ಈ ಅಂಕಣವನ್ನು ಇಲ್ಲಿ ಆಲಿಸಿ:
ನವೆಂಬರ್ ತಿಂಗಳು ಶುರುವಾಯಿತೆಂದರೆ ಶಾಲೆಗೆ ಹೋಗುವ ಮಕ್ಕಳ ಅಮ್ಮಂದಿರಿಗೆ ಹೆಚ್ಚುವರಿ ಕೆಲಸವೊಂದು ಅಂಟಿಕೊಳ್ಳುತ್ತದೆ. ಬೆಳಗಿನ ಹೊತ್ತು ಮಕ್ಕಳನ್ನು ಎಬ್ಬಿಸುವುದು. ಮಕ್ಕಳಂತಲೇ ಅಲ್ಲ, ಚಳಿಗೆ ಬೆಚ್ಚಗೆ ಹೊದ್ದು ನಿದ್ದೆ ಮಾಡುವ ಯಾರನ್ನಾದರೂ ಎಬ್ಬಿಸುವುದೆಂದರೆ ಯುದ್ಧ ಗೆದ್ದಂತೆ. ಹೇಗೆ ಎಬ್ಬಿಸಿದರೂ ಹೊರಳಿ ಮುಸುಕೆಳೆದು ಮಲಗುತ್ತಾರೆ. ಬೆಳಗಿನ ಅಲರಾಂಗಳ ಅಬ್ಬರಕ್ಕೆ ಅಕ್ಕಪಕ್ಕದವರಿಗೆ ಎಚ್ಚರವಾದರೂ ಏಳಬೇಕಾದವರು ಮಿಸುಕಾಡುವುದಿಲ್ಲ. ಬೆಳಗ್ಗೆ ಏಳುವುದೆಂದರೆ ಅಷ್ಟು ಕಷ್ಟವೇ ಅಥವಾ ನಿದ್ದೆ ಎನ್ನುವುದು ಅಷ್ಟು ಪ್ರಿಯವೇ? ಹಾಗೆ ನೋಡಿದರೆ ಎರಡೂ ನಿಜ. ನಿದ್ದೆಯನ್ನೂ (Sleep) ಬಯಸದೆ ಇರುವವರು ಇದ್ದಾರೆಯೇ ಲೋಕದಲ್ಲಿ?
ನಮಗೆ ನಿದ್ದೆ ಯಾಕೆ ಬೇಕು ಎನ್ನುವುದಕ್ಕೆ ಟನ್‌ಗಟ್ಟಲೆ ಮಾಹಿತಿ ದೊರಕೀತು ಗೂಗಲ್‌ನಲ್ಲಿ. ನಿದ್ದೆ-ಆಹಾರಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬಂಥ ವಿಷಯಗಳೆಲ್ಲ ದೈಹಿಕ ಅಗತ್ಯದ ಮಾತಾಯಿತು. ನಮಗೆ ʻಅಗತ್ಯʼ ಎನ್ನುವ ಕಾರಣಕ್ಕೆ ಮಾತ್ರವೇ ನಿದಿರೆ ಪ್ರಿಯವೇ? ನಿದ್ದೆಯಿಲ್ಲದೆ ಇರಲಾಗದು ಎನ್ನುವುದಷ್ಟಕ್ಕೇ ನಿದ್ದೆ ಮಾಡುವವರೇ ನಾವು? ಅಗತ್ಯಕ್ಕಿಂತ ಹೆಚ್ಚಿನ ಬಾಂಧವ್ಯಗಳುಂಟೇ ನಮಗೆ ನಿದ್ದೆಯೊಂದಿಗೆ? ಹಾಗಿಲ್ಲದಿದ್ದರೆ, ಅಪ್ಪಿಕೊಂಡ ನಿದ್ರಾಂಗನೆಯಿಂದ ಬಿಡಿಸಿಕೊಳ್ಳುವುದಕ್ಕೆ ನಾವೇಕೆ ಮನಸ್ಸು ಮಾಡುವುದಿಲ್ಲ?
ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಿದ್ದೆಯಲ್ಲೇ ಕಳೆಯುವವರು ನಾವು. ಕೆಲವು ಪ್ರಾಣಿಗಳಿಗೆ ಹೋಲಿಸಿದರೆ ಅದೇನು ಹೆಚ್ಚಲ್ಲ ಬಿಡಿ. ಕಂದು ಬಾವಲಿಗಳು ದಿನಕ್ಕೆ 19 ತಾಸು ನಿದ್ದೆ ಮಾಡುತ್ತವಂತೆ. ಅಂದರೆ ಜೀವನದ ಮೂರನೇ ಒಂದು ಭಾಗವೂ ಅವು ಎಚ್ಚರ ಇರುವುದಿಲ್ಲ. ಹುಲಿ-ಸಿಂಹಗಳೂ ದಿನದ ಹೆಚ್ಚಿನ ಭಾಗವನ್ನು ನಿದ್ದೆಯಲ್ಲೇ ಕಳೆಯುತ್ತವೆ. ಬೆಕ್ಕು, ನಾಯಿಗಳ ನಿದ್ರೆಯ ಅವಧಿಯೂ ಕಡಿಮೆಯೇನಲ್ಲ. ಚಳಿಗಾಲದ ಆರಂಭಕ್ಕೆ ಮಲಗಿ, ಮುಗಿಯುವವರೆಗೂ ನಿದ್ದೆ ಮಾಡುವ ಪ್ರಾಣಿಗಳು ಬಹಳಷ್ಟಿವೆ. ಮಣ್ಣಿನಡಿ ಶವಾಸನ ಹಾಕಿ, ವರ್ಷಗಳ ನಂತರ ಎದ್ದು ಕೂರುವ ಕೀಟಗಳೂ ಇವೆ.
ಕೂತಲ್ಲೇ ತೂಕಡಿಸುತ್ತಾ ನಿದ್ದೆ ತೆಗೆಯುವವರಿಗಾಗಿ ಕೋಳಿನಿದ್ದೆ, ಕ್ಯಾಟ್ ನ್ಯಾಪ್ ಎಂಬಂಥ ನುಡಿಗಟ್ಟುಗಳು ಬಳಕೆಯಲ್ಲಿವೆ. ಇನ್ನು ಹಗಲಿನಲ್ಲಿ ಮಲಗುವವರಂತೂ ಗೂಬೆಗಳೇ. ಕೆಲವು ನಿಶಾಚರಿ ಪ್ರಾಣಿಗಳು ಹಗಲಿನಲ್ಲಿ ನಿದ್ರಿಸುವಾಗ ಅರ್ಧ ಎಚ್ಚರ ಇರುತ್ತವಂತೆ. ನಮ್ಮಲ್ಲಿ ಕೆಲವು ವಿದ್ಯಾರ್ಥಿಗಳು ತರಗತಿಗಳಲ್ಲಿ ಕೂತಿರುವುದಿಲ್ಲವೇ- ಹಾಗೆ. ಇನ್ನೊಂದಿಷ್ಟು ಪ್ರಾಣಿಗಳು ಕಣ್ಣು ಬಿಟ್ಟುಕೊಂಡೇ ನಿದ್ದೆ ಮಾಡುತ್ತವೆ. ನಮ್ಮಲ್ಲೇನು ಹಗಲುಗನಸು ಕಾಣುವವರಿಲ್ಲವೇ ಎನ್ನಬೇಡಿ. ಈ ಪ್ರಾಣಿಗಳು ಭೂಲೋಕದವರ ಮಟ್ಟಕ್ಕಲ್ಲ, ಸ್ವರ್ಗಲೋಕದವರ ಮಟ್ಟಕ್ಕಿವೆ. ಕಾರಣ, ಕಣ್ಣು ಬಿಟ್ಟು ನಿದ್ರಿಸುವ ಪ್ರಾಣಿಗಳಿಗೆ ರೆಪ್ಪೆಗಳಿರುವುದಿಲ್ಲ. ದೇವತೆಗಳ ಹಾಗೆ ಅನಿಮಿಷರು. ಅಂದಹಾಗೆ, ಕೂತಲ್ಲೇ ನಿದ್ದೆ, ಕಣ್ಣು ಬಿಟ್ಟು ನಿದ್ದೆ, ಹಗಲಿನಲ್ಲಿ ನಿದ್ದೆ ಮುಂತಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ ಮನುಷ್ಯರನ್ನು ಸಭೆಗಳಲ್ಲಿ, ಸದನದ ಕಲಾಪಗಳಲ್ಲಿ ಕಾಣುವುದಿಲ್ಲವೇ? ಈ ಪ್ರಾಣಿಗಳೇನು ಮಹಾ!
ನಮ್ಮ ಪುರಾಣಗಳಲ್ಲಿ, ನಿದ್ದೆ ಮಾಡದಿರುವುದಕ್ಕೆ ಅಥವಾ ನಿದ್ದೆ ತಡೆಯುವ ಸಾಮರ್ಥ್ಯಕ್ಕಾಗಿಯೇ ಹೆಸರಾದವರಿದ್ದಾರೆ. ಮೊದಲಿಗೆ ಎದುರಾಗುವವ ರಾಮಾಯಣದ ಲಕ್ಷ್ಮಣ. ವನವಾಸದ ಅವಧಿಯ ಅಖಂಡ ಹದಿನಾಲ್ಕು ವರ್ಷಗಳ ಕಾಲ ಆತ ನಿದ್ದೆ ಬಿಟ್ಟಿದ್ದನಂತೆ. ರಾಮ-ಸೀತೆಯ ಸೇವೆಗಾಗಿ ಆತ ಹೀಗೆ ಅವಿಶ್ರಾಂತವಾಗಿದ್ದ ಎನ್ನುವುದು ಹೌದಾದರೂ, ಚೆಲುವೆ ಊರ್ಮಿಳೆಯನ್ನು ನೆನೆದು ನಿದ್ದೆಗೆಟ್ಟ ಎಂದರೆ ತಪ್ಪೇನಿಲ್ಲವಲ್ಲ. ಆನಂತರ ಸಿಗುವವ ಮಹಾಭಾರತದ ಅರ್ಜುನ. ಎಷ್ಟು ದಿನ ಬೇಕಿದ್ದರೂ ನಿದ್ದೆಯನ್ನು ತಡೆಯಬಲ್ಲ ಎಂಬ ಹೆಗ್ಗಳಿಕೆಯೂ ಆತನಿಗಿದೆ. ಹಾಗಾಗಿ ಆತನಿಗೆ ʻಗುಡಾಕೇಶʼ, ಅಂದರೆ ನಿದ್ದೆಯನ್ನೇ ಗೆದ್ದವ ಎಂಬು ಬಿರುದೂ ಅಂಟಿಕೊಂಡಿದೆ.
ಇನ್ನು, ಸಿಕ್ಕಾಪಟ್ಟೆ ನಿದ್ದೆ ಮಾಡುವ ಕಾರಣಕ್ಕಾಗಿಯೇ ಮನೆಮಾತಾದ ವ್ಯಕ್ತಿಯನ್ನು ನೆನಪಿಸಿಕೊಳ್ಳದೇ ಇರಲು ಸಾಧ್ಯವೇ? ನಮ್ಮ ಅಸಾಮಾನ್ಯ ಕುಂಭಕರ್ಣ! ಆತನನ್ನು ಎಬ್ಬಿಸುವ ಬಗ್ಗೆ ಪ್ರಚಲಿತವಿರುವ ವರ್ಣನೆಗಳಿಗೆ ಆದಿ-ಅಂತ್ಯಗಳಿಲ್ಲ. ಹಾಗೆನ್ನುತ್ತಿದ್ದಂತೆ ಶ್ರೀನಿವಾಸ ಉಡುಪರ ಕಥನ ಕವನವೊಂದು ನೆನಪಾಗುತ್ತಿದೆ. ಕುಂಭಕರ್ಣನನ್ನು ಎಬ್ಬಿಸಲು ರಾವಣನ ಕುಲಬಾಂಧವರೆಲ್ಲ ಪಟ್ಟ ಪಾಡನ್ನವರು ಅದ್ಭುತವಾಗಿ ಸೃಷ್ಟಿಸಿದ್ದಾರೆ. “…ಕುಂಭಕರ್ಣನೋ ಹೊಟ್ಟೇಬಾಕ/ ನಡೆಯಲಿ ಮೊದಲು ಅಡುಗೇಪಾಕ/ ಎಂದು ಭೋಜನವ ತಂದೇತಂದರು/ ನೂರು ಜಿಂಕೆ ಕುರಿ ಕೋಳಿಯ ಕೊಂದರು/ ಹೆಡಿಗೆಗಟ್ಟಲೇ ಲಾಡಿನ ಕಾಳು/ ತಪ್ಪಲೆ ತಪ್ಪಲೆ ಬಿಸಿಬಿಸಿ ಕೂಳು/ ಹಂಡೆಹಂಡೆಗಳ ಖಾರದ ಸಾರು/ ಕಡಾಯಿ ತುಂಬಾ ಘಮಘಮ ಖೀರು/ ರಾಶೀರಾಶಿಯ ರಾಗೀ ಮುದ್ದೆ/ ಎದ್ದೆನೆಂಬೆಯೋ ಅಯ್ಯೋ ಪೆದ್ದೆ/ ಕುಂಭಕರ್ಣನಿಗೆ ಗೊತ್ತೇ ಇಲ್ಲ/ ಎಂಥಾ ನಿದ್ದೆಯೋ ದೇವರೆ ಬಲ್ಲ” ಮೊದಲಿಗೆ ಇಷ್ಟೆಲ್ಲ ಅಡುಗೆ ತಯಾರಿ ಮಾಡಿಕೊಂಡಾದ ಮೇಲೆ ಆತನನ್ನು ಎಬ್ಬಿಸುವ ಸಾಹಸ ಆರಂಭವಾಗುತ್ತದೆ. “ಬೆಟ್ಟದ ದೇಹಕೆ ಗಂಧವ ಬಳಿದು/ ಕಣ್ಣುಗಳನು ತಣ್ಣೀರಲಿ ತೊಳೆದು/ ಸುತ್ತಲು ಧೂಪದ ಹೊಗೆಯನು ಹಾಕಿ/ ಮಂಚದ ಕೆಳಗೇ ಬೆಂಕಿಯ ನೂಕಿ/ ಪರಾಕು ಪರಾಕು ಎನ್ನುತ ಕಿರುಚಿ/ ಮೀಸೆಯನೆಳೆದು ಕಿವಿಯನು ತಿರುಚಿ/… ಕಳಹೆಯ ಕೂಗಿಸಿ, ನಗಾರಿ ಹೊಡೆದು/ ಹೊಟ್ಟೆಯ ಮೇಲೆ ತಕತಕ ಕುಣಿದು/ ಮೂಗಿನ ಹೊಳ್ಳೆಗೆ ಬಿರುಡೇ ಜಡಿದು/ ಅದೇನು ಮಾಡಿದರು ಎಚ್ಚರವಿಲ್ಲ/ ಅದೆಂಥ ನಿದ್ದೆಯೊ ದೇವರೆ ಬಲ್ಲ” ಹೀಗೆ ನಿದ್ರಾವಶನಾದ ಆ ಬೃಹದ್ದೇಹಿಯನ್ನು ಎಬ್ಬಿಸುವ ಕಥೆಯೇ ಕಚಗುಳಿ ನೀಡುವಂತಿದೆ.
ನಿದ್ರಿಸುವವರ ಭಂಗಿಗಳ ಬಗ್ಗೆಯೇ ಒಂದು ಪ್ರಬಂಧ ಮಾಡಬಹುದು. ನಿದ್ರಿಸುವಾಗಿನ ಹಲವು ಭಂಗಿಗಳು ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುತ್ತವೆ ಎನ್ನುತ್ತವೆ ಕೆಲವು ಅಧ್ಯಯನಗಳು. ಉದಾ, ನೆಗಡಿಯಾಗಿ, ಮೂಗು ಕಟ್ಟಿದ್ದರೆ ದಿಂಬು ಎತ್ತರಿಸಿ ಮಲಗಬೇಕು, ಎಡ ಬದಿಗೆ ಮಲಗಿದರೆ ಜೀರ್ಣಾಂಗಗಳಿಗೆ ಲಾಭ ಇತ್ಯಾದಿ ಇತ್ಯಾದಿ. ಇವನ್ನೆಲ್ಲಾ ಒಮ್ಮೆ ಬದಿಗಿರಿಸಿ, ನಿದ್ರಿಸುವವರನ್ನು ಸುಮ್ಮನೆ ಗಮನಿಸಿದರೆ ಸಾಕು, ಮುಖ ಅರಳುವುದಕ್ಕೆ ಎಷ್ಟು ಬೇಕು ಸರಕು? ಮಕ್ಕಳಂತೆ ಪ್ರಶಾಂತವಾಗಿ ನಿದ್ರಿಸುವವರು, ನಿದ್ದೆಯಲ್ಲೂ ಹುಬ್ಬು ಗಂಟಿಕ್ಕುವವರು, ನಿದ್ದೆಯಲ್ಲಿ ಮಾತಾಡುವವರು, ನಡೆಯುವವರು, ಸೂರು ಹಾರುವಂತೆ ಗೊರೆಯುವವರು, ಹಗಲಿನ ಆಗು-ಹೋಗುಗಳ ವರದಿ ಒದರುವವರು, ಮಂಚದ ಮೇಲೆ ಮಲಗಿ ಕೆಳಗೆ ಏಳುವವರು, ಭೂಮಿ ಎಷ್ಟು ಗುಂಡಗಿದೆ ಎಂದು ಅಳೆಯುವವರು, ಆಚೀಚೆ ಮಲಗಿದವರಿಗೆ ಒದೆಯುವವರು… ನಿದಿರೆಯ ಚೇಷ್ಟೆಗಳು ಒಂದೆರಡೇ?
ನಿದ್ದೆಯೆನ್ನುತ್ತಿದ್ದಂತೆ ಜೋಗುಳದ ನೆನಪಾಗದಿದ್ದೀತೆ? ಲಾಲಿ ಹಾಡುಗಳು ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ಕಂಡುಬರುವಂಥವು. ಅಳುವ ಕಂದಮ್ಮನನ್ನು ಎದೆಗಾನಿಸಿಕೊಂಡು, ಸಮಾಧಾನ ಮಾಡುತ್ತಾ ಜೋಜೋ ಹಾಡಿ ಮಲಗಿಸುವ ತಾಯಂದಿರು ಕಾಲ, ದೇಶ, ಪಾತ್ರಗಳನ್ನು ಮೀರಿದವರು. “ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು ಮಲಗು ಮಗುವೆ” ಎಂದು ತೂಗುವ, “ಮಲಗೋ ಮಲಗೆನ್ನ ಮರಿಯೆ, ಬಣ್ಣದ ನವಿಲಿನ ಗರಿಯೇ” ಎಂದು ತಟ್ಟುವ ಅಮ್ಮಂದಿರ ಬಿಂಬಗಳು ಎಂದೆಂದಿಗೂ ನಮ್ಮ ಭಿತ್ತಿಯಲ್ಲಿ ಹಸಿರಾಗಿರುತ್ತವೆ. “ತೂಗಿರೆ ರಂಗನ್ನ ತೂಗಿರೆ ಕೃಷ್ಣನ್ನ”, “ಪವಡಿಸು ಪರಮಾತ್ಮನೆ”, “ಜೋಜೋ ಕಂದರ್ಪ ಕೋಟಿ ಲಾವಣ್ಯ”, “ಲಾಲಿ ಪಾವನ ಚರಣ”, “ಜೋಜೋ ಜೋಜೋ ರಂಗಧಾಮ” ಎಂದು ದಾಸರುಗಳೂ ದೇವರನ್ನು ತೂಗಿದ್ದಾರಲ್ಲ.
ಇದನ್ನೂ ಓದಿ: ದಶಮುಖ ಅಂಕಣ: ಕೆಡುಕು ಸುಟ್ಟ ಬೂದಿಯಿಂದ ಒಳಿತು ಎದ್ದು ಬರಲಿ
ಈ ನಿದಿರೆಯ ಭಾವಗಳಿರುವ ಕವಿ ರಚನೆಗಳು ಇಲ್ಲಿಗೆ ಮುಗಿಯುವುದಿಲ್ಲ. “ತಿಳಿ ಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು” ಎಂದು ಎಸ್.ವಿ. ಪರಮೇಶ್ವರ ಭಟ್ಟರು ತೊಟ್ಟಿಲು ತೂಗಿದರೆ, “ಹೂಬಳ್ಳಿಯ ಹಿಗ್ಗೆ ಆನಂದದ ಬುಗ್ಗೆ/ ಅರೆ ಅರಳಿದ ಮೊಗ್ಗೆ ಮಲಗು ಮಲಗು” ಎಂದು ಎಚ್. ಎಸ್. ವೆಂಕಟೇಶಮೂರ್ತಿಯವರು ಹಾಡಿದ್ದಾರೆ. ಮಲಗಿರುವ ಮಕ್ಕಳನ್ನು ನೋಡಿದಾಗೆಲ್ಲ ಸಿಹಿನಿದ್ದೆ, ಸಕ್ಕರೆ ನಿದ್ದೆ ಎಂಬ ನುಡಿಗಟ್ಟುಗಳೇ ನೆನಪಾಗುತ್ತವೆ. ಈ ಎಲ್ಲಕ್ಕಿಂತ ಗಮನ ಸೆಳೆದಿದ್ದು ದ. ರಾ. ಬೇಂದ್ರೆ ಅವರ ನಿದ್ದೆಯ ಕಲ್ಪನೆ. “ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ, ನಮಗೆ ಏಕೆ ಬಾರದೋ” ಎಂದು ಕೇಳುವ ಅವರು, ಮಲಗಿ ಏಳುತ್ತಿದ್ದಂತೆ ಹಳತೆಲ್ಲಾ ಹೋಗಿ ಹೊಸ ಜನ್ಮ ಬರಬಾರದೇ ಎಂದು ಹಂಬಲಿಸುತ್ತಾರೆ.
ನಿದ್ದೆಯ ಕುರಿತಾದ ಬಹಳಷ್ಟು ಗಾದೆಗಳೂ ಭಾಷೆಯ ಜಾಯಮಾನದಲ್ಲಿವೆ. ಅವುಗಳ ಅರ್ಥದ ಹೊಳಹು ಏನೇ ಇದ್ದರೂ, ಅವೆಲ್ಲವನ್ನೂ ಹೊಮ್ಮಿಸುವುದಕ್ಕೆ ನಿದ್ದೆಯನ್ನಿಲ್ಲಿ ಬಳಸಲಾಗುತ್ತದೆ ಎನ್ನುವುದು ಗಮನಾರ್ಹ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅಥವಾ ಛತ್ರದಲ್ಲಿ ಊಟ, ಮಠದಲ್ಲಿ ನಿದ್ದೆ ಎನ್ನುತ್ತಾ ನಿದ್ದೆಗೊಂದು ನಿರುಮ್ಮಳತೆ ಬೇಕೆನ್ನುವ ಮಾತು; ತೂಕಡಿಸುವವನಿಗೆ ಹಾಸಿಗೆ ಹಾಸಿದಂತೆ ಎನ್ನುವ ಮೂಲಕ ಕೆಲಸ ಸುಲಭವಾಯ್ತು ಎಂಬ ಭಾವ; ನಿದ್ದೆ ಬಂದೋರನ್ನ ಎಬ್ಬಿಸಬಹುದು, ಬಂದಂತೆ ಮಲಗಿದೋರನ್ನಲ್ಲ ಎನ್ನುವಲ್ಲಿನ ಡೋಂಗಿ ಭಾವ; ನಿದ್ದೆಗೆ ಮದ್ದಿಲ್ಲ, ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ- ಇಂಥ ನಾಣ್ಣುಡಿಗಳು ಸಿಕ್ಕಾಪಟ್ಟೆ ಇವೆ.
ಈಗಿನ್ನೂ ಆರಂಭವಾಗುತ್ತಿರುವ ಚಳಿಗಾಲದ ನೆವದಲ್ಲಿ ನಿದ್ರೆಯ ಮೇಲೊಂದು ಲಹರಿಯಾಯಿತು. ಇಷ್ಟೊತ್ತಿಗೆ ಓದಿದವರಿಗೆ ನಿದ್ದೆ ಬಂತೋ ಅಥವಾ ನಿದ್ದೆ ಹರಿದು ಎಚ್ಚರವಾಯಿತೋ- ಅವರವರ ಭಾವಕ್ಕೆ ಬಿಟ್ಟಿದ್ದು.
ಇದನ್ನೂ ಓದಿ: ದಶಮುಖ ಅಂಕಣ: ಶುಭಾಶಯ ಪತ್ರಗಳೆಂಬ ಚಿತ್ರ-ಕಾವ್ಯಗಳು