Site icon Vistara News

ದಶಮುಖ ಅಂಕಣ: ಕಾಲನೆಂಬ ಮಾಯ್ಕಾರ…!

time dashamukha

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/12/WhatsApp-Audio-2023-12-19-at-11.00.58-AM.mp3

ಹೊಸದಾಗಿರುವುದೆಲ್ಲ ಎಂದಾದರೂ ಹಳತಾಗಲೇ ಬೇಕಲ್ಲ. ಕಳೆದ ಜನವರಿ 1ರಂದು ಹೊಸದೆಂದು ಕುಣಿದಾಡಿ ಸ್ವಾಗತಿಸಿದ್ದ 2023ನೇ ವರ್ಷವೀಗ ಹಳತಾಗಿದೆ, ಕಾಲ್ತೆಗೆಯಲು ಸಿದ್ಧವಾಗಿದೆ. 2024ರ ಕೊನೆಗೆ ಮತ್ತಿದೇ ಪುನರಾವರ್ತನೆ. ಹಿಂದೆ ಅದೆಷ್ಟು ಕಾಲದಿಂದ ಹೀಗೆ ವರ್ಷಗಳು ಮಗುಚುತ್ತಿವೆಯೊ, ಮುಂದೆ ಇನ್ನೆಷ್ಟು ಮಗುಚಬೇಕೊ… ತಿಳಿದವರಾರು? ಹೊಸದೆಲ್ಲ ಮಾಗಿ ಹಳತಾಗುವ, ಅಲ್ಲಿಯೇ ಮತ್ತೆ ಹೊಸದು ಪುಟಿದೇಳುವ ಈ ಪಲ್ಲಟಕ್ಕೆ ಆದಿ-ಅಂತ್ಯಗಳುಂಟೆ? ಕಾಲಾಯ ತಸ್ಮೈ ನಮಃ.

ಹೀಗೆನ್ನುತ್ತಿದ್ದಂತೆ ಕಾಲನೆಂಬಾತನ ಬಗ್ಗೆಯೇ ಕುತೂಹಲ ಮೂಡುತ್ತಿದೆ. ನಮಗೆ ತಿಳಿದೂ ತಿಳಿಯದ ಈ ಕಾಲನಿಗೆ ನಾವೆಲ್ಲ ಶರಣಾದವರೇ. ಏನು ಕಾಲವೆಂದರೆ? ಸಮಯವೇ? ಸಂದರ್ಭವೇ? ಹಗಲು ರಾತ್ರಿಗಳ ಚಕ್ರವೇ? ಹೊತ್ತು- ವೇಳೆಗಳೇ? ಮಿಡಿಯುವ ಗಡಿಯಾರವೇ? ಕ್ಯಾಲೆಂಡರಿನ ಹಾಳೆಗಳೇ? ಒಂದಿಷ್ಟು ವಿವರಗಳನ್ನು, ಘಟನೆಗಳನ್ನು ತಿಳಿಯಲು ಉಪಯೋಗಿಸುವ ಅಳತೆಯೇ? ಕಾಲಕಾಲಕ್ಕೆ ಬದಲಾಗುವ ವಾಸ್ತವವೇ? ಕಲ್ಪನೆಯೇ ಅಥವಾ ನಮ್ಮ ಭ್ರಮೆಯೇ? ಇದೇನು ನಿರಂತರವೋ ಸೀಮಿತವೋ ಅನಂತವೋ… ಏನಿದು?

ಒಂದರ್ಥದಲ್ಲಿ ಹೇಳುವುದಾದರೆ, ಕಾಲನೆಂದರೆ… ದೃಗ್ಗೋಚರವಾಗದವರು ಆನೆ ಮುಟ್ಟಿದ ಹಾಗೆ! ಈತ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅನುಭವಕ್ಕೆ ಬರಬಹುದು. ಹಾಗಾಗಿಯೇ ಈತ ಎಲ್ಲರಿಗೂ ಸಲ್ಲುವಂಥವನು, ಎಲ್ಲರನ್ನೂ ಒಳಗೊಳ್ಳುವವನು. ಅಷ್ಟಾಗಿಯೂ ಮೂಲಭೂತವಾಗಿ ತಾನೇನು ಎಂಬ ಗುಟ್ಟನ್ನು ಯಾರಲ್ಲೂ ಪಿಸುಗುಟ್ಟದೆ, ತನ್ನೊಡಲಲ್ಲೇ ಬಚ್ಚಿಟ್ಟುಕೊಂಡಿದ್ದಾನೆ ಈ ಕಾಲನೆಂಬ ಮಾಯ್ಕಾರ! ವಿಜ್ಞಾನಿಗಳಿಗೆ ಒಂದು ರೀತಿಯಾಗಿ ಕಂಡರೆ, ತತ್ವಜ್ಞಾನಿಗಳನ್ನು ಇನ್ನೊಂದು ಬಗೆಯಲ್ಲಿ ತಟ್ಟುತ್ತಾನೆ. ಬ್ರಹ್ಮಾಂಡದ ರಚನೆ ಬೇರೆಯಲ್ಲ, ಕಾಲಪ್ರವಾಹ ಬೇರೆಯಲ್ಲ ಎನ್ನುವ ಮೂಲಕ ಕಾಲನಿಗೆ ಅನಂತಯಾತ್ರಿಯ ಪಟ್ಟವನ್ನು ವಿಜ್ಞಾನವೇ ಕಟ್ಟಿದೆ. ʻಅಪರಿಚಿತ ವಿಷಯಗಳ ನಡುವೆ ಮತ್ತೂ ಅಜ್ಞಾತವಾಗಿದ್ದೆಂದರೆ ಸಮಯʼ ಎಂದು ತತ್ವಜ್ಞಾನಿ ಅರಿಸ್ಟಾಟಲ್ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಕಾಲವೆಂದರೆ ಬ್ರಹ್ಮಶಕ್ತಿ ಎಂದು ಸಂಸ್ಕೃತ ವಿದ್ವಾಂಸ ಭರ್ತೃಹರಿಗೆ ಅನಿಸಿದರೆ, ಸಾಂಖ್ಯರು ಆಕಾಶವನ್ನೇ ಕಾಲವೆನ್ನುತ್ತಾರೆ. ಕಾಲಕ್ಕೆ ಉತ್ಪತ್ತಿ-ಸ್ಥಿತಿ-ಲಯಗಳಿವೆ ಎಂಬುದಾಗಿ ದ್ವೈತ ಭಾವಿಸಿದರೆ, ಕಾಲವೆನ್ನುವುದು ಬ್ರಹ್ಮ ಮಾಯೆ ಎನ್ನುತ್ತದೆ ಅದ್ವೈತ. ಜೈನ ಸಿದ್ಧಾಂತಕ್ಕೆ ಕಾಲವನ್ನೂ ವಿಭಜಿಸಿ ನೋಡುವ ಕುತೂಹಲವಿದ್ದರೆ, ಬೌದ್ಧ ತತ್ವಗಳ ಪ್ರಕಾರ ಕಾಲವೆನ್ನುವುದು ಕೇವಲ ಸಾಪೇಕ್ಷ. ಆನೆಯ ಯಾವ್ಯಾವ ಭಾಗ ಯಾರಾರಿಗೆ ದಕ್ಕಿದೆಯೋ, ಅವರವರಿಗೆ ಅದೇ ಸತ್ಯ ತಾನೆ.

ಕಾಲಪ್ರವಾಹದ ಗೊಂದಲ ಶರಣರನ್ನೂ ಕಾಡಿದ್ದು, ಒಂದಿಷ್ಟು ಜಿಜ್ಞಾಸೆಗಳನ್ನು ಇಲ್ಲಿಯೂ ಕಾಣಬಹುದು. “ಹಗಲಿಗೊಂದು, ಇರುಳಿಗೊಂದು ನೇಮವೇ?/ ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ/ ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ” ಎನ್ನುತ್ತಾ ಲಿಂಗವೆನ್ನುವುದು ಕಾಲ-ನೇಮಕ್ಕೆ ಮೀರಿದ್ದು ಎನ್ನುತ್ತಾರೆ ಅಲ್ಲಮಪ್ರಭುಗಳು.

“ಹಗಲು ಗೂಗೆಗೆ ಇರುಳಾಗಿಪ್ಪುದು/ ಇರುಳು ಕಪಟಿಗೆ ಹಗಲಾಗಿಪ್ಪುದು/ ಇದು ಜಗದಾಟ/ ಈ ಹಗಲು ಇರುಳೆಂಬ ಉಭಯವಳಿದು ನಿಗಮಂಗಳಿಗೆ ನಿಲುಕದ/ ಸಗುಣ ನಿರ್ಗುಣ ಅಗಮ್ಯ ಅಗೋಚರವಪ್ಪ/ ಮಹಾಘನ ಗುರುವಿನ ನೆಲೆಯ ನಿಮ್ಮ ಶರಣರು ಬಲ್ಲರಲ್ಲದೆ/ ಮರ್ತ್ಯದ ಮರಣಬಾಧೆಗೊಳಗಾಗುವ ಮನುಜರೆತ್ತ ಬಲ್ಲರೊ” ಎಂದು ಕಾಲಸೃಷ್ಟಿಯ ಹಗಲಿರುಳಿನ ಓಟವನ್ನು ಮೀರುವ ಹಂಬಲವನ್ನು ಹಡಪದ ಅಪ್ಪಣ್ಣ ಶರಣರ ಚಿಂತನೆಯಲ್ಲಿ ಕಾಣಬಹುದು.

“ಜಗದಗಲದ ಮಾಯಾಜಾಲವ ಹಿಡಿದು/ ಕಾಲನೆಂಬ ಜಾಲಗಾರ ಜಾಲವ ಬೀಸಿದ ನೋಡಯ್ಯ/ ಈ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ” ಎಂದು ಕಾಲನ ಮಾಯೆಯ ಬಗ್ಗೆ ಹೇಳುವ ಸ್ವತಂತ್ರ ಸಿದ್ಧಲಿಂಗೇಶ್ವರ ಶರಣರು, ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಸ್ವರೂಪ ಜ್ಞಾನ ಮತ್ತು ಸಮಷ್ಟಿ ಅರಿವಿನ ಬಗ್ಗೆ ಒತ್ತು ನೀಡುತ್ತಾರೆ.

year 2024

ಇವೆಲ್ಲಾ ತೀರಾ ದಾರ್ಶನಿಕರ ಮಾತಾಯಿತು. ಸಾಮಾನ್ಯರಿಗೆ ಇದೆಲ್ಲ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ ಎಂದು ಹೇಳಬಹುದು. ತತ್ವಜ್ಞಾನವನ್ನೆಲ್ಲಾ ಬಿಟ್ಟು ನಮ್ಮ ಬಾಲ್ಯಕ್ಕೆ ಹೊರಳಿದರೆ, ಪುಟ್ಟ ಮಕ್ಕಳಿಗೂ ಕಾಲದ ಬಗ್ಗೆ ಒಂದಿಷ್ಟು ಕಲ್ಪನೆಗಳನ್ನು ಬಿತ್ತುತ್ತೇವೆ ನಾವು. ʻಒಂದಾನೊಂದು ಕಾಲದಲ್ಲಿ…ʼ ಎನ್ನುತ್ತಿದ್ದಂತೆ ಬಾಲಮನಸ್ಸುಗಳು ಕಾಲಚಕ್ರವನ್ನೂ ಮೀರಿ ತಮಗೆ ಬೇಕಾದಲ್ಲಿ ಹೋಗಿ ನಿಲ್ಲುತ್ತವೆ. ಜನಪ್ರಿಯ ಪದ್ಯ, “ಗಂಟೆಯ ನೆಂಟನೆ ಓ ಗಡಿಯಾರ/ ಬೆಳ್ಳಿಯ ಬಣ್ಣದ ಗೋಲಾಕಾರ/ ವೇಳೆಯ ತಿಳಿಯಲು ನೀನಾಧಾರ/ ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್” ಎನ್ನುವ ದಿನಕರ ದೇಸಾಯಿಯವರ ಶಿಶು ಗೀತೆಯಲ್ಲೂ ನಾವು ಮಕ್ಕಳಿಗೆ ತಿಳಿಸುವುದೇನು? “ಟಿಕ್ ಟಿಕ್ ಎನ್ನುತ ಹೇಳುವೆಯೇನು? ನಿನ್ನೀ ಮಾತಿನ ಒಳಗುಟ್ಟೇನು? ʻಕಾಲವು ನಿಲ್ಲದುʼ ಎನ್ನುವಿಯೇನು? ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್” ಎನ್ನುತ್ತ ಕಾಲನೆಂಬ ಅನಿಯಂತ್ರಿತ ಓಟಗಾರನ ಪರಿಚಯವನ್ನು ಎಳವೆಯಲ್ಲೇ ಮಾಡಿಕೊಡುತ್ತೇವೆ.

ನಮ್ಮ ಕವಿಗಳಿಗೆ ಕಾಲವೆಂಬ ಸೋಜಿಗ ಹಲವು ರೀತಿಯಲ್ಲಿ ಕಾಡಿದ್ದಿದೆ. “ಜಿಪುಣ ಅಂದ್ರೆ ಜಿಪುಣ ಈ ಕಾಲ/ ಏನೇ ಗಿರವಿ ಇಟ್ರೂ/ ಎಷ್ಟೇ ಬಡ್ಡಿ ಕೊಟ್ರೂ/ ಹುಟ್ಟೋದಿಲ್ಲ ಒಂದು ಘಳಿಗೆ ಸಾಲ” ಎಂದು ಮುನಿಸು ತೋರುತ್ತಾರೆ ಬಿ. ಆರ್. ಲಕ್ಷ್ಮಣರಾಯರು. “ಕಾಲದ ಕಡಲಲಿ ಉಸಿರಿನ ಹಡಗು/ ತೇಲುತ ನಡೆದಿದೆ ಹಗಲೂ ಇರುಳೂ/ ನೀರಲಿ ತೆರೆದಿವೆ ನಿಲ್ಲದ ದಾರಿ/ ಎಲ್ಲಿಂದೆಲ್ಲಿಗೆ ಇದರ ಸವಾರಿ!” ಎಂದು ಕೆ.ಎಸ್. ನರಸಿಂಹ ಸ್ವಾಮಿಗಳು ಹುಬ್ಬೇರಿಸುತ್ತಾರೆ. “ಎಲೆ ತುದಿಯ ಇಬ್ಬನಿಯಂತೆ ಕಾಲದ ಅಲುಗಿನ ಮೇಲೆ ನಿನ್ನ ಬದುಕು ಹಗುರಾಗಿ ನರ್ತಿಸಲಿ ಬಿಡು” ಎಂದು ಕವಿ ರವೀಂದ್ರನಾಥ ಟಾಗೋರ್ ಆಶಿಸುತ್ತಾರೆ.

ಇದನ್ನೂ ಓದಿ: ದಶಮುಖ ಅಂಕಣ: ಬೆಳಗೆಂಬ ಬೆರಗು!

ಭಾಷೆಯ ಜಾಯಮಾನದಲ್ಲಿರುವ ಕಾಲನೆಂಬ ಕಲ್ಪನೆಯ ಬಗ್ಗೆ ಹೊತ್ತು-ಗೊತ್ತು ಮರೆತು ಮಾತಾಡಬಹುದು. ಕಾಲವೆಂಬುದಕ್ಕೆ ಇರುವ ಅರ್ಥ ವೈವಿಧ್ಯಗಳೇ ಚೋದ್ಯ ಹುಟ್ಟಿಸುತ್ತವೆ. ಕಾಲನೆಂದರೆ ಈವರೆಗೆ ಹೇಳುತ್ತಲೇ ಬಂದ- ಸಮಯ, ಹೊತ್ತು, ವೇಳೆ, ಸಂದರ್ಭ, ಸಂವತ್ಸರ ಮುಂತಾದ ಹೆಚ್ಚು ಬಳಕೆಯ ಅರ್ಥಗಳ ಹೊರತಾಗಿ- ಸಾವು, ಯಮ, ಕಪ್ಪು, ವಿಷ, ಕರಾಳ, ಪ್ರಳಯ, ಶಿವ ಮುಂತಾದ ಅರ್ಥ ವ್ಯಾಪ್ತಿಗಳೂ ಇವೆ. ಕಾಲಕೂಟ, ಕಾಲಕಂಠ, ಕಾಲರುದ್ರ, ಕಾಲಾಂತಕ ಎನ್ನುವಲ್ಲಿ ಈಶ್ವರ ನೆನಪಾದರೆ, ಕಾಳಸಂತೆ, ಕಾಳಸರ್ಪವೆಂದರೆ ಬರುವ ಕರಾಳ ಭಾವಗಳು ಮನಸ್ಸನ್ನು ಬೆಚ್ಚಿಬೀಳಿಸುತ್ತವೆ. ಇನ್ನು, ಹುಟ್ಟಿದವರೆಲ್ಲ ಒಂದಲ್ಲಾಒಂದಿನ ʻಕಾಲʼವಾಗಲೇ ಬೇಕಲ್ಲ, ಹಾಗಾಗಿ ಸ್ವಲ್ಪ ಪುಣ್ಯ ಸಂಪಾದನೆ ಮಾಡುವ ಮನಸ್ಸಿದ್ದರೆ ಸ್ವಲ್ಪ ಕಥಾ-ಕಾಲಕ್ಷೇಪ ಅಂದರೆ ಹರಿಕಥೆ ಕೇಳಿ. ಆಗಲಾದರೂ ʻಕಾಲʼನ ದೂತರಿಗೆ ದಯೆ ಬರಬಹುದು.

ಇತ್ತೀಚೆಗೆ ಯಾಕೋ ʻಕಾಲʼ ಸರಿಯಿಲ್ಲ (ಕೆಟ್ಟಕಾಲ) ಎಂದು ಗೊಣಗುತ್ತಿದ್ದೀರಾ? ಸ್ವಲ್ಪ ತಾಳಿ, ನಿಮಗೂ ಒಂದ್ ʻಕಾಲʼ (ಒಳ್ಳೆಯಕಾಲ) ಬರತ್ತೆ! ನೋಡಿ, ಸಮಯ ಪ್ರಜ್ಞೆ ಅಥವಾ ಸಮಯ ಸ್ಫೂರ್ತಿ ಇದ್ದವರು ಸಮಯೋಚಿತ ನಿರ್ಧಾರಗಳಿಂದ ಎಷ್ಟೋ ಜನರ ಜೀವ ಉಳಿಸಿದ ಕಥೆಗಳಿವೆ. ಇಂಥವರ ಬಗ್ಗೆ ಇರುವಂಥ ಸದ್ಭಾವ ಸಮಯ ಸಾಧಕರ ಬಗ್ಗೆ ಇರುವುದಕ್ಕೆ ಸಾಧ್ಯವೇ? ಹೀಗೆ ಕಾಲನ ಅರ್ಥವ್ಯಾಪ್ತಿಯ ಬಗ್ಗೆ ಹೇಳುತ್ತಿದ್ದರೆ ಸಮಯ ಸರಿದಿದ್ದೇ ತಿಳಿಯುವುದಿಲ್ಲ.

ಕಾಲನ ಸುತ್ತಮುತ್ತಲಿನ ಗಾದೆಗಳಿಗೂ ಬರವಿಲ್ಲ. ಅತ್ಯಂತ ಜನಪ್ರಿಯವಾದ ʻಅತ್ತೆಗೊಂದು ಕಾಲ, ಸೊಸೆಗೊಂದು ಕಾಲʼ, ʻನೇಯುವ ಕಾಲ ತಪ್ಪಿದರೂ ಸಾಯುವ ಕಾಲ ತಪ್ಪಲ್ಲʼ, ʻಸಮಯಕ್ಕಾದವನೇ ನೆಂಟ, ಸಮರಕ್ಕಾದವನೇ ಬಂಟʼ, ʻಸಮಯಕ್ಕಾಗದ ಬುದ್ಧಿ, ಸಾವಿರ ಇದ್ರೂ ಲದ್ದಿʼ, ʻಹೊತ್ತಿಗಾದ ಹುಲ್ಲು ಕಡ್ಡಿ ಹೆಡಿಗೆ ಹೊನ್ನಿಗೆ ಸಮʼ ಇಂಥವು ಕಾಲಧರ್ಮದ ಬಗ್ಗೆ ಆಡುಮಾತಿನಲ್ಲೇ ಬಹಳಷ್ಟು ಹೊಳಹುಗಳನ್ನು ತೋರಿಸುತ್ತವೆ.
ಕಾಲನೆಂಬವ ಅನಂತಯಾತ್ರಿ, ಮಾಯಗಾರ, ಓಟಗಾರ ಮುಂತಾದ ಎಲ್ಲವೂ ಹೌದು. ಜೊತೆಗೆ, ರಕ್ತವನ್ನೇ ಹರಿಸದೆ ಕೊರೆಯುವ ನೀರ್ಗಲ್ಲ ಶೂಲವೆಂಬುದೂ ಸತ್ಯ. ಹಾಗೆಂದು ಅವನನ್ನು ದೂರಲುಂಟೇ? ಎಷ್ಟೇ ಆದರೂ ಕಾಲವೆಂಬುದು ಎಲ್ಲಾ ನೋವು, ರೋಗಗಳನ್ನು ಪರಿಹರಿಸುವ ವೈದ್ಯ; ಸಕಲ ಭ್ರಮೆಗಳನ್ನು ಹರಿಸುವ ಚೋದ್ಯ; ಕಾಲಕಾಲಕ್ಕೆ ಬದಲಾಗುವ ಸತ್ಯವಾಗಲು ಇವನಿಂದ ಮಾತ್ರ ಸಾಧ್ಯ. ಮುಂಬರುವ ಕಾಲದಲ್ಲಿ ಎಲ್ಲವೂ ಒಳಿತಾಗಲಿ.

ಇದನ್ನೂ ಓದಿ: ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

Exit mobile version