ಈ ಅಂಕಣವನ್ನು ಇಲ್ಲಿ ಕೇಳಿ:
ಇತ್ತೀಚೆಗೆ ಬಾಲ್ಯದ ಗೆಳತಿಯೊಬ್ಬಳು ಸಿಕ್ಕಿದ್ದಳು ಎಷ್ಟೋ ವರ್ಷಗಳ ನಂತರ. ಅಂದು ರಾತ್ರಿ-ಬೆಳಗಿನವರೆಗೆ ದವಡೆ ಕರಗುವಂತೆ ಮಾತಾಡಿದ್ದೆವು, ಎಂಥಾ ಬಯಲಾಟದವರೂ ನಾಚುವಂತೆ. ಸೆಕೆಯ ತಾಪಕ್ಕೋ ಅಥವಾ ಮಾತಿನ ಪ್ರಕೋಪಕ್ಕೋ ಗೊತ್ತಿಲ್ಲ, ಅಂತೂ ರಾತ್ರಿ ರಂಗೇರಿಸಿದ್ದ ಸುದ್ದಿಯ ನಡುವೆ ಫ್ಯಾನಡಿ ಕುಳಿತೂ ಕೈಯಲ್ಲಿ ಗಾಳಿ ಬೀಸಿಕೊಳ್ಳುವಂತಾಗಿತ್ತು. ಬೆವರಿನಲ್ಲಿ ತೋಯುತ್ತಲೇ ಚಿಕ್ಕಂದಿನಲ್ಲಿ ಮಳೆಯಲ್ಲಿ ನೆನೆಯುತ್ತಿದ್ದ ನೆನಪುಗಳು ಇಬ್ಬರಿಗೂ ಒತ್ತರಿಸಿ ಬರುತ್ತಿದ್ದವು. ಮಳೆಗಾಲದ ನೆಲದ ಮೇಲೆ ಕಾಲಿಟ್ಟರೆ ಬೆರಳುಗಳ ನಡುವೆ ಒಸರುವ ನೀರಿನ ಹಾಗೆ ಕೊನೆಯಿಲ್ಲದಷ್ಟು ನೆನಪುಗಳನ್ನು ಉಕ್ಕಿಸುತ್ತಿದ್ದವು. ಈಗಿನ ಜೀವನಕ್ಕೆ ತಕ್ಕಂತೆ ಮನಸ್ಸೆಷ್ಟೇ ಗಟ್ಟಿನೆಲದಂತೆ ಕಂಡರೂ, ‘ಧೋ’ ಎಂಬ ಮಳೆಯನ್ನು ನೆನೆಯುತ್ತಿದ್ದಂತೆ ಮನದೊಳಗೆಲ್ಲ ಜಲಲ ಜಲಲ ಜಲಧಾರೆ! ಮಳೆಯ ಪಟ್ಲ ಬಿಚ್ಚಿದರೆ ಮುಗಿಯದಷ್ಟು ಕಥೆಗಳು; ಬಿಡಿಸದೆ ಸುಮ್ಮನಿದ್ದರಾಯ್ತು ಎಂದು ಕೂತರೆ, ಕಾಲಡಿಯ ನೆಲವೇ ಜಿನುಗುವಷ್ಟು ಮಳೆಯ ನೆನಪುಗಳ ಮಹಾಪೂರ ಅಂದಿಗೆ ಮುಗಿಯದೆ ಇಂದಿಗೂ ಹರಿಯುತ್ತಿದೆ. ಸೈಕ್ಲೋನ್‌ಗಳ ನಡುವೆ ನಲುಗಿ, ಬಾರದೆ ಕುಳಿತಿರುವ ಮುಂಗಾರು ಮಳೆಯ ಮೇಲಿನ ಹುಸಿಮುನಿಸನ್ನು, ಹೀಗೆ ಬರೆದು ನಿವಾರಿಸಿಕೊಳ್ಳುವುದೇ ಸೂಕ್ತ ಎಂದೆನಿಸಿ ಧೇನಿಸುತ್ತಾ ಕುಳಿತಿದ್ದಾಗಿದೆ.
ಮಲೆನಾಡಿನ ಮಳೆಯೆಂದರೆ ಒಮ್ಮೆ ಸಣ್ಣ ಮಳೆ, ನಂತರ ದೊಡ್ಡದು, ಆಮೇಲೆ ಇನ್ನೂ ದೊಡ್ಡದು! ಹೊರತಾಗಿ ಹನಿ ಕಡಿಯುವ ಮಾತೇ ಇಲ್ಲ. ಬೆಳಗ್ಗೆ ಎಂಟು ಗಂಟೆಯಾದರೂ ಹೊರಗೆಲ್ಲ ಇನ್ನೂ ಕತ್ತಲೆ, ಇದೇ ಹೊತ್ತಿಗೆ ಶುರುವಾಗುವ ಶಾಲೆ. ಶಾಲೆಗೆ ಹೋಗಲು ಪುಸ್ತಕ, ಸಮವಸ್ತ್ರ, ಪಾಟಿಚೀಲಗಳಿಗಿಂತಲೂ ಮಳೆಗಾಲದ ಚಪ್ಪಲಿ, ಕೊಡೆ, ರೇನ್ಕೋಟು ಖರೀದಿಯ ಭರಾಟೆಯೇ ಹೆಚ್ಚು. ಮೊದಲು ಹೇಳಿದ ಆ ಮೂರು ವಸ್ತುಗಳು ನೆನೆಯಬಾರದೆಂದರೆ, ಕಡೆಗಿನ ಮೂರು ವಸ್ತುಗಳು ಸರಿಯಾಗಿರಬೇಕು. ಹಸುಗೂಸಿನ ಬಳಿಯಲ್ಲೊಂದು ನಿರಂತರವಾದ ಹಾಲಿನ ಪರಿಮಳವಿದ್ದಂತೆ, ನಮ್ಮಗಳ ಮೈಯಿಂದಲೂ ಮೂರ್ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ಮುಗ್ಗುಲು ವಾಸನೆ ಬರುತ್ತಿತ್ತು. ಕಾರಣ, ಮಳೆಗಾಲದ ದಿನಗಳಲ್ಲಿ ಮೈ-ಮನ-ವಸ್ತ್ರಗಳು ಗರಿಗರಿಯಾಗಿ ಒಣಗುವ ನಿರೀಕ್ಷೆ ಮಾಡುವುದೇ ತಪ್ಪು. ಮನೆಯಲ್ಲಿ ಎಲ್ಲೆಲ್ಲಾ ಸೂರು ಉಂಟೋ ಅಲ್ಲೆಲ್ಲಾ ದಾರ ಕಟ್ಟಿ ಬಟ್ಟೆ ಹರವಿ, ನಾಲ್ಕಾರು ದಿನ ಒಣಗಿಸಿದರೂ ಒಂಥರಾ ಹಸಿ ವಾಸನೆ ಹೋಗುತ್ತಿರಲಿಲ್ಲ. ಇನ್ನು ಇಸ್ತ್ರಿ-ಗಿಸ್ತ್ರಿಯ ಆಸೆಯೇ ವ್ಯರ್ಥ, ಕಾರಣ ಕರೆಂಟು ಸದಾ ಖೋತ. ಒಣಗಿಸುವ ಯಾವುದೇ ಕೆಲಸಕ್ಕೂ ಒಲೆ ಬುಡವೇ ಗತಿ.
ಮಳೆಗಾಲದ ಸ್ವಾಗತದ ತಯಾರಿಯಲ್ಲೇ ಎಷ್ಟೊಂದು ಜೀವಂತಿಕೆ ಇರುತ್ತಿತ್ತಲ್ಲ. ಮನೆಮಂದಿಯೆಲ್ಲಾ ಭಾಗವಹಿಸುವ ಸಾಂಘಿಕ ಕ್ರಿಯೆಯದು. ಮಾರ್ಚ್ ತಿಂಗಳ ಬಿಸಿಲಲ್ಲೇ ಇಡೀ ವರ್ಷಕ್ಕಾಗುವಷ್ಟು ದಿನಸಿ ತಂದು, ಸ್ವಚ್ಛ ಮಾಡಿ ಡಬ್ಬಿ ತುಂಬಬೇಕು. ವರ್ಷಕ್ಕಾಗುವಷ್ಟು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಉಪ್ಪೂರಿದ ಮಾವಿನ ಕಾಯಿ, ಹಲಸಿನ ಸೊಳೆಗಳು ಬೇಸಿಗೆಯಲ್ಲೇ ಸಿದ್ಧವಾಗಬೇಕು. ದಿನಸಿಗಳನ್ನು ಇಡಲೆಂದೇ ಮೊದಲೆಲ್ಲ ಹೊಗೆಅಟ್ಟವನ್ನು ನಿರ್ಮಿಸುತ್ತಿದ್ದರು. ಒಲೆಯ ಸೀದಾ ಮೇಲೆ ದೊಡ್ಡದಾದ ಅಟ್ಟವನ್ನು ಕಟ್ಟಿ, ಇಡೀ ಹೊತ್ತು ಈ ಜಾಗಕ್ಕೆ ಹೊಗೆ ಹಾಯುವಂತೆ ಮಾಡುತ್ತಿದ್ದರು. ತೀರಾ ಥಂಡಿ ಇರುವ ಪ್ರದೇಶಗಳಲ್ಲಿ ದಿನಸಿಗಳನ್ನು ಕಾಪಾಡಲು ಬಳಸುವ ವಿಧಾನವದು. ಈಗವೆಲ್ಲ ಬದಲಾಗಿದೆ, ಬಿಡಿ.
ಮಳೆಗಾಲ ಬರಲಿಕ್ಕಿದೆ ಎಂಬುದು ಮಕ್ಕಳಾಗಿದ್ದಾಗ ನಮಗೆಲ್ಲಾ ತಿಳಿಯುತ್ತಿದ್ದುದೇ ಅಜ್ಜ, ಅಜ್ಜಿಯ ಚಟುವಟಿಕೆಗಳಿಂದ. ಗದ್ದೆಯಿಂದ ತಂದ ಹುಲ್ಲಿನ ಹೊರೆ ಇಳಿಸುವ ಹೊತ್ತಿಗೆ, ‘ಅಲ್ಲಿದ್ಯನೇ… ಈ ಸಾರಿ ಮಳೆ ಲಗೂ ಕುಂಡ್ರತು’ ಎಂದು ಅಜ್ಜ ಹವಾಮಾನ ಮುನ್ಸೂಚನೆ ನೀಡುತ್ತಿದ್ದಂತೆಯೇ ಅಂಗಳದಲ್ಲಿ ತರಕಾರಿ ಹಿತ್ತಲು ಹಾಕುವ ಚಟುವಟಿಕೆಗಳಿಗೆ ರಂಗೇರುತ್ತಿತ್ತು. ಚಳಿಗಾಲಕ್ಕೆ ಮುನ್ನ ಪ್ರಾಣಿಗಳು ತಮ್ಮ ಬಿಲ/ಗೂಡುಗಳಲ್ಲಿ ಆಹಾರ ಶೇಖರಿಸುವಂತೆ, ಮಳೆಗಾಲಕ್ಕೆ ಮುನ್ನ ನಮ್ಮೂರಿನ ಅಜ್ಜಿ, ಅಮ್ಮ, ಕವ್ವಂದಿರಿಂದ ತಂತಮ್ಮ ಹಿತ್ತಲು ಬೀಜಗಳ ದಾಸ್ತಾನಿನ ತಪಾಸಣೆ, ವಿನಿಮಯ ಪ್ರಾರಂಭವಾಗುತ್ತಿತ್ತು. ‘ಬೆಂಡೆ ಬೀಜ ಇದ್ದನೆ? ಯಮ್ಮನೆಲ್ಲಿ ಪೂರ ಯರ ತಿಂದಿಗಿದು’ ಎನ್ನುತ್ತಾ ಮನೆಗೆ ಬರುವ ಅತ್ತಿಗೆ, ಅಕ್ಕಯ್ಯಂದಿರು ಎಷ್ಟೊ ಮಂದಿ. ಬೀಜ ಸಂರಕ್ಷಣೆ ಎಂತಿದ್ದರೂ ಮನೆಯ ಮಹಿಳೆಯರದ್ದೇ. ಮನೆಯ ಸುತ್ತಮುತ್ತಲ ಜಾಗದಲ್ಲೇ ಬೇಕಾದಂತೆ ಕಣ, ಏರಿ, ಚಪ್ಪರಗಳನ್ನು ಮಾಡಿ ಮಳೆಗಾಲದ ತರಕಾರಿಯ ಖರ್ಚಿಗೆ ವ್ಯವಸ್ಥೆಯಾಗುತ್ತಿತ್ತು.
ಮಕ್ಕಳೇನೂ ಏನು ಖಾಲಿ ಕೂರುತ್ತಿರಲಿಲ್ಲ; ಮಳೆಗಾಲಕ್ಕೆ ಇರಲಿ ಎಂದು ಒಂದಿಷ್ಟು ಗೇರುಬೀಜ, ಹಲಸಿನ ಬೀಜಗಳನ್ನು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಹಲವು ತಿಂಗಳಿಗಳಿಂದ ಮನೆಗೆ ಬಂದಿದ್ದ ಮದುವೆಯ ಕರೆಯೋಲೆಗಳನ್ನೆಲ್ಲಾ ತಪ್ಪದೆ ತೆಗೆದಿಡುತ್ತಿದ್ದೆವು. ಮದುವೆಗೆ ಹೋಗುವುದಕ್ಕಲ್ಲ, ದೋಣಿ ಮಾಡುವುದಕ್ಕೆ! ಮಾಮೂಲಿ ಕಾಗದಗಳಲ್ಲಿ ಮಾಡಿದ ದೋಣಿಗಳಿಗಿಂತಲೂ ಈ ಕಾಗದದ ದೋಣಿಗಳು ಗಟ್ಟಿ ಬರುತ್ತಿದ್ದವು. ತೋಟದ ಕಂಟ-ಕಾಲುವೆಗಳು ಹರಿಯಲು ಆರಂಭಿಸಿದ ಮೇಲೆ ತೋಟದ ಒಂದು ತುದಿಯಿಂದ ದೋಣಿ ಬಿಟ್ಟರೆ, ಯಾರ್ಯಾರ ದೋಣಿ ಇನ್ನೊಂದು ತುದಿಯವರೆಗೆ ಹೋಗುತ್ತದೆ ಎನ್ನುವ ಸ್ಪರ್ಧೆ. ಇದೆಲ್ಲಾ ಸ್ವಲ್ಪ ದೊಡ್ಡ ಮಕ್ಕಳಿಗಾಯಿತು. ಬಾಲವಾಡಿಯ ಚಿಣ್ಣರನ್ನು ಎಲ್ಲೆಂದರಲ್ಲಿ ಅಲೆಯಲು ಬಿಡುತ್ತಿರಲಿಲ್ಲ. ಹಾಗಂತ ದೋಣಿ ಬಿಡುವುದನ್ನು ಬಿಡುವುದುಂಟೇ? ದೊಡ್ಡವರು ದೋಣಿ ಮಾಡಿಕೊಟ್ಟರೆ ಅಂಗಳದಲ್ಲೇ ಬಿಡುತ್ತಿದ್ದರು. ಅದೂ ಇಲ್ಲದಿದ್ದರೆ ಚಿಂತಿಲ್ಲ, ಅಜ್ಜನ ಪಾಣಿಪಂಚೆಯನ್ನು ಕೈಯಲ್ಲೇ ಹರಿದು ಮನೆಯಂಗಳದಂಚಿನ ಅವಳೆಯಲ್ಲಿ ದೋಣಿ ಮಾಡಿ ತೇ…ಲಿಸಿ ಬಿಟ್ಟಿದ್ದು ಎಷ್ಟೋ ಏನೋ!
ಮಳೆಯೆಂದರೆ ಎಲ್ಲವೂ ಒಂದೇ ರೀತಿಯದ್ದಲ್ಲ. ಒಂದೊಂದು ಮಳೆ ನಕ್ಷತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಉಂಟು. ಪ್ರಾದೇಶಿಕವಾಗಿ ಭಿನ್ನವಾದ ಕಥೆ, ನಂಬಿಕೆ, ಆಚರಣೆಗಳೂ ಚಾಲ್ತಿಯಲ್ಲಿವೆ. ಆದರೆ ಮಳೆಗೆ ಸಂಬಂಧಿಸಿದಂತೆ ಜನಪದರಲ್ಲಿ ಇರುವುದು ಬರೀ ನಂಬಿಕೆಗಳಲ್ಲ, ಜೀವನಾನುಭವಗಳು. ಉದಾಹರಣೆಗೆ, ಭರಣಿ ಮಳೆ ಬಂದ್ರೆ ಧರಣಿಯೆಲ್ಲಾ ಬೆಳೆ; ಮೃಗಶಿರ ಮಳೆಯಲ್ಲಿ ಮುರಿದು ನೆಟ್ಟರೂ ಬದುಕೀತು; ಪುಷ್ಯ-ಪುನರ್ವಸು (ಅಣ್ಣ-ತಮ್ಮ) ಮಳೆಯಲ್ಲಿ ಕೆರೆ-ಕಟ್ಟೆ ಪೂರ್ತಿ; ಆರದೆ ಸುರಿಯೋದೆ ಆರಿದ್ರೆ ಮಳೆ, ಚಿತ್ತೆ ಮಳೆಯಲ್ಲಿ ಗಿಡದ ತುಂಬಾ ಚಿತ್ತಾರ (ಕೀಟಬಾಧೆ ಎನ್ನುವುದಕ್ಕೆ), ಮಘೆ ಮಳೆಯಲ್ಲಿ ಮೈನಡುಗೋ ಚಳಿ, ಕಂಡಕಂಡಲ್ಲಿ ಸುರಿಯೋದು ಕನ್ಯಾ ಮಳೆ (ಚೆದುರಿದಂತೆ ಮಳೆ)… ಇಂಥವು. ಪ್ರಾಣಿಗಳ ವರ್ತನೆಯನ್ನು ಆಧರಿಸಿ ಹವಾಮಾನದ ಸೂಚನೆ ನೀಡುವುದು, ಗಿಡ-ಮರಗಳ ಲಕ್ಷಣಗಳನ್ನು ಕಂಡು ಮಳೆ ನಿರ್ಧರಿಸುವುದು- ಇಂಥವನ್ನು ಹಳೆಯ ಜನರು ಈಗಿನ ತಂತ್ರಜ್ಞಾನಗಳಿಗಿಂತ ಕರಾರುವಾಕ್ಕಾಗಿ ಮಾಡುತ್ತಿದ್ದರು.
ಹಿಂದೆಲ್ಲಾ ಮಳೆಗಾಲದಲ್ಲಿ ಮದುವೆ ಎಂದರೆ ತೀರಾ ರಾಡಿಯ ವಿಷಯ. ಹಾಗಿರುವಾಗ ಹನಿ ಕಡಿಯದೆ ಸುರಿಯುವ ಆರ್ದ್ರಾ ಮಳೆಯಲ್ಲೂ ದಿಬ್ಬಣ ತಂದು ಮದುವೆಯಾದ ಭಪ್ಪರೆ ಗಂಡುಗಳಿಗಾಗಿ, ʻಆರಿದ್ರೆಯಲ್ಲಾದವನೆ ಗಂಡʼ ಎಂಬ ನಾಣ್ಣುಡಿ ಇದೆ. ಮುಂಗಾರು ಮಳೆ ಬಾರದಿದ್ದರೆ ಕತ್ತೆ ಮದುವೆ, ಕಪ್ಪೆ ಮದುವೆ ಎಂದು ಸಿಕ್ಕವರಿಗೆಲ್ಲ ಕಲ್ಯಾಣ ಮಾಡಿಸಿ ವರುಣದೇವನನ್ನು ಪ್ರಚೋದಿಸುವುದನ್ನು ಕಂಡಿದ್ದೇವೆ. ಅದೇ ರೀತಿ, ಹಳ್ಳಿಗಳಲ್ಲಿ ಬೇಸಿಗೆಯ ಮದುವೆಗಳಲ್ಲಿ ಮಳೆಯ ಭೀತಿ ಎದುರಾದರೆ ವರುಣನಿಗೆ ಹರಕೆಯ ಲಂಚ ಕೊಟ್ಟು ಮಳೆ ತಡೆಯುವುದೂ ಇದೆಯಲ್ಲವೇ. ಅಂತೂ ಅಕಾಲದಲ್ಲಿ ಮಳೆ, ಮಳೆಗಾಲದಲ್ಲಿ ಬರ- ಎರಡೂ ಕಷ್ಟ.
ಇದನ್ನೂ ಓದಿ: ದಶಮುಖ ಅಂಕಣ: ನೆರಳಲ್ಲಿ ಅರಳಿದ ಚಿತ್ರಗಳು
ಮಲೆನಾಡಿನಲ್ಲಿ ಅಡಿಗಡಿಗೂ ಸಣ್ಣ ತೊರೆ ಹಳ್ಳಗಳು ಸಿಗುತ್ತವೆ. ನೀರಾಟಕ್ಕೆ ಇವು ಪ್ರಶಸ್ತವಾಗಿದ್ದರೂ ಮಳೆಗಾಲದಲ್ಲಿ ಮಾತ್ರ ಪೇಚಾಟ ತರುತ್ತವೆ. ಮನೆಯಿಂದ ಹೊರಗೆ ಹೊರಡುವಾಗ ಇಲ್ಲದ ಮಳೆ, ಹಿಂದಿರುಗಿ ಬರುವಾಗ ದಬಾಯಿಸಿ ಜಡಿದು, ಮನೆಗೆ ಸಮೀಪದಲ್ಲಿ ಮೊರೆಯುವ ಹಳ್ಳವನ್ನು ದಾಟಲಾರದೆ ಆಚೆ ದಡದ ನೆಂಟರ ಮನೆಯಲ್ಲಿ ರಾತ್ರಿ ಕಳೆದವರ ಕಥೆಗಳು ಬೇಕಷ್ಟಿವೆ. ಹಾಗೆಂದೇ ‘ಹಳ್ಳದ ಹೆಣ ಕಾಯುವ’ ನಾಯಿಗುತ್ತಿಯಂಥವರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಹೊರಗೂ ನಮಗೆ ಕಾಣಸಿಗುತ್ತಾರೆ! ಶಾಲೆಗೆ ಹೋದ ಮಕ್ಕಳು ಹಿಂದಿರುಗುವ ಹೊತ್ತಿಗೆ ಶಾಲೆಯ ಬಸ್ಸಿಗೆ ಕಾಯುವ ಪೇಟೆಯ ಅಪ್ಪ-ಅಮ್ಮಂದಿರಂತೆ, ಉಕ್ಕಿ ಹರಿವ ಹಳ್ಳ-ತೊರೆ ದಾಟಿಸಿಕೊಳ್ಳಲು ಮಲೆನಾಡಿನ ಪೋಷಕರು ಕಾಯುವುದು ಮಾಮೂಲು. ಉಕ್ಕೇರಿದ ಹಳ್ಳವನ್ನು ತಮ್ಮಷ್ಟಕ್ಕೆ ತಾವೇ ದಾಟಲು ಹೋಗಿ ನೀರುಪಾಲಾದ ಮಕ್ಕಳ ಕಥೆಗಳೂ ಇವೆ.
ಮಳೆಯ ಕಥೆ ಎನ್ನುತ್ತಿದ್ದಂತೆ ಮಳೆ ತಡವಾಗಿ ತೊಂದರೆಯಾದ ಕಥೆಗಳು ನೆನಪಾಗುತ್ತಿವೆ. ಮಾತ್ರವಲ್ಲ, ದುರ್ಭಿಕ್ಷದಲ್ಲಿ ಅಧಿಕಮಾಸ ಎಂಬಂತೆ ಕೆಲವು ಕವನಗಳೂ ನೆನಪಾಗುತ್ತಿವೆ. ಅವು ಸಹ ಮಳೆಯದ್ದಲ್ಲ, ಮಳೆಬಾರದಿದ್ದಾಗಿನ ಕವನಗಳು. “ಯಾತಕ್ಕೆ ಮಳೆ ಹೋದವೋ ಶಿವಶಿವ/ ಲೋಕ ತಲ್ಲಣಿಸುತಾವೊ” ಎಂಬ ಗೀತೆಯಲ್ಲಿ, “ಪಟ್ಟದಾನೆಯಂಥ ಸ್ತ್ರೀಯರು ಸೊರಗಿ/ ಸೀರೆ ನಿಲ್ಲೋದಿಲ್ಲ ಸೊಂಟಾದೆಲೆ/… ಹಡೆದ ಬಾಣಂತಿಗೆ ಅನ್ನಾವು ಇಲ್ಲದೆಲೆ/ ಏರುತಾವೆ ಮೊಳಕೈಗೆ ಬಳೆ” ಎಂಬಂಥ ವಿವರಣೆಗಳು ʻಮಳೆಗಾಲ ಸುಸೂತ್ರವಾಗಿರಲಿʼ ಎಂದು ಪ್ರಾರ್ಥಿಸುವಂತೆ ಮಾಡುತ್ತವೆ. “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ/ ದಿನದಿನವು ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ” ಎಂಬ ಜಿ. ಎಸ್. ಶಿವರುದ್ರಪ್ಪನವರ ಕವನವೂ ಈ ಪ್ರಾರ್ಥನೆಗೆ ಕೈಜೋಡಿಸುತ್ತದೆ.
ಹೌದು, ಮನೆಮನೆಗೆ ಮನಮನಕ್ಕೆ ತಂಪೆರೆಯಲಿ; ಉತ್ತ ಮಣ್ಣಿನ ಕನಸು ಕುಡಿಯೊಡೆಯಲಿ- ಬರಲಿ, ಮಳೆ ಬರಲಿ!
ಇದನ್ನೂ ಓದಿ: ದಶಮುಖ ಅಂಕಣ: ʻ… ನಿನ್ನ ಕಲೆಗೆ ಯಾವುದು ಭಾರʼ!