Site icon Vistara News

ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!

solo travel

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/09/WhatsApp-Audio-2023-09-26-at-9.48.07-AM.mp3

ಟ್ರಾಫಿಕ್ ಸಿಗ್ನಲ್‌ನಲ್ಲಿದ್ದೆ. ನಾ ಪ್ರಯಾಣಿಸುತ್ತಿದ್ದ ಆಟೋದ ಚಾಲಕ ಸ್ವಲ್ಪ ಸಿಡಿಮಿಡಿ ಮಾಡುತ್ತಿದ್ದ. ಹೇಳುವಂಥ ಟ್ರಾಫಿಕ್ ಇಲ್ಲದ ನಮ್ಮೂರಲ್ಲಿ ಹಬ್ಬದ ವಾರಾಂತ್ಯಗಳು (weekend with festival) ಬಂದರೆ ಇದ್ದಕ್ಕಿದ್ದಂತೆ ರಸ್ತೆಗಳು ತುಂಬಿಬಿಡುತ್ತವೆ. ಹೆಚ್ಚಿನ ಸಾರಿ ಯಾವ್ಯಾವುದೋ ಊರು, ರಾಜ್ಯಗಳ ನೋಂದಣಿ ಹೊಂದಿರುವ ಕಾರುಗಳದ್ದೇ ಕಾರುಭಾರು. ಅದರಲ್ಲೂ ಊರಿನ ನಡುವೆ ಹಾದುಹೋಗುವ ಹೆದ್ದಾರಿಯ ಸಿಗ್ನಲ್‌ಗಳು ಕಳೆಯುವಾಗ ನಾಲ್ಕಾರು ಬಾರಿ ಕೆಂಪುದೀಪ ಬರಬೇಕು. ಆನಂತರವೇ ನಮ್ಮ ಪಾಲಿಗೆ ಮುಂದೆ ಹೋಗಲು ಗ್ರೀನ್ ಸಿಗ್ನಲ್ ಸಿಗುವುದು. ಅಂದೂ ಸಹ ಗಣೇಶ ಚತುರ್ಥಿಯ (Ganesh chaturthi) ವಾರಾಂತ್ಯವಾದ್ದರಿಂದ ಸಿಗ್ನಲ್‌ನಲ್ಲಿ ಸಿಲುಕಿ ಆಟೋದವ ಚಡಪಡಿಸುತ್ತಿದ್ದ. ʻಇನ್ನೂ ದಸರಾ ಬರ್ಲಿ, ಬೇರೆ ಊರ್ಗೊಳಿಂದ ಜನ ಯದ್ವಾತದ್ವಾ ಬತ್ತರೆ. ರಸ್ತೆ ಮೇಲೆ ಗಾಡಿ ಓಡ್ಸದೇ ಹಿಂಸೆʼ ಎಂದು ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದ.

ಆತನ ಮಾತು ಸುಳ್ಳಲ್ಲ ಬಿಡಿ. ರಜೆ ಬಂತೆಂದರೆ ಎಲ್ಲಿಗೆ ಪ್ರವಾಸ (travel plan) ಹೊರಡುವುದೆಂದೇ ಲೆಕ್ಕ ಹಾಕುತ್ತೇವೆ. ಕೆಲವು ದೇಶಗಳಲ್ಲಿ ವರ್ಷದ ಆರಂಭಕ್ಕೆ ಮಾಡುವ ಮೊದಲ ಕೆಲಸವೆಂದರೆ ಈ ವರ್ಷ ಯಾವ್ಯಾವ ರಜೆಯಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡುವುದು ಎಂಬ ತಿರುಗಾಟದ ನಿಶ್ಚಯ. ಎಷ್ಟೊ ತಿಂಗಳ ಮೊದಲು ವಿಮಾನ, ಹೊಟೇಲ್‌ಗಳನ್ನೂ ಕಾಯ್ದಿರಿಸಿಬಿಡುತ್ತಾರೆ ಇಂಥವರು. ಅದಕ್ಕಾಗಿಯೇ ಮೀಸಲಾದ ಟ್ರಾವೆಲ್ ವೆಬ್‌ಸೈಟ್‌ಗಳು (Travel website) ಸಿಕ್ಕಾಪಟ್ಟೆ ಇವೆ. ಈ ಪೈಕಿ ಯಾವುದರಲ್ಲಿ ಕಡಿಮೆ ಬೆಲೆಗೆ ವಿಮಾನ, ಕಾರು, ಹೊಟೇಲ್ ಇತ್ಯಾದಿಗಳ ಬುಕಿಂಗ್ ಲಭ್ಯವಿದೆ ಎಂಬುದನ್ನು ಅಳೆದು- ತೂಗಿ ಬದುಕುತ್ತಿರುವ ವೆಬ್‌ಸೈಟ್‌ಗಳಿಗೆ ಬರವಿಲ್ಲ. ಅಂದರೆ ಅಷ್ಟೊಂದು ಉತ್ಸಾಹದಿಂದ ನಾವೆಲ್ಲ ಪ್ರವಾಸ ಹೊರಡುತ್ತೇವೆ ಎಂದರ್ಥವಲ್ಲವೇ?

ಯಾಕಷ್ಟು ಆಸಕ್ತಿ ನಮಗೆ ಪ್ರವಾಸ ಹೋಗುವುದೆಂದರೆ? ಪ್ರವಾಸ, ಪ್ರಯಾಣಗಳಿಗಾಗಿ ಅಷ್ಟೊಂದು ಖರ್ಚು ಮಾಡುವುದು ನಮಗೆ ಹೇಗೆ ಹೊರೆ ಎನಿಸುವುದಿಲ್ಲ? ಪ್ರವಾಸದ ಅನುಭವದ ಮೂಲಕ ಏನನ್ನು ನಿರೀಕ್ಷಿಸುತ್ತೇವೆ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವ ತವಕ ಹೀಗೆ ವ್ಯಕ್ತವಾಗುತ್ತದೆಯೇ? ಹೊಸದೇನನ್ನೋ ಹುಡುಕುವ ತುಡಿತವೇ? ನಂನಮ್ಮ ಆಸಕ್ತಿಗಳನ್ನು ಪೋಷಿಸಿಕೊಳ್ಳುವ ದಾರಿಗಳಲ್ಲಿ ಇದೂ ಒಂದೇ? ಒಂಟಿಯಾಗಿ, ಜಂಟಿಯಾಗಿ, ಗುಂಪಿನಲ್ಲಿ- ಹೇಗೇ ಪ್ರವಾಸ ಹೋದರೂ ಬಂದಿದ್ದಕ್ಕೆಲ್ಲಾ ಹೊಂದಿಕೊಳ್ಳುವ ನಾವು, ಉಳಿದಂತೆ ಬದುಕಿನಲ್ಲಿ ಸಣ್ಣ ಹೊಂದಾಣಿಕೆಗೂ ಸಿಡಿಮಿಡಿ ಮಾಡುತ್ತೇವಲ್ಲ, ಏನಿದರರ್ಥ? ಹಾಗಾದರೆ ಕೋಶ ಓದುವುದಕ್ಕಿಂತ ದೇಶ ಸುತ್ತುವುದೇ ಸೂಕ್ತವೇ?

ಪ್ರವಾಸಕ್ಕೆ ಸುದೀರ್ಘ ಇತಿಹಾಸವಿದೆ. ಭಾರತಕ್ಕೆ ಬಂದ ಪ್ರವಾಸಿಗರ ಚರಿತ್ರೆ ಪ್ರಾರಂಭವಾಗುವುದು ಕ್ರಿಸ್ತ ಪೂರ್ವದಲ್ಲಿ. ಗ್ರೀಕ್ ದೊರೆ ಸೆಲ್ಯೂಕಸ್ ನಿಕೇಟರ್ನ ರಾಯಭಾರಿ ಮೆಗಾಸ್ತನೀಸ್ನು ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ನೀಡಿದ್ದ. ನಂತರ ಚಂದ್ರಗುಪ್ತನ ಮಗ ಬಿಂದುಸಾರನ ಕಾಲದಲ್ಲಿ ಡಿಮಾಕಸ್, ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದಲ್ಲಿ ಫಾಹಿಯಾನ್, ಹರ್ಷವರ್ಧನನ ಕಾಲದಲ್ಲಿ ಹ್ಯೂಯೆನ್ ತ್ಸಾಂಗ್… ಹೀಗೆ ಅರಬ್, ಪರ್ಷಿಯಾ, ಗ್ರೀಸ್, ಪೋರ್ಚುಗಲ್ ಮುಂತಾದ ಹಲವಾರು ದೇಶಗಳ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು. ಭಾರತಕ್ಕೆ ಬರುವುದಕ್ಕೆ ಪ್ರತಿಯೊಬ್ಬರಿಗೂ ಅವರವರದ್ದೇ ಕಾರಣಗಳಿದ್ದರೂ, ಅವರು ತಮ್ಮ ಭಾರತ ಭೇಟಿಯನ್ನು ವರ್ಣಿಸಿದ ಪುಸ್ತಕಗಳಿಂದು ಆ ಕಾಲಘಟ್ಟದ ಚಾರಿತ್ರಿಕ ದಾಖಲೆಗಳಾಗಿ ಮಹತ್ವ ಪಡೆದಿವೆ. ವ್ಯಾಪಾರದ ನೆವದಲ್ಲಿ ಭಾರತಕ್ಕೆ ಬಂದವರು ಮಾಡಿದ ಅನಾಹುತಗಳನ್ನಂತೂ ಮರೆಯಲೇ ಸಾಧ್ಯವಿಲ್ಲ.

ಇವೆಲ್ಲಾ ಯಾರಾರೋ ಪ್ರವಾಸಿಗರ ಮಾತಾಯಿತು. ನಮ್ಮದೂಂತ ಒಂದಿಷ್ಟು ಅನುಭವಗಳು ಇರಬೇಡವೇ? ಮಕ್ಕಳಿದ್ದಾಗ ಹೆತ್ತವರ ಮಡಿಲಲ್ಲಿ ಕೂತು ಲೋಕ ನೋಡಿದ್ದು ಬಿಟ್ಟರೆ, ನಮ್ಮದೇ ಅನುಭವಗಳು ಬಿಚ್ಚಿಕೊಳ್ಳುವುದು ಸಾಮಾನ್ಯವಾಗಿ ಶಾಲೆಯ ಪ್ರವಾಸದ ದಿನಗಳಲ್ಲಿ. ಶಾಲೆಯ ಪ್ರವಾಸವೆಂದರೆ ಅಂದಿನ ಕಾಲದ ಕೆಂಪು ಬಸ್ಸಿನ ಸವಾರಿ. ಡಿಸೆಂಬರ್ ಚಳಿಯಲ್ಲಿ ನಡುಗುತ್ತ ಬೆಳಗ್ಗೆ ಬೇಗ ಆರಂಭವಾಗುತ್ತಿದ್ದ ಬಸ್ ಪ್ರಯಾಣ, ಕಿಟಕಿ ಪಕ್ಕದ ಜಾಗಕ್ಕೆ ಜಗಳಾಟ, ಪ್ರಯಾಣದ ಮೋಜು-ಮಸ್ತಿ, ಜಗಳದಲ್ಲಿ ಅಂತ್ಯವಾಗುತ್ತಿದ್ದ ಅಂತ್ಯಾಕ್ಷರಿ, ಇಂಥ ಜಗಳವನ್ನೆಲ್ಲಾ ಮರೆಸುತ್ತಿದ್ದ ಗುಬ್ಬಿ ಎಂಜಲಿನ ತಿನಿಸುಗಳು, ಬಿಸಿಬೇಳೆಭಾತ್-ಮೊಸರನ್ನದ ಬುತ್ತಿಯೂಟ, ಇವೆಲ್ಲ ಮುಗಿದು ದಿನವಿಡೀ ತಿರುಗಿ ಸುಸ್ತಾಗಿ ರಾತ್ರಿ ಎನ್ನುವಾಗ ಒಬ್ಬರ ಮೇಲೊಬ್ಬರು ಒರಗಿ ಬಿದ್ದಾಗಿರುತ್ತಿತ್ತು. ನಡುರಾತ್ರಿಗೆ ಮನೆ ಸೇರುವಷ್ಟರಲ್ಲಿ ನಿದ್ದೆಗಣ್ಣಲ್ಲೇ ನಡೆಯುತ್ತಿದ್ದೇವೆ ಎಂಬ ಭಾವ ಬರುತ್ತಿತ್ತು. ಮಾರನೇ ದಿನಕ್ಕೆ ಒಂದಿಷ್ಟು ಮಕ್ಕಳಿಗೆ ಕೈನೋವು- ಕಾಲು ನೋವು, ಥಂಡಿ, ಕೆಮ್ಮು, ಜ್ವರ ಬಂದರೆ ಪ್ರವಾಸದ ಅನುಭವ ಪೂರ್ಣಗೊಂಡಂತೆ.

ಕಾಲೇಜಿಗೆ ಬರುತ್ತಿದ್ದಂತೆ ಈ ಅನುಭವಗಳು ಇನ್ನಷ್ಟು ವಿಸ್ತಾರವಾಗುತ್ತಿದ್ದವು. ವಾರ್ಷಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಸಾಂಸ್ಕೃತಿಕ ವಿನಿಮಯ ಮುಂತಾದ ನಾನಾ ಹೆಸರಿನ ಪ್ರವಾಸಗಳು ಹಲವಾರು ದಿನಗಳ ಮಟ್ಟಿಗೆ ಇರುತ್ತಿದ್ದವು. ಶಾಲೆಯ ಮುಗ್ಧ ಜಗತ್ತಿನ ಬದಲಿಗೆ ಕಾಲೇಜಿನಲ್ಲಿ ಕಾಣುತ್ತಿದ್ದ ರಂಗಿನ ಜಗತ್ತು ಈ ಪ್ರವಾಸಗಳ ಮೇಲೂ ಪರಿಣಾಮ ಬೀರುತ್ತಿತ್ತಲ್ಲ. ಆದರೆ ತರಗತಿಯಲ್ಲಿನ ಸ್ಪರ್ಧೆ, ಮತ್ಸರ, ಜಗಳ, ಮುನಿಸು ಮುಂತಾದವೆಲ್ಲಾ ಒಂದಿಷ್ಟು ಹಿಂದಾಗಿ ಸ್ನೇಹಿತರು, ಗೆಳೆತನ, ಆತ್ಮೀಯತೆ, ಅಲ್ಲೊಂದಿಲ್ಲೊಂದು ಪ್ರೀತಿ- ಇಂಥವೆಲ್ಲಾ ಗರಿಗೆದರುವುದು ಪ್ರವಾಸಗಳಲ್ಲೇ. ಶಾಖಾಹಾರಿ ಎನಿಸಿಕೊಂಡವರು ಚಿಕನ್ ಜಗಿಯುವುದು, ಗೌರಮ್ಮನಂತಿದ್ದವರು ಮಿನಿ ಹಾಕುವುದು, ʻಗಾಂಧಿʼ ಎಂಬ ಬಿರುದಾಂಕಿತರು ಅಮಲ್ದಾರರಾಗುವುದು- ಈ ರೀತಿಯ ಅಚ್ಚರಿಗಳೆಲ್ಲ ಸಂಭವಿಸುವುದಕ್ಕೆ ಇಂಥ ಸಂದರ್ಭಗಳೇ ಬೇಕು. ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಕನ್ನಡ ಓದುಗರ ಜ್ಞಾನದ ಮಟ್ಟವನ್ನೇ ಏರಿಸಿದ ಅದ್ಭುತ ಕೃತಿ ʻಹಸಿರುಹೊನ್ನುʼನ್ನು ಇಲ್ಲಿ ನೆನಪಿಸಿಕೊಳ್ಳದಿದ್ದರೆ ಹೇಗೆ? ಈ ಕೃತಿಯ ಲೇಖಕ ಬಿ.ಜಿ.ಎಲ್. ಸ್ವಾಮಿ ಅವರ ಹಲವಾರು ದಶಕಗಳ ಹಿಂದಿನ ಶೈಕ್ಷಣಿಕ ಪ್ರವಾಸದ ವಿವರಣೆಗಳು ಇಂದಿಗೂ ನಗೆಯುಕ್ಕಿಸುತ್ತವೆ.

ಮಕ್ಕಳ ಕಥೆಗಳಲ್ಲಿ, ಗೊತ್ತಿಲ್ಲದ ಅನೂಹ್ಯ ಲೋಕಕ್ಕೆ ಕರೆದೊಯ್ಯುವ ಸರಣಿಗಳು ಎಷ್ಟೊಂದು ಹುಚ್ಚು ಹಿಡಿಸಿದ್ದವಲ್ಲ. ಗಲಿವರನ ಸಾಹಸ ಯಾತ್ರೆ, ಮ್ಯಾಜಿಕ್ ಟ್ರೀ ಹೌಸ್, ಫೇಮಸ್ ಫೈವ್ ಮುಂತಾದ ಸರಣಿಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಾ ಏನೇನೋ ಸಾಹಸ ಮಾಡುವ ಮಕ್ಕಳ ವಿವರಗಳು ಎಳೆಯ ಮನಸ್ಸುಗಳ ತುಂಬಾ ಬಣ್ಣದ ಚಿತ್ತಾರ ಮೂಡಿಸುತ್ತಿರಲಿಲ್ಲವೇ. ಲೋಕ ಸುತ್ತುತ್ತಲೇ ಕಥೆ ಹೇಳುತ್ತಿದ್ದ ಪೂರ್ಣಚಂದ್ರ ತೇಜಸ್ವಿ (Purnachandra Tejaswi) ಅವರ ಸಾಹಿತ್ಯವನ್ನು ಎದೆಗವಚಿಕೊಳ್ಳದೇ ಇರುವವರು ಯಾರು? ಭಾರತಕ್ಕೆ ಮರಳಿದ ಆರಂಭದ ದಿನಗಳಲ್ಲಿ ದೇಶದ ಉದ್ದಗಲ ಸಂಚರಿಸಿದ್ದರಲ್ಲ ಗಾಂಧೀಜಿ… ಪ್ರವಾಸದ ಹರವು ವಿಸ್ತರಿಸಿದಂತೆ, ಅರಿವೂ ವಿಸ್ತರಿಸುತ್ತದೆ ಎಂದರ್ಥವೇ?

ಪ್ರವಾಸಗಳೆಂದರೆ ಎಲ್ಲವೂ ಒಂದೇ ಅಲ್ಲ; ನಾನಾ ಬಗೆಯುಂಟು. ಕೃಷಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಆರೋಗ್ಯ- ಸಂಬಂಧೀ ಪ್ರವಾಸಗಳು, ಆಹಾರ ಸವಿಯಲೆಂದು, ಪರಂಪರೆಯ ದರ್ಶನಕ್ಕೆ, ಧಾರ್ಮಿಕ ಕಾರಣಗಳಿಗಾಗಿ- ಹೀಗೆ ಬಹಳಷ್ಟು ಇವೆ. ಒಂಟಿಯಾಗಿ ಲೋಕ ಸುತ್ತುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದಂತೆಯೇ, ಸೈಕಲ್, ಬೈಕ್‌ಗಳ ಮೇಲೆ ವಿಶ್ವ ಪರ್ಯಟನೆ (world tour) ಮಾಡುವ ಉಮೇದುವಾರರ ಬಳಗ ಬೆಳೆದಿದೆ. ತೀರ್ಥಯಾತ್ರೆಯೆಂದರೆ ತಿರುಗಿಬಾರದ ಯಾತ್ರೆ ಎಂದೇ ಹೇಳಲಾಗುತ್ತಿದ್ದ ಕಾಶಿ- ರಾಮೇಶ್ವರದಂಥ ಯಾತ್ರೆಗಳು ಈಗ ಪಕ್ಕದ ಮನೆಗೆ ಹೋದಷ್ಟೇ ಸುಲಭವಾಗಿವೆ. ತಿರುಗಾಟದ ಕಾರಣ ಏನೇ ಇರಲಿ, ಪ್ರವಾಸದ ಪ್ರಯಾಸ, ಪ್ರಹಸನ ಇತ್ಯಾದಿ ಯಾವುದಕ್ಕೂ ಜಗ್ಗದೆ ಬ್ಯಾಕ್ಪ್ಯಾಕ್ ಬೆನ್ನಿಗೇರಿಸುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿರುವುದಂತೂ ನಿಜ.

ಇದನ್ನೂ ಓದಿ: Dashamukha Column: ದಶಮುಖ ಅಂಕಣ: ಅಗಲುವಿಕೆಯೆಂಬ ಅಳು-ನಗುವಿನ ರಸಪಾಕ

ಪ್ರವಾಸದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯಗಳು ಯಾವುದೇ ಭಾಷೆಯ ದೊಡ್ಡ ಆಸ್ತಿ. ಕನ್ನಡದಲ್ಲಿ ಪ್ರವಾಸ ಸಾಹಿತ್ಯಕ್ಕೆ ದೀರ್ಘ ಇತಿಹಾಸವೇ ಇದೆ. ೧೮೯೦ರಲ್ಲಿ ಪ್ರಕಟವಾದ, ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ʻದಕ್ಷಿಣ ಭಾರತ ಯಾತ್ರೆʼ ಎಂಬ ಪ್ರವಾಸ ಗ್ರಂಥ ಈ ನಿಟ್ಟಿನಲ್ಲಿ ನಾಂದಿ ಹಾಡಿರಬಹುದು. ವಿ. ಸೀತಾರಾಮಶಾಸ್ತ್ರಿ ಅವರ ʻಪಂಪಾಯಾತ್ರೆʼ, ವಿ.ಕೃ. ಗೋಕಾಕರ ʻಸಮುದ್ರದೀಚೆಯಿಂದʼ, ಶಿವರಾಮ ಕಾರಂತರ ʻಅಪೂರ್ವ ಪಶ್ಚಿಮʼ, ದಿನಕರ ದೇಸಾಯಿಯವರ ʻನಾ ಕಂಡ ಪಡುವಣʼ, ಬಿ. ಜಿ. ಎಲ್. ಸ್ವಾಮಿ ಅವರ ʻಅಮೆರಿಕೆಯಲ್ಲಿ ನಾನುʼ, ಶ್ರೀರಂಗ ಅವರ ʻಶ್ರೀರಂಗಯಾತ್ರೆʼ ಎ. ಎನ್. ಮೂರ್ತಿರಾಯರ ʻಅಪರವಯಸ್ಕನ ಅಮೆರಿಕಾ ಯಾತ್ರೆʼ, ಗೊರೂರು ರಾಮಸ್ವಾಮಿ ಅಯ್ಯಂಗಾರರ ʻಅಮೆರಿಕಾದಲ್ಲಿ ಗೊರೂರುʼ- ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಕುರಿತ ಪುಸ್ತಕ ಮತ್ತು ಬಿಡಿ ಲೇಖನಗಳನ್ನು ಸೇರಿಸಿದರೆ- ಲೆಕ್ಕ ಇಡುವುದಕ್ಕೇ ಸಾಧ್ಯವಿಲ್ಲದಷ್ಟಿದೆ ಪ್ರವಾಸ ಸಾಹಿತ್ಯ.

ಇವೆಲ್ಲಾ ಗದ್ಯ ಸಾಹಿತ್ಯದ ಮಾತಾಯಿತು. ಈ ಬಗ್ಗೆ ಮುದ ನೀಡುವಂಥ ಪದ್ಯಗಳೂ ದೊರೆಯಬಹುದು. ಪು.ತಿ.ನ ಅವರ ಪಯಣಿಗರ ಹಾಡನ್ನು ಮರೆಯಲಾಗದು. “ಗುಡಿಯಾಚೆ ಗಡಿಯಾಚೆ ಗಿಡದಾಚೆಗೆ/ ಹೋಗೋಣ ಬನ್ನಿರೋ ಹೊಸನಾಡಿಗೆ/ ಹೊಚ್ಚಹೊಸ ನೋಟಕ್ಕೆ ಅಚ್ಚ ಬಾಳಾಟಕ್ಕೆ/ ನೆಚ್ಚುಗೆಯ ಕೆಳೆಯರೇ ಹೊಸ ನಾಡಿಗೆ/ … ಒಂದು ಯಾದವಗಿರಿ ನಾಳೆ ಹಳೆಬೀಡು/ ಮುಂದೆ ಜಗದಚ್ಚರಿ ಗೊಮ್ಮಟನ ಮೇಡು/ ಕಡಲು ಕರೆಯಲು ಹಿರಿಯ ಕಮರಿಯನೆ ನೆಗೆವ/ ಪ್ರಣಯ ರುದ್ರೆಯ ಕಂಡು ಸೋಜಿಗವ ಪಡುವ” – ಹೀಗೆ ಕೂತಲ್ಲೇ ಬಹಳಷ್ಟು ಕಂಡರಿಸುವ ಕಾಣ್ಕೆ ಈ ಸಾಲುಗಳಿಗಿವೆ.

ಅಂದಹಾಗೆ, ನಾಳೆ ವಿಶ್ವ ಪ್ರವಾಸೋದ್ಯಮ ದಿನ (world tourism day). ಆ ನೆವದಲ್ಲಿ ಕೂತಲ್ಲೇ ಲೋಕ ಸುತ್ತಿದ್ದಾಯ್ತು. ಇದರಿಂದ ತಿರುಗಾಟದ ಉತ್ಸಾಹ ಬಂದರೆ, ತಡ ಮಾಡಬೇಡಿ; ಏಳಿ… ಹೊರಡಿ!

ಇದನ್ನೂ ಓದಿ: ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!

Exit mobile version