Site icon Vistara News

ದಶಮುಖ ಅಂಕಣ: ಮೌನವೆಂಬ ಭಾವಸೇತು

dashamukha column silence

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2024/03/WhatsApp-Audio-2024-03-26-at-3.27.36-PM.mp3

ದಶಮುಖ ಅಂಕಣ: ಗೆಳತಿಯೊಬ್ಬಳು ಸಿಕ್ಕಿದ್ದಳು. ಎಂದಿನ ಲವಲವಿಕೆ ಕಾಣದೆ ಶೋಕವೇ ಮೂರ್ತಿವೆತ್ತಂತೆ ಗೋಚರಿಸುತ್ತಿದ್ದಳು. ಅತ್ತು ಕೆಂಪಾಗಿದ್ದ ಕಣ್ಣುಗಳಲ್ಲಿ ಈಗಲೂ ಪಸೆಯಿತ್ತು. ಸಂಕಟದ ನಗೆಯೊಂದನ್ನು ಬೀರಿದಳು. ‘ಏನಾಯ್ತೆ?’ ಎಂದು ಕೇಳಿದ್ದೆ ತಡ, ಮನಸ್ಸಿಗೆ ಕೋಡಿ ಬಿದ್ದೇಬಿಟ್ಟಿತ್ತು. ವಿಷಯ ಮತ್ತೇನಲ್ಲ, ಅವಳ ಮನೆಯ ನಾಯಿ, ಮರಿ ಹಾಕಿತ್ತು. ಹೊಸದಾಗಿ ಹುಟ್ಟಿದ್ದ ನಾಲ್ಕು ಮರಿಗಳಲ್ಲಿ ಒಂದನ್ನಷ್ಟೇ ಇರಿಸಿಕೊಂಡು ಉಳಿದೆಲ್ಲವನ್ನೂ ಸಾಕುವ ಆಸಕ್ತರಿಗೆ ಕೊಟ್ಟಿದ್ದಳು. ಮೊದಲಿನ ಎರಡು ಮರಿಗಳನ್ನು ಕೊಡುವಾಗ ಅವಿನ್ನೂ ಸಣ್ಣವಾದ್ದರಿಂದ ಹೆಚ್ಚಿನ ಪ್ರತಿರೋಧ ತೋರಿರಲಿಲ್ಲ. ಆದರೆ ಮೂರನೇ ಮರಿಯನ್ನು ಕೊಡುವಾಗ ಉಳಿದವಕ್ಕಿಂತ ಕೊಂಚ ದೊಡ್ಡದಾಗಿದ್ದ ಮರಿ, ಹೊಸಬರೊಂದಿಗೆ ಹೋಗಲೊಲ್ಲೆ ಎಂದು ತನ್ನ ಮೂಕಭಾಷೆಯಲ್ಲಿ ಗೋಳಾಡಿತ್ತಂತೆ. ಬಂದವರು ಎತ್ತಿಕೊಂಡು ಹೋಗುವಾಗ ತನ್ನತ್ತ ನೋಡುತ್ತಾ ಕಣ್ಣಲ್ಲೇ ಬೇಡಿಕೊಂಡಿದ್ದ ಮರಿಯ ಚಿತ್ರವನ್ನು ಮನಸ್ಸಿಗೆ ತಂದುಕೊಂಡು ಅತ್ತೂಅತ್ತು ಹೈರಾಣಾಗಿದ್ದಳು. ಜೊತೆಗೆ ಒಬ್ಬೊಂಟಿಯಾಗಿದ್ದ ಕೊನೆಯ ಮರಿ ಮನೆಯಲ್ಲೇ ಮಂಕಾಗಿ ಕುಳಿತಿದ್ದು ಆಕೆಯನ್ನು ಇನ್ನೂ ಸಂಕಟಕ್ಕೆ ದೂಡಿತ್ತು. ಏನನ್ನೂ ತಿನ್ನದೆ ಮರಿಗಳ ಅಮ್ಮನೂ ಮೌನವಾಗಿ ಕೂತಿದ್ದು ಕಂಡು ಹೀಗೆ ಶೋಕವೇ ಮೂರ್ತಿವೆತ್ತಂತಾಗಿದ್ದಳು. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಎಷ್ಟೇ ಸಮಾಧಾನ ಹೇಳಿದರೂ, ವಿಹ್ವಲತೆ ಅವಳನ್ನು ಬಿಡುತ್ತಲೇ ಇರಲಿಲ್ಲ. ಇವಳ ದುಃಖಕ್ಕಿಂತಲೂ ನನ್ನ ಗಮನವನ್ನು ಹೆಚ್ಚಾಗಿ ಸೆಳೆದಿದ್ದು ಆ ಮೂಕ ಜೀವಿಗಳ ಭಾವ. ಏನನ್ನೂ ಹೇಳದೆಯೇ ತಮ್ಮ ಮನಸ್ಸಿನ ವೇದನೆಯನ್ನು ಇನ್ನೊಬ್ಬರಿಗೆ ತಲುಪಿಸಿದವಲ್ಲ ಅವು, ಹಾಗಾದರೆ ಏನನ್ನು ಹೇಳದಿದ್ದರೂ ಸಂವಹನ ನಡೆಯುತ್ತದೆ ಎಂದಾಯಿತು. ಭಾವಕ್ಕೆ ಭಾಷೆಯೆಂಬುದೇ ಸೇತುವೆಯಲ್ಲವೇ?

ನಿಜಕ್ಕೂ, ಭಾಷೆ ಮಾತ್ರವೇ ಭಾವಸೇತುವೇ? ಭಾಷೆ ಇಲ್ಲದಿದ್ದರೆ ಸಂವಹನ ನಡೆಯುವುದಿಲ್ಲವೇ? ಅಥವಾ ಶಬ್ದಗಳಿಗಿಂತಲೂ ಮೌನವೇ ಸಮರ್ಥವಾದ ಭಾಷೆಯೇ? ಯಾವುದೆಲ್ಲ ಕಾರಣಗಳಿಗೆ ನಾವು ಮೌನವಾಗುತ್ತೇವೆ? ಮಾತಿಗಿಂತಲೂ ಹೆಚ್ಚು ಮೌನವೇ ನಮ್ಮನ್ನು ಕಾಡುವುದೇಕೆ? ಹೇಳದೆ ಮೌನವಾದಾಗ ಭಾವತೀವ್ರತೆ ಹೆಚ್ಚಾಗುತ್ತದೆಯೇ ಅಥವಾ ಇರುವುದಕ್ಕಿಂತ ಹೆಚ್ಚು ಭಾವಗಳನ್ನು ನಾವು ಕಲ್ಪಿಸಿಕೊಳ್ಳುತ್ತೇವೆಯೇ? ಮೌನ ಯಾಕಷ್ಟು ತಾಕುತ್ತದೆ ನಮ್ಮನ್ನು? ಏನೀ ಮೌನದ ಹಕೀಕತ್ತು?

ಮೌನದ ಭಾವಗಳು ನಿಜಕ್ಕೂ ಕುತೂಹಲ ಹುಟ್ಟಿಸುವಂಥವು. ಉದಾಹರಣೆಗೆ ಹೇಳುವುದಾದರೆ, ಮೌನವು ಸಮ್ಮತಿಯ ಲಕ್ಷಣ ಎನ್ನುತ್ತದೆ ಜನಪ್ರಿಯ ಗಾದೆ. ನಿಜಕ್ಕೂ ಸಮ್ಮತಿಸುವಾಗ ಮಾತ್ರವೇ ಮೌನವಾಗಿ ಇರುತ್ತೇವೆಯೇ? ಕೆಲವು ಸಂದರ್ಭಗಳಲ್ಲಿ ಮೌನವು ಅಸಮ್ಮತಿಯನ್ನೂ ಸೂಚಿಸುತ್ತದಲ್ಲ. ಕೋಪ ಬಂದಾಗಲೂ ಮಾತು ಬಿಡುತ್ತೇವೆ. ಮನಸ್ಸಿಗೆ ಹಿತವಾಗದಿದ್ದರೆ, ನಿರಾಕರಣೆಯ ಭಾವದಲ್ಲಿ, ನಿರ್ಲಕ್ಷಿಸುವಾಗ, ಪ್ರತಿರೋಧದ ಭಾವದಲ್ಲಿ, ಅತಿಯಾದ ಶೋಕದಲ್ಲಿ ನಾವು ಆಶ್ರಯಿಸುವುದು ಮೌನವನ್ನೇ. ಕದಪು ಕೆಂಪಾಗಿ ನಾಚಿಕೆಯಲ್ಲಿ ಮಿಂದೇಳುವಾಗ ಮಾತಿಗೇನು ಕೆಲಸ? ನಮ್ಮೊಳಗೆ ಏನನ್ನೋ ಧೇನಿಸುವಾಗ ಮೌನವೇ ಹಿತ ಎನಿಸುತ್ತದೆ. ಭಗವಂತನ ಸಾನಿಧ್ಯಕ್ಕೂ ಸಲ್ಲುವುದು ಮೌನವೇ. ಹಾಗಾದರೆ ಶಾಂತಿ, ಪ್ರೀತಿ, ಭಕ್ತಿ ಮುಂತಾದ ಎಷ್ಟೊಂದು ಭಾವಗಳ ಪ್ರವಾಹಕ್ಕೆ ಮೌನವೇ ಪಾತ್ರವಾಗಬಲ್ಲದು. ಮೌನವು ಜಗತ್ತಿನ ಸುಂದರವಾದ ಭಾಷೆ ಎಂಬುದು ನಿಜವೇ?

ಮೌನಕ್ಕೆ ಕಾರಣಗಳು ಏನು ಬೇಕಿದ್ದರೂ ಆಗಬಹುದು. ಊಟ ಮಾಡುವಾಗ ಮಾತಾಡಬಾರದು ಎನ್ನುವುದಕ್ಕೆ ಆಚಾರ-ವಿಚಾರಗಳು ಕಾರಣವಾದರೆ, ಧ್ಯಾನಕ್ಕೆ ಕೂತಾಗ ಮೌನವಾಗಿರಬೇಕು ಎನ್ನುವುದಕ್ಕೆ ಧಾರ್ಮಿಕ ಕಾರಣಗಳು ಇರಬಹುದು. ಎಷ್ಟೋ ಧರ್ಮಗಳಲ್ಲಿ ಮೌನವೆಂಬುದು ದೇವೋಪಾಸನೆಯ ಮಾರ್ಗವೂ ಹೌದು. ವರ್ಷಕ್ಕೆ ನಿಗದಿತ ದಿನಗಳು ಮೌನವಾಗಿರುವುದು ಧಾರ್ಮಿಕ ಅನುಷ್ಠಾನಗಳ ಕ್ರಮವೂ ಆಗಿದ್ದೀತು. ದೇವನಿಗೆ ಮಾತಿನಷ್ಟೇ ಮೌನವೂ ಪ್ರಿಯ ಎಂಬುದು ಇದರರ್ಥವೇ? ಅಥವಾ ಹೊರಗಿನ ಜಗತ್ತಿನೊಂದಿಗೆ ಮಾತು ನಿಂತಾಗಲೇ ʻಒಳ-ಹೋಗುವುದಕ್ಕೆʼ ಸಾಧ್ಯ ಎನ್ನುವ ಚಿಂತನೆ ಇಂಥ ಉಪಾಸನೆಗಳ ಹಿಂದಿರಬಹುದೇ? ಎಲ್ಲವೂ ಅವರವರ ಭಾವಕ್ಕೆ ಬಿಟ್ಟಿದ್ದು.

ಮಾತಿನ ಬಗ್ಗೆ ಕೆಲವು ಅಪಸ್ವರದ ಧಾಟಿಗಳನ್ನು ಅಲ್ಲಲ್ಲಿ ಕಾಣಬಹುದು. ಉದಾ, ಮಾತು ಮನೆ ಕೆಡಿಸಿತು ಅಥವಾ ಮಾತು ಆಡಿದರೆ ಹೋಯಿತು ಇಂಥವು. ಅಂದರೆ ಒಮ್ಮೆ ಬಾಯಿಂದ ಹೊರಬಿದ್ದ ಮಾತನ್ನು ಮತ್ತೆ ಹಿಂತೆಗೆದುಕೊಳ್ಳಲು ಆಗದೇ ಇರುವುದರಿಂದ ಆಗುವ ಅನಾಹುತಗಳನ್ನು ಸೂಚಿಸುವಂಥವು ಇವೆಲ್ಲ. ಹಾಗಾಗಿಯೇ ʻನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು…ʼ ಎಂಬೆಲ್ಲ ವಚನಗಳೂ ನಮ್ಮ ಮುಂದಿವೆ. ಮಾತಿಗೆ ಇಷ್ಟೆಲ್ಲ ನೀತಿ-ಸೂತ್ರಗಳು ಇದ್ದರೂ ಅದು ಕೇವಲ ಬೆಳ್ಳಿಯಂತೆ. ಮೌನ ಮಾತ್ರ ಬಂಗಾರ! -ಎನ್ನುವಲ್ಲಿಗೆ ಮಾತಿಗಿಂತ ಹೆಚ್ಚಿನ ಸ್ಥಾನ-ಮಾನ ಮೌನದ್ದು ಎನ್ನೋಣವೇ? ಹಾಗೆಂದೇ ʻಮೌನೇನ ಕಲಹಂ ನಾಸ್ತಿʼ ಎನ್ನುತ್ತದೆ ಒಂದು ಸುಭಾಷಿತ. ಆದರೆ ʻಮಾತು ಬಲ್ಲವನಿಗೆ ಜಗಳವಿಲ್ಲʼ ಎಂಬ ಗಾದೆಯೂ ಪ್ರಚಲಿತವಿದೆಯಲ್ಲ. ʻವಾದವಿರುವ ಮಾತಿಗಿಂತ ಸ್ವಾದವಿರುವ ಮೌನವೇ ಲೇಸುʼ ಎನ್ನುತ್ತದೊಂದು ನಾಣ್ಣುಡಿ. ಅಂತೂ ಮಾತಾಡಿ ಅಥವಾ ಬಿಡಿ- ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿರುವಂತೆ, ಅದರದ್ದೇ ಆದ ಹದವೂ ಇದೆ ಎನ್ನೋಣವೇ?

ಪ್ರಕೃತಿಯಲ್ಲೂ ಮೌನವಿದೆಯೇ? ನಿರ್ಜನವಾದ ಯಾವುದೇ ಪ್ರದೇಶಕ್ಕೆ ಹೋದರೂ ಮೌನ ಸಿಗಬಹುದೇ? ಬೆಟ್ಟದ ತುದಿಗೆ, ನದಿ ತಟಕ್ಕೆ, ಸಮುದ್ರದ ದಂಡೆಗೆ, ಮರಳುಗಾಡಿಗೆ, ಗೊಂಡಾರಣ್ಯಕ್ಕೆ- ಇಂಥ ಯಾವುದೇ ಸ್ಥಳಗಳಿಗೆ ಹೋದರೂ ಮೌನ ದೊರೆಯಬಹುದೇ? ಇಲ್ಲೆಲ್ಲ ನೀರಿನ ಮೊರೆತ, ಗಾಳಿಯ ಹೊಡೆತ, ಹಕ್ಕಿಗಳ ಕೂಜನವೆಲ್ಲ ಕೇಳುತ್ತದಲ್ಲ… ಆದರೂ ಪ್ರಕೃತಿಯಲ್ಲಿ ಮೌನವಿದೆ ಎಂದು ನಮಗೇಕನ್ನಿಸುತ್ತದೆ? ಈ ಸದ್ದುಗಳನ್ನೆಲ್ಲ ಸೇರಿಸಿಯೇ ನಾವು ನಿಸರ್ಗವನ್ನು ಭಾವಿಸುವುದೇ? ಅದಿಲ್ಲದ ನೀರವತೆ ಉಲ್ಲಾಸದ ಬದಲು ಬೇಸರ ತಂದೀತು ಎಂದೇ? ಕೇರಳದ ಮೌನ ಕಣಿವೆಯ ಬಗ್ಗೆ ನಾವೆಲ್ಲ ಕೇಳಿದವರೇ. ವಿಸ್ತಾರವಾದ ಆ ನಿತ್ಯ ಹರಿದ್ವರ್ಣ ಕಣಿವೆಗಳಲ್ಲಿ ನೆಲೆಸಿದ್ದ ಅಮೂಲ್ಯ ಮೌನವನ್ನು ಸ್ವರ್ಗ ಸದೃಶ್ಯ ಎಂದೇ ಬಣ್ಣಿಸಲಾಗುತ್ತಿತ್ತಲ್ಲ. ಈ ವೈವಿಧ್ಯಮಯ ಜೀವಜಗತ್ತಿನ ಖಜಾನೆಯನ್ನು ಅಣೆಕಟ್ಟೆಯಡಿ ಮುಳುಗಿಸುವ ಅಧಿಕಾರದ ಹುನ್ನಾರಿಗೆ ಪ್ರತಿಯಾಗಿ ಪ್ರಬಲವಾದ ಜನಾಂದೋಲನ ರೂಪುಗೊಂಡು, ಅದನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಕಾಪಾಡಿಕೊಂಡಿದ್ದು ಈಗ ಇತಿಹಾಸ.

ಪ್ರಕೃತಿಯಲ್ಲಿರುವ ಮೌನದ ಬಗ್ಗೆ ಬಹಳಷ್ಟು ಕವಿಗಳು ನಾನಾ ರೂಪದಲ್ಲಿ ವರ್ಣಿಸಿದ್ದಿದೆ. “ಮೌನ ತಬ್ಬಿತು ನೆಲವ/ ಜುಮ್ಮನೆ ಪುಳಕಗೊಂಡಿತು ಧಾರಿಣಿ/ ನೋಡಿ ನಾಚಿತು ಬಾನು/ ಸೇರಿತು ಕೆಂಪು ಸಂಜೆಯ ಕದಪಲಿ/ ಹಕ್ಕಿಗೊರಲಿನ ಸುರತಗಾನಕೆ/ ಬಿಗಿಯು ನಸುವೆ ಸಡಿಲಿತು/ ಬೆಚ್ಚಬೆಚ್ಚನೆಯುಸಿರಿನಂದದಿ/ ಗಾಳಿ ಮೆಲ್ಲನೆ ತೆವಳಿತು” ಎನ್ನುವ ಗೋಪಾಲಕೃಷ್ಣ ಅಡಿಗರ ಕವನದಲ್ಲಿ ಪ್ರಕೃತಿಯೊಂದಿಗಿನ ಮೌನದ ಅನುಸಂಧಾನ ಹೃದ್ಯವಾಗಿದೆ. ಮೌನವು ಇಷ್ಟೇ ತೀವ್ರವಾಗಿ ಅಭಿವ್ಯಕ್ತಿಗೊಂಡಿರುವುದು ಪು.ತಿ. ನರಸಿಂಹಾಚಾರ್‌ ಅವರ ʻಯದುಗಿರಿಯ ಮೌನ ವಿಕಾಸʼ ಕವನದಲ್ಲಿ. ಯದುಗಿರಿಯ ಮೂಡಣದ ಕಣಿವೆಯಲ್ಲಿ ಸೂರ್ಯೋದಯಕ್ಕೆ ಮೆಲ್ಲಗೆ ಎಚ್ಚರಗೊಳ್ಳುವ ಮೌನ ಒಂದೆಡೆ; ಪಡುವಣದ ಕಣಿವೆಯಲ್ಲಿ ಎಲ್ಲ ಸದ್ದುಗಳ ನಡುವೆಯೆ ನಿದ್ರಿಸುವ ಘನ ಮೌನ- ಈ ಎರಡೂ ಮೌನಗಳ ನಡುವೆ ಮುಂಜಾನೆಯ ಹೊತ್ತಿನ ದೇಗುಲದ ಸೊಬಗು- ಇದು ಕವಿಯನ್ನು ತೀವ್ರವಾಗಿ ಕಾಡಿದೆ. “ತಮ ಹುದುಗುತಿದೆ, ಬೆಳಕೊಗೆಯುತಿದೆ/ ಬೆಳ್ಳಿಯು ಮಂಜೊಳು ಕರಗುತಿದೆ” ಎಂಬಂತೆ ಅವರಿಗೆ ಕಾಣುತ್ತಿದೆ. “ಸಹಸ್ರಕಂಠದಿ ಮೇಳವಿಸಿದೆ ನುತಿ/ ದೇಗುಲವಾಗಿದೆ ಘೋಷವತಿ” ಎನ್ನುವ ಸಾಲುಗಳಲ್ಲೇ ಹುಸಿ ಬೆಳಗು, ನಸು ಬೆಳಗು, ಮುಂಬೆಳಗುಗಳೆಲ್ಲ ಕಳೆದು ಮೌನ ವಿಕಾಸವಾಗುವ ಅದ್ಭುತ ಲಯವೊಂದು ಸೃಷ್ಟಿಯಾಗುತ್ತದೆ. ಲೌಕಿಕ ಮೌನದ ವಿಕಾಸದಲ್ಲಿ ಅಂತರಂಗದ, ಅಧ್ಯಾತ್ಮದ ವಿಕಾಸದ ಹಾದಿಯನ್ನೂ ಕವಿ ತೆರೆದಿಡುವಂತಿದೆ.

ಇದನ್ನೂ ಓದಿ: ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

ಮನುಷ್ಯ ಭಾವದ ಮೌನವೂ ಕವಿಗಳ ಕಲ್ಪನೆಗೆ ದಕ್ಕಿದ್ದಿದೆ. ಕೆ.ಎಸ್.‌ ನರಸಿಂಹಸ್ವಾಮಿಗಳ ʻಮೊದಲ ದಿನ ಮೌನʼ ಕವಿತೆಯನ್ನು ಮರೆಯುವುದು ಹೇಗೆ? ಆಗಿನ್ನೂ ಮದುವೆಯಾಗಿ ಗಂಡನ ಮನೆಯ ಹೊಸಿಲು ತುಳಿದ ಹೊಸ ವಧುವಿನ ಭಾವಭಿತ್ತಿಯಲ್ಲಿ ಆಗುವ ಪಲ್ಲಟಗಳನ್ನು ಈ ಕವನ ಎಳೆಎಳೆಯಾಗಿ ಕಟ್ಟಿಕೊಡುತ್ತದೆ. “ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ/ ಜೀವದಲಿ ಜಾತ್ರೆ ಮುಗಿದಂತೆ/… ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ/ ಚಿಂತೆ ಬಿಡಿ ಹೂವ ಮುಡಿದಂತೆ” ಎನ್ನುವ ಸಾಲುಗಳು, ಆ ಎಳೆಯ ಜೀವದಲ್ಲಿ ಮೂಡಿದ ಭಾವಗಳ ಜಾತ್ರೆಯನ್ನು ತಂತಿ ಮೀಟುವಂತೆ ಚಿತ್ರಿಸುತ್ತವೆ. “ಮೂಕನಾಗಬೇಕು, ಜಗದೊಳು ಜ್ವಾಕ್ಯಾಗಿರಬೇಕು” ಎನ್ನುವ ಕಡಕೋಳ ಮಡಿವಾಳೇಶ್ವರರ ತತ್ವಪದವು, ಮಾತು, ಮೌನ, ನೀತಿ, ತತ್ವ, ಆಸೆಗಳ ಬಗ್ಗೆ ತೀರಾ ಸರಳವಾಗಿ ತಿಳಿಸುತ್ತವೆ.

ಅಲ್ಲ, ಮೌನದ ಬಗ್ಗೆ ಹೇಳುವುದಕ್ಕೆ ಇಷ್ಟೊಂದು ಮಾತಾಡಬೇಕೆ? ಹಾಗೇನಿಲ್ಲ! ವಾಚ್ಯವಾಗಿ ಏನೂ ಹೇಳದೆಯೆ ಕೇವಲ ನಿಟ್ಟುಸಿರು, ಕಣ್ಣೋಟ, ಕಿರುನಗೆ, ಕೊಂಕು ತುಟಿಗಳೆಲ್ಲ ಎಷ್ಟೊಂದು ಅರ್ಥಗಳನ್ನು ನಮಗೆ ದಾಟಿಸುತ್ತವೆ. ಹಾಗಾದರೆ ಮೌನವೆಂದರೆ ಸುಮ್ಮನೆ ಮಾತಾಡದಿರುವುದಲ್ಲ; ಬೇಸರ ತರುವಂಥ ನಿಶ್ಶಬ್ದವಲ್ಲ; ಹೆದರಿಸುವ ನೀರವತೆಯೂ ಅಲ್ಲ. ಮೌನವೆಂದರೆ ಹೇಳದೆಯೇ ತಿಳಿಸುವುದು; ಆಡದೆಯೇ ನುಡಿಸುವುದು; ಮುಟ್ಟದೆಯೇ ತಟ್ಟುವುದು. ಹೌದೇಹೌದು, ಮೌನವೆಂಬುದು ಜಗತ್ತಿನ ಅತಿ ಸುಂದರ ಭಾಷೆ.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Exit mobile version