Site icon Vistara News

Dashamukha Column: ದಶಮುಖ ಅಂಕಣ: ಅಗಲುವಿಕೆಯೆಂಬ ಅಳು-ನಗುವಿನ ರಸಪಾಕ

girl waiting

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/09/WhatsApp-Audio-2023-09-12-at-10.10.50.mp3

ರೈಲಿಗೆ ಹೊರಡುವ ಗಡಿಬಿಡಿಯಲ್ಲಿ ಬ್ಯಾಗಿನ ಜಿಪ್ಪೆಳೆಯುತ್ತಿದ್ದೆ. ಅಷ್ಟರಲ್ಲೇ ಹೊರಗಿನ ಗದ್ದಲ ಗಮನ ಸೆಳೆಯಿತು. ಇಣುಕಿ ನೋಡಿದರೆ, ಹೊರಟು ನಿಂತಿದ್ದ ಕಾರೊಂದರ ಸುತ್ತ ನಾಲ್ಕಾರು ಮಂದಿ ಮುತ್ತಿಕೊಂಡಿದ್ದರು. ಹೊಸದಾಗಿ ಮದುವೆಯಾಗಿ ಹೋಗುತಿದ್ದ ಮಗಳನ್ನು ಬೀಳ್ಕೊಡಲು ತವರುಮನೆಯ ಮಂದಿಯೆಲ್ಲಾ ಕಾರನ್ನು ಮುತ್ತಿಕೊಂಡು ರಸ್ತೆಯ ತುಂಬೆಲ್ಲಾ ಗದ್ದಲ ಎಬ್ಬಿಸಿದ್ದರು. ಒಬ್ಬೊಬ್ಬರೂ ದುಗುಡ, ಬೇನೆ, ಸಂಕಟಗಳ ಮೂರ್ತರೂಪದಂತೆ ಕಾಣುತ್ತಿದ್ದರು. ನಾ ಹೊರಟು ರೈಲು ನಿಲ್ದಾಣ ತಲುಪಿದ್ದರೂ ಅವರ ಬೀಳ್ಕೊಡುಗೆ ಕಾರ್ಯಕ್ರಮ ಮುಗಿದ ಅಂದಾಜಿರಲಿಲ್ಲ. ಓಡೋಡುತ್ತಲೇ ನಿಲ್ದಾಣ ತಲುಪಿದಾಗ, ರೈಲಿಗೆ ನಿಲ್ದಾಣ ತಲುಪಲು ನನ್ನಷ್ಟು ಗಡಿಬಿಡಿ ಇಲ್ಲವೆಂಬುದು ತಿಳಿಯಿತು. ಕಾಯುತ್ತಾ ಕುಳಿತಿದ್ದಾಗ ಅನಿರೀಕ್ಷಿತವಾಗಿ ಗೆಳತಿಯೊಬ್ಬಳು ಎದುರಾದಳು. ʻಇದೇನೆ ಇಲ್ಲಿ?ʼ ಎಂದು ಕೇಳಿದ್ದಕ್ಕೆ, ʻಮಗನಿಗೆ ಟಾಟಾ ಹೇಳೋದಕ್ಕೆ ಬಂದಿದ್ದೆ. ಅವನ ರಜೆ ಮುಗೀತುʼ ಎಂದಳು. ಅವಳ ಮಗ ಭಾರತೀಯ ನೌಕಾಪಡೆಯ ಅಧಿಕಾರಿ. ಮಗನನ್ನು ಕಳಿಸುವಾಗ ಅವಳ ಮನದಲ್ಲಿ ಏನಿತ್ತೊ, ಆದರೆ ಮುಖದಲ್ಲಂತೂ ಶೋಕವಿರಲಿಲ್ಲ. ವಿದಾಯ ಹೇಳುವ ಈ ಎರಡೂ ದೃಶ್ಯಗಳು ಮನ ತುಂಬುತ್ತಿದ್ದಂತೆ, ರೈಲು ಹೊರಡುವ ಮುನ್ನವೇ ನನ್ನ ಮನಸ್ಸು ಮುಂದೋಡಿಯಾಗಿತ್ತು… ಬೇರ್ಪಡುವುದು, ವಿದಾಯ, ಅಗಲುವಿಕೆಗೆಷ್ಟು ಮುಖಗಳು!

ವಿದಾಯ, ಅಗಲು, ಬೇರ್ಪಡು, ಬೀಳ್ಕೊಡು, ದೂರ ಮಾಡು, ತೊರೆ, ತ್ಯಜಿಸು, ಬಿಡು ಮುಂತಾದ ಹಲವಾರು ಪದಗಳು ಈ ಅರ್ಥದಲ್ಲಿ ಬಳಕೆಯಾಗುತ್ತವೆ. ಅಂದರೆ, ಒಂದೇ ಶಬ್ದಕ್ಕಿರುವ ಹಲವು ಛಾಯೆಗಳಿವೆಲ್ಲ. ಆದರೆ ಇದಕ್ಕೆ ನಮ್ಮೆದುರು ತೆರೆದುಕೊಳ್ಳುವ ಸನ್ನಿವೇಶಗಳು ಮಾತ್ರ ಲೆಕ್ಕವಿಲ್ಲದಷ್ಟು. ಬದುಕಿನ ಆರಂಭ ಮತ್ತು ಅಂತ್ಯಗಳೆರಡರಲ್ಲೂ ನಮಗೆ ಕಾಣುವುದು ವಿದಾಯವೇ. ಅರೆ! ಅಂತ್ಯದಲ್ಲಿ ವಿದಾಯ ಎನ್ನುವುದು ನಿಜ. ಆದರೆ ಆರಂಭದಲ್ಲಿ ತೊರೆಯುವುದಕ್ಕೇನಿದೆ ಎಂಬ ಪ್ರಶ್ನೆ ಮೂಡಿದರೆ… ತಾಯಿಯ ಬಸಿರಿನಿಂದ ಬೇರ್ಪಟ್ಟೇ ಬರುವುದಲ್ಲವೇ ಈ ಲೋಕಕ್ಕೆ?

ಮಗು ಬೆಳೆಯುತ್ತಾ ಹೋದಂತೆ ಏನೆಲ್ಲವನ್ನೂ ಅಂಟಿಸಿಕೊಳ್ಳುತ್ತಾ ಹೋಗುತ್ತದೊ, ಮುಂದೊಂದು ದಿನ ಅವುಗಳನ್ನು ಅಗಲುತ್ತಾ ಹೋಗುವುದು ಅನಿವಾರ್ಯ. ಇದೀಗ ವೇದಾಂತ ಅತಿಯಾಯ್ತು ಎಂದಿರಾ? ಛೇ! ಇವೆಲ್ಲಾ ಅಗ್ದಿ ಲೌಕಿಕ! ಹೆತ್ತವರನ್ನು ಅತಿಯಾಗಿ ಹಚ್ಚಿಕೊಳ್ಳುವ ಮಗು, ಶಾಲೆಗೆ ಹೋಗುವುದಕ್ಕಾಗಿ ಅವರ ಸಾನಿಧ್ಯವನ್ನು ತೊರೆಯಲೇಬೇಕು. ಅಮ್ಮನನ್ನು ಬಿಟ್ಟು ಹೋಗುವುದಿಲ್ಲವೆಂದು ಅತ್ತು-ಕರೆದು ರಂಪ ಮಾಡುವ ಮಕ್ಕಳೆಷ್ಟಿಲ್ಲ? ಅವರ ಮೆಚ್ಚಿನ ಆಟಿಕೆ, ಪುಸ್ತಕ, ಅಂಗಿ-ಚೊಣ್ಣ, ಗೆಳೆಯರು, ಶಾಲೆ- ಹೀಗೆ ಪ್ರತಿಯೊಂದರಿಂದಲೂ ಬೇರ್ಪಡುತ್ತಲೇ ಸಾಗುವುದು ಮಕ್ಕಳ ಬೆಳವಣಿಗೆಯ ಭಾಗವಲ್ಲವೇ? ಇದ್ದಲ್ಲೇ ಇದ್ದರೆ ಮುಂದುವರಿಯುವುದಿಲ್ಲವಲ್ಲ. ಸದಾ ಶಾಲೆಯಲ್ಲೇ ಇರುವುದಕ್ಕೆ ಆದೀತೆ? ಮುಂದೆ ಕಾಲೇಜಿಗೂ ಹೋಗಬೇಕಲ್ಲ. ಶಾಲೆಯ ದಿನಗಳು ಮುಗಿದು ಕಾಲೇಜಿಗೆ ಕಾಲಿಡುವ ಮಕ್ಕಳ ಮನದಲ್ಲಿ ಉಂಟಾಗುವ ಉಬ್ಬರ-ಇಳಿತಗಳೇನು ಸಾಮಾನ್ಯದ್ದೇ? ಶಾಲೆಯಿಂದ ಬೀಳ್ಕೊಡುವ ದಿನವಂತೂ ಗುಡುಗು, ಸೋನೆ ಮಳೆ, ಬಿರು ಮಳೆ, ಮಹಾಪೂರ, ತಂಗಾಳಿ, ಕಾಮನಬಿಲ್ಲುಗಳೆಲ್ಲವೂ ಕಾಣುವುದಿಲ್ಲವೇ ಮಕ್ಕಳ ಮುಖದಲ್ಲಿ? ಶಾಲೆ ಬಿಟ್ಟು ಹೋಗಲಾರದೆ ಶೋಕಿಸಿದವರು, ಮೆಚ್ಚಿನ ಶಿಕ್ಷಕರನ್ನು ಅಗಲಲಾರದೆ ಅತ್ತವರು, ಮಿತ್ರರನ್ನು ತೊರೆಯಲಾರದೆ ಮಿಡುಕಿದವರು, ಶಾಲೆಯ ಜೀವನ, ಹಾಸ್ಟೆಲ್ ಸಾಂಗತ್ಯಗಳನ್ನು ನೆನೆದು ಉಮ್ಮಳಿಸಿದವರು- ಇಂಥವರೆಲ್ಲಾ ಹುಡುಕಿದರೆ ನಮ್ಮೊಳಗೇ ದೊರೆಯುವುದಿಲ್ಲವೇ?

ಕಾಲೇಜಿಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಬೇಕೆನಿಸುವುದು, ಶಾಲೆಯ ದಿನಗಳಲ್ಲಿ ಇದ್ದ ಭದ್ರತೆ ಮತ್ತು ಇಲ್ಲದಿದ್ದ ಸ್ವಾತಂತ್ರ್ಯ. ಹಾಗೆಂದು ಒಮ್ಮೆ ಕಾಲೇಜಿನ ಬದುಕು ಒಗ್ಗಿದ ಮೇಲೆ ಮತ್ತೆ, ಪುಕ್ಕ ಚುಚ್ಚಿ, ರೆಕ್ಕೆ ಬಿಚ್ಚಿ ಹಾ…ರುವುದೇ. ಶಾಲೆಯ ವಿದಾಯದ ಸನ್ನಿವೇಶ ಮತ್ತೆ ನಿರ್ಮಾಣವಾಗುವುದು ಕಾಲೇಜಿನ ಕಡೆಯ ದಿನಗಳಲ್ಲಿ. ಯಾವುದೇ ಪದವಿ ಅಥವಾ ಸ್ನಾತಕ ಪದವಿಗಳೆಲ್ಲ ಮುಗಿಯುವ ಹೊತ್ತಲ್ಲಂತೂ, ʻಅಯ್ಯೋ! ಮತ್ತೆ ಇರಿಯಿತಲ್ಲ, ಕಾಲವೆಂಬ ನೀರ್ಗಲ್ಲ ಶೂಲ; ಅಗಲುವಿಕೆಯೆಂಬ ಕೂರಲಗಿನ ಕತ್ತಿʼ ಎಂದೆಲ್ಲಾ ಗೋಳಾಡುತ್ತೇವೆ. ಓದು ಮುಗಿಯಿತೆಂದು ನಿರಾಳವಾಗಬೇಕೊ, ಈ ಸೌಖ್ಯವೆಲ್ಲಾ ಕಳೆಯಿತೆಂದು ಸಂಕಟಪಡಬೇಕೊ ಎಂಬುದು ಅರ್ಥವಾಗದೆ ಒದ್ದಾಡುವವರೆಷ್ಟು ಮಂದಿಯಿಲ್ಲ? ಬದುಕಿನ ಮಹತ್ವದ ಘಟ್ಟಕ್ಕೆ ವಿದಾಯ ಹೇಳುವ ಘಳಿಗೆಗಳನ್ನು ನಿಭಾಯಿಸುವುದು ಕಷ್ಟ… ನಿಜಕ್ಕೂ ಕಷ್ಟ.

ವ್ಯಾಸಂಗದ ನಂತರ ಕೆಲಸ, ಅದಕ್ಕಾಗಿ ಮನೆ ಬಿಡುವುದು, ಊರು ತೊರೆಯುವುದು, ಮನೆಯವರಿಂದ ದೂರವಾಗುವುದು, ಹೃದಯಕ್ಕೆ ಹತ್ತಿರವಾದವರ ವಿರಹ… ತಾಪಗಳು ಒಂದೆ ಎರಡೇ? ಹುಡುಗ-ಹುಡುಗಿಯರಿಬ್ಬರೂ ಹೆತ್ತವರಿಂದ ದೂರವಾಗಿ ಎಲ್ಲೆಲ್ಲೋ ಉದ್ಯೋಗಸ್ಥರಾಗಿರುವುದು ಸಾಮಾನ್ಯವಾದ್ದರಿಂದ, ಮೊದಲಿನ ಕಾಲದಂತೆ ಹುಡುಗಿಯರ ಮದುವೆ ಮಾಡಿ ʻಅತ್ತೆಮನೆʼಗೆ ಕಳಿಸುವ ಪದ್ಧತಿಯ ಬದಲು ʻಗಂಡನಮನೆʼಗೆ ಕಳಿಸುವ ಕ್ರಮ ಈಗೀಗ ಹೆಚ್ಚು ಪ್ರಚಲಿತವಿದೆ. ಹಳೆಯ ಕಾಲದ ಕ್ರಮವಾಗಿದ್ದರೆ, ʻಹೆಣ್ಣಾಗಿ ಹುಟ್ಟಿದರೆ ತೌರೂರು ಸ್ಥಿರವಲ್ಲ…, ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು..ʼ ಮುಂತಾದ ಹಾಡುಗಳನ್ನು ಹಾಡಿ ಕಣ್ಣೊರೆಸಿಕೊಳ್ಳಬೇಕಿತ್ತು. ಹಾಗಂತ ಇವೆಲ್ಲಾ ತೆರೆಮರೆಗೆ ಸರಿದ ಸಂಪ್ರದಾಯಗಳು ಎನ್ನಲೂ ಸಾಧ್ಯವಿಲ್ಲ. ಇಂಥವೆಲ್ಲ ಚಾಲ್ತಿಯಲ್ಲಿರುವ ಸ್ಥಳಗಳು ಸಾಕಷ್ಟಿವೆ.

ಬೇರ್ಪಡುವಿಕೆಯ ಬಗ್ಗೆ ನಮ್ಮಲ್ಲಿ ಉಂಟಾಗುವ ಆತಂಕವು (separation anxiety) ಅತಿಯಾದರೆ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನೂ ತರಬಲ್ಲದು. ಚಿಕ್ಕ ಮಕ್ಕಳಲ್ಲಾದರೆ ಇವೆಲ್ಲಾ ಸಾಮಾನ್ಯ ಎಂದು ತಳ್ಳಿಹಾಕಿಬಿಡುತ್ತೇವೆ. ತಾಯ್ತನದ ರಜೆ ಮುಗಿಸಿ ಅಮ್ಮ ಆಫೀಸಿಗೆ ಹೊರಡುವಾಗಲೇ ಕೆಲವು ಪುಟಾಣಿಗಳಲ್ಲಿ ಇದನ್ನು ಕಾಣಬಹುದು. ಅಮ್ಮನಿಗಾಗಿ ರಚ್ಚೆ ಹಿಡಿಯುವುದು, ನಿದ್ದೆ ಮಾಡದೆ ರಂಪ ಮಾಡುವುದು, ಸಂಜೆ ಮರಳಿದ ಮೇಲೆ ಅಮ್ಮನನ್ನೇ ಅಂಟಿಕೊಂಡಿರುವುದು- ಇಂಥವೆಲ್ಲಾ ಎಳೆಯ ಕೂಸುಗಳಲ್ಲೇ ಕಾಣಬಹುದು. ಬೆಳಗ್ಗೆ ಟಾಟಾ ಹೇಳಿ ಹೋದ ಅಮ್ಮ ಮರಳಿ ಬರುತ್ತಾಳೆ ಎಂಬುದು ಅರ್ಥವಾದ ಮೇಲೆ ಮಕ್ಕಳು ಕ್ರಮೇಣ ಹೊಂದಿಕೊಳ್ಳುತ್ತವೆ. ಇದೇ ಸನ್ನಿವೇಶ ಮೊದಲಬಾರಿಗೆ ಶಾಲೆಗೆ ಬಿಡುವಾಗ, ಹಾಸ್ಟೆಲ್ಗೆ ಬಿಡುವಾಗಲೂ ಕಾಣಬಹುದು. ನಮ್ಮ ಆಪ್ತರು ನಮ್ಮನ್ನು ಅಗಲಿದಾಗ, ಪ್ರೀತಿಪಾತ್ರರು ಬಿಟ್ಟು ಹೋದಾಗ, ಬೇರೆ ಊರಿಗೆ ತೆರಳಿದಾಗ, ವೃದ್ಧಾಶ್ರಮ ಸೇರುವಾಗ- ಇಂಥ ಸನ್ನಿವೇಶಗಳು ದೊಡ್ಡವರಲ್ಲೂ separation anxiety ಹುಟ್ಟುಹಾಕಬಲ್ಲವು. ಈ ಆತಂಕ ಅತಿಯಾದರೆ ಇದಕ್ಕೆ ಸೂಕ್ತ ಚಿಕಿತ್ಸೆಯೂ ಲಭ್ಯವಿದೆ.

ಬದುಕಿನ ಉಳಿದೆಲ್ಲಾ ಭಾವಗಳಂತೆ ಇದೂ ಒಂದು ಎಂದು ಸ್ವೀಕರಿಸಲು ಕೆಲವೊಮ್ಮೆ ಕಷ್ಟವಾಗುವ ಸನ್ನಿವೇಶವೂ ನಿರ್ಮಾಣವಾಗುತ್ತದೆ. ಮರಳಿಬಾರದ ಲೋಕಕ್ಕೆ ಹೋದವರ ಅಗಲಿಕೆ ಸಹಿಸಲು ಕಷ್ಟವಾಗಿ ಜೀವನವೇ ದುರ್ಭರವಾದ ಸನ್ನಿವೇಶಗಳು ಎಷ್ಟೋ ಇವೆ. ನಮಗೆ ಅಷ್ಟೊಂದು ಹಿತವಲ್ಲದವರು ತೀರಿಕೊಂಡಾಗ, ಇವತ್ತು ಸತ್ತರೆ ನಾಡಿದ್ದಿಗೆ ಮೂರು ದಿನ ಎಂಬಂತೆ ನಿರ್ಲಿಪ್ತವಾಗಿ ಬಿಡುತ್ತೇವೆ. ಆದರೆ ಆಪ್ತರು, ಪ್ರೀತಿಪಾತ್ರರ ಅಗಲಿಕೆ ಮಾತ್ರ ದೊಡ್ಡ ಹೊಡೆತವನ್ನೇ ನೀಡಬಲ್ಲದು. ಆದರೂ ಋತುಚಕ್ರ ತಿರುಗಿದಂತೆ, ಕಾಲವೆಂಬ ವೈದ್ಯ ಎಂಥಾ ಗಾಯಗಳಿಗೂ ಮುಲಾಮು ಹಚ್ಚುತ್ತಾನೆ. ಚೇತರಿಕೆಯೂ ಪ್ರಕೃತಿಯ ನಿಯಮವೇ ತಾನೆ?

ಇದನ್ನೂ ಓದಿ: ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!

ಅಗಲಿಕೆ ಎನ್ನುವುದು ಕವಿಗಳ ಮನಸ್ಸನ್ನು ಸಹ ಗಾಢವಾಗಿ ಕಲಕಿರುವ ಭಾವಗಳಲ್ಲಿ ಒಂದು. ಭಾಸಮಹಾಕವಿಯ ಉದಯನ-ವಾಸವದತ್ತೆಯರ ವಿರಹದಿಂದ ತೊಡಗಿ, ಕಾಳಿದಾಸನ ಮೇಘದೂತ, ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿ ಅಗಲಿದ ಸೀತೆಯನ್ನು ನೆನೆದು ವಿಲಪಿಸುವ ರಾಮ, ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಅಗಲಿದ ಮಗನನ್ನು ನೆನೆದು ವಿಲಪಿಸುವ ಚಂದ್ರಮತಿ- ಹೀಗೆ ಭಾವತಂತುಗಳು ಹಲವು ರೀತಿಯಲ್ಲಿ ಮಿಡಿಯುವುದನ್ನು ಕಾಣಬಹುದು. ಆದರೆ ಕೃಷ್ಣ-ಗೋಪಿಕೆಯರ ಅಗಲುವಿಕೆಗೆ ಇರುವಷ್ಟು ಕಥೆ-ಕಾವ್ಯಗಳು ಬೇರಾವುದಕ್ಕೂ ಇರುವುದು ಅನುಮಾನ. ಕೃಷ್ಣನ ಮೋಹ ಮತ್ತು ವಿರಹ ಎನ್ನುವುದು ಆ ಗೋಪಿಕೆಯರಿಗೆ ಪ್ರೇಮಿಕೆಯಾಗಿ, ಗೆಳತಿಯಾಗಿ, ಸಖಿಯಾಗಿ, ತಾಯಿಯಾಗಿ… ಅವರವರು ಬಯಸಿದಂತೆ ಅವರವರಿಗೆ ಸಲ್ಲುವಂಥದ್ದು. ಹಾಗಾಗಿಯೇ ಲೆಕ್ಕಕ್ಕೇ ಸಿಗದಷ್ಟು ಭಾವಗಳಲ್ಲಿ ಕೃಷ್ಣ-ಗೋಪಿಕೆಯರ ಕಾವ್ಯಗಳು ಹೊಸೆಯಲ್ಪಟ್ಟಿವೆ. “ಎಲ್ಲಿ ಹೋಗಲೆ, ಹೇಗೆ ಕಾಣಲೆ, ನನ್ನ ಗಿರಿಧರನ”; “ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ”; “ಎಲ್ಲಿ ಹೋದನದೆಲ್ಲಿ ಅಡಗಿದ ಫುಲ್ಲಲೋಚನ ಮಾಧವ”; “ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇ” ಇಂಥವು ಇನ್ನೂ ಎಷ್ಟು ಬೇಕು? ಹರಿದಾಸರಿಂದ ಹಿಡಿದು ತೀರಾ ಇತ್ತೀಚಿನ ಕವಿಗಳವರೆಗೆ ಇದೊಂದು ಎಂದಿಗೂ ಬತ್ತದ ಕಾವ್ಯಯಮುನೆ.

ತೌರಿಗೆ ತೆರಳಿದ ಮಡದಿಯನ್ನು ನೆನೆದು ಹೊಸೆಯಲಾದ ಕಾವ್ಯಗಳಿಗೂ ಬರವಿಲ್ಲ. “ತೌರ ಸುಖದೊಳಗೆಲ್ಲ ಮರೆತಿಹಳು ಎನ್ನದಿರಿ” ಎನ್ನುವ ಕೆ.ಎಸ್. ನರಸಿಂಹ ಸ್ವಾಮಿಗಳ ಕವನದ ನಾಯಕಿಯಂತು “ನಾಳೆ ಮಂಗಳವಾರ ಮಾರನೆಯ ದಿನ ನವಮಿ/ ಆಮೇಲೆ ನಿಲ್ಲುವೆನೆ ನಾನು ಇಲ್ಲೆ…/ ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ/ ಚುಚ್ಚದಿರಿ ಮೊನೆಯಾದ ಮಾತನೆಸೆದು” ಎಂದೆಲ್ಲಾ ಸಮಾಧಾನ ಮಾಡುತ್ತಾಳೆ. ಇನ್ನು ʻಅವಳಿಲ್ಲʼದ ಮನೆಯೊಳಗೆ ಕಾಲಿಡಲೂ ಪತಿರಾಯನಿಗೆ ಮನಸ್ಸಿಲ್ಲ. “ಹೊಸಿಲ ಬಳಿ ಬಂದೊಡನೆ ಬಾಗಿಲನು ತೆರೆವಾಕೆ/ ʻಹೆಸರೇನು?ʼ ಎನುವಾಕೆ ಮನೆಯೊಳಿಲ್ಲ/… ಅಕ್ಕರೆಯ ದನಿಯಾಕೆ ಸಕ್ಕರೆಯ ನುಡಿಯಾಕೆ/ ಸಿಕ್ಕಿದರೆ ಬಿಡದಾಕೆ ಮನೆಯೊಳಿಲ್ಲ/ ಚಿಕ್ಕ ಮನೆಯೊಳಗೆನ್ನ ಪಕ್ಕದಲಿ ನಗುವಾಕೆ/ ಉಕ್ಕುವೊಲ್ಮೆಯ ಮಡದಿ ಮನೆಯೊಳಿಲ್ಲ” ಎಂದು ನಾನಾ ರೀತಿಯಲ್ಲಿ ಕನವರಿಸುತ್ತಾನೆ.

ಬದುಕಿನಲ್ಲಿ ಎಲ್ಲವೂ ಬೇಕು- ಅಗಲುವಿಕೆಯೂ ಸಹ! ಜೊತೆಗಿದ್ದಾಗ ಗೊತ್ತಿರದ ಬೆಲೆ ದೂರವಾದಾಗಲೇ ಅರಿವಾಗುವುದು; ಮನೆ ಬಿಟ್ಟಾಗಲೇ ಅದರ ಬೆಚ್ಚನೆಯ ಸೌಖ್ಯ ತಿಳಿಯುವುದು; ಬೇರ್ಪಟ್ಟಾಗಲೇ ಆಪ್ತರ ಅಗತ್ಯ ಮನವರಿಕೆಯಾಗುವುದು; ವಿರಹದ ಕಹಿ ನೋಡಿದಾಗಲೇ ಮಿಲನ ಸಿಹಿಯೆನಿಸುವುದು; ಇಂಥ ಆರ್ದ್ರ ಘಳಿಗೆಗಳೇ ಬದುಕು ಬರಡಾಗದಂತೆ ಕಾಪಿಡುವುದು. ಅಗಲುವಿಕೆಯೆಂದರೆ… ಅಳು-ನಗುವಿನ ಚಂಪೂಕಾವ್ಯ!

ಇದನ್ನೂ ಓದಿ: ದಶಮುಖ ಅಂಕಣ : ತಾಳ್ಮೆಯೆಂಬ ಪರಿಪಾಕ

Exit mobile version