಂಖ್ಯೆಗಳನ್ನು (ನೂರಾರು ನೆನಪಿಟ್ಟುಕೊಂಡವರೂ ಇದ್ದರು!) ನೆನಪಿಡುವುದಕ್ಕೆ ಅವರವರದ್ದೇ ಕ್ರಮಗಳಿರುತ್ತಿದ್ದವು. ಈಗ ನಮ್ಮ ನಂಬರು ನಮಗೆ ನೆನಪಿದ್ದರೆ ದೊಡ್ಡ ವಿಷಯ.

ಹಿಂದುಮುಂದೆ ಅಥವಾ ತಲೆಕೆಳಗು ಎಂಬುದು ಕಲಿಕೆಯ ಸಾಮಾನ್ಯ ವಿಷಯ. ನಿನ್ನೆ- ನಾಳೆಗಳಲ್ಲಿ ಗೊಂದಲ ಮಾಡಿಕೊಳ್ಳುವುದನ್ನು ಪುಟ್ಟ ಮಕ್ಕಳಲ್ಲಿ ಸಾಮಾನ್ಯವಾಗಿ ನೋಡಬಹುದು. ಅಕ್ಷರ ಗುರುತಿಸಲು ಬಾರದ ಮಕ್ಕಳು ಚಿತ್ರಗಳನ್ನು ನೋಡುವಾಗ ಪುಸ್ತಕ ತಲೆಕೆಳಗು ಹಿಡಿಯುವುದು, ಸಂಖ್ಯೆಗಳನ್ನು ಮೊದಲಿಗೆ ಕಲಿಯುವಾಗ ಅವುಗಳನ್ನು ಕನ್ನಡಿಯ ಬಿಂಬದಲ್ಲಿ ಕಂಡಂತೆ ಬರೆಯುವುದು- ಇಂಥ ಹಲವು ಉದಾಹರಣೆಗಳಲ್ಲಿ ಉಲ್ಟಾಪಲ್ಟಾ ಎನ್ನುವುದು ಕಲಿಕೆಯ ಭಾಗವೇ ಎಂಬುದು ತಿಳಿಯುತ್ತದೆ. ಎಷ್ಟೆಂದರೆ, ಪೂರ್ವಾಶ್ರಮದಲ್ಲಿ ವ್ಯಾಧನಾಗಿದ್ದ ವಾಲ್ಮೀಕಿಗೆ, ʻರಾಮʼ ಎನ್ನಲು ಬಾರದೆ ʻಮರʼ ಎಂದೇ ಆರಂಭಿಸಿದ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ರಾಮ ಎನ್ನಲೂ ಬಾರದ ಇದೇ ವ್ಯಕ್ತಿ ಮುಂದೆ ರಾಮಾಯಣ ರಚಿಸಿದರೆಂದರೆ, ಕಲಿಕೆಯ ಮೊದಲ ಹಂತ ಹಿಂದುಮುಂದಾದರೆ ಸಮಸ್ಯೆಯಿಲ್ಲ ಎಂದಾಯಿತು. ಬೆಳವಣಿಗೆಯ ಒಂದು ವಯಸ್ಸಿನ ನಂತರವೂ ಇವೆಲ್ಲ ಮುಂದುವರಿಯುತ್ತಿದ್ದರೆ ಅಥವಾ ಹಿಂದುಮುಂದಾಗುವುದೇ ಸಮಸ್ಯೆ ಎನ್ನುವಷ್ಟು ಹೆಚ್ಚಿದ್ದರೆ ವೈದ್ಯರ ನೆರವು ಬೇಕಾಗಬಹುದು. ಡಿಸ್ಲೆಕ್ಸಿಯ ಇರುವ ಪುಟ್ಟ ಹುಡುಗನ ಕಥೆಯನ್ನು ಹೊಂದಿದ ʻತಾರೆ ಜಮೀನ್ ಪರ್ʼ ಹಿಂದಿ ಚಿತ್ರವನ್ನು ನೆನಪಿಸಿಕೊಳ್ಳಬಹುದು.

ಅರಿವು, ಕಲಿಕೆ ಮತ್ತು ಬುದ್ಧಿಮತ್ತೆಯ ಪಯಣದಲ್ಲಿ ಹಿಂದುಮುಂದಾಗಿ ಮತ್ತು ತಲೆಕೆಳಗಾಗಿ ಕಲಿಯುವುದಕ್ಕೆ ಅದರದ್ದೇ ಆದ ಲಾಭವಿದೆ ಎನ್ನುತ್ತದೆ ಕಲಿಕಾವಿಜ್ಞಾನ. ಉದಾ, ತಪ್ಪಿಲ್ಲದಂತೆ ಕ್ಷಿಪ್ರವಾಗಿ ಚಿಲ್ಲರೆ ಲೆಕ್ಕ ಮಾಡುವುದು, ಕಣ್ಣಂದಾಜಿನಲ್ಲಿ ಯಾವುದನ್ನೋ ಅಳೆಯುವುದು- ನಿತ್ಯ ಜೀವನದಲ್ಲಿ ಇಂತಹ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ಕಲಿತಿದ್ದು ಪ್ರಯೋಜನಕ್ಕೆ ಬರಬೇಕು. ಅಂದರೆ ಯಾವುದನ್ನು ಎಲ್ಲಿ, ಹೇಗೆ, ಎಷ್ಟು ಉಪಯೋಗಿಸಬೇಕು ಎಂಬುದು ತಿಳಿದಿರಬೇಕು. ಕಲಿತಿದ್ದನ್ನು ಚುರುಕಾಗಿ ಉಪಯೋಗಿಸುವುದಕ್ಕೆ ಬಾರದಿದ್ದರೆ ʻಘನಪಾಠಿ, ಶಿಖಾಮಣಿʼ ಮುಂತಾದ ಶ್ಲೇಷೆ ಅಂಟಿಕೊಳ್ಳುತ್ತದೆ. (ಇಲ್ಲೀ ಶಬ್ದಗಳು ಉಪಯೋಗವಾಗುವುದೂ ಉಲ್ಟಾ ಅರ್ಥದಲ್ಲಿಯೇ!)

ಉಲ್ಟಾಪಲ್ಟಾ ಎನ್ನುವುದನ್ನು ಕಲಿಕೆಯ ಪ್ರಾಥಮಿಕ ಹಂತಗಳಲ್ಲಿ ಮಾತ್ರವಲ್ಲ, ಬದುಕಿನ ಹಲವೆಡೆಗಳಲ್ಲಿ ನೋಡಬಹುದು. ಎದುರಿನವರಿಗೆ ತಿಳಿಯದಂತೆ ಸಂವಹನ ನಡೆಸಲು ಹಿಂದೆಮುಂದೆ ಮಾತಾಡುವುದು ನಾವೆಲ್ಲ ಚಿಕ್ಕವರಿದ್ದಾಗ ಜನಪ್ರಿಯವಾಗಿತ್ತು. ದೊಡ್ಡವರು ಈ ರೀತಿಯಲ್ಲಿ ನಮ್ಮೆದುರಿಗೆ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿದ್ದೆವು. ಮನೆಗೆ ಬಂದ ಅಪ್ರಿಯ ಅತಿಥಿಗಳ ಎದುರು ಯಜಮಾನ ತನ್ನ ಯಜಮಾನಿತಿಗೆ ಹೇಳುತ್ತಿದ್ದ ʻಪಿಕಾ ಡುಕೊ, ಕುಸಾ. ಡಿಂತಿ ನುಏ ಡಬೇʼ (ಕಾಫಿ ಕೊಡು, ಸಾಕು. ತಿಂಡಿ ಏನೂ ಬೇಡ) ಎಂಬಂಥವು ಈಗ ನೆನಪಾದರೂ ನಗೆಯುಕ್ಕಿಸುತ್ತವೆ.

ಇಂಗ್ಲಿಷ್‌ನಲ್ಲಿ ಪಾಲಿಂಡ್ರೋಮ್ ಎಂದು ಕರೆಸಿಕೊಳ್ಳುವಂಥವು ಕನ್ನಡದಲ್ಲೂ ಸಿಕ್ಕಾಪಟ್ಟೆ ಬಳಕೆಯಲ್ಲಿವೆ. ಅಂದರೆ, ಹಿಂದಿನಿಂದ ಮುಂದೆ ಅಥವಾ ಮುಂದಿನಿಂದ ಹಿಂದೆ- ಹೇಗೆ ಓದಿದರೂ ಪದ ಬದಲಾಗುವುದಿಲ್ಲ. ಉದಾ, ಚುರುಕಿದ್ರೆ ಕಿರುಚು, ಮದ್ರಾಸಿನ ಸಿದ್ರಾಮ, ಕುಬೇರನಿಗೇನಿರಬೇಕು, ವಿಕಟಕವಿ, ತಮಗೇ ಮತ, ನವಕವನ, ಸಕತ್ ಕಸ, ಕಿಶೋರಿ ಶೋಕಿ- ಇಂಥ ಬಹಳಷ್ಟು ಬಳಕೆಯಲ್ಲಿವೆ. ಇವುಗಳನ್ನು ಎಡದಿಂದ ಬಲಕ್ಕೆ ಓದಿದರೂ ಬಲದಿಂದ ಎಡಕ್ಕೆ ಓದಿದರೂ ಅರ್ಥ ಒಂದೇ.

ಇದನ್ನೂ ಓದಿ: ದಶಮುಖ ಅಂಕಣ | ಬಣ್ಣಿಸುವುದು ಹೇಗೆ ಬದುಕನ್ನು? ಬಣ್ಣಗಳ ಮೂಲಕ!

ಹೀಗೆ ಆಚಿಂದೀಚೆ ಆಗುವುದು ಜನರ ಜಾಯಮಾನದಲ್ಲೂ ಕಾಣಬಹುದು. ಈಗ ತಕ್ಷಣಕ್ಕೆ ನೆನಪಾಗುವುದು ಎಡಗೈ ಬಳಸುವ ವ್ಯಕ್ತಿಗಳು. ಹೀಗೆ ಎಡಗೈ ಮುಂದೆ ಮಾಡುವ ವ್ಯಕ್ತಿಗಳ ಬಗ್ಗೆ ಇದ್ದಂಥ ಪೂರ್ವಗ್ರಹಗಳು ಇತ್ತೀಚಿನ ವರ್ಷಗಳ ಬಹಳಷ್ಟು ಕಡಿಮೆಯಾಗಿವೆ. ಇವರಲ್ಲಿ ಯಾವುದೇ ದೋಷವಿಲ್ಲ, ಬಲಗೈ ಬಳಸುವಷ್ಟೇ ಸಹಜವಾಗಿ ಈ ಜನರಲ್ಲಿ ಎಡಗೈ ಬಳಕೆಯಾಗುತ್ತದೆಯಷ್ಟೆ ಎಂಬ ತಿಳುವಳಿಕೆ ಈಗ ಮೊದಲಿಗಿಂತ ವ್ಯಾಪಕವಾಗಿದೆ. ಎಷ್ಟೆಂದರೆ, ಎಡಚರಿಗಾಗಿಯೇ ಪ್ರತ್ಯೇಕವಾಗಿ ವಿನ್ಯಾಸ ಮಾಡಿದ ಪೆನ್ನು, ಕತ್ತರಿ, ಕ್ಯಾನ್ ಓಪನರ್, ಕೈತೋಟದ ಹಡಪಗಳು, ಸ್ಕ್ರೂ ಡ್ರೈವರ್ ಇತ್ಯಾದಿ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಬಲಗೈ ಬಳಸುವವರಿಗಿಂತ ಇವರ ಅಗತ್ಯ ಸ್ವಲ್ಪ ಬೇರೆ ಇದೆ ಎಂಬುದನ್ನೂ ಮಾರುಕಟ್ಟೆ ಅರ್ಥಮಾಡಿಕೊಳ್ಳುವಷ್ಟು ಪರಿಸ್ಥಿತಿ ಸುಧಾರಿಸಿದೆ. ತತ್ವಜ್ಞಾನಿ ಅರಿಸ್ಟಾಟಲ್, ಖ್ಯಾತ ಕಲಾವಿದ ಲಿಯೊನಾರ್ಡೊ ಡಾವಿಂಚಿಯಿಂದ ಹಿಡಿದು ಇತ್ತೀಚಿನ ಅಮಿತಾಭ್ ಬಚ್ಚನ್, ಸ್ಟೀವ್ ಜಾಬ್ಸ್, ಬರಾಕ್ ಒಬಾಮಾವರೆಗೆ ಹಲವು ಖ್ಯಾತನಾಮರು ಎಡಚರಿದ್ದಾರೆ. ಹಾಗಾಗಿ ಕೈ ʻಅದಲಾಬದಲೀʼ ಆಗುವುದು ಇಂದಿನ ದಿನಗಳಲ್ಲಿ ದೊಡ್ಡ ವಿಷಯವೇ ಅಲ್ಲ, ಆಗುವುದೂ ಬೇಕಿಲ್ಲ.

ಇನ್ನೊಂದು ಆಸಕ್ತಿಕರ ವಿಷಯವೆಂದರೆ ಹೀಗೆ ಹಿಂದುಮುಂದಾಗುವ ವಿಷಯವಾಗಿಯೇ ದಿನವೊಂದು ಆಚರಿಸಲ್ಪಡುತ್ತದೆ. ಯಾವತ್ತು ಎಂದರೆ- ಇವತ್ತೇ! ತಲೆಕೆಳಗೆ, ಉಲ್ಟಾಪಲ್ಟಾ, ಒಳಹೊರಗೆ, ಹಿಂದುಮುಂದೆ… ಇಂಥ ಯಾವುದನ್ನಾದರೂ ಮಾಡುವ ದಿನವೆಂದು ಹಲವು ದೇಶಗಳಲ್ಲಿ ಜನವರಿ ತಿಂಗಳ ೩೧ನೇ ದಿನವನ್ನು ಗುರುತಿಸಲಾಗುತ್ತದೆ. ಈ ದಿನದ ಆಚರಣೆಯೂ ವಿಚಿತ್ರವಾಗಿಯೇ ಇದೆ. ಕನ್ನಡಿಯಲ್ಲಿ ಕಂಡಂತೆ ಹಿಂದುಮುಂದಾಗಿ ಬರೆಯುವುದು, ವಸ್ತ್ರಗಳನ್ನು ಸೂಪರ್‌ಮ್ಯಾನ್‌ನಂತೆ ಒಳಹೊರಗೆ ಹಾಕುವುದು, ಹಿಮ್ಮುಖ ನಡೆಯುವುದು ಮುಂತಾದ ಹಲವು ಚೇಷ್ಟೆಗಳನ್ನು ಈ ದಿನ ಮಾಡುವುದಿದೆ.

ಇದನ್ನೂ ಓದಿ: ದಶಮುಖ ಅಂಕಣ | ನಲಿವುದಕೆ ಒಲಿವುದಕೆ ಹೊಸಹಾದಿ ಬೇಕು

ಈ ಬಗ್ಗೆ ಭಾಷೆಯ ಜಾಯಮಾನವೂ ತಮಾಷೆಯಾಗಿಯೇ ಕಾಣುತ್ತದೆ. ಹಗಲು ನಿದ್ರಿಸಿ ರಾತ್ರಿ ಎಚ್ಚರಿರುವವರು ಅಥವಾ ಯಾವುದೇ ಉಲ್ಟಾ ಕೆಲಸ ಮಾಡುವವರು ಗೂಬೆ, ಬಾವಲಿಗಳಿಗೆ ಹೋಲಿಸಲ್ಪಡುತ್ತಾರೆ. ಘಟಾನುಘಟಿಗಳಿಗೆ ʻತಲೆಕೆಳಗುʼ ಮಾಡಿದರೂ ಆಗದ ಕೆಲಸವನ್ನು, ತಾನು ಒಪ್ಪಿಕೊಳ್ಳುವುದೇ ಎಂದ ಆತ ʻಹಿಂದೆಮುಂದೆʼ ಯೋಚಿಸಿದ- ಎಂಬಲ್ಲಿ ತಲೆಕೆಳಗು ಎಂಬುದು ಒದ್ದಾಡು, ಅಸ್ತವ್ಯಸ್ತವಾಗು ಎನ್ನುವಂತೆ ಬಳಕೆಯಾದರೆ, ಹಿಂದೆಮುಂದೆ ಎಂಬುದು ಅನುಮಾನ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಹಾಗೆಯೇ ಅಪರೂಪದವರು ಮನೆಗೆ ಬಂದರೆ, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದನೇನೋ ಎಂದು ಛೇಡಿಸುತ್ತೇವೆ. ʻಎಡಗೈಯಲ್ಲಿ ಮಾಡುʼ ಎಂಬುದು ಅತಿ ಸುಲಭ ಎನ್ನುವಲ್ಲಿ ಬಳಕೆಯಾದರೆ, ʻಎಡಗಾಲಲ್ಲಿ ಒದಿʼ ಎನ್ನುವುದು ಕ್ಷುಲ್ಲಕ ಎನ್ನುವಂತೆ ಬಳಕೆಯಾಗುತ್ತದೆ. ʻಅದಲು ಬದಲು ಕಂಚಿ ಕದಲುʼ ಎನ್ನುತ್ತಾ ಕಳ್ಳನ ಕಣ್ಣು ಮುಚ್ಚಿ, ಎದುಗಿರುವವರನ್ನು ಅದಲು ಬದಲು ಮಾಡಿ, ʻಅವರ್ಬಿಟ್ ಇವರ್ಯಾರು?ʼ ಎಂದು ಕೇಳುವ ಮಕ್ಕಳಾಟವೂ ನಮಗೆ ಗೊತ್ತಿಲ್ಲದ್ದಲ್ಲ.

ಕವಿ ಶ್ರೀನಿವಾಸ ಉಡುಪ ಅವರ ʻಹಿಂದ್ ಮುಂದ್ ಊರಲ್ಲಿʼ ಎಂಬ ಮಕ್ಕಳ ಪದ್ಯವೂ ಈ ಸಂದರ್ಭದಲ್ಲಿ ನೆನಪಾಗುತ್ತದೆ. “ಬೆಟ್ಟದ ಮೇಲಕೆ ನದಿಗಳು ಹರಿದು/ ಹಣತೆಯ ನೀರಲಿ ದೀಪ ಉರಿದು/ ಹಗಲು ಕತ್ತಲೆ, ರಾತ್ರಿ ಬೆಳಕು/ ಹಿಂದ್ ಮುಂದ್ ಊರಲ್ಲಿ- ನಮ್ಮ ಹಿಂದ್ ಮುಂದ್ ಊರಲ್ಲಿ// ಮುದುಕರಿಗೆಲ್ಲಾ ರಾತ್ರೀ ಸ್ಕೂಲು/ ಮಕ್ಕಳೆ ಮೇಷ್ಟ್ರು, ಕೈಲಿ ಕೋಲು/ ಸೀನುವ ಕೆಮ್ಮುವ ಗೊರಕೆಯ ಪಾಠ/ ಹಿಂದ್ ಮುಂದ್ ಊರಲ್ಲಿ// ಮೋರೆ ತಿರುಗಿದೆ ಬೆನ್ನಿನ ಕಡೆಗೆ/ ಬಾಯೇ ಮೇಲೆ, ಮೂಗು ಕೆಳಗೆ/ ಕಾಲಲ್ಲೂಟ, ಕೈಯಲಿ ನಡಿಗೆ/ ಹಿಂದ್ ಮುಂದ್ ಊರಲ್ಲಿ//” ಎನ್ನುತ್ತಾ ಸಾಗುವ ಈ ಪದ್ಯ ಒಂದಿಷ್ಟು ಮಕ್ಕಳಾಟ ಎಂಬಂಥ ಇನ್ನೊಂದಿಷ್ಟು ರಮ್ಯ ಎಂಬಂಥ ಕಲ್ಪನೆಗಳನ್ನು ಕಟ್ಟಿಕೊಡುತ್ತದೆ. ಸದಾ ನೇರವಾಗಿಯೇ ಇರಬೇಕೆಂಬ ನಿರೀಕ್ಷೆಗಳ ಭಾರದಲ್ಲಿ ಕುಸಿಯುವ ನಮ್ಮ ಬದುಕಿನಲ್ಲಿ, ಹೀಗೆ ಹಿಂದುಮುಂದಾಗುವ ಅಥವಾ ತಲೆಕೆಳಗಾಗುವ ರಮ್ಯ ಕಲ್ಪನೆಗಳು, ಚೇಷ್ಟೆ-ಹುಡುಗಾಟಿಕೆಗಳು ಒಂದಿಷ್ಟು ಜೀವಕಳೆ ತಂದರೆ ಒಳ್ಳೆಯದೇ ಅಲ್ಲವೇ?

ಇದನ್ನೂ ಓದಿ: ದಶಮುಖ ಅಂಕಣ | ಮರೆಯಲಿ ಹ್ಯಾಂಗ- ಅಂದಿನ ಆ ಸೊಬಗ?

Exit mobile version